ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ಎಸ್ ಶ್ರೀಧರ ಮೂರ್ತಿ ಕಂಡಂತೆ ವೈದೇಹಿ…

ಎನ್ ಎಸ್ ಶ್ರೀಧರ ಮೂರ್ತಿ

ನನಗೆ ಬಾಲ್ಯದಿಂದಲೂ ಚಿರಪರಿಚಿತ ಹೆಸರು, ನಾವೆಲ್ಲ ಅವರ ಬರಹಗಳ ಓದುತ್ತಲೇ ಬೆಳೆದವರು. ‘ಲಂಕೇಶ್ ಪತ್ರಿಕೆ’ಯ ಅಂಕಣವನ್ನು ಕಿತ್ತಾಡಿಕೊಂಡು ಓದಿದವರು. ಅದರ ಪಿಸುನುಡಿಗೆ ಕಿವಿಯಾದವರು, ಅದರ ತಲ್ಲಣಗಳಿಗೆ ಕಂಪಿಸಿದವರು.

ನಾನು ಮಂಗಳೂರಿಗೆ ಎಂ.ಎ ಮಾಡಲು ಹೋದಾಗ ವೈದೇಹಿಯವರನ್ನು ಮೊದಲು ನೋಡಿದ್ದು, ಬಹುಬೇಗ ಹತ್ತಿರವಾದರು. ಮಂಗಳೂರಿನಿಂದ ಮಣಿಪಾಲ ಇರುವದಕ್ಕಿಂತ ಹತ್ತಿರವಾಗಿ ಬಿಟ್ಟಿತು. ಸಲೀಸು ಎಂದರೇನು ಸೀದಾ ಅವರ ಅಡುಗೆ ಮನೆಗೆ ನುಗ್ಗಿ ದೋಸೆ ಮಾಡಿಸಿ ಕೊಂಡು ತಿನ್ನುವಷ್ಟು, ರುಚಿಕರ ದೋಸೆ ಮಾಡುತ್ತಲೇ ಅಮ್ಮ ನಮಗೆ ಬದುಕ ಕಲಿಸಿದರು, ಬರಹವನ್ನೂ ಹೇಳಿ ಕೊಟ್ಟರು.

ನಾನು ಬೆಂಗಳೂರಿಗೆ ಬಂದ ಮೇಲೆ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕ ವೈದೇಹಿಯವರಿಗೆ ಆಗ ಸಂಚಯ ಬಳಗದಲ್ಲಿದ್ದ ನಾನು ನಮ್ಮ ಸಾಹಸಗಳ ಬಗ್ಗೆ ಹೇಳಿಕೊಂಡೆ, ಅವರು ನಕ್ಕು ಅದೆಲ್ಲವನ್ನೂ ಕೇಳಿಸಿ ಕೊಂಡು ಥೇಟ್ ಅಮ್ಮನ ಮಾದರಿಯಲ್ಲೇ ‘ಅದೆಲ್ಲ ಸರಿ ಬದುಕಿಗೆ ಏನು ಮಾಡುತ್ತಿ’ ಎಂದಿದ್ದರು.

ವೈದೇಹಿಯವರ ಕಥೆಗಳು ಇಷ್ಟವೋ ಕವಿತೆಗಳು ಇಷ್ಟವೋ ಹೇಳುವುದು ಕಷ್ಟ, ಎರಡೂ ಇಷ್ಟವೇ! ಅದರಲ್ಲಿಯೂ ‘ಗೋಲ’ ಸಂಕಲನ ಬಂದಾಗ ಅದರಲ್ಲಿನ ಮಾಂತ್ರಿಕ ವಾಸ್ತವದ ಮಾದರಿ ಕಥೆಗಳು ಬಹಳ ಇಷ್ಟವಾಗಿ ಬಿಟ್ಟಿದ್ದವು. ತಣ್ಣಗಿನ ಧ್ವನಿಯಲ್ಲಿ ಅವರು ಬದುಕಿನ ಸಂಭ್ರಮ,ಆತಂಕ, ಹತಾಶೆ ಎಲ್ಲವನ್ನೂ ಸೃಜನಶೀಲ ಮಾಧ್ಯಮದಲ್ಲಿ ರೂಪಿಸುವ ರೀತಿ. ಅದು ಈ ಲೋಕದಲ್ಲ ಬಿಡಿ, ಲೋಕದ ಭಾವವ ಬೇರೆ ಲೋಕದನುಭಾವದಲ್ಲಿ ಮೂಡಿಸಿದ ಕೌತುಕ.

ಇನ್ನು ಅವರ ಲೇಖನಗಳೋ ಬಾಲ್ಯದಲ್ಲಿಯೇ ಸೆಳೆದವು. ಅಲ್ಲಿ ಉದ್ದುದ್ದ ಸಿದ್ದಾಂತಗಳಿಲ್ಲ, ವಿಮರ್ಶೆಯ ಗಡಚು ಇಲ್ಲ, ಎಲ್ಲಿಂದಲೂ ಬಂದ ತಾತ್ವಿಕತೆ ಇಲ್ಲ, ನಮ್ಮ ಬದುಕಿನಿಂದಲೇ ಎತ್ತಿದ ಘಟನೆಗಳಿಂದ ನಾವು ಕಾಣದ ಸತ್ಯಗಳನ್ನು ತೋರಿಸುವ ಮಾದರಿಗಳು, ವೈದೇಹಿ ಬರಹಗಳ ಸ್ತ್ರೀ ವಾದಿ ಎನ್ನುವುದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ ಅದು ಈ ಕ್ಲೀಷೆಗೆ ಬರುವಂತಹದೇ ಅಲ್ಲ. ಮಾನವತಾವಾದದ ನೈಜ ಕಾಳಜಿ.. ಇನ್ನೂ ಸ್ಪುಟವಾಗಿ ಹೇಳ ಬೇಕೆಂದರೆ ಅಮ್ಮನ ಜೀವ ಮಿಡಿತ.

ಇನ್ನು ಅವರ ನಾಟಕಗಳೂ ಮೆಚ್ಚಿನವೆ, ‘ಟೆಂಪೆಸ್ಟ್’ ನಂತಹ ನಾಟಕವನ್ನು ‘ಧಾಂ ಧೂಂ ಸುಂಟರ ಗಾಳಿ’ ಎಂಬ ಮಕ್ಕಳ ನಾಟಕವಾಗಿಸಿದ ಅಚ್ಚರಿ, ‘ನಾಯಿ ಮರಿ’ಯಂತಹ ಅದ್ಭುತ ಎಲ್ಲವೂ ವಿಶೇಷವೇ! ಭಾಸ್ಕರ್ ಚಂದಾವರ್ಕರ್ ಅವರ ಇಂಗ್ಲೀಷ್ ಭಾಷೆಯಲ್ಲಿನ ಸಂಗೀತದ ಕುರಿತ ಸೂತ್ರ ರೂಪಿ ಉಪನ್ಯಾಸಗಳನ್ನು ಮೂಲದ ಸೊಗಡು ಕರಗದಂತೆ, ಕನ್ನಡದ ಮಿಡಿತಕ್ಕೆ ಒಗ್ಗುವಂತೆ, ಸಂಗೀತದ ಕಲಿಕೆಗೆ ಸಿಕ್ಕುವಂತೆ ‘ಸಂಗೀತ ಸಂವಾದ’ದಲ್ಲಿ ವೈದೇಹಿ ತಂದ ರೀತಿಯೇ ಪವಾಡ.

ನನ್ನ ಸಂಗೀತ ಕಲಿಕೆಗೆ ಪೂರಕವಾದ ಕೃತಿಗಳಲ್ಲಿ ಇದು ಮುಖ್ಯವಾದದ್ದು, ಕೋ.ಲ.ಕಾರಂತರು, ಬಿ.ವಿ.ಕಾರಂತರು, ಸರಸ್ವತಿ ರಾಜವಾಡೆ ಹೀಗೆ ವೈದೇಹಿ ನಿರೂಪಿಸಿದ ಆತ್ಮ ಕಥನಗಳದ್ದೇ ಇನ್ನೊಂದು ಮಜಲು, ಎಲ್ಲವೂ ನಮ್ಮದೇ ಇನ್ನವಷ್ಟು ಸರಳ, ಆಪ್ತ. ವೈದೇಹಿ ಇನ್ನಷ್ಟು ಕಾದಂಬರಿ ಬರೆಯ ಬೇಕಿತ್ತು ಎಂದು ನನಗೆ ಬಹಳ ಅನ್ನಿಸಿದ್ದಿದೆ ‘ವೈದೇಹಿ ಹೇಳಿದ್ದು, ನನಗೆ ಕುಟುಂಬ ಮುಖ್ಯ, ಗಂಡನ ಜೊತೆ ಮಾತಾಡ ಬೇಕು, ಜಗಳವಾಡ ಬೇಕು, ಮಕ್ಕಳನ್ನು ಬೆಳಸ ಬೇಕು.. ಕಾದಂಬರಿ ಬರೆಯಲು ಸಮಯವೆಲ್ಲಿ?’ ಇದು ನಿಜವಲ್ಲ ಎಂದು ಅವರಿಗೂ ಗೊತ್ತು, ವೈದೇಹಿ ಲೇಖನಿಗೆ ಕಾಲದ ಕೊರತೆಯೇ.. ಅವರು ಬರೆಯುವುದೇ ಬೆಳಗಿನ ಜಾವದ ಮೂರು ಗಂಟೆಗೆ.. ಅವರೇ ಹೇಳುವಂತೆ ರಾಕ್ಷಸರು ಓಡಾಡುವ ಹೊತ್ತಿನಲ್ಲಿ ದೇವತೆಗಳ ಎಬ್ಬಿಸುತ್ತಾ..

ನಾನು ಯಾವುದೇ ಪತ್ರಿಕೆಯಲ್ಲಿ ಇದ್ದಾಗಲೂ ವೈದೇಹಿ. ಕಥೆ, ಕವಿತೆ, ಲೇಖನ ಎಲ್ಲವನ್ನೂ ಕೇಳಿದಾಗಲೆಲ್ಲಾ ಕೊಟ್ಟಿದ್ದಾರೆ. ಮೊದಲ ಓದಿನ ಪುಣ್ಯಕ್ಕೆ ಮೈಮರೆಯುವಷ್ಟು ಸೊಗಸಾದ ಬರಹಗಳನ್ನೇ ನೀಡಿದ್ದಾರೆ. ಅದಕ್ಕಿಂತ ಮುಖ್ಯ.. ನನ್ನ ಜೀವನದ ಬಿಕ್ಕಟ್ಟಿನ ಸಮಯದಲ್ಲಿ ಧೈರ್ಯ ತುಂಬಿದ್ದಾರೆ… ಕಷ್ಟವಾದರೆ ಮಣಿಪಾಲಿಗೆ ಬಂದು ಬಿಡು ಮಹರಾಯ ಎಂದು ಆಪ್ತವಾಗಿ ಕರೆದಿದ್ದಾರೆ. ಈ ತುಂಬು ಪ್ರೀತಿಗೆ ನಾನು ಚಿರಋಣಿ..
ಮೊನ್ನೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡದ ಜ್ಞಾನಪೀಠ ಎಂದೇ ಕರೆಸಿ ಕೊಂಡ.. ನೃಪತುಂಗ ಪುರಸ್ಕಾರ.. ನಂತರ ನನ್ನ ಪಾಲಿಗೆ ಅವರ ಜೊತೆ ಸಂವಾದ ನಡೆಸುವ ಅದೃಷ್ಟ.. ಆದರೆ ನನ್ನ ಆರೋಗ್ಯ ಅವತ್ತೇ ಕೈ ಕೊಡ ಬೇಕೆ?.. ಹಾಸಿಗೆಯಿಂದ ಏಳಲೂ ಕಷ್ಟ ಎನ್ನುವಷ್ಟು.. ಆದರೆ ವೈದೇಹಿ ಎಂಬ ಪ್ರೀತಿಯ ಕಡಲಿನ ಎದುರು ದೈಹಿಕ ಅನಾರೋಗ್ಯ.. ಇಂಗಿ ಹೋಯಿತು. ಎಲ್ಲವೂ ಸುಸೂತ್ರ.. ಹೇಗೆ ನಡೆಸಿ ಕೊಟ್ಟೆ ಎಂದು ನನಗೇ ಅಚ್ಚರಿಯಾಗುವಷ್ಟು..

ಅವತ್ತು ಕಾರ್ಯಕ್ರಮ. ಮುಗಿದ ಮೇಲೆ.. ಸೇರಿದ್ದ ತಮ್ಮ ಸ್ನೇಹ ಬಳಗಕ್ಕೆ ನನ್ನ ಪರಿಚಯ ಮಾಡಿ ಕೊಡುತ್ತಾ ನನ್ನನ್ನು ಬಾಚಿ ತಬ್ಬಿ ವೈದೇಹಿ ಹೇಳಿದರು.. ‘ನನಗೆ ಈ ಮನುಷ್ಯ ಬಹಳ ಇಷ್ಟ.. ನನ್ನ ಬರಹಗಳ ಚೆನ್ನಾಗಿ ಓದಿ ಕೊಂಡಿದ್ದಾನೆ..’

ಧನ್ಯವಾಯಿತು.. ಬದುಕು.

‍ಲೇಖಕರು avadhi

6 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading