ಎಚ್ ಆರ್ ಸುಜಾತಾ ಅವರ ಹೊಸ ಕಥಾ ಸಂಕಲನ ಹೊರಬರುತ್ತಿದೆ.
ಆನೇಕಲ್ ನ ಕೌದಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
‘ಪದುಮ ಪುರುಷ’ ಕೃತಿಗೆ ಲೇಖಕಿ ಬರೆದ ಬೆನ್ನುಡಿ ಇಲ್ಲಿದೆ

ಎಲ್ಲೆಲ್ಲೋ ಹರವಿದ್ದ ಬಿಡಿಬಿಡಿ ಚೂರುಗಳನ್ನು ಕೂಡಿಸಿ ಬೆಚ್ಚಗಿನ ಕೌದಿ ಮಾಡುವುದು ಹೆಣ್ಣಿನ ಕಲೆಗಾರಿಕೆ. ಕಣ್ಣಲ್ಲಿ ಕಣ್ಣಿಟ್ಟು ಸೂಜಿ ದಬ್ಬಣಗಳ ಚುಚ್ಚಿಗೆ ಹಾಂ! ಎಂದರೂ ಅವರಿವರ ಕತೆಗಳನ್ನು ಕೇಳುತ್ತ ಹೊರಟ ಸೂಜಿದಾರದ ಪಯಣ ಇಡೀ ಸಮೂಹದ ಬದುಕಿನ ಬಟ್ಟೆಯ ಚೂರುಗಳನ್ನು ಹೊಲೆದು ಅರಿವಿನ ಹೊನಲ ಅನುಭವವನ್ನು ಪಡೆಯುವ ಋಣಭಾರದಲ್ಲಿರುತ್ತದೆ, ಅದರಲ್ಲೂ ಹೆಣ್ಣಿನ ಕಣ್ಣೀರಿನ ಮಂಜುಗಣ್ಣಿನ ನೋಟದಲ್ಲಿ ಈ ಜಗತ್ತು ತನ್ನನ್ನು ತಾನು ಕಟ್ಟಿಕೊಳ್ಳುತ್ತಿರುತ್ತದೆ.
ಪುರುಷ ದಾರವಾದರೆ ಸೂಜಿ ಹೆಣ್ಣಿನ ಕಣ್ಣು. ಸೂಜಿ ಅತಿಯಾದ ಮೊನೆಯ ಬೆರಗನ್ನು ಪಡೆದು, ಒಳಗಣ್ಣಿನಲ್ಲಿ ಮುಗಿಯಲಾರದ ಭಾರವನ್ನು ಪೋಣಿಸುವ ಹೊಣೆಗಾರಿಕೆಯನ್ನು ಒಳಗೊಂಡಿದ್ದರೂ ಸಹಜ ಸೊಬಗಿನದ್ದಾಗಿರುತ್ತದೆ.
ಇಂಥ ಹೆಣ್ಣಿನ ಋಣಭಾರವನ್ನು ಹೊರುವ ಇಲ್ಲವೇ ನಿರ್ಲಕ್ಷಿಸುವ ಸಮಾಜ, ಒಂದು ಕಂದಕವನ್ನು ಇಲ್ಲವೇ ಸೇತುವೆಯನ್ನೂ ಕಟ್ಟಿಕೊಂಡಿರುತ್ತದೆ. ಇದರ ಮೇಲೆ ದಾಟುವಾಗಲೂ ಕೆಳಗೆ ಅಗಾಧವಾದ ಹರಿವೊಂದಿರುತ್ತದೆ ಎಂಬುದು ಸತ್ಯ.







0 Comments