ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಸ್ಮಾನ್ ಚಿಮ್ಮಲಗಿ ಓದಿದ ‘ಅಯ್ದು ರೂಪಾಯಿ..’

ಉಸ್ಮಾನ್ ಚಿಮ್ಮಲಗಿ

ವೈದ್ಯರೂ ಕವಿಗಳೂ ಈಗ ಕತೆಗಾರರೂ ಆಗಿರುವ ಡಾ. ಪ್ರಕಾಶ ಡಂಗಿಯವರು ಬರೆದಿರುವ ‘ಅಯ್ದು ರೂಪಾಯಿ ಮತ್ತು ಇತರ ಕತೆಗಳು’ ಮೊದಲ ಕಥಾ ಸಂಕಲನವು ಒಟ್ಟು ಹನ್ನೊಂದು ಕತೆಗಳನ್ನು ಒಳಗೊಂಡಿದೆ. ಈ ಕಥಾ ಸಂಕಲನಕ್ಕೆ ಕಥೆಗಾರರಾದ ಇಂದ್ರಕುಮಾರ ಎಚ್.ಬಿ.ಯವರು ಒಳ್ಳೆಯ ಮುನ್ನುಡಿಯನ್ನು ಬರೆದಿದ್ದಾರೆ. ಹಾಗೆಯೆ ಪ್ರಮೋದ ಸಾಗರ ರವರ ಒಳ್ಳೆಯ ಮುಖಪುಟ ವಿನ್ಯಾಸ ಕೂಡ ಇದೆ.
ಈ ಸಂಕಲನದಲ್ಲಿ ಬರುವ ಎಲ್ಲಾ ಹನ್ನೊಂದು ಕತೆಗಳು ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ಹೊಂದಿವೆ. ಅಲ್ಲದೆ ಈ ಎಲ್ಲಾ ಕಥೆಗಳು ಕತೆಗಾರರ ಪ್ರಾದೇಶಿಕ ಭಾಷೆಯಲ್ಲಿ ವ್ಯಕ್ತವಾಗಿರುವುದರಿಂದ ಓದುಗರ ವಿಶೇಷ ಗಮನ ಸೆಳೆಯುತ್ತವೆ.

ಕತೆಗಾರರು ತಾವು ಕೇಳಿದ್ದ ನೋಡಿದ್ದ ಬಗೆಹರಿಸಿದ್ದ ಹಾಗೂ ತಮ್ಮ ಅನುಭವಕ್ಕೆ ಬಂದ ಸಂಗತಿಗಳನ್ನು ಇಲ್ಲಿ ಕತೆಗಳನ್ನಾಗಿ ಹಿಡಿದು ಕೊಟ್ಟಿದ್ದಾರೆ. ಈ ಸಂಕಲನವು ಒಳ್ಳೆಯ ವಿಷಯ ವಸ್ತುಗಳನ್ನು ಒಳಗೊಂಡಿದೆ. ಕತೆಗಾರನಿಗೆ ಹೆಣ್ಣುಮಕ್ಕಳ, ವಿಶೇಷ ಅಗತ್ಯವುಳ್ಳ ಮಕ್ಕಳˌ  ಮುಗ್ಧ ಮಕ್ಕಳ ಹಾಗೂ ವಯಸ್ಸಾದವರ ಬಗ್ಗೆ ಇರುವ ಕಾಳಜಿ ಇಲ್ಲಿಯ ಎಲ್ಲಾ ಕತೆಗಳಲ್ಲಿ ವ್ಯಕ್ತವಾಗಿದೆ. ಹಾಗೂ ಸ್ವಲ್ಪಮಟ್ಟಿಗೆ ಅನಿರೀಕ್ಷಿತ ತಿರುವುಗಳು ಕೆಲವು ಕತೆಗಳಲ್ಲಿ ಕಂಡು ಬರುತ್ತವೆ. ಕತೆಗಳಲ್ಲಿ ಉತ್ತರ ಕರ್ನಾಟಕದ ತಿಳಿ ಹಾಸ್ಯಗಳು ಹಾಸುಹೊಕ್ಕಾಗಿವೆ.

ಇವರ ಹನ್ನೊಂದು ಕತೆಗಳಲ್ಲಿ ನನಗೆ ತುಂಬಾನೆ ಕಾಡಿದ ಕತೆಗಳೆಂದರೆ ‘ಇದರಲ್ಲಿ ನಂದೇನು ತಪ್ಪು’, ‘ತಾಯಿ ಸತ್ತ ಮೇಲೆ’ ಹಾಗೂ ‘ಕೊನೆಗುಳಿದವಳು’. ‘ಇದರಲ್ಲಿ ನಂದೇನು ತಪ್ಪು’ ಕತೆಯಲ್ಲಿ ಭ್ರೂಣ ಹತ್ಯೆಗೀಡಾದ ಹೆಣ್ಣು ಮಗು ಸತ್ತ ತನ್ನ ತಂದೆಗೆ ಕೇಳುವ ಪ್ರಶ್ನೆಗಳು ಇಡೀ ಸಮಾಜವನ್ನು ಪ್ರಶ್ನಿಸುವಂತಿವೆ. ಅಲ್ಲದೆ ಓದುಗರನ್ನು ಕಾಡುತ್ತವೆ ಹಾಗೂ ಎಚ್ಚರಿಸುತ್ತವೆ. ಅದೇ ರೀತಿ ‘ತಾಯಿ ಸತ್ತ ಮೇಲೆ’ ಕತೆಯಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯಿದ್ದರೂ ಆತನಿಗೆ ಬೇಡವಾಗಿ ಅಜ್ಜಿ ಮನೆಯಲ್ಲಿ ಬೆಳೆಯುವ ತಂದೆ ತಾಯಿ ಪ್ರೀತಿ ವಂಚಿತ ಆಸೀಫ್ ತಾನು ಸಾಕಷ್ಟು ಕಷ್ಟಗಳನ್ನು ಅನಭವಿಸಿದ್ದಾಗಲೂ ಕೊನೆಯಲ್ಲಿ ತನ್ನ ಹೆಂಡತಿ ಸತ್ತಾಗ ಮತ್ತೊಂದು ಮದುವೆ ಮಾಡಿಕೊಂಡು ತನ್ನ ಮಗಳನ್ನು ಅಜ್ಜಿ ಮನೆಯಲ್ಲಿ ಬಿಡುತ್ತಾನೆ.

ಹಾಗಾದರೆ ಆತ ತನ್ನ ಬದುಕಿನಿಂದ ಕಲಿತದ್ದಾದರೂ ಏನು? ಎಂಬ ಪ್ರಶ್ನೆ ಓದುಗರನ್ನು ಕಾಡುತ್ತದೆ. ಹಾಗೆಯೆ ‘ಕೊನೆಗುಳಿದವಳು’ ಕತೆಯಲ್ಲಿ ತನ್ನದಲ್ಲದ ತಪ್ಪನ್ನು ಒಂದು ಹೆಣ್ಣಿನ ಮೇಲೆ ಹೊರಿಸಿ ಸಮಾಜದಲ್ಲಿ ಹೆಣ್ಣನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪುರುಷ ಸಮಾಜ ಕೊನೆಯಲ್ಲಿ ತಾನೆ ತಪ್ಪುಗಾರ ಎಂದು ತಿಳಿದಾಗ ಹೇಗೆ ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂಬುದನ್ನು ಈ ಕತೆ ಹೇಳುತ್ತದೆ.

ಇಲ್ಲಿನ ಕತೆಗಳನ್ನು ಇನ್ನೂ ಓದಬೇಕು ಅಂತ ಅನ್ನೀಸುತ್ತಿರುವಾಗಲೇ ಕತೆಗಳು ಮುಗಿದು ಹೋಗಿಬಿಡುತ್ತವೆ. ಇಲ್ಲಿ ಕತೆಗಾರರಿಗೆ ಕತೆ ಬರೆಯುವಾಗ ಇಷ್ಟು ಸಾಕು ಎಂದು ಬಲವಂತವಾಗಿ ನಿಲ್ಲಿಸಿರುವಂತೆ ಕಾಣಿಸುತ್ತವೆ. ಇಲ್ಲಿನ ಎಲ್ಲಾ ಕತೆಗಳನ್ನು ಕತೆಗಾರರೆ ನಿರೂಪಿಸುತ್ತ ಹೋಗುವುದರಿಂದ ಪಾತ್ರಗಳಿಗೆ ಜೀವವಿಲ್ಲದಂತೆಣಿಸುತ್ತವೆ. ಕತೆ ಬರೆಯುವ ವಿಭಿನ್ನ ವಿಧಾನಗಳ ಪ್ರಯೋಗವನ್ನು ಕತೆಗಾರ ಮುಂದಿನ ಕತೆಗಳಲ್ಲಿ ಮಾಡಬೇಕಾಗಿದೆ. ಮುಂದೆ ಇನ್ನೂ ಉತ್ತಮವಾದ ಕತೆಗಳನ್ನು ಕತೆಗಾರರು ನೀಡಲಿ ಎಂದು ನಾನು ಬಯಸುತ್ತೇನೆ.
ಓದುಗರಿಗೆ ಈ ಕಥಾ ಸಂಕಲನದ ಎಲ್ಲಾ ಕತೆಗಳು ಇಷ್ಟವಾಗುತ್ತವೆ. ಕೊಂಡು ಓದಲು ಯಾವುದೆ ಮೋಸವಿಲ್ಲ ಎಂದೆಣಿಸುತ್ತದೆ.

‍ಲೇಖಕರು Admin

13 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading