ಕಳೆದ ಭಾನುವಾರ ದಿನಾಂಕ ೧೦/೩/೨೦೧೩ ರಂದು ನಡೆದ ’ಈ ಹೊತ್ತಿಗೆ’ ಕಾರ್ಯಕ್ರಮದ ಕಥೆ ವೈದೇಹಿಯವರ ಕಥೆ ’ಅಕ್ಕು’.
– ಎನ್ ಸಂಧ್ಯಾರಾಣಿ
ಸಂವೇದನೆಯನ್ನು ಅದರಲ್ಲೂ ಸ್ತ್ರೀ ಸಂವೇದನೆಯನ್ನು ಹರಳುಗಟ್ಟುವಂತೆ ಹಿಡಿದಿಡುವ ವೈದೇಹಿ ಅಮ್ಮನ ಕಥೆಗಳೆಂದರೆ ಕವಿತೆಗಳ ಹಾಗೆ. ಆಳಕ್ಕಿಂತ ಹೆಚ್ಚಾಗಿ ಪದರಗಳನ್ನು ಹೊಂದಿರುವ, ಯಾವ ಪಾತ್ರಗಳೂ ಕೇವಲ ಕಪ್ಪು ಬಿಳಿ ಅಲ್ಲದ ವ್ಯಕ್ತಿ ಚಿತ್ರಣಗಳನ್ನು ಕೊಡುವ ಕಥೆಗಳು.
ಕಥೆ ಚಿಕ್ಕದು ಹಾಗಾಗಿ ಸಂವಾದದಲ್ಲಿ ಏನೇನು ಚರ್ಚೆ ಆಗಬಹುದು ಎನ್ನುವ ಸಣ್ಣ ಕುತೂಹಲ. ಅದರೆ ಅಲ್ಲಿದ್ದ ಅಷ್ಟೂ ಜನರು ಆ ಕಥೆಯನ್ನು ತಮ್ಮ ತಮ್ಮ ನೆಲೆಗಳಲ್ಲಿ ಅರ್ಥೈಸಿಕೊಂಡಿದ್ದರು. ಲೀನಿಯರ್ ಅಲ್ಲದ ಕೊಲಾಜ್ ನಂತಹ ಕಥೆಯ ಚಿತ್ರಣ ಒಬ್ಬರ ಮನ ಸೆಳೆದರೆ, ಹೇಗೆ ಕಥಾ ಹಂದರ ಎಲ್ಲಾ ವಿವರಗಳನ್ನು ಒಳಗೊಂಡೂ ಎಲ್ಲೂ ಜಾಳು ಜಾಳು ಅನ್ನಿಸದೆ ಬಿಗಿಯಾಗಿ ನಿರೂಪಣೆಯಾಗಿದೆ ಎನ್ನುವುದರ ಕಡೆ ಮತ್ತೊಬ್ಬರು ಗಮನ ಸೆಳೆದರು.
ಆ ಮನೆಯಲ್ಲಿ ಯಾವ ಬಂಧವಿಲ್ಲದೆ, ಸಂಬಂಧವಿಲ್ಲದೆ, ಕಡೆಗೆ ಯಾವ ಸಂಬಂಧ ಸೂಚಕವೂ ಇಲ್ಲದೆ, ಮನೆಯಲ್ಲಿ ಅಜ್ಜನಿಂದ ಹಿಡಿದು ಸತ್ಯ ಮಾಣಿಯವರೆಗೂ ಕೇವಲ ’ಅಕ್ಕು’ ಅಂತಲೇ ಗುರ್ತಿಸಿಕೊಳ್ಳುವ ಈ ಅಕ್ಕುವಿನ ಪಾತ್ರ ಎಲ್ಲೂ ಕರುಣೆ ಬೇಡದೆ ನಮ್ಮೆದೆಯಲ್ಲಿ ಸಹಾನುಭೂತಿ ಹುಟ್ಟಿಸುತ್ತದೆ ಎಂದು ತೇಜಸ್ವಿನಿ ಹೆಗಡೆ ತೋರಿಸಿಕೊಟ್ಟರು.
ಈ ಕಥೆಯಲ್ಲಿ ಹೇಗೆ ಯಾರೂ ಶೋಷಕರಲ್ಲ ಮತ್ತು ಎಲ್ಲರೂ ವ್ಯವಸ್ಥೆಯ ಶೋಷಿತರೇ ಎಂದು ಹೇಳಿದ್ದು ಜಯಶ್ರೀ ಕಾಸರವಳ್ಳಿ.
ಅಕ್ಕು ಕಥೆ ಓದುವಾಗ ನನ್ನನ್ನು ಕಾಡಿದ್ದು ಮತ್ತು ಇಂದಿಗೂ ಕಾಡುವುದು ಅಕ್ಕುವಿನ ’ಟುವಾಲು’ – ನೋಡಿದರೆ ಪುರುಷರು ಬಳಸುವ ಕರವಸ್ತ್ರದಂತಿರುವ ಈ ಟುವಾಲು ಅಕ್ಕುವಿನ ಆತ್ಮ ಸಂಗಾತಿ, ಅದು ಅವಳ ಮಡಿಲಲ್ಲಿದ್ದರೆ, ಹೆಗಲ ಮೇಲಿದ್ದರೆ ಮಗು, ಮೂಗು ಒರೆಸಿಕೊಳ್ಳುವ ಕರವಸ್ತ್ರ, ಬಾಗಿಲು ಮುಚ್ಚಿ ಬಂಧನದಲ್ಲಿದ್ದರೂ ಆಕೆ ಕಿಟಕಿಯಿಂದ ಹಾರಿಸುವ ಸ್ವಾಭಿಮಾನದ ಬಾವುಟ, ಸಮಾರಂಭಕ್ಕೆ ಹೋದರೆ ತಿಂಡಿ ಕಟ್ಟಿಕೊಳ್ಳುವ ವಸ್ತ್ರ …. ಎಲ್ಲಾ ಸರಿ ಆದರೆ ಅಕ್ಕುವಿಗೆ ಈ ಟುವಾಲ್ ಕೊಟ್ಟವರು ಯಾರು..? ಈ ಟುವಾಲ್ ಕೊಟ್ಟು ಅಕ್ಕುವಿನಂತಹ ಅಕ್ಕುವಿನ ಮನಸ್ಸಿನಲ್ಲಿ ಒಬ್ಬ ಹೆಣ್ಣನ್ನು ಇರಿಸಿ ಹೋದವರು ಯಾರು ….? ಯಾಕೋ ಈ ಟುವಾಲ್ ನನಗೆ ಅಕ್ಕು ಕಥೆಯಲ್ಲಿನ ಕವಿತೆಯಾಗಿ ಕಾಣುತ್ತದೆ.
ಸಂವಾದದ ಚಿತ್ರಗಳು ನಿಮಗಾಗಿ :
ಫೋಟೋ : ವಿದ್ಯಾಶಂಕರ ಹರಪನಹಳ್ಳಿ







Entha chendada yochne idu. Idanna shuru madbeku anta helida jayalaxmi patil avarigondu thnx …