ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಎಸ್ ಆಶಾದೇವಿಯವರು ಹೇಳಿದ ಮಾತುಗಳಿಗೆ ಪ್ರತಿಕ್ರಿಯಾತ್ಮಕ ಸಣ್ಣ ಟಿಪ್ಪಣಿಯಷ್ಟೇ ಇದು.

ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ-

“ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು ಭೋಗಕ್ಕೆ ಆಕರ ಅಥವಾ ವೈರಾಗ್ಯಕ್ಕೆ ಪರಿಕರ ಎನ್ನುವ ಎರಡು ಮನೋಭಾವಗಳನ್ನು ಕಾವ್ಯಗಳು ಉಂಟು ಮಾಡುತ್ತವೆ. ಇವುಗಳ ಹೊರತಾಗಿ, ಸಾಕಾರ ಎಂದು ಕರೆಯಬಹುದಾದ ಆಕಾರವೊಂದು ಹೆಣ್ಣಿಗಿದೆ ಎನ್ನುವ ಭಾವನೆ ಹಳಗನ್ನಡ ಕಾವ್ಯಗಳನ್ನು ಓದಿದಾಗ ಉಂಟಾಗುವುದಿಲ್ಲ…. ಇವೆಲ್ಲ ಬಣ್ಣನೆಗಳು ಕಟ್ಟಿಕೊಡುವ ಹೆಣ್ಣಿನ ಚಿತ್ರಣ ಯಾವ ಬಗೆಯದು ಎಂದವರು ಪ್ರಶ್ನಿಸಿದರು”
-ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.  ಇದಕ್ಕೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದರು. ಅದು ಇಲ್ಲಿದೆ.

ಪ್ರತಿಭಾ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ

ಈಗ ರೇಣುಕಾರಾಧ್ಯ ಎಚ್ ಎಸ್ ಅವರ ಪ್ರತಿಕ್ರಿಯೆಯನ್ನು ಇಲ್ಲಿ ನೀಡುತ್ತಿದ್ದೇವೆ

ರೇಣುಕಾರಾಧ್ಯ ಎಚ್ ಎಸ್ 

ಎಲ್ಲ ತರದಲ್ಲೂ ಸಮೃದ್ಧವಾಗಿರುವ, ಎಲ್ಲದಕ್ಕೂ ಸ್ಪೇಸ್ ಕೊಟ್ಟಿರುವ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿರುವ ಹಳಗನ್ನಡ ಸಾಹಿತ್ಯ ಹೆಣ್ಣಿನ ವಿಷಯದಲ್ಲಿ ಮಾತ್ರ ಹೀಗೆ ಅವಳನ್ನು ಒಂದು ವಸ್ತು ವಿಶೇಷದಂತೆ ಕಂಡಿರುವುದು ತಮಗೆ ನೋವು, ವಿಷಾಧ ತರುತ್ತದೆ.

ಎಂದು ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಮೊದಲ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕಿ ಎಂ.ಎಸ್. ಆಶಾದೇವಿಯವರು ಹೇಳಿದ ಮಾತುಗಳಿಗೆ ಪ್ರತಿಕ್ರಿಯಾತ್ಮಕ ಸಣ್ಣ ಟಿಪ್ಪಣಿಯಷ್ಟೇ ಇದು.

ಹಳಗನ್ನಡ ಸಾಹಿತ್ಯ ಮತ್ತು ಹೆಣ್ಣು

ನಮ್ಮ ಯಾವುದೇ ಓದು ಮತ್ತು ವಾದ ನಮ್ಮ ಅರಿವನ್ನು ವಿಸ್ತರಿಸದಿದ್ದರೆ ಅಂಥ ಓದು ಮತ್ತು ವಾದ ನಿರರ್ಥಕವಾದದ್ದು.
ಹಾಗಾಗಿ ಸಾಹಿತ್ಯದ ಓದುವ ದಾರಿಗಳು, ಕ್ರಮಗಳು ಹೆಚ್ಚಿದಷ್ಟು ಅರಿವು ವಿಸ್ತರಿಸುತ್ತದೆ.

ಹಳಗನ್ನಡ ಸಾಹಿತ್ಯದ ಓದೂ ಕೂಡ ಇಂಥಹದ್ದೇ ಆಗಿದೆ. ಹಳಗನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪ್ರತಿನಿಧೀಕರಣವನ್ನು ಗಮನಿಸಿದರೆ ನಿರಾಸೆಯಾಗುತ್ತದೆ. ಹೆಣ್ಣನ್ನು ಕೇವಲ ಭೋಗದ ಆಕರವಾಗಿಯಷ್ಟೇ ಕಾಣಲಾಗಿದೆ. ಹೆಣ್ಣು ಗಂಡಿನ ನೆರಳಷ್ಟೇ ಆಗಿದ್ದಾಳೆ, ಕವಿಗಳು ಸಾಮಾಜಿಕ ಕಟ್ಟಳೆಯ ಬಂಧಿಗಳಾಗಿ ಹೆಣ್ಣಿನ ವ್ಯಕ್ತಿತ್ವವನ್ನು ನಿರೂಪಿಸಿದ್ದಾರೆ, ಗಂಡಿನ ಯಶಸ್ಸು ಮತ್ತುಅಗತ್ಯಗಳಿಗೆ ಪೂರಕ ಸರಕಾಗಿದ್ದಾಳಷ್ಟೆ, ಹೆಣ್ಣಿನ ದೈಹಿಕ ಅಂಗಾಂಗಳ ವರ್ಣನೆಗಷ್ಟೇ ಸೀಮಿತವಾಗಿದೆ ಎಂಬಂತಹ ಆರೋಪಗಳನ್ನು ಸಾಹಿತ್ಯದ ಓದುಗಳಲ್ಲಿ ಒಂದಾದ ಸ್ರ್ತೀ ವಾದಿ ಓದು ನಮ್ಮ ಮುಂದಿಟ್ಟಿದೆ.

ಈ ವಾದ ಎತ್ತಿರುವ ಪ್ರಶ್ನೆಗಳನ್ನು ಸಾಹಿತ್ಯದ ಓದುಗನಾದವನು, ಸಾರಾಸಗಟಾಗಿ ಒಪ್ಪಬೇಕಿಲ್ಲ, ಹಾಗಂತ ನಿರಾಕರಿಸುವ ಹಾಗೂ ಇಲ್ಲ. ಆ ಓದಿನಲ್ಲಿ ಕಾಣದ, ಕಂಡರೂ ಅವುಗಳ ಬಗೆಗೆ ಗಮನಹರಿಸದ ಕೆಲ ವಿಷಯಗಳನ್ನು, ಅಂಶಗಳನ್ನು ಆ ಓದಿಗೆ ಕೂಡಿಸುವ, ಓದಿನ ಕ್ರಮ ಸ್ರ್ತೀವಾದಿ ಓದಿನ ನಿರಾಕರಣೆಯಲ್ಲ, ಓದಿನ ವಿಸ್ತರಣೆಯಷ್ಟೆ ಅಲ್ಲದೆ ಹಳಗನ್ನಡ ಸಾಹಿತ್ಯ ಪರಂಪರೆಯ ಅರಿವಿನ ವಿಸ್ತರಣೆಯೂ ಕೂಡ ಆಗಿದೆ.

ಹಳಗನ್ನಡ ಸಾಹಿತ್ಯದಲ್ಲಿ ಹೆಣ್ಣು ಪುರುಷಾಧಿಕಾರದ ದಬ್ಬಾಳಿಕೆಗೆ ಶರಣಾಗುವ ಅನಿವಾರ್ಯತೆ ಒದಗಿದ್ದರೂ, ದಬ್ಬಾಳಿಕೆಯ ವಿರುದ್ಧದ ಚೇತನವಾಗಿ ಪ್ರತಿರೋಧ ತೋರುವ, ತನ್ನತನವನ್ನು ಕಾಪಿಟ್ಟುಕೊಂಡಿರುವ ನಾನಾ ರೂಪಗಳನ್ನು ಬಹುಮುಖಿಯೂ, ಜೀವಪರವೂ ಆದ ಕನ್ನಡ ಸಾಹಿತ್ಯ ಪರಂಪರೆಯ ಹಳಗನ್ನಡ ಕವಿಗಳು ಕಟ್ಟಿಕೊಟ್ಟಿದ್ದಾರೆ.

ಮೊದಲಿಗೆ ಪಂಪನ ಆದಿಪುರಾಣದಲ್ಲಿ ಸರಸ್ವತಿಯನ್ನು ಪಂಪ ‘ಪರಮಜಿನೇಂದ್ರವಾಣಿಯೆ ಸರಸ್ವತಿ ಬೇರದು ಪೆಣ್ಣ ರೂಪಮಂ ಧರಿಯಿಸಿ ನಿಂದುದಲ್ತು” ಎಂದು ಹೇಳಿ ಇದ್ದುದರಲ್ಲಿ ಅಲ್ಪಸ್ವಲ್ಪ ಸೃಜನಶೀಲವಾದ ಸರಸ್ವತಿಯ ಕಲ್ಪನೆಯನ್ನು ಜಿನೇಂದ್ರವಾಣಿ ಮಾಡಿಬಿಡುತ್ತಾನಲ್ಲ ಎಂಬ ಆರೋಪವಿದೆ.

ಈ ಆರೋಪಕ್ಕೆ ಕಾರಣವಾಗಿರುವುದು ಪಂಪನ ಕಾವ್ಯಸರಸ್ಪತಿಯ ಕುರಿತಾದ ಗ್ರಹಿಕೆಯ ಸಮಸ್ಯೆಯಿಂದಾಗಿ.ಪಂಪ ಇಲ್ಲಿ “ಸರಸ್ವತಿ ಎಂಬ ಶಬ್ದರೂಪವನ್ನು ನಿರಾಕರಿಸದೆ ಅದಕ್ಕೆ ನೀಡಲಾದ ಹೆಣ್ಣುರೂಪವನ್ನು ನಿರಾಕರಿಸುವ ಪಂಪ, ಅದನ್ನು ಗಂಡಾಗಿಯೂ ಪರಿಭಾವಿಸುತ್ತಿಲ್ಲ. ನಮ್ಮನ್ನು ಜಾಡಿಗೆ ಬೀಳಿಸಿರುವ ಭಾಷೆಗೆ ಹೌದು- ಅಲ್ಲ ಎಂಬ ಅವಳಿ ವೈರುಧ್ಯಗಳ ಹಾದಿಯಷ್ಟೇ ಗೊತ್ತು, ಆದರೆ ಪಂಪ ಈ ರೂಢಿಯಾದ ಜಾಡನ್ನು ಬಿಟ್ಟುಬೇರೆ ಹಾದಿ ತುಳಿಯುತ್ತಾನೆ. ಹಾಗಾಗಿ ವಾಣಿಯನ್ನು ವಾಣಿಯಂದೇ ಕರೆತುವ ಆತ ಅದನ್ನು ಹೆಣ್ಣು ಅಥವಾ ಗಂಡಾಗಿ ಗುರುತಿಸುತ್ತಿಲ್ಲ. ಅಂದಮಾತ್ರಕ್ಕೆ ಆತ ನೋಟದಲ್ಲಿ ಉತ್ಪನ್ನಗೊಳ್ಳುವ ರೂಪ ಅಥವಾ ರೂಪಗಳನ್ನೆ ನಿರಾಕರಿಸುತ್ತಿದ್ದಾನೆ ಎಂದಲ್ಲ. ಸರಸ್ವತಿಯನ್ನು ಈ ಸಾಂಸ್ಕೃತಿಕ ದ್ವಿದಾವೃತ್ತಿಯಿಂದ ಬಿಡುಗಡೆಗೊಳಿಸಿ ಆ ಕ್ಷಣದ ಸತ್ಯವಾಗಿ ನೋಡುತ್ತಿದ್ದಾನೆ ಬಂಧಿಸುತ್ತಿಲ್ಲ. ಜಿನ ಎಂದರೆ ಲೋಕಕಷ್ಟಕ್ಕೆ ಕರಗಿ ಲೋಕಾನುಕಂಪೆಯ ಬುದ್ಧಿಪ್ರಜ್ಞೆಯೇ. ಈ ಪರಮಜಿನನೋ ಯಜಮಾನಮಾನವಾಗಿ ನಿಲ್ಲದ, ವ್ಯಕ್ತಿಗತ ಅಸ್ಮಿತೆಯನ್ನು ದಾಟಿದ ಜಂಗಮಾವಸ್ಥೆ. ಪಂಪ ಸರಸ್ವತಿಯಾಗಿ ಕಾಣುತ್ತಿರುವುದು ಈ ಲೋಕಹಿತಕಾರಿ ಲೋಕಸಂಗತಿಯಾದ ಜಿನವಾಣಿಯನ್ನು. ವಿಕ್ರಮಾರ್ಜುನ ವಿಜಯದಲ್ಲೂ ಕಾವ್ಯ ಸರಸ್ವತಿಯನ್ನು ಕುರಿತು “ವಿಶುದ್ದ ಬುದ್ದಿಯನೀಗೆ ಅರಿಗಂಗೆ” ಎಂದು ಹೇಳುವ ಪಂಪನಿಗೆ ವಾಣಿ ಎಂಬುದು ಲೋಕದ ಬೆಳಕು, ಅದು ಗಂಡೂ ಅಲ್ಲ ಹೆಣ್ಣೂ ಅಲ್ಲ. ಹಾಗಾಗಿ ಅದನ್ನು ಆಕಾರದಲ್ಲಿ ಹಿಡಿಯುತ್ತೇವೆಮನಬುದು ಮೋಸವಲ್ಲವೆ? ಎಂಬ ಈ ಮಾತುಗಳನ್ನು ಹೇಳುವ ಡಾ. ಜಯಪ್ರಕಾಶ ಶೆಟ್ಟಿಯವರು ಪಂಪನ ಕಾವ್ಯದ ಓದಿನ ಬಗೆಗೆ ಮಾಡಿರುವ ಇತ್ತೀಚಿನ ಈ ಹೊಸ ಓದು, ಸ್ರ್ತೀವಾದಿ ಓದು ಎತ್ತಿರುವ ಪ್ರಶ್ನೆಗೆ ಉತ್ತರವಾಗಿದೆ ಎಂದುಕೊಂಡಿದ್ದೇನೆ.

ಪಂಪ ತನ್ನ ಆದಿಪುರಾಣದಲ್ಲಿ “ಸಾರಮನಂಗ ಜಂಗಮಲತಾ ಲಲಿತಾಂಗಿಯರಿಂದಲ್ತೆ ಸಂಸಾರಂ’ ಎಂಬ ಮಾತು ಬದುಕಿನಲ್ಲಿ ಹೆಣ್ಣಿನ ಮಹತ್ವವನ್ನು ತಿಳಿಸುತ್ತದೆ.

ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಸುಭದ್ರೆಯನ್ನು ದುರ್ಯೋದನನಿಗೆ ಕೊಡಬೇಕೆನ್ನುವ ಬಲರಾಮನ ಇಚ್ಛೆಯನ್ನು ವಿರೋಧಿಸಿ, ಸುಭದ್ರೆ ಬಯಸಿದ ಅರ್ಜುನನಿಗೆ ಕೊಡುವ ಅಪರೂಪದ ಪ್ರಸಂಗ, ಮತ್ತು ಆದಿಪುರಾಣದ ಲಲಿತಾಂಗ- ಸ್ವಯಂಪ್ರಭೆಯ ವಿಚಾರದಲ್ಲಿ ಹೆಣ್ಣು ತನಗೆ ಬೇಕಾದವನನ್ನೇ ಆರಿಸಿಕೊಳ್ಳುವ ಅಪರೂಪದ ಪ್ರಸಂಗಗಳಲ್ಲಿ ಹೆಣ್ಣಿನ ಹಾಜರಿ ಎದ್ದು ಕಾಣುತ್ತದೆ.

ಶಾಂತಿಪುರಾಣದಲ್ಲಿ”ಜ್ಯೋತಿಪ್ರಭೆಯೆಂಬ ರಾಜಕುಮಾರಿ ಸ್ವಯಂವರ ಮಂಟಪಕ್ಕೆ ಬಂದುದನ್ನು “ಮಸಕದೆ ಕೊಲ್ವಾನೆ ಬರ್ಪಂತೆ ಬಂದಳ್ ” ಎನ್ನುವಲ್ಲಿ ಹೆಣ್ಣಿನ ಬಾಹ್ಯ ಸೌಂದರ್ಯಕ್ಕಿಂಥ ಅವಳ ತೀಕ್ಣತೆಯನ್ನು ಹೇಳುತ್ತದೆ. ಇದೇ ರೀತಿ ಕುಮಾರವ್ಯಾಸ ಭಾರತದ ಉದ್ಯೋಗ ಪರ್ವದಲ್ಲಿ ಪಾಂಡವರು ಸಂಧಾನಕ್ಕೆ ಒಪ್ಪಿದ್ದಾರೆ ಎಂಬ ಮಾತ ಕೇಳಿ ಸಿಡಿಮಿಡಿಗೊಂಡ ದ್ರೌಪದಿ “ಭ್ರೂಲತೆಯ ಸರಚಾಪದುರು ಕೇಶಾಳಿಗಳ ಕಾರ್ಮುಗಿಲಪಾಂಗದ.. ಆ ಲತಾಂಗಿಯ ಗಮನವೇ ಮಳೆಗಾಲದಂತಿರೆ’ ಎಂಬ ಚಿತ್ರ ಹೆಣ್ಣಿನ ಚಿತ್ರ ಅವಳ ಬಾಹ್ಯ ಸೌಂದರ್ಯವನ್ನು ವರ್ಣಿಸುವುದಿಲ್ಲ ಎಂಬುದನ್ನು ಗಮನಿಸಬೇಕು.

ಹೆಣ್ಣು ಉತ್ತಮ ಹೆಂಡತಿಯಾಗಿ,ಒಳ್ಳೆಯ ಮಗನ ತಾಯಿಯಾಗಿ ಗೃಹಕಾರ್ಯಗಳಲ್ಲಿಯೇ ಮುಳುಗಿರಬೇಕೆಂದೇ ಚಿತ್ರಿತಳಾಗಿರುವ ಹೆಣ್ಣು ಅಷ್ಟಕ್ಕೆ ಸೀಮಿತವಾಗದೆ ಆಕೆ ವಿದ್ಯಾಭ್ಯಾಸ ಪಡೆದು ಪಾಂಡಿತ್ಯಗಳಿಸಿದ್ದ ಹೆಣ್ಣುಗಳ ವಿವರಗಳ ಬಗೆಗೂ ಹಳಗನ್ನಡ ಕಾವ್ಯಗಳು ನಮ್ಮ ಗಮನ ಸೆಳೆಯುತ್ತವೆ.

ಪಂಪನ ಆದಿಪುರಾಣದಲ್ಲಿ ಆದಿದೇವ ತನ್ನ ಹೆಣ್ಣುಮಕ್ಕಳಲ್ಲಿ ಹಿರಿಯಳಾದ ಬ್ರಾಹ್ಮಿಗೆ ಅಕ್ಷರ ಕಲಿಸುತ್ತಾನೆ” ಸಿದ್ಧ ನಮ ಎಂದರುಪಿ ಮುಖ್ಯಮಂಗಳ ಪದಮಂ ಕನ್ಯೆಗೆ ಪಿರಿಯಾಕೆಗೆ ಬಳಿಯಂ ಸಯದಿಂ ಬರೆದು ತೋರಿದಂ ಲಿಪಿಗಳುಮಂ” ಎಂದಿದೆ.ಮತ್ತೊಬ್ಬ ಮಗಳಾದ ಸುಂದರಿಗೆ ಗಣಿತ,ಪದವಿದ್ಯೆ,ಛಂದಸ್ಸು, ಅಲಂಕಾರಗಳನ್ನು, ಸಮಸ್ತ ಕಲಾ ಕಲಾಪಗಳನ್ನು ಉಪದೇಶಿಸುತ್ತಾನೆ.ಪಂಡಿತೆಯೆಂಬ ದಾದಿಯೊಬ್ಬಳು ರಾಣಿಯನ್ನು ಓದಿಸಿ ಸುಶಿಕ್ಷಿತಳನ್ನಾಗಿ ಮಾಡುವ ಪ್ರಸಂಗವೊಂದಿದೆ.

ಕರ್ನಾಟಕ ಪಂಚತಂತ್ರದಲ್ಲಿ ಸ್ರ್ತೀಯರು ಕಥಾನಕವೊಂದನ್ನು ಆರಿಸಿಕೊಂಡು ನಾಟಕವಾಡಿದ ಸಂಗತಿಯೊಂದಿದೆ. ನಾಗಚಂದ್ರನ ‘ ರಾಮಚಂದ್ರಚರಿತಪುರಾಣದಲ್ಲಿ ಸೀತೆ “ಭರತಶಾಸ್ತ್ರಾದಿ ಸಕಲ ಕಳೆಯೊಳತಿ ಪರಿಣತಿ’ ಪಡೆದವಳೆಂದು ಹೇಳಲಾಗಿದೆ. ಇದೇ ಕಾವ್ಯದಲ್ಲಿ ರಾಜ್ಯಾಧಿಕಾರವನ್ನು ನೋಡಿಕೊಳ್ಳುವಂತೆ ರಾಜನು ರಾಣಿಗೆ ಹೇಳುತ್ತಾನೆ.
ಕರ್ನಾಟಕ ಪಂಚತಂತ್ರದಲ್ಲಿ ಜನಪದ ಕತೆಗಾರ್ತಿಯೊಬ್ಬಳು ಕತೆ ಹೇಳುವುದನ್ನೆ ವೃತ್ತಿಯನ್ನಾಗಿ ಮಾಡಿಕೊಂಡು ಭಾರೀ ಸಂಭಾವನೆ ಪಡೆದ ಕತೆ ತಿಳಿಸುತ್ತದೆ.( “ಡಾಮರ ಡಾಕಿನಿ ಶಾಕಿನಿ ದೇವತೆ ಕತೆ ಕೇಳಲತಿಶಯಂಬಲ್ಲಳ್ ನಾನಾ ವಿಧದ ಗಾಳು ಗುಂಟಣಿ ಭೂವಳಯದೊಳೆಸೆವ ಕನ್ನೆಯುಜ್ಜಯಿನಿಯೊಳಂ ಅಂತಾಕೆ ಸಾಸಿರ ಗದ್ಯಾಣಕ್ಕಲ್ಲದೆ ಕತೆಯಂ ಪೇಳ್ವಳಲ್ಲ”)
ಸ್ರ್ತೀ ಯರು ರಾಜಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರೆಂಬುದಕ್ಕೆ ಪಂಪನ ಭಾರತದಲ್ಲಿ “ನುಡಿವೊಡೆ ರಾಜಕಾರ್ಯ ನಯವೆತ್ತ ಅಬಲಾಜನದೊಂದು ಬುದ್ದಿ ಎತ್ತ” ಎಂದು ಹೇಳಿಯೂದ್ರೌಪದಿಯು ಕೃಷ್ಣ,ಪಾಂಡವರೊಂದಿಗೆ ರಾಜಕೀಯ ವಿಚಾರಗಳನ್ನು ಚರ್ಚಿಸುವ ಪ್ರಸಂಗವಿದೆ.

ಕನ್ನಡ ಕಾವ್ಯ ಪರಂಪರೆ ಹೆಣ್ಣಿನ ಬಗೆಗೆ ಹೊಂದಿರುವ ನಿಲುವು ಎಂಥಹದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಹರಿಹರನ ಗಿರಜಾ ಕಲ್ಯಾಣ.ಸಂಸ್ಕೃತದ ಕಾಳಿದಾಸನ ‘ ಕುಮಾರ ಸಂಭವದ ‘ ಪ್ರಭಾವದಲ್ಲಿ ರಚಿತವಾಗಿದ್ದರೂ ಕನ್ನಡದ ಹರಿಹರ ಅದರ ಶೀರ್ಷಿಕೆಯನ್ನು ” ಗಿರಿಜಾ ಕಲ್ಯಾಣ ” ಎಂದೇ ಕರೆದಿದ್ದಾನೆ.ತನ್ನ ಕಾವ್ಯನಾಯಕ ಶಿವನನ್ನು ” ಕಾವ್ಯನಾಥಂ ಗಿರಿಜಾನಾಥಂ” ಎಂದು ಹೇಳುವಲ್ಲಿ ಕೂಡ ” ಇಂಥವಳ ಗಂಡ” ಎಂದೇ ಪರಿಚಯಿಸುತ್ತಾನೆ. ಗಿರಿಜೆಯ ತಂದೆ ತಾಯಿಯರು “ದೇವಿ ಕುಡು ಸುತೆಯನೆಲೆ ಪದ್ಮಾವತಿ ನಿಜಕರದೊಳೆಸೆಯೆ ವಜ್ರಾಂಕುಶಮಂ” ಎಂದು ಹೆಣ್ಣು ಮಗುವಿಗಾಗಿ ಹಂಬಲಿಸುವ ಪ್ರಸಂಗವಿದೆ.ಹಾಗೆಯೇ ” ನಂಬಿಯಣ್ಣನ ರಗಳೆಯಲ್ಲಿ ಪ್ರೀತಿಯ ಉತ್ಕಟತೆಯನ್ನು ಹೇಳಿ ಹೆಣ್ಣಿನ ವ್ಯಕ್ತಿತ್ವದ ಹಿರಿಮೆಯನ್ನು ಸೂಚಿಸಿದ್ದಾನೆ.ಹಾಗೆಯೇ ಕಾಮಲತೆಯನ್ನು ಕಳೆದುಕೊಂಡ ಅಲ್ಲಮ ” ಬರೆದಂತೆ ಕಂಡರಸಿದಂತೆ ಕರುವಿಟ್ಟಂತೆ ಮರುಳಂತೆ ಮರೆದಿರ್ದಂತೆ ಮರವಟ್ಟಂತೆ” ಇದ್ದನೆಂದು ಹೇಳಿ ಅವನು ಆ ದುಃಖದಲ್ಲೇ ವೈರಾಗ್ಯವನ್ನು ಪಡೆದ ಎಂದು ಹೇಳುವಾಗಲೂ ಹೆಣ್ಣಿನ ಮೋಹ ಅಪಾಯಕಾರಿ ಅಲ್ಲ ನಿಲುವು ಕಾಣಿಸುತ್ತದೆ.

ಇನ್ನೂ ಮುಂದುವರೆದು” ದಾರಿದೀಪವಾಗಿ ಗುರುವಾಗಬಹುದೆಂಬಂತೆ
ಇನ್ನೆನಗೆ ನೀವೇ ಗುರುಸ್ಥಾನವೆಲೆ ತಾಯೇ
ಇನ್ನೆನ್ನ ಭವ ಬಂಧನನುಡುಗಿಸೆಲೆ ತಾಯೆ” ಎಂಬ ಮಾತುಗಳು ಗಂಡನಿಗೆ ಹೆಂಡತಿಯೇ ಗುರು ಎಂದು ಹೇಳಿ ಹರಿಹರ ಹೆಣ್ಣಿಗೆ ಗೌರವ ಸೂಚಿಸಿದ್ದಾನೆ. ಹಾಗೆಯೇ ಒಂದು ಹೆಣ್ಣಿಗೆ ಕನ್ನಡ ಕಾವ್ಯ ಪರಂಪರೆಯಲ್ಲಿ ನಾಯಕಿ ಸ್ಥಾನ ಕೊಟ್ಟ ಹೆಗ್ಗಳಿಕೆಯೂ ಹರಿಹರನದ್ದೆ(ಕೋಳೂರ ಕೊಡಗೂಸಿನ ರಗಳೆ )

ಹೆಣ್ಣು ಗಂಡಿಗೆ ದಕ್ಕುವ ವಿಚಾರದಲ್ಲಿ
ಒಲ್ಲದ ಕಾಡಿ ಖಂಡಿಸುವೊಡಂ ನಿಲಲಾರದೆ ಸಲ್ಲತಾಂಗಿಯರ್
ಮೆಲ್ಲನೆ ಪೊರ್ದಿ ಕಾಲ್ವಿಡಿದು ಬೇಡುವುದುಂ ದೆಸೆಯೆಲ್ಲಮಂಜಿ ತಳ್ವಿಲ್ಲದೆ ಬಂದು ನಿಂದು ಬೆಸಕೆಯುವದುಮಬ್ದಿಯೊಳಿರ್ದರತ್ನಮುಂ ನಿಲ್ಲದೆ ಬಂದು ಪೊರ್ದುವುದು ಸಂಚಿತ ಪುಣ್ಯ ಫಲಂಗಳಲ್ಲವೇ” ಎಂಬ ನಯಸೇನನ ಮಾತುಗಳಲ್ಲಿ ಹೆಣ್ಣು ಭಾಗ್ಯದ ಪ್ರತೀಕವಾಗಿದ್ದಾಳೆ.

ತಾಯಿಯ ವಿಚಾರದಲ್ಲಿ ಅರ್ಜುನ ಹೇಳುವ ” ಧರ್ಮಶಾಸ್ತ್ರ ದೊಳೆಲ್ಲ ತಾಯಿಂದಧಿಕ ಗುರುವಿಲ್ಲೆಂದನಾ ಪಾರ್ಥ’ ಎಂಬ ಮಾತಿನಲ್ಲಿ ತಾಯಿಗೆ ಒಳ್ಳೆಯ ಸ್ಥಾನ ನೀಡಲಾಗಿದೆ.
ನಳಚಂಪು ಕಾವ್ಯದಲ್ಲಿ ದಮಯಂತಿಯ ಪಾತ್ರದ ಬಗೆಗೆ ಹೇಳುವ ” ದಮಯಂತಿ ಕಾಂತೆಯಿರ್ಬರ್ ಕುಮಾರರಂ ಕುಂಡಿನಕ್ಕೆ ಕಳುಪಿದಳವರಂ ರಮಣನ ಜೂಜಿನ ಭಯದಿಂ ರಮಣಿಯೊಳೆ ಬುದ್ಧಿ ನಾಲ್ಕುಮಡಿಯಪ್ಪುದರಿಂ’ ಎನ್ನುವಲ್ಲಿ ಗಂಡಸಿಗಿಂಥ ಹೆಂಗಸಿಗೆ ಬುದ್ಧಿ ಹೆಚ್ಚು ಎಂದಿದೆ.

ದಶಕುಮಾರಚರಿತೆಯಲ್ಲಿ
“ನೆಲೆದಪ್ಪಿದೆಡೆಗೆ ಮತಿ ಸಂಚಲಿಸಿರ್ದೆಡೆಗೆ ಅನ್ಯದೇಶಮಾದೆಡೆಗೆ ಖಳರ್ ಮುಳಿದೆಡೆಗೆ ಬುದ್ಧಿವೇಳಲ್ ಕುಲವಧುವೇ ಕಾರಣಂ ಪರೀಕ್ಷೆಯಿದಲ್ತೆ ” ಎಂದು ಕಷ್ಟದ ಸಮಯದಲ್ಲಿ ಗಂಡನಿಗೆ ಹೆಂಡತಿಯೆ ಬುದ್ಧಿವಾದವನ್ನು ಸಮರ್ಥವಾಗಿ ಮಾಡಬಲ್ಲಳು ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂಬ ಮಹತ್ವದ ಅಂಶ ತಿಳಿಯುತ್ತದೆ.

ಪಂಪನ ವಿಕ್ರಮಾರ್ಜುನ ವಿಜಯದ ನಾಲ್ಕನೇ ಆಶ್ವಾಸದಲ್ಲಿ ಸುಭದ್ರೆಯ ವಿರಹಕ್ಕೆ ಒಳಗಾದ ಅರ್ಜುನನು ವಿದೂಷಕರೊಡಗೂಡಿ ಸೂಳೆಗೇರಿಗೆ ಬರುತ್ತಾನೆ.ಅಲ್ಲಿ ಒಂದು ದೃಶ್ಯವಿದೆ ಅದು ಹೀಗಿದೆ.
ಆ ಸೂಳೆಗೇರಿಯಲ್ಲಿ ಸೂಳೆಗೇರಿಯ ಯಜಮಾನತಿ ಅಡಿಯಲ್ಲಿ ಕೆಲಸ ಮಾಡುವ ವೇಶ್ಯೆಯೊಬ್ಬಳು ಯಜಮಾನತಿಯ ಬಲಾತ್ಕಾರಕ್ಕೆ ಕಟ್ಟುಬಿದ್ದು ಹೆಚ್ಚಿನ ಹಣವನ್ನು ನೀಡುವ ಮುದುಕನನ್ನು ಬಿಡಲು ಹೆದರಿ ತನ್ನ ಮನದ ಬೇಸರವನ್ನು ಗೆಳತಿಯರಿಗೆ ಹೀಗೆ ಹೇಳುತ್ತಾಳೆ.

ಆ ಮುದುಕ ಗೊರಕೆ ಹೊಡೆದರೆ ಬೆಟ್ಟಗಳೆ ಬಿರುಕು ಬಿಡುತ್ತವೆ,ಬಾಯಿಂದ ಸುರಿಯುವ ಜೊಲ್ಲು ಪ್ರವಾಹವಾಗಿ ಹರಿಯುತ್ತದೆ, ಜೋರಾಗಿ ಕೆಮ್ಮಿದರೆ ತೋಳಿನಲ್ಲಿಯೇ ಅವನ ಜೀವ ಹೋಗುತ್ತದೆ ಎಂಬ ಭಯ ಉಂಟಾಗುತ್ತದೆ,ಇಂಥ ಮುದುಕನು ನನ್ನ ಕೂಡಲು ಬಂದು ಎಷ್ಟು ದುಡ್ಡು ಸುರಿದರೂ ಅವನ ಹಲ್ಲಿಲ್ಲದ ಬಾಯಿಯ ದುರ್ಗಂಧವನ್ನು ಯಾರು ತಾನೆ ಸಹಿಸುತ್ತಾರೆ” ಎನ್ನುವ ಮಾತಿನಲ್ಲಿ ಆ ಹೆಣ್ಣು ಒಬ್ಬ ವೇಶ್ಯೆಯಾಗಿದ್ದರೂ ಆಕೆಯೂ ಒಂದು ಹೆಣ್ಣು ಅಸ್ತಿತ್ವವಿದೆ,ಆಯ್ಕೆಯಿದೆ ಎಂಬುದನ್ನು ಪಂಪನಂಥ ಮಹಾಕವಿಗಳು ಗ್ರಹಿಸಬಲ್ಲರು.

ಇಂಥ ಅನೇಕ ಸ್ರ್ತೀ ಪ್ರತಿನಿಧಿಕರಣಗಳು ಹಳಗನ್ನಡ ಸಾಹಿತ್ಯದ ತುಂಬ ಗದಗ ಇವೆ.ಅವುಗಳನ್ನು ಚರ್ಚಿಸುವ ಒಂದು ವಸ್ತುನಿಷ್ಟ ಚರ್ಚೆಯಾದರೆ ಕನ್ನಡ ಸಾಹಿತ್ಯ ಪರಂಪರೆಯ ಅರಿವು ವಿಸ್ತಾರಗೊಳ್ಳುತ್ತದೆ.

‍ಲೇಖಕರು avadhi

2 July, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading