ಜೆ ವಿ ವಿ ಮೂರ್ತಿ
‘ಉಕ್ತಲೇಖನ!’… ನೆನಪಿದೆಯೇ?… ಯಾರಾದರೂ ಇಂದಿನ ಪೀಳಿಗೆಗೆ ರವಾನೆ ಮಾಡಿದ್ದಾರೆಯೇ?…
ನಮಗೆ ಚಿಕ್ಕಂದಿನಲ್ಲಿ ಅಕ್ಷರಾಭ್ಯಾಸ ಮನೆಯಲ್ಲೇ ಪ್ರಾರಂಭ… ಇಂದಿನ ಹಾಗೆ ಪ್ಲೇ ಸ್ಕೂಲು, ಪ್ರಿನರ್ಸರಿ, ನರ್ಸರಿ ಅಂತ ವಿದ್ಯಾದಂಧೆಯ ನಾಟಕ ಇರಲಿಲ್ಲ!… ಪ್ರಾಮಾಣಿಕ ಕಲಿಕೆಯ ತಳಪಾಯ…
ಬಾಯಲ್ಲಿ ಉಚ್ಛರಿಸಿದ ಅಕ್ಷರ,ಪದ ಅಥವಾ ಪಠ್ಯವನ್ನು ಕರಿ ಕೈಹಲಗೆಯ ಮೇಲೆ ಬಳಪದಿಂದ ಸರಿಯಾದ ಸ್ವರ, ವ್ಯಂಜನ, ಮತ್ತು ಕಾಗುಣಿತದ ಅಭ್ಯಾಸಕ್ಕೆ, ನಂತರ ಸೂಕ್ತ ರೀತಿಯ ವಾಕ್ಯ ರಚನೆಯ ಅಭ್ಯಾಸಕ್ಕೆ ಇದು ಮೊದಲ ಪಾಠಕ್ರಮದಲ್ಲಿನ ಅರ್ಥಪೂರ್ಣ ಕಸರತ್ತು.. ಇಬ್ಬರು ಇದ್ದೇ ಇರ್ತಿದ್ರು… ಹೇಳೋರು ಬರೆಯೋರು… ಬರೆಯೋರು ತಪ್ಪು ಮಾಡಿದರೆ ಹೇಳೋರು ತಿದ್ದೋರು!… ಸ್ವಲ್ಪ ದೊಡ್ಡೋರಾದ ಮೇಲೆ ನೋಟುಪುಸ್ತಕದಲ್ಲಿ ಸೀಸದಕಡ್ಡಿ (ಪೆನ್ಸಿಲ್) ಯಿಂದ… ತಪ್ಪಾದರೆ ರಬ್ಬರಿನಿಂದ ಅಳಿಸಿ ಮತ್ತೆ ತಿದ್ದು ಅಥವಾ ಬರೆ!… ಕೆಲವರಿಗೆ ತಪ್ಪು ಮಾಡಿದಾಗ ಕೈಮೇಲೆ ಬಿದ್ದಿದೆ ಕೋಲಿಂದ ಇಲ್ಲಾ ಮೊಗಚೋಕೈಯಿಂದ “ಬರೆ!”…
ನಮ್ಮ ವಿಧವೆ ದೊಡ್ಡಮ್ಮ, ಅಕ್ಕ ಅಕ್ಕ ಅಂತ ಕರೀತಿದ್ವಿ!… ನನ್ನ ಮೊದಲ ಶಿಕ್ಷಕಿ, ಗುರು… ಸರ್ಕಾರಿ ಶಾಲೆಯಲ್ಲಿ ನೇರ ಎರಡನೇ ತರಗತಿಗೆ ಭರ್ತಿಯಾಗಲು ತಯಾರು ಮಾಡಿದಾಕೆ…. ಅಕ್ಷರ, ಪದ, ಭಾಷಾ ಬರವಣಿಗೆ ಮತ್ತು ಉಚ್ಛಾರಣಾ ಶುದ್ಧತೆಗೆ ಆಕೆ ನೀಡುತ್ತಿದ್ದ ಉಕ್ತಲೇಖನ ನನಗೆ ಅದ್ಭುತ ನೆರವು ನೀಡಿದೆ!….

ಈಗೀಗಂತೂ ಕೆಲವರ ಬರವಣಿಗೆ ಓದಿದಾಗ ಪಾಪ,ಅವರುಗಳು “ಉಕ್ತಲೇಖನ”ದ ಪರಿಚಯ ಮತ್ತು ಅಭ್ಯಾಸವಿಲ್ಲದೆ ವಂಚಿತರಾಗಿದ್ದಾರೇನೋ ಅನಿಸುತ್ತೆ!…ಮತ್ತೆ ಗುಂಡಾಗಿ, ನೇರವಾಗಿ, ಸ್ಪುಟವಾಗಿ ಕೈ ಅಲುಗಾಡದೆ ಬರೆಯುವ ಯೋಗ್ಯತೆ ಈ ಉಕ್ತಲೇಖನದಿಂದಲೇ ನಮಗೆ ದಕ್ಕಿದ್ದು!….
ಈ ಕಾರಣದಿಂದ ಎಪ್ಪತ್ತೈದರ ವಯಸ್ಸಲ್ಲೂ ನನ್ನ ಅಕ್ಷರ ಗುಂಡಾಗಿ ಸ್ಪಷ್ಟವಾಗಿ ಬೇರೆಯವರು ತಪ್ಪಿಲ್ಲದೆ ಸರಾಗವಾಗಿ ಓದಬಹುದು ಎನ್ನುವ ಹೆಮ್ಮೆ!…ಉದ್ದದ, ಒಂದು ಕಡೆಯೂ ವಿಕಾರವಾಗದ ನನ್ನ ಸಹಿ ಬ್ಯಾಂಕಿನವರಿಗೆ ಆಶ್ಚರ್ಯ!…
ಇವೆಲ್ಲದರ ಹಿಂದಿನ ಗುಟ್ಟು-ಚಿಕ್ಕವಯಸ್ಸಲ್ಲಿ ನಮಗೆ ತಪ್ಪದೆ, ನಿಗದಿಯಾಗಿ ಅಭ್ಯಾಸ ಮಾಡಿಸಿದ “ಉಕ್ತಲೇಖನ”… ಈಗ ಕಂಪ್ಯೂಟರ್ ಮೊಬೈಲು ಬಂದು ಬೆರಳುಗಳಿಗೇ ಲಕ್ವ ಹೊಡೆದಿದೆ!….ಅಕ್ಷರ ಬರೆಯುವ ಅಭ್ಯಾಸ ಮಂಗಮಾಯ!….ಅಕ್ಷರ ಮತ್ತು ಪದಗಳ ಸರಿಯಾದ ಉಪಯೋಗ ಈಗ ಕಂಪ್ಯೂಟರ್ ಅಥವಾ ಮೊಬೈಲುಗಳ ಜವಾಬ್ದಾರಿ!…. Autocorrect ಹಾಕಿ ಏನೋ ಬರೆದಿದ್ದು ಏನೋ ಆಗುತ್ತೆ!.. ಸಬ್ ಚಲ್ತಾ ಹೈ..ಈಗ!… ಬದ್ಧತೆ ಶೂನ್ಯ!…
ಉಕ್ತಲೇಖನ ಈಗ ತನಗೆ ತಾನೇ “ಸಲ್ಲೇಖನ”ವಾಗಿದೆ!(ಸಲ್ಲೇಖನ ಜೈನ ಸನ್ಯಾಸದಲ್ಲಿ ತಮಗೆ ತಾವೇ ಅಂತ್ಯ ತರಿಸಿಕೊಳ್ಳುವ ಒಂದು ವಿಧಿ)…






0 Comments