ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ್ ಇಟಗಿ ಕಾಲಂ: ಆತ ಮೌಮರ್ ಗಡಾಫಿ

ಆಫ್ರಿಕಾದ ಒಂದು ಮೂಲೆಯಲ್ಲಿ ಅರಬ್ ಜಗತ್ತಿಗೆ ಹತ್ತಿರವಾಗಿರುವ ಲಿಬಿಯಾ ಬುಡಕಟ್ಟುಗಳಿಂದ ತುಂಬಿದ ದೇಶ. ಗಡಾಫಿ ಹುಟ್ಟಿದ್ದು 1942ರಲ್ಲಿ ಸಿರ್ತ್ ನಲ್ಲಿ. ತಂದೆ-ತಾಯಿಗಳು ಅಲೆಮಾರಿ ಬುಡಕಟ್ಟೊಂದಕ್ಕೆ ಸೇರಿದವರು. ಶಿಕ್ಷಣ ಪಡೆಯಲು ಗಡಾಫಿಗೆ ಕಷ್ಟವಾಗಲಿಲ್ಲ. ಬೆಂಗಾಝಿ ವಿಶ್ವವಿದ್ಯಾನಿಲಯದಲ್ಲಿ ಭೂಗೋಳ ಕಲಿಯಲು ಸೇರಿದರೂ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದರಿಂದ ಪದವಿ ಪಡೆಯುವ ತನಕ ವಿಶ್ವವಿದ್ಯಾನಿಲಯದಲ್ಲಿ ಉಳಿಯಲಿಲ್ಲ. ಈಜಿಪ್ಟಿನ ಮುತ್ಸದ್ಧಿ ಗಮಾಲ ಅಬ್ದುಲ್ ನಾಸೆರ್ ಅವರ ಅರಬ್ ಸಮಾಜವಾದದಿಂದ ಪ್ರಭಾವಿತಾದ ಗಡಾಫಿ 1956ರಲ್ಲಿ ಸೂಯೇಝ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲ್ ವಿರೋಧಿ ಪ್ರಮುಖ ಪಾತ್ರವಹಿಸಿದ. ರಾಜಕೀಯ ಮಹತ್ವಾಕಾಂಕ್ಷೆಯ ಬಾಗವಾಗಿಯೇ ಸೇನೆಗೆ ಸೇರಿದ.
ಗ್ರೀಸ್ ನಲ್ಲಿರುವ ಹೆಲೆನಿಕ್ ಮಿಲಿಟರ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಹೊತ್ತಿನಲ್ಲೇ ಲಿಬಿಯಾದ ರಾಜಸತ್ತೆಯನ್ನು ಕಿತ್ತೆಸೆಯುವ ಸಂಚು ರೂಪಿಸಿದ್ದ ಗಡಾಫಿಗೆ ಆಗ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಮುಂದೆ ಬ್ರಿಟನ್ ನಲ್ಲೂ ಸೇನಾ ಶಿಕ್ಷಣವನ್ನು ಪಡೆದು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ತನ್ನ ಸಂಚನ್ನು ಕಾರ್ಯರೂಪಕ್ಕೆ ತಂದ. ಹಾಗೆ ನೋಡಿದರೆ ಲಿಬಿಯಾಕ್ಕೆ ಬಹುದೊಡ್ಡ ಅರಸೊತ್ತಿಗೆಯ ಇತಿಹಾಸವೇನೂ ಇಲ್ಲ. ಇಲ್ಲಿದ್ದದ್ದು ಏಕೈಕ ದೊರೆ ಇದ್ರಿಸ್. 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ನೇತೃತ್ವದ ಸೇನೆಯ ಕಿರಿಯ ಅಧಿಕಾರಿಗಳ ಗುಂಪೊಂದು ರಾಜಕುಮಾರನನ್ನು ಬಂಧನದಲ್ಲಿಟ್ಟಿತು. ಹೀಗೆ ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಅರಸೊತ್ತಿಗೆಯಿಂದ ಸ್ವತಂತ್ರವಾಗಿ ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸನ ಕೈವಶವಾಯಿತು.
1969ರಿಂದಲೂ ಲಿಬಿಯಾ ದೇಶದ ಸರ್ವಾಧಿಕಾರಿಯಾಗಿದ್ದ ಕರ್ನಲ್ ಮೌಮರ್ ಗಡಾಫಿ ಲಿಬಿಯಾವನ್ನು ನಲವತ್ತೆರೆಡು ವರ್ಷಗಳ ಕಾಲ ಸಮರ್ಥವಾಗಿ ಆಳಿದವ. ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿಯ ಬಗ್ಗೆ ಲಿಬಿಯಾದ ಜನರಿಗೂ, ಜಗತ್ತಿಗೂ ಒಂದಷ್ಟು ನಿರೀಕ್ಷೆಗಳಿದ್ದವು. ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ ಯುವಕ ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ ಚೆಗುವಾರನಂತೆ ಕಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಕ್ಕೆ ತಕ್ಕಂತೆ ದೇಶದ ಮುಖ್ಯಸ್ಥನಾಗಿ ಅಧಿಕಾರಕ್ಕೇರಿದ ನಂತರವೂ ಇತರರಂತೆ ತನ್ನನ್ನು ಸೇನೆಯ ಮುಖ್ಯಸ್ಥನಾಗಿ ಘೋಷಿಸಿಕೊಳ್ಳದೆ ’ಕರ್ನಲ್’ ಪದವಿಯಲ್ಲೇ ಉಳಿದುಕೊಂಡಿದ್ದು ಹಲವರಲ್ಲಿ ಭರವಸೆಯನ್ನು ಮೂಡಿಸಿತು.
ಮೌಮರ್ಗಡಾಫಿ ರಾಜಕೀಯವಾಗಿ ಬಹಳಷ್ಟು ಸಂವೇದನಾಶೀಲನಾಗಿದ್ದಲ್ಲದೆ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಅತ್ಯಂತ ಚಾಣಾಕ್ಷ ಪಾತ್ರವನ್ನು ಸಹ ವಹಿಸಿದ. 1969ರ ತನಕ ಲಿಬಿಯಾ ಎಣ್ಣೆ ಬಾವಿಗಳಿಂದ ಎಣ್ಣೆ ತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿತ್ತು.
ಇದನ್ನು ದುರುಪಯೋಗ ಪಡೆದುಕೊಂಡ ಹೊರ ದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯ ದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧ ಲಾಭವನ್ನುಹೊಡೆಯುತ್ತಿದ್ದವು. ತೈಲ ಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟದಲ್ಲಿತ್ತು. ಆದರೆ ಈತ  1969ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ.
ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ. ಇತರೆ ತೈಲ ರಾಷ್ಟ್ರಗಳಿಗೂ ಸಹ ತನ್ನ ನೀತಿಯನ್ನೇ ಅನುಸರಿಸಿ ಎಂದು ಗಡಾಫಿ ಸಲಹೆಯನ್ನಿತ್ತ. ಪರಿಣಾಮವಾಗಿ ಈ ರಾಷ್ಟ್ರಗಳು ಬಹಳ ಬೇಗ ಶ್ರೀಮಂತವಾದವು. ಲಿಬಿಯಾದಲ್ಲಿ ಹೇರಳ ತೈಲ ಸಂಪನ್ಮೂಲವಿತ್ತು. ಆದರೆ ಜನಸಂಖ್ಯೆ ಕಡಿಮೆಯಿತ್ತು.
ಇದನ್ನರಿತ ಗಡಾಫಿ ತೈಲಸಂಪನ್ಮೂಲಗಳಿಂದ ಬಂದ ಲಾಭವನ್ನು ದೇಶದ ಉದ್ದಾರಕ್ಕಾಗಿ ಚೆಲ್ಲಿದ.

ಹೀಗಾಗಿ ಲಿಬಿಯಾ ಬಹಳ ಬೇಗನೆ ಜಗತ್ತಿನ ಭೂಪಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಮಿಂಚತೊಡಗಿತು. ಆ ಮೂಲಕ ಆತ ಇಡಿ ಆಫ್ರಿಕಾ ಖಂಡದ “ರಾಜರುಗಳ ರಾಜ” ಎನ್ನುವ ಬಿರುದಿಗೆ ಪಾತ್ರನಾದ.
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಗಡಾಫಿಯ ಆಡಳಿತದಲ್ಲಿ ಲಿಬಿಯಾ ಅಪಾರ ಪ್ರಗತಿ ಸಾಧಿಸಿತು. ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಲ್ಲಿ ಇಡೀ ಆಫ್ರಿಕಾದಲ್ಲೇ ಲಿಬಿಯಾ ಮೊದಲ ಸ್ಥಾನದಲ್ಲಿತ್ತು. ಜೊತೆಗೆ ಲಿಬಿಯಾದ ರಾಷ್ಟ್ರೀಯ ತಲಾದಾಯವು ಜಗತ್ತಿನ ಉತ್ತಮ ತಲಾದಾಯ ಇರುವ ದೇಶಗಳ ಸಾಲಿಗೆ ಸೇರಿತ್ತು.
ಆತನ ಆಡಳಿತಾವಧಿಯಲ್ಲಿ ಲಿಬಿಯಾ ದೇಶ ಯಾರಿಂದಲೂ ಒಂದು ಪೈಸೆಯಷ್ಟು ಸಾಲ ತೆಗೆದುಕೊಂಡಿರಲಿಲ್ಲ. ಒಬ್ಬೇ ಒಬ್ಬ ಭಿಕ್ಷುಕನನ್ನು ಅಲ್ಲಿ ಕಾಣುವಂತಿರಲಿಲ್ಲ.
(ಹಾಗೆ ಒಂದು ವೇಳೆ ಕಂಡರೂ ಅವರು ಲಿಬಿಯಾದ ಭಿಕ್ಷುರಲ್ಲ. ಬದಲಾಗಿ, ಈಜಿಪ್ಟ್, ನೈಜರ್, ಅಥವಾ  ನೈಜಿರೀಯಾ ದೇಶದ ಭಿಕ್ಷುಕರಾಗಿದ್ದರು).  ಹೆಣ್ಣು ಮಕ್ಕಳ ವಿಷಯದಲ್ಲೂ ಸಹ ಗಡಾಫಿ ಉದಾರ ನೀತಿಯನ್ನು ಅನುಸರಿಸಿದ. ಅವರ ಕಾರ್ಯದಕ್ಷತೆಯ ಬಗ್ಗೆ ಅವನಿಗೆ ಅಪಾರವಾದ ನಂಬಿಕೆಯಿತ್ತು. ಹಾಗೆಂದೇ ಆತ ಅವರನ್ನು ತನ್ನ ಅಂಗರಕ್ಷಕಿಯರನ್ನಾಗಿ ನೇಮಿಸಿಕೊಳ್ಳುವದರ ಮೂಲಕ ಹೊರಜಗತ್ತಿಗೆ ಸ್ತ್ರೀಯರು ಪುರುಷರಿಗಿಂತ ಏನೂ ಕಡಿಮೆಯಿಲ್ಲ ಎಂದು ತೋರಿಸಿದ್ದ. ಮಾತ್ರವಲ್ಲ ಅವರಿಗೆ ಎಲ್ಲರಂಗಗಳಲ್ಲೂ ಸರಿ ಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ  ಹೆಣ್ಣು ಮಕ್ಕಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿರುವಂತೆ ಅಂಥ ನಿರ್ಬಂಧಗಳ್ಯಾವವನ್ನೂ ಆತ ಅವರಿಗೆ ವಿಧಿಸಿರಲಿಲ್ಲ.
 
ಗಡಾಫಿ ಒಬ್ಬ ತಿಕ್ಕಲು ಸರ್ವಾಧಿಕಾರಿಯಾದರೂ ಆತ ರಾಜಕೀಯವಾಗಿ ಬಹಳ ಚತುರನಾಗಿದ್ದ. ಇಡಿ ಆಫ್ರಿಕಾ ಖಂಡದಲ್ಲಿ ಆಫ್ರಿಕಾದ ಇತರ ಅನೇಕ ದೇಶಗಳಿಗಿಂತ ಲಿಬಿಯಾವನ್ನು ಮುಂಚೂಣಿಯಲ್ಲಿಟ್ಟಿದ್ದ. ನೆರೆರಾಷ್ಟ್ರಗಳಾದ ಟ್ಯುನಿಶಿಯಾದಲ್ಲಿ, ಈಜಿಪ್ಟ್‍ ನಲ್ಲಿ ಸರ್ಕಾರಗಳು ಉರುಳುತ್ತಿದ್ದಂತೆ ಲಿಬಿಯಾದಲ್ಲೂ ಜನರು ಬೀದಿಗಿಳಿದಿದ್ದಾರೆ ಎಂದು ನಾವೆಲ್ಲಾ ದೂರದಲ್ಲಿ ಕುಳಿತುಕೊಂಡು ಯೋಚಿಸಿದ್ದೆವು. ಆದರೆ ನಾನು ಅಲ್ಲಿ ಮೂರುವರೆ ವರ್ಷಗಳಿಂದ ಇದ್ದು (ಅಂದರೆ ಕ್ರಾಂತಿ ಏಳುವ ಮುಂಚಿನ ವರ್ಷಗಳು) ಗಮನಿಸಿದ್ದೇನೆಂದರೆ ದಂಗೆಯೇಳುವಷ್ಟು ಕೆಟ್ಟದಾಗಿ ಲಿಬಿಯಾ ಯಾವತ್ತೂ ಈ ಎರಡು ರಾಷ್ಟ್ರಗಳಂತಿರಲಿಲ್ಲ. ಅದು ಸದಾ ಪ್ರಗತಿಯ ಮುಂಚೂಣಿಯಲ್ಲಿರಲು ಕೆಲಸ ಮಾಡುತ್ತಿತ್ತು. ಏಕೆಂದರೆ ಅಭಿವೃದ್ಧಿಯ ವಿಚಾರದಲ್ಲಿ ಗಡಾಫಿಯದು ಎತ್ತಿದ ಕೈ. ಪ್ರತಿಯೊಂದು ಹಳ್ಳಿ ಹಳ್ಳಿಗೂ ಆಸ್ಪತ್ರೆ, ಶಾಲೆ, ಕಾಲೇಜು, ಬ್ಯಾಂಕು, ಪೋಸ್ಟ್ಅಫೀಸು, ಒಳ್ಳೆಯ ರಸ್ತೆ ಇನ್ನೂ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದ. ಆತ ನಿರ್ಮಿಸಿದ ನೀರಾವರಿ ಯೋಜನೆ ಇಡೀ ವಿಶ್ವದಲ್ಲೆ ಅತಿದೊಡ್ದ ನೀರಾವರಿ ಯೋಜನೆಯಾಗಿದೆ. ಇಲ್ಲಿನ ಬಹುತೇಕ ಪ್ರದೇಶ ಮರಭೂಮಿಯಾಗಿದ್ದರೂ ಅಲ್ಲಿನ ಜನಕ್ಕೆ ಕೃಷಿ ಮಾಡಲು ನೀರಾವರಿ ಯೋಜನೆಯನ್ನ ಕಲ್ಪಿಸಿಕೊಟ್ಟಿದ್ದ. ಇಲ್ಲಿನ ಜನಕ್ಕೆ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನುಉಚಿತವಾಗಿ ನೀಡಿದ್ದ. ಮಾತ್ರವಲ್ಲ ಅಲ್ಲಿನ ಬಹುತೇಕ ಪ್ರಜೆಗಳು ಸರಕಾರಿ ಕೆಲಸದಲ್ಲಿದ್ದಾರೆ.
 
ಒಂದು ವೇಳೆ ಅವರ ವಿದ್ಯಾಭ್ಯಾಸ ಮುಗಿದ ಮೇಲೆ ತಕ್ಷಣಕ್ಕೆ ಕೆಲಸ ಸಿಗದೆ ಹೋದರೆ ಅವರಿಗೆ ಆಯಾ ಹುದ್ದೆಗೆ ನಿಗದಿ ಪಡಿಸಿದಷ್ಟು ಸಂಬಳವನ್ನು ಕೆಲಸ ಸಿಗುವವರಿಗೂ ಪ್ರತಿ ತಿಂಗಳು ನೀಡುತ್ತಿದ್ದ. ಅಲ್ಲಿನ ವಿದ್ಯಾವಂತ ಯುವಕರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‍ಡಂ ಮುಂತಾದ ದೇಶಗಳಿಗೆ ಸ್ಕಾಲರ್ಶಿಪ್ಕೊಟ್ಟು ಕಳಿಸುತ್ತಿದ್ದ. ಜೊತೆಗೆ ಅವರು ಓದು ಮುಗಿಸುವವರೆಗೂ ಅವರ ವಸತಿ ಮತ್ತು ಕಾರಿನ ಖರ್ಚುವೆಚ್ಚವನ್ನು ಅವನೇ ಭರಿಸುತ್ತಿದ್ದ. ಅವರಿಗೆ ಮಾತ್ರವಲ್ಲ ಹಾಗೆ ಹೋಗುವವರ ಹೆಂಡತಿ ಮತ್ತು ಮಕ್ಕಳಿಗೆ ತಿಂಗಳಿಗೆ ಅಲ್ಲಿನ ಖರ್ಚು ವೆಚ್ಚಕ್ಕಾಗಿ ತಲಾ 3೦೦೦ ಡಾಲರ್‌ ಕೊಡುತ್ತಿದ್ದ. ನಮಗೆ ಲಂಡನ್ ಮತ್ತು ಅಮೆರಿಕಾದಲ್ಲಿ ಓದುವದು ಕನಸಿನ ಮಾತಾದರೆ ಅವರಿಗೆ ಅತಿ ಸುಲಭದಲ್ಲಿ ಎಟಕುತ್ತಿತ್ತು.
ಅಲ್ಲಿ ಕ್ರಾಂತಿ ಏಳುವ ಕೆಲವು ತಿಂಗಳುಗಳ ಮುಂಚೆಯಷ್ಟೇ ತೈಲಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ನರ ಸಂಬಳವನ್ನು ದ್ವಿಗುಣಗೊಳಿಸುವದರ ಮೂಲಕ ಹಂಚಿದ್ದ. ಶೀಘ್ರದಲ್ಲಿಯೇ ಒಂದು ದಿನಾರಿಗೆ (ಅಂದರೆ ಭಾರತದ ಆಗಿನ ಬೆಲೆ 36-37 ರೂ.ಗೆ) 6 ಲೀಟರ್‌ ನಷ್ಟು ದೊರೆಯುತ್ತಿದ್ದ ಪೆಟ್ರೋಲನ್ನು 10 ಲೀಟರಿಗೆ ಹೆಚ್ಚಿಸುವವನಿದ್ದ. ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗಾಗಿ ತಿಂಗಳಿಗೆ ಸುಮಾರು 75 (ಅಂದರೆ ಭಾರತದ ಸುಮಾರು 3500 ರೂಗಳಷ್ಟು) ದಿನಾರಗಳಷ್ಟು ಸ್ಟೈಫೆಂಡ್ ಕೊಡುವದಕ್ಕಾಗಿ ಆದೇಶ ನೀಡಿದ್ದ.
ಇಲ್ಲಿನ ಜನಕ್ಕೆ ಬಡ್ಡಿರಹಿತ ಲೋನ್ ಮೇಲೆ ವಾಸಿಸಲು ಮನೆಗಳನ್ನು ಕಟ್ಟಿಸಿಕೊಡುತ್ತಿದ್ದ. ಹಾಗೆ ನೋಡಿದರೆ ಲಿಬಿಯನ್ನರು ಆ ಸಾಲದ (ಅಸಲನ್ನು) ಐದೋ, ಆರೋ ಕಂತುಗಳನ್ನು ಕಟ್ಟಿ ಬಿಟ್ಟು ಕೈ ತೊಳೆದುಕೊಂಡು ಬಿಡುತ್ತಿದ್ದರು. ಮುಂದಿನದನ್ನು ಏಕೆ ಕಟ್ಟಲಿಲ್ಲ ಎಂದು ಕೂಡ ಆತ ಕೇಳುವದಕ್ಕೆ ಹೋಗುತ್ತಿರಲಿಲ್ಲ. ಕಾರುಗಳನ್ನು ಫ್ಯಾಕ್ಟರಿಗಳು ನಿಗದಿ ಪಡಿಸಿದದರದಲ್ಲಿಯೇ ಮಾರಾಟಮಾಡುತ್ತಿದ್ದ. ಗಡಾಫಿ ಯಾವತ್ತೂ IMFನಿಂದಾಗಲಿ, ವರ್ಲ್ಡ್ ಬ್ಯಾಂಕಿನಿಂದಾಗಲೀ ಹೆಚ್ಚಿನ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ.
ಲಿಬಿಯಾವನ್ನು ಆರ್ಥಿಕವಾಗಿ ಆದಷ್ಟೂ ಸ್ವತಂತ್ರವಾಗಿಟ್ಟಿದ್ದ. ಆತ ತೈಲ ಉತ್ಪನ್ನ ರಾಷ್ಟ್ರಗಳಿಗೆ ತೈಲ ಮಾರಾಟ ಮಾಡಿದ ಹಣವನ್ನು ಡಾಲರ್ಗಳಲ್ಲಾಗಲಿ, ಯೂರೋಗಳಾಲ್ಲಗಲೀ ಸ್ವೀಕರಿಸಬೇಡಿ ಬದಲಾಗಿ ಚಿನ್ನದ ರೂಪದಲ್ಲಿ ಸ್ವೀಕರಿಸಿ ಎಂದು ಹೇಳಿದ್ದ. ಆದರೆ ಅಮೆರಿಕಾವೂ ಸೇರಿದಂತೆ ಬೇರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತೈಲವನ್ನು ಕೊಳ್ಳುವಷ್ಟು ಚಿನ್ನವಿರಲಿಲ್ಲ. ಒಂದು ವೇಳೆ ಗಡಾಫಿ ಹೇಳಿದಂತೆ ಚಿನ್ನ ಕೊಟ್ಟು ತೈಲವನ್ನು ಕೊಂಡು ಕೊಂಡಿದ್ದರೆ ಈ ಎಲ್ಲ ರಾಷ್ಟ್ರಗಳು ದಿವಾಳಿಯೇಳುವ ಸಂಭವವಿತ್ತು. ಹೀಗಾಗಿ ಲಿಬಿಯಾದಲ್ಲಿ ಕ್ರಾಂತಿಯೊಂದು ಅನಿವಾರ್ಯವಾಯಿತು ಮತ್ತದು ಗಡಾಫಿಯ ಹತ್ಯೆಯಲ್ಲಿ ಕೊನೆಯಾಯಿತು.

‍ಲೇಖಕರು avadhi

2 April, 2013

5 Comments

  1. pravara

    ಅಲ್ಲಿನ ಚಿತ್ರಣಗಳನ್ನು ಯಥಾವತ್ತಾಗಿ ಕಟ್ಟಿಕೊಡುವ ನಿಮ್ಮ ಬರಹ ಇಷ್ಟವಾಗುತ್ತೆ… ಎಲ್ಲರೂ ಗಡಾಫಿಯನ್ನ ಒಬ್ಬ ಕೊಲೆಗಡುಕನೇನೊ ಎಂಬಂತೆ ನೋಡುವಾಗ ನಿಮ್ಮ ಲೇಖನ ನಮ್ಮ ಅಭಿಪ್ರಾಯವನ್ನು ಅಲ್ಲಗಳೆಯುತ್ತಾ ಹೋಗುತ್ತದೆ…

  2. Prasad DV

    Chenda bareyuttiri Uday ravare. Gaddafiya bagge namagidda chintanegalu mattu abhipraayagalu badalaaguvante Gaddafiyannu namma mundittiddiri. Avana saamaajika samaanateya chintanegalu mechchuvantavu. Aadare nanagarthavaagaddu, tailavannu USD athava EURO galalli maarade, chinnadalli maaruvudarinda US mattu paashchaatya raashtragalu hege aarthikavaagi divaaliyaaguttiddavu? matte taila khareedige agatya chinnavannu hegaadaru odagisi, antararaashtriya maarukatteyalli chinnada bele kusiyuvante nodikondiddare, Libya kooda atantravaaguva apaayavittu allave?
    – Prasad DV

  3. Suguna mahesh

    ಗಡಾಫಿಯ ನಿಜರೂಪ ತೆರೆದಿಟ್ಟಿದ್ದೀರಿ. ಅರಬ್ ರಾಷ್ಟ್ರಗಳಲ್ಲಿ ಅಲ್ಲಿನ ಜನರಿಗೆ ದೊರೆಯುವ ಅವಕಾಶಗಳು, ಸೌಲಭ್ಯಗಳು ನಿಜಕ್ಕೂ ಮೆಚ್ಚನಾರ್ಹ.

  4. ಅಶೋಕ ಶೆಟ್ಟರ್

    ಈ ಬರಹಗಳು ಲಿಬ್ಯ ಎಂಬ ನಮಗೆ ಹೆಚ್ಚು ಕಡಿಮೆ ಅಪರಿಚಿತವಾಗಿರುವ ದೇಶವೊಂದು ಅನುಭವಿಸಿದ ಪಲ್ಲಟಗಳನ್ನು ಚೆನ್ನಾಗಿಯೇ ಪರಿಚಯಿಸುತ್ತಿವೆ. ಲಿಬ್ಯದ ಸಮಾಜ, ಸಂಸ್ಕೃತಿ, ಬುಡಕಟ್ಟು ಜನಜೀವನವೇ ಮೊದಲಾದ ಅಂಶಗಳನ್ನು ತಾವು ಕಂಡಂತೆ ವಿವರಿಸುವ ಕೆಲ ಬರಹಗಳನ್ನೂ ಉದಯ್ ಅವರು ಬರೆಯಲಿ.

  5. Swarna

    ಲಿಬಿಯಾದ ಬಗ್ಗೆ ನಿಮ್ಮ ಬರಹಗಳು ಸೊಗಸಾಗಿವೆ. ಇಂಗ್ಲಿಷ್ ಬ್ಲಾಗ್ ಲೋಕದಲ್ಲಿ ಪ್ರಸಿಧ್ಧವಾದ ಬ್ಲಾಗ್ http://khadijateri.blogspot.in
    ದಲ್ಲಿ ಕೆಲ ಕಡೆ ಬೇರೆಯದೇ ಚಿತ್ರಣಗಳಿವೆ.ಇಲ್ಲೂ ಮತ್ತೆ ಪಾಶ್ಚಾತ್ಯರೆಂಬ ಗುರುತು ಕೆಲಸ ಮಾಡಿರಬಹುದೇ ?
    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading