
ಶ್ರೀನಿವಾಸ ಕಾರ್ಕಳ
ರಂಗಭೂಮಿಯ ಅನನ್ಯ ಪ್ರತಿಭೆ, ನಟ, ನಿರ್ದೇಶಕ, ಸಂಭಾಷಣೆಕಾರನಾಗಿ ಟಿವಿ ಧಾರಾವಾಹಿಗಳ ಮೂಲಕವೂ ನಾಡಿನ ಮನೆಮಾತಾದ ಕಲಾವಿದ ಎನ್ ಎಸ್ ಸೇತುರಾಮ್ ಅವರ ‘ನಾವಲ್ಲ’ ಕಥಾ ಸಂಕಲನ ಬಿಡುಗಡೆಯಾಗಿದೆ. ಪ್ರೀತಿಯಿಂದ ನನಗೊಂದು ಪ್ರತಿ ಕಳುಹಿಸಿಕೊಟ್ಟಿದ್ದಾರೆ.
ಅದು ಹೇಗಿದೆ ಎಂಬ ಬಗ್ಗೆ ನಾನೇನೂ ಬರೆಯುವುದಿಲ್ಲ. ಯಾಕೆಂದರೆ ಸೇತೂರಾಮ್ ರ ಪ್ರತಿಭೆಯ ಬಗ್ಗೆ ಅನುಮಾನವೇ ಬೇಡ. ಅದನ್ನು ಓದಿ ನೀವೇ ತೀರ್ಮಾನಿಸಿ. ಅದಕ್ಕಿಂತಲೂ ಮುಖ್ಯವಾಗಿ ಈ ಸೇತೂರಾಮ್ ಬಗ್ಗೆ ಒಂದು ಸ್ವಾರಸ್ಯಕರ ಕತೆ ಹೇಳುತ್ತೇನೆ –
ಸೇತೂರಾಮ್ ನನ್ನ ಆತ್ಮೀಯ ಗೆಳೆಯನಾಗಿದ್ದು ನಾವು ಒಂದೆರಡು ವರ್ಷ ಮಂಗಳೂರಿನಲ್ಲಿ ನಾಟಕ ಅದೂ ಇದೂ ಎಂದು ಒಡನಾಡಿದವರು; ನಾನೂ ಬ್ಯಾಚಲರ್ ಆಗಿದ್ದ ಆ ದಿನಗಳಲ್ಲಿ ನಾಟಕ ಮಾತ್ರವಲ್ಲದೆ, ಬಾರು, ಕ್ಯಾಬರೇ ಎಂದೆಲ್ಲ ಸೇತೂ ಜತೆಗೆ ಓಡಾಡಿದ್ದೆ.
ನಾನಾಗ ಬ್ಯಾಚುಲರ್ ಎಂದೆನಲ್ಲ. ಹೊಟ್ಟೆಪಾಡಿನ ಕೆಲಸ ಮುಗಿದ ಮೇಲೆ ಬಹುವಾಗಿ ತೊಡಗಿಕೊಂಡಿರುತ್ತಿದ್ದುದು ನಾಟಕ ಚಟುವಟಿಕೆಗಳಲ್ಲಿ. ವಾಸ ಬಹುವಾಗಿ ರಂಗಕರ್ಮಿಗಳ ಪಾಲಿಗೆ ಇನ್ನೊಂದು ಮನೆಯಂತೆಯೇ ಇದ್ದ ಮಂಗಳೂರಿನ ಮಾರ್ನಮಿಕಟ್ಟೆಯ ‘ಅಜಂತ ಕಲಾವಿದರು’ ಎಂಬ ಬೋರ್ಡು ತೂಗುಹಾಕಿಕೊಂಡ ಮಾಳಿಗೆಯಲ್ಲಿ (ಪ್ರಸಿದ್ಧ ಚಿತ್ರ ಮತ್ತು ಶಿಲ್ಪ ಕಲಾವಿದ ಸುದೇಶ್ ಮಹಾನನ ಮನೆ).
ಆದಾಯ ತೆರಿಗೆ ಅಧಿಕಾರಿಯೂ ಆಗಿದ್ದ ಸೇತುರಾಮ್ ಇಂತಹ ದಿನಗಳಲ್ಲಿ ಅಂದರೆ 1984- 1985 ರ ಸುಮಾರಿಗೆ ವರ್ಗವಾಗಿ ಮಂಗಳೂರಿಗೆ ಬಂದರು.

ಈ ನಾಟಕದವರು ಯಾವ ಊರಿಗೆ ಹೋದರೂ ನಾಟಕದವರೇ ಅಲ್ವಾ? ಬೆಂಗಳೂರಿನಲ್ಲಿದ್ದಾಗ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಸೇತೂ ಮಂಗಳೂರಿನ ರಂಗಚಟುವಟಿಕೆಗಳಲ್ಲಿಯೂ ತೀವ್ರವಾಗಿ ತೊಡಗಿಕೊಂಡರು. ಈಗ ಮೈಸೂರು ರಂಗಾಯಣದಲ್ಲಿರುವ ಪ್ರತಿಭಾವಂತ ಕಲಾವಿದ ಮೈಮ್ ರಮೇಶ್ ಕೂಡಾ ಸೇತೂರಾಮ್ ರನ್ನು ಸೇರಿಕೊಂಡು ಅನೇಕ ನಾಟಕ ಆಡಿದ್ದರು.
ಅಜಂತ ಕಲಾವಿದರು ಎಂಬ ಬೋರ್ಡು ತಗುಲಿಸಿಕೊಂಡ ಕಟ್ಟಡ ಎಂದೆನಲ್ಲ, ಅಲ್ಲೇ ಸೇತೂರಾಮ್ ರ ವಾಸ.
ಅದೇ ದಿನಗಳಲ್ಲಿ ರಿಪ್ಪರ್ ಚಂದ್ರನ್ ನ ಕಾಟ ಶುರುವಾಯಿತು. ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ದರೋಡೆಕೋರ ಕೊಲೆಗಡುಕ ಚಂದ್ರನ್ ರಾತ್ರಿ ಬೆಳಗಾಗುವುದರೊಳಗಾಗಿ ಯಾರದಾದರೂ ಮನೆಗೆ ನುಗ್ಗಿ ಮನೆಯವರ ತಲೆ ಒಡೆದು ಹಣ ಆಭರಣ ದೋಚುತ್ತಿದ್ದ. ತಿಂಗಳು ತಿಂಗಳ ಕಾಲ ಪೊಲೀಸರ ನಿದ್ದೆಗೆಡಿಸಿದ್ದ ಆತ ಹಗಲೆಲ್ಲ ಅಡಗಿ ಕುಳಿತು ರಾತ್ರಿ ತನ್ನ ಕಾರ್ಯ ನಡೆಸುತ್ತಿದ್ದ.
ಮಾರನೇ ದಿನ ಪೇಪರ್ ನಲ್ಲಿ ಬಂದಾಗಲೇ ಆತ ಎಲ್ಲಿ ಯಾರ ತಲೆ ಒಡೆದ ಎಂಬುದು ತಿಳಿಯುತ್ತಿದ್ದುದು. ಇಡೀ ಕರಾವಳಿಯನ್ನು ತಲ್ಲಣಗೊಳಿಸಿದ ದಿನಗಳವು. ಯಾರಿಗೂ ನಿದ್ದೆ ಇಲ್ಲ. ಏನೇನೋ ವದಂತಿಗಳು. ಎಲ್ ಟಿ ಟಿ ಇ ಯವರಂತೆ… ಹಾಗಂತೆ ಹೀಗಂತೆ… ಎಂದೆಲ್ಲ..
ಮನೆಗಳವರೆಲ್ಲ ಸ್ವರಕ್ಷಣೆಗಾಗಿ ಖಡ್ಗ, ದೊಣ್ಣೆ ಹೀಗೆ ಆಯುಧ ಸಿದ್ಧವಾಗಿರಿಸಿಕೊಂಡು ಮಲಗುತ್ತಿದ್ದುದೂ ಇತ್ತು. ಕೆಲವೆಡೆ ಯುವಕರು ತಮ್ಮದೇ ಗಸ್ತು ಪಡೆ ನಿರ್ಮಿಸಿ ಊರು ಕಾಯುತ್ತಿದ್ದರು (ಇವರು ಮನೆ ಮನೆ ಬಾಗಿಲು ಬಡಿದು ‘ಊರು ಕಾಯುತ್ತಿದ್ದೇವೆ ಚಾ ಕೊಡಿ’ ಎಂದು ವಸೂಲಿಗೆ ಇಳಿದು ಆದ ಅವಾಂತರ ಇನ್ನೊಂದು ಬಗೆಯದು).
ಒಂದು ದಿನ ಸೇತುರಾಮ್ ಇದ್ದ ರೂಮಿಗೆ ಹೋಗಿ ನೋಡುತ್ತೇನೆ, ಆತನ ತಲೆ ದಿಂಬಿನ ಅಡಿಯಲ್ಲಿ ಕಬ್ಬಿಣದ ಸಲಾಕೆ ಮತ್ತಿತರ ‘ಮಾರಕ ಆಯುಧ’ ಗಳಿದ್ದವು. ಚಂದ್ರನ್ ಬಂದರೆ ಆತನನ್ನು ಬಡಿಯಲು ಇರಿಸಿಕೊಂಡಿರಬಹುದೇನೋ ಅಂದುಕೊಂಡೆ ಒಂದು ಕ್ಷಣ. ಆದರೆ ಸರಿಯಾಗಿ ನೋಡುತ್ತೇನೆ, ನರಪೇತಲ ಸೇತೂರಾಮ್ ಗೆ ಎತ್ತಲು ಖಂಡಿತವಾಗಿಯೂ ಅಸಾಧ್ಯವಾದಷ್ಟು ತೂಕದ್ದು ! ಇನ್ನು ಚಂದ್ರನ್ ನ ಮಂಡೆ ಒಡೆಯುವುದು ದೂರದ ಮಾತು.
ಆತನನ್ನೇ ಕೇಳೋಣ ಎಂದು, “ಏನು ಸೇತೂ… ಚಂದ್ರನ್ ಬಂದರೆ ಆತನ ಮಂಡೆ ಒಡೆಯಲು ಇದನ್ನೆಲ್ಲ ಇಟ್ಟುಕೊಂಡದ್ದಾ?” ಎಂದು ಕೇಳಿದೆ. ಅದಕ್ಕೆ ನಕ್ಕು ಹತ್ತಿರ ಕರೆದ ಸೇತೂ “ಹಂಗೆಲ್ಲ ಅಲ್ಲ ಮಾರಾಯ, ನಾನೇನು ಒಡೆಯೋದು? ಇವೆಲ್ಲ ಚಂದ್ರನ್ ನ ಕೈಗೆ ಸಿಗೋದು ಬೇಡ, ಅಂತ ನನ್ನ ತಲೆ ಅಡಿ ಇರಿಸಿಕೊಳ್ಳೋದು” ಎಂದ. ಇಬ್ಬರೂ ಜೋರಾಗಿ ನಕ್ಕೆವು.
ವಿಷಯ ಏನಂದ್ರೆ –
ಈ ರಿಪ್ಪರ್ ಚಂದ್ರನ್ ದರೋಡೆಗೆ ಸ್ವಂತ ಆಯುಧ ತಗೊಂಡು ಬರುತ್ತಿರಲಿಲ್ಲ. ಯಾವುದಾದರೊಂದು ಮನೆಗೆ ಹೋಗಿ ಆ ಮನೆಯ ಹೊರಗೆ ಸಿಗುವ ಅವರದೇ ಪಿಕ್ಕಾಸು, ಸಬ್ಬಲ್ ಯಾವುದಾದರೊಂದು ಆಯುಧ ಹಿಡಿದುಕೊಂಡು ಒಳಗೆ ಹೋಗಿ ಮನೆ ಮಂದಿಯ ಬುರುಡೆ ಒಡೆದು ಹಾಕುತ್ತಿದ್ದ. ರಿಪ್ಪರ್ ಚಂದ್ರನ್ ತನ್ನ ರೂಮಿಗೆ ಬಂದರೆ ಆತನ ಕೈಗೆ ಯಾವುದೇ ಆಯುಧ ಸಿಗುವುದು ಬೇಡ ಎಂದು ಈ ಸೇತೂರಾಮ್ ಆ ಆಯುಧಗಳನ್ನು ತನ್ನ ತಲೆಯ ಅಡಿಯಲ್ಲಿ ಇರಿಸಿಕೊಂದು ಮಲಗುತ್ತಿದ್ದ. ! ನಿಜಕ್ಕೂ ಬುದ್ಧಿವಂತ !
(ಈತ ಕೊನೆಗೂ ಒಂದು ದಿನ ಸಿಕ್ಕಿಬಿದ್ದ, ಆತನನ್ನು ಕೇರಳದಲ್ಲಿ ಗಲ್ಲಿಗೇರಿಸಲಾಯಿತು)






ತಮ್ಮ ಈ ಲೇಖನ ರಿಪ್ಪರ್ ಚಂದ್ರನ್ ಕಾಲವನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿತು. ಅದು ನನ್ನ ಹೈಸ್ಕೂಲ್ ದಿನಗಳ ಕಾಲವಾಗಿತ್ತು. ಆಗ ದಿನಕ್ಕೆ ಒಂದರಂತೆ ವದಂತಿಗಳು ಹರಡಿ ಭಯದ ವಾತಾವರಣವೇ ನಿರ್ಮಾಣವಾಗಿತ್ತು. ಕೊನೆಗೆ ಆತನ ಬಂಧನವಾದ ಬಳಿಕ ತಿಳಿದುದು ಆತ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿರಲಿಲ್ಲ ಎನ್ನುವುದು.