
‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಗೆ ಪಾತ್ರವಾದದ್ದು ಕೆ ಎಚ್ ಮುಸ್ತಾಫ ಅವರ ‘ಹರಾಂನ ಕಥೆಗಳು’
ಸಂಕಲನದ ಒಂದು ಕಥೆ ಮುಳಿಹುಲ್ಲಿನ ಮೂಲೆ ಅಂಗಡಿ ನಿಮ್ಮ ಓದಿಗಾಗಿ ಇಲ್ಲಿದೆ-
ಮುಸ್ತಾಫ ಕೆ ಎಚ್
೧೯೯೧ರ ಇಸ್ಲಾಮಿಕ್ ತಿಂಗಳ ಶಹಬಾನಲ್ಲಿ ಅಬ್ಬ ಅಮ್ಮಿಯ ಒತ್ತಾಯಕ್ಕೆ ಮಣಿದು ನಿಖಾಗೆ ಕಬೂಲ್ ಹೇಳಿದೆ. ಶಹಬಾನ್ ಬಿಟ್ಟರೆ ರಂಝಾ಼ನ್ ಕಳೆದು ಶೌವ್ವಾಲ್‌ಗಾಗಿ ಕಾಯಬೇಕು. ಅದಕ್ಕಾಗಿ ಆದಷ್ಟು ಬೇಗ ನಿಖಾ ಮಾಡಿ ಮುಗಿಸುವ ಎಂಬ ತಾಕೀತಿಗೆ ನಾನು ಮಣಿದದ್ದು. ನಿಖಾ ಆದ ಹೊಸತರಲ್ಲಿ ಮೂಲೆ ಅಂಗಡಿಗೆ ಬಂದಾಗ ಜಗತ್ತೇ ಬೇರೆ ಎಂದೆನ್ನಿಸಿತು. ಯಾರಬ್ಬೆ… ಯಾಕಾದ್ರು ಈ ಮನೆಯ ಕಿರಿಯ ಮಗನಾದ ಖಾದರ್‌ಗೆ ನನ್ನನ್ನು ನಿಖಾ ಮಾಡಿ ಕಳುಹಿಸಿದ್ರು? ಒಮ್ಮೆ ಈ ದರಿದ್ರ ಜಾಗದಿಂದ ಪಾರಾದರೆ ಸಾಕು ಎಂದು ಐದು ಬಾರಿಯ ನಮಾಝಿ಼ನ ಕೊನೆಯಲ್ಲಿ ಮೊರೆ ಇಟ್ಟಿದ್ದೆ. ಪಡೆದವನು ಮೊರೆಯನ್ನು ಕಬೂಲ್ ಮಾಡಿದ್ದು ಮಾತ್ರ ನಿಖಾ ಆಗಿ ಹತ್ತು ವರ್ಷ ಕಳೆದ ಬಳಿಕವೆ. ಅದೊಂದು ನಿಗೂಢ ಜಾಗ.
ನಾನು ಹುಟ್ಟಿ ಬೆಳೆದದ್ದು ಮೈಸೂರಿನ ಮಧ್ಯಭಾಗದಲ್ಲಿರುವ ಸಣ್ಣಗಲ್ಲಿಯೊಂದರ ಇಕ್ಕಟ್ಟಾದ ಮನೆಯಲ್ಲಿ. ನಾನೇ ಕೊನೆಯವಳು. ಮನೆಯ ಪಕ್ಕದ ರಸ್ತೆಯಲ್ಲಿ ತಳ್ಳುಗಾಡಿಗಳು, ಅಕ್ಕಪಕ್ಕದ ಮನೆಯವರು ಒಣಗಲು ಹಾಕಿದ ಬಟ್ಟೆಗಳಿಗೆ ಗಾಳಿಬಡಿಯುತ್ತಾ ಶಬ್ದ ಮಾಡುವುದು; ರಸ್ತೆಯಲ್ಲೇ ತಮ್ಮ ದಿನನಿತ್ಯದ ಕೆಲಸಗಳನ್ನು ಅಸಹ್ಯವಿಲ್ಲದೆ ಮಾಡುವ ಜನರ ಗುಂಪು; ಕೆಲವು ಬಾರಿ ಕೊಮಟಿ ವಾಕರಿಕೆ ಬರುವಷ್ಟು ಕಕ್ಕಸ್ಸಿನ ಗಲೀಜು ನಾತ. ಅಲ್ಲೇ ಚರಂಡಿಯಲ್ಲಿ ಹರಿಯುವ ಅವರಿವರ ಬಚ್ಚಲ ನೀರು. ಮಾರುದೂರದ ಕಸದ ತೊಟ್ಟಿಯಲ್ಲಿ ರಾತ್ರಿ ಮಾಡಿದ ಬಿರಿಯಾನಿಯ ಮೂಳೆಗಳಿಗಾಗಿ ಕಾದಾಡುವ ನಾಯಿಗಳ ಗಲಾಟೆ. ಸದಾ ಜನರ ಗಿಜಿಗುಡುವ ಮಾತುಕಥೆ. ಪಕ್ಕದಲ್ಲೇ ಯೂನುಸ್ ಖಾನ್‌ನ ಕಸಾಯಿಖಾನೆ; ಅಲ್ಲಿ ಚರ್ಮಸುಲಿದು ತೂಗು ಹಾಕಿದ ಇಡಿದೇಹದ ಕುರಿಯಿಂದ ತೊಟ್ಟಿಕ್ಕುವ ರಕ್ತ. ಜೊತೆಗೆ ಚರ್ಬಿ ತುಂಬಿಕೊಂಡ ಕುರಿಗಳ ಗಮ್ಮೆನ್ನುವ ಮಾಂಸದ ವಾಸನೆ. ತಲೆಮಾಂಸ, ಬೋಟಿಮಾಂಸ, ಕೀಮಾ, ಪುಡಿಮಾಂಸ ಎಂದು ಕೂಗುಹಾಕಿ ಮಾರುವ ಖಾನ್‌ನ ಪಟಾಲಂ. ಯಾರದೋ ಅಡುಗೆ ಮನೆಯಲ್ಲಿ ಶುಂಠಿ ಬೆಳ್ಳುಳ್ಳಿ ಮೆಣಸು, ಅರಶಿಣ ಬೆರಸಿ ಬೇಯಲಿಟ್ಟ ಮಾಂಸದ ಪರಿಮಳ. ಅಲ್ಲಲ್ಲಿ ಗಡ್ಡಬಿಟ್ಟು ಅತ್ತರು ಪೂಸಿದ ಜುಬ್ಬಾದಾರಿಗಳು. ರಸ್ತೆಯಂಚನ್ನು ದಾಟಲು ಹಿಂದೇಟು ಹಾಕುವ ನನ್ನಂತಹ ಬುರ್ಕಾಧಾರಿಗಳು. ರಸ್ತೆಯ ಕೊನೆಯಲ್ಲಿ ಮಸ್ತಾನ್ ಬಾಬರ ದರ್ಗಾ. ಅದರ ಮುಂದೆ ಒಂದಿಷ್ಟು ಲೋಬಾನ ಅತ್ತರು, ಕಿತಾಬು, ತಸ್ಬಿ, ಕರ್ಜೂರ ಮಾರುವ ವ್ಯಾಪಾರಿಗಳು. ದರ್ಗಾದ ದ್ವಾರದ ಮುಂದೆ ಸಾಲಾಗಿ ನಾ ಮುಂದು ತಾ ಮುಂದು ಎಂದು ಬೇಡುವ ಫಕೀರರ ಗುಂಪು. ದರ್ಗಾಕ್ಕೆ ಅಂಟಿಕೊಂಡಂತೆ ಇರುವ ಮೊಹಲ್ಲಾದ ಬದ್ರಿಯಾ ಜುಮ್ಮಾ ಮಸೀದಿ. ಅಯ್ಯೋ ಎಷ್ಟು ಚೆಂದದ ನೆನಪುಗಳದು. ಫ಼ಜರ್‌ನ ಮೊದಲ ಧ್ವನಿ ಮುಂಜಾವಿನ ಸೂರ್ಯನ ಕಿರಣ ಬರುವುದಕ್ಕೂ ಮೊದಲು ಮೊಹಲ್ಲಾದ ಮಸೀದಿಯಲ್ಲಿ ಆಝಾ಼ನ್ ರೂಪದಲ್ಲಿ ಮೊಳಗುತ್ತದೆ. ಅದೇ ಜನ್ನತ್ ಎಂದು ಭಾವಿಸಿದ್ದ ನನಗೆ ಈ ಹಳ್ಳಿಯ ಬದುಕು ಯಾಕೋ ತುಂಬಾ ದುಃಖವನ್ನುಂಟು ಮಾಡಿತ್ತು. ಹಳ್ಳಿ ಎನ್ನುವುದಕ್ಕಿಂತಲೂ ಬೇರೆ ಏನಾದರೂ ಹೇಳಬಹುದು. ಈ ಮೂಲೆ ಅಂಗಡಿಗೆ.
ನನ್ನ ಅಬ್ಬಾ ಅಬ್ದುಲ್ಲಾ ಪಕ್ಕದ ಲಸ್ಕರ್ ಮೊಹಲ್ಲಾದಲ್ಲಿ ಮೆಕಾನಿಕ್ ಗ್ಯಾರೇಜ್‌ನ ಮಾಲೀಕ; ಸದಾ ಆಯಿಲ್, ಗ್ರೀಸ್ ತುಂಬಿದ ಅದೇ ಬಟ್ಟೆಯಲ್ಲಿಯೇ ಓಡಾಡುವಾತ. ನಾವು ಎಂಟು ಮಂದಿ ಮಕ್ಕಳಲ್ಲಿ ನಾನೇ ಕೊನೆಯವಳು. ಉಳಿದವರಲ್ಲಿ ನಾಲ್ಕು ಜನ ಅಕ್ಕಂದಿರಿಗೂ ಮದುವೆಯಾಗಿದೆ. ಮೂವರು ಅಣ್ಣಂದಿರು ಅಬ್ಬನ ಜೊತೆಗೆ ಗ್ಯಾರೇಜ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಇದೇ ಕಾರಣಕ್ಕಾಗಿಯೇ ಅರಬಿ ಮದರಸಾ ಕನ್ನಡ ಶಾಲೆಯಲ್ಲಿ ಹತ್ತನೆಯ ತರಗತಿಯವರೆಗೂ ಓದುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ ಸರಿ. ಆ ಕಾಲಕ್ಕೆ ಹತ್ತನೆ ತರಗತಿ ಎಂದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಬಹುದೊಡ್ಡ ಓದಾಗಿತ್ತು. ಮನೆಯ ಪಕ್ಕದಲ್ಲಿ ಉರ್ದುಶಾಲೆ ಇದ್ದರೂ ನನ್ನ ಅಬ್ಬ ಕನ್ನಡ ಶಾಲೆಗೆ ಹಾಕಲು ಕಾರಣವು ಇತ್ತು. ನನ್ನ ಅಮ್ಮಿ ಫಾತಿಮ ಕೊಡಗಿನ ಸಂಪಿಗೆಪುರದವಳು. ಮಲಯಾಳಂ ಮಿಶ್ರಿತ ಮಲಾಮೆ ಎಂಬ ಭಾಷೆಯನ್ನು ಮಾತನಾಡುತ್ತಾಳೆ. ಅಬ್ಬ ಮೈಕಾಲದ ಪಾಣೆಮಂಗಳೂರಿನ ಬ್ಯಾರಿ. ಹೊಟ್ಟೆ ಪಾಡಿಗಾಗಿ ಮೈಸೂರಿನಲ್ಲಿ ನೆಲೆಸಿ ಅದಾಗಲೇ ನಲವತ್ತು ವರ್ಷ ಕಳೆದಿದೆ. ಯಾವತ್ತಿದ್ದರೂ ತನ್ನ ಹಿರಿಯರು ಬದುಕಿ ಬಾಳಿದ ಊರಿಗೆ ಮರಳಬೇಕು ಎಂಬ ಆಸೆ ಅಬ್ಬನಲ್ಲಿ ಸದಾ ಇದ್ದದ್ದೆ. ಉರ್ದು ಹನಫಿಗಳ ಭಾಷೆ; ನಾವು ಶಾಫಿ ಮದ್ಹಬ್ ಪಾಲಿಸುವವರು. ನಮಗೆ ಅರೇಬಿ ಜೊತೆಗೆ ಕನ್ನಡ ಸಾಕು ಎಂಬ ಭಾಷಾ ಪ್ರೇಮದ ಮತ್ತು ಮದ್ಹಬ್ ಪ್ರೇಮ ಅಬ್ಬನಲ್ಲಿತ್ತು. ಆದರೂ ಸಹ ಹನಫಿಗಳಂತೆ ಉರ್ದುನಲ್ಲೆ ಅಬ್ಬ ಅಮ್ಮಿ ಎಂದು ಕರೆಯುತ್ತಿದ್ದ ನನಗೆ ಮೂಲೆಅಂಗಡಿಗೆ ಬಂದ ನಂತರವೇ ಮಲಾಮೆಯಲ್ಲಿ, ಬ್ಯಾರಿಯಲ್ಲಿ ಬಾಪ ಉಮ್ಮ ಎಂಬ ಪದ ಬಳಸುತ್ತಾರೆ ಎಂದು ಗೊತ್ತಾದದ್ದು.

ಅಂತೂ ಅಮ್ಮಿಯ ಅಣ್ಣನ ಮಗನಾದ ಖಾದರ್ ಜೊತೆಗೆ ನಿಖಾ ಏರ್ಪಾಡಾದಾಗ ತುಂಬಾ ಭಯಗೊಂಡಿದ್ದೆ. ಕಾರಣ ಆವರೆಗೂ ನೋಡದಿರುವ ಊರೊಂದಕ್ಕೆ ಹೋಗುತ್ತಿದ್ದೇನೆ; ಅಲ್ಲಿನ ಜನ ಮಲಾಮೆ ಮಾತನಾಡುವವರು ನನಗೆ ಬ್ಯಾರಿ, ಉರ್ದು, ಕನ್ನಡ ಬಿಟ್ಟು ಬೇರೇನೂ ಬರುತ್ತಿರಲಿಲ್ಲ. ಅಂತೂ ಎಲ್ಲರ ಇಷ್ಟದಂತೆ ನಮ್ಮ ಗಲ್ಲಿಯ ಶಾದಿಮಹಲಿನಲ್ಲಿ ಸಣ್ಣದಾಗಿ ನಿಖಾ ಮುಗಿದಿತ್ತು. ಈಗಲೂ ನೆನಪಿದೆ ಮೂರು ಪವನಿನ ಅಲೀಕತ್ತು ಮಹರಾಗಿ ನೀಡಿದ್ದರು ನನ್ನವರು. ಇನ್ನು ಮುಂದೆ ನೂರಾರು ಕಿಲೋಮೀಟರ್ ದೂರದ ಕೊಡಗಿನ ಪುಟ್ಟ ಹಳ್ಳಿಯೇ ನನ್ನ ಬದುಕಿನಲ್ಲಿ ದೀರ್ಘಕಾಲ ಕಳೆಯುವ ಜಾಗ ಎಂದು ನೆನೆದಾಗಲೇ ಹನಿಗಣ್ಣಾಗಿ ಕಲ್ಪಿಸಿಕೊಳ್ಳಲಾರದಷ್ಟು ನೋವನ್ನು ನುಂಗಿಕೊಂಡೆ. ಆ ಕಾಲದಲ್ಲಿ ಮೈಸೂರಿನಿಂದ ಮೂಲೆಅಂಗಡಿಗೆ ಎಂಟುಗಂಟೆಯ ಬಸ್ಸು ದಾರಿ.
ಮೊದಲ ಬಾರಿ ಮನೆ ಬಿಟ್ಟು ಮೂಲೆ ಅಂಗಡಿ ತಲುಪುವಾಗ ಮಧ್ಯರಾತ್ರಿಯಾಗಿತ್ತು. ಶಹಬಾನಿನ ಪೂರ್ಣ ಚಂದಿರ ಮೂಲೆ ಅಂಗಡಿಯ ಅಂಗಳದಲ್ಲಿ ಮಲ್ಲಿಗೆಯಂತೆ ಅರಳಿತ್ತು. ಮನೆಯ ಮುಂದೆ ದೊಡ್ಡ ಸಂಪಿಗೆಯ ಮರ ಹೂ ಬಿಟ್ಟು ಗಾಢ ಸುವಾಸನೆಯನ್ನು ಹಬ್ಬಿಸಿತ್ತು. ಸುತ್ತಮತ್ತಲಿನ ತೋಟದಿಂದ ಹುಳ ಕೀಟಗಳ ಗುಯ್‌ಗುಡುವ ಸದ್ದಿನೊಂದಿಗೆ ಮನೆಯ ಒಳಗೆ ಗವ್ವೆನ್ನುವ ಕಗ್ಗತ್ತಲು. ಮೂಲೆಅಂಗಡಿ ಮೈಸೂರಿನ ಮನೆಯಂತಿರುವ ಮನೆಯಲ್ಲ ಎಂಬುದು ಆ ನಂತರವೆ ಅರಿವಿಗೆ ಬಂದದ್ದು. ಮುಳಿಹುಲ್ಲನ್ನಾಕಿದ, ಮಣ್ಣನ್ನೆ÷್ಹ ದೊಡ್ಡ ಗಾತ್ರದಲ್ಲಿಟ್ಟು ಬಿದಿರನ್ನು ಬಳಸಿ ಕಟ್ಟಿದ ಮನೆಯದು. ಮಧ್ಯರಾತ್ರಿ ನಾವುಗಳು ಮನೆ ಸೇರುವಾಗ ಹಜಾರದ ತುಂಬಾ ನೆಂಟರು, ಬಂಧು ಬಳಗದವರು ಉದ್ದುದ್ದದ ಮರದ ಬೆಂಚುಗಳಲ್ಲಿ ಮಲಗಿ ಕೊಂಡಿದ್ದರು. ನೆಲವು ಸಹ ಮಣ್ಣಿನದ್ದೆ. ನಗರದ ಗಲ್ಲಿಗಳಲ್ಲಿ ಮಧ್ಯರಾತ್ರಿ ಒಂದು ಗಂಟೆಯಾದರೂ ಗಿಜಿಗುಡುವ ಸದ್ದಿನ ಜೊತೆಗೆ ವಿದ್ಯುತ್ ದೀಪಗಳ ಬೆಳಕಿನಲ್ಲೇ ಬೆಳೆದ ನನಗೆ ಈ ಮನೆಯ ಬುಡ್ಡಿದೀಪ, ಸೀಮೆ ಎಣ್ಣೆಯ ಕಂದೀಲಿನ ಬೆಳಕು ಮನಸ್ಸನ್ನು ಮೌನಮುಖಿಯನ್ನಾಗಿಸಿತು.
ಮೊದಲ ರಾತ್ರಿ ಹೇಗೆ ಕಳೆಯಿತು ಎಂಬುದು ಈ ಹೊತ್ತಿಗೂ ನೆನಪಿನಲ್ಲಿ ಉಳಿದಿಲ್ಲ. ಎಷ್ಟು ನೆನಪಿಸಿಕೊಂಡರೂ ಆ ಮಧುರ ಕ್ಷಣ ನನ್ನ ಭಾವಲೋಕದಲ್ಲಿ ಉಳಿಯದೆ ಇದ್ದದ್ದು ಮಾತ್ರ ಸೋಜಿಗವೇ ಸರಿ. ಅಂದು ಫ಼ಜರ್‌ನ ಆಝಾ಼ನ್ ಕೇಳಲೇ ಇಲ್ಲ. ಕಾರಣ ಮಸೀದಿ ಮೂಲೆ ಅಂಗಡಿಯಿಂದ ಐದು ಕಿಲೋಮೀಟರ್ ದೂರದಲ್ಲಿತ್ತು. ಬೆಳಗ್ಗೆ ಎದ್ದಾಗ ದೊಡ್ಡ ಆಶ್ಚರ್ಯವೊಂದು ಕಾದಿತ್ತು. ಇಡೀ ಹಜಾರವು ಸಣ್ಣ ಮಟ್ಟಿಗಿನ ಹೋಟೆಲಾಗಿ ಬದಲಾಗಿತ್ತು. ರಾತ್ರಿ ನೆಂಟರು ಮಲಗಿದ್ದ ಮರದ ಬೆಂಚು ಟೇಬಲ್‌ಗಳಲ್ಲಿ ಜನ ಕುಳಿತಿದ್ದರು. ಸಮೀಪದ ಕೋಣೆಯಲ್ಲಿ ದಿನಸಿವಸ್ತುಗಳ ಅಂಗಡಿಯು ಮುಳಿಹುಲ್ಲಿನ ಹಜಾರವನ್ನು ವ್ಯಾಪಿಸಿಕೊಂಡಿತ್ತು. ಅಡುಗೆ ಕೋಣೆಯಲ್ಲಿ ಅತ್ತೆ ನಾದಿನಿಯರು ನನ್ನವರು ಎಲ್ಲರೂ ಸೇರಿ ಹೋಟೆಲ್‌ಗೆ ಬಂದ ಜನರಿಗೆ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸುತ್ತಿದ್ದರು. ಅದೇ ಮೊದಲು ದೊಡ್ಡ ಕಡಾಯಿಯೊಂದರಲ್ಲಿ ನೀರನ್ನಿಟ್ಟು ಅದರ ಬಾಯಿಗೆ ಸಣ್ಣ ರಂಧ್ರಮಾಡಿ ಟೀಪುಡಿಯನ್ನಾಕಲು ಬಟ್ಟೆಚೀಲ ತಯಾರಿಸಿ ತಳಕ್ಕೆ ಕೆಂಡವನ್ನಾಕಿ ಚಾಯ ಕಾಯಿಸುವ ವಿಧಾನವನ್ನು ಕಂಡದ್ದು. ಇದು ಕೇರಳದ ಸಮೂರ್ ಎಂಬ ಪಾತ್ರೆಯಂತೆ.
ಮೈಸೂರಿನ ಮನೆ ಇಕ್ಕಟ್ಟಾಗಿದ್ದರೂ ಮನೆಯಲ್ಲಿ ಕಕ್ಕಸ್ಸಿನ ಕೋಣೆ ಇತ್ತು. ಈ ಮೂಲೆ ಅಂಗಡಿಯಲ್ಲಿ ಅದು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗದೆ ಅತ್ತೆಯ ಬಳಿ ಕೇಳಿದೆ. ಅವರು ನನ್ನನ್ನು ಮುಳಿಹುಲ್ಲಿನ ಮನೆಯ ಹಿಂಭಾಗದ ಕಾಫಿತೋಟದ ಕಡೆ ಕೈಮಾಡಿ ತೋರಿಸಿದರು. ಆಗಲೇ ಗೊತ್ತಾದದ್ದು ಅವರೆಲ್ಲರೂ ಸಣ್ಣ ಬಕೇಟಿನಲ್ಲಿ ನೀರು ತುಂಬಿಕೊಂಡು ಕಾಫಿ ತೋಟದ ಗಿಡಗಳ ಮರೆಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದರೆಂದು. ಅದೇ ಮೊದಲ ಬಾರಿಗೆ ಏನೋ ಒಂದು ರೀತಿಯ ನಾಚಿಕೆ, ಅಸಹ್ಯ ಅದರ ಜೊತೆಗೆ ಯಾರಾದರೂ ನೋಡಿಯಾರೋ ಎಂಬ ಭಯ ಬೇರೆ. ಕಕ್ಕಸ್ಸಿಗೆ ಕುಳಿತಾಗ ತೋಟದ ಪೊದೆಗಳ ನಡುವೆ ಅಡಗಿರುವ ಹಾವೋ, ಚೇಳೋ ಕಚ್ಚಿದ್ರೆ ಏನ್‌ಗತಿ? ಎಂಬ ಭಯದಲ್ಲಿಯೇ ಕುಳಿತೆ. ಮೊದಲ ಬಾರಿ ಆ ರೀತಿ ಕುಳಿತು ಮಾಡಿದ ಅನುಭವ. ಅಷ್ಟೋ ಇಷ್ಟೋ ಕೆಲಸ ಮುಗಿಸಿದೆ. ಆ ಹೊತ್ತಿನ ಪರಿಸ್ಥಿತಿ ನೆನೆದು ನಾನೇ ಮರುಗಿದೆ.
ಈ ಮೂಲೆ ಅಂಗಡಿಯಲ್ಲಿ ಅಂಗಡಿಯೂ ಇತ್ತು ಹೋಟೇಲು ಇತ್ತು. ಇಲ್ಲಿನ ಸ್ಥಿತಿಯನ್ನು ಊಹಿಸಲು ಅಸಾಧ್ಯವಾಗಿತ್ತು. ಒಂದು ಕಡೆ ಮಲಾಮೆ ಭಾಷೆ ಮಾತನಾಡುವ ಜನರ ಮಧ್ಯೆ ಕನ್ನಡದಲ್ಲಿಯೇ ಮಾತನಾಡುವ ಸ್ಥಿತಿ; ಎಲ್ಲವನ್ನೂ ಅರ್ಥಮಾಡಿಕೊಳ್ಳಲು ವಸ್ತುಗಳ ಪರಿಚಯ ಮಾಡಿಕೊಳ್ಳಲು ಒಂದು ತಿಂಗಳಿಗೂ ಅಧಿಕ ಸಮಯಬೇಕಾಯಿತು. ಮತ್ತೊಂದು ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ನಗರದಲ್ಲಿರಬೇಕಾದರೆ ರಸ್ತೆ ಪಕ್ಕದ ಸಾರ್ವಜನಿಕ ನಲ್ಲಿಯಿಂದ ನೀರು ತರುವ ಕೆಲಸ ಮಾತ್ರ ಇತ್ತು. ಹಾಗೆಲ್ಲಾ ರಸ್ತೆಗಿಳಿಯಬೇಕಾದರೆ ತಲೆಗೆ ಮಫ್ತಾ ಹಾಕಿಕೊಂಡು ಮೈ ಪೂರ್ತಿ ಮುಚ್ಚುವ ಕಮೀಸ್ ಹಾಕಬೇಕಿತ್ತು. ಮೂಲೆ ಅಂಗಡಿ ಇದ್ದದ್ದು ಒಂದು ಮೂಲೆಯಲ್ಲಿಯೇ. ಸುತ್ತಮುತ್ತಲ ನಾಲ್ಕು ಕಿಲೋಮೀಟರ್ ದೂರಕ್ಕೆ ಮೂಲೆಅಂಗಡಿಯೊAದೆ ಹೋಟೆಲು ಕಂ ಅಂಗಡಿಯಾಗಿತ್ತು. ಸುತ್ತಮುತ್ತ ದಟ್ಟ ಕಾಫಿತೋಟದಿಂದ ಕಂಗೊಳಿಸುತ್ತಿದ್ದ ಈ ಪ್ರದೇಶವನ್ನು ಬ್ರಿಟೀಷರು ಬ್ಲೂಮೂನ್ ಕಾಫಿಪ್ಯಾಂಟೇಷನ್ ಎಂದು ಕರೆಯುತ್ತಿದ್ದರು. ರಾತ್ರಿಯ ಹೊತ್ತು ಶುಭ್ರ ನೀಲಾಗಸ ಕಾಣುವುದರಿಂದಲೇ ಈ ಹೆಸರು ಬಂದಿದೆ ಎಂದು ನಮ್ಮವರು ಹೇಳುತ್ತಿದ್ದರು. ಲಕ್ಷ್ಮಿಜಾಲ , ಗಣೇಶ ಎಸ್ಟೇಟ್, ಸಿಸಿಎಲ್ ನಂತಹ ದೊಡ್ಡದೊಡ್ಡ ತೋಟಗಳಿಗೆ ತಮಿಳುನಾಡು, ಸಿಲೋನ್‌ನಿಂದ ಅಣ್ಣಾಚ್ಚಿಗಳು, ಉತ್ತರ ಕರ್ನಾಟಕದಿಂದ ಲಂಬಾಣಿಗಳು, ಹಾಸನ ಭಾಗದಿಂದ ಮೂಡುಸೀಮೆಯ ಕೂಲಿಯಾಳುಗಳು ಕುಟುಂಬ ಸಮೇತರಾಗಿ ಕೆಲಸಕ್ಕಾಗಿ ಬರುತ್ತಿದ್ದರು. ಅವರಿಗೆ ಚಹ, ಕಾಫಿ, ಬನ್ಸ್, ವಡೆ, ಹುಳ್ಳಿವಡೆ. ಬೆಲ್ಲದ ಹುಂಡೆ, ಅಚ್ಚಪ್ಪ, ಪುಟ್ಟ್, ದೋಸೆ, ಹಡೆಯಂತಹ ತಿಂಡಿಗಳ ಜೊತೆಯಲ್ಲಿ ಅಕ್ಕಿ, ಮೆಣಸು, ಉಪ್ಪು ಆದಿಯಾಗಿ ಎಲ್ಲವೂ ಈ ಮೂಲೆಅಂಗಡಿಯಲ್ಲಿ ಸಿಗುತ್ತಿತ್ತು. ದಿನವೂ ಮೂರರಿಂದ ನಾಲ್ಕು ಕಲ್ಲು ಅಕ್ಕಿ ಹಿಟ್ಟನ್ನು ರುಬ್ಬುವ ಕೆಲಸದ ಜೊತೆಗೆ ಮೂಲೆ ಅಂಗಡಿಯಿAದ ಎರಡು ಕಿಲೋಮೀಟರ್ ದೂರದಲ್ಲಿರುವ ಮಂಡೋಟಿ ತೋಟದ ಕೆರೆಯಿಂದ ಬಿಂದಿಗೆಯಲ್ಲಿ ನೀರು ತರುವ ಕೆಲಸವು ನನ್ನ ಹೆಗಲಿಗೆ ಬಿತ್ತು. ಆದರೆ ಇಲ್ಲಿ ನಗರದಂತೆ ನೀರು ತರುವಾಗ ಮಪ್ತಾ ಹಾಕಬೇಕು, ಕಮೀಜ಼್ ಹಾಕಬೇಕೆಂಬ ಒತ್ತಾಯವಿರಲಿಲ್ಲ. ಮಳೆಗಾಲದಲ್ಲಿ ಜಿಗಣೆಗಳು ರಕ್ತ ಹೀರುವಾಗಲಂತು ಭಯಬೀತಗೊಂಡಿದ್ದೆ. ನೀರು ತರಲು ತೆರಳುವಾಗ ಮಂಡೋಟಿ ತೋಟದ ಕಿತ್ತಳೆ ಗಿಡಗಳಿಂದ ಹಣ್ಣುಗಳನ್ನು ಕದ್ದು ಬಿಂದಿಗೆಯಲ್ಲಿ ತುಂಬಿಸಿ ತಂದು ಉಪ್ಪು ಖಾರಹಾಕಿ ತಿನ್ನುತ್ತಿದ್ದೆ; ಅದರ ಮಜವೇ ಬೇರೆ. ಕೆಲವು ಬಾರಿ ಹೋಟೆಲಿನ ಹಾಲಿನ ಪಾತ್ರೆಯಲ್ಲಿ ಹಾಲು ಕುದಿಕುದಿದು ತಳ ಸೀದದ್ದಕ್ಕೆ ಸಕ್ಕರೆ ಹಾಕಿ ತಿಂದದ್ದು ಇದೆ. ಕೆಲವೇ ಕೆಲವು ಸಂತಸಗಳ ನಡುವೆ ಹಲವು ಕಷ್ಟಗಳ ಬವಣೆಯಲ್ಲಿ ಬದುಕನ್ನು ಹಸನಾಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕಕ್ಕಸಿನ ಕೋಣೆಕಟ್ಟಿಸಬೇಕೆಂದು ಮನಸ್ಸಿನಲ್ಲಿಯೇ ಲೆಕ್ಕಾಚಾರ ಮಾಡಿದೆ.
ನನ್ನವರು ಹತ್ತಿರವಾದಾಗಲೆಲ್ಲಾ ಒಂದು ಕಕ್ಕಸ್ಸಿನ ಮನೆಯನ್ನು ಕಟ್ಟುವಂತೆ ಪದೇ ಪದೇ ಒತ್ತಾಯಿಸುತ್ತಿದ್ದೆ. ಅವರು ಸಹ ಹಾಂ ಹೂ ಎಂದು ಒಪ್ಪುತ್ತಿದ್ದರೇ ಹೊರತು ಕಕ್ಕಸ್ಸಿನ ಕೋಣೆಯನ್ನು ಕಟ್ಟುವ ಗೋಜಿಗೂ ಹೋಗಲಿಲ್ಲ. ಕೊನೆಕೊನೆಗೆ ಇವರ ನಡವಳಿಕೆ ಕಂಡು ಬೇಸತ್ತು ಅವರು ಹತ್ತಿರ ಬಂದಾಗಲೆಲ್ಲಾ ದೂರತಳ್ಳುವುದು, ಅವರ ಜೊತೆ ಹಾಸಿಗೆ ಹಂಚಿಕೊಂಡು ಮಲಗುವುದನ್ನು ಬಿಟ್ಟೆ. ಒಂದು ವಾರ ಕಥೆ ಹೀಗೆ ಮುಂದುವರೆದಾಗ ದಿಢೀರ್ ಎಂದು ಕಚ್ಚಾ ಕಕ್ಕಸ್ಸು ಗುಂಡಿಯನ್ನು ತೆಗೆಯಲು ಹೋಟೆಲಿಗೆ ಬರುತ್ತಿದ್ದ ತಮಿಳುನಾಡಿನ ಅಣ್ಣಾಚ್ಚಿಗಳಿಗೆ ಹೇಳಿದರು. ಅವರು ಸಹ ಗುದ್ದಲಿ, ಹಾರೆ, ಪಿಕಾಸುಗಳಿಂದ ದೊಡ್ಡ ಹೊಂಡವೊಂದನ್ನು ತೋಡಿ ಅದರ ಮಧ್ಯಕ್ಕೆ ಕಾಲಿಡಲು ಎರಡು ದೊಡ್ಡ ಮರದ ಹಲಗೆಯನ್ನಾಕಿ, ಸುತ್ತಲು ಮತ್ತು ಮೇಲ್ಚಾವಣಿಗೆ ತೆಂಗಿನ ಗರಿಯ ತಡಿಕೆಯನ್ನು ಹಾಕಿ ಕಕ್ಕಸ್ಸು ಮನೆ ಮಾಡಿಕೊಟ್ಟರು. ಮೊದಲ ಬಾರಿಗೆ ಅದರೊಳಗೆ ಹೋದಾಗ ಏನೋ ಒಂದು ಖುಷಿ. ಅಂತೂ ಇಂತೂ ಪೊದೆ ಅಡಗಿ ಕುಳಿತುಕೊಳ್ಳುವ ಕರ್ಮ ತಪ್ಪಿತಲ್ಲ ಎಂದು. ಆದರೆ ಬಕೇಟ್‌ನಲ್ಲಿ ನೀರು ತೆಗೆದುಕೊಂಡು ಹೋಗುವ ಕರ್ಮ ಮಾತ್ರ ತಪ್ಪಿರಲಿಲ್ಲ. ಇದರ ಜೊತೆಗೆ ನಿರಾಶೆಯೊಂದು ಕಾದಿತ್ತು; ಹೊಲಸೆಲ್ಲವೂ ದಿನದಿಂದ ದಿನಕ್ಕೆ ಆ ಗುಂಡಿಯಲ್ಲಿ ತುಂಬುತ್ತಾ ಹೋದಂತೆ ಮತ್ತೆ ಪಜೀತಿ ಶುರುವಾಯಿತು. ಝೂ಼ಯ್ ಝೂ಼ಯ್ ಎಂದು ನೋಣಗಳೆಲ್ಲವೂ ಮುತ್ತಿಕೊಳ್ಳಲಾರಂಭಿಸಿತು. ವಿಪರೀತ ವಾಸನೆಯಿಂದ ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವ ಸ್ಥಿತಿ ಆ ಕಕ್ಕಸ್ಸು ಗುಂಡಿಯಿAದ ನಿರ್ಮಾಣವಾಯಿತು. ಕೆಲವು ಬಾರಿ ಗುಂಡಿಯಿAದ ಗಲೀಜು ಬೆನ್ನಿಗೆ ಎರಚುತ್ತಿತ್ತು. ತೋಟದ ಗಿಡದ ಕೆಳಗೆ ಕಕ್ಕಸ್ಸು ಮಾಡುತ್ತಿದ್ದಾಗ ಒಳ್ಳೆ ಗಾಳಿಯನ್ನಾದರೂ ಉಸಿರಾಡಬಹುದಿತ್ತು. ಆದರೆ ಈಗ ಆ ಭಾಗ್ಯವೂ ತಪ್ಪಿಹೋದದ್ದು ಮಾತ್ರವಲ್ಲ ಗಬ್ಬುನಾಥದ ಜೊತೆ ಗುದ್ದಾಡಲಿಕ್ಕಾಗಿ ಉಸಿರುಕಟ್ಟಿ ಕುಳಿತುಕೊಳ್ಳುವಂತಾಯಿತು. ಒಂದಿಷ್ಟು ದಿನಗಳಲ್ಲಿ ಆ ನಾತಕ್ಕೆ ನನ್ನ ಮೂಗು ಒಗ್ಗಿತು.
ಮೂಲೆ ಅಂಗಡಿಗೆ ದಿನಪತ್ರಿಕೆ ಬರುತ್ತಿದ್ದದ್ದೂ ಶನಿವಾರದ ಸಂತೆಯ ದಿನ ಮಾತ್ರ; ಅದು ಅಂಗಡಿಯಲ್ಲಿ ಮೆಣಸು, ಸಂಬಾರ, ಹುಳಿ ಕಟ್ಟಿಕೊಡಲು ಬಳಕೆಯಾಗುತ್ತಿತ್ತು. ಒಮ್ಮೆ ನನ್ನವರ ಅಕ್ಕನ ಗಂಡ ದುಬೈನಿಂದ ಒಂದು ಟೇಪ್‌ರೆಕಾರ್ಡ್ ಅನ್ನು ಇವರಿಗೆ ನೀಡಿದ್ದರು. ಅದರಲ್ಲಿ ರೇಡಿಯೂ ಸಹ ಇತ್ತು. ಅದಕ್ಕೆ ಬ್ಯಾಟರಿ ಹಾಕಿ ಹಾಡಿಸುತ್ತಿದ್ದರಿಂದ ಹೋಟೆಲಿಗೆ ಬರುತ್ತಿದ್ದ ತೋಟಕಾರ್ಮಿಕರು ಖುಷಿಯಾಗುತ್ತಿದ್ದರು. ಪ್ರತಿ ಶನಿವಾರ ಸಿಲೋನ್ ಆಕಾಶವಾಣಿ ಕೇಂದ್ರದಿAದ ಹಿಂದಿ, ತಮಿಳು, ಮಲಯಾಳಂ ಚಿತ್ರಗೀತೆಗಳು, ಮಾಪ್ಪಿಳ್ಳಪಾಟ್‌ಗಳು ಬರುತ್ತಿದ್ದವು. ಹಾಡನ್ನು ಕೇಳುತ್ತಲೇ ನಾನು ಒಂದಿಷ್ಟು ಸಂತಸ ಅನುಭವಿಸುತ್ತಿದ್ದೆ.
ಇದೇ ಹೊತ್ತಿನಲ್ಲಿ ಆ ಟೇಪ್‌ರೆಕಾರ್ಡರ್ ಮೇಲೆ ಕಳ್ಳರ ಕೆಟ್ಟಕಣ್ಣು ಬಿದ್ದಿತ್ತು. ಅಂದು ಮಧ್ಯರಾತ್ರಿ ಮೂಲೆಅಂಗಡಿಯ ಮನೆಗೆ ಕಳ್ಳರಿಬ್ಬರು ಟೇಪ್‌ರೆಕಾರ್ಡರನ್ನು ಕದಿಯಲು ನುಗ್ಗಿದ್ದರು. ದಢಬಢ ಶಬ್ದವಾಗುತ್ತಿದ್ದಂತೆ ಎಲ್ಲರಿಗೂ ಎಚ್ಚರವಾಗಿ ಕಳ್ಳರನ್ನಿಹಿಡಿಯಲು ಪ್ರಯತ್ನ ಪಟ್ಟರೂ ಯಾರಿಂದಲೂ ಆ ರಾತ್ರಿಯ ಹೊತ್ತಿನಲ್ಲಿ ಕಳ್ಳರನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಮೂಲೆ ಅಂಗಡಿಯಲ್ಲಿ ಟೇಪ್‌ರೆಕಾರ್ಡರನ್ನು ಬಿಟ್ಟರೆ ಬೇರಾವ ಅಮೂಲ್ಯವಸ್ತುಗಳೂ ಇರಲಿಲ್ಲ. ಅದೆಲ್ಲಾದರೂ ಕಳ್ಳತನವಾಗಿದ್ದರೆ ಈ ಬದುಕಿಗೆ ಇರುವ ಒಂದೇ ಒಂದು ಆಪ್ತ ವಸ್ತುವನ್ನೂ ಕಳೆದುಕೊಳ್ಳಬೇಕಾಗಿತ್ತು.
ಇನ್ನೂ ವಿಶೇಷವೆಂದರೆ ನಾವಿದ್ದ ಮೂಲೆಅಂಗಡಿ ನಮ್ಮದಾಗಿರಲಿಲ್ಲ, ಅದು ಮಂಡೋಟಿ ಎಸ್ಟೇಟಿನ ಮಾಲಿಕರದ್ದಾಗಿತ್ತು ಎಂಬುದು ಆ ನಂತರವೇ ನನಗೆ ಗೊತ್ತಾದದ್ದು. ತಿಂಗಳಿಗೆ ಮೂವತ್ತು ರೂಪಾಯಿ ನೆಲಬಾಡಿಗೆಯನ್ನ ನೀಡಿ ಅಲ್ಲಿ ನಾವು ವಾಸಮಾಡುತ್ತಿದ್ದದ್ದು. ಕಾಫಿ, ಕರಿಮೆಣಸು ವಿಪರೀತವಾಗಿ ಬೆಳೆಯುವ ಈ ಪ್ರದೇಶದಲ್ಲಿ ತೋಟ ಕಾರ್ಮಿಕರಾದ ರಾಜು, ಚೆಲುವರಾಜ, ಕರುಪ್ಪಚಾಮಿ, ಕುಪ್ಪಮ್ಮ, ವೇಲು ಮುಂತಾದ ಮಹಾನ್ ಐನಾತಿ ಕಳ್ಳರಿದ್ದರು. ತೋಟದಿಂದ ಕದ್ದ ಕಾಫಿ ಕರಿಮೆಣಸನ್ನು ನಮ್ಮ ಮೂಲೆಅಂಗಡಿಗೆ ತಂದು ಇವರಲ್ಲಿ ಮಾರಾಟ ಮಾಡುತ್ತಿದ್ದರು. ಇವರು ಕದ್ದು ತಂದ ಮಾಲಿನ ಬೆಲೆಗೆ ಸಮನಾದ ಅಕ್ಕಿ, ರಾಗಿ, ಉಪ್ಪು, ಮೆಣಸಿನಂತಹ ವಸ್ತುಗಳನ್ನು ನೀಡುತ್ತಿದ್ದರು.
ಒಂದು ನಡುರಾತ್ರಿಯಲ್ಲಿ ಕರುಪ್ಪಚಾಮಿ “ಅಯ್ಯಾ… ಇಂದ ಮರತ್ತೆ ಉಂಗ ವೀಟಿಕ್ ಪಿನ್‌ಪಕ್ಕಂ ಪೊಡ್ರೆನ್; ನಿಂಗಳ್ ಇದಕ್ಕ್ ಎದಾವುದ್ ಕುಡುತ್ತಾಲ್ ಪೋದುಂ’ ಎನ್ನುತ್ತಲೆ ದೊಡ್ಡ ಬೀಟೆ ಮರದ ನಾಲ್ಕು ಹಲಗೆಯನ್ನು ಇವರಿಗೆ ನೀಡಿದ. ಕದ್ದಮಾಲು ಎಂದು ಗೊತ್ತಿದ್ದರೂ ಸಹ ಇವರು ಖುಷಿಯಿಂದಲೇ ಕೊಂಡುಹೋಗಿ ಬಚ್ಚಲು ಮನೆಯ ಹಿಂದೆ ಅಡಗಿಸಿಟ್ಟರು. ನನಗಂತೂ ವಿಪರೀತ ಭಯವಾಗಿ “ರೀ..ಇದು ಇಲ್ಲಿ ಇಡಬೇಡಿ ಕದ್ದಮಾಲು ಪೋಲಿಸಿನವರು ಬಂದ್ರೆ ನಮ್ಮನ್ನ ಜೈಲಿಗಾಕುತ್ತಾರೆ. ಈ ಕಳ್ಳತನದ ಮರ ನಮಗೆ ಬೇಡ” ಎಂದು ಪರಿಪರಿಯಾಗಿ ಬೇಡಿಕೊಂಡೆ. “ಲೇ ಇವಳೆ ಅದೇನು ಸಮಸ್ಯೆಯಾಗಲ್ಲ. ನೀನು ಭಯಪಡಬೇಡ. ಇಲ್ಲಿಗ್ಯಾವ ಪೋಲಿಸಿನವರು ಬರಲ್ಲ. ಅಲ್ಲದೆ ಈ ಮರದ ಹಲಗೆಗಳನ್ನು ಕೇಳಿಕೊಂಡು ಯಾರ್ ಬರ್ತಾರೆ ಹೇಳು… ಈಗ ಬೀಟೆ ಮರಕ್ಕೆ ಒಳ್ಳೆ ಬೆಲೆ ಇದೆ. ಮಾರಿದ್ರೆ ಕೈತುಂಬಾ ಹಣ ಬರುತ್ತೆ ನೀನು ಅಲ್ಹಾ÷್ಲ ಅಂತ ದೇವರ ಹೆಸರೇಳಿ ಸುಮ್ಮನಿರು” ಎಂದು ಬಾಯಿ ಮುಚ್ಚಿಸಿದರು. ವಿಧಿ ಇಲ್ಲದೆ ನಾನು ಸುಮ್ಮನಿದ್ದೆ. ಆ ಮೂರು ರಾತ್ರಿಗಳಲ್ಲಿ ನನ್ನ ಜೀವನ ಕತ್ತಲೆಯ ಕಾಲಗರ್ಭವನ್ನು ಒತ್ತಿ ಉಮ್ಮಳಿಸಿ ಬರುವ ದುಃಖವನ್ನು ಅನುಭವಿಸಿದ್ದು ಮಾತ್ರ ಈಗಲೂ ಮರೆಯಲು ಅಸಾಧ್ಯ. ಅದಕ್ಕಾಗಿ ಉಪಾಯವೊಂದನ್ನ ಹೂಡಿದೆ.
ಕದ್ದ ಮರದ ಹಲಗೆ ಮೂಲೆಅಂಗಡಿಗೆ ಬಂದ ಮೂರುದಿನಗಳ ನಂತರದ ಫ಼ಜರ್‌ನ ಹೊತ್ತು ದಢಬಢ ದಢಬಢ ಎಂಬ ಶಬ್ದಕೇಳಿಯೇ ಕನಸಿನ ಲೋಕದಿಂದ ಎಚ್ಚರವಾದೆ. ನಿದ್ದೆಗಣ್ಣಿನಲ್ಲಿಯೇ ಹಜಾರಕ್ಕೆ ಬಂದು ನೋಡಿ ತಡಿಕೆಯ ಬಾಗಿಲನ್ನು ಸರಿಸಿದಾಗ ಜೀವವೇ ಬಾಯಿಗೆ ಬಂತು. ಯಾರೋ ತೋಟದ ಅಣ್ಣಾಚ್ಚಿಗಳು ಚಹ, ಕಾಫಿಗೆ ಬಂದಿರಬಹುದೆಂದುಕೊಂಡೆ. ಅದರೆ ಮೂವರು ಪೋಲಿಸರ ಜೊತೆಯಲ್ಲಿ ಕರುಪ್ಪಚಾಮಿಯು ಇದ್ದ. ಬಂದವರೆ ನೇರವಾಗಿ ಹಜಾರದ ಒಳಗೆ ನುಗ್ಗಿ ಏರು ಧ್ವನಿಯಲ್ಲಿ ‘ರೀ ಎಲ್ರಿ ಈ ಮನೆಯ ಯಜಮಾನ; ಕರೀರಿ ಅವನನ್ನು. ಅವನು ಮತ್ತು ಈ ಕರುಪ್ಪಚಾಮಿಯನ್ನು ಒದ್ದು ಒಳಗೆ ಹಾಕ್ತೀವಿ; ಸೂಳೆಮಕ್ಕುಳ….. ‘ಲೋ ಕರುಪ್ಪಚಾಮಿ ಎಲ್ಲಿಟ್ಟಿದ್ದೀಯ ಕಳ್ಳಮಾಲು” ಎಂದು ಏಕ್ ಧಂ ಪೇದೆಯೊಬ್ಬ ಗದರಲಾರಂಭಿಸಿದ.
ಭಯಗೊಂಡ ನಾನು ಒಳಗೊಡಿ ಪೋಲಿಸಿನವರು ಬಂದಿದ್ದಾರೆ ಬನ್ನಿ ಎಂದು ಅವರನ್ನ ಕರೆದುಕೊಂಡು ಬಂದೆ. ನನಗಂತೂ ಒಂದೇ ಸಮನೆ ಕಣ್ಣಿನಿಂದ ನೀರು ಬರಲಾರಂಭಿಸಿತು. ಇವರು ಸಹ ಹೆದರುತ್ತಲೇ ಪೋಲಿಸರ ಬಳಿಬಂದರು.
“ಏನೋ ಬೋಳಿಮಗ್ನೆ ಕದ್ದ ಮಾಲನ್ನ ಖರೀದಿಸ್ತೀಯ. ಎಲ್ಲಿಟ್ಟಿದ್ದೀಯ ಬೀಟೆ ಮರದ ಹಲಗೆಗಳನ್ನ. ಮರ್ಯಾದೆಯಿಂದ ಹೇಳು. ಇಲ್ಲ ಅಂದ್ರೆ ನಿನ್ನ ಬೋಟಿ ತೆಗ್ದು ಕೈಗೆ ಕೊಡ್ತೇನೆ. ನಿಮ್ಮಂತವರನ್ನೆಲ್ಲಾ ಲಾಕಪ್‌ನಲ್ಲಿ ಹಾಕಿ ಚರ್ಮ ಸುಲಿದ್ರೇನೆ ಬುದ್ಧಿ ಬರೋದು. ಹೇಳೊ ಎಲ್ಲಿಟ್ಟಿದ್ದೀಯ ಮರದ ಹಲಗೆಗಳನ್ನ. ಅದು ಅಲ್ಲದೆ ಆ ಮರ ಮಂಡೋಟಿ ತೋಟದ ಮಾಲಿಕರಾದ ಸುಬ್ಬಯ್ಯನವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಕಡಿಸಿದ್ದು. ಈ ಸೂಳೆಮಗ ಕರುಪ್ಪಚಾಮಿ ಅಲ್ಲೇ ಕೆಲಸ ಮಾಡಿ ಅಲ್ಲಿಂದಲೇ ಈ ಮಾಲನ್ನ ಎಗರಿಸಿದ್ದಾನೆ. ಉಂಡ ಮನೆಗೆ ಕನ್ನ ಹಾಕಿದ್ದಾನೆ ಈ ಸೂವ್ವರ್… ನೋಡಿ ನೀವಿಬ್ಬರೂ ತಪ್ಪೊಪ್ಪಿಕೊಂಡು ಮರ ಎಲ್ಲಿಟ್ಟಿದ್ದೀರಿ ಅಂತ ಸತ್ಯ ಬೊಗಳಿ… ಬಚಾವಾಗ್ತೀರಿ ಇಲ್ಲಾ ಅಂದ್ರೆ…”
“ಇಲ್ಲ ಸರ್ ಮರ ಮನೆಯ ಹಿಂದೆಯೇ ಇದೆ. ಅದನ್ನ ಕೊಟ್ಟು ಬಿಡ್ತೇನೆ. ದಯವಿಟ್ಟು ಪೋಲಿಸ್ ಸ್ಟೇಷನ್‌ಗೆ ಮಾತ್ರ ಕರ್ಕೊಂಡ್ ಹೋಗಬೇಡಿ. ನನ್ನ ಮಾನಮರ್ಯಾದೆ ಹಾಳಾಗುತ್ತೆ. ನಾಲ್ಕು ಜನರ ಮುಂದೆ ತಲೆಎತ್ತಿ ತಿರುಗಾಡಲು ಸಾಧ್ಯವಾಗಲ್ಲ. ಧಮ್ಮಯ್ಯ ಸರ್… ಇದೊಂದು ಸಲ ಬಿಟ್ಟುಬಿಡಿ. ಇನ್ನೊಂದು ಸಲ ಈ ರೀತಿ ಹೇಲು ತಿನ್ನೋ ಕೆಲಸ ಮಾಡಲ್ಲ. ಬಿಟ್ಟುಬಿಡಿ ಸರ್. ಗೊತ್ತಿರಲಿಲ್ಲ ಅದು ಸುಬ್ಬಯ್ಯ ಸಾಹುಕರ‍್ರ ಮರ ಅಂತ. ಗೊತ್ತಿದ್ರೆ ಖಂಡಿತ ಈ ಮಾಲಿನ ತಂಟೆಗೆ ಹೋಗ್ತಾನೇ ಇರ್ತಿರಲಿಲ್ಲ. ಧಮ್ಮಯ್ಯ ಅಂತಿನಿ… ನನ್ನ ಬಿಟ್ಟುಬಿಡಿ.. ಮರ ತಗೊಂಡೊಗಿ… ನಿಮಗೆ ಹಣಬೇಕಾದ್ರೂ ಕೊಡ್ತೇನೆ. ಈ ಕರುಪ್ಪನ ಮಾತು ಕಟ್ಟಿಕೊಂಡು ಫಜೀತಿಗೆ ಸಿಲುಕಿದ್ದೇನೆ. ಈ ವಿಚಾರ ಏನಾದ್ರು ಸುಬ್ಬಯ್ಯ ಸಾಹುಕರ‍್ರಿಗೆ ಗೊತ್ತಾದ್ರೆ ನನ್ನ ಕಥೆ. ಯಾ ಅಲ್ಲಾ÷್ಹ ಈ ಮೂಲೆ ಅಂಗಡಿ ನಿಂತಿರೋದೆ ಅವರ ಜಾಗದಲ್ಲಿ.. ಖಂಡಿತವಾಗಿ ನಮ್ಮನ್ನಿಲ್ಲಿಂದ ಅವರು ಓಡಿಸಿ ಬಿಡ್ತಾರೆ. ಮುಂದೆ ನಮ್ಮ ಗತಿ ಏನೂ?!”
“ಲೋ ಬಿಕನಾಸಿ ಕಳ್ಳಮಾಲು ಖರೀದಿಸುವಾಗ ಅದರ ಹಿಂದೆ ಬರುವ ಶನಿಯ ಬಗೆಯೂ ಯೋಚಿಸಬೇಕಿತ್ತು. ಅದನ್ನ ಬಿಟ್ಟು ಈಗ ಮರುಕಪಟ್ರೆ…. ಈ ವಿಚಾರ ಈಗಾಗಲೇ ಸುಬ್ಬಯ್ಯ ಸಾಹುಕರ‍್ರಿಗೆ ಗೊತ್ತಾಗಿದೆ. ಕರುಪ್ಪನನ್ನ ತೋಟದಿಂದ ಕೆಲಸ ಬಿಡಿಸಿ ಹೊರಹಾಕಿದ್ದಾರೆ. ಇನ್ನೂ ಇವನನ್ನ ಲಾಕಪ್‌ಗೆ ಹಾಕಿ ಬೆಂಡೆತ್ತಬೇಕು ಅಷ್ಟೇ… ಅದೋ ಅಲ್ಲಿ ಮಂಡೋಟಿ ತೋಟದ ಮೇಸ್ತಿç ರಾಮಚಾಮಿ ಇದ್ದಾನಲ್ಲ ಅವನ ಬಳಿ ಸುಬ್ಬಯ್ಯ ಸಾಹುಕರ‍್ರು ಏನೋ ಹೇಳಿ ಕಳುಹಿಸಿದ್ದಾರೆ. ಏನೋ ಅಂತ ಕೇಳಿ ನಂತರ ನಮ್ಮ ಜೊತೆಯಲ್ಲಿ…. ನಂತರ ಸ್ಟೇಷನ್‌ಗೆ ಬಂದು ಸಹಿ ಮಾಡಿ ಹೋಗು. ನಿನ್ನ ಮೇಲೆ ಕೇಸ್ ಏನೂ ಫಿಕ್ಸ್ ಮಾಡಲ್ಲ. ಒಂದಿಷ್ಟು ನಮ್ಮನ್ನ ಗಮನಿಸಿಕೊಳ್ಳಬೇಕಾಗುತ್ತೆ ಅಷ್ಟೇ. ‘ಕಾನ್ಸ್ಟೇಬಲ್ಸ್ ಆ ಮರದ ತುಂಡುಗಳನ್ನು ಮಹಜರು ಮಾಡಿ ವಶಕ್ಕೆತೆಗೆದುಕೊಳ್ಳಿ’. ಈ ಕರುಪ್ಪನನ್ನ ನಾಲ್ಕು ದಿನ ನಮ್ಮ ಕಸ್ಟಡಿಯಲ್ಲಿಟ್ಟು ಪಾಠ ಕಲಿಸಬೇಕು… ನಡೆಯೋ ಬೋಳಿಮಗ್ನೆ.. ಇವತ್ತು ನಿನಗೆ ಲಾಕಪ್‌ನಲ್ಲಿ ಮದುವೆಮಾಡಿಸ್ತೀವಿ” ಅಂತೇಳಿ ಪೋಲಿಸರು ಕರುಪ್ಪ ಮತ್ತು ಮಾಲಿನೊಂದಿಗೆ ಜೀಪಿನಲ್ಲಿ ಹೊರಟು ಹೋದರು.
ಅಷ್ಟೊತ್ತಿಗಾಗಲೇ ಮೇಸ್ತ್ರೀ ರಾಮಚಾಮಿ ಬಂದು “ನಿಂಗಳ್ ಮರನಾ ಬಚ್ಚಿಟ್ಟದ್ದು ಸುಬ್ಬುಯ್ಯ ಸಾಹುಕರ‍್ಕ್ ತೆರಿಂಜಿಪೋಚಿ. ಅದಕ್ ನೀವು ನಾಳೆನೇ ಈ ಜಾಗ ಖಾಲಿ ಮಾಡಲ್ ಸೋಲ್ಲರ‍್ಕಾಂಘ” ಅಂತ ಕಡ್ಡಿ ತುಂಡಾದAತೆ ಮೂಲೆ ಅಂಗಡಿ ಬಿಟ್ಟು ಹೋಗಲು ಹೇಳಿದ. ಎಲ್ಲರಿಗೂ ಒಂದೇ ಸಮನೆ ದಿಗಿಲು ಆತಂಕ ಮುಂದೇನು ಗತಿ ಎಂದು. ನನ್ನವರಿಗೆ ಇನ್ನು ಬದುಕು ಕಷ್ಟ ಎಂಬುದು ಅದಾಗಲೇ ಅರಿವಾಗಿತ್ತು ಹಲವಾರು ವರ್ಷಗಳಿಂದ ಮೂಲೆ ಅಂಗಡಿಯೇ ಅವರ ಮನೆ ಮಠ, ಆಸ್ತಿ ಪಾಸ್ತಿಯಾಗಿತ್ತು. ಈಗ ನೋಡಿದ್ರೆ ಏಕ್‌ದಂ ತಮ್ಮ ಸರ್ವಸ್ವವನ್ನೇ ಖಾಲಿಮಾಡಲು ಹೇಳಿದ್ರೆ ಎಲ್ಲಿಗೆ ಅಂತ ಹೋಗೋದು ಎಂಬ ಗೊಂದಲದಲ್ಲೇ ಎಲ್ಲರೂ ಆ ದಿನ ಕಳೆದರು. ಅಂತು ಎರಡು ದಿನಗಳ ನಂತರ ಪೋಲಿಸ್ ವ್ಯಾಜ್ಯ ಇತ್ಯರ್ಥವಾಗಿ ಮೂಲೆಅಂಗಡಿಯ ಮುಳಿಹುಲ್ಲಿನ ಮನೆಗೆ ಅರೆಮನಸ್ಸಿನಲ್ಲೇ ವಿದಾಯ ಹೇಳಿ ಸಮೀಪದ ಪುಟ್ಟಪಟ್ಟಣದಲ್ಲಿ ಬಾಡಿಗೆ ಮನೆಯೊಂದಕ್ಕೆ ಹೊರಟೆವು.
ಎಲ್ಲರಲ್ಲೂ ದುಃಖ ಮಡುಗಟ್ಟಿತ್ತು… ಆದರೆ ನನಗೆ… ಹೌದು… ಖಂಡಿತವಾಗಿ ದುಃಖವಾಗಿರಲಿಲ್ಲ. ಕಳ್ಳಮಾಲನ್ನು ಖರೀದಿ ಮಾಡಿದಾಗಲೇ ನನಗೆ ಭಯವಾಗಿತ್ತು. ಬೇಡ ಬೇಡವೆಂದರೂ ನನ್ನ ಮಾತನ್ನು ಕೇಳದಿದ್ದ ನನ್ನವರಿಗೆ ಸರಿಯಾದ ಪಾಠ ಕಲಿಸಬೇಕು ಎಂಬ ಆಸೆ ಒಂದುಕಡೆಯಾದರೆ… ಮೂಗುಮುಚ್ಚಿ ಉಸಿರುಕಟ್ಟಿ ಕಕ್ಕಸ್ಸು ಕೋಣೆಗೆ ಹೋಗುವ ಸಂಕಷ್ಟ; ಇಲ್ಲ ಪೊದೆಯಲ್ಲಿ ಅವಿತು ಕಕ್ಕಸ್ಸು ಮಾಡುವ ನರಕ; ಮಾರುದೂರದ ಕೆರೆಯಿಂದ ನೀರು ತರುವ ಸುಸ್ತು; ರಾಶಿರಾಶಿ ಅಕ್ಕಿ ಹಿಟ್ಟು ರುಬ್ಬುವ ಕಷ್ಟ ಇವೆಲ್ಲವೂ ನನ್ನಲ್ಲೂ ಸಣ್ಣ ಕುತಂತ್ರ ಬುದ್ಧಿಯನ್ನು ಬೆಳೆಸಿತ್ತು. ಕದ್ದಮರದ ಹಲಗೆ ಮನೆಯಲ್ಲಿದೆ; ಅದನ್ನು ಕರುಪ್ಪಚಾಮಿ ತಂದು ಮಾರಿದ್ದು ಎಂಬ ವಿಷಯವನ್ನು ಕರುಪ್ಪನ ಜೊತೆ ಕೆಲಸ ಮಾಡುವ ದೇವಕ್ಕ, ಸೋಮಜ್ಜಿ, ರಾಣಿಯಮ್ಮನಿಗೆ ಹಾಗೇ ಮಾತನಾಡುವಾಗ ನಾನೇ ಹೇಳಿದ್ದೆ. ರಾಣಿಯಮ್ಮ ಮೇಸ್ತ್ರೀ ರಾಮಚಾಮಿಯ ಹೆಂಡ್ತಿ ಎಂಬುದು ಗೊತ್ತಿದ್ದ ಕಾರಣಕ್ಕಾಗಿ ಈ ವಿಚಾರವನ್ನು ಅವರ ಬಳಿ ಹೇಳಿದ್ದು. ಸುದ್ದಿ ರಾಮಚಾಮಿಯ ಕಿವಿಗೆ ಬಿದ್ದದ್ದೆ ಈ ಎಲ್ಲಾ ರಂಪಾಟಕ್ಕೆ ಕಾರಣ ಎಂಬುದು ನನಗೆ ಮಾತ್ರ ಗೊತ್ತಿರುವ ಸತ್ಯ.
'ಈ ಹೊತ್ತಿಗೆ' ಮುಳಿಹುಲ್ಲಿನ ಮೂಲೆ ಅಂಗಡಿ
ನಿಮಗೆ ಇವೂ ಇಷ್ಟವಾಗಬಹುದು…





ಮತ್ತೊಮ್ಮೆ ಕೊಡಗಿನ ಬಾಲ್ಯದ ದಿನಗಳ ನೆನಪಾಯಿತು.
ಮನತಟ್ಟಿದ ಕತೆ