
ನಾಗೇಶ ಹೆಗಡೆ
ಹರಿವ ನದಿಗೆ ಒಂದು ವಿಶೇಷ ಲಕ್ಷಣವಿರುತ್ತದೆ: ಮನುಷ್ಯರ ಬದುಕಿನ ಹಾಗೆ ನದಿಗೂ ಬಾಲ್ಯ, ಯೌವನ, ಹಿರಿತನ, ವೃದ್ಧಾಪ್ಯ ಎಂಬ ಹಂತಗಳಿರುತ್ತವೆ. ನದಿಯೊಂದು ಬಾಲ್ಯಾವಸ್ಥೆಯಲ್ಲಿದ್ದಾಗ, ಎಳೆಯ ಮಗುವಿನಂತೆ ಅದು ಹನಿಹನಿ ಜೊಲ್ಲು ಸುರಿಸುತ್ತ, ತೊದಲಿನ ಜುಳುಜುಳು ನಾದ ಹೊಮ್ಮಿಸುತ್ತ, ಕಂಡಕಂಡ ಸಂದುಗೊಂದುಗಳಲ್ಲಿ ಹೊಕ್ಕು ಹೊರಡುತ್ತ ಕುಣ ಕುಣ ಯುತ್ತ ಚಲಿಸುತ್ತದೆ. ಮುಂದೆ ಯೌವನದ ಉತ್ಸಾಹದಲ್ಲಿ ಧುಮ್ಮಿಕ್ಕುತ್ತ, ಶಕ್ತಿಯ ಧಾರೆಯಾಗಿ ಭೋರ್ಗರೆಯುತ್ತ ಸಾಗಿ ಆಮೇಲೆ ಸುಸ್ತಾದಂತೆ ಸಮತಟ್ಟಿನ ನೆಲದಲ್ಲಿ ಸಮಚಿತ್ತಳಾಗಿ ಚಲಿಸುತ್ತ ಕಡಲಿಗೆ ಸೇರುವ ಹಂತದಲ್ಲಿ ಮಂದಗಮನೆಯಾಗುತ್ತದೆ.
ಮೀನಾಕ್ಷಿ ಎಂಬ ತೀರ ಸಾಮಾನ್ಯ ಹಳ್ಳಿಯ ಹುಡುಗಿಯೊಬ್ಬಳು ಶರಾವತಿ ಮತ್ತು ಅಘನಾಶಿನಿ ಕೊಳ್ಳಗಳ ನಡುವಣ ಕೊಳ್ಳ, ದಿಣ್ಣೆಗಳಲ್ಲಿ ಬೀಳುತ್ತ ಏಳುತ್ತ ಬದುಕಿನ ಮಹತ್ವದ ಭಾಗವನ್ನು ಸವೆಸಿದ್ದೇ ಇಲ್ಲಿ ‘ಹರಿವ ನದಿ’ಯಾಗಿ ನಿರೂಪಿತವಾಗಿದೆ. ನದಿಯ ಹರಿವಿನ ಮೊದಲ ಮೂರೂ ಸ್ಥಿತಿಗಳು ಇಲ್ಲಿ ಬಹುತೇಕ ಯಥಾವತ್ತಾಗಿ ಬಿಂಬಿತವಾಗಿವೆ. ಮಹಿಳೆಯ ಬದುಕೆಂದರೆ ತವರಿನ ಬಾಲ್ಯ/ಕೌಮಾರ್ಯ, ಗಂಡನ ಮನೆಯ ಯೌವನ/ವೃದ್ಧಾಪ್ಯ ಹೀಗೆ ಎರಡೇ ಹಂತಗಳು ಎಂಬ ಸ್ಥಿತ ಮಾದರಿಯ ಬದುಕು ಮೀನಾಕ್ಷಿಯದಾಗಿರಲಿಲ್ಲ.
ತವರು ಎಂದು ಹೇಳಿಕೊಳ್ಳುವ ತವರೇ ಇಲ್ಲದ, ಗಂಡನ ಮನೆ ಎಂಬ ಮನೆಯೇ ಇಲ್ಲದ ಇವರ ಬದುಕಿನ ವಿವರಣೆಗಳನ್ನು ಓದುವಾಗ ಕಾಂಬೋಡಿಯಾದ ತೇಲುಗ್ರಾಮಗಳ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ಅಲ್ಲೂ ಅಷ್ಟೆ, ಜೀವನವಿಡೀ ದೋಣ ಗಳಲ್ಲೇ ವಾಸಿಸುವ ಅಲ್ಲಿನ ಜನರಿಗೆ ಸ್ಥಿರ ನೆಲೆಯೂ ಇಲ್ಲ, ನೆರೆಹೊರೆಯೂ ಇಲ್ಲ. ನಿನ್ನೆ ಅಲ್ಲಿದ್ದವರು ನಾಳೆ ಇನ್ಯಾವುದೋ ಕುಟುಂಬದ ಪಕ್ಕದಲ್ಲಿರುತ್ತಾರೆ. ಇಂದು ಸಮೀಪದಲ್ಲಿದ್ದವರು ನಾಳೆ ದೂರವಾಗುತ್ತಾರೆ.

ನಾಡಿದ್ದು ಮತ್ತೆ ಹತ್ತಿರದವರಾಗುತ್ತಾರೆ. ನಾಲ್ಕಾರು ವರ್ಷ ಒಂದೆಡೆ ಲಂಗರು ಹಾಕಲು ಅವಕಾಶವೇ ಇಲ್ಲದಂತೆ ಮೀನಾಕ್ಷಿ ಬದುಕೂ ಕೊಳಚಗಾರು, ಬ್ಯಾಡರಕೊಪ್ಪ, ಕೌಲುಮನೆ, ಬಂಜಗಾರು, ಇಟಗಿ, ತಾರಗೋಡು, ಬಚ್ಚಗಾರು, ಸಿದ್ದಾಪುರ ಹೀಗೆ ಊರಿಂದೂರಿಗೆ ಒಕ್ಕಲೇಳುತ್ತ, ನೆಲೆಯೂರಲು ತಡವರಿಸುತ್ತ ಸಾಗುತ್ತದೆ. ಬೇರೆಲ್ಲೋ ಆಗಿದ್ದರೆ ಆ ಮಾತು ಬೇರೆ ಇತ್ತು. ಆದರೆ ಮಲೆನಾಡಿನಂಥ ಸಮೃದ್ಧ ಭೂಮಿಯಲ್ಲಿ ಸಿರಿವಂತ, ಸುಸಂಸ್ಕೃತ ನೆಂಟರಿಷ್ಟರ ಮಧ್ಯೆ ಇದ್ದೂ ಕಡು ಬಡತನದಲ್ಲಿ ಅಲೆಮಾರಿ ಜೀವನವನ್ನು ಸಾಗಿಸಬೇಕಾಗಿ ಬಂದಿದ್ದು ಅಪರೂಪದಲ್ಲಿ ಅಪರೂಪ.
ಮೀನಾಕ್ಷಿ ತಾನಾಗಿ ಹೇಳಿಕೊಳ್ಳಲಾಗದ, ಆದರೆ ಸೂಕ್ಷ್ಮಗ್ರಾಹಿ ಓದುಗರಿಗೆ ಅರ್ಥವಾಗಬಹುದಾದ ಅನೇಕ ವಿಷಣ್ಣ ಸಂಗತಿಗಳು ಕಥನದುದ್ದಕ್ಕೂ ಓತಪ್ರೋತವಾಗಿದೆ. ಮೇಲ್ವರ್ಗದ, ಕಡುಗೌರವರ್ಣದ, ಸ್ಫುರದ್ರೂಪಿ ಯುವತಿಯೊಬ್ಬಳು ಬದುಕಿನ ಅನಿವಾರ್ಯತೆಯಿಂದಾಗಿ ಕೂಲಿ ಮಾಡಲು ಹೋದಾಗ ಯಾರ ಕಣ್ಣಿಗೂ ಯಾರ ನಾಲಗೆಗೂ ಸುಲಭದ ತುತ್ತಾಗದಂತೆ ಮಾನ, ಸ್ವಾಭಿಮಾನ ಜೊತೆಗೆ ಮನೆತನದ ಗೌರವವನ್ನೂ ರಕ್ಷಿಸಿಕೊಳ್ಳುತ್ತಲೇ ದುಡಿಯಬೇಕಾದ ಕ್ಷಣಗಳನ್ನು ನಾವು ಊಹಿಸಿಕೊಳ್ಳುತ್ತಲೇ ಇಲ್ಲಿನ ಅಕ್ಷರಸಾಲುಗಳ ಮಧ್ಯೆ ಸಾಗಬೇಕಾಗುತ್ತದೆ.
ಬಾಳು ಎಂಬ ಪದಕ್ಕೆ ಕನ್ನಡದಲ್ಲಿ ಕತ್ತಿ ಎಂಬ ಅರ್ಥವೂ ಇದೆ. ಪತಿಯ ಸಾವಿನ ಸಾಧ್ಯತೆಯ ತೂಗುಕತ್ತಿಯ ಕೆಳಗೆ ಮೀನಾಕ್ಷಿಯ ಬಾಳು ನಿಜಕ್ಕೂ ಹೇಗೆ ಕತ್ತಿಯ ಮೇಲಣ ನಡೆಯಂತೆ ಎಲ್ಲೂ ಚಣಹೊತ್ತು ನಿಲ್ಲಲಾಗದ, ಹೆಜ್ಜೆ ಕಿತ್ತಿಟ್ಟಲ್ಲೆಲ್ಲ ವೇದನೆಯ ಕಿನ್ನೆತ್ತರವಾಗಿತ್ತು ಎಂಬುದಕ್ಕೆ ಎಷ್ಟೊಂದು ಉದಾಹರಣೆಗಳು ಇಲ್ಲಿ ಇಡಿಕಿರಿದಿವೆ. ‘ಊರಲ್ಲಿದ್ದ ಎಲ್ಲರ ಮನೆಯ ಇಸ್ಪೀಟ್ ಕಟ್ಟುಗಳನ್ನೂ ಸುಟ್ಟುಹಾಕಿಬಿಡುವಷ್ಟು ಕೋಪ ಬಂತು’ ಎಂಬ ಮಾತಿನಲ್ಲಿ ನೆತ್ತರು ಚುಳ್ಳೆನ್ನುತ್ತದೆ.
ಈ ಕಥನದ ಕೇಂದ್ರಬಿಂದು ಆಗಿರಬೇಕಾದವರು ಮೀನಾಕ್ಷಿಯನ್ನು ಪ್ರೇಮಿಸಿ ಕೈಹಿಡಿದ ಐನಕೈ ಗಜಾನನ ಶಾಸ್ತ್ರಿ. ಅಪಾರ ಪ್ರತಿಭೆ, ಪಾಂಡಿತ್ಯ ಮತ್ತು ಪರಿಶ್ರಮ ಮೇಳವಿಸಿದ್ದರೂ ಅವರ ಬಿಂಬ ಎಲ್ಲೂ ಸ್ಪಷ್ಟ ಮೂಡುವುದಿಲ್ಲ; ಪ್ರಖರವಾಗಿ ಕಾಣುವುದಿಲ್ಲ. ತರಂಗಗಳೇಳುವ
ನೀರಲ್ಲಿ ಬೀದಿ ದೀಪದ ಬೆಳಕು ಮತ್ತೆ ಮತ್ತೆ ಮೂಡಿ ಮಿಂಚಿ ಮಾಯವಾಗುವಂತೆ. ಆದರೆ ಆ ದೀಪ ಸಿದ್ದಾಪುರದ ಸುತ್ತಲಿನ ಸಮಾಜದ ಎಷ್ಟು ಕಣ್ಣುಗಳನ್ನು ಬೆಳಗಿಸಿದೆ ಎಂಬುದಕ್ಕೆ ಪರೋಕ್ಷ ಪುರಾವೆಗಳು ದೀಪ ಆರುವ ಹೊತ್ತಲ್ಲಿ ಮತ್ತೆ ಮತ್ತೆ ಕಾಣುತ್ತವೆ. ತನ್ನದೆಂಬ ಆಸ್ತಿಪಾಸ್ತಿ ಇಲ್ಲದ, ತನ್ನದೆಂಬ ಮನೆ ಇಲ್ಲದ, ಕೈಯಲ್ಲಿ ಕಾಸೂ ಇಲ್ಲದ ಶಾಸ್ತ್ರಿಯವರು ತೀವ್ರ ಕಾಯಿಲೆ ಬಿದ್ದಾಗ ಅವರಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಅಲ್ಲಿನ ಸಮಾಜ ಎಷ್ಟೊಂದು ಧಾರಾಳವಾಗಿ ನೆರವು ನೀಡಲು ಮುಂದೆ ಬಂತು ಎನ್ನುವುದನ್ನು ಮೀನಾಕ್ಷಿ ಇಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಸಿದ್ದಾಪುರ ತಾಲ್ಲೂಕಿನ ಗಣ್ಯರೆಲ್ಲ ಸೇರಿ ಇವರ ಚಿಕಿತ್ಸೆಯ ವೆಚ್ಚಕ್ಕೆಂದೇ ಒಂದು ಟ್ರಸ್ಟ್ ಸ್ಥಾಪಿಸಿದ್ದು, ಅದಕ್ಕೆಂದು ಜನರು ಜಾತಿ, ಧರ್ಮ, ಬಡವ- ಮಧ್ಯಮ ಎಂಬ ಭೇದವಿಲ್ಲದೆ ಹಣ ನೀಡಿದ್ದ ವಿವರಗಳನ್ನು ಓದುವಾಗ ಒಂದು ಸ್ವಸ್ಥ ಸಮಾಜದ ಹೃದಯದ ಮಿಡಿತ ಎದ್ದು ಕಾಣುತ್ತದೆ.
ಶಾಸ್ತ್ರಿಯವರು ತನಗಾಗಿ ಏನನ್ನೂ ಗಳಿಸದೆ, ತನ್ನಲ್ಲಿದ್ದುದನ್ನು ಸಮಾಜಕ್ಕೆ ಅದೆಷ್ಟು ಧಾರಾಳವಾಗಿ ಹಂಚಿಕೊಂಡಿದ್ದರು ಎಂಬುದರ ಚಿತ್ರಣ ಸಿಗುತ್ತದೆ. ಅವರ ಕಾಯಿಲೆ ಉಲ್ಬಣವಾಗುವ ತುಸು ಮುಂಚೆ, ಇಟಗಿಯ ರಾಮೇಶ್ವರ ದೇವಸ್ಥಾನದ ತಂತ್ರಿಯಾಗುವ ಪಾಳಿ ಇವರಿಗೆ ಬಂದಿದ್ದೂ, ‘ಇಡೀ ಪ್ರಾಂತ್ಯಕ್ಕೆ, ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದಾಗಲಿ’ ಎಂದು ಪ್ರಾರ್ಥಿಸುತ್ತ ಸತತ ಒಂಭತ್ತು ದಿನಗಳ ಕಾಲ, ದಿನಕ್ಕೆ ಮೂರು
ಬಾರಿ ಯಾವ ಲೋಪವೂ ಇಲ್ಲದಂತೆ ಮಂತ್ರಘೋಷಗಳೊಂದಿಗೆ ದೇವದೇವತೆಗಳಿಗೆ ಬಲಿ ಪಿಂಡ ಹಾಕುತ್ತ ಹಾಕುತ್ತ ಸಾಗುತ್ತಿದ್ದ ಇವರು ತಮ್ಮನ್ನೇ ಬಲಿ ಕೊಟ್ಟುಕೊಂಡರೋ ಎಂಬುದು ಧ್ವನಿಸುವಂಥ ಸಾಲುಗಳು ಇಲ್ಲಿವೆ.
ಶಾಸ್ತ್ರಾರ್ಥಗಳಲ್ಲಿ, ಯಕ್ಷಗಾನ ತಾಳಮದ್ದಲೆ, ಪೌರೋಹಿತ್ಯ, ಕೌಟುಂಬಿಕ ಸಲಹೆ, ಪ್ರವಚನಗಳೇ ಮುಂತಾದ ವಾಗ್ವಿಶೇಷಗಳಲ್ಲಿ ಪರಿಣತಿ ಪಡೆದ ಶಾಸ್ತಿçಯವರು ಸಮಾಜಕ್ಕೆ ಏನೆಲ್ಲವನ್ನು ಕೊಟ್ಟಿರಬಹುದು ಎಂಬುದನ್ನು ಅವರ ಬದುಕಿನ ಕೊನೆಯ ಕ್ಷಣಗಳಲ್ಲಿ ಹಾಗೂ ನಂತರದ ಒಂದೆರಡು ವಾರಗಳಲ್ಲಿ ನಡೆದ ಘಟನಾವಳಿಗಳಿಂದ ನಾವು ಊಹಿಸಬಹುದು. ಹಳ್ಳಿಗಳಿಂದಲೇ ಸುತ್ತುವರೆದ, ಸಿದ್ದಾಪುರವೆಂಬ ಸಣ್ಣಪಟ್ಟಣದ ಹೃದಯ ಶ್ರೀಮಂತಿಕೆಯ ಬಹುದೊಡ್ಡ ಸಾಕ್ಷ ್ಯಗಳು ಅಲ್ಲಿ ಒಡಮೂಡುತ್ತವೆ.
ವಿಧಿಯ ಕಾಣದ ಕೈಗಳ ಬಗ್ಗೆ, ಅದರ ಕ್ರೌರ್ಯದ ಬಗ್ಗೆ, ಕಣ್ಣೆದುರೇ ಘಟಿಸುವ ಸಾಲುಸಾಲು ಸಾವುಗಳ ಬಗ್ಗೆ ಪ್ರಸ್ತಾಪಿಸಿರುವ ಮೀನಾಕ್ಷಿ ತನ್ನದೇ ಕೈಗಳ ಬಗ್ಗೆ ಒಂದೆರಡು ಬಾರಿ ಹೇಳಿಕೊಂಡಿದ್ದು ನಾಟುವಂತಿವೆ. ಪತಿಯ ಆರೋಗ್ಯ ತೀರ ಉಲ್ಬಣಗೊಂಡಾಗ ಹಸ್ತ ಸಾಮುದ್ರಿಕ ಗೊತ್ತಿದ್ದ ಬಂಧುವೊಬ್ಬ ಇವರ ಮನೆಗೆ ಬಂದಾಗ ಶಾಸ್ತಿçಯವರ ಅಂಗೈ ರೇಖೆಗಳನ್ನು ನೋಡಿ ಮೂಕನಾಗುತ್ತಾನೆ. ಕೆದಕಿ ಕೇಳಿದ ಮೇಲೆ, ‘ಇವರು
ಚೇತರಿಸಿಕೊಳ್ಳುವುದು ಕಷ್ಟ’ ಎನ್ನುತ್ತಾನೆ. ಪತ್ನಿ ಮೀನಾಕ್ಷಿ ತನ್ನ ಕೈಯನ್ನೂ ತೋರಿಸಲೆಂದು ಮುಂದೆ ಚಾಚಿದರೆ, ಆ ಕೈಯನ್ನು ಆಚೆ ಬಿಸಾಕಿ, ‘ನಿನ್ನ ಕೈ ನೋಡುವ ಅಗತ್ಯ ಇಲ್ಲ ಬಿಡು’ ಎನ್ನುತ್ತಾನೆ. ಮನಸ್ಸು ತೀರ ವಿಹ್ವಲಗೊಂಡಾಗ ಪರಿಚಿತರ ಸಹಜ ವರ್ತನೆ, ಸಹಜ ಮಾತುಗಳೂ ನಾಟಕೀಯವಾಗಿ ಅದೆಷ್ಟು ಆಳಕ್ಕೆ ನಾಟುತ್ತದೆ ಎಂಬುದು ಆ ಕಿರು ಘಟನೆ ನಡೆದ ೩೫ ವರ್ಷಗಳ ನಂತರ ಮೂಡಿಬಂದ ‘ಆ ಕೈಯನ್ನು ಆಚೆ ಬಿಸಾಕಿ’ ಎಂಬ ಲೇಖಕಿಯ ಮಾತಿನಲ್ಲಿ ವ್ಯಕ್ತವಾಗಿದೆ.
ಮೀನಾಕ್ಷಿಯವರ ಸ್ವಂತ ಕೈಗಳ ವರ್ಣನೆ ಬರುವುದು ಬಳೆ ಖರೀದಿಗೆ ಹೋದಾಗ. ಅದೂ ಬಳೆ ತೊಡುವ ಭಾಗ್ಯವೇ ಕಳಚಿ ಹೋಗುತ್ತಿರುವ ಕ್ಷಣದಲ್ಲಿ ತನಗೇ ಗೊತ್ತಿಲ್ಲದಂತೆ ಲೇಖಕಿ ಬಳೆಗಾರನ ಬಳಿ ಹೋಗಿರುತ್ತಾಳೆ. ಹೊಸ ಬಳೆಯನ್ನು ಖರೀದಿಸಿ ಅಲ್ಲೇ ತೊಡುವ ಬದಲು ಮನೆಗೆ ಹೋಗಿ ತೊಟ್ಟರಾಯಿತು ಎಂದು ಮನೆಯ ಬಾಗಿಲಿಗೆ ಬರುವಷ್ಟರಲ್ಲಿ ಗಂಡ, ‘ಇಹದ ಬಂಧನವನ್ನು ಕಳಚಿಕೊಂಡವರಂತೆ ಮಲಗಿದ್ದರು’. ನುರಿತ ಸಿನೆಮಾ ನಿರ್ದೇಶಕನೊಬ್ಬನ ಕಲ್ಪನೆಯನ್ನೂ ಮೀರಿಸುವ ಸಾಂಕೇತಿಕ ದೃಶ್ಯವೊಂದು ಹೀಗೆ ಲೇಖಕಿಯ ಬದುಕಿನ ದುರಂತಮಯ ತಿರುವಿನಲ್ಲಿ ಮರೆಯಲಾಗದ ಸ್ತಬ್ಧಚಿತ್ರವಾಗಿ ನಿಂತಿದೆ.

ಎಲ್ಲರಂತೆ ತುಸು ವಿರಾಮದ ಬದುಕು ಮೀನಾಕ್ಷಿಯದಾಗಿದ್ದಿದ್ದರೆ ಸಿದ್ದಾಪುರ-ಸಾಗರದ ವಿಶಿಷ್ಟ ಗ್ರಾಮೀಣ ಸಂಸ್ಕೃತಿಯ ಹಾಡು-ಹಸೆ, ಹಬ್ಬ-ಹರಿದಿನ, ಒಡವೆ-ವಸ್ತ್ರಗಳ ಆಡಂಬರ, ರೂಢ ನಂಬಿಕೆ, ನಾಟಿವೈದ್ಯ, ನಾಟೀಭಾಷೆಗಳು ಇಲ್ಲಿ ಮಿಂಚಿನಂತೆ ಬಂದು ಹೋಗುವ ಬದಲು ಇನ್ನಷ್ಟು ದಟ್ಟವಾಗಿ ಕಥನದುದ್ದಕ್ಕೂ ಸಹಧಾರೆಯಾಗಿ ಬರಬಹುದಿತ್ತು. ತನ್ನ ಮೇಣೆಯನ್ನು ತಾನೇ ಹೊತ್ತು ಸಾಗಿಸಬೇಕಾದ ಕಥಾನಾಯಕಿ ತನ್ನ ಬದುಕಿನ ಅದೆಷ್ಟೊ ಉತ್ಕಟ ಕ್ಷಣಗಳನ್ನೆಲ್ಲ ಕ್ಷಿಪ್ರವಾಗಿಸಿ ಸಾಗಿದ್ದು ಸಹಜವೇನೊ ಹೌದು.
ಶಾಲೆಯ ಮೆಟ್ಟಿಲೇರುವ ಅವಕಾಶವೇ ಇಲ್ಲದಿದ್ದರೂ ಹುಲಿಮನೆ ಸೀತಾರಾಮ ಶಾಸ್ತ್ರಿಯವರಂಥ ರಾಷ್ಟ್ರಪ್ರಶಸ್ತಿ ವಿಜೇತ ರಂಗಕಲಾವಿದನೆಂಬ ಕೀರ್ತಿ ಪಡೆದ ಚಿಕ್ಕಪ್ಪನ ಕೈಯಿಂದಲೇ ಅಕ್ಷರಾಭ್ಯಾಸ ಮಾಡಿಸಿಕೊಂಡ ಮೀನಾಕ್ಷೀ ಹವ್ಯಕ ಸಮುದಾಯಕ್ಕೆ ರಕ್ತಗತವಾಗಿ ಬಂದಂತಿರುವ ಯಕ್ಷಗಾನ, ತಾಳಮದ್ದಲೆ, ಸಾಹಿತ್ಯ ಚರ್ಚಾಗೋಷ್ಠಿಗಳ ಸಾಂಗತ್ಯದಿಂದಲೇ ಸಾಕ್ಷರತೆಯನ್ನು ಆವಾಹಿಸಿಕೊಂಡವರು. ಎಂಥ ಕಡುಕಷ್ಟದಲ್ಲೂ ಮಕ್ಕಳಿಬ್ಬರ ಓದಿಗೆ ಚ್ಯುತಿ ಬಾರದಂತೆ ನೋಡಿಕೊಂಡವರು; ಮಕ್ಕಳೊಂದಿಗೇ ಬೆಳೆದವರು.
ಮನಸ್ಸು ಮಾಡಿದ್ದರೆ ಈ ಕೃತಿಯನ್ನು ಅವರು ಕೈಯಾರೆ ಬರೆಯಬಹುದಾಗಿತ್ತು. ಆದರೆ ಬರೆವಣ ಗೆಯನ್ನೇ ಬದುಕಾಗಿಸಿಕೊಂಡ ಇಬ್ಬರು ಮಕ್ಕಳಿರುವಾಗ (ರವೀಂದ್ರ ಭಟ್ಟ ಮತ್ತು ಭಾರತಿ ಹೆಗಡೆ – ಅಣ್ಣ ತಂಗಿ ಇಬ್ಬರೂ ಪತ್ರಿಕೋದ್ಯಮದಲ್ಲಿ ಪದಕ-ಪುರಸ್ಕಾರ ವಿಜೇತರಾಗಿದ್ದು, ಒಂದೇ ವೇದಿಕೆಯಲ್ಲಿ ಏಕಕಾಲಕ್ಕೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪಡೆದವರು) ಪೆನ್ನು, ಕಾಗದಗಳೊಂದಿಗೆ ಏಗುವುದುಂಟೆ? ಅಮ್ಮನ ನೆನಪುಗಳ ಧಾರೆಯಲ್ಲಿ ಬಂದ ಮಾತುಗಳನ್ನು ಯಾವುದೇ ವಿಶೇಷ ಹಸ್ತಕ್ಷೇಪವಿಲ್ಲದೆ, ಅದೇ ಧಾರೆಯಲ್ಲಿ ಮುಳುಗೇಳುತ್ತ ಬಂದ ಮಗಳು ಭಾರತಿ ಆದಷ್ಟೂ ಯಥಾವತ್ತಾಗಿ ಇಲ್ಲಿ ಪೋಣ ಸುತ್ತಲೇ, ಸಂಕಷ್ಟ ಕಥನದ ಏಕತಾನತೆಯನ್ನು ಕಲಕುವಂತೆ ಅಲ್ಲಲ್ಲಿ ಬೂರ್ಗಳುವಿನ ತಮಾಷೆಯನ್ನೂ ಭೂಮಿ ಹುಣ್ಣಿಮೆಯ ಸಂಭ್ರಮವನ್ನೂ ಸೇರಿಸಿದ್ದಾರೆ.
‘ಮೊದಲ ಪತ್ನಿಯ ದುಗುಡ’, ‘ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು’ಮತ್ತು ‘ಮಣ ್ಣನ ಗೆಳತಿ’ಯಂಥ ವಿಶಿಷ್ಟ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಭಾರತಿ ಹೆಗಡೆ ತನ್ನದೇ ಅಮ್ಮನ ಆತ್ಮಕಥೆ ‘ಹರಿವ ನದಿ’ಯನ್ನು ಅತಿರಂಜಿತ ಕಾದಂಬರಿಯನ್ನಾಗಿಸದೆ ಹದ ತಪ್ಪದ ಸಾಕ್ಷ್ಯಚಿತ್ರದ ಪರಿಯಲ್ಲಿ ನಿರೂಪಿಸಿದ್ದಾರೆ. ಅಘನಾಶಿನಿ-ಶರಾವತಿ-ಬೇಡ್ತಿ ಕಣ ವೆಗಳ ನಡುವಣ ಮಲೆನಾಡಿನ ಹವ್ಯಕ ಸಮುದಾಯದ ಬಗ್ಗೆ ಸಾಹಿತ್ಯ ಕೃತಿಗಳು ಬಂದಿದ್ದೇ ಕಡಿಮೆ.
ಗಜಾನನ ಶರ್ಮರ ‘ಪುನರ್ವಸು’, ವಿ.ತಿ. ಶೀಗೇಹಳ್ಳಿಯವರ ‘ತಲೆಗಳಿ’ ಮತ್ತು ಶಿವಾನಂದ ಕಳವೆಯವರ ‘ಮಧ್ಯಘಟ್ಟ’ವನ್ನು ಓದಿದವರಿಗೆ ಆ ಭಾಗದ ಬದುಕಿನ ಇನ್ನೊಂದು ಆಕೃತಿ ಈ ಕೃತಿಯಲ್ಲಿ ಕಾಣುತ್ತದೆ. ಶರಾವತಿ ಕಣ ವೆಯಲ್ಲಿ ಮುಳುಗಡೆಯ ಅವಾಂತರದಲ್ಲಿ ಮಡುಗಟ್ಟಿ ನಿಲ್ಲಬಹುದಾಗಿದ್ದ ಬದುಕೊಂದು ಪಕ್ಕದ ಅಘನಾಶಿನಿ ಕಣ ವೆಗೆ ಹೊರಳಿಕೊಂಡು ಇಕ್ಕಟ್ಟಿನ ಬೆಟ್ಟಗಳನ್ನೂ ಸಂಕಷ್ಟದ ಪ್ರಪಾತಗಳನ್ನೂ ದಿಟ್ಟತನದಲ್ಲಿ ದಾಟಿ ಅಳಿವೆಯ ಪ್ರಶಾಂತ ಘಟ್ಟವನ್ನು ತಲುಪಿದ ಅನುಪಮ ದಾಖಲೆ ಇದಾಗಿದೆ.






0 Comments