ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಈ ಹೊತ್ತಿಗೆಯಲ್ಲಿ’ ರೂಪದರ್ಶಿ!

ಈ ಹೊತ್ತಿಗೆ

– ಎನ್ ಸಂಧ್ಯಾರಾಣಿ

ರಂಗಕರ್ಮಿ, ಕವಿಯಿತ್ರಿ ಜಯಲಕ್ಷ್ಮಿ ಪಾಟೀಲ್ ತಲೆಯಲ್ಲಿ ಹಲವಾರು ಯೋಜನೆಗಳು, ವಿಚಾರಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ! ಹಾಗೆ ಬಂದ ಒಂದು ಯೋಜನೆ ಎಂದರೆ ಒಂದು ಬುಕ್ ಕ್ಲಬ್! ಹಾ, ಒಂದು ಪುಸ್ತಕಪ್ರೇಮಿ ಸಮಾನ ಮನಸ್ಕರ ಕೂಟ. ಪ್ರತಿ ಹದಿನೈದು ದಿನಕ್ಕೊಮ್ಮೆ ಪುಸ್ತಕ ಪ್ರೇಮಿಗಳು ಒಂದೆಡೆ ಸೇರುವುದು, ಒಂದು ಪುಸ್ತಕದ ಬಗ್ಗೆ ಚರ್ಚಿಸುವುದು. ಈ ಯೋಜನೆ ಅವರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು, ಸುಮಾರು ಜನರನ್ನು ಇದು ಸೆಳೆದಿತ್ತು. ಈ ಕ್ಲಬ್ಬಿನ ಸದಸ್ಯತ್ವಕ್ಕೆ ಒಂದೇ ಫೀಸ್ ಎಂದರೆ ಆ ಪುಸ್ತಕದ ಒಂದು ಕಾಪಿ ಸದಸ್ಯರ ಕೈಲಿರಬೇಕು, ಒಂದೇ ಕರಾರೆಂದರೆ ಭಾಗವಹಿಸಿದ್ದವರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಳ್ಳಲೇ ಬೇಕು! ನಮ್ಮ ಬುಕ್ ಕ್ಲಬ್ ಹೆಸರು ’ಈ ಹೊತ್ತಿಗೆ’. ಅವರು ಮೊದಲ ಸಭೆಗೆ ಸೂಚಿಸಿದ್ದ ಪುಸ್ತಕ ಕೆ ವಿ ಅಯ್ಯರ್ ಅವರ ರೂಪದರ್ಶಿ, ಸೇರುವ ಸ್ಥಳ, ಸಮಯದ ಬಗ್ಗೆ ಅವರು ಒಮ್ಮೆ ಫೇಸ್ ಬುಕ್ಕಿನಲ್ಲಿ ಹಾಕಿದ್ದೆಷ್ಟೋ ಅಷ್ಟೆ, ಆಮೇಲೆ ಅವರು ಅದನ್ನು ಮತ್ತೆ ನೆನಪಿಸಿದಂತೆಯೂ ಕಾಣೆ, ಆದರೂ ನಾವೆಲ್ಲರೂ ತಾರೀಖು ಗುರುತು ಹಾಕಿಕೊಂಡು ಮರೆಯದೆ ಅಲ್ಲಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಬರೆಯುವ ಮಕ್ಕಳು ಹಾಲ್ ಟಿಕೆಟ್ ಅನ್ನು ಭದ್ರವಾಗಿಟ್ಟುಕೊಂಡು ಬರುವಂತೆ ಪುಸ್ತಕವನ್ನು ಅವಚಿ ಹಿಡಿದು ಕೊಂಡು ಬಂದಿದ್ದೆವು.
ಸೇರಿದ್ದವರೆಲ್ಲಾ ಫೇಸ್ ಬುಕ್ಕಿನಲ್ಲಿ ಪರಿಚಿತರೆ, ಹಾಗಾಗಿ ಹೇಗೋ ಏನೋ ಮಾತಾಡಿದರಾಯಿತು ಎಂದು ಧೈರ್ಯ ತಂದುಕೊಳ್ಳುವಷ್ಟರಲ್ಲಿ ಅಲ್ಲಿಗೆ ಬಂದದ್ದು ಜಯಶ್ರೀ ಮತ್ತು ದಿವಾಕರ್ ದಂಪತಿ, ನಮ್ಮ ಈ ಕೂಟಕ್ಕೆ ಥಟ್ ಅಂತ ಸ್ಟಾರ್ ವ್ಯಾಲ್ಯೂ ಬಂದಂತಾಯ್ತು! ಜೊತೆಗೆ ಎಲ್ಲರಿಗೂ ಇನ್ನಿಲ್ಲದ ಟೆನ್ಶನ್! ಇವರೆದುರಲ್ಲಿ ನಾವು ಮಾತಾಡೋದ?!
ಆದರೆ ಅವರಿಬ್ಬರೂ ಸರಳವಾಗಿ ಎಲ್ಲರ ಜೊತೆ ಬೆರೆಯುತ್ತಾ ಹೋದಂತೆ, ನಾವು ನಮ್ಮ ಹಿಂಜರಿಕೆ ಬಿಟ್ಟು ಮಾತಾಡಲು ಪ್ರಾರಂಭಿಸಿದೆವು. ಕೆ ವಿ ಅಯ್ಯರ್ ಅವರ ಬಗ್ಗೆ ನಾವು ತಿಳಿಯದ ವಿವರಗಳನ್ನು ದಿವಾಕರ್ ಅವರು ತಿಳಿಸುತ್ತಾ ಹೋದರು. ಆಮೇಲೆ ಒಬ್ಬೊಬ್ಬರಾಗಿ ಪುಸ್ತಕದ ಬಗ್ಗೆ ಮಾತಾಡಿದ್ದು, ಚರ್ಚಿಸಿದ್ದು …..
ಪುಸ್ತಕದ ಪ್ರಸ್ತುತತೆ, ಒಂದು ಪುಸ್ತಕವನ್ನು ವರದಿಯಾಗದಂತೆ ಕಥೆಯಾಗಿ ಹೆಣೆಯುವುದಕ್ಕೆ ಬೇಕಾಗುವ ಚಿಕ್ಕ ಚಿಕ್ಕ ವಿವರಗಳು, ಪುಸ್ತಕ ಬರೆದ ಕಾಲ ಮತ್ತು ಆ ಮೂಲಕ ಪುಸ್ತಕದ ಧ್ವನಿ, ಬದಲಾಗುವ ಕಾಲ ಮತ್ತು ಅದರ ಮೇಲೆ ನಿರ್ಧರಿತವಾಗುವ ಪುಸ್ತಕದ ಭಾಷೆ ಮತ್ತು ಭಾವುಕತೆ, ನೈತಿಕತೆ ಮತ್ತು ಅದರ ಮಾನದಂಡಗಳು…. ಏನೆಲ್ಲಾ ಚರ್ಚೆಯಾದವು ಅಲ್ಲಿ… ಅದರ ಬಗ್ಗೆ ಬರೆದರೆ ಅದೇ ಒಂದು ಲೇಖನವಾದೀತು, ಅದನ್ನು ನೀವೆಲ್ಲಾ ಅಲ್ಲಿಗೇ ಬಂದು ಸವಿಯಲಿ ಎನ್ನುವ ಆಸೆಯೊಂದಿಗೆ ಲೇಖನವನ್ನು ನಿಲ್ಲಿಸುತ್ತಿದ್ದೇನೆ.
ನಮ್ಮ ಮುಂದಿನ ಭೇಟಿಯ ಚರ್ಚೆಯ ವಸ್ತು ರಾಘವೇಂದ್ರ ಖಾಸನೀಸರ ’ತಬ್ಬಲಿಗಳು’ ಕಥೆ. ನಮ್ಮ ಮೊದಲ ಭೆಟ್ಟಿಯ ಕೆಲವು ಚಿತ್ರಗಳು ನಿಮಗಾಗಿ :


 

‍ಲೇಖಕರು G

12 February, 2013

19 Comments

  1. Gopaal Wajapeyi

    ‘ಈ ಹೊತ್ತಿಗೆ’…! ಒಂದು ಒಳ್ಳೆಯ ಪರಿಕಲ್ಪನೆ… ಖಂಡಿತವಾಗಿಯೂ ಇದು ಈ ಹೊತ್ತಿನ ಜರೂರು. ಇದಕ್ಕಾಗಿ ಕಲಾಜೀವಿ ಶ್ರೀಮತಿ ಜಯಲಕ್ಷ್ಮಿ ಪಾಟೀಲರಿಗೆ ಅಭಿನಂದನೆಗಳು ಸಲ್ಲಲೇಬೇಕು…

    • Jayalaxmi Patil

      ಥ್ಯಾಂಕ್ಸ್ ರೀ ಕಾಕಾ.

  2. Srikanth Manjunath

    ಭಾಷೆಯ ಸಿರಿಯನ್ನು ಸಂಪಿಗೆಯಾಗಿ ಅರಳಿಸುವ ಈ ಪ್ರಯತ್ನ ನಿಜಕ್ಕೂ ಖುಷಿ ಕೊಡುತ್ತದೆ..ಈ ಹೊತ್ತಿಗೆ ತಿಂದು ಮಲಗಿದರೆ ಸಾಕು ಎನ್ನುವ ಈ ಯಂತ್ರ ಯುಗದಲ್ಲಿ ಈ ಹೊತ್ತಿಗೆ ಹೊತ್ತಿಗೆಯನ್ನು ಓದಿ ಅದರ ಬಗ್ಗೆ ಗೌರವಯುತವಾಗಿ ಚರ್ಚಿಸುವ, ಜೊತೆಗೆ ಪುಸ್ತಕ ಓದುವ ಹವ್ಯಾಸವನ್ನು ಪೋಷಿಸುವ ಸಂಭ್ರಮ ಶ್ಲಾಘನೀಯ…ಲೇಖನ ಸುಮಧುರವಾಗಿದೆ..ಜಯಲಕ್ಷ್ಮಿ ಮೇಡಂ ಅವರ ಯೋಚನೆ ಸುಂದರ ಯೋಜನೆಯಾಗಿ ರೂಪುಗೊಳ್ಳುತ್ತಿದೆ..

    • Jayalaxmi Patil

      ಮುಂದಿನ ಓದಿನಲ್ಲಿ ನೀವಿರ್ತೀರಿ ಅಲ್ವಾ ಶ್ರೀಕಾಂತ್.

  3. bharathi bv

    Im glad i was a part of that beautiful evening … thnx jayalaxmi 🙂

    • Jayalaxmi Patil

      thanks to you too Bharti.

  4. Mahesh

    ಈ ಪ್ರೋಗ್ರಾಮ್ ನ ಕಾಪಿ ಹೊಡೆಯಬೇಕೆನಿಸುತ್ತಿದೆ 🙂

    • Jayalaxmi Patil

      ಯಾವ ಸ್ಕ್ವಾಡನ್ನೂ ಒಳಬಿಡೊಲ್ಲ, ಬಿಂದಾಸಾಗಿ ಕಾಪಿ ಮಾಡಿಬಿಡಿ. 🙂

  5. ಅಶೋಕ ಶೆಟ್ಟರ್

    ಧಾರವಾಡದಲ್ಲಿ ೧೯೮೮ರಿಂದ ಕೆಲವು ವರ್ಷ ನಾವು ಕೆಲವರು- ನಾನು, ಸದಾನಂದ ಕನವಳ್ಳಿ,ಶಿವಾನಂದ ಕೆಳಗಿನಮನಿ,ಬಾಳಣ್ಣ ಶೀಗಿಹಳ್ಳಿ, ಹರ್ಷ್ ಡಂಬಳ್,ಬಸವರಾಜ್ ಹೂಗಾರ್,ಪ್ರೊ.ದುರ್ಗಾದಾಸ್ ಮತ್ತಿತರರು ಇದನ್ನು ಮಾಡುತ್ತಿದ್ದೆವು.ಹದಿನೈದು ಪೈಸೆಯ ಒಂದು ಕಾರ್ಡ್ ಬರೆದು ಇಂತಿಂಥವರ ಮನೆಯಲ್ಲಿ ಇಂತಿಂಥ ದಿನ ಇಂತಿಂಥ ಪುಸ್ತಕ ಇಂಥವರು ಓದುತ್ತಾರೆ ಅಂತ ಸಂಬಂಧ ಪಟ್ಟ ಆಸಕ್ತರಿಗೆ ಸಂದೇಶ ಹೋಗುತ್ತಿತ್ತು. ಯಾರದಾದರೂ ಮನೆಯಲ್ಲಿ ಕೂಡುತ್ತಿದ್ದೆವು. ಅಡುಗೆ ಮನೆಯಿಂದ ಹೊರಟು ಹಾಲ್ ನಲ್ಲಿ ಹರಡುತ್ತಿದ್ದ ಅವಲಕ್ಕಿ ಅಥವ ಉಪ್ಪಿಟ್ಟಿನ ಪರಿಮಳದ ನಡುವೆ ಒಂದು ಕೃತಿಯ ಓದು ಮತ್ತು ಅದರ ಕುರಿತ ಚಿಂತನ ಮಂಥನ ನಡೆಯುತ್ತಿತ್ತು. ಅಂಥ ಒಂದು ಸಂಜೆ ನಾನು ಶಾಂತಿನಾಥ ದೇಸಾಯಿಯವರ ’ಮುಕ್ತಿ’ ಕಾದಂಬರಿ ವಾಚನ ಮಾಡಿದ್ದು ನನಗೆ ನೆನಪಿದೆ.ಅದು ಹೇಗೋ ಆ ಪರಿಪಾಠ ನಿಂತು ಹೋಯಿತು, ಆದರೆ ನೆನಪುಗಳು ಉಳಿದಿವೆ,ಸವಿನೆನಪುಗಳು ಬೇಕು ಸವಿಯಲೀ ಬದುಕು ಎಂಬಂತೆ

    • bharathi

      ಉಪ್ಪಿಟ್ಟು ಅನ್ನೋ ಪದದ ಕಡೆ ಕಣ್ಣು ನಿಂತು ಬಿಟ್ಟಿತು !!

  6. Gopaal Wajapeyi

    1970ರ ದಶಕದಲ್ಲಿ ಬೆಂಗಳೂರಿನಲ್ಲಿ ತಿಂಗಳಲ್ಲಿ ಒಂದು ಭಾನುವಾರ ಸಂಜೆ ಇಂಥದೊಂದು ಕಾರ್ಯಕ್ರಮ ನಡೆಯುತ್ತಿದ್ದುದರ ನೆನಪು ಬಂತು. ಅದು ನಡೆಯುತ್ತಿದ್ದದ್ದು ಕಾದಂಬರಿಕಾರ ಸಿ. ಕೆ. ನಾಗರಾಜರಾಯರ ಜಯನಗರದ ಮನೆಯಲ್ಲಿ. ಅದು ಎಷ್ಟನೆ ಬ್ಲಾಕೋ ನನಗೀಗ ನೆನಪಿಲ್ಲ. ಆ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳ ‘ಇಂದಿನ ಕಾರ್ಯಕ್ರಮ’ ಅಂಕಣದಲ್ಲಿ ವಿವರ ಪ್ರಕಟಗೊಳ್ಳುತ್ತಿತ್ತು. ಆಗೊಮ್ಮೆ ನಡೆದುಕೊಂಡು ಹೋಗಿ, ಅವರ ಮನೆಯನ್ನು ಹುಡುಕಿಕೊಂಡು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆಗ ಗಮಕಿ ಪಾಂಡುರಂಗಯ್ಯ ಅವರು, ಕವಿ ಕೆ. ಎಸ. ಸೂಲಿಬೆಲೆ ಮುಂತಾದವರು ಅಲ್ಲಿದ್ದರು. ಬಹುಶಃ ಅವತ್ತು ನಾಗರಾಜರಾಯರದೆ ಒಂದು ಕಾದಂಬರಿಯ ವಾಚನ ಮತ್ತು ಚರ್ಚೆ ಇತ್ತೆಂದು ಅನಿಸುತ್ತದೆ. ಮತ್ತೊಂದು ಸಲ ಅವರ ಮನೆಯಲ್ಲಿ ಸ್ವರಚಿತ ಕವನಗಳ ವಾಚನ ಕಾರ್ಯಕ್ರಮ. ಆಗ ನಾನೊಂದು ಕವನ ಓದಿದ್ದೆ.

  7. Beluru Raghunandan

    Mundina charcheyalli naanu iruttene madam

    • Jayalaxmi Patil

      ಬನ್ನಿ ಬನ್ನಿ. 🙂

  8. umasekhar

    ee hothigeyalli moodibanda rupadarshi kadambariyabagge anisike abhiprayagalu bahala chennagi moodi banthu. sumaru 1960 isaviya asupasinalli Dr.D.V.G. avaru study circle antha madiddaru. adakke namma bhava mathu namma maneyavaru. hoguthiddarante. Great allava jpavareneevu maduthiruvudu.

    • Jayalaxmi Patil

      ನಿಮ್ಮಿಂದ ಮತ್ತು ದಿವಾಕರ್ ಸರ್ ಇಂದ ಕೆ.ವಿ.ಅಯ್ಯರ್ ಅವರ ಬಗ್ಗೆ ಎಷ್ಟೆಲ್ಲ ವಿಷಯಗಳು ತಿಳಿದವು!ಥ್ಯಾಂಕ್ಸ್.

  9. Jayalaxmi Patil

    ಶೆಟ್ಟರ್ ಸರ್ & ವಾಜಪೇಯಿ ಕಾಕಾ, ಮುಂಬೈನಲ್ಲೂ ಸಹ ಇಂಥ ಕಾರ್ಯಕ್ರಮ (ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ವತಿಯಿಂದ) ‘ಮನೆ ಮನೆ ಸಾಹಿತ್ಯ’ ಹೆಸರಿನಲ್ಲಿ ಅಂದು ನಾನಲ್ಲಿದ್ದಾಗಲೂ ನಡೆಯುತಿತ್ತು ಮತ್ತು ಈಗಲೂ ನಡೆಯುತ್ತಿದೆ ಎಂದು ಹೇಳಲು ಖುಷಿ ಆಗುತ್ತೆ. ಎರಡು ತಿಂಗಳಿಗೊಮ್ಮೆ ಯಾರಾದರೂ ಸಾಹಿತ್ಯಾಸಕ್ತರ ಮನೆಯಲ್ಲಿ ಒಟ್ಟು ಸೇರಿ ತಮ್ಮ ತಮ್ಮ ಕಥೆ, ಕವನ, ಲೇಖನ, ನಾಟಕದ ಒಂದೆರಡು ದೃಶ್ಯಗಳನ್ನು ಓದುವುದು ಮತ್ತು ಅಂದು ಸೇರಿದ ಉಳಿದೆಲ್ಲರೂ ಆ ಕೃತಿಯ ಕುರಿತು ತಮ್ಮ ಅಭಿಪ್ರಾಯ ಹೇಳುವುದು. ಡಾ.ಜಿ.ಡಿ ಜೋಶಿ ಅವರು ನಾನಲ್ಲಿದ್ದಾಗ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ನನಗಾ ಕಾರ್ಯಕ್ರಮ ತುಂಬಾ ಇಷ್ಟ ಆಗ್ತಿತ್ತು. ಬಹುಶಃ ಅದೇ ಪ್ರೇರಣೆಯಾ ಅಂತ ‘ಈಗ’ ನಿಮ್ಮಿಬ್ಬರ ಈ ಪ್ರತಿಕ್ರಿಯೆಗಳನ್ನು ಓದಿದ ಮೇಲೆ ಅನಿಸ್ತಿದೆ.

  10. ಸುಧಾ ಚಿದಾನಂದಗೌಡ

    ಸಾಕಷ್ಟು ವರ್ಷಗಳಿಂದ ನಮ್ಮೂರಿನಲ್ಲಿ ಇದನ್ನು ಮಾಡ್ತೇವೆ ಪ್ರತಿ ಶನಿವಾರ.
    ಒಂದು ವ್ಯತ್ಯಾಸ-ಪುಸ್ತಕ ಯಾವುದೆಂದು ನಿರ್ಧರಿಸುವುದಿಲ್ಲ.
    ಆಸಕ್ತರು ತಾವು ಓದಿದ ಯಾವುದಾದರೊಂದು ಪುಸ್ತಕವನ್ನು ಕುರಿತು ಮಾತಾಡಬೇಕು.
    ಒಂಥರಾ ಅನೌಪಚಾರಿಕ ಗೋಷ್ಟಿ ಅದು.
    ತಮ್ಮ ಮೆಚ್ಚಿನ ಪುಸ್ತಕ ಆಯ್ಕೆ ಮಾಡಿಕೊಳ್ಳಲು ಎಲ್ಲರೂ ಸ್ವತಂತ್ರರು.
    ಕೆಲವರು ತಮಗೆ ಇಷ್ಟವಾಗದ ಪುಸ್ತಕ ಎಂದು ಟಿಪ್ಪಣಿ ಕೊಟ್ಟು ಜಿದ್ದಾಜಿದ್ದಿ ಚರ್ಚೆಗಳು ಸ್ವಾರಸ್ಯಕರವಾಗಿ ನಡೆದಿವೆ.
    ಬಿಡುವಾದಾಗ ನಮ್ಮಲ್ಲಿಗೆ ನೀವು ಬನ್ನಿ . ನಾನೂ ಬರ್ತೇನೆ.
    ಇಂಥ ಓದುಗಾರಿಕೆ ಅಗತ್ಯವಾಗಿ ಎಲ್ಲ ಕಡೆ ಆಗಬೇಕು.

    • Jayalaxmi Patil

      ಖಂಡಿತ ಬರುತ್ತೇವೆ ಸುಧಾ, ನೀವೂ ಬರುತ್ತೀರೆಂದಿದ್ದು ಕೇಳಿ ಸಂತಸವಾಯ್ತು. ಹಲಾವಾರು ಕಡೆ ಇಂಥ ಕಾರ್ಯಕ್ರಮಗಳು, ನಡೆಯುತ್ತಿವೆ ಮತ್ತು ನಡೆಯುತಿದ್ದವು ಎನ್ನುವುದನ್ನು ಇಲ್ಲಿ ಕೇಳಿ ಖುಷಿಯಾಯ್ತು.

  11. Badarinath Palavalli

    ’ಈ ಹೊತ್ತಿಗೆ’ಯ ಆಲೋಚನೆ ತುಂಬಾ ಚೆನ್ನಾಗಿದೆ. ಈ ಮೂಲಕವಾದರೂ ನಾವು ಹೆಚ್ಚು ಹೆಚ್ಚು ಕನ್ನಡ ಹೊತ್ತಿಗೆಗಳನ್ನು ಓದುವಂತಾಗುತ್ತೇವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading