
ಎಂ ಆರ್ ಕಮಲ
ಕನ್ನಡ ಸುಗಮ ಸಂಗೀತದ ಹಿರಿಯ ಕಲಾವಿದೆ, ಮೇರು ಗಾಯಕಿ ಶ್ರೀಮತಿ ಎಚ್ ಆರ್ ಲೀಲಾವತಿಯವರನ್ನು ನೋಡುವುದೇ ಸೌಭಾಗ್ಯವೆಂದು ಚಿಕ್ಕಂದಿನಲ್ಲಿ ತಿಳಿದಿದ್ದೆ. ಆಗ ಅದು ಕೈಗೂಡಲಿಲ್ಲ. ಆಕಾಶವಾಣಿಯಲ್ಲಿ ಅವರ ಹಾಡುಗಳನ್ನು ಕೇಳುತ್ತ ಬೆಳೆದ ನನಗೆ ಸಾಹಿತ್ಯದ ರುಚಿಯನ್ನು ನಿಜವಾಗಿ ಹತ್ತಿಸಿದವರೇ ಲೀಲಾವತಿಯವರು. ಗ್ರಂಥಾಲಯವಿರದ ಹಳ್ಳಿಯಲ್ಲಿ ಬೆಳೆದವಳಿಗೆ ಕುವೆಂಪು, ಬೇಂದ್ರೆ, ಕೆ ಎಸ್ ನ, ಜಿ ಎಸ್ ಎಸ್, ಅಡಿಗ ಮುಂತಾದ ಕವಿಗಳನ್ನು ಹಾಡುಗಳ ಮೂಲಕ ಪರಿಚಯಿಸಿದ್ದು ಅವರೇ!
ಮುಂದೊಮ್ಮೆ ನಾನು ಕವಿತೆಗಳನ್ನು ಬರೆದು, ಲೀಲಾವತಿಯವರು ಆ ಕವಿತೆಗಳಲ್ಲೊಂದಕ್ಕೆ ರಾಗ ಸಂಯೋಜನೆ ಮಾಡಬಹುದೆಂಬ ಕಲ್ಪನೆಯೂ ಇರಲಿಲ್ಲ. ಆದರೆ ಅವರ ಆತ್ಮಕಥೆ `ಹಾಡಾಗಿ ಹರಿದಾಳೆ’ ಬಿಡುಗಡೆಯ ಸಂದರ್ಭದಲ್ಲಿ ನನ್ನ ಕವಿತೆಯೊಂದಕ್ಕೆ ರಾಗ ಸಂಯೋಜನೆ ಮಾಡಿ, ಹಾಡಿಸಿದ್ದು ಜೀವನದಲ್ಲಿ ಮರೆಯಲಾಗದ ವಿಶೇಷಗಳಲ್ಲಿ ಒಂದು. ಇಂದಿಗೂ ನಾನು ಲೀಲಾವತಿಯವರ ಗಾಯನದ ಬಹು ದೊಡ್ಡ ಅಭಿಮಾನಿಯಾಗಿಯೇ ಉಳಿದಿದ್ದೇನೆ ಎನ್ನುವುದು ಸಂತಸದ ವಿಷಯ.
ಅವರ ಬದುಕು, ಸಾಧನೆಯ ಬಗ್ಗೆ ಅಪಾರ ಕುತೂಹಲವಿದ್ದ ನಾನು ಅವರೇ ಪ್ರೀತಿಯಿಂದ ಕೊಟ್ಟ ಹಾಡಾಗಿ ಹರಿದಾಳೆ' ಆತ್ಮಕತೆಯನ್ನು ಓದಲಾರಂಭಿಸಿದೆ. ಓದುತ್ತಿರುವಾಗ ನೆನಪಿಗೆ ಬಂದದ್ದು ಪುತಿನ ಅವರಹೊನಲ ಹಾಡು’ ಕವಿತೆ. ನಿಂತಲ್ಲೇ ನಿಂತಿರುವ ಬೆಟ್ಟಗಳ, ಕಾಡಿನ ಮರಗಳ, ಸೃಷ್ಟಿಯ ಹೊರೆಯನ್ನೇ ಹೊತ್ತ ಭೂಮಿಯ ಒಳಗಿನೊಳಗಿನ ಆಸೆಯಾಗಿ ಹೊನಲ ಹಾಡು ಹರಿಯುತ್ತದೆ. ಆ ಕವಿತೆಯ ಬಗ್ಗೆ ನಾನು ಬರೆದ ಸಾಲುಗಳೇ ಲೀಲಾವತಿಯವರ ಬದುಕನ್ನು ರೂಪಕಾತ್ಮಕವಾಗಿ ಕಟ್ಟಿ ಕೊಡುತ್ತದೆ ಎನ್ನಿಸಿತು. ಹಾಗಾಗಿ ಅದನ್ನು ನೆನೆದರೆ ತಪ್ಪಿಲ್ಲ. ಅಚ್ಚರಿಯೆಂದರೆ `ಹಾಡಾಗಿ ಹರಿದಾಳೆ’ ಎನ್ನುವ ಪುಸ್ತಕದ ಹೆಸರು ಕೂಡ ಅದನ್ನೇ ಸೂಚಿಸುತ್ತಿರುವುದು.

ಸದಾ ಚಲನಶೀಲವಾಗಿರುತ್ತ, ಜೀವ ಧಾರೆಯನ್ನು ಇತರರಿಗೂ ಎರೆಯುತ್ತ ಜೀವದಾಯಿನಿಯಾಗಿ ಬದುಕುವುದು ಯಾರಿಗೆ ಬೇಡ? ಮುಂದೆ ಬರುವುದು ಏನೆಂದೇ ತಿಳಿಯದೆ ಬೆಟ್ಟ ಬಂದಾಗ ಮುದ್ದು ಮಾಡಿ, ಕೊಂಬೆ ಅಡ್ಡವಾದಾಗ ಮೇಲೆ ಹಾರಿ, ಬಂಡೆಗೆ ಅಪ್ಪಳಿಸದಂತೆ ಜಾರಿ, ಸುತ್ತಲಿರುವ ಜೀವಜಂತುಗಳ ಎದೆಯಲ್ಲಿ ಮಂದಹಾಸ ಮೂಡಿಸುತ್ತ, ತನ್ನ ಗುರಿಯೊಂದನ್ನೇ ಲಕ್ಷಿಸುತ್ತ, ಬೀಳುವ ಏಳುವ ಕರ್ಮವನ್ನೇ ಖುಷಿಯೆಂದು ಭಾವಿಸುತ್ತ, ಹೊರ ಜಗತ್ತಿಗೆ ತನ್ನೊಳಗಿನ ಬಿಳಿನಗೆಯನ್ನು ಮಾತ್ರ ಸಾರುತ್ತ ಸಾಗುವ ಹೊನಲ ರಾಣಿ!' ಆತ್ಮಕತೆಯನ್ನು ಓದಿ ಮುಗಿಸಿದಾಗ ನನ್ನೊಳಗೆ ಲೀಲಾವತಿ ಎಂಬ ಹೊನಲ ರಾಣಿ’ ಹಾಡಾಗಿ ಹರಿದಿದ್ದು ಹೀಗೆ.
ಲೀಲಾವತಿಯವರಿಗೆ ತಮ್ಮ ಚಲನಶೀಲತೆಯಿಂದಲೇ ಬದುಕಿನ ಸಂಕಟ, ಸಂಕಷ್ಟಗಳನ್ನು ದಾಟುವ ಎದೆಗಾರಿಕೆ ಅತ್ಯಂತ ಸಹಜವಾಗಿ ಬಂದಿದೆ. ಜೊತೆಗೆ ಕುಟುಂಬದ ಪ್ರೀತಿ ನೆರವಾಗಿದೆ. ನಿಂತ ನೀರು ಕೊಳೆಯುತ್ತದೆ ಎಂಬ ತಿಳಿವಳಿಕೆ, ವಿವೇಕವಿರುವ ಕಾರಣಕ್ಕೆ ಅವರು ಬದುಕು ಒಡ್ಡುವ ಸವಾಲುಗಳಿಂದ ಕುಂದುವುದೇ ಇಲ್ಲ. ಅವರ ಗಮನವೆಲ್ಲ ಹಾಡಿನತ್ತ ಮಾತ್ರ ಇತ್ತು. ನದಿಯೊಂದಕ್ಕೆ ಕಡಲ ಸೇರುವ ಗುರಿಯಿದ್ದಾಗ ಅಡ್ಡಗಟ್ಟುವ ಬೆಟ್ಟ, ಗುಡ್ಡ, ಕಾಡು, ಮರ ಇತ್ಯಾದಿಗಳನ್ನು ತನಗೇ ಅರಿವಿಲ್ಲದಂತೆ ಪ್ರೀತಿಯಿಂದಲೇ ಅಪಾಯಗಳನ್ನು ದಾಟಿ ಮುನ್ನಡೆದುಬಿಡುತ್ತದೆ. ಅದೇನೂ ಹೂವು ಚೆಲ್ಲಿದ ಹಾದಿಯಲ್ಲ. ಆದರೆ ನದಿ ಮಾತ್ರ ತನ್ನ ಮುಖದಲ್ಲಿ ಅಸಮಾಧಾನ, ಅಸಂತೋಷಗಳನ್ನು ಹೊರ ಹಾಕುವುದೇ ಇಲ್ಲ. ಒಳಗೊಂದು ನೋವಿದೆ ಎಂಬ ಅರಿವು ಯಾರಿಗೂ ಆಗುವುದಿಲ್ಲ. ಅಂತಹ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಲೀಲಾವತಿಯವರದ್ದು. ಈ ಆತ್ಮಕತೆ ಹೆಣ್ಣುಮಕ್ಕಳಿಗೊಂದು ದಾರಿ ದೀಪ, ಸ್ಫೂರ್ತಿಯ ಸೆಲೆ ಎಂದರೆ ತಪ್ಪಲ್ಲ.
ಶ್ರೀಮತಿ ಎಚ್ ಆರ್ ಲೀಲಾವತಿಯವರನ್ನು ಅದ್ಭುತ ಹಾಡುಗಾರ್ತಿ'ಯಾಗಿ ಮಾತ್ರ ಕಲ್ಪಿಸಿಕೊಂಡಿದ್ದ ನಾನು ಆತ್ಮಕತೆಯನ್ನು ಓದುವಾಗ ಕೊಂಚ ವಿಚಲಿತವಾಗಿದ್ದು ಸುಳ್ಳಲ್ಲ. ಆದರೆ ಈಹೊನಲ ರಾಣಿ’ ನನಗೆ ಹೇಳಿಕೊಟ್ಟ ಪಾಠಗಳು ಮಾತ್ರ ಅತ್ಯಂತ ವಿಶೇಷವಾದವು. ಬದುಕಿನುದ್ದಕ್ಕೂ ಎದುರಾದ ಅಡೆತಡೆಗಳಿಗೆ ಲೀಲಾವತಿಯವರು ಕೊರಗುತ್ತ ಕೂರುವುದೇ ಇಲ್ಲ. ಇತರರು ಕೊಡುವ ನೋವು, ಪ್ರೀತಿಗಳನ್ನು ಸಮಾನವಾಗಿ ಕಾಣುವುದೇ ಇವರ ವ್ಯಕ್ತಿತ್ವದ ವಿಶೇಷತೆ. ಗುರಿಯ ಕಡೆ ಪಯಣ ಸಾಗುತ್ತಿರುವಾಗ ಎದುರಾಗುವ ವಿಷಯಗಳು ಎಷ್ಟು ಘೋರವಾಗಿದ್ದರೂ ಸುಲಭವಾಗಿ ತಳ್ಳಿ ಹಾಕಿ ಅವರು ಮುಂದುವರಿಯುವುದಂತೂ ಬೆರಗಿನ ವಿಷಯವೇ ಸರಿ. ಅ
ದು ಹೇಗೆ ಯಾವ ಕಹಿಯನ್ನು ಎದೆಯಲ್ಲಿ ಉಳಿಸಿಕೊಳ್ಳದ ಹಾಗೆ ಎಚ್ಚರ ವಹಿಸಿದ್ದಾರೋ? ಅಥವಾ ಅದು ಅವರ ಸಹಜ ಸ್ವಭಾವವೋ! ಒಟ್ಟಿನಲ್ಲಿ ಹೆಣ್ಣುಮಕ್ಕಳ ಸಾಧನೆಯ ದಾರಿಗೆ, ಬದುಕಿಗೊಂದು ಮಾದರಿಯನ್ನು ಕಟ್ಟಿಕೊಟ್ಟಿದ್ದಾರೆ. ಲೀಲಾವತಿಯವರ ಒಳಗೆ ಸದಾ ವಿವೇಕದ ಬಂಡಾಯಗಾರ್ತಿ' ಮಾತ್ರ ಹಾಡಾಗಿ ಹರಿಯುತ್ತಲೇ ಇದ್ದಾಳೆ. (ಅವರ ಉತ್ಸಾಹ ಇದುವರೆಗೂ ಎಳ್ಳಷ್ಟೂ ಕಡಿಮೆಯಾಗಿಲ್ಲ.ಇವತ್ತಿಗೂ ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ಳುತ್ತೇನೆ. ಹುಳಿಗೆ ಪುಡಿಯನ್ನು ಹಾಕುವುದಿಲ್ಲ. ಆಗ ಹುರಿದೇ ಮಾಡುವುದು’ ಎಂದು ನನ್ನ ಜೊತೆಯಾಡಿದ ಮಾತೊಂದು ನನ್ನನ್ನು ಸೋಮಾರಿಯಾಗದಂತೆ ಉಳಿಸಿದೆ)
ನಮ್ಮ ಬದುಕಿನ ಬಗ್ಗೆ ಬರೆಯುವಾಗ ಅದೊಂದು ತೆರೆದ ಪುಸ್ತಕದಂತಿರಬೇಕು. ನಡೆದ ಘಟನೆಗಳನ್ನೆಲ್ಲ ಮನ ಬಿಚ್ಚಿ ಬರೆಯದೆ, ಸಕ್ಕರೆಯ ಲೇಪನದಿಂದ ಸಂಗತಿಗಳನ್ನು ಮುಚ್ಚಿಟ್ಟು ಲೋಕದ ತೃಪ್ತಿಗಾಗಿ ಬರೆದಾಗ, ಸತ್ಯಕ್ಕೆ ಮಸಿ ಬಳಿದಂತೆ. ಆ ಸಂಪತ್ತಿಗೆ ಬರೆಯಬೇಕಾದರೂ ಏತಕ್ಕೆ? ಅದು ಜೀವನದ ಸತ್ಯ ಕತೆ ಆಗಲಾರದು. ನನಗೆ ನಾನೇ ದ್ರೋಹ ಮಾಡಿಕೊಂಡಂತೆ. ಒಪ್ಪೇ-ತಪ್ಪೇ ಬರವಣಿಗೆ ನೇರವಾಗಿರಬೇಕು, ಸತ್ಯಸಂಧವಾಗಿರಬೇಕು ಎಂಬುದನ್ನು ಮಾತ್ರ ನಂಬಿದವಳು ನಾನು' ಎಂಬ ಲೀಲಾವತಿಯವರ ಮಾತುಗಳಂತೆ ಅವರ ಆತ್ಮಕತೆಯಿದೆ. ಇಲ್ಲಿ ಕಪಟವಿಲ್ಲ, ಸೋಗಿಲ್ಲ, ಮುಖವಾಡಗಳಿಲ್ಲ. ಶೋಷಿಸಿದವರ ಬಗ್ಗೆ ಬರೆಯುವಾಗಲೂ ತಮ್ಮೊಳಗಿನಸ್ವಾರ್ಥ’ ಕೂಡ ಇದಕ್ಕೆ ಕಾರಣವಾಗಿರಬಹುದೇ ಎಂಬ ಆತ್ಮಾವಲೋಕನವಿದೆ.
ಇಲ್ಲೊಂದು ವಿಶಾಲವಾದ ಬದುಕಿದೆ. ಬೆಳೆದು ಬಂದ ವಾತಾವರಣದಿಂದ, ಸಹಜ ಸ್ವಭಾವದಿಂದ, ಅಗಣಿತ ಜನರ ಭೇಟಿಗೆ ಹಾಡು, ಉದ್ಯೋಗ ಒದಗಿಸಿದ ಅವಕಾಶದಿಂದ ಜಾತಿ, ಮತದ ಎಲ್ಲ ಸಂಕುಚಿತತೆಗಳನ್ನು ಮೀರಿರುವ ಮುಕ್ತ ಮನಸ್ಸಿನ ವಿಚಾರಗಳಿವೆ. ಅನುಭವಗಳ ಮೂಲಕವೇ ಕಟ್ಟಿಕೊಂಡ ಜೀವನ ತತ್ವವಿದೆ. ಶಿಷ್ಯೆಯಾಗಿ ನೋವುಂಡ ಲೀಲಾವತಿಯವರು ಗುರುಗಳಾದಾಗ ಶಿಷ್ಯ ವತ್ಸಲೆಯಾಗುವ ಪ್ರಕ್ರಿಯೆಯೇ ಅವರ ಅಸಾಧಾರಣ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ನೆನಪಿನ ಗಂಟು ಮೂಟೆಯಲ್ಲಿ ಸಿಹಿ-ಕಹಿಗಳೆರಡೂ ತುಂಬಿದ್ದರೂ ಪುಸ್ತಕ ಓದಿ ಮುಗಿಸಿದ ಮೇಲೆ ಸಾಧನೆಯ ಸಿಹಿಯೇ ಹೆಚ್ಚು ಮನಸ್ಸಿನಲ್ಲಿ ಉಳಿಯುತ್ತದೆ.

ಒಟ್ಟಿನಲ್ಲಿ ಲೀಲಾವತಿ ಮೇಡಂ ತಾವು ಇದುವರೆಗೂ ಹೊತ್ತಿದ್ದ ಹೊರೆಯನ್ನು ಇಳಿಸಿ ಹಗುರಾಗಿದ್ದಾರೆ. ಈ ಅನುಭವಗಳು ಕಲಾವಿದರಾಗಲು ಬಯಸುವ ಎಲ್ಲ ಹೆಣ್ಣುಮಕ್ಕಳಿಗೆ ಜೀವನ ಪಾಠವಾಗುವುದರಲ್ಲಿ ಸಂದೇಹವಿಲ್ಲ. ಶ್ರದ್ಧೆ, ನಿಷ್ಠೆಗಳು ಮಾತ್ರ ಕಲಾವಿದೆಯೊಬ್ಬಳನ್ನು ಎತ್ತರಕ್ಕೆ ಒಯ್ಯಬಲ್ಲುದು ಎಂಬುದೇ ಅವರ ಬದುಕು ನೀಡುವ ಸಂದೇಶ. ಅವರ ಮಾತುಗಳು ಎಲ್ಲಿಯೂ ಉಪದೇಶದಂತೆ ಕಾಣುವುದಿಲ್ಲ.
ಬದುಕಿನ ಮೇಲೆ ಯಾವ ಆರೋಪವನ್ನು ಅನಗತ್ಯವಾಗಿ ಮಾಡದೆ ಸ್ವವಿಮರ್ಶೆಯಲ್ಲಿ ತೊಡಗಿಕೊಳ್ಳುವುದೇ ಹೆಚ್ಚು. ಬರವಣಿಗೆ ಕೂಡ ಲಹರಿಯಂತೆ ಅಡೆತಡೆಯಿಲ್ಲದೆ ಹರಿದಿದೆ. ಲೀಲಾವತಿಯವರ ನೆನಪಿನ ಶಕ್ತಿಯಂತೂ ಬೆರಗು ಹುಟ್ಟಿಸುತ್ತದೆ. ಒಬ್ಬ ಹಾಡುಗಾರ್ತಿ ಸಮರ್ಥ ಸಾಹಿತಿಯೂ ಆಗಿರುವುದರ ನಿದರ್ಶನವೆನ್ನುವಂತೆ ಬರವಣಿಗೆಯಿದೆ. ಒಂದು ಕಾಲಘಟ್ಟದ ಸಂಸ್ಕೃತಿ, ಬದುಕಿನ ಚಿತ್ರಣವನ್ನಂತೂ ಈ ಪುಸ್ತಕ ಅಪೂರ್ವವಾಗಿ ಚಿತ್ರಿಸುತ್ತದೆ. ಈ ಪುಸ್ತಕವನ್ನು ಓದಿದ ಮೇಲೆ ನನ್ನೊಳಗೊಂದು ಧನ್ಯತಾ ಭಾವ ಮೂಡಿದ್ದು ಉತ್ಪ್ರೇಕ್ಷೆಯಲ್ಲ.






0 Comments