ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಈದಿ ಅಮೀನ್ ಮತ್ತು ಗಡಾಫಿ’ – ಉದಯ್ ಇಟಗಿ

ಲಿಬ್ಯಾದ ಬಗ್ಗೆ, ಗಡಾಫಿ ಬಗ್ಗೆ ಉದಯ್ ಇಟಗಿ ಬರೆದ ಲೇಖನದ ಮೊದಲ ಭಾಗ ನಿನ್ನೆ ಪ್ರಕಟವಾಗಿತ್ತು. ಇಂದು ಲೇಖನದ ಎರಡನೆಯ ಭಾಗ ಪ್ರಕಟವಾಗುತ್ತಿದೆ.

***

ಉದಯ್ ಇಟಗಿ

ಈದಿ ಆಮಿನ್ 1971 ರಲ್ಲಿ ಬ್ರಿಟನ್ ಮತ್ತು ಇಸ್ರೇಲ್ನ ಸಹಾಯದಿಂದ ಉಗಾಂಡದಲ್ಲಿ ಅಧಿಕಾರಕ್ಕೆ ಬರುತ್ತಾನೆ. ಅವನು ಒಬ್ಬ ಅನಕ್ಷರಸ್ಥನಾಗಿದ್ದರಿಂದ ಅವನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಚನ್ನಾಗಿ ಬಳಸಿಕೊಳ್ಳಬಹುದು ಎನ್ನುವದು ಅವರ ದುರಾಲೋಚನೆಯಾಗಿರುತ್ತದೆ. ಅವನು ಅಧಿಕಾರಕ್ಕೆ ಬಂದಾಗ ಅಲ್ಲಿನ ಬಹಳಷ್ಟು ಜನ ಮುಸ್ಲಿಂರು ಕ್ರಿಶ್ಚಿಯನ್ರಿಂದ ತುಳಿಯಲ್ಪಟ್ಟಿದ್ದರು ಮತ್ತು ಆ ಅಸಮಾಧನದ ಹೊಗೆ ಅವರಲ್ಲಿ ಮನೆಮಾಡಿತ್ತು. ಇದನ್ನರಿತ ಈದಿ ಆಮಿನ್ ಕ್ರಿಶ್ಚಿಯನ್ರನ್ನು ಹತ್ತಿಕ್ಕುವ ನೆಪದಲ್ಲಿ ಅವರನ್ನು ಕೊಲೆ ಮಾಡಿಸುತ್ತಾ ಹೋಗುತ್ತಾನೆ. ಆದರೆ ಇದ್ಯಾವುದನ್ನು ಸರಿಯಾಗಿ ತಿಳಿದುಕೊಳ್ಳದೆ ಗಡಾಫಿ ಈದಿ ಆಮಿನ್ ಒಬ್ಬ ಮುಸ್ಲಿಂ ನಾಯಕ ಹಾಗೂ ಉಗಾಂಡ ಒಂದು ಮುಸ್ಲಿಂ ರಾಷ್ಟ್ರ ಎಂಬ ಕಾರಣಕ್ಕೆ ಅವನ ಸಹಾಯಕ್ಕೆ ನಿಲ್ಲುತ್ತಾನೆ. ಆ ಮೂಲಕ ಗಡಾಫಿ ಈ ಕೃತ್ಯದೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ. ಇನ್ನೊಂದು ಸಾರಿ ಅಂದರೆ 1979 ರಲ್ಲಿ ಉಗಾಂಡದ ಜನ ಈದಿ ಆಮಿನ್ನ ವಿರುದ್ಧ ದಂಗೆ ಎದ್ದಾಗ ಗಡಾಫಿ ಅವನ ಸಹಾಯಕ್ಕಾಗಿ ಸೈನ್ಯದ ತುಕುಡಿಯನ್ನು ಕಳಿಸುತ್ತಾನೆ. ಬಂಡುಕೋರರಿಗೆ ಹೆದರಿ ಬರಾರದಲ್ಲಿ ಬಾಂಬ್ ಹಾಕಬೇಕಿದ್ದ ವಿಮಾನಗಳು ತಪ್ಪಿ ನ್ಯಾರುಬಂಗಾ ಮತ್ತು ಬುರುಂದಿಯಲ್ಲಿ ಹಾಕುತ್ತವೆ. ಇದರಿಂದಾಗಿ ಅಪಾರ ಸಾವು ನೋವುಗಳುಂಟಾಗುತ್ತವೆ. ಈ ಘಟನೆ ಗಡಾಫಿಯನ್ನು ಶಾಶ್ವತವಾಗಿ ಉಗ್ರರ ಪಟ್ಟಿಯಲ್ಲಿ ಸೇರಿಸುತ್ತದೆ.
ಮತ್ತೊಂದು ಸಾರಿ ಅಂದರೆ 1988ರಲ್ಲಿ ಸ್ಕಾಟ್ಲೆಂಡ್ನನ ಪಾನ್ ಅಮ್ ವಿಮಾನದಲ್ಲಿ ಬಾಂಬಿಟ್ಟ ಅರೋಪ ಲಿಬಿಯಾದ ಮೇಲೆ ಬರುತ್ತದೆ. ಆ ಘಟನೆಯಲ್ಲಿ ಸುಮಾರು 250 ಜನ ಅಮೆರಿಕನ್ನರು ಸತ್ತಿದ್ದರು. ಹಾಗಾಗಿ ಅಮೆರಿಕಾ ಸರಕಾರ ಗಡಾಫಿಗೆ “ನಿನ್ನ ತಪ್ಪನ್ನು ಒಪ್ಪಿಕೊಂಡು ಮೃತರ ಕುಟುಂಬಕ್ಕೆ ಪರಿಹಾರ ನೀಡು. ಇಲ್ಲವಾದಲ್ಲಿ ದಿಗ್ಬಂಧನದ ಪರಿಣಾಮಗಳನ್ನು ಎದುರಿಸು” ಎಂದು ಖಡಾಖಂಡಿತವಾಗಿ ಹೇಳಿತು. ಆದರೆ ತಪ್ಪನ್ನೇ ಮಾಡದ ಗಡಾಫಿ ಇದನ್ನು ಬಹುಕಾಲ ನಿರಾಕರಿಸುತ್ತಲೇ ಬಂದ. ಸಿಟ್ಟೆಗೆದ್ದ ಅಮೆರಿಕಾ ಲಿಬಿಯಾದ ಮೇಲೆ ಹನ್ನೆರೆಡು ವರ್ಷಗಳ ಕಾಲ ದಿಗ್ಬಂಧನ ಹೇರಿತು. ಆ ಸಮಯದಲ್ಲಿ ಗಡಾಫಿ ಅಕ್ಕಪಕ್ಕದ ರಾಷ್ಟ್ರಗಳಿಂದ ದಿನನಿತ್ಯದ ವಸ್ತುಗಳನ್ನು ಒಂದಕ್ಕೆ ಮೂರರಷ್ಟನ್ನು ಕೊಟ್ಟು ಕೊಂಡುಕೊಂಡು ಅದ್ಹೇಗೋ ದೇಶವನ್ನು ನಡೆಸಿದ ಎಂದು ಇಲ್ಲಿನವರು ಹೇಳುತ್ತಾರೆ. ಹಾಗೆ ನೋಡಿದರೆ ಇದು ಕೂಡಾ ಅಮೆರಿಕಾದ ಒಂದು ವ್ಯವಸ್ಥಿತ ಸಂಚೇ ಆಗಿತ್ತು. ಅಮೆರಿಕಾವೇ ಇಬ್ಬರು ಲಿಬಿಯನ್ರಿಗೆ ಅಪಾರ ದುಡ್ಡು ಕೊಟ್ಟು ಅವರಿಂದ ಗಡಾಫಿಯೇ ನಮಗೆ ಬಾಂಬ್ ಇಡಲು ಹೇಳಿದ್ದು ಎಂದು ಸುಳ್ಳು ಹೇಳಿಸಿದ್ದರು. ಕೊನೆಗೆ ಗಡಾಫಿ ಈ ತಪ್ಪನ್ನು ಮಾಡದಿದ್ದರೂ ತಪ್ಪೊಪ್ಪಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಯಿತು. ಬೇರೆ ದಾರಿಯಿಲ್ಲದೆ ಗಡಾಫಿ ತಪ್ಪೊಪ್ಪಿಕೊಂಡು ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕಾಗಿ ಬಂತು.

ಗಡಾಫಿ ಒಬ್ಬ ಸ್ತ್ರೀವಾದಿ ಮತ್ತು ಜಾತ್ಯಾತೀತ ನಾಯಕನಾಗಿದ್ದ: ಗಡಾಫಿ ಒಬ್ಬ ನಿಜವಾದ ಸ್ತ್ರೀವಾದಿ ಮತ್ತು ಜಾತ್ಯಾತೀತ ನಾಯಕನಾಗಿದ್ದ. ಹೆಂಗಸರು ಗಂಡಸರಷ್ಟೇ ಸರಿಸಮಾನರು ಎಂಬ ಮಹಿಳಾಪರ ಧೋರಣೆಯನ್ನು ಪ್ರತಿಪಾದಿಸುತ್ತಿದ್ದ. ತನ್ನ ಅಧಿಕಾರಾವಧಿಯಲ್ಲಿ ತನ್ನ ದೇಶದ ಸ್ತ್ರೀಯರಿಗೆ ಎಲ್ಲ ರಂಗಗಳಲ್ಲಿ ಸಮಾನವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದ. ಆತ ತನ್ನ “ಗ್ರೀನ್ ಬುಕ್” ನಲ್ಲಿ ಸ್ತ್ರೀಯರನ್ನು ಕುರಿತಂತೆ ಹೀಗೆ ಹೇಳುತ್ತಾನೆ.; “ಗಂಡಸಿನಂತೆ ಹೆಣ್ಣು ಸಹ ಕುಡಿಯುತ್ತಾಳೆ, ತಿನ್ನುತ್ತಾಳೆ, ಪ್ರೀತಿಸುತ್ತಾಳೆ, ದ್ವೇಷಿಸುತ್ತಾಳೆ, ಯೋಚಿಸುತ್ತಾಳೆ, ಕಲಿಯತ್ತಾಳೆ, ಮತ್ತು ಅರ್ಥಮಾಡಿಕೊಳ್ಳುತ್ತಾಳೆ. ಹಾಗಿದ್ದ ಮೇಲೆ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದ್ದ. ಜೈವಿಕವಾಗಿ ದೇಹರಚನೆಯೊಂದನ್ನು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲಿ ಹೆಂಗಸರು ಗಂಡಸರಷ್ಟೇ ಸಮರ್ಥರು. ಹಾಗೆ ನೋಡಿದರೆ ಹೆಂಗಸರು ಗಂಡಸರಿಗಿಂತ ವಿಭಿನ್ನರು ಮತ್ತು ಅದೃಷ್ಟವಂತರು.
ಅವರಂತೆ ಗಂಡಸರು ಪ್ರತಿ ತಿಂಗಳು ಮುಟ್ಟಾಗಲಾರರು, ಹೊರಲಾರರು, ಹೆರಲಾರರು, ಹಾಲುಣಿಸಲಾರರು. ಆದರೆ ಗಂಡಸರು ಈ ಎಲ್ಲ ನಿಸರ್ಗದತ್ತ ಸಂಭ್ರಮಗಳಿಂದ ವಂಚಿತರು. ಹೀಗಾಗಿ ಆತ ಹೆಣ್ತನ ಒಂದು ಶಾಪವೆಂದು ಭಾವಿಸದೇ ವರವೆಂದು ಭಾವಿಸಿರಿ” ಎಂದು ಇಲ್ಲಿಯ ಮಹಿಳೆಯರಿಗೆ ಕರೆಕೊಟ್ಟಿದ್ದ. ಆ ನಿಟ್ಟಿನಲ್ಲಿ ಹೆಂಗಸರಿಗೆ ಎಲ್ಲ ರಂಗಗಳಲ್ಲಿ ಸರಿಸಮನಾದ ಅವಕಾಶಗಳನ್ನು ಕಲ್ಪಿಸಿಕೊಟ್ಟ. ಅವರು ಓದಿದ ಮೇಲೆ ಅವರಿಗೆ ಕೆಲಸ ಸಿಕ್ಕರೆ ಪರ್ವಾಗಿಲ್ಲ. ಒಂದು ವೇಳೆ ಸಿಗದೇ ಹೋದರೆ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 100 ದಿನಾರುಗಳನ್ನು ಕೊಡುತ್ತಿದ್ದ. ಒಂದು ವೇಳೆ ಅವರು ಅನಕ್ಷರಸ್ಥರಾಗಿದ್ದರೆ ಅವರು ಯಾವುದಾದರೂ ವ್ಯಾಪಾರ ಮಾಡಲು ಅವರಿಗೆ ಹದಿನೈದು ಸಾವಿರ ದಿನಾರಗಳಷ್ಟು ಸಾಲ ಕೊಟ್ಟು ಅದನ್ನು ಪ್ರತಿ ತಿಂಗಳು ಕಂತಿನ ರೂಪದಲ್ಲಿ ತೀರಿಸುವಂತೆ ಹೇಳುತ್ತಿದ್ದ. ಒಂದು ವೇಳೆ ಅವರಿಗೆ ವ್ಯಾಪಾರದಲ್ಲಿ ನಷ್ಟವುಂಟಾದರೆ ಇನ್ನೊಂದು ಅವಕಾಶವನ್ನು ಕೊಟ್ಟು ಬರೀ ಅರ್ಧದಷ್ಟು ಮೊತ್ತವನ್ನು ತೀರಿಸಲು ಹೇಳುತ್ತಿದ್ದ. ಆಗಲೂ ಅಭಿವೃದ್ಧಿಯಾಗದೇ ಹೋದರೆ ಅವರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತಿದ್ದ. ಒಟ್ಟಿನಲ್ಲಿ ಗಡಾಫಿ ಹೆಣ್ಣುಮಕ್ಕಳು ಆರ್ಥಿಕವಾಗಿ ಆದಷ್ಟು ಸ್ವತಂತ್ರವಾಗಿರಬೇಕು ಎಂದು ಹೇಳುತ್ತಿದ್ದ. ಇನ್ನು ಗಂಡನಿಂದ ವಿಚ್ಛೇದನ ಪಡೆದ ಹೆಣ್ಣುಮಗಳು ಆಕೆ ಗಂಡನಿಂದ ಪರಿಹಾರವನ್ನು ಪಡೆಯುವದಲ್ಲದೇ ಸರಕಾರದಿಂದಲೂ ಸಹ ಪ್ರತಿ ತಿಂಗಳು ಪರಿಹಾರವನ್ನು ಪಡೆಯುತ್ತಿದ್ದಳು.
ವಿಚ್ಛೇದಿತಳು ಸರಕಾರಿ ಕೆಲಸದಲ್ಲಿದ್ದರೆ ಅವಳಿಗೆ 250 ದಿನಾರಗಳನ್ನು ಕೊಡುತ್ತಿದ್ದ. ಇಲ್ಲದಿದ್ದರೆ 450 ದಿನಾರುಗಳನ್ನು ಕೊಡುತ್ತಿದ್ದ. ಇದೇ ನೀತಿ ವಿಧವೆಯರಿಗೂ ಅನ್ವಯಿಸುತ್ತಿತ್ತು. ಅವರು ಪ್ರತಿ ಸಾರಿ ಮಗು ಹೆತ್ತಾಗಲೂ ಅವರಿಗೆ 5000 ಡಾಲರ್ಗಳಷ್ಟು ಪರಿಹಾರ ನೀಡುತ್ತಿದ್ದ. ಮದುವೆ ಮಾಡಿಕೊಳ್ಳುವ ಇಲ್ಲಿನ ಗಂಡಸರು ಕಡ್ಡಾಯವಾಗಿ ತಮ್ಮ ಹೆಂಡತಿಯ ಹೆಸರಲ್ಲಿ ಒಂದು ಮನೆಯನ್ನು ಬರೆಯಲೇಬೇಕಿತ್ತು. ಒಂದು ವೇಳೆ ಅವರು ಇನ್ನೊಂದು ಮದುವೆಯಾಗುವದಾದರೆ ಖಡ್ಡಾಯವಾಗಿ ಮೊದಲ ಹೆಂಡತಿಯ ಅಪ್ಪಣೆಯನ್ನು ಪಡೆಯಲೇಬೇಕೆನ್ನುವ ಕಾನೂನನ್ನು ಜಾರಿಗೆ ತಂದನು. ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಲಿಬಿಯನ್ ಹೆಂಗಸರ ಸ್ಥಾನಮಾನಗಳಿಗಾಗಿ ಬಡಿದಾಡಿದ. ಒಂದುವೇಳೆ ಲಿಬಿಯನ್ ಹೆಣ್ಣುಮಗಳೊಬ್ಬಳು ಯೂರೋಪಿಯನ್ನರನ್ನೋ, ಇಂಗ್ಲೀಷ್ರಾನ್ನೋ ಮದುವೆಯಾದರೆ ಅವರಿಗೆ ತತ್ಕ್ಷಣ ಅಲ್ಲಿಯ ಪೌರತ್ವ ಸಿಗಬೇಕೆಂದು ಆಗ್ರಹಿಸಿದ. ಒಂದುವೇಳೆ ಅವರಿಂದ ಆಕೆಗೇನಾದರು ವಿಚ್ಛೇದನವಾದರೆ ಗಂಡನಿಂದ ನ್ಯಾಯಯುತವಾಗಿ ಆಕೆಗೆ ಏನೇನೋ ಸಿಗಬೇಕೋ ಅದೆಲ್ಲಾ ಸಿಗುವಂತೆ ಮಾಡಿದ.
ಇನ್ನು ಗಡಾಫಿ ಹೆಂಗಸರಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದನೆಂದರೆ ತನ್ನ ಅಂಗರಕ್ಷಣೆಗೂ ಬರೀ ಮಹಿಳಾ ಸೈನಿಕರನ್ನೇ ನೇಮಿಸಿಕೊಂಡಿದ್ದ. ಇದಕ್ಕೆ ಕಾರಣ ಮಹಿಳೆಯರ ಕಾರ್ಯದಕ್ಷತೆ ಬಗ್ಗೆ ಅವನಿಗೆ ಅಷ್ಟೊಂದು ಭರವಸೆ ಇತ್ತು ಮತ್ತು ಹೊರಜಗತ್ತಿಗೆ ಹೆಂಗಸರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ತೋರಿಸುವ ಉದ್ದೇಶವಾಗಿತ್ತು. ಜೊತೆಗೆ ಹೆಂಗಸರಿಗೆ ಸೇನಾತರಬೇತಿ ನೀಡಿದರೆ ಅವರು ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎನ್ನುವದು ಅವನ ಅಭಿಪ್ರಾಯವಾಗಿತ್ತೆಂದು ಇಲ್ಲಿಯವರು ಹೇಳುತ್ತಾರೆ. ಹಾಗೆ ನೋಡಿದರೆ ಗಡಾಫಿ ಮಹಿಳೆಯರನ್ನು ತನ್ನ ಅಂಗರಕ್ಷಕಿಯರನ್ನಾಗಿ ನೇಮಿಸಿಕೊಳ್ಳುವದರ ಮೂಲಕ ಅವರ ಕಾರ್ಯದಕ್ಷತೆಯ ಬಗ್ಗೆ ಹೊರಜಗತ್ತಿಗೆ ಮನದಟ್ಟು ಮಾಡಿದ ಪ್ರಪಂಚದ ಮೊಟ್ಟಮೊದಲ ಗಂಡಸೆಂಬ ಹೆಗ್ಗಳಿಕೆಗೆ ಪಾತ್ರನಾದ. ಮೇಲಾಗಿ ಇತರೆ ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿರುವಂತೆ ಅಂಥ ನಿರ್ಬಂಧಗಳ್ಯಾವವನ್ನೂ ಆತ ಅವರಿಗೆ ವಿಧಿಸಿರಲಿಲ್ಲ. ಇಲ್ಲಿನ ಹೆಣ್ಣು ಮಕ್ಕಳು ಆದಷ್ಟು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವತಂತ್ರವಾಗಿದ್ದರು.
ಆದರೆ ಅವನ ಈ ಅತಿಯಾದ ಮಹಿಳಾಪರ ಧೋರಣೆ ಮತ್ತು ಹೆಣ್ಣುಮಕ್ಕಳ ವಿಷಯದಲ್ಲಿ ಅವನು ಅನುಸರಿಸುತ್ತಿದ್ದ ಉದಾರ ನೀತಿ ಇಲ್ಲಿನ ಮುಸ್ಲಿಂ ಮೂಲಭೂತವಾದಿಗಳ ಕಣ್ಣು ಕುಕ್ಕಿಸಿತ್ತು. ಇದೇ ಕಾರಣಕ್ಕಾಗಿ ಒಮ್ಮೆ ಅಂದರೆ 1998 ರಲ್ಲಿ ಗಡಾಫಿ ಲಿಬಿಯಾದ ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುವಾಗ ಕೆಲವು ಇಸ್ಲಾಂ ಮೂಲಭೂತವಾದಿಗಳು ಆತನ ಮೇಲೆ ಗುಂಡಿನ ಮಳೆಗರೆದು ಕೊಲೆಗಯ್ಯಲು ಪ್ರಯತ್ನಿಸಿದರು.
ಗಡಾಫಿಯ ಅತಿಯಾದ ರಾಷ್ಟ್ರೀಯತವಾದ; ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ ಚೆಗುವಾರನಂತೆ ಕಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಇದಕ್ಕೆ ತಕ್ಕಂತೆ ದೇಶದ ಮುಖ್ಯಸ್ಥನಾಗಿ ಅಧಿಕಾರಕ್ಕೇರಿದ ನಂತರವೂ ಇತರರಂತೆ ತನ್ನನ್ನು ಸೇನೆಯ ಮುಖ್ಯಸ್ಥನಾಗಿ ಘೋಷಿಸಿಕೊಳ್ಳದೆ ’ಕರ್ನಲ್’ ಪದವಿಯಲ್ಲೇ ಉಳಿದುಕೊಂಡಿದ್ದು ಹಲವರಲ್ಲಿ ಭರವಸೆಯನ್ನು ಮೂಡಿಸಿತು. ಆತ ಅಧಿಕಾರಕ್ಕೆ ಬಂದ ತಕ್ಷಣ ಅಲ್ಲಿಯವರೆಗೆ ಲಿಬಿಯಾದಲ್ಲಿ ಬೀಡು ಬಿಟ್ಟಿದ್ದ ಅಮೆರಿಕಾ ಮತ್ತು ಬ್ರಿಟಿಷ್ ಮಿಲ್ಟ್ರಿ ಬೇಸ್ನ್ನು ಹೊರಗೆ ದಬ್ಬಿದನು. ಜೊತೆಗೆ ಲಿಬಿಯಾದ ಸಂವಿಧಾನವನ್ನು ರದ್ದುಪಡಿಸಿ ತನ್ನದೇ ಆದ “ಲಿಬಿಯಾನಾ ಅರಬ್ ಜಮ್ಹಾರಿಯಾ” ಎನ್ನುವ ಹೊಸ ಸಂವಿಧಾನವನ್ನು ಜಾರಿಗೆ ತರುವದರ ಮೂಲಕ ಆಡಳಿತ ನಡೆಸತೊಡಗಿದನಲ್ಲದೇ ಪಾಶ್ಚಿಮಾತ್ಯರಿಂದ ಜಮ್ಹಾರಿಯಾದ ಸ್ವಾಂತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಂಡನು.
ಆತ ಮುಂಚಿನಿಂದಲೂ ಒಬ್ಬ ರಾಷ್ಟ್ರೀಯತವಾದಿಯಾಗಿದ್ದ. ಎಷ್ಟೆಂದರೆ ಆತನ ವಿಷಯದಲ್ಲಿ ಬೇರೆ ಯಾರೂ ಮೂಗು ತೂರಿಸುವದು ಅವನಿಗೆ ಸರಿಹೋಗುತ್ತಿರಲಿಲ್ಲ. ಅವನೊಬ್ಬ ಯಾರ ಮೇಲೂ ಅವಲಂಬಿತನಾಗದ ದೊರೆಯಾಗಿದ್ದನಲ್ಲದೆ ಲಿಬಿಯಾವನ್ನು ಎಲ್ಲ ವಿಷಯಗಳಲ್ಲೂ ಸ್ವತಂತ್ರವಾಗಿಟ್ಟಿದ್ದ. ಗಡಾಫಿ ಅಧಿಕಾರಕ್ಕೆ ಬಂದ ತಕ್ಷಣ ಲಿಬಿಯಾದ ವಿದೇಶಿ ನೀತಿಯನ್ನು ಹಾಗೂ ಆಂತರಿಕ ನೀತಿಗಳನ್ನು ಮಾರ್ಪಡಿಸಿ ದೇಶವನ್ನು ಆಳತೊಡಗಿದನು. ಪರಿಣಾಮವಾಗಿ ಲಿಬಿಯಾ ಬಹಳ ಬೇಗನೆ ಪ್ರಗತಿಯತ್ತ ದಾಪುಗಾಲಿಡತೊಡಗಿತು. ಅವನು ಇತರೆ ಆಫ್ರಿಕಾದ ರಾಜರಂತೆ ಪಶ್ಚಿಮದವರ ಕೈಗೊಂಬೆಯಾಗದೆ ಅವರಿಗೆ ತೊಡೆ ತಟ್ಟಿ ನಿಲ್ಲುವದರ ಮೂಲಕ ಅವರ ಕೆಂಗಣ್ಣಿಗೆ ಗುರಿಯಾದ.
ಗಡಾಫಿಯ ಅತಿಯಾದ ಸಮಾಜವಾದ ಸಿದ್ಧಾಂತ: ಅವನ ಅತಿಯಾದ ಸಮಾಜವಾದದ ಸಿದ್ಧಾಂತ ಕೂಡಾ ಅವನಿಗೆ ಮುಳುವಾಯಿತೆಂದು ಇಲ್ಲಿನವರು ಹೇಳುತ್ತಾರೆ. ಅವನ ದೇಶದಲ್ಲಿ ಎಲ್ಲರೂ ಸಮಾನರು ಎಂಬ ಪರಿಕಲ್ಪನೆ ಅಕ್ಷರಶಃ ಜಾರಿಯಲ್ಲಿತ್ತು. ಆತ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದ. ಇಲ್ಲಿ ಮೇಲಾಧಿಕಾರಿ, ಕೆಳಾಧಿಕಾರಿ, ಬಡವ, ಶ್ರೀಮಂತ ಎಂಬ ಬೇಧ ಭಾವ ಇರಲಿಲ್ಲ. ಅಥವಾ ಮೇಲಾಧಿಕಾರಿಯಾದವನು ತನ್ನ ಕೈ ಕೆಳಗಿರುವ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವಂತಿರಲಿಲ್ಲ. ಒಬ್ಬ ಅಟೆಂಡರ್ ನಿಂದ ಹಿಡಿದು ಕಾಲೇಜಿನ ಡೀನ್ ವರೆಗೂ ಎಲ್ಲರೂ ಸರಿ ಸಮಾನರೇ. ಅಟೆಂಡರ್ ನಾದವನು ಡೀನ್ ಕುರ್ಚಿಯ ಮೇಲೆ ಯಾವುದೇ ಹಿಂಜರಿಕೆಯಿಲ್ಲದೆ ಕುಳಿತುಕೊಳ್ಳುತ್ತಿದ್ದ. ಆತನ ಅಪ್ಪಣೆಯಿಲ್ಲದೆ ಆತನ ಕಂಪ್ಯೂಟರನ್ನು ಬಳಸುತ್ತಿದ್ದ. ಆತನೊಟ್ಟಿಗೆ ಕುಳಿತು ಕಾಫಿ ಕುಡಿಯುತ್ತಿದ್ದ. ಹಾಗೆಯೆ ಡೀನ್ ಆದವನು ಕುಳಿತಲ್ಲಿಂದಲೇ ಎಲ್ಲ ಕೆಲಸ ತೆಗೆಯಬೇಕು ಎಂದೇನೂ ನಿಯಮವಿರಲ್ಲ. ಅಗತ್ಯ ಬಿದ್ದರೆ ಅವನು ಒಬ್ಬ ಗುಮಾಸ್ತನವರೆಗೂ ನಡೆದುಕೊಂಡುಬಂದು ಕೆಲಸ ಮಾಡಿಸಿಕೊಳ್ಳಬೇಕಾಗುತ್ತಿತ್ತು. ಒಂದುವೇಳೆ ಅವನು ಬೇರೆ ಕೆಲಸದಲ್ಲಿ ಮಗ್ನನಾಗಿದ್ದರೆ ಅವನ ಕೆಲಸ ಮುಗಿಯುವವರೆಗೂ ಈತನು ಕಾಯಬೇಕಾಗುತ್ತಿತ್ತು. ಇವತ್ತು ಒಂದು ಆಸ್ಪತ್ರೆಯ ಕಸಗೂಡಿಸುವವನು ನಾಳೆ ದಿಢೀರ್ ಅಂತಾ ಅದೇ ಆಸ್ಪತ್ರೆಯ ಮುದೀರ್ (ಮುಖ್ಯಸ್ಥ) ಆಗಬಹುದಿತ್ತು. ಹೀಗಾಗಿ ಮುದೀರ್ ಆದವನು ಯಾವತ್ತೂ ತನ್ನ ಕೆಳಾಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರಲಿಲ್ಲ ಮತ್ತು ಅಧಿಕಾರದ ಅಮಲಿನಲ್ಲಿ ತೇಲುತ್ತಿರಲಿಲ್ಲ. ಏಕೆಂದರೆ ಇವತ್ತು ಮೇಲಾಧಿಕಾರಿಯಾದವನು ತನ್ನ ಕೆಳಾಧಿಕಾರಿಯ ಮೇಲೆ ಅಧಿಕಾರ ಚಲಾಯಿಸಿಬಿಟ್ಟರೆ ನಾಳೆ ಅವನೂ ಕೂಡಾ ಮುದೀರ್ ಆಗಿ ತಮ್ಮ ಮೇಲೆ ಅಧಿಕಾರ ಚಲಾಯಿಸಬಹುದು ಎನ್ನುವ ಭಯವಿತ್ತು.
ಆದರೆ ಇಲ್ಲಿನ ಅತ್ಯಂತ ಶ್ರೀಮಂತ ವರ್ಗ ಹಾಗೂ ಉನ್ನತ ಅಧಿಕಾರಿಗಳ ಪಡೆಗಳಿಗೆ ಗಡಾಫಿಯ ಈ ನೀತಿ ಕುರಿತಂತೆ ತೀವ್ರ ಅಸಮಾಧಾನವಿತ್ತು. ಅವರು ಬಡವರು-ಶ್ರೀಮಂತರು, ಓದಿದವರು-ಓದದವರು ಎಲ್ಲರೂ ಒಂದೇ ಆಗಲು ಹೇಗೆ ಸಾಧ್ಯ? ಗಡಾಫಿಗೆ ಅಷ್ಟೂ ತಿಳಿಯಬಾರದೇ? ಎಂದೆಲ್ಲಾ ವಾದಿಸುತ್ತಿದ್ದರು. ಮೇಲಾಗಿ ಅವರಲ್ಲಿ ತಾವೂ ದೇಶದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಇಚ್ಚೆ ಬಲವಾಗುತ್ತಿತ್ತು. ಇಂಥವರನ್ನೇ ಮುಂದಿಟ್ಟುಕೊಂಡು ಅಮೆರಿಕಾ, ಬ್ರಿಟನ್, ಮತ್ತು ಯೂರೋಪ್ ರಾಷ್ಟ್ರಗಳು ಇಲ್ಲೊಂದು ಕ್ರಾಂತಿ ಎಬ್ಬಿಸಿ ಅವನನ್ನು ಮುಗಿಸುವಲ್ಲಿ ಯಶಸ್ವಿಯಾದವು.
ಗಡಾಫಿಯ ಆಡಳಿತದಲ್ಲಿನ ದೋಷಗಳು: ಗಡಾಫಿ ಒಬ್ಬ ಚಾಣಾಕ್ಷ ರಾಜಕಾರಿಣಿಯಾದರೂ ಅವನಿಗೆ ತನ್ನ ಆಡಳಿತದಲ್ಲಿದ್ದ ದೋಷಗಳ ಬಗ್ಗೆ ಗೊತ್ತೇ ಇರಲಿಲ್ಲ. ದೇಶದ ಅಭಿವೃದ್ಧಿಗಾಗಿ ಆತ ಅಳವಡಿಸಿದ ರೀತಿ-ನೀತಿಗಳು ಸರಿಯಾಗಿದ್ದವು. ಆದರೆ ಅವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಲುವಲ್ಲಿ ಆತ ವಿಫಲನಾದ. ಉದಾಹರಣೆಗೆ ಇಲ್ಲಿನ ಸಾಕಷ್ಟು ಸರಕಾರಿ ಅಧಿಕಾರಿಗಳು ಸೋಂಬೇರಿಗಳು ಮತ್ತು ಭ್ರಷ್ಟರಾಗಿದ್ದರು. ಅವನು ಮನಸ್ಸು ಮಾಡಿದ್ದರೆ ಅವರಿಂದ ಸಾಕಷ್ಟು ಕೆಲಸವನ್ನು ತೆಗೆದು ದೇಶವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಬಹುದಿತ್ತು. ಹಾಗೆ ಮಾಡದೆ ಅವರನ್ನು ಅವರಿಷ್ಟಕ್ಕೆ ತಕ್ಕಂತೆ ಬಿಟ್ಟನು. ಕ್ರಾಂತಿ ಏಳುವ ಒಂದು ವರ್ಷ ಮುಂಚೆ ಅಂತಾ ಕಾಣುತ್ತೆ. ಒಮ್ಮೆ ಇಲ್ಲಿನ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ “ನೀವು ಇನ್ನೂ ಐವತ್ತು ವರ್ಷಗಳ ಕಾಲ ಕುಳಿತು ತಿಂದರೂ ನಾನು ನಿಮ್ಮ ಹೊಟ್ಟೆಗೆ ಹಾಕಬಲ್ಲೆ. ಯಾವುದಕ್ಕೂ ಯೋಚಿಸಬೇಕಾಗಿಲ್ಲ. ಲಿಬಿಯಾದಲ್ಲಿ ಕರಗದಷ್ಟು ಆಸ್ತಿ ಇದೆ. ಆದರೆ ನೀವು ಕೆಲಸ ಮಾಡಿ. ಕೆಲಸ ಮಾಡಿದರೆ ದೇಶ ಮುಂದುವರಿಯುತ್ತದೆ.” ಎಂದು ಕರೆ ಕೊಟ್ಟಿದ್ದನಾದರೂ ಕೆಲಸ ಮಾಡದೇ ಇರುವವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲೇ ಇಲ್ಲ. ಪರಿಣಾಮವಾಗಿ ಇಲ್ಲಿನವರು ಹೊರಜಗತ್ತಿನವರೊಂದಿಗೆ ಸ್ಪರ್ಧಿಸಿ ದೇಶವನ್ನು ಮುನ್ನಡೆಸುವ ಮನೋಭಾವನೆಯನ್ನೇ ಕಳೆದುಕೊಂಡರು. ಮಾತ್ರವಲ್ಲ ಲಿಬಿಯಾದ ಬಹಳಷ್ಟು ಸರಕಾರಿ ಅಧಿಕಾರಿಗಳು ಅಂದರೆ ಶೇಕಡಾ 65% ಅಧಿಕಾರಿಗಳು ಎರೆಡೆರೆಡು ಕಡೆ ಸಂಬಳ ತೆಗೆದುಕೊಳ್ಳುತ್ತಿದ್ದರು. ಕೆಲವರಂತೂ ಒಂದು ಕಡೆ ಕೆಲಸ ಮಾಡಿ ನಾಲ್ಕೈದು ಸಂಬಳಗಳನ್ನು ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಲವರು ಎಂಟ್ಹತ್ತು ಸಂಬಳಗಳನ್ನು ತೆಗೆದುಕೊಂಡ ಉದಾಹರಣೆಗಳು ಕೂಡಾ ಇವೆ. ಹಾಗಾದರೆ ಇದು ಗಡಾಫಿಗೆ ಗೊತ್ತಿರಲಿಲ್ಲವೇ? ಗೊತ್ತಿತ್ತು ಎಂದು ಇಲ್ಲಿನವರು ಹೇಳುತ್ತಾರೆ. ಆದರೂ ಸುಮ್ಮನಿದ್ದ ಏಕೆ? ಇದು ಅವನ ಉದಾಸೀನವೋ? ಅಥವಾ ಹೇಗಿದ್ದರೂ ನಮ್ಮವರೇ ತಿನ್ನುತ್ತಾರೆ ತಿನ್ನಲಿ ಎನ್ನುವ ಅವನ ಉದಾರ ಮನೋಭಾವವೋ? ಅಥವಾ ಇದನ್ನು ಪ್ರಶ್ನಿಸಿದರೆ ತನ್ನ ಖುರ್ಚಿಗೆ ಎಲ್ಲಿ ಧಕ್ಕೆ ಬರುತ್ತದೋ ಎನ್ನುವ ಅಳುಕಿತ್ತೇ? ಇವನ್ನೆಲ್ಲಾ ಅವನ ನೇರ, ನಿಷ್ಟುರ ಹಾಗೂ ತಿಕ್ಕಲುತನದ ವಕ್ತಿತ್ವದ ಹಿನ್ನೆಲೆಯಲ್ಲಿಟ್ಟು ನೋಡಿದಾಗ ಯಾವುದೆಂದು ಸರಿಯಾಗಿ ನಿರ್ಧರಿಸುವದು ಕಷ್ಟವಾಗುತ್ತದೆ.
ಆತನನ್ನು ಬಗೆಯುತ್ತಾ ಹೋದಷ್ಟು ನಿಗೂಢವಾಗುತ್ತಾ ಹೋಗುತ್ತಾನೆ. ಮೇಲಾಗಿ ಬಹಳಷ್ಟು ಸರಕಾರಿ ಅಧಿಕಾರಿಗಳು ವರ್ಷಾನುಗಟ್ಟಲೇ ಕಾರಣವಿಲ್ಲದೆ ರಜೆಯ ಮೇಲೆ ಹೋದರೂ ಅವರನ್ನು ಕೆಲಸದಿಂದ ತೆಗೆಯುವದಾಗಲಿ ಅಥವಾ ಅವರ ಸಂಬಳವನ್ನು ಹಿಡಿಯುವದಾಗಲಿ ಮಾಡುತ್ತಿರಲಿಲ್ಲ. ಹೀಗಾಗಿ ಸರಕಾರಿ ಅಧಿಕಾರಿಗಳಲ್ಲಿ ಹೇಗಿದ್ದರೂ ನಡೆಯುತ್ತೆ ಎನ್ನುವ ಮನೋಧೋರಣೆ ಬೇರೂರಿತ್ತು. ಸರಕಾರಿ ಕಛೇರಿಗಳಲ್ಲಿ ಒಂದು ಶಿಸ್ತಿನ ಕೊರತೆ ಸದಾ ಎದ್ದು ಕಾಣುತ್ತಿತ್ತು.
(ಇನ್ನೂ ಇದೆ..)

‍ಲೇಖಕರು G

3 July, 2015

1 Comment

  1. Dr. Prabhakar M. Nimbargi

    This article has begun made us to doubt the very nature of a so-claimed “TERRORIST’ and the definition of TERRORISM from western viewpoint. A new insight indeed. We anxiously wait for further articles.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading