ಸುಮಾರು ಐವತ್ತು ವರುಷಗಳ ಸಂಬಂಧವನ್ನು ಕಳಚಿಕೊಳ್ಳುವುದು ಅತಿ ಸುಲಭವಲ್ಲ. ನಾನು ಬೆಳೆದ ಮನೆಯಲ್ಲಿ ಐವತ್ತು ತುಂಬುವ ಮುಂಚೆಯೇ ತೀರಿಕೊಂಡವರು ಅನೇಕ ಮಂದಿ. ಸುಮಾರು ನಲವತ್ತೆಂಟು ವರುಷಗಳು ಮನೆಯಾಗಿದ್ದ, ಜೀವಿಕೆಯ ಅರ್ಜನವನ್ನು ಸಂಪಾದಿಸಿಕೊಟ್ಟಿದ್ದ, ಕರ್ಮಭೂಮಿಯಾಗಿದ್ದ, ಒಂದು ಸಣ್ಣ ರೀತಿಯಲ್ಲಿ ರಣಭೂಮಿಯೂ ಆಗಿದ್ದ, ಈ ಪೃಥಿವಿ ಮತ್ತು ಅದರ ದೇಶವಿದೇಶಗಳ ಸಮಾಜಗಳ ಬಗ್ಗೆ ನನ್ನ ತಿಳುವಳಿಕೆಗಳನ್ನು ಚುರುಪುಗೊಳಿಸಿದ್ದ, ಕೆಲವಾರು ವರುಷಗಳು ಹೊರಗೆ ವಾಸ ಮಾಡಿದಾಗಲೂ ಮತ್ತೆ ಮತ್ತೆ ಅಲ್ಲಿಗೇ ನನ್ನು ವಾಪಸು ಸೆಳೆಯುತ್ತಿದ್ದ ಗುವಾಹತಿಯನ್ನು ಬಿಟ್ಟು ನನ್ನ ತಥಾಕಥಿತ ಸ್ವಂತ ಊರಿಗೆ ಹೊರಡಲು ಕಾಯುತ್ತಿದ್ದೇನೆ.
ಈ ಪ್ರಾಂತ್ಯಕ್ಕೆ ಬಂದಾಗ ನನ್ನ ವಯಸ್ಸು ಸುಮಾರು ಇಪ್ಪತ್ತೈದು; ಈಗ ಎಪ್ಪತ್ನಾಲ್ಕು. ಈಚೀಚಿನವರೆಗೂ ಇಲ್ಲಿಗೆ ಏಕೆ ಬಂದೆ, ಇಲ್ಲಿಂದ ಏಕೆ ವಾಪಸಾಗುತ್ತಿದ್ದೇನೆ, ಇವುಗಳ ಬಗ್ಗೆ ಯಾವರೀತಿಯ ಸಂದೇಹಗೋಟಾಳಗಳಾಗಲೀ ಅಥವಾ ಅಸ್ಪಷ್ಟತೆಗಳಾಗಲೀ ಇರಲಿಲ್ಲ. ಈಗ, ನಾನು ಕಳೆದ ನಲವತ್ತೆಂಟು ವರುಷಗಳ ಜೀವನದಿಂದ ಹೊರಗಾಗುವ ಸಮಯ ಹತ್ತಿರವಾಗುತ್ತಿರುವಾಗ ನನಗೆ ನಾನೇ ಅಂದುಕೋತೇನೆ, ನಾನು ಏಕೆ ಇಲ್ಲಿಂದ ಕರ್ನಾಟಕಕ್ಕೆ ವಾಪಸಾಗ್ತಿದೀನಿ, ಅಂತ.

ಇಲ್ಲಿಗೆ ಬಂದ ಕಾರಣ ಅರ್ಥಮಾಡಿಕೊಳ್ಳುವುದು ಅಷ್ಟು ಜಟಿಲ ಅಲ್ಲ. ಇಲ್ಲಿನ ಯೂನಿವರ್ಸಿಟಿ ಅಧಿಕಾರಿಗಳು ನನ್ನ ಅಂದಿನ ಕರ್ನಾಟಕದ ಅರ್ಜನೆಗಿಂತ ಅರವತ್ತು ರೂಪಾಯಿ ಹೆಚ್ಚು ಸಂಬಳ ಕೊಡಲಿಕ್ಕೆ ಒಪ್ಪಿಕೊಂಡರು. ಆ ದಿನಗಳಲ್ಲಿ ಅರವತ್ತು ರೂಪಾಯಿಗಳಿಗೆ ಬಹಳ ಮೌಲ್ಯ ಇತ್ತು. ಸರಿ ಬಂದದ್ದಾಯಿತು, ಹದಿನಾಲ್ಕು ವರುಷಗಳಿಗೂ ಮೀರಿ ಯೂನಿವರ್ಸಿಟಿ ಚಾಕರಿ ಮಾಡಿದ್ದಾಯಿತು. ಏನೇನೋ ಕಾರಣಗಳಿಂದಾಗಿ ಆ ಚಾಕರಿ, ಪಾಠ ಹೇಳುವ ಕಸುಬು ಮತ್ತು ಗುವಾಹತಿಯನ್ನೂ ಬಿಟ್ಟು, ಬೇರು ಬಿಟ್ಟಿದ್ದ ಮನೆ ಭಂಗಿಸಿ ಮುಂಬೈಗೆ ಹೋದೆ.
ಸನ್ ಸಾವಿರದೊಂಭೈನೂರೆಪ್ಪತ್ತೈದನೇ ಇಸವಿ ಡಿಸೆಂಬರಿನಲ್ಲಿ, ತುರ್ತು ಪರಿಸ್ಥಿತಿಯ ಮಧ್ಯದಲ್ಲಿ ಗುವಾಹತಿ ಬಿಟ್ಟಾಗ ಮತ್ತೆ ಇಲ್ಲಿಗೇ ವಾಪಸಾಗ್ತೇನೆ ಅಂತ ಎಂದೆಂದೂ ಅಂದುದೊಂಡಿರಲಿಲ್ಲ. ಆದರೂ ಸನ್ ಸಾವಿರದೊಂಭೈನೂರೆಂಭತ್ಮೂರನೇ ಇಸವಿ ಜುಲೈ ತಿಂಗಳಲ್ಲಿ ಮತ್ತೊಂದು ಸಮಯ ಮತ್ತು ಪರಿಸ್ಥಿತಿ ಒಟ್ಟಾಗಿ ನನ್ನನ್ನು ಮುಂಬೈನಿಂದ ಇಲ್ಲಿಗೆ ಮರುಸೆಳೆಯಿತು. ಹನ್ನೊಂದು ವರುಷಗಳನಂತರ ಮತ್ತೆ ಗುವಾಹತಿ ಬಿಟ್ಟು ಹೋದೆ. ಆದರೆ ಸನ್ ಸಾವಿರದೊಂಭೈನೂರತೊಂಬತ್ನಾಲ್ಕನೇ ಇಸವಿ ಜೂನ್ ತಿಂಗಳಲ್ಲಿ ದಕ್ಷಿಣ ಆಫ್ರಿಕದ ಜೊಹಾನೆಸ್ಬರ್ಗ್ ಗೆ ಹೋದಾಗ ಅಲ್ಲಿನ ನನ್ನ ಕೆಲಸ ಮುಗಿದನಂತರ ಗುವಾಹತಿಗೇ ವಾಪಸಾಗುತ್ತೇನೆ ಅನ್ನುವುದರಲ್ಲಿ ನನಗೆ ಯಾವ ರೀತಿಯ ಅನುಮಾನವೂ ಇರಲಿಲ್ಲ. ಅದರಂತೆ ಆ ದೇಶದಲ್ಲಿ ಎಂಟು ವರುಷ ಕೆಲಸ ಮಾಡಿ ಸನ್ ಎರಡುಸಾವಿರದೆರಡನೇ ಇಸವಿ ಏಪ್ರಿಲ್ ನಲ್ಲಿ ಇದೇ ಗುವಾಹತಿಗೆ ವಾಪಸಾದೆ. ಈ ಬಾರಿ ಕೆಲಸದಿಂದ ವಿರತಿ ಪಡೆದಿದ್ದೆ. ಆ ಕಾರಣ ನನಗೆ ಆಫೀಸು ಬಾಡಿಗೆ ಕೊಡುತ್ತಿದ್ದ ಮನೆ ಇರಲಿಲ್ಲ. ಆದರೆ ಇದನ್ನು ಲೆಕ್ಕಾಚಾರಕ್ಕೆ ತೆಗೆದುಕೊಂಡು ಜೊಹಾನೆಸ್ಬರ್ಗ್ ಗೆ ಹೊರಡುವ ಮೊದಲೇ ಇಲ್ಲಿ ಒಂದು ಫ್ಲಾಟ್ ಕೊಂಡಿದ್ದೆ. ಆ ನನ್ನ ಸ್ವಂತ ಫ್ಲ್ಯಾಟ್ ಗೆ ಎಂಟು ವರುಷಗಳ ಹಿಂದೆ ವಾಪಸಾದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಸಂಪಾದಿಸಿದ್ದ ಹಣದಿಂದ ಕೊಂಡ ನನ್ನದೇ ಆದ ಮನೆ, ಅಲ್ಲ, ಮನೆ ಅಲ್ಲ, ನಾಲ್ಕು ಗೋಡೆಗಳ ಆವರಣದಲ್ಲಿದ್ದ ಜಾಗ, ಗಾಳಿ.
ನಲವತ್ತೆಂಟು ವರುಷಗಳ ಹಿಂದೆ ಧಾರವಾಡ ಬಿಟ್ಟು ಗುವಾಗತಿಗೆ ಹೋದಾಗ ಅಂದಿನ ದಿನಗಳಲ್ಲಿನ ನನ್ನ ಕೆಲವೇ ಗೆಳೆಯರೆಲ್ಲರೂ ಅದನ್ನು ಒಂದು ತಿಕ್ಕಲತನ ಅಂದಿದ್ದರು. ಆದರೆ ನನ್ನ ಮನೆಯವರಾರೂ ಯಾಕೆ ಅಷ್ಟು ದೂರ ಹೋಗ್ತಿ, ಅಂತ ಪ್ರಶ್ನಿಸಲಿಲ್ಲ. ನನ್ನಮ್ಮ ಹೇಳಿದ ಮಾತು ಈಗಲೂ ನೆನಪಿನಲ್ಲಿದೆ: ಎಲ್ಲಾದರೂ ಕೆಲಸ ಮಾಡಿಕೊಂಡಿರು, ನೀನು ಸಂತೋಷವಾಗಿದ್ದರೆ ನನಗೆ ಅದೇ ಸಾಕು. ಗುವಾಹತಿ ತಲುಪಿದ ಏಳೆಂಟು ತಿಂಗಳಿನಂತರ ಭಾರತ-ಚೀನಾ ಗಡಿ ಸಂಘರ್ಷ ಆರಂಭವಾದಾಗ ಮತ್ತು ಅದರ ಪ್ರಯುಕ್ತ ಅಸಂ ಮತ್ತು ಆಸು ಪಾಸಿನ ಪ್ರಾಂತ್ಯಗಳನ್ನಿನ ಅನೇಕ ಹೊರಗಿನಿಂದ ಬಂದು ಕೆಲಸ ಮಾಡುತ್ತಿದ್ದ ಅಥವಾ ವಲಸೆ ಹೂಡಿದ್ದ ಜನರು ತಮ್ಮ ತಮ್ಮ ದೇಶಗಳಿಗೆ ಪಲಾಯನ ಮಾಡಿದಾಗ ಅರವತ್ತೇಳು ವರುಷ ವಯಸ್ಸಿನ ಅಮ್ಮ ನನಗೆ ಬರೆದ ಪೋಸ್ಟ್ ಕಾರ್ಡ್ ಈಗಲೂ ನನ್ನ ಬಳಿ ಇದೆ. ಆ ಪತ್ರದ ತಾತ್ಪರ್ಯ ಇಷ್ಟು: ಪಲಾಯನ ಮಾಡುತ್ತಿರುವ ಜನಸಂದಣಿಯಲ್ಲಿ ನೀನು ಸಿಕ್ಕಿಹಾಕ್ಕೋಬೇಡ. ಆಲ್ಲಿನ ಜನ ಇದ್ದಾರೆ ತಾನೇ? ಅವರೇನೂ ಎಲ್ಲೂ ಓಡಿಹೋಗಿಲ್ಲವಲ್ಲಾ? ನೀನೂ ಅಲ್ಲೇ ಇರು. ಗಡಿ ಗೊಂದಲ ತೀರಿದನಂತರ ಒಮ್ಮೆ ಇಲ್ಲಿಗೆ ಬಾ.
ಇಲ್ಲಿಗೆ ಬಂದದ್ದು ಸರಿ. ಈಷ್ಟು ವರುಷಗಳು ಇಲ್ಲಿ ಕಳೆದಿದ್ದು ಸರಿ. ಆದರೆ ಈಗ ಯಾಕೆ ವಾಪಸಾಗುತ್ತಿದ್ದೇನೆ? ಕರ್ನಾಟಕ ನನಗೆ ಒಂದು ಅಪರಿಚಿತ ಪ್ರಾಂತ್ಯ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನಾನು ಸುತರಾಂ ಹೊರಗಿನವ. ಅಲ್ಲಿ ಬರೇ ಆರು ವರುಷಗಳು ವಾಸವಾಗಿದ್ದೆ, ಅದೂ ಐವತ್ತೊಂದು ವರುಷಗಳ ಹಿಂದೆ. ಬೆಳೆದ ಊರಾದ ಮತ್ತು ಹದಿನೈದು ಹದಿನಾರು ವರುಷಗಳು ಕಳೆದ ಕೋಲಾರದ ಆ ದಿನಗಳ ಗೆಳೆಯರಾರೊಡನೆಯೂ ಸಂಪರ್ಕ ಇಲ್ಲ. ನನ್ನ ಅಂದಾಜಿನಂತೆ ಪ್ರಾಯಶಃ ಅವರುಗಳೆಲ್ಲರೂ ತೀರಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಆರು ವರುಷಗಳಲ್ಲಿ ಪರಿಚಯಸ್ಥರಾದವರೆಲ್ಲರೂ ಈಗ ಬಹಳ ದೊಡ್ಡ ಮನುಷ್ಯರು. ಅವರಾರನ್ನೂ ಗೆಳೆಯ ಅನ್ನಲಾರೆ. ಯಾವುದೋ ಒಂದು ಕಾಲದಲ್ಲಿ ಒಂದೆರಡು ಸಣ್ಣ ಪುಟ್ಟ ಕತೆಗಳನ್ನು ಬರೆದಿದ್ದರಿಂದ ಅವುಗಳನ್ನು ಓದಿರುವ ಕೆಲವರು ಈ ನಡುವೆ ಪರಿಚಯಸ್ಥರಾಗಿದ್ದಾರೆ. ಅಷ್ಟೇ. ಈಗ ಅಲ್ಲಿನ ಗೆಳೆಯರು ಅಂದರೆ ಒಡಹುಟ್ಟಿದವರ ಸಂತಾನಗಳಲ್ಲಿನ ಒಂದಿಬ್ಬರು ಸೋದರಸೊಸೆ ಸೋದರಳಿಯಂದರು, ಇನ್ನೂ ಉಳಿದಿರುವ ಇಬ್ಬರು ಒಡ ಹುಟ್ಟಿದವರು, ಮತ್ತು ಈಚೀಚೆಗೆ ನಾನೇ ಏಕಪಕ್ಷೀಯವಾಗಿ ಅವರುಗಳ ಸಂಸಾರದವನು ಎಂದು ಲಗತ್ತಿಸಿಕೊಂಡಿರುವ ಮತ್ತು ನನಗಿಂತಾ (ವಯಸ್ಸಿನಲ್ಲಿ ಮಾತ್ರ, ತಿಳುವಳಿಕೆಯಲ್ಲಲ್ಲ) ಬಹಳ ಸಣ್ಣವರಾದ ಒಂದಿಬ್ಬರು ಹೊಸ ಬಂಧುಗಳು, ಬಾಂಧವರು, ಎರಡು ಕೈಗಳ ಬೆರಳುಗಳಲ್ಲಿ ಎಣಿಸಬಹುದಾದಷ್ಟು ನಾನೇ ಅಳವಡಿಕೊಂಡಂತಹ ಗೆಳೆಯರು.
ಬಿಟ್ಟುಹೋಗಲಿರುವ ಗುವಾಹತಿಯಲ್ಲಂತೋ ಇರುವ ಬಾಂಧವ್ಯಗಳೆಲ್ಲಾ ನಲವತ್ತು ನಲವತ್ತೈದು ವರುಷಗಳಿಗೂ ಮೀರಿದ್ದು. ಕೆಲವರದಂತೂ ಒಂದೆರಡು ಪೀಳಿಗೆಯ ಬಾಂಧವ್ಯ. ಇಲ್ಲಿನ ಗೆಳೆಯರಿಗೆ ಇಷ್ಟು ವರುಷಗಳ ನೆಂಟಸ್ತನಗಳು, ಅಸಾಮಿಯಾ ಭಾಷೆಯನ್ನು ಓದುವ, ಮಾತನಾಡುವ ಕ್ಷಮತೆ, ಸ್ವಂತ ಮನೆಬಾಗಿಲು, ಒಗ್ಗುವ ಊಟತಿಂಡಿ, ಅದನ್ನು ಚೊಕ್ಕವಾಗಿ ತಯಾರಿಸಲು ಮನೆಗೆಲಸದ ರಾನು, ಖಾಯಿಲೆಯಾದಾಗ ಎಲ್ಲಾ ರೀತಿಯಲ್ಲೂ ಸಹಾಯಕ್ಕೆ ಬಂದ ಡಾಕ್ಟರುಗಳು, ಈಗಲೂ ಗೌರವ ವಿಶ್ವಾಸಗಳಿಂದ ನೆನೆಸಿಕೊಳ್ಳುವ ಒಂದು ಕಾಲದಲ್ಲಿನ ವಿದ್ಯಾರ್ಥಿಗಳು, ಕನ್ನಡದಲ್ಲೇ ಕತೆಕಾದಂಬರಿ ಬರೆಯಲು ಪ್ರೇರಣೆ ಕೊಟ್ಟ ಪರಿವೇಶ, ನನ್ನ ಮುಟ್ಠಾಳತನ, ದ್ವಿಮುಖೀತನ, ದೌರ್ಜನ್ಯಗಳಿಂದ ನನಗೆ ನಾನೇ ವಂಚಿಸಿಕೊಳ್ಳದಿದ್ದರೆ ಎಂದೋ ಇಲ್ಲೇ ಮದುವೆ ಮಾಡಿಕೊಂಡು ಸಂಸಾರವಂದಿಗನಾಗಬಹುದಾಗಿದ್ದ ಬೃಹತ್ ಅಸಾಮಿಯಾ ಸಮಾಜದ ವಿಶಾಲ ಮನೋಭಾವ, ಕೊಳೆಮಾರಿ ಗುವಾಹತಿಯ ಪ್ರಾಕೃತಿಕ ಸೌಂದರ್ಯ, ಇವೆಲ್ಲಕ್ಕೂ ಮೀರಿ ಮನೆಯಿಂದ ಎರಡುಮೂರು ಮಿನಿಟುಗಳ ದೂರದಲ್ಲಿ ಹರಿಯುವ ಮಹಾಬಾಹು ಬ್ರಹ್ಮಪುತ್ರ, ಮಹಾಮಿಲನದ ತೀರ್ಥ, ಇವನ್ನೆಲ್ಲಾ ಬಿಟ್ಟು ಬೆಂಗಳೂರಿಗೂ ಅಲ್ಲ, ಯಾರೂ ಕಾಣದ, ಕೇಳದ ಕೋಲಾರಕ್ಕೆ ಏಕೆ ವಾಪಸಾಗುತ್ತಿದ್ದೇನೆ, ಅಂತ.
ಈ ಪ್ರಶ್ನೆಗಳಿಗಳನ್ನು ಕೇಳಿದವರಿಗೆ ಉತ್ತರಿಸಿದ್ದೇನೆ. ಆದರೆ ನನಗೇ ಆ ಉತ್ತರಗಳಲ್ಲಿ ವಿಶ್ವಾಸವಿಲ್ಲ. ಕರ್ನಾಟಕದಿಂದ ಈ ಪ್ರಾಂತ್ಯಕ್ಕೆ ಬಂದಾಗ ಹೊರಗಿನವನಾಗಿ ಬಂದೆ. ಹೆಚ್ಚು ಕಮ್ಮಿ ಅರ್ಧಶತಮಾನಗಳನಂತರ ಈ ಪ್ರಾಂತ್ಯದಿಂದ ಒಬ್ಬ ಹೊರಗಿನವನಂತೆ ಕೋಲಾರಕ್ಕೆ ವಾಪಸಾಗುತ್ತಿದ್ದೇನೆ. ಅಂದೂ ಹೊರಗಿನವ, ಇಂದೂ ಹೊರಗಿನವ.
(February 10, 2010)
ಎಂ ಎಸ್ ಪ್ರಭಾಕರ್: ಒಬ್ಬ ಹೊರಗಿನವನಂತೆ ಕೋಲಾರಕ್ಕೆ ವಾಪಸಾಗುತ್ತಿದ್ದೇನೆ
ನಿಮಗೆ ಇವೂ ಇಷ್ಟವಾಗಬಹುದು…





Its quite wonderful to read your traveling and being settled in guwahati. And your story resembles like as many birds go for migration and at the end returns to their home base , yours also similar to it. Welcome back to karnataka….