ಎಚ್ ಎಸ್ ರಾಘವೇಂದ್ರ ರಾವ್ ಅವರ “ಕಣ್ಣ ಹನಿಗಳೆ ಕಾಣಿಕೆ” ಪುಸ್ತಕ ಬಿಡುಗಡೆಯಾಗುತ್ತಿದೆ
ಪುಸ್ತಕಕ್ಕೆ ಎಚ್ಚೆಸ್ಸಾರ್ ಬರೆದ ಮಾತು ಇಲ್ಲಿದೆ
ಕೆಲವು ಮಾತುಗಳು
ಈ ಪುಸ್ತಕವು ಹಲವು ವರ್ಷಗಳ ಕನಸು. ಈ ವಿಷಯವನ್ನು ಕುರಿತು ಹೊಸ ಲೇಖನಗಳನ್ನು ಬರೆಯಬೇಕು, ಟಿಪ್ಪಣಿಗಳ ರೂಪದಲ್ಲಿರುವ ಬರೆಹಗಳನ್ನು ಲೇಖನ ರೂಪಕ್ಕೆ ತರಬೇಕು, ಎಂಬ ಲೆಕ್ಕಾಚಾರದಲ್ಲಿಯೇ ಹಲವು ಕಾಲ ಕಳೆಯಿತು. ಈಗಲೂ ಆ ಕೆಲಸ ಮುಗಿದಿಲ್ಲ. ಇವರ ಬಗ್ಗೆ ಬರೆಯಲೇ ಬೇಕು ಎನ್ನುವಂತಹ ಅನೇಕ ಹೊಸ ಬರಹಗಾತಿಯರು ಮೂಡಿಬಂದಿದ್ದಾರೆ. ಆದರೆ, ವಿಮರ್ಶೆ ಮತ್ತು ಸಾಹಿತ್ಯಚಿಂತನೆಗಳಿಗೆ ಒಂದು ‘ಯೂಸ್ ಬೈ ಡೇಟ್’ ಚೀಟಿ ಅಂಟಿಕೊಂಡಿರುತ್ತದೆ. ಆ ತಿಳಿವಳಿಕೆಯು ಈ ಪುಸ್ತಕವನ್ನು ಈಗಲೇ ತರಲು ಕಾರಣ. ಇಲ್ಲಿ ಇಲ್ಲದ ಲೇಖಕಿಯರ ಬಗ್ಗೆಯೂ ಬರೆಯಬೇಕು ಎಂಬ ಹಂಬಲ ಇದೆ. ನಾನಲ್ಲದಿದ್ದರೆ ಬೇರೆಯವರು ಬರೆಯುತ್ತಾರೆ. ‘ಮುದುಕನ ಕೋಳಿ’ ಕೂಗದಿದ್ದರೂ ಬೆಳಗಾಗುತ್ತದೆ.
ನಮ್ಮಲ್ಲಿ ಒಂದು ಕ್ಷೇತ್ರವನ್ನು ಕುರಿತ ವಿವರವಾದ ಅಧ್ಯಯನಗಳು ಕಡಿಮೆ. ಅಸೈನ್ ಮೆಂಟ್ ಇದ್ದಾಗ ಮಾತ್ರ ಬರೆಯುವ ನನ್ನ ಪೀಳಿಗೆಯವರು ಬಿಡಿ ಲೇಖನಗಳನ್ನು ಬರೆದಿರುವುದೇ ಹೆಚ್ಚು. ಆದ್ದರಿಂದಲೇ ಈ ಪುಸ್ತಕದಲ್ಲಿ ಪರಸ್ಪರ ಪೂರಕವಾದ ಅನೇಕ ಲೇಖನಗಳು ಮತ್ತು ಮುನ್ನುಡಿಗಳು. ಸೈದ್ಧಾಂತಿಕವಾದ ಬರೆಹಗಳಲ್ಲಿ ಹೇಳುವ ಸಂಗತಿಗಳ ಅನ್ವಯಗಳನ್ನು ಕೃತಿಕೇಂದ್ರಿತ ಬರೆಹಗಳಲ್ಲಿ ನೋಡಬಹುದು. ಇಂತಹ ಕಡೆ ಪುನರುಕ್ತಿ ದೋಷವು ಸಹಜ. ಹಾಗೆಂದು ಅಂತಹ ಭಾಗಗಳನ್ನು ಬಿಟ್ಟರೆ, ಆ ಲೇಖನದ ಸ್ವಯಂಪೂರ್ಣತೆಗೆ ಗಾಸಿಯಾಗುತ್ತದೆ. ಓದುಗರು ಇದನ್ನು ಹೊಟ್ಟೆಗೆ ಹಾಕಿಕೊಳ್ಳಬೇಕು.
ಇಲ್ಲಿನ ಕೆಲವು ಲೇಖನಗಳ ಭಾಷಿಕ ಶೈಲಿಯನ್ನು ಕುರಿತು ಎರಡು ಮಾತು. ಮಾತನಾಡಿದಂತೆ ರಚಿತವಾಗಿರುವ ಈ ಬರೆಹಗಳು ಭಾಷಣಗಳು ಅಥವಾ ‘ಪಾಠ’ಗಳು. ಅನೌಪಚಾರಿಕವೂ ಸಲಿಗೆಯದೂ ಆ ಶೈಲಿಯನ್ನು ಉಳಿಸಿಕೊಂಡಿರುವುದಕ್ಕೆ ನನ್ನದೇ ಆದ ಕಾರಣಗಳಿವೆ. ಅದು ಗಂಡಸರು ರೂಪಿಸಿಕೊಟ್ಟಿರುವ ಪಾಂಡಿತ್ಯದ ಭಾರತುಂಬಿರುವ ಶೈಲಿಗೆ ಎದುರಾಗುವ ಬಗೆಯೂ ಇರಬಹುದು.
ಇಲ್ಲಿ ಮೊದಲು ಬರೆದ ಲೇಖನವು 1975 ರಷ್ಟು ಹಳೆಯದು. ಕೊನೆಯದು 2012 ರಷ್ಟು ಈಚಿನದು. ಈ ವಿಷಯಗಳನ್ನು ಕುರಿತ ನನ್ನ ಆಲೋಚನೆಗಳೂ ಬೆಳೆದುಬಂದಿರುವ ಬಗೆಯ ದಾಖಲೆಗಳಾಗಿ, ಇವು ನನಗೆ ಹಿಡಿದ ಕನ್ನಡಿ. ಈ ಅವಧಿಯಲ್ಲಿ ಸ್ತ್ರೀವಾದೀ ಚಿಂತನೆ ಮತ್ತು ವಿಮರ್ಶೆಗಳು ಸಾಕಷ್ಟು ಸಮಗ್ರವಾಗಿ, ವೈವಿಧ್ಯಪೂರ್ಣವಾಗಿ ಬೆಳೆದುಬಂದಿವೆ. ಹೊಸ ಚಳುವಳಿಗಳು, ಹೊಸ ಚಿಂತಕರು ಮತ್ತು ಹೊಸ ಪೀಳಿಗೆಯ ಬರೆಹಗಾರರು. ಇವರಲ್ಲಿ ಕೆಲವರ ಬಗ್ಗೆಯಾದರೂ ಬರೆಯಲು ಇಲ್ಲಿ ಸಾಧ್ಯವಾಗಿದೆ. ಸಹಜವಾಗಿಯೇ ಇವು ‘ಪ್ರಾಕ್ಸಿ’ ಬರೆಹಗಳು. ಹಾಗೆ ನೋಡಿದರೆ, ಎಲ್ಲ ಬರವಣಿಗೆಯೂ ಪ್ರಾಕ್ಸಿಯೇ ಆದುದರಿಂದ ಅದರ ಬಗ್ಗೆ ಹಿಂಜರಿಕೆಯೇನೂ ಇಲ್ಲ.
