ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಮಳೆಯೇ ಹಾಗೆ ಪಪ್ಪಾ…

ಸಂತೋಷ ಅನಂತಪುರ

ಈ ಮಳೆಯೇ ಹಾಗೆ- ಕಂಡದ್ದನ್ನು, ಕಾಣದ್ದನ್ನು, ಕಂಡು ಕಾಣುವಂತದ್ದೆಲ್ಲವನ್ನೂ ಹೊತ್ತು ತರುವ ನಾವೆಯಂತೆ. ಆ ಮಳೆಯ ನೌಕೆಯೊಳಗೆ ‘ಸ ರೆ ಪ ಮ ಪ ನಿ (ದ) ನಿ ಸ / ಸ ನಿ ಪ ಮ ರೆ ಗ ಮ ರೆ ಸ..’ ಎಂದು ಅನುರಣಿಸುವ ‘ಮೇಘ್ ಮಲ್ಹಾರ’ದ ಆರೋಹಣ-ಅವರೋಹಣದಂತೆ. ಮನಸ್ಸು-ಹೃದಯವನ್ನು ತೋಯ್ದು, ಆರ್ದ್ರಗೊಂಡ ಕಂಗಳಲ್ಲೂ ಭಾವಹನಿ ಇಳಿಯುವಂತೆ. ಧೋ..ಧೋ ಎಂದು ಸುರಿಯುತ್ತಲೇ ಇರುವ ಮಳೆಯ ನೀರು ಕೋಲಾಗುತ್ತಲೇ ನಡು ಅಂಗಳದ ಹಂಡೆ ಚೆಂಡೆಯಾಗಿ ಬಿಟ್ಟಿತು. ಚೆಂಡೆಯ ಪೆಟ್ಟಿಗೆ ಮೈ-ಮನಗಳು ಕುಣಿದದ್ದು… ಕುಣಿದು ದಣಿದ ಈ ದೇಹವು ಅಜ್ಜಿ- ಮಾಮಿ- ಅಮ್ಮನ ಸೆರಗೊಳಗೆ ಬೆಚ್ಚಗಾದದ್ದು ಇನ್ನೂ ಹಸಿರಾಗಿಯೇ ಇದೆ.

ಬೇಗೆಗಳೆಲ್ಲವೂ ಕತ್ತಲಲ್ಲಿ ಕರಗಿ ಅಮ್ಮನ ತುರುಬನ್ನು ಹಿಡಿದು ನಿಮ್ಮೆದೆಯ ಬಿಸಿಗೆ ಬೆಚ್ಚಗಾಗುತ್ತಾ ನಿದ್ರೆಗೆ ಜಾರುವ ಮುನ್ನ ದೂರದಿ ಕೇಳಿ ಬರುವ ಹಳಿಯ ಮೇಲೆ ಓಡುವ ರೈಲಿನ ಸದ್ದನ್ನೇ ಜೋಗುಳವನ್ನಾಗಿಸಿ… ಧಡ್.. ಧಡ್..ಧಡ್.. ಧಡ್ ಎಂದು ಬೆನ್ನಿಗೆ ಬೀಳುವ ನಿಮ್ಮ ಪ್ರೀತಿಯ ತಾಳಕ್ಕೆ ಅರಿವಿಲ್ಲದೆಯೇ ನಿದ್ರೆಯು ಆವರಿಸಿದಾಗ ಕನಸುಗಳು ಒಂದೊಂದಾಗಿ ಗರಿಗೆದರಿ ನಿಂತು ಬಿಡುತ್ತಿದ್ದವು. ಆಟದ ಮೈದಾನದ ಚಕಮಕಿಗಳು, ಬ್ಯಾಟು-ಚೆಂಡಿಗಾಗಿನ ಮಸಲತ್ತು, ಕಸರತ್ತುಗಳು ಕನಸಲ್ಲಿ ಬಂದದ್ದೇ ನಿಮ್ಮೆದೆಯೇ ಮೈದಾನವಾಗಿ ಬಿಡುತ್ತಿತ್ತು.

*
ನಾಟಿ ಮಾಡುತ್ತಿದ್ದ ಗದ್ದೆಗೆ ಹೋದಾಗ ನನಗೆ ತಿಳಿಯದಂತೆ ನನ್ನ ಬೆನ್ನ ಮೇಲೆ ಹಸಿರು ಹಾವನ್ನು ಹರಿಯ ಬಿಟ್ಟು ಬೆಚ್ಚಿ ಬೀಳಿಸಿದ ‘ಮಾಲಿಂಗ’. ಹಾಗೊಮ್ಮೆ ಬೆಚ್ಚಿದ್ದೇ ನಿಮ್ಮ ತೋಳಲ್ಲಿ ಬಂಧಿಯಾಗಿ ಬಿಟ್ಟಿದ್ದೆ. ಗದ್ದೆಯ ಅಂಚಿನಲ್ಲಿ ಬಿಸಿಲಿಗೆ ಮೈ ಕಾಯಿಸಿಕೊಳ್ಳುತ್ತಿದ್ದ ಪುಟ್ಟ ಆಮೆಯೊಂದನ್ನು ತಂದು ನಾಲ್ಕು ಚೌಕಟ್ಟಿನ ಮನೆಯ ನಡು ಅಂಗಳದಲ್ಲಿ ಕಟ್ಟಿಟ್ಟ ಮಳೆಯ ನೀರಲ್ಲಿ ಅದನ್ನು ಬಿಟ್ಟು ನಲಿದು ಖುಷಿಪಟ್ಟಿದ್ದೆ. ಮಹಿಳೆಯರು ನಾಟಿ ಮಾಡುತ್ತಾ ಹಾಡಿದ ಹಾಡನ್ನು ತಮ್ಮ ಪುಟ್ಟ ಟೇಪ್ ರೆಕಾರ್ಡರಲ್ಲಿ ದಾಖಲಿಸಿದ್ದು ಇನ್ನೂ ನನ್ನೆದೆಯ ರೆಕಾರ್ಡಿನಲ್ಲಿ ಅಚ್ಚಳಿಯದೆ ಉಳಿದಿದೆ.

‘ಕರಿಯ-ಬಿಳಿಯ’ ಎಂಬೆರೆಡು ಕೋಣಗಳನ್ನು ಮೇಯಿಸಲು ‘ಸಂಜೀವ’ ಹೊರಟಾಗ ಆತನ ಭುಜದಲ್ಲಿ ನನ್ನನ್ನು ಕುಳ್ಳಿರಿಸಿಕೊಂಡು, ಕೋಣನ ಮೇಲೆಯೂ ಕುಳ್ಳಿಸಿರಿಸಿ ‘ಕುಡೋ..ಕುಡೋ…’ ಎಂದು ರಾಗವಾಗಿ ಹಾಡುತ್ತಾ ಹೋಗುವ ಇನ್ನೊಂದು ಸುಂದರ ನೆನಪು ಮನದೊಳಗೆ. ಕಣ್ಣೂರ ಬಯಲಿನಲ್ಲಿದ್ದ ನಮ್ಮ ಗದ್ದೆಯಲ್ಲಿ ನಡೆಯುವ ಸುಗ್ಗಿ ಬೇಸಾಯದ ಸಮಯವಂತೂ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ‘ಕಂಡಕೋರಿ’ಯ ಆ ದಿನ ಎರಡೂ ಕಾಲೆಕ್ರೆಯ ಬಾಳೆ ನೆಡುವ ಗದ್ದೆಯಲ್ಲಿ ಸುಮಾರು 25 ರಿಂದ 30 ಜೊತೆ ಎತ್ತು-ಕೋಣಗಳು ಗದ್ದೆಯನ್ನು ಹೂಡುವ ಕಾರ್ಯಕ್ರಮ- ಒಂದೇ ದಿನ ಹೂಡಿ ಸಂಜೆಯ ಮೊದಲು ನಾಟಿಯನ್ನೂ ಮಾಡಿ ಬಿಡುವುದು ಅದರ ವಿಶೇಷತೆ. ಅದಕ್ಕಾಗಿಯೇ ಊರಿನ 40-50 ಮಂದಿ ನಾಟಿ ಮಾಡಲಿರುತ್ತಿದ್ದರು.

ಅಂದು ಮಧ್ಯಾಹ್ನಕ್ಕೆ ಪಾಯಸದ ಊಟ. ಗದ್ದೆ ಹೂಡಿಯಾದ ಮೇಲೆ ಕೋಣಗಳನ್ನು ಓಡಿಸುವುದೂ ಇತ್ತು. ಅದಕ್ಕೆಂದೇ ಕಾಯುತ್ತಿದ್ದ ಮಮ್ಮದೆ, ಚೌಕಾರು, ಐತು ಪೂಜಾರಿ, ದೇರಣ್ಣ ರೈ ಮುಂತಾದ ಪರಿಣಿತರು ಕೋಣಗಳ ಜೊತೆ ಗದ್ದೆಗಿಳಿಯುವುದನ್ನು ನೋಡುವುದೇ ಬಲು ಚಂದ. ಊರ ಜನರ ಖುಷಿಗಾಗಿ ಮಿನಿ ಕಂಬಳವೇ ಅಲ್ಲಿ ನಡೆದು ಬಿಡುತ್ತಿತ್ತು.

ನಾಟಿಯ ಮೊದಲು ಗದ್ದೆಯ ಮಧ್ಯದಲ್ಲಿ ಬಾಳೆಸಸಿ ನೆಡುವ ಕಾರ್ಯಕ್ರಮ. ಅದನ್ನು ನಡೆಸಿಕೊಡಲು ಅದಕ್ಕೆಂದೇ ಸೀಮಿತವಾಗಿರುವ ವರ್ಗದ ಮುಖ್ಯಸ್ಥ ಹಾಗೂ ಅವನ ಜೊತೆಗಾರನು ಬಂದು ‘ತುಳು’ವಿನಲ್ಲಿ ಪ್ರಾರ್ಥನೆ ಮಾಡಿ ಗದ್ದೆಯ ಮಧ್ಯದಲ್ಲಿ ಬಾಳೆಸಸಿ ನೆಟ್ಟು, ಮೂರು ಸುತ್ತು ಬಂದು ಬಾಳೆಸಸಿಯ ಎದುರಾ ಬದುರಾ ದಿಕ್ಕಿಗೆ ಓಡಿ ಗದ್ದೆಯ ಅಂಚನ್ನು ಮೊದಲು ತಲುಪುವ ಆಟವೂ ಇದ್ದಿತ್ತು. ಈ ಎಲ್ಲವೂ ಎತ್ತರದ ಕಟ್ಟೆಯಲ್ಲಿ ಕುಳಿತಿದ್ದ ನಿಮ್ಮ ಅಪ್ಪಣೆಯ ಮೂಲಕವೇ ನಡೆಯುತ್ತಿತ್ತು.

ನಮ್ಮದೂ ಎರಡು ಜೊತೆ ಕೋಣಗಳಿದ್ದು ಅವುಗಳಿಗೆ ‘ಚುಕ್ರ’ ಮತ್ತು ‘ಚೌಕಾರು’ ಸಾರಥಿ. ಕಟ್ಟುಕಟ್ಟಳೆಯ ಅರಿವಿಲ್ಲದೆಯೇ ನನ್ನ ಪುಟ್ಟ ಮನಸ್ಸು, ‘ಚುಕ್ರಾ… ಚೌಕಾರು..’ ಎಂದು ಜೋರಾಗಿ ಕೂಗಿ ಎದ್ದು ನಿಂತು ಕೈ ಬೀಸಿದ್ದೆ. ಥಟ್ಟನೆ ತಪ್ಪಿನ ಅರಿವಾಗಿ ನಿಮ್ಮತ್ತ ತಿರುಗಲು ಏನೂ ನಡೆದೇ ಇಲ್ಲವೆಂಬಂತೆ ತಲೆ ನೇವರಿಸಿ ಮುದ್ದಿಸಿದ್ದ ನೆನಪೆಲ್ಲವನ್ನೂ ಮತ್ತೆ ಮನದೊಳಗೆ ತಂದಿರಿಸಿದ ಕಾರುಬಾರೆಲ್ಲವೂ ಈ ಮಳೆಯದ್ದೇ.

*
ಆಷಾಢದ ಬಿಸಿಲಿಗೆ ದೊಡ್ಡ ಮತ್ತು ಸಣ್ಣಕೆರೆಯ ನಡುವಿನ ದಂಡೆಯಲ್ಲಿ ಮೈ ಚಾಚಿ ನಿಂತಿದ್ದ ತುಂಬೆ ಗಿಡಗಳು. ಆ ತುಂಬೆ ಹೂವನ್ನು ಮುದ್ದಿಸಲೆಂದೇ ಬರುವ ಚಿಟ್ಟೆ-ದುಂಬಿಗಳ ಹಿಂಡಿನಲ್ಲಿನ ಕೆಂಪಗಿನ ದುಂಬಿಯ ಹಿಂದೆ ಬಿದ್ದ ತಂಗಿ- ಏನಾದರೂ ಮಾಡಿ ಅದನ್ನು ಹಿಡಿದೇ ಬಿಡಬೇಕೆಂದು ತೀರ್ಮಾನಿಸಿ ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಮೆತ್ತಗೆ ತನ್ನ ಕೈಯನ್ನು ಚಾಚಿ ಮೂರು ಬೆರಳು ಮಡಚಿ ಹೆಬ್ಬೆರೆಳು ಮತ್ತು ತೋರು ಬೆರಳನ್ನು ಮುಂದಕ್ಕೆ ತಂದು ಇನ್ನೇನು ಚಿಟ್ಟೆಯನ್ನು ಹಿಡಿದೇ ಬಿಟ್ಟೆನೆಂಬ ಖುಷಿಯಲ್ಲಿರುವಾಗ- ‘ಸಂಗೀತಾ…’ ಎಂದು ನಿಮ್ಮ ಕಂಚಿನ ಕಂಠವು ಕೂಗಿ ಕೊಂಡಿತ್ತು.

ಉಪ್ಪರಿಗೆಯ ನಿಮ್ಮ ಕೋಣೆಯ ಕಿಟಕಿಯ ಮೂಲಕ ಕಣ್ಣಿಗೆ ಕಂಡ ದೃಶ್ಯವು ನಿಮ್ಮನ್ನು ಅಕ್ಷರಶ: ಬೆಚ್ಚಿ ಬೀಳಿಸಿತ್ತು.ಇನ್ನೊಂದೇ ಹೆಜ್ಜೆಯಲ್ಲಿ ಕೆರೆಯೊಳಕ್ಕೆ ಜಾರಲಿದ್ದ ತಂಗಿ ನಿಮ್ಮ ಧ್ವನಿ ಕೇಳಿದ್ದೇ ಒಮ್ಮೆಲೇ ಬೆಚ್ಚಿ ಹಿಂದಕ್ಕೆ ಸರಿದಿದ್ದಳು. ಕೆಂಪು ದುಂಬಿ ಸಿಕ್ಕೇ ಬಿಟ್ಟಿತೆಂಬ ಖುಷಿಯಲ್ಲಿದ್ದ ಆಕೆಗೆ ನಿರಾಸೆ ಆವರಿಸಿ ತನ್ನ ಮೂತಿಯನ್ನು ಮುಂದಕ್ಕೆತ್ತಿ ಪುಟು ಪುಟು ಎಂದು ಹಿಂದಕ್ಕೆ ಹೆಜ್ಜೆ ಹಾಕಲು; ನಿಮ್ಮ ಕೂಗು ಕೇಳಿ ಓಡಿ ಹೋದ ಅಮ್ಮನ ಸೆರಗೊಳಗೆ ಆಕೆ ಬಂಧಿಯಾಗಿದ್ದಳು.

ಪಾಚಿ ಹಿಡಿದ ನೆಲದಲ್ಲಿ ಹೆಜ್ಜೆಗಳು ಜಾರುವಂತೆ ಪ್ರತೀ ಆಷಾಡದಲ್ಲೂ ಮನದ ಹಾದಿಯಲ್ಲಿ ನೆನಪುಗಳು ಜಾರುತ್ತಾ-ಏಳುತ್ತಾ ಇರುತ್ತವೆ. ಮಳೆ ಬಿದ್ದು ಇಳೆ ಬಿರಿದ ಹೊತ್ತಿನ ಗಂಧದೊಳಕ್ಕೆ ಅಂದಿಗೂ-ಇಂದಿಗೂ ಅವುಗಳು ಬೆಚ್ಚಗಾಗಿಯೇ ಕುಳಿತಿವೆ. ಪ್ರೀತಿ-ನಲ್ಮೆಯ ಕುಳಿರ್ ಗಾಳಿ ಬೀಸಿದ್ದೇ ಈ ನಡುಗುವ ದೇಹಕ್ಕೆ ನೆನಪು ಕಂಬಳಿಯಾಗಿ ಬಿಡುತ್ತದೆ.

*
ಈ ಮಳೆಯೇ ಹಾಗೆ… ಕಾಣದ ಕತ್ತಲಿಗೆ ದೀಪವಾಗುವ ಮಿಣುಕು ಹುಳದಂತೆ. ಜೀರುಂಡೆಯ ನಾದವು ತಂಬೂರಿಯ ಝೇಂಕಾರವಾಗಿ ಹೊಮ್ಮುವಂತೆ. ಮನದ ರಂಗಸ್ಥಳದಲ್ಲಂತೂ ನೆನಪುಗಳದ್ದೇ ರಿಂಗಣ ಮತ್ತು ಧೀಂಗಣ. ಮೊಗೆ ಮೊಗೆದು ಮಳೆಯು ಸುರಿಸುವ ನೆನಪುಗಳು ಯಾವತ್ತಿದ್ದರೂ ಬತ್ತದ ಸೆಲೆಯಂತೆ. ನಿಮ್ಮ ಗುಬ್ಬಚ್ಚಿ ಗೂಡಲ್ಲಿ ಮಲಗಿದ ತಂಗಿ ಮತ್ತು ನನ್ನನ್ನು ರಮಿಸಿ, ನಗಿಸಿ ಬೆಚ್ಚಗಾಗಿಸಿದ್ದು ಇಂದಿಗೂ ಹಸಿರಾಗಿಯೇ ಉಳಿದಿದೆ. ಈ ಮಳೆಯು ಅವುಗಳನ್ನೆಲ್ಲಾ ಮರೆಯಲು ಬಿಡುವುದುಂಟೇ ?

ನಿಮ್ಮ ಎದೆಯ ಬಿಸಿಗೆ ಕರಗಿದವರಲ್ಲವೇ ನಾನು ಮತ್ತು ನಮ್ಮವರು. ಮನೆ-ಮನಗಳು ಬೆಸೆದಿದ್ದ ದಿನಗಳವು. ನಾನು-ನನ್ನದು ಎನ್ನುವಂತಿಲ್ಲದ ಹಗಲು-ರಾತ್ರಿಗಳನ್ನು ತೋರಿಸಿ ಕೊಟ್ಟವರು ನೀವು. ‘ಮತ್ತೆ ಮಳೆ ಹೊಯ್ಯುತಿದೆ..’ ಎಂದರೆ; ಎಲ್ಲವೂ ತೊಯ್ಯುವಂತೆ. ಭಾವ ಜೀವಗಳು ಅರಳಿ, ಹಸಿರ ಹೊದ್ದು ನಿಂತ ವಸುಂಧರೆಯಂತೆ.

ಹಾಗೆ ನೋಡಿದರೆ ನೆನಪುಗಳಿಗಿಲ್ಲ ಅಧಿಕ ಆಯಸ್ಸು. ಆದರೆ ಈ ಮಳೆಯಿದೆ ನೋಡಿ.., ಮೇಘ ಕಟ್ಟಿ ಚೆಲ್ಲಿದ ಹನಿಗಳ ಮೂಲಕ ಬತ್ತಿದ್ದ, ಬಾರದೇ ಇದ್ದ, ಕಂಡೂ ಕಾಣದಂತಿದ್ದ,ಇದ್ದೂ ಇಲ್ಲದಂತಿದ್ದ ಅಷ್ಟೂ ನೆನಪುಗಳನ್ನು ಮನಸ್ಸಿನ ಮುಂದಲೆಯಲ್ಲಿ ತೋರಣವನ್ನಾಗಿಸಿ ಕಟ್ಟಿ ಬಿಡುತ್ತದೆ. ಬಂಧ-ಬಂಧು ಮಾತ್ರವಲ್ಲದೆ ಊರ ಮಂದಿಯ ಪ್ರೀತಿಯ ನೆನಪುಗಳೂ ಕಂಗಳನ್ನು ಅದ್ದಿಸಿ ಬಿಡುತ್ತವೆ. ಜಿಹ್ವಾ ಚಾಪಲ್ಯವೂ ನೆನಪಾಗಿ ನಾಲಗೆಯಲ್ಲಿ ನೀರೂರಿ, ಅರಿಯದೇ ಹೃದಯ-ಮನಸ್ಸುಗಳು ಬೆಚ್ಚಗಾಗಿಯೂ ಬಿಡುತ್ತವೆ.

ಈ ನೆನಪುಗಳೇ ಹಾಗೆ-ನಿಮ್ಮೊಲವಿನ ಧಾರೆಯಂತೆ.. ಸುರಿಯುತ್ತಲೇ ಇರುವ ಆಷಾಢದ ಮಳೆ ಹರಿದು ಜೀವ ನದಿಯಾಗಿ ಬಿಡುವಂತೆ.. ದಟ್ಟ ಮೋಡ ಬಿರಿದು ಇಳೆಗೆ ಸುರಿದ ಹಾಗೆ.. ಬೆಚ್ಚನೆಯ ಭಾವಗಳು ಮಳೆ ಹನಿಗಳಿಗೆ ಕರಗಿ ನೀರಾಗುವಂತೆ ಇರಲು-ಭಾವನೆಗಳ ಭಾವಸೆಲೆಯು ಮೂಕ ವಿಸ್ಮಿತನನ್ನಾಗಿಸುವಷ್ಟು ಕನವರಿಕೆಗಳನ್ನು ಕಣ್ಣಿಗೆ ಕಟ್ಟುತ್ತಲೇ ಇರುವಂತೆ ನೀವು ಕಟ್ಟಿ ಕೊಟ್ಟಿರಿ.

*
‘ಆ..ಹಾ….ಮೇಘ ಮಲ್ಹಾರ್ ಸಾಕೆನಿಸಿದರೆ ಮಿಯಾ ಕಿ ಮಲ್ಹಾರ್ ಆರಂಭವಾಗಲಿ’ ಅಂದಿರಲ್ಲ ಪಪ್ಪಾ, ‘ಒಟ್ಟಿನಲ್ಲಿ ಸಂಗೀತದ ನದಿ ಹರಿಯುತ್ತಿರಲಿ’ ಎಂದೂ ನೀವು ಆಶಿಸಿದಿರಿ. ನಮ್ಮ ಬದುಕು ನಿಮ್ಮ ಬದುಕಿನ ಮುಂದುವರಿದ ಭಾಗವಲ್ಲವೇ ಪಪ್ಪಾ? ದೇಹಗಳು ಮಾತ್ರ ಭಿನ್ನ. ಮನಸ್ಸು-ಹೃದಯ ಮಾತ್ರ ಅದೇ. ಮೇಘ್ ಮಲ್ಹಾರ್ ನಿಂದ ತೊಡಗಿ ‘ಮಿಯಾ ಕಿ ಮಲ್ಹಾರ್… ರಾಂದಾಸೀ ಮಲ್ಹಾರ್, ಗೌದ್ ಮಲ್ಹಾರ್, ಸುರ್ ಮಲ್ಹಾರ್, ದೇಸ್ ಮಲ್ಹಾರ್, ನಟ್ ಮಲ್ಹಾರ್, ಧುಲಿಯಾ ಮಲ್ಹಾರ್, ಮೀರಾ ಕಿ ಮಲ್ಹಾರ್…’ ಅಂತ ಭಿನ್ನ ಮಲ್ಹಾರ್ ನ ಪ್ರಭೇದಗಳಿದ್ದರೂ ಅವುಗಳ ಆತ್ಮ ಮಾತ್ರ ಒಂದೇ- ‘ಮಲ್ಹಾರ್’. ಅಂತೇ ಈ ಮಳೆಯೂ ಮತ್ತದು ತಂದೊಡ್ಡುವ ನೆನಪುಗಳೂ.

ಹಿಂಗಾರಿರಲಿ-ಮುಂಗಾರಿರಲಿ ಅಥವಾ ಬಿಸಿಲ ಝಳದ ಬೇಸಗೆಯೇ ಇರಲಿ ಮೋಡ ಒಡೆದು ಹನಿಯುವಾಗ ಭಾವನೆಗಳನ್ನು ಘೋಷಗಳೊಂದಿಗೆ ಸ್ಸಾಗತಿಸಿ, ಬೀಳ್ಗೊಟ್ಟು ಮತ್ತೆ ಸ್ವಾಗತಿಸಲು ಕಾತರದಿ ಕಾಯುವ ಕಾಂತೆಯ ಮನಸ್ಸು-ದೇಹದಂತೆ ನಾವೂ. ಲಿಂಗದ ಹೊದಿಕೆಯನ್ನೇ ಕಿತ್ತೆಸೆದು ಭಾವಲೋಕದೊಳಕ್ಕೆ ತಳ್ಳಿ ಬಿಡುವ ‘ಮೇಘ್ ಮಲ್ಹಾರ್’ ಗೆ ಶರಣಾಗದವರು ಯಾರಿಲ್ಲ ಹೇಳಿ ?

ಭಾವಲೋಕದ ವಿವಿಧ ಸ್ತರಗಳನ್ನು ‘ದರ್ಬಾರಿ ಕಾನಡ’ದ ಒಳಗಿಳಿದು ‘ಬಿಹಾಗ್’ನಲ್ಲಿ ಸಂಚರಿಸಿ ‘ಸೋಹನಿ’ಯ ಎತ್ತರ ತಲುಪಿ ‘ಭೈರವಿ’ಯಲ್ಲಿ ವಿಸ್ತರಿಸಿಕೊಳ್ಳಬೇಕಿದೆ. ಭಾವನೆಗಳು ಜೊತೆಗಿದ್ದರೆ ಜಗತ್ತು ಸುಂದರವಾಗಿರುತ್ತದೆ. ನಡೆದಾಡುವ ಪ್ರತಿ ಹೆಜ್ಜೆಯಲ್ಲೂ ಒಂದು ಲಯವಿದೆ. ಪ್ರತಿ ಉಸಿರಿಗೂ ಒಂದು ಶ್ರುತಿ ಇದೆ. ನಿಷಾದವೋ, ಗಾಂಧಾರವೋ, ಷಡ್ಜ, ರಿಷಭ, ಧೈವತವೋ ಆ ಶ್ರುತಿಯಲ್ಲಿ ಒಂದಾಗಬೇಕು.

‘ಧೈವತ’ವು ದೈವತ್ವದಲ್ಲಿ ಮಿಳಿತಗೊಂಡಿದೆ. ಹಾಗಾಗಿ ದೈವತ್ವದಲ್ಲೂ ಕಲೆಯನ್ನು ಕಂಡು ಆಸ್ವಾದಿಸುವುದು ನಮಗೊಲಿದ ಯೋಗಾನುಯೋಗ. ಅದನ್ನು ಅನುಭವಿಸಲೂ ಬೇಕಲ್ಲವೇ ಒಂದು ಭಾಗ್ಯ? ಒಂದೊಂದು ಸ್ವರವೂ ಶ್ರುತಿ-ಲಯ ಬಧ್ಧವಾಗಿ ಧನಿಸಿ, ಧೇನಿಸಿ ನಮ್ಮೊಳಗೆ ಮಂಥನಗೊಂಡಿದೆ. ಅಷ್ಟೇ ಯಾಕೆ, ಜೀವ ತಂತಿಯಿಂದ ಹೊಮ್ಮಿದ ‘ಸಂಗೀತ’ವು ಕೇವಲ ‘ಚೈತ್ರ’ ಮಾಸದಲ್ಲಿ ಮಾತ್ರ ಹೊಮ್ಮದೆ ‘ಸ್ವಪ್ನ’ ಲೋಕದಲ್ಲೂ ಕನವರಿಸುತ್ತಾ, ‘ಅದ್ವೈತ’ದಲ್ಲೂ ಸಂಚರಿಸುತ್ತಾ, ‘ಫಲ್ಗುಣ’ನ ವೀರತ್ವದಲ್ಲೂ ಠೇ೦ಕರಿಸುತ್ತಾ, ‘ದೇವ’ಲೋಕದೊಳಗೂ ರಿಂಗಣಿಸುತ್ತಾ, ‘ಜಯ ಜಯ’ ಎಂದು ಮಂದಿ ಭಜಿಸುವಾಗ ‘ಸಂತೋಷ’ ನಿಮ್ಮದೇ ಅಲ್ಲವೇ?

ಈ ಮಳೆಯೇ ಹಾಗೆ ಪಪ್ಪಾ… ನೀವು ಮೀಟಿದ ಜೀವ ತಂತಿಯಂತೆ!

‍ಲೇಖಕರು Admin

30 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading