ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಆರ್ ಕಮಲ ಕಂಡ ಬ್ರೆಕ್ಟ್ ಕವಿಯ ಮನೆ..

ಕವಿ, ನಾಟಕಕಾರ, ನಿರ್ದೇಶಕ ಬ್ರೆಕ್ಟ್ನ ಹೆಸರು ಸಾಹಿತ್ಯದ ವಿದ್ಯಾರ್ಥಿಗಳಿಗೆ ಚಿರಪರಿಚಿತ. ಬ್ರೆಕ್ಟ್ ನ ‘ಕಕೇಶಿಯನ್ ಚಾಕ್ ಸರ್ಕಲ್’ ನಾಟಕ ನನಗೆ ಎಂ.ಎ. ನಲ್ಲಿ ಪಠ್ಯವಾಗಿತ್ತು. ಡಿಗ್ರಿಯಲ್ಲಿ ಲೈಫ್ ಆಫ್ ಗೆಲಿಲಿಯೊ. ಕನ್ನಡ ಸಾಹಿತ್ಯದ ಮೇಲೆ ಆತ ಬೀರಿದ ಪ್ರಭಾವ ಅಪಾರ. ಬ್ರೆಕ್ಟ್ ತನ್ನ ದೇಶ ವಿನಾಶದ ಕಡೆಗೆ ಸಾಗುತ್ತಿದ್ದಾಗ ಜರ್ಮನಿಯನ್ನು 1933 ರಲ್ಲಿ ತೊರೆದ. ಮೊದಲು ಸ್ಕ್ಯಾಂಡಿನೇವಿಯಾಗೆ ಹೋದವನು ನಂತರದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ.

ಬ್ರೆಕ್ಟ್ ಬಗ್ಗೆ ಇಲ್ಲಿ ಬರೆಯುವಷ್ಟು ಸಮಯ ನನಗಿಲ್ಲ, ಇಂದಿನಿಂದ ಪೂರ್ವ ಯುರೋಪ್ ದೇಶಗಳಿಗೆ ಪ್ರವಾಸ ಹೋಗುತ್ತಿದ್ದೇನೆ. ಬ್ರೆಕ್ಟ್ ಹುಟ್ಟಿ, ಬೆಳೆದ ಮನೆಯನ್ನು ನೋಡಲೇಬೇಕೆಂಬ ಹಂಬಲದಿಂದ ಆಗ್ಸ್ ಬರ್ಗ್ ಗೆ ನಾನು, ಅಮ್ಮಿ, ಅಕ್ಕನ ಮಗಳು ಹೋಗಿದ್ದೆವು. ಒಂದು ಪುಟ್ಟ ಓಣಿಯಲ್ಲಿ ಮನೆಯಿದೆ. ಮನೆಯೆದುರೇ ಕಾಲುವೆಯಲ್ಲಿ ನದಿಯ ನೀರು ಸದಾ ಹರಿಯುತ್ತಿರುತ್ತದೆ. ಈ ಮೂರು ಅಂತಸ್ತಿನ ಮನೆಯಲ್ಲಿ ಬ್ರೆಕ್ಟ್ ಬಗ್ಗೆ ಸದಾ ಒಂದು ಚಿತ್ರ ಟಿವಿಯಲ್ಲಿ ಓಡುತ್ತಿರುತ್ತದೆ. ಅಲ್ಲಿ ಬ್ರೆಕ್ಟ್ ಪುಸ್ತಕಗಳನ್ನು ಪ್ರದರ್ಶಿಸಿದ್ದಾರೆ. ಬಾಲ್ಯದ ಚಿತ್ರಗಳು, ಆಲ್ಬಮ್, ಪಿಯಾನೋ, ಮಂಚ, ಕನ್ನಡಿ ಹೀಗೆ ಅನೇಕ ವಸ್ತುಗಳಿವೆ. ಇಲ್ಲಿ ಎಲ್ಲವೂ ಜರ್ಮನ್, ನಮಗೇನೂ ಅರ್ಥವಾಗುವುದಿಲ್ಲ. ತನ್ನ ಬಗ್ಗೆ ಅವನೇ ಬರೆದ ಕೆಲವು ಸಾಲುಗಳನ್ನು ನಿಮಗಿಲ್ಲಿ ಕೊಟ್ಟಿರುವೆ.

‘ನಾನು ಈ ಜಗತ್ತಿನ ಬೆಳಕನ್ನು ಕಂಡಿದ್ದು 1898ರಲ್ಲಿ. ನನ್ನ ಪೋಷಕರು ಬ್ಲ್ಯಾಕ್ ಫಾರೆಸ್ಟ್ ನಿಂದ ಬಂದವರು. ನನ್ನ ನಾಲ್ಕು ವರ್ಷಗಳ ಪ್ರಾಥಮಿಕ ಶಿಕ್ಷಣ ಬೇಸರ ತರಿಸಿತು. ಒಂಬತ್ತು ವರ್ಷಗಳ ಕಾಲ ಆಗ್ಸ್ ಬರ್ಗ್ ನ ರೀಲ್ ಗಿಮ್ನ್ಯಾಶಿಯಂ ನ ಶಾಲೆಗೆ ನಾನು ಕೊಟ್ಟ ಕೊಡುಗೆ ಸೊನ್ನೆ. ಶಿಕ್ಷಕರು ನನ್ನ ಸ್ವತಂತ್ರ ಮನೋಭಾವದ ಬಗ್ಗೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ವಿಶ್ವವಿದ್ಯಾಲಯದಲ್ಲಿ ನಾನು ವೈದ್ಯಕೀಯ ಓದಿದೆ. ಗಿಟಾರ್ ಬಾರಿಸುವುದನ್ನು ಕಲಿತೆ. ಮೊದಲ ಮಹಾಯುದ್ಧದಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಸೇವೆ ಮಾಡಿದೆ. ಕೆಲವು ನಾಟಕಗಳನ್ನು ಬರೆದೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ನಾನು ಚಾರಿಟಿ ಆಸ್ಪತ್ರೆಗೆ ಸೇರಿದೆ. ಇಪ್ಪತ್ನಾಲ್ಕನೆಯ ವಯಸ್ಸಿಗೆ ಸಣ್ಣಗೆ ನಾಯಿಕೋಲಿನಂತಿದ್ದೆ..’

ಇದು ಅಲ್ಲಿದ್ದ ಬರಹದ ಒಂದು ಅನುವಾದ. ಅಲ್ಲೊಂದು ಜರ್ಮನ್ ಭಾಷೆಯಲ್ಲಿದ್ದ ಕವಿತೆಯನ್ನು ಗೂಗಲ್ ಅನುವಾದಕನ ಮೂಲಕ ಕನ್ನಡಕ್ಕೆ ತರಲು ಪ್ರಯತ್ನಿಸಿದ್ದೇನೆ. ಅದನ್ನಿಲ್ಲಿ ಹಾಕುತ್ತಿಲ್ಲ.

ಬ್ರೆಕ್ಟ್ ನ ಪ್ರಸಿದ್ಧ ಮಾತು

‘In the dark times/Will there be singing?/There will be singing/Of the dark times’.

‍ಲೇಖಕರು Admin

5 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading