– ನಯನ
ನನ್ನ ಹೆಸರು ನಯನ. ನಾನು 1 ರಿಂದ 4ನೇ ತರಗತಿಯವರೆಗೆ ಕರ್ಪೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಅಭ್ಯಸಿಸಲು ಹಲವಾರು ತೊಂದರೆಗಳನ್ನು ಎದುರಿಸಿದ್ದೆ. ಒಂದು ಮರೆಯಲಾರದ ಸಂಗತಿ ಎಂದರೆ ನಾನು ಮತ್ತು ನನ್ನ ಅಕ್ಕ ಶಾಲೆಗೆ ಸೇರಿದ್ದು ಇಬ್ಬರಾದರೂ ಸ್ಲೇಟು ಮಾತ್ರ ಒಂದೇ. ಒಂದು ದಿನ ಕಪ್ಪು ಬೋರ್ಡ್ ಮೇಲೆ ಅ ಆ ಇ ಈ ಬರೆದಿದ್ದರು. ಅದನ್ನು ಎಲ್ಲರೂ ಬರೆಯುವಂತೆ ಆಜ್ಞಾಪಿಸಿದ್ದರು. ನಮ್ಮಿಬ್ಬರ ಬಳಿಯಿದ್ದ ಆ ಕಪ್ಪು ಹಲಗೆಗೆ ಸುತ್ತಲೂ ಪಟ್ಟಿ ಹರಿದುಹೋಗಿತ್ತು. ಹಳೆಯದು ಬೇರೆ ಮೃದುವಾಗಿಬಿಟ್ಟತ್ತು. ಸರಿಯಾಗಿ ಅಂಟುತ್ತಿರಲಿಲ್ಲ. ಆಗ ನನ್ನ ಅಕ್ಕ ಬರೆಯುತ್ತಾ ಇದ್ದಳು. ಉಪಾಧ್ಯಾಯರು ಒಬ್ಬೊಬ್ಬರನ್ನಾಗಿಯೇ ಕೇಳಿಕೊಂಡು ಯಾರು ಯಾರು ಬರೆದಿದ್ದಾರೆ ಎಂಬುದನ್ನು ಪರೀಕ್ಷಿಸುತ್ತಿದ್ದರು. ಅದನ್ನು ಕಂಡು ನಾನು ನನ್ನ ಅಕ್ಕನ ಬಳಿ ಇದ್ದ ಹಲಗೆಯನ್ನು ಕಿತ್ತು ನಾನು ಬರೆದು ತೋರಿಸಿದೆ. ಆಗ ನನ್ನ ಅಕ್ಕ ಏಟು ತಿಂದಳು. ಇದಕ್ಕೂ ಮೊದಲು ನನಗೆ ಬೇಸರದ ವಿಷಯ ಎಂದರೆ ನನ್ನ ಮೊದಲನೇ ಅಕ್ಕ 4ನೇ ತರಗತಿಯಲ್ಲಿ ಓದುತ್ತಿದ್ದಾಗ ನಾನು ಜನಿಸಿದೆನಂತೆ. ಆಗ ನಡೆದ ಘಟನೆ ನನ್ನ ಆರೈಕೆಗಾಗಿ ನನ್ನ ಅಕ್ಕನ ವಿದ್ಯಾಭ್ಯಾಸ ನಿಂತುಹೋಯಿತು. ಒಟ್ಟಿನಲ್ಲಿ ನಾನು ಹುಟ್ಟುತ್ತಲೆ ಮೊದಲನೆ ಅಕ್ಕನ ಶಿಕ್ಷಣ ಕಿತ್ತುಕೊಂಡೆ. ಹಾಗೂ ಓದುತ್ತಲೇ ನನ್ನ 2ನೇ ಅಕ್ಕನಿಗೆ ಮೋಸ ಮಾಡಿದಂತೆ ವರ್ತಿಸಿದೆ. ಇದಾದ ಸ್ವಲ್ಪ ದಿನದಲ್ಲೇ ಆ ಪ್ಯಾಟೆ ಮೇಷ್ಟ್ರು ಹೃದಯಾಘಾತದಿಂದ ತೀರಿ ಹೋದರು. ಆ ಕಾರಣದಿಂದ ಹೊಸ ಮುಖ್ಯೋಪಾಧ್ಯಾಯರು ಮತ್ತು ಉಪಾಧ್ಯಾಯರು ಬಂದರು. ಇದನ್ನು ಕಂಡ ನನ್ನ ಅಕ್ಕ ಹೊಸ ಉಪಾಧ್ಯಾಯರು ಹೊಡೆಯುತ್ತಾರೆಂದು ತಿಳಿದು ಭಯಕ್ಕೆ ಶಾಲೆಗೆ ಬರದೆ ಮನೆಯಲ್ಲಿಯೇ ಇದ್ದುಬಿಟ್ಟಳು. ಹೀಗೆ ಅವಳ ಶಿಕ್ಷಣವೂ ನಿಂತುಹೋಯಿತು.
ನಮ್ಮ ಮನೆಯಲ್ಲಿ ನನ್ನ ಅಪ್ಪ, ಅಮ್ಮ ಇಬ್ಬರೂ ಕುಡುಕರು. ತುಂಬಾನೆ ಕುಡುಕರು. ನನ್ನ ಅಕ್ಕ ಮಾತ್ರ ತುಂಬಾ ಕಷ್ಟಪಟ್ಟು ಹೊರಗಡೆ ಗೌಡರ ತೋಟ, ಹೊಲದಲ್ಲಿ ಕೆಲಸ ಮಾಡಿ ಸಂಸಾರಕ್ಕೆ ನೆರವಾಗುತ್ತಿದ್ದಳು. ಇನ್ನು ನನ್ನ ಮನೆಯ ವಾತಾವರಣ ತುಂಬಾ ಕೆಟ್ಟದಾಗಿತ್ತು. ಎಂದರೆ ವಿದ್ಯುತ್ ಇರಲಿಲ್ಲ. ಸೀಮೆ ಎಣ್ಣೆ ಬುಡ್ಡಿ ಇತ್ತು. ಸ್ನಾನದ ಮನೆ ಇರಲಿಲ್ಲ. ಮನೆಯನ್ನು ಪ್ಲಾಸ್ಟಿಂಗ್ ಮಾಡಿರಲಿಲ್ಲ. ಇದೇ ಸಮಯದಲ್ಲಿ ನನ್ನ ಅಕ್ಕ ಋತುಮತಿಯಾದಳು. ಸ್ವಲ್ಪ ಹೆಚ್ಚಾಗಿ ಖರ್ಚು ಮಾಡಿ ಸಮಾರಂಭ ಮಾಡಿದ್ದರು. ನಾನು 4ನೇ ತರಗತಿ ಉತ್ತೀರ್ಣಳಾದಾಗ ತುಂಬಾ ಖುಷಿಯಾಗಿ ಎಲ್ಲರಿಗೂ ನಿಂಬೆಹುಳಿ ಪೆಪ್ಪರ್ಮೆಂಟ್ ತಂದುಕೊಟ್ಟಿದ್ದೆ. ಕೊನೆಗೆ ಟಿ.ಸಿ. ತೆಗೆದುಕೊಳ್ಳಲು ಎಲ್ಲರೂ ಬಾಳೆಹಣ್ಣು, ಎಲೆ-ಅಡಿಕೆ, 5 ರೂ. ದುಡ್ಡು ಕೊಡಬೇಕೆಂದು ಹೇಳಿದ್ದರು. ಎಲ್ಲರೂ ತೆಗೆದುಕೊಂಡು ಬರುತ್ತಿದ್ದರು. ನನ್ನ ಬಳಿ ಹಣ್ಣು, ತಾಂಬೂಲ ಇತ್ತು. ಆದರೆ ದುಡ್ಡು ಮಾತ್ರ 3.50 ರೂ. ಮಾತ್ರ ಇತ್ತು. ತುಂಬಾ ತಡವರಿಸಿದೆ. ಸ್ವಲ್ಪ ದೂರ ಹೋಗುವುದು, ಹಿಂದಿರುಗುವುದು. ಕೊನೆಗೆ ಅಷ್ಟೇ ತೆಗೆದುಕೊಂಡು ಹೋಗಿ ಕೊಟ್ಟು ಟಿ.ಸಿ. ತೆಗೆದುಕೊಂಡು ಬಂದೆ.
5-7 ಮಾಧ್ಯಮಿಕ
ನಾನು 5ನೇ ತರಗತಿಗೆ ಸೇರಲು ಆನೇಕಲ್ಗೆ ಬಂದೆ. ಮೊದಲನೆ ದಿನ ನಾನು ಅಂದು ಶಾಲೆಗೆ ನಡೆದುಕೊಂಡು ಬಂದೆ. ನನ್ನ ಸ್ನೇಹಿತೆ ಕನಕ ಎಂದು ಆಕೆ 7ನೇ ತರಗತಿಯಲ್ಲಿದ್ದಳು. ಅವಳು ನನ್ನನ್ನು ಶಾಲೆಗೆ ಸೇರಿಸಿದಳು. ಆ ದಿನ ಊಟ ಮಾಡದೆ ಹೋಗಿದ್ದೆ. ಆಗ ಉಚಿತವಾಗಿ ಸಮವಸ್ತ್ರ, ಪುಸ್ತಕ ಕೊಟ್ಟಿದ್ದರು. ಅದನ್ನು ಹೊತ್ತುಕೊಂಡು ಆ ಬಿಸಿಲಿನಲ್ಲಿ ನಡೆದುಕೊಂಡು ಬಂದೆ. ಬಂದ ತಕ್ಷಣ ನಮ್ಮ ಮನೆಯಲ್ಲಿ ತುಂಬಾ ಖುಷಿಪಟ್ಟರು. ಅದನ್ನೆಲ್ಲಾ ನೋಡಿ ನಂತರ ನನಗೆ ಉಚ್ಚೆಳ್ಳು ಚಟ್ನಿ ಮತ್ತು ಗೋಧಿ ಹಿಟ್ಟು ಮುದ್ದೆ ಹಾಕಿದರು. ನಂಜಿಕೊಳ್ಳಲು ಹುರಿದ ಅವರೆಕಾಳು, ನಾನು 5ನೇ ತರಗತಿಯಲ್ಲಿದ್ದಾಗ ನನ್ನ ಅದೃಷ್ಟ ನಮ್ಮ ಮನೆಗೆ ಭಾಗ್ಯಜ್ಯೋತಿ ವಿದ್ಯುತ್ ಹಾಕಿಸಿದರು. ತುಂಬಾ ಖುಷಿಯಾಯಿತು. ನನ್ನ ಅಪ್ಪ ಅಮ್ಮ ಆಗಾಗ ಕುಡಿದು ಜಗಳವಾಡುತ್ತಿದ್ದರು. ಒಂದು ದಿನ ಜಗಳ ಆಡಬೇಕಾದರೆ ನನ್ನ ಮೊದಲನೆ ಅಕ್ಕ ನನ್ನ ಅಪ್ಪನನ್ನು ಹೊಡೆದಿದ್ದಳು. ಮತ್ತು ನನ್ನ ಅಪ್ಪ ಕುಡಿದು ಇತರರೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಅಕ್ಕಪಕ್ಕದವರ ವಿರೋಧವಿದ್ದರೂ ಅವರಲ್ಲಿ ಕೆಲವರು ಮಾತ್ರ ಸ್ವಲ್ಪ ಕರುಣೆಯಿಂದ ನಮ್ಮ ಮನೆಯಲ್ಲಿ ಅಡುಗೆ ಮಾಡದ ದಿನ ಊಟ ಹಾಕಿ ಅವರ ಮನೆಯಲ್ಲಿಯೇ ಮಲಗಿಸಿಕೊಳ್ಳುತ್ತಿದ್ದರು. ಆಗ ನನ್ನ ತಮ್ಮ 3ನೇ ತರಗತಿಯಲ್ಲಿದ್ದ. ಅವನೂ ಅಷ್ಟೆ. ನಾನು ಶಾಲೆಗೆ ಹೋಗುವುದಿಲ್ಲವೆಂದು ಹಟ ಹಿಡಿದ. ಕೊನೆಗೆ ಓದದೆ ಮನೆಯಲ್ಲಿಯೇ ಇದ್ದುಬಿಟ್ಟ. 6ನೇ ತರಗತಿಯಲ್ಲಿದ್ದಾಗ ನನ್ನ ಮೊದಲನೇ ಅಕ್ಕನಿಗೆ ಮದುವೆ ಆಯಿತು. ನನ್ನ ತಂದೆ ಒಂದು ಹೊಲವನ್ನು ಮಾರಿ ನನ್ನ ಅಕ್ಕನ ಮದುವೆ ಮುಗಿಸಿದರು. ಆಗ ನನ್ನ 2ನೇ ಅಕ್ಕ ಕೂಲಿಗೆ ಹೋಗುವುದನ್ನು ಶುರು ಮಾಡಿದಳು. ನಂತರ ಅವಳು ನನ್ನ ಅಕ್ಕನ ಊರಿನಲ್ಲಿ ಋತುಮತಿಯಾಗಿ ಅಲ್ಲಿ ಸಮಾರಂಭ ಏರ್ಪಡಿಸಿದ್ದರು. ಆಗ ನಾನು ಮಾತ್ರ ಹೋಗಲಿಲ್ಲ. ಕಾರಣ ಶಾಲೆ ಎಂದರೆ ಅಷ್ಟು ಪ್ರೀತಿ, ಮತ್ತು ಭಯ. ಒಂದು ದಿನವೂ ಸಹ ಶಾಲೆಗೆ ರಜೆ ಹಾಕದೆ ಹಾಜರಾಗುತ್ತಿದ್ದೆ. ಜ್ವರ ಬಂದರೂ ಅಷ್ಟ. 5, 6 ಮತ್ತು 7 ಈ ಮೂರೂ ವರ್ಷಗಳೂ ಸಹ ನಾನು ನಡೆದೇ ಹೋಗಿ ಬರುತ್ತಿದ್ದೆ. ಒಂದೊಂದು ಸಲ ಟ್ರಾಕ್ಟರಿನಲ್ಲಿ ಮಣ್ಣು ತುಂಬಿ ಅದನ್ನು ನಿಲ್ಲಿಸಿ ಅದರಲ್ಲಿ ಹೋಗುತ್ತಿದ್ದೆವು. ನನ್ನ ಸಮವಸ್ತ್ರ 7ನೇ ತರಗತಿಯಲ್ಲಿ ಹರಿದಿತ್ತು. ಆಗ ನಮ್ಮ ಗುರುಗಳು ಬೇರೆಯದು ಹೊಲಿಸಿಕೊ ಎಂದು ಹೇಳುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಒಂದು ದಿನ `ಅರುಣ’ ಎಂಬ ಶಿಕ್ಷಕಿಯು ಅವರ ಮನೆಗೆ ಕರೆದೊಯ್ದ ಆಚೆ ಕುಳ್ಳಿರಿಸಿ ಊಟ ಹಾಕಿದ್ದರು. ಅದೇ ರೀತಿ ನನ್ನ ಪ್ರಿಯ ಗುರುಗಳಾದ ಬಾಲಮ್ಮ ಎಂಬುವವರು ನನ್ನನ್ನು ಮತ್ತು ನನ್ನ ಸ್ನೇಹಿತೆ ಸರೋಜಳನ್ನು ಎರಡು ಬಾರಿ ಮನೆಯೊಳಗೆ ಕರೆದೊಯ್ದು ಊಟ ಹಾಕಿ ಬಟ್ಟೆಯೆಲ್ಲಾ ಕೊಟಿದ್ದರು. ಆಗ ನಾನು ಟ್ಯೂಶನ್ಗೆ ಹೋಗುತ್ತಿದ್ದೆ. ಮಂಜಣ್ಣ ಎಂಬುವವರು ಪಾಠ, ಆಟ, ರಸಪ್ರಶ್ನೆ, ಪ್ರವಾಸ ಎಂದೆಲ್ಲಾ ಮಾಡುತ್ತಿದ್ದರು. ಕೊನೆಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆ. ಎ.ಎಸ್.ಬಿ.ಗೆ ಸೇರಿದೆ.
ಇಷ್ಟು ವರ್ಷಗಳ ವಿದ್ಯಾಭ್ಯಾಸದಲ್ಲಿ ನನಗೆ ಕೆಲವೊಂದು ವಿಷಯಗಳು ತುಂಬಾ ಕಾಡುತ್ತಿವೆ. ಕುಡಿತವನ್ನು ಹೇಗೆ ತಪ್ಪಿಸುವುದು ಎಂದು. ಏಕೆಂದರೆ ನಾನು ಕಾಲೇಜಿಗೆ ಬಂದು ಮನೆಗೆ ಹೋಗುವಷ್ಟರಲ್ಲಿ ನನ್ನ ತಾಯಿ ಕುಡಿದು ಬೀದಿಯಲ್ಲಿ ಬಿದ್ದಿರುತ್ತಿದ್ದರು. ಅಲ್ಲದೆ ಎಚ್ಚರವಾದಾಗ ಮನೆಯಲ್ಲಿ ನನ್ನ ಮತ್ತು ನನ್ನ ತಂದೆಯ ಮೇಲೆ ಜಗಳವಾಡುತ್ತಿದ್ದರು. ನಾನೂ ಎಷ್ಟೋ ಸಲ ತಾಯಿ ಕುಡಿದ ಸಂದರ್ಭದಲ್ಲಿ (ನನ್ನ ಮತ್ತು ತಂದೆಯ ನಡುವೆ ಕೆಟ್ಟ ಸಂಬಂಧ ಇದೆ ಎಂಬ ಮಾತಿಗೆ) ಹೊಡೆಯುತ್ತಿದ್ದೆ. ಆದರೆ ಈಗ ಏನಾದರೂ ಮಾತನಾಡಲಿ ಕೇಳಿಸಿಕೊಂಡು ಅತ್ತು ಸುಮ್ಮನಾಗುತ್ತೇನೆ. ದಯವಿಟ್ಟು ಕುಡಿತವನ್ನು ಬಿಡಿ ಎಂದು ಎಷ್ಟೋ ಕೇಳಿಕೊಂಡೆ. ಅವರು ಬಿಡಲಿಲ್ಲ. ಕಾಲೇಜಿನಲ್ಲಿ ಕೆಲವೊಂದು ಸಲ ಮಾತ್ರ ಪಾಠ ಕೇಳುತ್ತೇನೆ. ಉಳಿದಂತೆ ಯಾವಾಗಲೂ ಎಲ್ಲಿ ಹೋದರೂ ನಮ್ಮ ಮನೆಯ ಕುಡಿತ, ಜಗಳ, ಅದನ್ನು ಕಂಡ ನೆರೆಹೊರೆಯವರು ತಮಾಷೆ ಮಾಡುವುದು ಅದೇ ಜ್ಞಾಪಕಕ್ಕೆ ಬರುತ್ತದೆ.
ನಮ್ಮ ತಂದೆ ನನ್ನನ್ನು ಓದಿಸಿದ್ದು ಗೌಡರ ಮನೆಯಲ್ಲಿ ಜೀತಕ್ಕಿದ್ದು. ಅದಕ್ಕೆ ನಾನು ಸಂತೋಷ ಪಡುತ್ತೇನೆ. ಆದರೆ ದುಡ್ಡನ್ನು ಪೋಲು ಮಾಡುತ್ತಿದ್ದರು. ಅದಕ್ಕೆ ತುಂಬಾ ಕೋಪ ಬರುತ್ತಿತ್ತು.
ಇನ್ನು ಜಾತಿ ವಿಷಯಕ್ಕೆ ಬಂದರೆ ನನ್ನ ಅನುಭವ ಹೇಳಿಕೊಳ್ಳಲಾಗದಂಥವು. ಎಷ್ಟೋ ಸಲ ಗೌಡರ ಮನೆಯಲ್ಲಿ ಊಟ ತರಲು ಹೋದಾಗ ಹೊಸ್ತಿಲಿಂದ ಆಚೆ ನಿಂತು ಅವರು ಬರುವವರೆಗೂ ಕಾಯಬೇಕಾಗಿತ್ತು. ಅವರು ಕೈಯನ್ನು ಮೇಲಕೆತ್ತಿ ಮುದ್ದೆ ಕೆಳಗೆ ಹಾಕುತ್ತಿದ್ದರು. ಎಲ್ಲರೂ ಅಲ್ಲ. ಅವರಲ್ಲಿ ಕೆಲವರು ವಿನಯದಿಂದಲೇ ಊಟ ಬಡಿಸುತ್ತಿದ್ದರು. ಮೂರು ಮನೆಗಳಲ್ಲಿ ನಾನು ಒಕ್ಕಲಿಗಳೆಂದು ಸುಳ್ಳು ಹೇಳಿದ್ದೇನೆ. ಇನ್ನು ಆಟಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಷ್ಟೊಂದು ಭಾಗವಹಿಸುತ್ತಿರಲಿಲ್ಲ. 7ನೇ ತರಗತಿಯಲ್ಲಿ ಖೋಖೋಗೆ ಲೋಟ ಬಹುಮಾನ ಕೊಟ್ಟಿದ್ದರು. ಅದನ್ನು ಬಿಟ್ಟರೆ ನಾನು ಮತ್ತೆ ಭಾಗವಹಿಸಿದ್ದು ದ್ವಿತೀಯ ಬಿ.ಎ.ನಲ್ಲಿ ಓಟ 200 ಮೀ. ಪ್ರಥಮ. ಆಗ ಭಯ ಆಗುತ್ತಿತ್ತು. ಈಗಲೂ ಭಯವೇ. ಆದರೆ ಆಡಬೇಕೆಂಬ ಆಸಕ್ತಿ ಇದೆ, ಜೀವನದಲ್ಲಿ ಶಿಕ್ಷಣ ಪಡೆದವರ ಅನುಭವವೇ ಬೇರೆ. ಪಡೆಯದವರ ಅನುಭವವೇ ಬೇರೆ. ಪಡೆದೂ ಪಡೆಯದವರಂತೆ ದುಡಿಯುವ ಜನರ ಅನುಭವ ಇನ್ನೂ ಬೇರೆ ರೀತಿ.
(ಲೇಖಕಿಯ ಹೆಸರು ಬದಲಾಯಿಸಲಾಗಿದೆ)






0 Comments