ಎಚ್ ಆರ್ ಲೀಲಾವತಿ
(ಅತೀ ಚಿಕ್ಕ ಕಥೆ)
*
ಗುಂಗುರು ಕೂದಲಿನ ಮುದ್ದಾದ ಹುಡುಗ.
ನಾನವನನ್ನು ಕಂಡಾಗ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ. ಸಂಜೆಯಾಯಿತೆಂದರೆ ನನ್ನ ಅಣ್ಣ ಹಾಗೂ ನಮ್ಮ ಬೀದಿ ಹುಡುಗರ ಜೊತೆ ಅವನು ಕ್ರಿಕೆಟ್ ಆಡುತ್ತಿದ್ದ.
ಅವನು ಅಣ್ಣನ ಗೆಳೆಯ ಮೋಹನ. ನಮ್ಮ ಮನೆಯವರಿಗೆಲ್ಲಾ ಚಿರಪರಿಚಿತ.
ಮೋಹನನ ಮನೆಯಲ್ಲಿ ಕಡು ಬಡತನವಿದ್ದರೂ, ಅವನ ತಾಯ್ತಂದೆಯರಿಗೆ ಅವನನ್ನು ಹೆಚ್ಚಿನ ಓದು ಓದಿಸುವ ಆಸೆ. ಅದಕ್ಕಾಗಿ ಹಗಲಿರುಳೂ ದುಡಿದವರವರು. ಅವನನ್ನು ಒಳ್ಳೆಯ ಶಾಲೆಗೇ ಸೇರಿಸಿದ್ದರು. ಬುದ್ಧಿವಂತ ಹುಡುಗ ಚೆನ್ನಾಗಿ ಓದುತ್ತಿದ್ದ. ಶಾಲೆ, ಕಾಲೇಜು ಎಲ್ಲದರಲ್ಲೂ ಫಸ್ಟ್ ಕ್ಲಾಸ್. ಡಿಗ್ರಿ ಮುಗಿಸಿದ ಬಳಿಕ ಮುಂದೆ ಎಂಬಿಎ ಗೆ ಸೇರಿಕೊಂಡ. ಪಾಪ ಅದೇ ವರ್ಷ ಅವನ ತಂದೆ ತೀರಿಕೊಂಡರು. ಅದೇ ವೇಳೆಗೆ ನಮ್ಮ ತಂದೆಯೂ ಆ ಊರನ್ನು ಬಿಟ್ಟು ಬೇರೆ ಊರಿಗೆ ಹೋದದ್ದರಿಂದ, ಹೆಚ್ಚೂ ಕಡಿಮೆ ಅವನ ಸಂಪರ್ಕ ಕಡಿದೇಹೋದಂತಾಯ್ತು.
ನಾನೂ ಮೆಡಿಕಲ್ ಕಾಲೇಜಿನಲ್ಲಿ ಓದಿ ಗೈನಕಾಲಜಿಯಲ್ಲಿ ಸ್ಪೆಷಲೈಜೇಷನ್ ಮಾಡಿಕೊಂಡೆ. ಮದುವೆಯಾಗಿ ಅಮೆರಿಕೆಗೆ ಹೋದ ಮೇಲೆ, ಹೆತ್ತವರನ್ನು ಕಾಣಲು ಎರಡು ವರ್ಷಕ್ಕೊಮ್ಮೆ ತಪ್ಪದೆ ಬರುತ್ತಿದ್ದೆ, ಗಂಡ ಮತ್ತು ಮಕ್ಕಳೊಡನೆ.
ಎಂದಿನಂತೆ ಆ ಸಾರಿಯೂ ಮೂರು ವಾರದ ರಜೆಯ ಮೇಲೆ ಊರಿಗೆ ಬಂದೆ. ದಸರಾ ಸಮಯವಾದದ್ದರಿಂದ ಮಕ್ಕಳನ್ನು ಎಗ್ಸಿಬಿಷನ್ ಗೆ ಕರೆದುಕೊಂಡು ಹೋಗಿದ್ದೆ.
ವಾಪಸ್ಸು ನಮ್ಮ ಕಾರಿನ ಹತ್ತಿರ ಬರುತ್ತಿದ್ದೆ ಅಷ್ಟರಲ್ಲಿ “ಅಮ್ಮಾ ಭಿಕ್ಷೆ ನೀಡಿ ತಾಯಿ” ಎಂಬ ದನಿಯನ್ನು ಕೇಳಿ ಪಕ್ಕಕ್ಕೆ ತಿರುಗಿ ಬೆಳಕಿನಲ್ಲಿ ಆ ಮುಖವನ್ನು ನೋಡಿದೆ. ನನ್ನ ಅರಿವಿಲ್ಲದೆಯೆ ನನ್ನ ಬಾಯಿಂದ “ಮೋಹನ”ಎಂಬ ಉದ್ಗಾರ ಹೊರಬಿತ್ತು. ನನ್ನನ್ನು ಗುರುತಿಸಿದ ಮೋಹನ ಏಳುವುದೂ ಬೀಳುವುದನ್ನೂ ನೋಡದೆ ಓಡಿ ಕಣ್ಮರೆಯಾಗಿಬಿಟ್ಟ. ಅವನ ಎಂಬಿಎ ಸರ್ಟಿಫಿಕೇಟ್ ನನ್ನನ್ನು ಅಣಕಿಸುತಿತ್ತು.
*
ಪ್ರೇರಣೆ
Star of Mysore ನಲ್ಲಿ ಬಂದ ಒಂದು ಸುದ್ದಿ.






0 Comments