ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಶನಿವಾರ ಅಘನಾಶಿನಿಗೆ ಬನ್ನಿ …

ಅಘನಾಶಿನಿಯೆಂದರೆ ಅದು
ಬರೀ ನದಿಯಲ್ಲ
ಕತ್ತಿ ತುದಿಯ ಚೂಪಿನಲ್ಲಿ
ಒಡೆಯುವ ಕಲಗದ ನುಣುಪು
ಅಘನಾಶಿನಿಯೆಂದರೆ
ಉಪ್ಪುನೀರಲ್ಲಿ ಮುಳುಗೇಳುವ
ಒದ್ದೆ ಮೈಯ ಬಿಸುಪು
ಅಘನಾಶಿನಿಯೆಂದರೆ
ಮೊಗೆಮೊಗೆದು ದೋಣಿ
ತುಂಬುವ ಬಳಚಿನ ಕಂಪು
ಅಘನಾಶಿನಿಯೆಂದರೆ ಕಾಕಾ
ಸದ್ದಿನ ನಡುವೆ ಕೊಕ್ಕಿನ
ತುಂಬ ಮೀನು ಹೊರುವ
ಕಾಗೆಗಳ ಗುಂಪು…
ಬಸ್ ಸ್ಟಾಂಡ್ ನ ಅಷ್ಟುದ್ದ
ರಸ್ತೆಯಲ್ಲೂ ಬಣಗು
ತೋರಿ ದಿಣಸಿ ಜಾಲಿ
ಸಾಡಿ ಕೊಕ್ರ ಬೆಳಂಜಿ
ಸಮದಾಳಿ ಮುಳ್ಳಾಟಿ
ತುಂಬಿದ ಬುಟ್ಟಿಗಳ
ಮುಂದೆ ಉಪ್ಪುಹುಳಿ
ಸಾರಿಗೆ ಕಂಪು
ತುಂಬಿಕೊಡುವ ಮೀನುಗಾರ
ಹೆಂಗಸರ ಒನಪು…
ಅಷ್ಟಿಷ್ಟಲ್ಲ ಈ ನದಿಯು ತನ್ನ ತಟದಲ್ಲಿ ವಾಸಿಸುವ ಪ್ರತಿಯೊಬ್ಬರ ನಾಡಿಗಳಲ್ಲಿ ಹರಿವ ಜೀವಸೆಲೆ … ಈ ಉಪ್ಪುನೀರಿನ ಸೆಲೆಯಲ್ಲಿ ಬದುಕು ಕಟ್ಟಿಕೊಂಡವರಿಗೆ ಅಘನಾಶಿನಿಯ ಹೊರತು ಬೇರೆ ಬದುಕಿಲ್ಲ… ಹಗಲು ತಣ್ಣೆಗಂಜಿ ತಾಟಿನಿಂದ ಹಿಡಿದು , ರಾತ್ರಿ ನೆಮ್ಮದಿಯ ನಿದ್ದೆಯವರೆಗೆ ಕಷ್ಟ ಸುಖಗಳ ಬೆರಕೆ ಬದುಕಿಗೆ ಸುಟ್ಟ ಒಣಮೀನಿನ ಸ್ಮೆಲ್ಲೇ ಫಿಜ್ಜಾ ಬರ್ಗರ್…
ಇಷ್ಟೆಲ್ಲ ಯಾಕೆ ಹೇಳುವುದಾಯಿತೆಂದರೆ ಇಂಥದ್ದೊಂದು ಚಂದದ ನದಿ ತೀರದಲ್ಲಿ ಹಾಯಿದೋಣಿಯ ಕೆಳಗೆ ಹುಟ್ಟುಗಳನ್ನಾಡಿಕೊಂಡೇ ದೊಡ್ಡವರಾದ ನಮ್ಮೂರ ಹುಡುಗರ ರಕ್ತದಲ್ಲಿ ಹರಿದು ಬಂದ ಅದ್ಭುತವಾದದ್ದೊಂದು ಜನಪದದ ಸಂಸ್ಕಾರವಿದೆ. ಅದರ ಗಟ್ಟಿತನದ ಬಗ್ಗೆಯಂತೂ ಪ್ರಶ್ನೆಗಳೇ ಇಲ್ಲ… ಎಲ್ಲರೂ ಸೇರಿ ಅದಕ್ಕೊಂದು ರೂಪಕ ಕಟ್ಟಿಕೊಡಬೇಕೆಂಬ ಉಮೇದು ಬಂದಿದ್ದು ಮಾತ್ರ ಅನಿರೀಕ್ಷಿತ.. ಮೊಬೈಲು ವಾಟ್ಸಪ್ ಗಳ ಭರಾಟೆಯಲ್ಲಿ ಮೂಲ ಸಾಂಸ್ಕೃತಿಕ ಬೇರುಗಳು ಅಲುಗಾಡುತ್ತಿರುವ ಈ ಹೊತ್ತಿನಲ್ಲಿ ನಮ್ಮ ನದಿತೀರದ ಹಳ್ಳಿ ಹುಡುಗರ ಈ ಪ್ರಯತ್ನ ಶ್ಲಾಘನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ… ಎಷ್ಟೆಲ್ಲ ಶೃದ್ಧೆಯಿಂದ ಕೆಳಗಿನಕೇರಿಯ ಸಂದೀಪ್, ನಾಗರಾಜ್, ಮೂರ್ತಿ , ವಿಷ್ಣು, ಪ್ರಮೋದ್, ಶಿವಾನಂದ, ರಾಘವೇಂದ್ರ, ಜೀವಾ, ಸಂತೋಷ, ಚಂದನ್, ವಿಟ್ಟು, ಜನ್ನ , ನಾಗೇಂದ್ರ ಮುಂತಾದ ಹುಡುಗರೆಲ್ಲ ಸೇರಿ ಕಾಂಡ್ಲಗಿಡದ ನೆರಳಿನಲ್ಲಿ ಸಾಂಸ್ಕೃತಿಕ ಹಬ್ಬವೊಂದನ್ನು ಕಟ್ಟಿಕೊಡಲು ಯೋಜನೆ ಹಾಕಿದ್ದಾರೆ… ಇದೇ ಶನಿವಾರ ಕೊನೆಯ ಬಸ್ಟಾಪಿನ ನದಿತೀರದ ಅಂಚಿನ ಗದ್ದೆಯಲ್ಲಿ ನಡೆಯಲಿರುವ ಈ ಹಬ್ಬಕ್ಕೆ ನಾವು ನೀವೆಲ್ಲ ಸಾಕ್ಷಿಯಾಗೋಣ… ಖಂಡಿತ ನಿರಾಸೆಯಾಗದು ನಿಮಗೆ … ಯಾಕೆಂದರೆ ಈ ಹಬ್ಬದಲ್ಲಿ ಬಂಗಡೆ ಹಿಣಜಿನ ಮಿಂಚಿದೆ … ಹರಿವ ತೆರೆಗಳ ಸದ್ದಿದೆ.. ಉಪ್ಪುನೀರ ರುಚಿಯಿದೆ… ಇನ್ನೇಕೆ ತಡ ಎಲ್ಲರೂ ಕೂಡಿ ಹಬ್ಬ ಮಾಡೋಣ…

03.03.2018  ಶನಿವಾರ ಸಂಜೆ ಬನ್ನಿ.. ಪ್ರೋತ್ಸಾಹಿಸಿ ಆನಂದಿಸಿ…
-ಸಂಧ್ಯಾ ವಿನಾಯಕ ನಾಯ್ಕ

‍ಲೇಖಕರು Avadhi GK

1 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading