ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಗಂಟೆಗಳ ಕಾಲ ಹಿಡಿದಿಡುವಂತಹದು ಅಲ್ಲಿ ಏನೂ ಇರಲಿಲ್ಲ..

ನೀನಾಸಂ ತನ್ನ ಮರು ತಿರುಗಾಟದಲ್ಲಿ ಅಭಿನಯಿಸಿದ ನೀರಿನ ನಿಲುತಾಣದ ಬಗ್ಗೆ ಹರೀಶ್ ಕೇರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದಕ್ಕೆ ಮಂಗಳೂರಿನಿಂದ ಜಿ ಎನ್ ಅಶೋಕ ವರ್ಧನ ತಮ್ಮ ನೋಟಗಳನ್ನು ಹಂಚಿಕೊಂಡಿದ್ದರು.

ಪತ್ರಿಕಾ ಮಾಧ್ಯಮದಲ್ಲಿದ್ದು, ಆನ್ಲೈನ್ ಮೀಡಿಯಾದ ಸಾಕಷ್ಟು ಅನುಭವವಿರುವ, ಪ್ರಸ್ತುತ ಉದಯವಾಣಿ ಬಳಗದ ಆರೋಗ್ಯ ಸಂಚಿಕೆಯ ಮುಖ್ಯಸ್ಥರಾಗಿರುವ ರಾಜಾರಾಂ ತಲ್ಲೂರ್ ಇಲ್ಲಿ ತಮ್ಮ ನೋಟವನ್ನೂ ಸೇರಿಸಿದ್ದಾರೆ.

ನಾಟಕ ನೋಡಿದ ಇತರರಿಂದಲೂ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿದ್ದೇವೆ.

ನಾಟಕದ ಬಗ್ಗೆ ನನಗನ್ನಿಸಿದ ಎರಡು ಮೂರು ಅಂಶಗಳು:

೧. ನೀರಿನ ಎಡೆ ಬಿಡದ ಹರಿವಿಗೆ ನಾಟಕದ ಅತಿ ವಿಲಂಬಿತ ಗತಿ ಜಕ್ಸ್ಟಾಪೋಸ್ ಆದದ್ದು ಬಹಳ ಕುತೂಹಲಕರವಾಗಿತ್ತು; ಆದರೆ ಅಷ್ಟೊಂದು ದೀರ್ಘ ಅವಧಿ – ಅಸಹ್ಯ.

೨. ಇಂತಹ ಸೂಕ್ಷ್ಮವಾಗಿ ಗೃಹಿಸಬೇಕಾದ ನಾಟಕಗಳ “ತಿರುಗಾಟದ” ಬಗ್ಗೆ ಎಚ್ಚರ ಅಗತ್ಯ. ರಂಗ ಸಜ್ಜಿಕೆ ಮತ್ತು ಬೆಳಕಿನ ಬಗ್ಗೆ ಹೇಳುತ್ತಿದ್ದೇನೆ. ಕರಾವಳಿಯ ಹ್ಯುಮಿಡ್ ವಾತಾವರಣದಲ್ಲಿ ಫ್ಯಾನ್ ಗಾಳಿ ಇಲ್ಲದೆ ನಾಟಕ ನೋಡಿ ಎಂದು ನಮ್ಮನ್ನು ಕೂಡಿ ಹಾಕಿ (ಹೆಚ್ಚಿನಂಶ ನೀರಿನ ಸದ್ದು ಫ್ಯಾನುಗಳ ಅಬ್ಬರಕ್ಕೆ ಕೇಳಿಸಲಾರದು ಎಂದು) ನೀರಿಳಿಸಿದ ಬಳಿಕ ಅಂತಹದೇ ಸೂಕ್ಷ್ಮಜ್ಞತೆಯನ್ನು ನಾವು ಅವರಿಂದಲೂ ನಿರೀಕ್ಷಿಸುವುದು ಸಹಜ ತಾನೇ? ಕ್ಯಾನ್ವಾಸ್ ಮೇಲೆ ಆ ನಿಧಾನದ ಚಲನೆಗಳನ್ನು ಆನಂದಿಸಲು ಮೇಲೆ ಎಲ್ಲೆಂದರಲ್ಲಿ ತೂಗಾಡುತ್ತಿರುವ ಸ್ಪಾಟ್ ಲೈಟ್ ಗಳ ಅಡ್ಡಿ. ಒಟ್ಟು ಚಿತ್ರದ ಬ್ಯಾಲೆನ್ಸ್ ಎಲ್ಲೆಲ್ಲೋ ಕಳೆದುಹೋಗುತ್ತಿತ್ತು. ಸಂಗೀತ ಒಂದೆರಡು ಕ್ಷಣಗಳಲ್ಲಿ ಬಿಟ್ಟರೆ ಅಂತಹ ಪರಿಣಾಮಕಾರಿಯಾಗಿ ಮುಳುಗಿಸಿಕೊಂಡು ಕರೆದೊಯ್ಯುವಂತಿರಲಿಲ್ಲ. ಹಾಗಾಗಿ ಎರಡು ಗಂಟೆಗಳ ಕಾಲ ಹಿಡಿದಿಡುವಂತಹದು ಅಲ್ಲಿ ಏನೂ ಇರಲಿಲ್ಲ. ಇದ್ದದ್ದಿದ್ದರೆ, ಅವರಿಗೆ ಬೇಸರ ಆಗುವುದು ಬೇಡ ಎಂಬ ಪ್ರೇಕ್ಷಕನ ಸಭ್ಯತೆ ಮಾತ್ರ.

೩. ಯಾವುದೇ ಒಂದು ಅಭಿವ್ಯಕ್ತಿಯನ್ನು ಒಂದು ಮಾಧ್ಯಮದಲ್ಲಿ ಪ್ರಸ್ತುತ ಪಡಿಸುವಾಗ ಆ ಮಾಧ್ಯಮದ ಆಯ್ಕೆಯನ್ನು ಜಸ್ಟಿಫೈ ಮಾಡಿಕೊಳ್ಳುವುದು ನಿರ್ದೇಶಕನ ಹೊಣೆ. ಅದು ಈ ನಾಟಕದಲ್ಲಿ ಸಾಧ್ಯವಾಗಿಲ್ಲ. ಹಾಗಾಗಿ ವಿಲಂಬಿತ ಲಯದಲ್ಲೇ ಸುಮಾರು ೩೦% ಪ್ರೇಕ್ಷಕರು ನಾಟಕದ ನಡುವಿನಲ್ಲಿ (ಇದು ಉಡುಪಿ ಪ್ರದರ್ಶನದ ಬಗ್ಗೆ) ಹೊರತೆರಳಿದರು (ಅವರು ಕೊನೆತನಕ ನೋಡಿದ ನಮ್ಮೆಲ್ಲರಿಗಿಂತ ಹೆಚ್ಚು ಸಹೃದಯರು!)

೪. ಕೊನೆಯದಾಗಿ ನಟರಿಗೆ “ಅಭಿನಂದನೆಗಳು!”. ನಿಧಾನ ಗತಿಯಲ್ಲಿ ಚಲನೆ ನಿಜಕ್ಕೂ ಕಷ್ಟ. ಅದನ್ನ ಬಹುತೇಕ ಸಂತುಲಿತವಾಗಿ ಸಾಧಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಿದೆ.

 

‍ಲೇಖಕರು G

11 May, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading