
ಉಮಾ ರಾಜಣ್ಣ
ಚಿತ್ರ ನಿರ್ಮಾಣದ ಹಿಂದಿರುವ ಕತೆಗಳನ್ನು ಕಟ್ಟಿಕೊಡುವ ಪ್ರಯತ್ನಗಳು ನಮ್ಮಲ್ಲಿ ಅತ್ಯಂತ ವಿರಳ. ಅದರಲ್ಲಿಯೂ ಕಲಾತ್ಮಕ ಸಿನಿಮಾಗಳ ಬಗೆಗಂತೂ ಇಲ್ಲವೇ ಇಲ್ಲವೆಂದರೂ ಸರಿಯೇ. ಹಾಲಿವುಡ್ ನಲ್ಲಿ ಈ ರೀತಿಯ ಪುಸ್ತಕಗಳ ಸುರಿಮಳೆಯನ್ನೇ ಕಾಣಬಲ್ಲೆವಾದರೂ ಅಲ್ಲಿಯೂ ಕಲಾತ್ಮಕ ಸಿನಿಮಾ ನಿರ್ಮಾಣದ ವಿವರಗಳು ಸಿಗುವುದು ಕಡಿಮೆ ಸಂಖ್ಯೆಯಲ್ಲಿಯೇ. ನಮ್ಮ ಬಾಲಿವುಡ್ ಕಥೆಯು ಕೂಡ ಅದಕ್ಕೆ ಹೊರತಾಗಿಲ್ಲ. ಬಹುಮುಖ ಪ್ರತಿಭೆ ಮತ್ತು ಸಾಮರ್ಥ್ಯದ ಪಿ ಚಂದ್ರಿಕಾ ಚಿತ್ರ ನಿರ್ಮಾಣದಲ್ಲಿನ ತಮ್ಮ ಅನುಭವವನ್ನು ಹಂಚಿಕೊಳ್ಳಲು ಯೋಚಿಸಿದ್ದು ಒಂದು ಪ್ರಶಂಸಾರ್ಹ ಹೆಜ್ಜೆಯಾಗಿದೆ. ಕೇವಲ ಚಿತ್ರ ನಿರ್ಮಾಣ ತಂಡದ ಮುಂದಿರಬಹುದಾದ ತೊಡಕುಗಳು, ಸಮಸ್ಯೆಗಳು, ಅಡಚಣೆಗಳು ಮತ್ತು ಅವುಗಳನ್ನು ನೀಗಿಕೊಂಡು ಮುಂದುವರೆದ ಚಿತ್ರನಿರ್ಮಾಣದ ಕಥನವಾಗಿಯಷ್ಟೇ ಅದು ಉಳಿಯದೇ ಮೂಲಕಥೆಯ ಚೌಕಟ್ಟು, ಲೇಖಕರ ಕೃತಿಯ ಹಿಂದಿನ ಉದ್ದೇಶ, ನಿರ್ಮಾಣಕ್ಕೆ ಆಯ್ದ ಪರಿಸರದಲ್ಲಿನ ಜನಜೀವನದ ಪರಿಚಯ, ಚಿತ್ರನಿರ್ಮಾಣದಲ್ಲಿ ಒಳಗೊಳ್ಳಬೇಕಾಗಿದ್ದ ಸಂಗತಿಗಳ ರಾಜಕೀಯ ಹಿನ್ನೆಲೆ, ಚಿತ್ರದ ಗುರಿ, ಇಂತಹ ಹಲವಾರು ಆಯಾಮಗಳನ್ನು ವಿವರಿಸುವ ಈ ಪುಸ್ತಕ ವಿಶಾಲವಾದೊಂದು ಅನುಭವ ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ.
ಬೋಳುವಾರು ಮಹಮದ್ ಅವರ ‘ಒಂದು ತುಂಡು ಗೋಡೆ’ ಪುಸ್ತಕವನ್ನು ಸಿನಿಮಾ ಮಾಡಲು ಆರಿಸಿಕೊಂಡ ಹಿನ್ನೆಲೆಯನ್ನು ಲೇಖಕಿ ಹೀಗೆ ವಿವರಿಸುವರು; “ಒಂದನೆಯದು ಭಾರತೀಯ ರಾಜಕೀಯ ಸನ್ನಿವೇಶದಲ್ಲಿ ಆಗುತ್ತಿದ್ದ ಬದಲಾವಣೆ. ಎರಡನೆಯದು ಸಾಂಸ್ಕೃತಿಕ ವಾತಾವರಣದಲ್ಲಾಗುತ್ತಿದ್ದ ತಲ್ಲಣ. ಒಂದು ಕಡೆ ರಾಮಜನ್ಮಭೂಮಿ ಮತ್ತೊಂದು ಕಡೆ ತ್ರಿವಳಿ ತಲಾಖ್ ಗೆ ಸಂಬಂಧಪಟ್ಟ ಸಂಗತಿಗಳು ದೇಶಾದ್ಯಂತ ಸದ್ದು ಮಾಡುತ್ತಿದ್ದವು. ನಮ್ಮ ಚರ್ಚೆ ವಾದಗಳ ನಡುವೆ ತುಂಬಾ ಸಮಕಾಲೀನವಾದ ಸಂಗತಿಗಳನ್ನು ಹೇಳಲಿಕ್ಕೆ ಅವಕಾಶವಿದ್ದುದರಿಂದ….. ” ಎಂದು. ಜೊತೆ ಜೊತೆಗೇ “ಕಡಲ್ಕೊರೆತದ ಎದುರು ಮನುಷ್ಯ ಬದುಕಿನ ಪ್ರಯತ್ನ, ಮನೆಯನ್ನು ಕಟ್ಟಿಕೊಳ್ಳಲಾಗದ ಅಸಹಾಯಕ ಜೀವಗಳ ಸಮಸ್ಯೆ, ಬಾಬರಿ ಮಸೀದಿ ಬಿದ್ದು ದೇಶವನ್ನು ಮಾನಸಿಕವಾಗಿ ಇಬ್ಭಾಗ ಮಾಡಿದಾಗಲೂ ಮಾನವೀಯ ಸಂಬಂಧಗಳು ತಮ್ಮ ಮೂಲದಲ್ಲಿ ಬದಲಾಗದೇ ಉಳಿದಿರುವುದು”. ಇವೆಲ್ಲವನ್ನೂ ಹೇಳುವ ಉದ್ದೇಶಗಳನ್ನು ಇಟ್ಟುಕೊಂಡ ಚಿತ್ರತಂಡದ ಜೊತೆಗೆ ತೊಡಗಿಕೊಳ್ಳುತ್ತಲೇ ಈ ಉದ್ದೇಶಗಳ ಬಗೆಗೆ ತಮ್ಮ ವೈಯುಕ್ತಿಕ ನಿಲುವಿನ ಬದ್ಧತೆ, ಪ್ರಾಮಾಣಿಕತೆಯನ್ನು ರುಜುವಾತು ಮಾಡುತ್ತಾ ಹೋಗುವುದರಲ್ಲಿಯೇ ಚಂದ್ರಿಕಾರ ಕವಿ ಹೃದಯವು ತೆರೆದುಕೊಳ್ಳುತ್ತಾ ಹೋಗುತ್ತದೆ, ನಿರ್ದಿಷ್ಟವಾಗಿ ಸಮಾನ ಮನಸ್ಸಿನ ಓದುಗನಿಗೆ ಇಂದಿನ ಕಳವಳಕಾರಿ ಬೆಳವಣಿಗೆಗಳ ನಡುವೆಯೇ ‘ಎಲ್ಲವೂ ಹದಗೆಟ್ಟಿಲ್ಲ’ ಎನ್ನುವ ಸಾಂತ್ವನ ನೀಡುವಲ್ಲಿ ಸಫಲವಾಗುತ್ತದೆ.
ಚಿತ್ರದ ಕತೆ ಹೀಗಿದೆ: ಕಡಲ ತಡಿಯಲ್ಲಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ವಿಧವೆ ಪಾತುಮ್ಮಾ ರೊಟ್ಟಿ ಮಾಡುತ್ತಾ ಜೀವ ನಿರ್ವಹಿಸುತ್ತಲೇ, ಮನೆ ಕಟ್ಟಲೆಂದು ಉಳಿದ ಹಣವನ್ನು ಚಿನ್ನದಂಗಡಿಯ ಶ್ರೀನಿವಾಸಾಚಾರಿಯ ಬಳಿ ಕೂಡಿಡುತ್ತಾ ಬಂದಿರುವಳು. ಇತ್ತ ಪಾತುಮ್ಮಾಳ ಮಗಳು ಸಲ್ಮಾ ಅದಾಗಲೇ ಮೂರು ಹೆಣ್ಣುಮಕ್ಕಳ ತಾಯಿಯಾಗಿದ್ದು, ಕ್ಷೀಣಿಸುತ್ತಿರುವ ಅರೋಗ್ಯದ ಸಮಸ್ಯೆಯಿಂದಾಗಿ ತನ್ನ ನಾಲ್ಕನೇಯ ಹೆರಿಗೆಯಲ್ಲಿ ಡಾಕ್ಟರರ ಸಲಹೆಯ ಮೇರೆಗೆ ಗಂಡ ಮೊಹಮದನ ಗೈರುಹಾಜರಿಯಲ್ಲಿಯೇ ಸಂತಾನ ನಿಯಂತ್ರಣದ ಆಪರೇಷನ್ ಮಾಡಿಸಿಕೊಳ್ಳುವಳು. ಕೋಪಗೊಂಡ ಮೊಹಮದ್ ದುಡುಕಿನಿಂದಾಗಿ ಒಂದೇ ಉಸಿರಿನಲ್ಲಿ ಮೂರು ಬಾರಿ ಸಲ್ಮಾಳಿಗೆ ತಲಾಖ್ ಹೇಳಿಬಿಡುತ್ತಾನೆ. ನಂತರದಲ್ಲಿ ಪಶ್ಚಾತಾಪದಿಂದ ಹೆಂಡತಿಯನ್ನು ಮನೆಗೆ ಕರೆಯಬೇಕೆಂದರೆ ಜಮಾತಿನ ಪ್ರಕಾರ ಒಂದು ದಿನಕ್ಕಾದರೂ ಬೇರೊಬ್ಬನನ್ನು ಮದುವೆಯಾಗಿ ಸಲ್ಮಾ ಆತನೊಂದಿಗೆ ದೈಹಿಕ ಸಂಪರ್ಕ ಮಾಡಬೇಕೆಂದು ಹೇಳಲಾಗುತ್ತದೆ. “ತಪ್ಪು ಮಾಡೋದು ಗಂಡಸು, ಶಿಕ್ಷೆ ಹೆಂಗಸಿಗಾ ?” ಎಂದು ಕೇಳುತ್ತಾ ಸಲ್ಮಾ ಅದಕ್ಕೊಪ್ಪದೇ ಹೋಗುತ್ತಾಳೆ. ಕೊನೆಗೆ ಖಾಜಿಗಳು ಕುರಾನಿನ ಆಧಾರ ನೀಡುತ್ತಾ ಸಲ್ಮಾಳನ್ನು ವಾಪಸು ಕರೆದೊಯ್ಯಲು ಯಾವುದೇ ಅಡಚಣೆ ಇಲ್ಲವೆಂದು ಹೇಳಿದಾಗ ಸಲ್ಮಾ ಗಂಡನೊಂದಿಗೆ ಹಿಂದಿರುಗುತ್ತಾಳೆ.

ಇತ್ತ ಶ್ರೀನಿವಾಸಾಚಾರಿಯ ಮಗ ಚಂದ್ರಣ್ಣ, ಅಯೋಧ್ಯೆಗೆ ಕರಸೇವೆಗೆಂದು ಹೋದವನು, ತಾನು ಭಾಗವಹಿಸಲಾಗದ್ದಕ್ಕೆ ಬೇಸರಗೊಂಡಿದ್ದಾಗ ಕರಸೇವೆಯಲ್ಲಿ ಭಾಗವಹಿಸಿದ್ದ ಒಬ್ಬಾತ ಬಾಬರಿ ಮಸೀದಿಯ ಬಿದ್ದುಹೋದ ಒಂದು ಗೋಡೆಯ ತುಂಡನ್ನು ಇವನಿಗೆ ಕೊಡುಗೆಯಾಗಿ ನೀಡುತ್ತಾನೆ. ಊರಿಗೆ ವಾಪಸಾದಾಗ ಕರಸೇವೆಗೆ ಇವನನ್ನು ಕಳಿಸಿದ್ದ ಕಿಣಿಯು ಕೂಡ ಆ ಗೋಡೆಯ ತುಂಡನ್ನು ವಿವಾದದ ಭಯದಿಂದ ನಿರಾಕರಿಸಿ ಇವನ ಕಣ್ತಪ್ಪಿಸಿ ಓಡಾಡತೊಡಗುತ್ತಾನೆ. ಅದೇ ಸಮಯದಲ್ಲಿ ಪಾತುಮ್ಮಾಳ ಗುಡಿಸಲು ಮಳೆಗಾಳಿಗೆ ಸಿಕ್ಕಿ ಬಿದ್ದುಹೋಗಿ ಅವಳು ತನ್ನ ಹಣ ವಾಪಸ್ಸು ಕೇಳಿದಾಗ ತಮ್ಮ ಮೇಲೆ ಅವಳಿಗೆ ವಿಶ್ವಾಸವಿಲ್ಲವೆ ಎಂದು ಚಂದ್ರಣ್ಣ ಗೊಂದಲಕ್ಕೊಳಗಾಗುತ್ತಾನೆ. ಕ್ಷೋಭೆಗೊಳಗಾದ ಆತ ಗೋಡೆಯ ತುಂಡನ್ನು ಸಮುದ್ರಕ್ಕೆ ಎಸೆದು ನಿರಾಳವಾಗುತ್ತಾನೆ. ಮನೆ ಬಿದ್ದ ಸ್ಥಳಕ್ಕೆ ಬಂದ ಶ್ರೀನಿವಾಸಾಚಾರಿಯು ಪಾತುಮ್ಮನಿಗೆ ಅವಳು ಕೂಡಿಟ್ಟ ಹಣ ನೀಡುತ್ತಾ “ನಿನ್ನ ಶ್ರಮದ ಈ ಹಣದಲ್ಲೇ ಮನೆ ಕಟ್ಟಿಸು, ಇದರಲ್ಲೇ ರಾಮನೂ ಇದ್ದಾನೆ, ಅಲ್ಲಾಹೂನೂ ಇದ್ದಾನೆ” ಎನ್ನುತ್ತಾನೆ. ಸಮಕಾಲೀನ ಜ್ವಲಂತ ಸಮಸ್ಯೆಗಳನ್ನು ಒರೆ ಹಚ್ಚಿ ನೋಡುವುದೇ ಸಿನಿಮಾದ ಉದ್ದೇಶವಾಗಿರುತ್ತದೆ. ಆ ಚಲನಚಿತ್ರವು ದೇಶದಲ್ಲಿ ಏನೆಲ್ಲಾ ನಡೆದರೂ ಜನಸಾಮಾನ್ಯ ಹಿಂದೂ – ಮುಸಲ್ಮಾನರ ನಡುವೆ ಉಳಿದುಬಂದಿರುವ ಮಾನವೀಯ ಸಂಬಂಧಗಳ ಹಾಗೂ ಮೌಲ್ಯಗಳ ಬಗ್ಗೆ ಹೇಳುತ್ತಾ ಭಾವೈಕ್ಯತೆಯನ್ನು ಎತ್ತಿ ಹಿಡಿಯುತ್ತದೆ.
ಇಂತಹದೊಂದು ಸಿನಿಮಾ ನಿರ್ಮಾಣದಲ್ಲಿ ಚಿತ್ರಕಥೆ ಮತ್ತು ಸಂಭಾಷಣೆಯ ನಿರ್ವಹಣೆಯ ಜೊತೆಗೆ ಕಲಾನಿರ್ದೇಶಕರಾಗಿಯೂ ಕೆಲಸ ಮಾಡಿದ ಚಂದ್ರಿಕಾ ಚಿತ್ರದ ನಿರ್ಮಾಣದ ಹಿಂದಿನ ತಮ್ಮ ನಿಲುವಿಗಿದ್ದ ಬದ್ಧತೆಯನ್ನು ಪುಸ್ತಕದುದ್ದಕ್ಕೂ ಪ್ರಕಟಪಡಿಸುತ್ತಾ ಹೋಗುತ್ತಾರೆ. “ಧರ್ಮವನ್ನು ರಾಜಕೀಯ ಮಾಡದೆ ವೈಯುಕ್ತಿಕ ಶ್ರದ್ಧೆಯಲ್ಲಿ ಬದುಕುವ ದೊಡ್ಡ ಸಮುದಾಯ ಯಾರಿಗೂ ಹಾನಿ ಮಾಡುವುದಿಲ್ಲ… ಪಾತುಮ್ಮ ಎನ್ನುವ ಬಡಹೆಂಗಸಿಗೆ ಬದುಕು ನಡೆಸುವುದೇ ಕಷ್ಟವಾಗಿರುವಾಗ ಅವಳು ಹೇಗೆತಾನೆ ಇನ್ನೊಬ್ಬರನ್ನು ದ್ವೇಷಿಸುತ್ತಾಳೆ? ಅವಳ ಬದುಕಿನ ಸಂಗತಿಗಳಿಗೆ ಉತ್ತರ ಹುಡುಕಿಕೊಳ್ಳುವುದು ದೊಡ್ಡದಾಗಿರುವಾಗ ಸರಿ ತಪ್ಪುಗಳನ್ನು ಹೇಗೆ ನಿರ್ಧರಿಸುತ್ತಾಳೆ? ಪ್ರೀತಿಯಲ್ಲೇ ನಂಬುಗೆ ಕಂಡುಕೊಂಡ ಅವಳು ಅನುಮಾನವನ್ನು ಹೇಗೆ ಹೊತ್ತೊಯ್ಯುತ್ತಾಳೆ? ಬಾಬರಿ ಮಸೀದಿಯ ಗೋಡೆ ಒಡೆದವರು ಎನ್ನುವ ದ್ವೇಷವಿಲ್ಲದೆ ಮಸೀದಿಯ ಗೋಡೆಯ ಒಂದು ತುಂಡನ್ನು ತನ್ನ ಮನೆಗೆ ಸೇರಿಸಿ ಕಟ್ಟಲೆಂದು ಚಂದ್ರಣ್ಣನಲ್ಲಿ ಬೇಡಿಕೆಯಿಟ್ಟಾಗ ಅವನ ಪಾಪ ಪ್ರಜ್ಞೆ ಜಾಗೃತವಾಗುತ್ತದೆ”. ಇಂಥಾ ಕತೆಯನ್ನು ಬರೆದ ಬೋಳುವಾರರನ್ನು ಮುಖತಃ ಭೇಟಿಯಾದಾಗ ಅವರ ಕಣ್ಣಲ್ಲಿ ಕಂಡ ತಣ್ಣನೆಯ ವಿಷಾದ ಚಂದ್ರಿಕಾರ ವಿಷಾದವೂ ಆಗಿರುವುದೇ ಈ ಪುಸ್ತಕದ ಪ್ರಾಮಾಣಿಕ ಆಶಯದ ಕುರುಹಾಗಿದೆ. ಇದಿಷ್ಟೂ ಆ ಸಿನಿಮಾದ ಕತೆಯಾಗಿದ್ದರೆ, ಸಿನಿಮಾ ನಿರ್ಮಾಣದ ಕತೆಯಲ್ಲಿ ಚಂದ್ರಿಕಾರ ಅನುಭವಗಳು ಮತ್ತು ಗ್ರಹಿಕೆಗಳು, ಆಕೆಯ ಸೃಜನಶೀಲ ಹಾಗೂ ಸಂವೇದನಾಶೀಲ ಮನಸ್ಸಿನ ಒಳನೋಟಗಳಿಂದಾಗಿ ಓದುಗನ ಮುಂದೆ ಒಂದು ಅನನ್ಯವಾದ ಅನುಭವ ಜಗತ್ತನ್ನು ತೆರೆದಿಡುತ್ತವೆ.
ಬೀಡಿ ಕಟ್ಟುವ ಮುಸ್ಲಿಂ ಹೆಂಗಸರ ಕಿವಿಯ ಅಲೀಖತ್ತು, ತಲೆಗೆ ಕಟ್ಟಿದ್ದ ಬಟ್ಟೆ, ಕೊರಳಲ್ಲಿ ಕರಿಮಣಿ ಸರ, ಬಳೆಗಳಿಲ್ಲದ ಕೈಗಳು, ಮುಗ್ಧ ನಗು, ಯಾವ ಮೇಕಪ್ ಮನ್ ಗೂ ಏಟುಕಲಾಗದ ನೋವೇ ಜೀವ ತಳೆದಂತಿರುವ ಸುರ್ಮಾ ಹಚ್ಚಿದ ಹೊಳಪಿನ ಕಣ್ಣುಗಳು ಆರಂಭದಲ್ಲಿಯೇ ಆ ಹೆಣ್ಣುಮಕ್ಕಳನ್ನು ಓದುಗರಿಗೆ ಆಪ್ತವಾಗಿಸಿಬಿಡುವವು. ಐವತ್ತರ ಆಸುಪಾಸಿನ, ಮಧುಬಾಲಾಳನ್ನು ಹೋಲುತ್ತಿದ್ದ ಅಲೀಮಮ್ಮ ಲೇಖಕಿಗೆ ಆಪ್ತವಾಗುವ ಬಗೆ, “ನನ್ನ ಹರಕೆಯನ್ನು ನಿಮ್ಮ ಮೂಲಕ ಖುದಾ ಈಡೇರಿಸಿಕೊಂಡ ಎಂದರೆ, ನೀವು ಖುದಾಗೆ ಹತ್ತಿರದವರು” ಎನ್ನುವ ಧಾರ್ಮಿಕ ಶ್ರದ್ಧೆಯಿಂದ ಆಕೆಯಲ್ಲಿ ಲೇಖಕಿಯೊಂದಿಗೆ ಹುಟ್ಟಿದ ಆಪ್ತಭಾವ, ತನ್ನ ಗಂಡ ಮಹಮದನ ಬಗ್ಗೆ ಹೇಳಬೇಕೆಂದರೆ ಒಂದು ದಿನವಾದರೂ ಬೇಕು ಎನ್ನುವ ಮಾತಲ್ಲಿ ಆಕೆಗಿದ್ದ ಗಂಡನ ಮೇಲಿನ ಪ್ರೀತಿಯು ವ್ಯಕ್ತವಾಗುವ ಬಗೆಗಿನ ಲೇಖಕಿಯ ಬೆರಗು ಎಲ್ಲವೂ ಅವಳನ್ನು ಆಪ್ತವಾಗಿಸುತ್ತಲೇ ಹೋಗುವವು.” ಗಂಡ ಎಂದರೆ ಹೀಗೂ ಸಾಧ್ಯವಾ? ನನಗ್ಯಾಕೆ ಯಾವತ್ತು ಹೀಗನ್ನಿಸಲೇ ಇಲ್ಲವಲ್ಲ” ಎಂಬ ಆತ್ಮಶೋಧದ ಪ್ರಶ್ನೆ ಲೇಖಕಿಯನ್ನು ಕಾಡುವ ಪರಿಯು ಹೊಸದರ ಬಗೆಗಿನ ಬೆರಗು, ತನಗಿಂತ ವಿಭಿನ್ನವಾಗಿ ಯೋಚಿಸುವವರ ಬಗೆಗೆ ಆಕೆಯ ತೆರೆದ ಮನಸ್ಸಿಗೆ ಉದಾಹರಣೆಯಾಗಿದೆ.
ಇಡೀ ದಿನ ಶೂಟಿಂಗಿನ ಟೆನ್ಶನ್ ನಲ್ಲಿ ತಾನು ಅಂದು ಊಟ ಮಾಡಿಲ್ಲ ಎನ್ನುವುದು ಹಸೀನಮ್ಮನಿಗೆ ತಿಳಿದು ತನ್ನ ಅಡುಗೆಮನೆಗೆ ಕರೆದೊಯ್ದ ಅಂದು ಮೀನಿನ ಸಾರು ಮಾಡಿದ್ದ ಆಕೆ “ಅವಲಕ್ಕಿ ಕೊಡ್ತೇನೆ, ನೀನೇ ಪದಾರ್ಥ ಮಾಡಿಕೋ” ಎಂದಾಗ ಲೇಖಕಿಯ ಕಣ್ಣಲ್ಲಿ ನೀರಾಡಿ, ಮಾತು ಸೋತ ಆ ಕ್ಷಣ “ನಿನಗೆ ತೊಂದರೆ ಇಲ್ಲಾಂದ್ರೆ ನೀನೆ ಮಾಡಿ ಕೊಟ್ಟುಬಿಡು ಹಸೀನಮ್ಮಾ” ಎಂದಾಗ “ಆಕೆ ಮಾಡಿಕೊಟ್ಟ ಅವಲಕ್ಕಿಯ ರುಚಿಯನ್ನು ಯಾವುದೂ ಸರಿಕಟ್ಟಲಾರದು, ಅವಳ ಪ್ರೀತಿ, ಆ ಕಕ್ಕುಲಾತಿಗೂ ಕೂಡಾ” ಎನ್ನುವ ಲೇಖಕಿಯ ಭಾವತೀವ್ರತೆ ಓದುಗನನ್ನೂ ಗಾಢವಾಗಿ ಕಾಡುವುದರಲ್ಲಿ ಸಂಶಯವಿಲ್ಲ.
ಕೋಮಲವಾದ ದೇಹದಲ್ಲಿ ವಜ್ರದಷ್ಟು ಕಠಿಣ ಸಂಕಲ್ಪ ಹೊತ್ತ, ದೋಣಿಯನ್ನು ನಡೆಸುವ, ಬುದ್ಧನ ಅಮ್ರಪಾಲಿಯಂತೆ ಕಂಡ ಫ್ರೀಡಾಳ ಬಗೆಗಿನ ಮೆಚ್ಚುಗೆ, ಸಣ್ಣ ದೇಹದಲ್ಲಿ ಪುಟಿಯುವ ಚೈತನ್ಯ ಹೊತ್ತ, ಜೀವನೋತ್ಸಾಹ ತುಂಬಿ ತುಳುಕುತ್ತಿದ್ದ, ಡೋರಾ, ಇದ್ದಕ್ಕಿದ್ದಂತೆ ಮನೆಯಿಂದ ಆಕೆಯ ಗಂಡನ ಕರೆಬಂದು ಹೊರಟಾಗ ಆತಂಕದಿಂದ ಅವಳ ಮನೆಯ ಮೇಲಿದ್ದ ಶಿಲುಬೆಗೆ “ದೇವರೇ, ಡೋರಾಗೆ ಏನೂ ಆಗದಿರಲಿ” ಎಂದು ಪ್ರಾರ್ಥಿಸುವ ಲೇಖಕಿಯ ಕಕ್ಕುಲಾತಿ, ಇವೆಲ್ಲವೂ ಓದುಗನಲ್ಲಿಯೂ ಆ ಭಾವವನ್ನು ಜಾಗೃತಗೊಳಿಸದಿದ್ದರೆ ಕೇಳಿ!
ತಮ್ಮ ಸಿನಿಮಾ ಪಯಣದ ಜೊತೆಗಾರ್ತಿಯರಾಗಿದ್ದ “ನಾಟಕ ಪರಂಪರೆಯನ್ನು ಹೊತ್ತು ಓಡಾಡುತ್ತಿರುವ ಬಿ ಜಯಶ್ರೀ” ನಾವೆಷ್ಟು ಅದೃಷ್ಟಶಾಲಿಗಳು ಎಂಥೆಂಥಾ ಪಾತ್ರಗಳು ನಮ್ಮನ್ನರಸಿ ಬರುತ್ತವೆ ಎನ್ನುತ್ತಾ “ನಾನು ಈ ಸಿನಿಮಾಗೆ ಹಣ ತೆಗೆದುಕೊಳ್ಳುವುದಿಲ್ಲ….ಒಂದು ರೂಪಾಯಿ ಕೊಟ್ಟರೂ ಸರಿಯೇ” ಎಂದು ದಿಗ್ಭ್ರಮೆ ಹುಟ್ಟಿಸಿದ ಹುಟ್ಟು ಕಲಾವಿದೆ. ಆಕೆಯ ಸಾಮಾಜಿಕ ಜವಾಬ್ದಾರಿಯ ಬಗೆಗಿನ ಅರಿವು ಲೇಖಕಿಯಿಂದ ಓದುಗನಿಗೂ ದಾಟಿ ಬರುವಂತಿರುವ ವಿವರಣೆಯು ಅನನ್ಯವಾಗಿದೆ.
ಇನ್ನು ಕೈಗೆ ಸಿಗದೇ ಓಡಿಯಾಡುತ್ತಿದ್ದ ಜಕ್ಕು ಮಹಮದ್ ಎನ್ನುವ ವ್ಯಕ್ತಿಯು ಲೇಖಕಿಯ ಕಲ್ಪನೆಯಲ್ಲಿ ವಿವಿಧ ರೂಪಗಳಲ್ಲಿ ಕಂಡು ಕೊನೆಗೊಮ್ಮೆ ಸಿಕ್ಕಾಗ ತಮ್ಮ ಕಲ್ಪನೆಗೆ ತದ್ವಿರುದ್ಧವಾಗಿ ಎದುರಿಗೆ ಪ್ರಕಟಕೊಳ್ಳುವ ಅವರ ಚಿತ್ರಣವನ್ನು ಅದೆಷ್ಟು ಚಂದವಾಗಿ ಕಟ್ಟಿಕೊಟ್ಟಿರುವರು! ಜಕ್ಕು ಎಂದು ಕರೆದದ್ದಕ್ಕೆ ಸಿಟ್ಟಿಗೇಳುವ ಅವರನ್ನು ಹಸೀನಾ ರೇಗಿಸುವ ಪರಿ, ತಪ್ಪಾಗಿ ಕರೆದೆನೆಂದು ಪೆಚ್ಚಾಗಿದ್ದ ಲೇಖಕಿಗೆ ಹಸೀನಮ್ಮ “ಚಿಂತೆ ಮಾಡಬೇಡಿ. ಕಾಕಾನ ಬಡತನ, ಮಕ್ಕಳ ವಿದ್ಯಾಭ್ಯಾಸ, ಸತ್ತ ಹೆಂಡತಿಯ ಅನಾರೋಗ್ಯಕ್ಕಾಗಿ ಖರ್ಚು, ಮಾಡಿದ ಸಾಲ, ಎಲ್ಲದರ ಲೆಕ್ಕ ಹಾಕುತ್ತಾ ನಾಳೆ ಮತ್ತೆ ಬಂದೇ ಬರುತ್ತಾನೆ” ಎನ್ನುವಾಗಿನ ನಿಜ ಪರಿಸ್ಥಿತಿಯ ತಿಳಿವು, ಸೆಟ್ಟಿಗೆಂದು ತಯಾರಾದ ಮನೆಯನ್ನು ನೋಡಿದ ಆತ ಕಣ್ಣು ತುಂಬಿಕೊಂಡು “ನನ್ನ ಅಬ್ಬು ಹಸನಬ್ಬ, ಅಮ್ಮಿ ಪಾತುಮ್ಮಬಿ ಇದ್ದಾಗ ಮನೆ ಹಿಂಗಿತ್ತು” ಎಂದು ಭಾವುಕನಾದ ಆ ಕ್ಷಣ, ಸಿಕ್ಕ ದುಡ್ಡಿನಲ್ಲಿ ಮತ್ತೆ ಮನೆಯನ್ನು ರಿಪೇರಿ ಮಾಡಿಸಬಹುದೆನ್ನುವ ಆಸೆ ತುಂಬಿದ ಕಣ್ಣುಗಳು, ನಮ್ಮ ಮುಂದೆ ಅವರನ್ನು ಜೀವಂತವಾಗಿ ನಿಲ್ಲಿಸಿಬಿಡುವವು. ಶೂಟಿಂಗಿನ ಕೊನೆಯ ದಿನ “ಇವತ್ತು ಕಾಕಾ ಬಂದಿರುವುದು ಹಣ ವಸೂಲಿ ಮಾಡಲಿಕ್ಕೆ” ಎಂಬ ಹಸೀನಮ್ಮಳ ತುಂಟತನದ ಮಾತನ್ನು ಹುಸಿಗೊಳಿಸಿ, ಸಿನಿಮಾದಲ್ಲಿ ಇಡೀ ಕರ್ನಾಟಕ ನಿಮ್ಮ ಮನೆಯನ್ನು ನೋಡುತ್ತದೆ ಎಂದು ಹೇಳಿದ ಲೇಖಕಿಗೆ, “ನನಗೆ ಹಣ ಬೇಕಿದ್ದುದು ಈ ಮನೆಗಾಗಿ ಮಾತ್ರ, ನಿಮ್ಮ ಮಾತಿಂದ ಅದರ ರಿಪೇರಿಯ ಯೋಚನೆ ಬಿಟ್ಟು ಹೋಯಿತು” ಎಂದು ಕಣ್ಣುಗಳಲ್ಲಿ ಕೃತಜ್ಞತೆ ತುಳುಕಿಸಿದಾಗ ಅವರ ಹೃದಯ ಶ್ರೀಮಂತಿಕೆಯ ಅರಿವಾಗುವುದನ್ನು ಲೇಖಕಿ ಅತ್ಯಂತ ಭಾವಪೂರ್ಣತೆಯಿಂದ ಕಟ್ಟಿಕೊಟ್ಟಿರುವರು.
ಇನ್ನು ಕಡಲ ಕೊರೆತದಲ್ಲಿ ಮನೆ ಕಳೆದುಕೊಂಡ ಎಲ್ಲರಿಗೂ ಸರ್ಕಾರದಿಂದ ಪರಿಹಾರ ಕೊಡಿಸುವ ಮಧ್ಯವರ್ತಿ ಕೆಲಸ ಮಾಡುತ್ತಿದ್ದ, ಅಚ್ಚುಕಟ್ಟಾಗಿ ಇಂಗ್ಲಿಷ್ ಮಾತಾಡುತ್ತಿದ್ದ, ಜನರ ಬಾಯಲ್ಲಿ ಬೆರಕೆ ಆಸಾಮಿ ಅನ್ನಿಸಿಕೊಂಡ ಬ್ರಿಟಿಷ್ ಮಹಮದ್ ಲೇಖಕಿಗೆ ಒಂದು ಒಗಟಾಗಿಯೇ ಉಳಿದಿರುವರು.
ಇಡೀ ಚಿತ್ರೀಕರಣದ ಕತೆಯನ್ನು ಸೊಗಸಾಗಿ ಹೇಳುತ್ತಾ ಹೋದ ಲೇಖಕಿ ಫೈರ್ ಬ್ರಿಗೇಡ್ ನಿಂದ ಕೃತಕ ಮಳೆಗೆಂದು ಫೈರ್ ಇಂಜಿನ್ ಹೊಂದಿಸಬೇಕಾಗಿ ಬಂದಾಗ ಪಟ್ಟ ಪಾಡು, ಡಿಮಾನಿಟೈಸೇಷನ್ ಸಮಯದಲ್ಲಿ ಆದ ತೊಂದರೆಗಳ ಸಾಲು ಸಾಲು, ಕೆಲವು ಕಲಾವಿದರಿಂದ ಸಂಭವಿಸಿದ ಕಹಿ ಅನುಭವಗಳು ಎಲ್ಲವನ್ನೂ ಪಾಸಿಟಿವ್ ಆಗಿಯೇ ಚಿತ್ರಿಸುತ್ತಾ, ಅಲ್ಲಲ್ಲಿ ಬಂದ ಮನಸ್ತಾಪಗಳಿಗೂ ತಮ್ಮದೇ ರೀತಿಯಲ್ಲಿ ರಾಜಿ ಮಾಡಿಸುತ್ತಾ ಹೊಂದಾಣಿಕೆ ಕಾಯ್ದುಕೊಂಡಿರುವುದು ಅವರ ಸಹಿಷ್ಣುತೆಗೆ ಸಾಕ್ಷಿಯಾಗಿವೆ.

ಪ್ರಕೃತಿಯನ್ನು ಸದಾ ಬೆರಗುಗಣ್ಣಿಂದ ನೋಡುವ ಆಕೆಯ “ಸಮುದ್ರದ ಪಕ್ಕದಲ್ಲೇ ಇದ್ದರೂ ಸಿಹಿನೀರಿನ ಬುಗ್ಗೆ ಚಿಮ್ಮವುದಾದರೂ ಹೇಗೆ?” ಎನ್ನುವ ಅಚ್ಚರಿ, “ನೇತ್ರಾವತಿಯ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಟೈಲ್ಸ್ ಫ್ಯಾಕ್ಟರಿ, ನಿಂತುಹೋದ ಮಿಷನುಗಳು, ಹೊಗೆ ಏಳದ ಹೆಂಚು ಸುಡುವ ಗೂಡುಗಳು…. ಹೀಗೆ ಜೀವನಗಳು, ಜೀವಗಳು ಎಲ್ಲವೂ ಕೊನೆಯಾಗಿಬಿಡುತ್ತವೆ” ಎನ್ನುವ ಸತ್ಯದ ಮನವರಿಕೆ, “ಈ ಸಮುದ್ರಕ್ಕೆ ಆಳದಲ್ಲಿದ್ದ ಮರಳನ್ನು ಹೊತ್ತು ನೆಲಕ್ಕೆ ಚೆಲ್ಲುವುದನ್ನು ಬಿಟ್ಟು ಬೇರೆ ಏನು ಕೆಲಸವಿದೆ?….. ಒಳಗಿನ ಮರಳನ್ನು ಬಗೆದು ಹೊರಚೆಲ್ಲಿ ತನ್ನ ಆಳವನ್ನು ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಸಮುದ್ರಕ್ಕೂ ಅನಿವಾರ್ಯವಲ್ಲವಾ?”, ಎಂಬ ಜಿಜ್ಞಾಸೆ, “ಉಪ್ಪುನೀರನ್ನೇ ನೆಲದಾಳದಿಂದ ಎತ್ತೊಯ್ದು, ಸಿಹಿಯಾಗಿಸಿ ಎಳನೀರಲ್ಲಿ ಇರಿಸುವ ಮರದ ಇಚ್ಛಾಶಕ್ತಿ ಎಷ್ಟು ದೊಡ್ಡದಿರಬೇಕು” ಎನ್ನುವಂತಹ ಕೌತುಕ, ಅಲ್ಲಲ್ಲಿ ಆಕೆಗೆ ಸಿದ್ಧಿಸುವ ಒಳನೋಟಗಳು, ಆಕೆಯ ಸೂಕ್ಷ್ಮ ಸಂವೇದನೆಗೆ, ಕವಿಹೃದಯಕ್ಕೆ, ಸಾಕ್ಷಿಯಾಗಿವೆ.
ಜಮಾತಿನ ಮುಖ್ಯಸ್ಥರ “ತಲ್ಲಾಖಿನ ತೂಗುಗತ್ತಿಯಲ್ಲಿ ಹೆಣ್ಣು ಮಕ್ಕಳು ನರಳುತ್ತಿದ್ದಾರೆ, ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದೀರ ನಮ್ಮ ಬೆಂಬಲ ನಿಮಗಿರುತ್ತದೆ”, ಎನ್ನುವ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮಾತು, “ಈಗೆಲ್ಲಾ ಹಾಗೆ ಹತ್ತು ಹನ್ನೆರಡು ಮಕ್ಕಳು ಮಾಡಿಕೊಳ್ಳುವುದಿಲ್ಲ ಬಿಡಿ, ಆಗಿನ ಹಾಗೆ ಈಗ ಯುದ್ಧಗಳಿಲ್ಲವಲ್ಲ ಹೆಚ್ಚು ಮಕ್ಕಳು ಬೇಕು ಎನ್ನುವುದಕ್ಕೆ” ಎಂದ ಬ್ಯಾರಿ ಹೆಂಗಸು, “ನಿಮ್ಮ ಗಂಡ ತಲ್ಲಾಕ್ ಕೊಟ್ಟುಬಿಟ್ಟರೆ ನೀವು ಹಠ ಹಿಡಿದು?” ಎಂದು ಮರುಪ್ರಶ್ನಿಸಿದ ಲೇಖಕಿಗೆ “ಯಾಕೆ ಕೊಡ್ತಾರೆ?…. ಈಗ ನಮ್ಮ ಶರೀಯತ್ತು ಮಾತ್ರವಲ್ಲ ಕೋರ್ಟ್ ಕೂಡಾ ಇದೆ” ಎಂದು ಧೃಢವಾಗಿ ಹೇಳಿದಾಗ ಲೇಖಕಿಗೆ ನಿಜಸ್ಥಿತಿಯ ಪರಿಚಯವಾಗುತ್ತದೆ.
ಚಿತ್ರೀಕರಣ ಮುಗಿಯುವ ವೇಳೆಗೆ ಲೇಖಕಿಯನ್ನು ಕಾಡುವ ಯೋಚನೆಗಳು ಹಲವಾರು ; “ಸದ್ಯದ ಸತ್ಯಗಳಿಗೆ ಶಾಶ್ವತ ಪರಿಹಾರವಾಗಿ ಮಾನವೀಯತೆಯನ್ನು ಬೆಸೆಯುವ ಹಾಗೆ ಬಿದ್ದ ಮಸೀದಿಯ ಗೋಡೆ ನಮ್ಮ ಧಾರ್ಮಿಕತೆಗೆ ಪಾಪದ ಪ್ರಜ್ಞೆಯನ್ನು ಹೆಚ್ಚಿಸಬೇಕಿತ್ತು. ತಪ್ಪುಗಳನ್ನು ಮರುಕಳಿಸದ ಹಾಗೆ ನೋಡಬೇಕಿತ್ತು. ಆದರೆ ಅದು ವಿಜಯದ ಸಂಕೇತವಾಗಿಬಿಟ್ಟಿತ್ತು.. ಪಕ್ಕದ ಮನೆಯ ಫಾತಿಮಾಳ ಜೊತೆ ಆಡುವ ತಂಗಿಯನ್ನು ಪ್ರಶ್ನಿಸಿದಾಗ, “ಅವಳು ಕುಂಟಾ ಬಿಲ್ಲೆಯನ್ನು ಉಲ್ಟಾ ಆಡದೆ ನಾನು ಆಡಿದ ಹಾಗೆ ಆಡುತ್ತಾಳೆ, ಅವಳ ಜೊತೆ ಆಡಿದರೆ ತಪ್ಪೇನು?” ಎಂದು ಪ್ರಶ್ನಿಸುವ ಅವಳು ಈ ಸಮಾಜ ಪಡೆದುಕೊಳ್ಳಬೇಕಿರುವ ಪ್ರಜ್ಞಾವಂತಿಕೆಗೆ ಸಾಕ್ಷಿಯಾಗುತ್ತಾಳೆ……. ಶುದ್ಧ ಮಾನವೀಯ ತುಡಿತಗಳನ್ನು ಕಥೆಯಲ್ಲಿಯೂ, ನಾವಿದ್ದ ಮುಕ್ಕಚ್ಚೇರಿಯ ಕೇರಿಗಳಲ್ಲಿಯೂ, ಮನೆಗಳಲ್ಲೂ ಮನಸ್ಸುಗಳೂ ಕಾಣುತ್ತಾ ಹೋದೆ’ ಎನ್ನುವ ಆಕೆಯು ಸಮಾಜದಲ್ಲಿರುವ ಸಂದೇಹಗಳಿಗೂ, ಪೂರ್ವಾಗ್ರಹಗಳಿಗೂ, ಯಾವುದೇ ಪಂಗಡದ ಸಾಮಾನ್ಯೀಕರಣದ ಧೋರಣೆಗಳಿಗೂ, ನೇರವಾದ ಪ್ರಶ್ನೆಗಳನ್ನೇ ಕೇಳಿದ್ದಾರೆ. ಆ ಪ್ರಶ್ನೆಗಳನ್ನು ಎತ್ತುತ್ತಲೇ ಕುರಾನ್ ಹೆಣ್ಣುಮಕ್ಕಳ ಬಗ್ಗೆ ತುಂಬಾ ಉದಾರವಾಗಿ ನಡೆದುಕೊಂಡಿದೆಯೆಂದೂ, ಪುರುಷ ಪ್ರಧಾನ ಸಮಾಜವು ಧಾರ್ಮಿಕತೆಯ ಸೋಗಿನಲ್ಲಿ ತಲ್ಲಾಕಿನ ನಿಯಮಗಳನ್ನು ತನ್ನ ಅನುಕೂಲಕ್ಕಾಗಿ ಹೇಗೆ ತಿರುಚಿದೆಯೆಂದೂ ಸಾಕಷ್ಟು ಚರ್ಚೆಯ ನಂತರ ಸಮೀಕರಿಸಿರುವರು. ಚಿಂತನೆಗೆ ಹಚ್ಚುವ, ಸಾಮಾಜಿಕ ಜವಾಬ್ದಾರಿಯಿಂದ ಕೂಡಿದ ಪುಸ್ತಕವಿದು. ಚಂದದ ಮುದ್ರಣ ಮತ್ತು ವಿನ್ಯಾಸಕ್ಕಾಗಿ ಪ್ರಕಾಶಕರೂ ಅಭಿನಂದನಾರ್ಹರು.
ಕೃತಿ: ಮೂವರು ಮಹಮದರು
ರಚನೆ: ಪಿ ಚಂದ್ರಿಕಾ
ಪುಟ: 208
ಬೆಲೆ: ರೂ 250
ಪ್ರಕಾಶನ: ಬಹುರೂಪಿ
ಕೊಳ್ಳಲು ಸಂಪಕಿ೯ಸಿ : 70191 82729
ಅಥವಾ ಇಲ್ಲಿ ಭೇಟಿ ಕೊಡಿ : https://bit.ly/3GKIkCU






0 Comments