ಉಪಕಾರಸ್ಮರಣೆಯ ಕೆಲವು ಮಾತುಗಳು. ಇದು ಪ್ರೀತಿಯ ಕೆಲಸ. ಇಷ್ಟೊಂದನ್ನು ಇಷ್ಟು ಚೆನ್ನಾಗಿ ಬರೆದಿರುವ, ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮಗಳನ್ನು ಸೇರಿಸಿರುವ ಲೇಖಕಿಯರಿಗೆ ನಾನು ಎಲ್ಲರ ಪರವಾಗಿ, ನನ್ನ ಪರವಾಗಿ ಋಣಿ. ನನ್ನಿಂದ ಮುನ್ನುಡಿ ಕೇಳಿದವರು, ಕೇಳದವರು ಎಲ್ಲರೂ ಈ ಪಟ್ಟಿಯಲ್ಲಿ ಸೇರುತ್ತಾರೆ. ಇಲ್ಲಿನ ಹಲವು ಭಾಷಣಗಳನ್ನು, ಲೇಖನಗಳನ್ನು ಬರೆಸಿದವರು, ಪ್ರಕಟಿಸಿದವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಹಿಳಾಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿದ್ದ, ನನ್ನ ಹಲವು ದಶಕಗಳ ಸ್ನೇಹಿತರಾದ ಡಾ. ಎಚ್.ಎಸ್. ಶ್ರೀಮತಿ ಅವರು. ಸ್ವತಃ ಅವರೇ ಈ ಕ್ಷೇತ್ರದಲ್ಲಿ ಗುಣ ಮತ್ತು ಗಾತ್ರಗಳೆರಡರಲ್ಲೂ ಮಹತ್ವದ ಸಾಧನೆ ಮಾಡಿದ್ದಾರೆ. ಅವರಿಗೆ ಮತ್ತು ಆ ವಿಭಾಗದ ಇತರ ಮಿತ್ರರಿಗೆ ನನ್ನ ಕೃತಜ್ಞತೆಗಳು. ಹಾಗೆಯೇ ಹಿರಿಯ ಲೇಖಕಿಯಾದ ಡಾ. ವೀಣಾ ಶಾಂತೇಶ್ವರ ಅವರು ಕೂಡ ನಾನು ಬರೆಯಲು ಕಾರಣರಾಗಿದ್ದಾರೆ. ಹಾಗೆಯೇ ಮಹಿಳಾ ವಿಶ್ವವಿದ್ಯಾಲಯ,(ಡಾ. ವಿಜಯಶ್ರೀ ಸಬರದ ಮತ್ತು ಡಾ. ಎಸ್,ವಿ. ಪ್ರಭಾವತಿ) ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳು ಕೆಲವು ಲೇಖನಗಳ ಹಿಂದಿವೆ. ಇವರೆಲ್ಲರಿಗೂ ನಾನು ಪ್ರೀತಿಯೊಂದಿಗೆ ಆಭಾರಿಯಾಗಿದ್ದೇನೆ. ನನ್ನ ಜೊತೆಗಿರುವ ನಂಟರು, ಇಷ್ಟರು ಮತ್ತು ಇಲ್ಲಿನ ಕೆಲವು ಲೇಖನಗಳನ್ನು ಓದಿ ಪ್ರತಿಕ್ರಿಯಿಸಿದ ಹಿರಿಯ-ಕಿರಿಯ ಆತ್ಮೀಯರಿಗೆ, ಸಹಪ್ರಯಾಣಕ್ಕಾಗಿ ನೆನಪುಗಳು.
‘ಕಣ್ಣಹನಿಗಳೆ ಕಾಣಿಕೆ’ಯನ್ನು ಇಳಾ ಪ್ರಕಾಶನದವರು ಪ್ರಕಟಿಸಿದ್ದಾರೆ. ನನ್ನ ಬಹುಕಾಲದ ಆತ್ಮೀಯರಾದ ಡಾ. ವಿಜಯಾ ಅವರೇ ಇದನ್ನು ಪ್ರಕಟಿಸಬೇಕೆನ್ನುವುದು ನನ್ನ ಆಸೆಯಾಗಿತ್ತು. ಅದು ನಿಜವಾಗುತ್ತಿದೆ. ಈ ಸಂದರ್ಭದಲ್ಲಿಯೂ ಮಾತು ಕೃತಕ ಮತ್ತು ಅಸಮರ್ಥ. ಅವರ ಮಕ್ಕಳೂ ನನಗೆ ಆತ್ಮೀಯರೂ ಆದ ಗುರು-ಭಾರತಿ ಮತ್ತು ಸುರೇಶ-ಶೈಲಜಾ ಅವರಿಗೆ ನನ್ನ ಪ್ರೀತಿ ಮತ್ತು ಶುಭಾಶಯಗಳು.
ಮೂರು ದಶಕಗಳ ಮಿತ್ರರಾದ ಅಭಿನವ ರವಿಕುಮಾರ್ ಅವರು ಈ ಪುಸ್ತಕಕ್ಕೆ ಸಂಬಂಧಿಸಿದ ಹಲವು ಹೊಣೆಗಳನ್ನು ಹೊತ್ತುಕೊಂಡು ನನ್ನ ಭಾರವನ್ನು ಕಡಿಮೆ ಮಾಡಿದ್ದಾರೆ. ಅವರ ಪ್ರೀತಿ ದೊಡ್ಡದು. ಮುಖಪುಟ ಮತ್ತು ವಿನ್ಯಾಸಗಳನ್ನು ರೂಪಿಸಿಕೊಟ್ಟ ಶ್ರೀ ಅವರಿಗೆ ಮತ್ತು ಡಿ.ಟಿ.ಪಿ. ಕೆಲಸವನ್ನು ನಿರ್ವಹಿಸಿದ ಶ್ರೀ ಶ್ರೀಧರ್ ಅವರಿಗೆ ನನ್ನ ವಂದನೆಗಳು. ಪಟ್ಟಿ ಮಾಡಲಾಗದಷ್ಟು ದೊಡ್ಡದಾದ ಹಿರಿಯರು, ಗೆಳೆಯರು ಮತ್ತು ಮಿತ್ರರಿಗೆ ಮತ್ತು ಇಳಾ ಮುದ್ರಣಾಲಯದ ಸಿಬ್ಬಂದಿವರ್ಗಕ್ಕೆ ನನ್ನ ನಮಸ್ಕಾರ.
-ಎಚ್.ಎಸ್. ರಾಘವೇಂದ್ರ ರಾವ್

ಪುಸ್ತಕದಲ್ಲೇನಿದೆ?
1. ಕನ್ನಡ ಸಾಹಿತ್ಯದಲ್ಲಿ ಎಚ್ಚೆತ್ತ ಮಹಿಳೆ
2. ‘ಲೈಂಗಿಕತಾವಾದೀ ಭಾಷೆ ಮತ್ತು ಸಂಕಥನ’- ಪ್ರವೇಶ ಮತ್ತು ಭಾಷಿಕ ವಾಸ್ತವಗಳು
3. ಸ್ತ್ರೀವಾದೀ ಚಿಂತನೆಯ ಕೆಲವು ನೆಲೆಗಳು ಮತ್ತು ಕಲಾತ್ಮಕ ಭಾಷಿಕ ಅಭಿವ್ಯಕ್ತಿ
4. ಹೆಣ್ಣು ಮತ್ತು ಭಾಷೆ : ಆಭಿವ್ಯಕ್ತಿ
5. ಸೃಜನಶೀಲತೆ ಮತ್ತು ಮಹಿಳೆ
6. ಸಾಹಿತ್ಯಚರಿತ್ರೆಯ ಪುನಾರಚನೆ – ಒಂದು ಟಿಪ್ಪಣಿ
7. ‘ಹೆಣ್ಣುತನ ಮತ್ತು ಹೆಣ್ಣುಪರ’: ಕನ್ನಡ ಮಹಿಳಾಕಾವ್ಯದ ಕೆಲವು ತಾತ್ವಿಕ ನೆಲೆಗಳು
8. ‘ಬೆರಳ ಸಂದಿಯ ಬದುಕು’- ಎನ್. ವಿ. ಭಾಗ್ಯಲಕ್ಷ್ಮಿ
9. ‘ಕಣ್ಣುಗಳಲಿ ಕನಸು ತುಂಬಿ’ – ಹೇಮಾ ಪಟ್ಟಣಶೆಟ್ಟಿ
10. ‘ಮುಗಿಲಹಕ್ಕಿ’ – ಮಹೇಶ್ವರಿ
11. ‘ಮೊಗ್ಗು ಮೊಗ್ಗಿಗೆ ಸೂಜಿ ಸೂಜಿ’ – ಪ್ರತಿಭಾ ನಂದಕುಮಾರ್
12. ‘ಉಳಿದದ್ದು ಆಕಾಶ’ – ಪ್ರಭಾವತಿ ಎಸ್.ವಿ
13. ‘ಜೀವಸಂಪಿಗೆ’-ದು. ಸರಸ್ವತಿ
14. ‘ಬೆಲ್ಲದ ಮಡು’ – ಕಮಲಾ ನರಸಿಂಹ
15. ‘ಬೀಪ್, ಬೀಪ್……ಬೀಪ್’ – ಎಂ.ಆರ್. ಭಗವತಿ (‘ಚಂಚಲ ನಕ್ಷತ್ರಗಳು’)
16. ‘ಶಕ್ತಿ ಮತ್ತು ಶಿಲುಬೆ’ –, ವಿನಯಾ ಒಕ್ಕುಂದ, (‘ನೂರು ಗೋರಿಯ ದೀಪ’)
17. ತಾಜುಮಾ ಕವಿತೆಗಳು – ತಾಜುಮಾ
18. ‘ನೊಂದು ಮಾಗುವ ಹಾದಿ ಮತ್ತೆ ನೋಯುವ ಹಾದಿ’: ವೀಣಾ ಶಾಂತೇಶ್ವರ
19. ‘ಕೇದಿಗೀ ಬನದಾಗ ಬೆಳದಿಂಗಳಾದವರು’- ಗೀತಾ ನಾಗಭೂಷಣ
20. ‘ಪ್ರೀತಿಯಲ್ಲಿ ಕ್ಷಮೆಯಿರಲಿ’ – ರೇಖಾರಾಣಿ
21. ‘ಅಮ್ಮಚ್ಚಿಯೆಂಬ ನೆನಪು’ – ವೈದೇಹಿ
22. ‘ಮುಟ್ಟು’ – ಶಾಂತಾಕುಮಾರಿ
23. ‘ಗಿರಿಸ್ನೇಹ’ – ಶಮಂತ
24. ‘ಆರದಿರಲಿ ಬೆಳಕು’- ವಿಜಯಾ ಸುಬ್ಬರಾಜ್
25. ವಿ.ಎಂ. ಇನಾಂದಾರ್ ಅವರ ಕಾದಂಬರಿಗಳಲ್ಲಿ ಸ್ತ್ರೀ ಪುರುಷ ಸಂಬಂಧಗಳು
26. ಅಮೃತಾ ಪ್ರೀತಂ ಸಂದರ್ಶನ (ಅನುವಾದ)
27. ಎಳ್ಳು, ಹೂವು ನೀರು – ಲಲಿತಾಂಬಿಕಾ ಅಂತರ್ಜನಂ (ಅನುವಾದ)
ಬೆನ್ನುಡಿ
“ಬರವಣಿಗೆಯು ನನ್ನೊಳಗೆ ವಾಸಿಸುವ ಆ ಇನ್ನೊಂದು ವ್ಯಕ್ತಿತ್ವವು(ಗಳು) ಒಳಬರುವ, ಹೊರಗೆ ನಿರ್ಗಮಿಸುವ ಸ್ಥಾನ. ಅವು ನಾನು ಹೌದು ಮತ್ತು ಅವು ನಾನು ಅಲ್ಲ. ನಾನು ಆ ಪಾತ್ರಗಳೊಳಗೆ ವಿಲೀನವಾಗುವುದು ಹೇಗೆಂದು ನನಗೆ ಗೊತ್ತಿಲ್ಲ. ಆದರೆ, ಅವು ನನ್ನೊಳಗೆ ಚಲಿಸುವುದು, ನನ್ನನ್ನು ಜೀವಂತವಾಗಿಸುವುದು, ನನ್ನನ್ನು ಸೀಳಿಕೊಂಡು ಹೊರಬರುವುದು, ನನ್ನನ್ನು ವಿಚಲಿತವಾಗಿಸುವುದು ಇವೆಲ್ಲವನ್ನೂ ನಾನು ಅನುಭವಿಸುತ್ತಿದ್ದೇನೆ. ಇವರೆಲ್ಲ ಯಾರು? ಹೆಂಗಸೋ ಗಂಡಸೋ? ಒಬ್ಬರೋ ಹಲವರೋ? ಅವರಲ್ಲಿ ಕೆಲವರು ನನಗೂ ಪರಿಚಿತರು, ಅಂತರಂಗದ ಆ ಜನನಿಬಿಡತೆಯು ನನಗೆ ಬಿಡುವನ್ನೂ ಕೊಡುವುದಿಲ್ಲ. ಭದ್ರತೆಯನ್ನೂ ಕೊಡುವುದಿಲ್ಲ. ಹೀಗೆ ಎಲ್ಲವನ್ನೂ ಒಳಗೆ ತೆಗೆದುಕೊಳ್ಳುವ, ಯಾವುದನ್ನೂ ಹೊರಗೆ ಇಡಲಾಗದ ತೆರೆದ ಸ್ಥಿತಿಯು ಗಂಡಸರಿಗೆ ಭಯ ಹುಟ್ಟಿಸುವ ಸಂಗತಿ. ಅವರು ಅದನ್ನು ಸಹಿಸಲಾರರು.” – ಹೆಲೆನ್ ಸಿಕ್ಸೂ
ಮೇಲೆ ಹೇಳಿರುವ ಗಂಡಸು, ಟಿಪಿಕಲ್ ಗಂಡಸು. ಆದರೆ, ಇದು ಮಹಾನ್ ಲೇಖಕರಿಗೆ ಅನ್ವಯಿಸುವುದಿಲ್ಲ. ಹೆಣ್ತನದ ನಸುಲೇಪ ಇಲ್ಲದವನು ಸಾಹಿತಿಯಾಗಲು ಸಾಧ್ಯವೇ ಇಲ್ಲ. ಹಾಗೆಯೇ ಇದು ಎಲ್ಲ ಹೆಂಗಸರಿಗೂ ಸಾಧ್ಯವಾಗದೆಯೂ ಇರಬಹುದು. ಹೆಂಗಸರು ರೂಪಿಸುವ ತಾತ್ವಿಕತೆಯಲ್ಲಿ ಬೇರೆ ಯಾರದೇ ದನಿಯನ್ನು ಮೂಕವಾಗಿಸುವ ಪ್ರಯತ್ನ ಇರುವುದಿಲ್ಲ. ಗಂಡು ಮತ್ತು ಹೆಣ್ಣುಗಳನ್ನು ಪರಸ್ಪರ ಸೇಡು ತೀರಿಸಿಕೊಳ್ಳಲು ಸದಾ ಸನ್ನದ್ಧರಾಗಿರುವ ಶತ್ರುಗಳೆಂದು ತಿಳಿಯುವುದು ಅಗತ್ಯವಲ್ಲ. ಅಂತಹ ಅಜೆಂಡಾವನ್ನು ಹೊಂದಿರುವ ಬರವಣಿಗೆಯು ಬರವಣಿಗೆಯೇ ಅಲ್ಲ.
– ಎಚ್.ಎಸ್.ಆರ್






ಹನ್ನೆರಡನೆಯ ಶತಮಾನದ ಆ ಆಸ್ಫೋಟದ ನಂತರ ಜಾನಪದದಲ್ಲಿ ಜೀವಂತವಾಗಿದ್ದ ಹೆಣ್ಣಿನ ಎದೆಯ ದನಿಗಳನ್ನು ಆಲಿಸಲಿಕ್ಕೆ ಇಪ್ಪತ್ತನೆಯ ಶತಮಾನದವರೆಗೂ ಕಾಯಬೇಕಾಯಿತು ಕನ್ನಡ ಸಮಾಜ.ಈ ಎಂಟು ಶತಮಾನಗಳ ಕಾಲ ಮೊಳಕೆಯಲ್ಲಿಯೇ ಚಿವುಟಲ್ಪಟ್ಟ ಮಹಿಳಾದನಿಗಳೆಷ್ಟು.ಲೆಕ್ಕವಿಟ್ಟವರಾರು ? ಇಪ್ಪತ್ತನೆಯ ಶತಮಾನದಲ್ಲಿ ಅರಳಿದ ವನಸುಮಗಳನ್ನು ಪ್ರೀತಿ ,ಮೆಚ್ಚುಗೆಗಳಿಂದ ತೆರೆದು ತೋರಿದ ಕೆಲವೇ ವಿಮರ್ಶಕರಲ್ಲಿ ರಾಘವೇದ್ರ ರಾವ್ ರವರು ಪ್ರಮುಖರು.ಅವರ ಬರಹ,ಭಾಷಣಗಳು ಒಟ್ಟಿಗೇ ದೊರೆಯುತ್ತಿರುವುದು ಸಂತೋಷಕರ.ಭಾಗ್ಯಲಕ್ಷ್ಮಿಯಂತಹ ಅನೇಕ ಕವಯತ್ರಿಯರನ್ನು ಮತ್ತೆ ಓದಿಕೊಳ್ಳಲು ಪ್ರೇರಕ.
“ಬರವಣಿಗೆಯು ನನ್ನೊಳಗೆ ವಾಸಿಸುವ ಆ ಇನ್ನೊಂದು ವ್ಯಕ್ತಿತ್ವವು(ಗಳು) ಒಳಬರುವ, ಹೊರಗೆ ನಿರ್ಗಮಿಸುವ ಸ್ಥಾನ. ಅವು ನಾನು ಹೌದು ಮತ್ತು ಅವು ನಾನು ಅಲ್ಲ. ನಾನು ಆ ಪಾತ್ರಗಳೊಳಗೆ ವಿಲೀನವಾಗುವುದು ಹೇಗೆಂದು ನನಗೆ ಗೊತ್ತಿಲ್ಲ. ಆದರೆ, ಅವು ನನ್ನೊಳಗೆ ಚಲಿಸುವುದು, ನನ್ನನ್ನು ಜೀವಂತವಾಗಿಸುವುದು, ನನ್ನನ್ನು ಸೀಳಿಕೊಂಡು ಹೊರಬರುವುದು, ನನ್ನನ್ನು ವಿಚಲಿತವಾಗಿಸುವುದು ಇವೆಲ್ಲವನ್ನೂ ನಾನು ಅನುಭವಿಸುತ್ತಿದ್ದೇನೆ. ಇವರೆಲ್ಲ ಯಾರು? ಹೆಂಗಸೋ ಗಂಡಸೋ? ಒಬ್ಬರೋ ಹಲವರೋ? ಅವರಲ್ಲಿ ಕೆಲವರು ನನಗೂ ಪರಿಚಿತರು, ಅಂತರಂಗದ ಆ ಜನನಿಬಿಡತೆಯು ನನಗೆ ಬಿಡುವನ್ನೂ ಕೊಡುವುದಿಲ್ಲ. ಭದ್ರತೆಯನ್ನೂ ಕೊಡುವುದಿಲ್ಲ. ಹೀಗೆ ಎಲ್ಲವನ್ನೂ ಒಳಗೆ ತೆಗೆದುಕೊಳ್ಳುವ, ಯಾವುದನ್ನೂ ಹೊರಗೆ ಇಡಲಾಗದ ತೆರೆದ ಸ್ಥಿತಿಯು ಗಂಡಸರಿಗೆ ಭಯ ಹುಟ್ಟಿಸುವ ಸಂಗತಿ. ಅವರು ಅದನ್ನು ಸಹಿಸಲಾರರು.” – ಹೆಲೆನ್ ಸಿಕ್ಸೂ
ಮೇಲೆ ಹೇಳಿರುವ ಗಂಡಸು, ಟಿಪಿಕಲ್ ಗಂಡಸು. ಆದರೆ, ಇದು ಮಹಾನ್ ಲೇಖಕರಿಗೆ ಅನ್ವಯಿಸುವುದಿಲ್ಲ. ಹೆಣ್ತನದ ನಸುಲೇಪ ಇಲ್ಲದವನು ಸಾಹಿತಿಯಾಗಲು ಸಾಧ್ಯವೇ ಇಲ್ಲ. ಹಾಗೆಯೇ ಇದು ಎಲ್ಲ ಹೆಂಗಸರಿಗೂ ಸಾಧ್ಯವಾಗದೆಯೂ ಇರಬಹುದು. ಹೆಂಗಸರು ರೂಪಿಸುವ ತಾತ್ವಿಕತೆಯಲ್ಲಿ ಬೇರೆ ಯಾರದೇ ದನಿಯನ್ನು ಮೂಕವಾಗಿಸುವ ಪ್ರಯತ್ನ ಇರುವುದಿಲ್ಲ. ಗಂಡು ಮತ್ತು ಹೆಣ್ಣುಗಳನ್ನು ಪರಸ್ಪರ ಸೇಡು ತೀರಿಸಿಕೊಳ್ಳಲು ಸದಾ ಸನ್ನದ್ಧರಾಗಿರುವ ಶತ್ರುಗಳೆಂದು ತಿಳಿಯುವುದು ಅಗತ್ಯವಲ್ಲ. ಅಂತಹ ಅಜೆಂಡಾವನ್ನು ಹೊಂದಿರುವ ಬರವಣಿಗೆಯು ಬರವಣಿಗೆಯೇ ಅಲ್ಲ.
tumbaa arthapurnavaada,atmavimarshege,haadimaadikoduva,echharisuva..baraha..nanage tumbaa kushi haagu thrill kottiu pustike odabeku ennuva ashe aagtaa ide….hsr mahaa mouni…kannada v,v yalliddaga avarodane ondistu dina jotege kaalakalede..avara chintane,ghaadavaada mouna..avatu ondutarada kappuchippinalliruva muttinante.. aa dinagalu kannada viswavidyalayada arthapurna kaalavadu…chintakara chaavadiye ittu…bilimale,hsr,nagabushana swamy.srinivasaraju,rahamat tarikere ,hichi boralingaiah,karigouda bichanahalli,kiiram nagaraj,mallepuram g venkatesh,kv naarayan, kambarara aa dinagala chintane,kannada naadina bahuteka ella barahagararondige charche,maatukate, samvaada nadeyuttidda kaalavadu… indigu hsr avara maatina shaili,avara aa mugdha nagu nanna nenapinalli ulidide…
Ravivarma hosapete…
ಹೆಚ್.ಎಸ್.ಆರ್ ಅವರ ಈ ಹೊಸ ಕೃತಿಯನ್ನು ಓದುವ ಕತೂಹಲ ಹೆಚ್ಚಿದೆ. ಈಚೆಗೆ ಪ್ರಜಾವಾಣಿ ಸಾಹಿತ್ಯ ಪುರವಣಿಯಲ್ಲಿ ಹೆಚ್.ಎಸ್.ಆರ್ ಅವರ ವಿಮರ್ಶೆ ಕುರಿತ ಬರಹದ ಶೈಲಿಯೇ ಸ್ತ್ರೀತ್ವದ ನೆಲೆಯ ಬಾಷಾ ರಚನೆಯೊಂದನ್ನು ಬಳಸಿದ್ದರು. ಈ ಕ್ರಮವನ್ನು ನೋಡಿ ನನಗೆ ತುಂಬಾ ಇಷ್ಟವಾಯಿತು. ಈ ಕೃತಿ ಸ್ತ್ರೀಸಂವೇದನೆಯ ಆಲೋಚನ ಕ್ರಮವನ್ನು ಭಿನ್ನವಾಗಿ ವಿಸ್ತರಿಸುತ್ತದೆ ಎನ್ನುವ ಭರವಸೆಯಿದೆ. ಈ ಹೊಸ ಕೃತಿಯ ನೆಪದಲ್ಲಿ ಗುರುಗಳಾದ ಹೆಚ್.ಎಸ್.ಆರ್ ಅವರಿಗೆ ಅಭಿನಂದನೆಗಳು.
-ಅರುಣ್ ಜೋಳದಕೂಡ್ಲಿಗಿ
halavu dashakagalinda HSR barahagalannu shraddeyinda odutta bandiruva anekaralli nanoo obba. avaru namma naduvina aparoopada srujanasheela vimarshakaru. avara ‘kanna hanigala kaanike’ yallina N.V. Bhagyalakxmiyavara ‘berala sanhiya baduku’ hesarina kavana sankalana kurita barahada bagge nanage kutoohalavide, antha olleya kavayatri punaha bareyale illa. avara sulivu HSR avara hosa krutiyallirabahudu.
kanna hanigale kaanike oduva kaaturavide. avarige nanna hardika abhinandanegalu.
abba its sooo happy that HSR’s book is gonna be in my hands
i love his translations and literature
seeking seeking for it soon