ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ವಿ ಮನೆಗೆ ಬಂದಾಗ

ಎಂ ಎಸ್ ರುದ್ರೇಶ್ವರ ಸ್ವಾಮಿ

ನನ್ನ ಮತ್ತು ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರ ನಡುವಿನ ಸಂಬಂಧಕ್ಕೆ ಈವರೆಗೂ ಒಂದು ಹೆಸರು ಕೊಡಲಾಗಿರಲಿಲ್ಲ. ಇವತ್ತು ಫೇಸ್ಬುಕ್ನನಲ್ಲಿ ನಮ್ಮಿಬ್ಬರ ನಡುವೆ ಗೆಳೆತನ ಕುದುರಿದೆ. ನನ್ನ ಮೊದಲ ‘ಪ್ರೀತಿ ಮತ್ತು ನೀರು’ ಸಂಕಲನಕ್ಕೆ ಮುನ್ನುಡಿ ಬರೆದಾದ ನಂತರ ಮೊದಲ ಬಾರಿಗೆ ನಮ್ಮ ಮನೆಗೆ ಅವರು ಬಂದಿದ್ದು ೨೩.೦೭.೦೯ ರಂದು. ಅವರು ಬಂದು ಹೋದ ನಂತರ ನಾನು ಅವರ ಬಗ್ಗೆ ಬರೆದ ಕವಿತೆ ‘ಮನೆಗೆ ಬರುವುದೆಂದರೆ…’ ಸಂಕಲನದಲ್ಲಿ ಸೇರಿಕೊಂಡಿತು. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತು ದಿನಾಂಕ ೨೦.೦೯.೧೩ರಂದು ಸಂಜೆ ೬.೦೦ಕ್ಕೆ ಅಭಿನಂದನಾ ಸಮಾರಂಭ ಏರ್ಪಡಿಸಿದೆ, ದಯಮಾಡಿ ತಾವೆಲ್ಲರೂ ಬನ್ನಿ. ಈಗ ನನ್ನ ಕವಿತೆ: ಮನೆಗೆ ಬರುವುದೆಂದರೆ….


‘ಒಮ್ಮೆ ಮನೆಗೆ ಬರುತ್ತೇನೆಂದು’ ನೀವು ಹೇಳಿದ್ದು 
ಮರೆತೇ ಹೋಗಿತ್ತು. ಇದ್ದಕ್ಕಿದ್ದಂತೆ ನೆನಪು ಮಾಡಿ
ಬಂದೇಬಿಟ್ಟಿರಿ ನೀವು. ಮನೆಗೆ ಬರುವುದೆಂದರೆ ಸುಮ್ಮನೆ
ಬಂದುಹೋಗುವುದಲ್ಲ. ಸುಮ್ಮನೆ ಯಾರೂ ಮನೆಗೆ ಬರುವುದಿಲ್ಲ.
 
ಮನೆಗೆ ಬರುವುದೆಂದರೆ ಏನನ್ನಾದರೂ ಕೇಳಿ
ಪಡೆಯುವುದಕ್ಕೆ. ಇಲ್ಲವೆ ತಮ್ಮಲ್ಲಿರುವುದನ್ನು ಕೊಡುವುದಕ್ಕೆ.
ನೀವು ಮನೆಗೆ ಬಂದದ್ದು ಬರೇ ಊಟಮಾಡಿ
ಹೋಗುವುದಕ್ಕಲ್ಲ. ಮನೆಗೆ ಬಂದು ಹೋಗುವುದಕ್ಕೆ ಊಟ ನೆಪ ಮಾತ್ರ.
 
ಬಂದದ್ದು ಮನೆಗೆ ಕೊಟ್ಟು ಹೋಗುವುದಕ್ಕೆ.
ಹಾಗೇ ಸುಮ್ಮನೆ ಕೊಟ್ಟು-ಹೋದರೆ
ಪಡೆದವನಿಗೆ ಬೇಸರವಾದೀತೆಂದು, ಊಟದ ನೆಪದಲ್ಲಿ
ಮನೆಗೆ ಬಂದಿರಿ ಕೊಡುವುದಕ್ಕೆ. ಇತ್ತು ನಿಮ್ಮಲ್ಲಿ
 
ಸಾಕಷ್ಟು ಪಡಿ-ಪದಾರ್ಥ ಹಂಚುವುದಕ್ಕೆ. ಊಟ ಮಾಡಿದಿರಿ ನೆನೆಯುತ್ತಾ
ಉತ್ತರಾಯಣದ ಗೃಹಲಕ್ಷ್ಮಿಯನ್ನು. ಕಣ್ಣು ಒದ್ದೆಯಾಗಿದ್ದನ್ನು
ಮರೆಮಾಚುತ್ತ, ಹೋಳಿಗೆ ತುಪ್ಪವನ್ನು ಮಾವಿನಹಣ್ಣಿನ ಶಿಹಿಕರಣೆಯೊಂದಿಗೆ
ಉಣ್ಣುವುದನ್ನು ಕಲಿಸಿದ ಗುರುಗಳನ್ನು ಪರಿಚಯಿಸುತ್ತ.
 
ನೆನಪಾಗುತ್ತಿತ್ತು ಕುಚೇಲನು ತಂದಿದ್ದ ಅವಲಕ್ಕಿಯನ್ನು
ಶ್ರೀಕೃಷ್ಣ ಸಂತೋಷದಿಂದ ತಿಂದ ಕಥೆ. ಸುಮ್ಮನೆ ತಿಂದನೇ
ಧ್ಯಾನಮಗ್ನ ಶ್ರೀಕೃಷ್ಣ? ಕೊಡಬೇಕಿತ್ತವಗೆ ದಿವ್ಯವಸ್ತ್ರಾಭರಣ
ಸಕಲೈಶ್ವರ್ಯ ಸಂಪತ್ತು ಕುಚೇಲನಿಗೆ.
 
ಎಲ್ಲರದು ಊಟ ಮುಗಿದು ತಾಂಬೂಲ ಮೆಲ್ಲುತ್ತಿರುವಾಗ
ಮಾತು ಹೊರಳಿತು ಶ್ರೀಸಂಸಾರಿ ರಾಮನ ಬಗ್ಗೆ,
ಆಪ್ತಗೀತದ ಸಮಾಜಮುಖಿ ಗೋಪಾಲನ ಬಗ್ಗೆ. ಮಿಗಿಲಾಗಿ
‘ನನ್ನನಾಹತ ಕರೆಗೆ ಓ ಎನ್ನು ಪ್ರಿಯಕರೆ…’ ಎಂಬ ಕೃಷ್ಣನ ಕೊನೆ ಇರಾದೆಯ ಬಗ್ಗೆ
 
ಕೊನೆಗೆ ಬಾಳು ಹಸನಾಗುವಂಥ ನಾಕು ಮಾತು
ಹೇಳಿ, ಸಚರಾಚರ ಜಗತ್ತಿನೊಂದಿಗೆ ನಮಗಿರುವ ಸಂಬಂಧದ ಚಿತ್ರ ಬಿಡಿಸಿ
ತೀರ ಹೊಸದನ್ನು ಹೊಸದಾಗಿ ಹೇಳುವ ಘನವಾದ ಸವಾಲೊಡ್ದಿ
ಮೈತ್ರೇಯನಾಗಿ ಮತ್ತೆ ಬರುವುದಾಗಿ ಹೇಳಿ-ಹೋದಿರಿ.
ಮತ್ತೆ ಯಾವಾಗ ಬರುತ್ತೀರಿ ಮನೆಗೆ ಯಾವ ನೆಪದಲ್ಲಿ?
೨೩.೦೭.೦೯
 
 

‍ಲೇಖಕರು avadhi

20 September, 2013

1 Comment

  1. mmshaik

    lucky..kanri..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading