’ಇಷ್ಟ ಲಿಂಗವೆಂದರೆ ಜಾತಿಯ ಗುರುತಿನ ಚೀಟಿ ಮಾತ್ರವೇ?’ – ಜಿ ಎನ್ ನಾಗರಾಜ್

(ಲೇಖನದ ಮೊದಲ ಭಾಗ)


ಇಷ್ಟ ಲಿಂಗವೆಂದರೆ ಜಾತಿಯ ಗುರುತಿನ ಚೀಟಿ ಮಾತ್ರವೇ ?
ಇಷ್ಠ ಲಿಂಗದ ಪರಿಕಲ್ಪನೆ ಒಂದು ಅತ್ಯಂತ ಮಹತ್ವದ ಪರಿಕಲ್ಪನೆ. ಅದರ ಎಲ್ಲಾ ಆಯಾಮಗಳನ್ನು ಲೇಖನದಲ್ಲಿ ವಿವರಿಸಲಾಗಿಲ್ಲ. ಆದರೆ ಕಾಯಕವೇ ಕೈಲಾಸ, ಕಾಯವೇ ಕೈಲಾಸ ಅಥವಾ ದೇಹವೇ ದೇಗುಲ,36 ತತ್ವಗಳು, ಅದರಲ್ಲಿನ ಅಂಗ ತತ್ವಗಳು, ಲಿಂಗ ತತ್ವಗಳು, ಲಿಂಗಾಂಗ ಸಾಮರಸ್ಯ, ಐಕ್ಯ ಸ್ಥಲ ಇವುಗಳ ನಡುವಣ ಪರಸ್ಪರ ಗಾಢ ಸಂಬಂಧಗಳು , ಇವೆಲ್ಲಕ್ಕೂ ಜಾತಿ ವಿರೋಧಕ್ಕೂ ಇರುವ ಸಂಬಂಧವನ್ನು ವಿವರಿಸಿದ್ದೇನೆ. ಅಂದ ಮೇಲೆ ತನ್ನಿಂದ ತಾನೇ ಇಷ್ಠ ಲಿಂಗವೆಂಬುದು ಕೇವಲ ಐಡೆಂಟಿಟಿ ಕಾರ್ಡ್ ಮಾತ್ರ ಅಲ್ಲ ಎಂದು ಆಧಾರ ಸಮೇತ ಸಾಧಿಸಲಾಗಿದೆಯೆಂದಾಯಿತು. ರಾತ್ರಿಯೆಲ್ಲಾ ರಾಮಾಯಣ ಕೇಳಿದ ಮೇಲೆ ಮತ್ತೆ ರಾಮನಿಗೂ ಸೀತೆಗೂ ಏನು ಸಂಬಂಧ ಎಂದಂತಾಗಿದೆ ಎನ್ನಬಹುದು. ಆದರೂ ಈ ಪ್ರಶ್ನೆ ಉದ್ಭವವಾಗಿರುವುದು ಅಸಹಜವೇನಲ್ಲ. ಪ್ರಜಾ ಪ್ರಭೂತ್ವದ ಸಂದರ್ಭದಲ್ಲಿ ಜಾತಿಯ ಗುರುತುಗಳು ಅಪ್ರಸ್ತುತ ಅನ್ನುವಾಗ ಮೇಲೆ ಎದ್ದು ಕಾಣುವ ವಿಭೂತಿ ಮೊದಲಾದ ಗುರುತುಗಳನ್ನು ಕೈಬಿಟ್ಟ ಪರಿಸ್ಥಿತಿಯಲ್ಲಿ ಮೈ ಮೇಲೆ ಧರಿಸಿದ ಕರಡಿಗೆಯ ( ಲಿಂಗವನ್ನು ಇಟ್ಟ ಬೆಳ್ಳಿಯ ಭರಣಿ ) ಮೂಲಕ ಲಿಂಗಾಯತ ಜಾತಿಯನ್ನು ಗುರುತಿಸಲು, ಜನಿವಾರದ ಮೂಲಕ ಬ್ರಾಹ್ಮಣರನ್ನು ಗುರುತಿಸುವುದು ಜಾತಿವಾದದ ವಾತಾವರಣದ ಸಾಧನವಾಗಿದೆ.
ಸಾಮಾಜಿಕ ಬೆಳವಣಿಗೆಯ ವ್ಯಂಗ್ಯವೆಂದರೆ ಇದೇ ! ಜನಿವಾರ ಹಾಗೂ ಶಿವದಾರಗಳೆರಡೂ ದೇವಾಲಯ ದೂರವಾದ ಪೂಜಾ ಪದ್ಧತಿಗಳು. ಜನಿವಾರ ಧರಿಸಿ ಸಂಧ್ಯಾ ವಂದನೆಯ ಮೂಲಕ ಪೂಜೆ, ಮನೆಯಲ್ಲಿ ಅಗ್ನಿ ಹೋತ್ರ, ಯಜ್ಞ ಯಾಗಾದಿಗಳು, ಇವೇ ವೇದಕಾಲೀನ ಪೂಜಾ ಪದ್ಧತಿಯಾಗಿತ್ತು. ಹಾಗೆಯೇ ಇಷ್ಠಲಿಂಗ ಹಾಗೂ ಅದರ ಪೂಜೆ ವಚನಕಾರರ ಪೂಜಾ ಪದ್ಧತಿ.ಯಾಗಿತ್ತು. ಎರಡಕ್ಕೂ ದೇವಾಲಯದ ಅಗತ್ಯವಿಲ್ಲ. ಆದರೆ ಒಂದು ವ್ಯತ್ಯಾಸವಿದೆ.
ಸಂಧ್ಯಾವಂದನೆಯ ಪದ್ಧತಿ ದೇವಾಲಯದ ನಿರಾಕರಣೆಯಿಂದ ಹುಟ್ಟಿದ್ದಲ್ಲ, ದೇವಾಲಯಗಳ ಕಲ್ಪನೆ ಹುಟ್ಟುವ ಮೊದಲೇ ಆರಂಭವಾದ ಪದ್ಧತಿ. ಇಷ್ಠ ಲಿಂಗ ಧಾರಣೆ ದೇವಾಲಯಗಳನ್ನು ನಿರಾಕರಿಸುವ ಸ್ಪಷ್ಠ ಉದ್ದೇಶದಿಂದ ಹುಟ್ಟಿದ್ದು. ಒಂದು ನಿರುದ್ದಿಷ್ಯವಾಗಿ ದೇವಾಲಯ ರಹಿತ ಮತ್ತೊಂದು ಉದ್ದೇಶಪೂರ್ವಕ ದೇವಾಲಯ ನಿರಾಕರಣೆ. ವೇದಕಾಲೀನ ಯಜ್ಞ ಯಾಗಾದಿಗಳನ್ನು ತೊಡೆದು ಹಾಕಿದ್ದು ವೇದ ವಿರೋಧೀ ಶ್ರಮಣ ಧರ್ಮಗಳಾದ ಭೌದ್ಧ, ಹಾಗೂ ಜೈನ ಧರ್ಮಗಳು. ಆದರೆ ವೈದಿಕ ಧರ್ಮ ಯಜ್ಞಗಳನ್ನು ಕೈ ಬಿಟ್ಟು ಆ ವೇಳೆಗೆ ಪ್ರಚಲಿತವಾಗಿದ್ದ ದೇವಾಲಯ ಹಾಗೂ ವಿಗ್ರಹ ಪೂಜೆಗೆ ತನ್ನನ್ನು ಒಗ್ಗಿಸಿಕೊಂಡಿತು. ನಂತರದ ವೈದಿಕ ಪಂಥಗಳಲ್ಲಿ ಮಾಧ್ವ ಹಾಗೂ ವೈಷ್ಣವ ಪಂಥಗಳು ದೇವಾಲಯ ಕೇಂದ್ರಿತ ತತ್ವ ಮತ್ತು ಆಚರಣೆ. ಅದ್ವೈತದಲ್ಲಿ ನಿರಾಕಾರ ಬ್ರಹ್ಮನೇ ಕೇಂದ್ರವಾದರೂ, ತತ್ವಶಃ ದೇವಾಲಯ ಹಾಗೂ ವಿಗ್ರಹ ಪೂಜೆಯನ್ನು ವಿರೋಧಿಸುವುದು ಅವಶ್ಯವೆನಿಸುವುದಾದರೂ ಶಂಕರರು ದೇವಾಲಯ ಪೂಜಾ ಪದ್ಧತಿಯನ್ನು ಪ್ರಚಲಿತಗೊಳಿಸಿದರು. ಹೀಗೆ ಜನಿವಾರ ಸಂಧ್ಯಾವಂದನೆಯ ಜೊತೆಗೆ ಮನೆಯಲ್ಲಿ ಹಾಗೂ ದೇವಾಲಯದಲ್ಲಿ ಮೂತರ್ಿ ಪೂಜೆ ಪದ್ಧತಿಯಾದವು. ಲಿಂಗಾಯತರಲ್ಲಿ ಇಷ್ಠ ಲಿಂಗ ಧಾರಣೆ ಅದರ ಪೂಜೆ ಇವುಗಳಿಗೆ ಮಾತ್ರ ಸೀಮಿತವಾಗಬೇಕದದ್ದು ಮೂಲ ತತ್ವಕ್ಕೆ ವಿರೋಧವಾಗಿ ದೇವಾಲಯ ಪೂಜೆ ಮುಂದುವರೆಯಿತು.
ಈ ಮೇಲಿನ ವಿವರಣೆಯನ್ನು ನೋಡುವಾಗ ಎರಡರ ನಡುವೆ ವ್ಯತ್ಯಾಸ ಗೌಣವಾಗಿದೆ ಎಂದೆನಿಸುತ್ತದೆ. ಎರಡೂ ಪೂಜಾ ಪದ್ಧತಿಗಳೂ ಮೂಲಕ್ಕೆ ನಿಷ್ಠೆರಾದರೆ ದೇವಾಲಯ ಪದ್ಧತಿಯನ್ನು ದೂರವಿಡಬಹುದು. ಆದರೆ ಇವೆರಡರ ನಡುವೆ ಬಹಳ ಪ್ರಮುಖವಾದ ಒಂದು ವ್ಯತ್ಯಾಸವೆಂದರೆ ಜಾತಿ ವ್ಯವಸ್ಥೆಗೆ ಸಂಬಂಧಿಸಿದ್ದು. ಎಲ್ಲರಿಗೂ ಗೊತ್ತಿರುವಂತೆ ಜನಿವಾರ ಕೇವಲ ದ್ವಿಜರಾದ ಮೂರು ವರ್ಣಗಳಿಗೆ ಮಾತ್ರ. ಈ ಮೇಲು ವರ್ಣಗಳಲ್ಲಿಯೂ ಕೇವಲ ಪುರುಷರಿಗೆ ಮಾತ್ರ. ಹೀಗೆ ಈ ಆಚರಣೆ ಬಹು ಸಂಖ್ಯೆಯ ಜನರಿಗೆ ನಿರಾಕರಿಸಲ್ಪಡುತ್ತಿದೆ. ಆದರೆ ಲಿಂಗ ಧಾರಣೆ ವಚನ ಧರ್ಮವನ್ನು ಒಪ್ಪಿದ ಎಲ್ಲ ಜಾತಿಗಳ ಜನರಿಗೂ ಕಡ್ಡಾಯವಾಯಿತು ಮಹಿಳೆಯರಿಗೂ ಲಿಂಗಧಾರಣೆ ಆ ಮೂಲಕ ಸ್ವತಂತ್ರ ಪೂಜೆಯ ಹಕ್ಕು ದೊರಕಿತು. ಹೀಗೆ ಬಹು ದೊಡ್ಡ ಸಂಖ್ಯೆಯ ಜನರು ಇಷ್ಟ ಲಿಂಗಧಾರಿಗಳಾಗಿದ್ದಾರೆ. ವಿವಿಧ ಕೆಳಜಾತಿಗಳು ಅದರಲ್ಲಿಯೂ ಬೇರೆಡೆಗಳಲ್ಲಿ ಅಸ್ಪೃಶ್ಯರಂತೆಯೇ ನಡೆಸಿಕೊಳ್ಳುವ ಕ್ಷೌರಿಕರು ಕೂಡ ಲಿಂಗಧಾರಿಗಳು. ಈಗಲೂ ಕೆಲ ಪ್ರದೇಶಗಳಲ್ಲಿ ಲಿಂಗಧಾರಿಗಳಾದ ಸಸ್ಯಾಹಾರೀ ದಲಿತ ಸಮುದಾಯವನ್ನೂ ನೋಡುತ್ತೇವೆ. ಬೇರೇ ಜಾತಿಗಳವರು ಜನಿವಾರಧಾರಿಗಳಾಗಿ ಬ್ರಾಹ್ಮಣರೆಂದು ಅಥವಾ ಕ್ಷತ್ರಿಯ, ವೈಶ್ಯ ರೆಂದು ಪರಿಗಣಿಸಲ್ಪಡುವ ಅವಕಾಶವೇ ಇಲ್ಲ. ಅದರೆ ಅಪರೂಪವಾದರೂ ಇತರ ಜಾತಿಗಳವರು ಕೆಲವೊಮ್ಮೆ ದಲಿತರಿಗೂ ಲಿಂಗಧಾರಣೆ ಮಾಡುವ ಉದಾಹರಣೆಗಳನ್ನು ಇಂದೂ ಕೂಡ ಕೇಳುತ್ತಿರುತ್ತೇವೆ. ವೈದಿಕ ಧರ್ಮದಲ್ಲಿ ನಂತರ ಚಾತುರ್ವಣ್ಯಂ ಮಯಾ ಸೃಷ್ಠಂ ಗುಣ ಕರ್ಮ ವಿಭಾಗಶಃ ಎಂಬ ತತದಂತೆ ್ವ ಅವರವರ ಗುಣ-ಕರ್ಮಗಳಿಗೆ ಅನುಸಾರವಾಗಿ ಯಾವ ‘ ಜಾತಿಯಲ್ಲಿ ಹುಟ್ಟಿದ್ದರೂ ಬ್ರಾಹ್ಮಣ ಮೊದಲಾದ ವರ್ಣ-ಜಾತಿಗಳಿಗೆ ಪ್ರವೇಶ ಪಡೆಯುವ ದಾರಿಗಳು, ದೀಕ್ಷೆಗಳನ್ನು ರೂಪಿಸಬೇಕಾಗಿತ್ತು. ಆದರೆ ಅಂತಹುದೇನೂ ನಡೆಯಲಿಲ್ಲ. ಆದ್ದರಿಂದ ಇಂತಹುದೊಂದು ಕ್ರಿಯೆ ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ.
ಇದು ಕೇವಲ ದೇವಾಲಯವೊಂದಕ್ಕೆ ಯಾವ ಜಾತಿಯವರಾದರೂ ಹೋಗಿ ಭಾಗವಹಿಸಬಹುದು ಎಂಬಂತಹ ಕ್ರಿಯೆಯಲ್ಲ. ತಮ್ಮ ಮೂಲ ಜಾತಿಗಳನ್ನು ತೊರೆದು ಎಲ್ಲರೂ ಒಂದೇ ಜಾತಿಯಾಗಬೇಕು ಎಂಬ ಒತ್ತಾಯ ಹಾಗೂ ಮಹಿಳೆಯರು ಪುರುಷರಂತೆಯೇ ಪೂಜೆಯಲ್ಲಿ ಸಮಾನತೆಯನ್ನು ಪಡೆದದ್ದು ಮಾತ್ರವಲ್ಲ ಅವರ ದೇಹ ಕ್ರಿಯೆಗಳಿಂದಾಗಿ ಮೈಲಿಗೆ ಎಂಬ ಸರ್ವತ್ರವಾದ ಭಾವನೆಯನ್ನು ತೊಡೆದು ಹಾಕುವ ಒತ್ತಾಯ. ಆದ್ದರಿಂದ ಇದು ಕೇವಲ ಆಧ್ಯಾತ್ಮಕ್ಕೆ ಸೀಮಿತವಾದದ್ದಲ್ಲ ದಿನದಿನದ ಸಾಮಾಜಿಕ ವ್ಯವಹಾರಗಳಲ್ಲಿ ಬದಲಾವಣೆಗಾಗಿ ನಡೆದ ಪ್ರಯತ್ನ.. ಇನ್ನು ಒಬ್ಬರು ಹೆಣ್ಣು-ಗಂಡು ಜೈವಿಕ ಭಿನ್ನತೆ, ಜಾತಿಗಳ ಭಿನ್ನತೆ, ಭಾಷೆಗಳ ಭಿನ್ನತೆ, ಪ್ರಾದೇಶಿಕ ಭಿನ್ನತೆ, ರಿಲಿಜಸ್ ಭಿನ್ನತೆ ಇವೆಲ್ಲವನ್ನು ಶಿವ ಸಾಯುಜ್ಯದಲಿ ಎಣಿಸಬಾರದೆಂದರೆ ಇವೆಲ್ಲವನ್ನೂ ತೊಡೆದು ಹಾಕ ಬೇಕೆಂದು ಅರ್ಥವೇ ? ಹಾಗಲ್ಲವಾದರೆ ವಚನಗಳು ಜಾತಿಗಳಿರಬಾರದು ಎಂದು ಹೇಳಿದಂತಾಗುವುದೇ ಎಂದು ಕೇಳಿದ್ದಾರೆ. ವ್ಯತ್ಯಾಸ, ಭಿನ್ನತೆ, ಬೇಧ ಬೇರೆ ಬೇರೆ ಎಂದು ವಿವರಿಸಬೇಕಾಗಿಲ್ಲ. ಶಿವ ಸಾಯುಜ್ಯದ ಬಗ್ಗೆ ಮಾತನಾಡುತ್ತಿರುವಾಗ ರಿಲಿಜಸ್ ಭಿನ್ನತೆಯ ಪ್ರಶ್ನೆ ಬರುವುದಿಲ್ಲವೆಂದು ಪ್ರಶ್ನೆ ಎತ್ತಿದವರು ಮರೆತು ಬಿಟ್ಟಿದ್ದಾರೆ. ಇನ್ನು ಭಿನ್ನತೆ ಹೋಗಬೇಕೆಂದು ವಚನಕಾರರು ಹೇಳಿದ್ದಾರೆ ಎಂದು ವಾದಿಸುವುದು ಬಾಲಿಶವಾದದ್ದು. ಅವರು ಭಿನ್ನತೆಯನ್ನು ಮೂಲ ಮಾಡಿಕೊಂಡ ಬೇಧ ತೊಲಗಬೇಕೆಂದು ಸ್ಪಷ್ಟ ಪಡಿಸಿದ್ದಾರೆ ಅವರಿಗೆ ವಚನಗಳ ಉದಾಹರಣೆಯ ಮೂಲಕ ವಿವರಿಸುವ ಬಗ್ಗೆ ಅಲರ್ಜಿಯಿರುವುದರಿಂದ ಅದನ್ನು ಮಾಡಹೋಗುವುದಿಲ್ಲ. ಎಲ್ಲ ನೈಸರ್ಗಿಕ, ಭೌಗೋಳಿಕ ಮೂಲದ ಭಿನ್ನತೆಗಳು ಹೆಣ್ಣು ಗಂಡು, ಪ್ರಾದೇಶಿಕ ಆಧಾರದ ಮೇಲೆ ಬೇಧವೆಣಿಸಬಾರದು ಸಮಾನವಾಗಿ ಪರಿಗಣಿಸಬೇಕು ಎಂದು ಅವರು ಪ್ರತಿಪಾದಿಸಿದರು ಹಾಗೆಯೇ ಆಚರಿಸಿ ತೋರಿಸಿದರು. ಇನ್ನು ಜಾತಿಗಳಂತೂ ನೈಸರ್ಗಿಕವಾದದು ಎಂದು ಪ್ರಶ್ನೆ ಮಾಡಿದವರ ಅಭಿಪ್ರಾಯವೇ ? ಹಾಗಿಲ್ಲವೆಂದು ಕೊಳ್ಳುತ್ತೇನೆ. ಆದ್ದರಿಂದಲೇ ವಚನಕಾರರು ಭಿನ್ನತೆಗಳನ್ನು ಎಣಿಸಬಾರದು ಎಂದು ಹೇಳಲಿಲ್ಲ ಅವರು ಎಲ್ಲ ಸಾಮಾಜಿಕ ಆಚಾರ ವ್ಯವಹಾರಗಳಲ್ಲಿ ಬಹಳ ಮುಖ್ಯವಾಗಿ ಮದುವೆಯಲ್ಲಿ ಕೂಡ ಜಾತಿಯನ್ನು ಪರಿಗಣಿಸಬಾರದು ಆ ಬೇಧಗಳು ತೊಲಗಿ ಎಲ್ಲರೂ ಒಂದೇ ಎಂದು ಭಾವಿಸಬೇಕೆಂದರು. .

ಆದ್ದರಿಂದ ಇಷ್ಠ ಲಿಂಗವೆಂಬುದು ವಚನ ತತ್ವಗಳಲ್ಲಿ ಅತೀವ ಸಾಮಾಜಿಕ ಪರಿಣಾಮವನ್ನುಂಟು ಮಾಡಿದ, ಹೆಚ್ಚು ಸಾಮಾಜಿಕ ಬಳಕೆಗೆ ಬಂದ ಪ್ರಮುಖ ತತ್ವ ಸಮುಚ್ಚಯ. ಈಗಿನ ಸಂದರ್ಭದಲ್ಲಿ ಎದ್ದ ಚಚರ್ೆ ವಚನಗಳಲ್ಲಿ ಏನು ಹೇಳಲಾಗಿದೆ, ಅದು ಜಾತಿ ವಿರೋಧದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು . ಆ ದೃಷ್ಠಿಯಿಂದ ಇಷ್ಠಲಿಂಗವೆಂಬುದು ಸರಿಸಾಟಿಯಿಲ್ಲದ ಒಂದು ಆವಿಷ್ಕಾರ. ವಚನಗಳ ಧರ್ಮದ ಹಬ್ಬುವಿಕೆಯ ಸಂದರ್ಭದಲ್ಲಿ ಪ್ರಬಲವಾದ ಜಾತಿ ವಿರೋಧಿ ಪರಿಣಾಮ ಬೀರಿದೆ. ಅದನ್ನು ಅದರ ಮೂಲ ಆಶಯದಂತೆ ಮತ್ತೆ ಜೀವ ತುಂಬಿದಲ್ಲಿ ತೀವ್ರವಾದ ಸಾಮಾಜಿಕ ಪರಿಣಾಮವನ್ನು ಬೀರಬಲ್ಲ ಆಧ್ಯಾತ್ಮಿಕ ತತ್ವ. ಮತ್ತು ಆಚರಣೆ..ಇಂದಿನ ಆಚರಣೆಯಲ್ಲಿಯೂ ಮಹಿಳಾ ಸಮಾನತೆಗೆ ಕೊಡುಗೆ ನೀಡುತ್ತಿರುವ ಸಾಧನ. ಜಾತಿ ವಿರೋಧದ ವಿಷಯದಲ್ಲಿ ಅದರ ಪರಿಣಾಮ ಸ್ಥಗಿತಗೊಂಡಿದೆ.
ಕಾಯಕವೇ ಕೈಲಾಸ ಎಂಬ ಬಗ್ಗೆ :
ಸಾಹಿತಿಗಳು ಬೇರೆ ಬೇರೆ ಜಾತಿಯವರು ಬೇರೆ ಬೇರೆ ಕಸಬು ಮಾಡುವುದನ್ನೇ ಜಾತಿವ್ಯವಸ್ಥೆಯ ಕ್ರೌರ್ಯ ಎಂದು ಬಣ್ಣಿಸುತ್ತಾರೆ. ಆದರೆ ಅದನ್ನೇ ವಚನಕಾರರು ತಮ್ಮ ತಮ್ಮಕಾಯಕ ಮಾಡುತ್ತಲೇ ಕೈಲಾಸ ಹೊಂದಬಹುದು ಎನ್ನುವುದು ಸಮಾನತೆಯ ತತ್ವ ಎಂದು ಪರಿಗಣಿಸುವುದು ಅಸಂಬದ್ಧತೆಯ ಪ್ರದರ್ಶನವಲ್ಲವೇ ಎಂಬ ಪ್ರಶ್ನೆ ಎತ್ತಲಾಗಿದೆ. ಸಾಹಿತಿಗಳಾಗಲಿ ಅಥವಾ ಮತ್ಯಾರೇ ಆಗಲಿ ಈ ತತ್ವ ಸಮಾನತೆಯ ಪ್ರತಿಪಾದನೆ ಎಂದು ವಿವರಿಸಿ ನೂರಾರು ಲೇಖನಗಳನ್ನು ಬರೆದಿದ್ದಾರೆ. ಪ್ರಜಾವಾಣಿಯ ಚಚರ್ೆಯಲ್ಲಿಯೂ ಈ ವಿಚಾರ ಮಂಡಿತವಾಗಿದೆ. ವಚನಗಳು ಈ ವಿಷಯದಲ್ಲಿ ಹೇಗೆ, ಏಕೆ ಒಂದು ಮಹತ್ವದ ಹಾಗೂ ಹೊಸ ತಾತ್ವಿಕತೆಯನ್ನು ಪ್ರತಿಪಾದಿಸಿದವು ಎಂದು ನನ್ನ ಲೇಖನದಲ್ಲಿಯೂ ವಿವರಿಸಿದ್ದೇನೆ. ಭಾರತೀಯ ಸಮಾಜದಲ್ಲಿ ಅಂದೂ ,ಇಂದೂ ಚಾಲ್ತಿಯಲ್ಲಿರುವಂತೆ ವೃತ್ತಿ ಅಥವಾ ಕಾಯಕಗಳು ಮೇಲು ಕೀಳು, ಅವುಗಳನ್ನು ಮಾಡುವವರು ಆ ಕಾರಣಕ್ಕಾಗಿಯೇ ಮೇಲು, ಕೀಳು ಮಾತ್ರವಲ್ಲ ಅಸ್ಪೃಶ್ಯ ಎಂದು ವರ್ಗೀಕರಿಸಲಾಗಿದೆ. ಈ ಆಧಾರದಲ್ಲಿ ಅವರ ಬದುಕು ಅವಮಾನ, ಸಂಕಟಗಳಿಗೆ ತುತ್ತಾಗುವಂತೆ ಮಾಡಲಾಗಿದೆ. ವಚನಗಳ ತಿಳುವಳಿಕೆಯಲ್ಲಿ ಎಲ್ಲ ಕಾಯಕಗಳೂ ಸಮಾನ. ಹಾಗೆಯೇ ಆ ಕಾಯಕ ಜೀವಿಗಳೂ ಸಮಾನ ಎಂದು ಸಾರಿದವು. ಅಷ್ಟು ಮಾತ್ರವಲ್ಲ ದಿನ ನಿತ್ಯದ ಆಚರಣೆಯಲ್ಲಿ ಸಮಾನವೆಂದು ಪರಿಗಣಿಸಿದವು. ಇದು ಮೇಲುಜಾತಿಗಳಿಂದ ಶರಣರಾದವರಲ್ಲಿ , ಕೆಳಜಾತಿಯಿಂದ ಆದವರಲ್ಲಿ ಹೀಗೆ ವಿವಿಧ ಸ್ತರಗಳ ವಚನಕಾರರ ವಚನಗಳಲ್ಲಿ ಪದೇ ಪದೇ ಬಿಂಬಿತವಾಗಿದೆ. ಇದರಿಂದಾಗಿ ಇಂದಿನ ಜಾತಿ ಬಂಧಿತ ವೃತ್ತಿಗಳನ್ನು ಅದನ್ನು ಮಾಡುವ ಜನರನ್ನೂ ಮೇಲು ಕೀಳು ಎಂದು ಪರಿಗಣಿಸುವುದನ್ನು ಅದರ ಅಸಹ್ಯಕರ ಪರಿಣಾಮಗಳನ್ನು ನೋಡಿದ ಯಾರೇ ಮಾನವೀಯ ತೆಯ ಮಿಡಿತ ಉಳ್ಳವರಾದರೂ ವಚನಕಾರರ ಕಾಯಕ ತತ್ವವನ್ನು ಎತ್ತಿ ಹಿಡಿಯುವುದರಲ್ಲಿ ಆಶ್ಚರ್ಯವೇನಿಲ್ಲ.
ಇನ್ನು ವಚನಕಾರರು ಏಕದೇವೋಪಾಸನೆಯ ಪ್ರತಿಪಾದಕರಾಗಿ ಅವರ ಅಂಕಿತಗಳ ಮೂಲಕ ಬೇರೆ ಬೇರೆ ದೇವರ ಉಪಾಸನೆ ಮಾಡಿದ್ದಾರೆ. ವಿವಿಧ ದೇವರ ಪೂಜೆ ಜಾತಿಯ ಅಸಮಾನತೆಯ ಆಚರಣೆಯೇ .ಎಂಬ ಪ್ರಶ್ನೆ. ವಿವಿಧ ಅಂಕಿತಗಳ ಮೂಲಕ ಪೂಜಿಸಿದ ದೇವರು ಒಬ್ಬನೇ, ಆಕಾರ ಕೂಡ ಒಂದೇ ಲಿಂಗರೂಪ. ಹೀಗೆ ಅಂಕಿತ ಬೇರೆ ಬೇರೆ ದೆವರುಗಳಂತೆ ಕಂಡರೂ ದೇವರು ಒಂದೇ ಅವರ ಇಷ್ಟಲಿಂಗದ ದೇವರ ರೂಪವೂ ಅದೇ. ಆದ್ದರಿಂದ ಅವರಿಗೆ ಯಾವ ವೈರುಧ್ಯವೂ ಕಾಣಲಿಲ್ಲ. ವಿವಿಧ ದೇವರುಗಳ ಆರಾಧನೆಯ ಚಿಂತನೆಯಿಂದ ಹೊರಬರುವಾಗ ಹಳೆಯ ಚಿಂತನೆಯ ಚೌಕಟ್ಟು ಆರಂಭದಲ್ಲಿ ಬಾಧಿಸುವುದು ಸಹಜ. ವಚನಗಳ ತತ್ವಗಳು ರೂಪುಗೊಳ್ಳತ್ತಿದ್ದ , ಆಚರಣೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ 12ನೆಯ ಶತಮಾನದ ಪ್ರಕ್ರ್ರಿಯೆ ಮಧ್ಯದಲ್ಲಯೇ ತುಂಡುಗಡಿಯದೇ ಹೋಗಿದ್ದರೆ ಈ ವಿಷಯದಲ್ಲಿ ಬೆಳವಣಿಗೆಗಳಾಗುತ್ತಿತ್ತೋ ಏನೋ ? ಆದರೆ ಇಷ್ಟು ಮಾತ್ರ ನಿಜ ವಿವಿಧ ಅಂಕಿತಗಳು ಅವು ಸೂಚಿಸುವ ಸ್ಥಾವರ ದೇವಾಲಯಗಳು ಮುಂದೆ ಈ ಚಿಂತನೆಯ ಅನುಯಾಯಿಗಳು ಸ್ಥಾವರ ದೇವಾಲಯಗಳ ಪೂಜೆಯನ್ನು ಮುಂದುವರೆಸುವುದಕ್ಕೆ ಕಾರಣವಾಗಿದೆ. ಆ ಮೂಲಕ ಇಷ್ಟಲಿಂಗವೇ ಎಲ್ಲ ಎನ್ನುವ ಏಕೀಕೃತ ಭಾವ ಮೂಡುವುದಕ್ಕೆ ತೊಡಕಾಗಿದೆ.
ಹಾಗೆಯೇ ಭಕ್ತ, ಭವಿ ಎಂಬ ವಿಭಜನೆ, ಭಕ್ತ ಶ್ರೇಷ್ಠತೆಯ ಪ್ರತಿಪಾದನೆ ಜನರನ್ನು ತಮ್ಮ ಚಿಂತನೆಗಳಿಗೆ ಸೆಳೆಯುವುದಕ್ಕೆ ಮಡಿದ ಪ್ರಯತ್ನದ ಒಂದು ರೂಪ. ಆದರೆ ಇದನ್ನು ಹಲವರು ಎರಡರ ನಡುವೆ ಒಂದು ಗೋಡೆಯನ್ನೇ ಕಟ್ಟಿದಂತೆ ಕಠಿಣವಾಗಿ ವರ್ತಿಸಿದ್ದು ಭಾವಿಗೆ ಲಿಂಗ ಮುದ್ರೆ, ಹೊಲಗಳ ನಡುವಣ ಮೇರೆಯ ಕಲ್ಲಿಗೆ ಲಿಂಗ ಮುದ್ರೆ, ಹಸುಗಳಿಗೆ ಲಿಂಗ ಮುದ್ರೆ ಇತ್ಯಾದಿ ಶೀಲಗಳ ಜಾರಿ ಅವರ ತತ್ವಗಳನ್ನು ಪ್ರಚುರಪಡಿಸಲು ಅಡ್ಡಿಯಾಗಿರುವ ಸಂಭವವೂ ಇದೆ.
ವಚನಗಳನ್ನು ಯಾರೂ ಸಮಗ್ರವಾಗಿ ಅಧ್ಯಯನ ಮಾಡುವ ಗೌಜಿಗೆ ಹೋಗುತ್ತಿಲ್ಲ ಅದನ್ನು ಸಮಗ್ರವಾಗಿ ಅರ್ಥೈಸುವುದಕ್ಕೆ ವಿವರಣೆ ನೀಡಿ ಎನ್ನುವ ಬಗ್ಗೆ : ನಾನು ಆರಂಭದಲ್ಲಿಯೇ ಆ ಕೊರತೆ ನಮ್ಮ ಸಂಶೋಧನೆಯ ಸ್ವರೂಪದಲ್ಲಿ ಹೇಗೆ ಅಂತರ್ಗತವಾಗಿದೆ ಎಂಬುದನ್ನು ವಿವರಿಸಿದ್ದೇನೆ. ನಾನು ನನ್ನ ಅಧ್ಯಯನದ ಮಿತಿಯಲ್ಲಿ ಇಲ್ಲಿನ ಜಾಗ ಮತ್ತು ಇಲ್ಲಿ ಎತ್ತಿಕೊಂಡಿರುವ ಪ್ರಶ್ನೆಗಳ ಮಿತಿಯಲ್ಲಿ ಈ ಪ್ರಶ್ನೆ ಎತ್ತಿದ ನಂತರದ ಲೇಖನದ ಭಾಗಗಳಲ್ಲಿ ಮಾಡಿದ್ದೇನೆ. ಆದರೆ ಇದು ಕೆಲ ವಿದ್ವಾಂಸರು ಮಾಡುತ್ತಾ ಬಂದಿರುವ ಪ್ರಯತ್ನಗಳ ಮುಂದುವರಿಕೆಯಾಗಿದೆ. ಮತ್ತು ಈಗಲೂ ಹಲವರು ಕೈಗೆತ್ತಿಕೊಳ್ಳಬೇಕಾದ ಕೆಲಸವಾಗಿದೆ. ನನ್ನ ವೈಯುಕ್ತಿಕ ಮಿತಿಯಲ್ಲಿ ಈ ಪ್ರಯತ್ನವನ್ನು ಮುಂದುವರೆಸಿ ಬರಹಕ್ಕಿಳಿಸುವುದನ್ನು ಮುಂದೆ ಮಾಡಲಿದ್ದೇನೆ.
ಸಾಮಾಜಿಕ ಹಾಗೂ ಆಧ್ಯಾತ್ಮಿಕ ಪರಿಕಲ್ಪನೆಗಳ ನಡುವೆ ವ್ಯತ್ಯಾಸವೇ ಇಲ್ಲವೇ ? ಸಮಾಜ ಎಂಬುದು ಅದರ ಸಮಗ್ರತೆಯಲ್ಲಿ ಒಂದು ಘಟಕ. ಅದನ್ನು ಇಂದು ನಮ್ಮ ಅಧ್ಯಯನಗಳ ಅನುಕೂಲಕ್ಕೆ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ ಎಂಬ ವಿಭಾಗ ಮಾಡಿಕೊಳ್ಳತ್ತೇವೆ. ಅದಕ್ಕೆ ತಕ್ಕಂತೆ ಕೆಲಸದಲ್ಲಿಯೂ ವಿಭಜನೆ ಮಾಡಿಕೊಂಡಿದ್ದೇವೆ. ಇದು ಕೇವಲ ಆಧುನಿಕ ವಿದ್ಯಾಮಾನ. ಅಂದು ಈ ಯಾವ ವಿಭಜನೆಯೂ ಇಲ್ಲದೆ ಒಂದೇ ಆಗಿತ್ತು.
ಇನ್ನು ಇಲ್ಲಿ ಒಂದು ಸವಾಲಿದೆ. ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕೆಂದು ಹೇಳುವ ಒಂದು ವಚನವನ್ನಾದರೂ ತೋರಿಸಿ ಎಂದು. ಇದು ಹೇಗಿದೆ ಎಂದರೆ ಹಿಂದೆ ವಾಕ್ಯಾರ್ಥಗಳೆಂಬ ವಾದಗಳನ್ನು ನಡೆಸುತ್ತಿದ್ದರಂತೆ. ಆ ವಾಕ್ಯ ಏನು ಅರ್ಥ ಕೊಡುತ್ತದೆ, ಈ ಪದ ಏನು ಹೇಳತ್ತದೆ ಎಂದು. ಇದನ್ನೇನೇ ಇಂಗ್ಲಿಷಿನಲ್ಲಿ ಮಿಸ್ಸಿಂಗ್ ವುಡ್ಸ್ ಫಾರ್ ದಿ ಟ್ರೀಸ್ ಎಂದು ಹೇಳುವುದು. . ನಾನು ಮೂರು ದಿನದಿಂದ ಊಟ ಮಡಿಲ್ಲ ಮೈಯೆಲ್ಲಾ ನಿತ್ರಾಣ. ಕಾಲುಗಳು ನಡುಗುತ್ತಿವೆ ಎಂದೆಲ್ಲಾ ಹೇಳಿದ ಒಬ್ಬ ವ್ಯಕ್ತಿ ನನಗೆ ಹಸಿವಾಗಿದೆ, ಊಟ ಕೊಡಿ ಎಂದು ಕೇಳಲಿಲ್ಲ ಆದ್ದರಿಂದ ನಾನು ಊಟ ಕೊಡಲಿಲ್ಲ ಎಂದು ತಪ್ಪಿಸಿಕೊಂಡಂತೆ.
ಒಬ್ಬರು ವಿಜಯದಾಸರ ಒಂದು ಪದವನ್ನು ಉದಾಹರಿಸಿ ಅದರಲ್ಲಿನ ವಿಚಾರಕ್ಕೂ ವಚನಗಳು ಹೇಳುವ ವಿಚಾರಗಳಿಗೂ ಅಂತರವೇನಿದೆ ಎಂದು ಕೇಳಿದ್ದಾರೆ. ಹರಿದಾಸರ ಪರಂಪರೆಯಲ್ಲಿ ಕನಕದಾಸರ ಹೊರತಾಗಿ ಕುಲದ ಬಗ್ಗೆ ಸ್ಪಷ್ಟವಾಗಿ ವಿರೋಧ ವ್ಯಕ್ತ ಪಡಿಸಿದ್ದನ್ನು ಪುರಂದರ ದಾಸರಿಂದ ಅಂತಹ ಸ್ವಲ್ಪ ಮಾತುಗಳನ್ನು ಹೊರತು ಪಡಿಸಿದರೆ ಬೇರಾರೂ ಜಾತಿಯ ಬಗ್ಗೆ ಆಗಲಿ ಕುಲದ ಬಗ್ಗೆ ಆಗಲೀ ಸ್ಪಷ್ಟವಾಗಿ ವಿರೋಧಿಸಿದ್ದು ಕಂಡು ಬಂದಿಲ್ಲ.. ಇನ್ನು ಇಲ್ಲಿ ಉಲ್ಲೇಖಿಸಿದ ವಿಜಯದಾಸರ ಪದವಂತೂ ನಿಷ್ಕ್ರಿಯೆಯ ಆರಾಧನೆ, ಆದರೆ ವಚನಗಳು ಕ್ರಿಯಾಶೀಲತೆಯ ಪ್ರತಿಪಾದನೆ. ರೋಗಾನುಭವವೆಲ್ಲ ಉಗ್ರ ತಪವು, ಬಡತನ ಭಗವದ್ಭಜನೆ ಯೋಗ, ಬುದ್ಧಿ ಸಾಲದೇ ಸುಮ್ಮನಿರುವುದೇ ಸಮ್ಮತವು ಇವು ಅದರ ಕೆಲಸಾಲುಗಳು. ಕಾಯಕ ಮಾಡದೆ ಊಟ ಮಾಡಬೇಡಿ, ಪ್ರತಿದಿನವೂ ದುಡಿದು ದಾಸೋಹ ಮಾಡಿ ಎನ್ನುವ ವಚನಗಳ ತತ್ವಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಕೆಲವರು ನನ್ನ ಕೆಲ ತಪ್ಪುಗಳನ್ನು ತೋರಿಸಿಕೊಟ್ಟದ್ದಾರೆ : ಬಾಲಗಂಗಾಧರ್ ರವರದು ಜರ್ಮನಿಯಲ್ಲ ಬೆಲ್ಜಿಯಂ ವಿ.ವಿ, ಎಂದು, ಬತ್ತೀಸ ಎಂದರೆ 33 ಅಲ್ಲ 32 ಎಂದು, ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ಅಲ್ಲ ಕರಡಿಗೆ ಬಿಟ್ಟಂತೆ ಎಂದು ಅವರಿಗೆಲ್ಲ ನನ್ನ ವಂದನೆಗಳು.
ಒಂದು ಚರ್ಚೆಯಲ್ಲಿ ಭಾಗವಹಿಸುವುದೆಂದರೆ ಆ ಚರ್ಚೆಯಲ್ಲಿ ಆ ಚರ್ಚೆಯ ಓದುಗ/ ಕೇಳುಗರ ಮುಂದೆ ಬಂದ ವಿಚಾರಗಳಿಗೆ ಪ್ರತಿಕ್ರಿಯಿಸುವುದು ಎಂದರ್ಥ. ಪ್ರಜಾವಾಣಿಯಾಗಲೀ, ಅವಧಿಯಾಗಲೀ ನಿರ್ಧಿಷ್ಠ ವಿಜ್ಞಾನ ಶಾಖೆಗಳ ಸಂಶೋಧನ ನಿಯತಕಾಲಿಕವಲ್ಲ. ಅಂತಹ ನಿಯತಕಾಲಿಕಗಳಲ್ಲಿಯೂ ನಿಮ್ಮ ಸಂಶೋಧನೆಯನ್ನೆಲ್ಲಾ ಒಮ್ಮೆಗೆ ಪ್ರಕಟಪಡಿಸುವ ಅವಕಾಶವಿರುವುದು ನನ್ನ ಕಣ್ಣಿಗೆ ಬಿದ್ದಿಲ್ಲ. ಸಾಮಾನ್ಯವಾಗಿ ಒಂದು ಪಿಎಚ್ ಡಿ ಪ್ರಬಂಧವನ್ನೂ ಹಲವು ಪ್ರತ್ಯೇಕ ಪ್ರಬಂಧಗಳಾಗಿ ಮಂಡಿಸುತ್ತಾರೆ. ಒಂದೊಂದು ಪ್ರಬಂಧದಲ್ಲಿ ಮಂಡಿಸಿದ ವಿಚಾರಗಳಿಗೆ ಅನುಸಾರವಾಗಿ ಅಲ್ಲಿ ಪ್ರಶ್ನೆಗಳು ಏಳ ಬಹುದು. ಇದು ಸಂಶೋಧನ ಪತ್ರಿಕೆಗಳ ಪದ್ಧತಿ ಎಂದಾದರೆ ಇನ್ನು ಸರ್ವಜನರ ಸಾಮಾನ್ಯ ಪತ್ರಿಕೆಗಳ ಮಾತೇನು. ಇನ್ನು ನಾನು ಇಲ್ಲಿ ನನ್ನ ಅಧ್ಯಯನದ ಎಲ್ಲ ವಿವರಗಳನ್ನು ಮಂಡಿಸುತ್ತಲೂ ಇಲ್ಲ ಈ ಮಾಧ್ಯಮದ ಮಿತಿಯೊಳಗೆ ಇಂದು ಸಾರ್ವಜನಿಕರ ನಡುವೆ ಎದ್ದ ಚರ್ಚೆಗಳಿಗೆ ಏನು ಅವಶ್ಯವೋ ,ಸಾಧ್ಯವೋ ಅದನ್ನು ಮಾತ್ರ ಇಲ್ಲಿ ಪ್ರಸ್ತುತ ಪಡಿಸಿದ್ದೇನೆ. ಮತ್ತು ಮತ್ತೆ ಮತ್ತೆ ಹೇಳಿದ್ದೇನೆ ವಚನಗಳ ಜಾತಿ ವಿರೋಧದ ಪ್ರಶ್ನೆ ಮಾತ್ರ ಚರ್ಚೆಯಲ್ಲಿರುವುದು ಅದು ಮಾತ್ರ ನನ್ನ ಲೇಖನದ ವಿಷಯ. ಅದರಿಂದ ನಾನು ಡೈವರ್ಟ ಆಗುವುದಿಲ್ಲ. ಈ ವಿಷಯಕ್ಕೆ ಈ ತಂಡದ ನಾಯಕರು ಚರ್ಚೆಯಲ್ಲಿ ಇಲ್ಲಿ ಏನೇನು ಮಂಡಿಸಿದ್ದಾರೆಯೋ ಅದಕ್ಕೆ ವಚನಗಳ ಆಧಾರದ ಮೇಲೆ ಉತ್ತರ ಒದಗಿಸಿದ್ದೇನೆ . ಅವರ ಸಂಶೋಧನಾ ಮೆಥಡಾಲಜಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೇನೆ . ಆದರೆ ಅದಕ್ಕಿ ಉತ್ತರ ನೀಡಲಾಗಿಲ್ಲ. ಇದು ಸ್ಪಷ್ಠವಾಗಿದೆ
ಇನ್ನು ಜಾತಿ ಎಂಬ ವ್ಯವಸ್ಥೆ ಇದೆಯೇ ? ಅದರ ಬಗ್ಗೆ ಭಾರತದಲ್ಲಿ, ವಿಶ್ವದಲ್ಲಿ ಯಾರು ಏನೆನೆಲ್ಲಾ ಹೇಳಿದ್ದಾರೆ. ಸಂಶೋಧನೆ ಮಾಡಿದ್ದಾರೆ, ಅವುಗಳಲ್ಲಿ ಚರ್ಚೆ ಮಾಡಬೇಕಾದದ್ದು ಯಾವುದು, ಅಂಗೀಕರಿಸಬಹುದಾದ ಅಂಶಗಳೇನು , ಅವರುಗಳು ಅನುಸರಿಸಿದ ಸಂಶೋಧನಾ ವಿಧಾನ ,ವಿಶ್ಲೇಷಣೆಯ ತಾತ್ವಿಕ ಚೌಕಟ್ಟು ಯಾವುದು , ಅದು ಸರಿಯಾಗಿದೆಯೇ, ನಮ್ಮದೇ ದಿನನಿತ್ಯದ ಅನುಭವ ಏನು ಹೇಳುತ್ತದೆ ಇವೆಲ್ಲವನ್ನೂ ಚರ್ಚೆಗೊಳಪಡಿಸೋಣ. 20-20 ಮ್ಯಾಚ್ , ಒಂದು ದಿನದ ಆಟ, ಟೆಸ್ಟ್ ಆಟ ಬೇರೆ. ಅದರಲ್ಲಿ ಇದನ್ನು ತುರುಕುವುದು ಆಟಕ್ಕೂ, ಪ್ರೇಕ್ಷಕರಿಗೂ ತರವಲ್ಲ
ಇನ್ನು ಕೊನೆ ಹನಿ : ಅವರ ಗುರು ಬಾಲಗಂಗಾಧರ್ ಬರೆದದ್ದನ್ನು ಓದಿದ್ದೇನೇಯೇ, ಓದಿಯೇ ಚರ್ಚೆ ಮಾಡಬೇಕು ಎನ್ನುವ ಅವರಿಗೆ ನನ್ನ ಲೇಖನ ಮಾಲೆಯ ಚರ್ಚೆಯಲ್ಲಿ ಭಾಗವಹಿಸುತ್ತಿರುವಾಗ ನಾನು ಬರೆದಿದ್ದನ್ನೆಲ್ಲ ಓದುವ ಹೊಣೆಯೂ ಬರುತ್ತದಲ್ಲ. ಅದನ್ನು ನಾನು ಎಲ್ಲೆಲ್ಲಿ ಬರೆದಿದ್ದೇನೆಯೋ ಅವುಗಳನ್ನು ಹುಡುಕಿ ಅಧ್ಯಯನ ಮಾಡಬೇಕಲ್ಲ. ನನ್ನ ಗುರುಗಳು ಬರೆದದ್ದನ್ನೂ ಅವರು ಓದಬೆಕೆಂದು ಅವರ ವಿಶ್ಲೇಷಣೆಯನ್ನೂ ಆದ್ಯಯನ ಮಾಡಬೇಕೆಂದು ನಾನೂ ನಿರೀಕ್ಷಿಸಬಹುದಲ್ಲ. ಹಾಗಾದರೆ ಅವರೂ ಅದರಲ್ಲಿ ತೊಡಗಲಿ.
 

‍ಲೇಖಕರು G

July 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

30 ಪ್ರತಿಕ್ರಿಯೆಗಳು

 1. ಸಹನಾ

  “ಇಂದು ಸಾರ್ವಜನಿಕರ ನಡುವೆ ಎದ್ದ ಚರ್ಚೆಗಳಿಗೆ ಏನು ಅವಶ್ಯವೋ ,ಸಾಧ್ಯವೋ ಅದನ್ನು ಮಾತ್ರ ಇಲ್ಲಿ ಪ್ರಸ್ತುತ ಪಡಿಸಿದ್ದೇನೆ.”
  So it is a part of selective amnitia!!! this is not a true spirit of debate. even the logical questions have been trivilised and sidelined. It happens when such people interested only in the propogation of their ideology/religious view than scientific discussion. I have realised that this people niether enter into such debates nor interested in it. So, it is better not to respond such ideological propositions. Go ahead and best of luck….

  ಪ್ರತಿಕ್ರಿಯೆ
 2. ಕೃಷ್ಣೇಗೌಡ ಟಿ.ಎಲ್.

  ಬಾಲಗಂಗಾಧರನ ತಂಡದವರು ಸವಾಲನ್ನು ಸ್ವೀಕರಿಸಲಿ. ಅವರ ಗುಂಪಿನ ಪ್ರತಿಕ್ರಿಯೆಗಳನ್ನು ನೋಡಿದರೆ ಪಲಾಯನವಾದಿಗಳಂತೆ ಮತ್ತು ಪೂರ್ವಾಗ್ರಹ ಪೀಡಿತರಂತೆ ಕಾಣುತ್ತಾರೆ..

  ಪ್ರತಿಕ್ರಿಯೆ
  • ವಿಶ್ವಾರಾಧ್ಯ ಸತ್ಯಂಪೇಟೆ

   ಕೃಷ್ಣೇಗೌಡರೆ,
   ಅವರು ಇತಿಹಾಸದ ಉದ್ದಕ್ಕೂ ಎಲ್ಲಾದರೂ ಸವಾಲನ್ನು ಸ್ವೀಕರಿಸಿದ್ದಾರೆಯೆ ? ಬಹುಶಃ ನಮ್ಮೊಳಗಿನ ಯಾವುದೋ ಮತ್ತೊಬ್ಬನನ್ನು ತಂದು ನಮ್ಮ ಎದುರುಗಡೆ ನಿಲ್ಲಿಸಿ ಆಟ ಆಡುವರು. ಅವರು ಇರುವುದು ಹಾಗೆ.

   ಪ್ರತಿಕ್ರಿಯೆ
  • ಕಟ್ಟಿಮನಿ

   ಗೌಡರೆ! ಬಾಲ ಅವರ ತಂಡದವರ ವಿಚಾರ ಬಿಡಿ. ನಿಮ್ಮ ನೆಲೆಯನ್ನು ಮೊದಲು ಭದ್ರಪಡಿಸಿ. ತಮಗೆ ಮೈಲು ಕಳುಹಿಸಿರುವೆ. ದಯವಿಟ್ಟು ಸಂಶೋಧನಾ ಗ್ರಂಥವನ್ನು ಓದಿ. ನಂತರ ಪೂರ್ವಗ್ರಹ ಮುಕ್ತರಾಗಿ ನೀವೂ ನಾನೂ ಬಾಲ ಅವರ ತಂಡದವರೂ ಚರ್ಚೆ ಮುಂದುವರೆಸೋಣ. ಆಗಬಹುದೇ?

   ಪ್ರತಿಕ್ರಿಯೆ
 3. Neela

  GN avarige pranaamagalu.
  yellavannu gondalagolisalende huttikolluva vaadagalige dayavittu mahatva kodabedi. spashtha uddeshandida huttikonda kaayaka jeevigala chaluvali, arthaath vachana chaluvali kuritu kramabadhavaagi bareyiri. karnatakada janate nimminda innashtu baraha nirikshisuttiruvaru. idu saha vaidika virodhi mattu jeevaparavaada chaluvaliya bhaagave… kelasagala ottadadinda bareyalaaguttilla annabahudu. aadare chintane illada chaluvali kurudu taane?

  ಪ್ರತಿಕ್ರಿಯೆ
 4. ಕಟ್ಟಿಮನಿ

  ಮಾನ್ಯ ನಾಗರಾಜ್ ಅವರು “ಇಷ್ಠ ಲಿಂಗ ಧಾರಣೆ ದೇವಾಲಯಗಳನ್ನು ನಿರಾಕರಿಸುವ ಸ್ಪಷ್ಠ ಉದ್ದೇಶದಿಂದ ಹುಟ್ಟಿದ್ದು.” ಅಂತ ಬರೆದಿದ್ದಾರೆ. ಇದು ಅವರ ಗೃಹೀತ. ಇದಕ್ಕೆ ವಚನಗಳಲ್ಲಿ ಯಾವ ಆಧಾರವೂ ಇಲ್ಲ. ಬೇಕಿದ್ದರೆ ನಾಗರಾಜ್ ಅವರು ಆಧಾರಗಳನ್ನು ಕೊಟ್ಟು ವಾದ ಮಾಡಲಿ, ಆಗ ಅವರ ವಾದವನ್ನು ಒಪ್ಪೋಣ. ನಾಗರಾಜ್ ಅವರು ಬಸವಣ್ಣನವರ ಕಾಲದ ವಿದ್ಯಮಾನಗಳ ಪ್ರತ್ಯಕ್ಷದರ್ಶಿಯಲ್ಲ. ಅಥವಾ ಆ ಕಾಲಕ್ಕೆ ವರ್ತಮಾನದಿಂದಲೇ ಪಯಣಿಸಬಲ್ಲ ಕಾಲಜ್ಞಾನಿಯೂ ಅಲ್ಲ. ಆದುದರಿಂದ ಖಚಿತವಾಗಿ “ಇಷ್ಠ ಲಿಂಗ ಧಾರಣೆ ದೇವಾಲಯಗಳನ್ನು ನಿರಾಕರಿಸುವ ಸ್ಪಷ್ಠ ಉದ್ದೇಶದಿಂದ ಹುಟ್ಟಿದ್ದು.” ಅಂತ ಹೇಳುವಾಗ ಅದು ಅವರ ಅಭಿಪ್ರಾಯ ಮಾತ್ರವಾಗಿದ್ದರೆ ಸಾಲದು. ಆ ಅಭಿಪ್ರಾಯಕ್ಕೆ ಆಧಾರಗಳನ್ನೂ ಒದಗಿಸುವುದು ನಾಗರಾಜ್ ಅವರ ಕರ್ತವ್ಯ.
  ನನ್ನ ತಿಳುವಳಿಕೆಯ ಪ್ರಕಾರ ಬಸವಣ್ಣನವರು ದೇವಾಲಯದ ವಿರೋಧಿ ಎಂಬುದು ಪ್ರಗತಿಪರರ ಗೃಹೀತ. ಬಸವಣ್ಣನವರ ವಚನಗಳು ಬೇರೆಯನ್ನೇ ಹೇಳುತ್ತಿವೆ. ದೇವಾಲಯ ತತ್ವವನ್ನು ಬಸವಣ್ಣ ವಿರೋಧಿಸಿಲ್ಲ. ವಿರೋಧಿಸಿದ್ದರೆ ತನ್ನ ದೇಹವೇ ದೇವಾಲಯ ಎಂದು ಹೇಳುತ್ತಿರಲಿಲ್ಲ. ಸ್ಥಾವರ ದೇವಾಲಯವಷ್ಟೇ ಸಾಲದು ಜಂಗಮ ದೇವಾಲಯವೂ ಬೇಕು ಅಂತ ಅಲ್ವೇ ಅವರು ಹೇಳಿದ್ದು? ಕಟ್ಟಡವು ಮುರಿದು ಹೋಗಬಹುದು ಕಾಲದ ಹೊಡೆತಕ್ಕೆ ಸಿಕ್ಕಿ. ಅಥವಾ ತುರುಕರ ಮಂಗೋಲರ ಧಾಳಿಗೆ ಸಿಕ್ಕಿ ನಾಶವಾಗಬಹುದು (ಬಸವಣ್ಣನವರ ಕಾಲದಲ್ಲೇ, ಅಂದರೆ ಹನ್ನೆರಡನೆಯ ಶತಮಾನದಲ್ಲಿ ಅಲ್ಲವೇ ಮುಸ್ಲಿಂ ಧಾಳಿಕೋರರ ವಿಧ್ವಂಸ ಕ್ರಿಯೆಗಳು ಮುಂಚೂಣಿಗೆ ಬಂದದ್ದು). ಅದೆಷ್ಟೋ ದೇವಸ್ಥಾನಗಳು ಧಾಳಿಕೋರರಿಂದ ಲೂಟಿಗೆ ಒಳಪಟ್ಟು ಧ್ವಂಸವಾದವಲ್ಲವೇ! ಆಗ ಭಕ್ತರು ಏನು ಮಾಡಬೇಕು? ನಂಬಿದ ದೇವಾಲಯಗಳೇ ನಾಶವಾದಾಗ ಭಕ್ತಿಗೆ ನೆಲೆ ಎಲ್ಲಿ? ಈ ಎಲ್ಲ ಸಮಸ್ಯೆಗಳ ಗಹನವಾದ ಅರಿವು ಬಸವಣ್ಣನವರಿಗೆ ಇತ್ತು. ಕಾಲ ಹಾಗೂ ಧಾಳಿಕೋರರ ಹಾವಳಿಗೆ ದೇವಾಲಯಗಳು ನಾಶವಾದರೂ ಭಕ್ತಿಗೆ ನೆಲೆಯೊಂದು ಇರಬೇಕು ಎಂದು ಅವರು ತಿಳಿದರು. ಎಂತಹ ಉನ್ನತ ಹಾಗೂ ಮುಂದಾಲೋಚನೆ ಅವರದ್ದಾಗಿತ್ತು ನೋಡಿ! ಆದುದರಿಂದಲೇ ಅವರು ಇಷ್ಟ ಲಿಂಗ ಹಾಗೂ ಜಂಗಮಕ್ಕೆ ಮಹತ್ವ ನೀಡಿದ್ದು. ಭಕ್ತರು ಸ್ಥಾವರವಾದ ದೇವಾಲಯವು ಶಿಥಿಲ ಅಥವಾ ಧಾಳಿಗೆ ಒಳಗಾದರೂ ಕೂಡ ಇಷ್ಟಲಿಂಗದ ಮುಖೇನ ಭಕ್ತಿರತರಾಗಿರುವ ಏರ್ಪಾಡನ್ನು ಬಸವಣ್ಣನವರು ಮಾಡಿಕೊಟ್ಟರು. ಅಷ್ಟೇ ಅಲ್ಲ ಭಕ್ತಿಯು ಜಂಗಮದ ಮೂಲಕವೂ ನಿರಂತವಾಗಿ ಕಾಲದ ಹೊಡೆತಕ್ಕೆ ಧಾಳಿಕೋರರ ವಿಧ್ವಂಸಕತೆಗೆ ಸೆಡ್ಡು ಹೊಡೆದು ನಿಲ್ಲಲಿ ಎಂದು ಅವರು ಬಯಸಿದರು.

  ಪ್ರತಿಕ್ರಿಯೆ
  • ಸತ್ಯನಾರಾಯಣ

   ಮಾನ್ಯರೆ,
   “(ಬಸವಣ್ಣನವರ ಕಾಲದಲ್ಲೇ, ಅಂದರೆ ಹನ್ನೆರಡನೆಯ ಶತಮಾನದಲ್ಲಿ ಅಲ್ಲವೇ ಮುಸ್ಲಿಂ ಧಾಳಿಕೋರರ ವಿಧ್ವಂಸ ಕ್ರಿಯೆಗಳು ಮುಂಚೂಣಿಗೆ ಬಂದದ್ದು). ಅದೆಷ್ಟೋ ದೇವಸ್ಥಾನಗಳು ಧಾಳಿಕೋರರಿಂದ ಲೂಟಿಗೆ ಒಳಪಟ್ಟು ಧ್ವಂಸವಾದವಲ್ಲವೇ! ಆಗ ಭಕ್ತರು ಏನು ಮಾಡಬೇಕು? ನಂಬಿದ ದೇವಾಲಯಗಳೇ ನಾಶವಾದಾಗ ಭಕ್ತಿಗೆ ನೆಲೆ ಎಲ್ಲಿ? ಈ ಎಲ್ಲ ಸಮಸ್ಯೆಗಳ ಗಹನವಾದ ಅರಿವು ಬಸವಣ್ಣನವರಿಗೆ ಇತ್ತು.”
   ಇದೇ ಮಾತನ್ನು ನೀವು ಹಿಂದೊಮ್ಮೆ ಬರೆದಿದ್ದ ನೆನಪು. ಬಸವಣ್ಣನಿದ್ದ ಬಿಜ್ಜಳನ ರಾಜ್ಯದ ಮೇಲೆ ಮುಸ್ಲಿಂ ಧಾಳಿ ಆಗಿತ್ತೆಂಬುದಕ್ಕೆ ನನಗೆ ತಿಳಿದಿರುವಂತೆ ಕರ್ನಾಟಕದ ಇತಿಹಾಸದಲ್ಲಿ ಆಧಾರಗಳಿಲ್ಲ. ಇದ್ದರೆ ದಯಮಾಡಿ ತಿಳಿಸಿ. ನನಗೆ ಗೊತ್ತಿರುವಂತೆ, ಬಿಜ್ಜಳನಿಗಿದ್ದ ಶತ್ರುಗಳೆಂದರೆ, ಹಿಂದೆ ಸರಿದಿದ್ದ ಕಲ್ಯಾಣಧ ಚಾಲುಕ್ಯರು, ದಕ್ಷಿಣದಲ್ಲಿ ಪ್ರಬಲರಾಗುತ್ತಿದ್ದ ಹೊಯ್ಸಳರು ಮತ್ತು ಉತ್ತರದಲ್ಲಿ ಯಾದವರು ಮಾತ್ರ. ಮುಸ್ಲಿಮರ ದೇವಾಲಯದ ಧಾಳಿಯ ಪರಿಣಾಮವೇ ಬಸವಣ್ಣ ದೇಹವೇ ದೇಗುಲ ಎಂಬ ಪರಿಕಲ್ಪನೆಯನ್ನು ಇಷ್ಟಲಿಂಗದ ಪರಿಕಲ್ಪನೆಯನ್ನು ಪ್ರತಿಪಾದಿಸಿದ ಎಂಬ ನಿಮ್ಮ ವಿಚಾರ ಬಾಲಿಶವಾಗಿದೆ.

   ಪ್ರತಿಕ್ರಿಯೆ
 5. ರಮೇಶ್ ಹಿರೇಜಂಬೂರು

  ನಾಗರಾಜ್ ಸರ್, ನಿಜಕ್ಕೂ ನಿಮಗೆ ಧನ್ಯವಾದ. ನಿಮ್ಮ ಗ್ರಹಿಕೆ ಹಾಗು ಅದನ್ನು ಪ್ರಸ್ತುಪಡಿಸಿದ ರೀತಿ ತುಂಬಾ ಸಮಂಜಸವಾಗಿದೆ. ನಿಮ್ಮ ಮೊದಲ ಮಾತು “ಇಷ್ಠ ಲಿಂಗದ ಪರಿಕಲ್ಪನೆ ಒಂದು ಅತ್ಯಂತ ಮಹತ್ವದ ಪರಿಕಲ್ಪನೆ” ಹಾಗೂ “ಸಂಧ್ಯಾವಂದನೆಯ ಪದ್ಧತಿ ದೇವಾಲಯದ ನಿರಾಕರಣೆಯಿಂದ ಹುಟ್ಟಿದ್ದಲ್ಲ, ದೇವಾಲಯಗಳ ಕಲ್ಪನೆ ಹುಟ್ಟುವ ಮೊದಲೇ ಆರಂಭವಾದ ಪದ್ಧತಿ. ಇಷ್ಠ ಲಿಂಗ ಧಾರಣೆ ದೇವಾಲಯಗಳನ್ನು ನಿರಾಕರಿಸುವ ಸ್ಪಷ್ಠ ಉದ್ದೇಶದಿಂದ ಹುಟ್ಟಿದ್ದು” ಎನ್ನುವ ಮಾತುಗಳು ಒಪ್ಪುವಂಥದ್ದು. ಹಿಂದೆ ರಂಜಾನ್ ದರ್ಗಾ ಅವರು ಇದೇ ವಚನ ಚಳವಳಿಯ ಕುರಿತು ಬರೆದಾಗಲೂ ಕೆಲವರು ಅವರನ್ನು ಮುಸ್ಲಿಂ ಮೂಲಮೂತದ ನೆಲೆಯಲ್ಲಿ ವಚನಸಾಹಿತ್ಯವನ್ನು ಬಣ್ಣಿಸುತ್ತಿದ್ದೀರಿ ಎಂದಿದ್ದರು. ನಿಮ್ಮನ್ನು ಇನ್ನು ಅದ್ಯಾವ ದೃಷ್ಟಿಕೋನದಲ್ಲಿ ನೋಡುತ್ತಾರೋ ಅಥವಾ ವರ್ಣಿಸುತ್ತಾರೋ ಗೊತ್ತಿಲ್ಲ. ಅದೇನೇ ಇರಲಿ. ಇಡೀ ವಚನ ಚಳವಳಿ ಜಾತಿ ವ್ಯವಸ್ಥೆ ಪೂಜಾ ಪದ್ಧತಿಗಳನ್ನು ವಿರೋಧಿಸುತ್ತಲೇ ಹುಟ್ಟಿದ್ದು ಎನ್ನುವುದು ನಿರ್ವಿವಾದ. ಆದರೆ ಜಾತಿಯನ್ನು ದೂರಮಾಡಿಕೊಳ್ಳಲು ಇಷ್ಟವಿಲ್ಲದೆಯೋ ಅಥವಾ ಜಾತಿಯನ್ನೇ ಬಂಡವಾಳ ಮಾಡಿಕೊಂಡು ಬದುಕುವ ಹಪಹಪಿಯಿಂದಲೋ ಏನೋ ಕೆಲವರು ಈ ವಚನಚಳವಳಿಗಾರರು ಈ ಜಾತಿ ಹಾಗೂ ಪೂಜಾ ಪದ್ಧತಿಯನ್ನು ವಿರೋಧಿಸಿದ್ದರು ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ. ಕಾರಣ ಅವರಿಗೇ ಗೊತ್ತು… ಈ ಕಾರಣಕ್ಕೋ ಎನೋ ಇಂದು ಸಮಾನತೆಯನ್ನು ಸಾರಿದ, ಸರ್ವೋದಯದ ಕನಸು ಕಂಡ ವಚನಚಳವಳಿಗಾರರ ಕನಸು ಅಕ್ಷರಶಃ ಮಣ್ಣುಪಾಲಾಗುತ್ತಿದೆ. ವಚನಕಾರರು ಕೇವಲ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತವಾಗುತ್ತಿದ್ದಾರೆ. ದೇವರನ್ನು ವಿರೋಧಿಸಿದವರನ್ನೇ ದೇವರನ್ನಾಗಿ ಮಾಡಿ ಕೂಡಿಸಿ ಅವರನ್ನೇ ಆರಾಧಿಸುವ ಬದಲು ಪೂಜಿಸುವ ಪದ್ಧತಿ ಬೆಳೆಯುತ್ತಿದೆ. ಸಾಲದ್ದಕ್ಕೆ ಈಗ ಅದನ್ನೇ ಒಂದು ಧರ್ಮವನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕೆಲವು ಸಚಿವರಾದಿಯಾಗಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಮೂರ್ತಿಭಂಜಕರನ್ನೇ ಮೂರ್ತಿಯನ್ನಾಗಿಸಿ ಕೂರಿಸು ಅವರದ್ದೇ ಹೆಸರಿನಲ್ಲಿ ಹೊಸ ಧರ್ಮ ಸೃಷ್ಟಿಸುವ ಪ್ರಯತ್ನ ನೋಡಿದರೆ ಈ ಜನಗಳಿಗೆ ಅದ್ಯಾವ ಮಂಕು ಬಡಿದಿದೆಯೋ ಎನಿಸುತ್ತದೆ.

  ಪ್ರತಿಕ್ರಿಯೆ
 6. ಕೃಷ್ಣೇಗೌಡ ಟಿ.ಎಲ್.

  ಕಟ್ಟಿಮನಿಯವರೆ,
  ತಮ್ಮ comment ನೋಡಿದ ತಕ್ಷಣವೇ ನಿಮ್ಮ ಜ್ಞಾನದ ಆಳ ಪಾತಾಳದಷ್ಟು ಎಂಬುದು ತಿಳಿಯಿತು. ಇತಿಹಾಸ ತಿಳಿಯಲು ನಡೆದ ಕಾಲಕ್ಕೆ ಹೋಗುವ ಸಾಮರ್ಥ್ಯ ತಮಗೆ ಮಾತ್ರ ಇರಬಹುದು. ಇಷ್ಟಲಿಂಗ ಧಾರಣೆ ದೇವಾಲಯ ನಿರಾಕರಣೆ ಉದ್ದೇಶದ್ದಲ್ಲದಿದ್ದರೆ ಒಬ್ಬೊಬ್ಬರೂ ಲಿಂಗ ಧರಿಸಬೇಕಿರಲಿಲ್ಲ.ಎಲ್ಲರೂ ಸೇರಿ ”ರಾಮಮಂದಿರ” ಕಟ್ಟುವ ಆಂದೋಲನ ಮಾಡಬಹುದಿತ್ತು, ಅದನ್ನು ಕಾಪಾಡಿಕೊಳ್ಳಲು ಚೆಡ್ಡಿತೊಟ್ಟ ಪೊಲೀಸ್ ಪಡೆಯನ್ನೂ ನೇಮಿಸಿಕೊಳ್ಳಬಹುದಿತ್ತು.
  ಇತಿಹಾಸ ಅಧ್ಯಯನ ಮಾಡಲು ವೈಜ್ಞಾನಿಕ ವಿದಾನಗಳಿವೆ ಆದರೆ ಪೂರ್ವಾಗ್ರಹಗಳಿಲ್ಲ.ಪೂರ್ವಾಗ್ರಹಗಳಿದ್ದರೆ ತೀರ್ಮಾನಗಳಿಗೆ ಬರಬಹುದಷ್ಟೆ ಅದ್ಯಯನ ಮಾಡಲಾಗುವುದಿಲ್ಲ.

  ಪ್ರತಿಕ್ರಿಯೆ
 7. C P NAGARAJA

  ” ಅದೆಷ್ಟೋ ದೇವಸ್ಥಾನಗಳು ಧಾಳಿಕೋರರಿಂದ ಲೂಟಿಗೆ ಒಳಪಟ್ಟು ಧ್ವಂಸವಾದವಲ್ಲವೇ! ಆಗ ಭಕ್ತರು ಏನು ಮಾಡಬೇಕು? ನಂಬಿದ ದೇವಾಲಯಗಳೇ ನಾಶವಾದಾಗ ಭಕ್ತಿಗೆ ನೆಲೆ ಎಲ್ಲಿ? ಈ ಎಲ್ಲ ಸಮಸ್ಯೆಗಳ ಗಹನವಾದ ಅರಿವು ಬಸವಣ್ಣನವರಿಗೆ ಇತ್ತು. ಕಾಲ ಹಾಗೂ ಧಾಳಿಕೋರರ ಹಾವಳಿಗೆ ದೇವಾಲಯಗಳು ನಾಶವಾದರೂ ಭಕ್ತಿಗೆ ನೆಲೆಯೊಂದು ಇರಬೇಕು ಎಂದು ಅವರು ತಿಳಿದರು. ಎಂತಹ ಉನ್ನತ ಹಾಗೂ ಮುಂದಾಲೋಚನೆ ಅವರದ್ದಾಗಿತ್ತು ನೋಡಿ! “—-ಶ್ರೀ ಕಟ್ಟಿಮನಿ ಅವರ ಈ ವಿವರಣೆಯನ್ನು ಓದಿ ಅಳಬೇಕೋ ಇಲ್ಲವೇ ನಕ್ಕು ಸುಮ್ಮನಾಗಬೇಕೋ ಎಂಬುದೇ ತಿಳಿಯದಾಗಿದೆ . ಈ ಬಗೆಯ ಬರಹಗಳನ್ನು ಓದುವುದರಿಂದ ನಮ್ಮ ಸಮಯ ಹಾಳಾಗುವುದಲ್ಲದೇ , ಮನಸ್ಸಿನ ಆರೋಗ್ಯವೂ ಕೆಡುತ್ತದೆ . ಈ ಬಗೆಯಲ್ಲಿ ವಚನಗಳನ್ನು ಓದುವ ಮತ್ತು ವಚನಕಾರರ ಆಶಯಗಳನ್ನು ವ್ಯಾಖ್ಯಾನಿಸುವ ವ್ಯಕ್ತಿಗಳೊಡನೆ ಸಂವಾದ ನಡೆಸುವುದರಲ್ಲಿ ಯಾವ ಅರ್ಥವೂ ಇಲ್ಲ , ಯಾವ ಪ್ರಯೋಜನವೂ ಇಲ್ಲ .
  ಸಿ ಪಿ ನಾಗರಾಜ , ಬೆಂಗಳೂರು .

  ಪ್ರತಿಕ್ರಿಯೆ
  • ವಿಶ್ವಾರಾಧ್ಯ ಸತ್ಯಂಪೇಟೆ

   ಸಿ.ಪಿ. ನಾಗರಾಜರೆ,
   ಕಟ್ಟಿಮನಿ ಎಂಬ ಹೆಸರಿನಿಂದ ಬರೆಯುತ್ತಿರುವವರು ನಿಜಕ್ಕೂ ಕಟ್ಟಿಮನಿಯವರೆ ಅಲ್ಲ,ಅವರು ರಾಯರಾಗಿರಬಹುದು. ಇಲ್ಲವೆ ವೈದಿಕ ವೈರಸ್ ನಿಂದ ನರಳುತ್ತಿರುವ ಮಾನಸಿಕ ರೋಗಿಗಳಾಗಿರಬಹುದು. ಒಂದು ಮಾತು ರೋಗಿಗಳನ್ನು ಹೇಗೋ ಗುಣಪಡಿಸಬಹುದು. ಆದರೆ ರೋಗಿಷ್ಠರಂತೆ ವರ್ತಿಸುತ್ತಿರುವವರನ್ನು ಹೇಗೆ ಸರಿಪಡಿಸಬೇಕು. ಬಹುಶಃ ಈಗ ಇಂಥವರೇ ಬಹಳಷ್ಟು ಜನ ಇದ್ದಾರೆ. ಕಸ ಇದೆ . ಅದು ಬೆಳೆಯುತ್ತಿದೆ ಎಂದ ಮಾತ್ರಕ್ಕೆ ಬಸವಣ್ಣನವರ ಬೀಜಗಳನ್ನು ಬಿತ್ತಲು ನಾವೆಲ್ಲ ಹಿಂದೆ ಮುಂದೆ ನೋಡಬಾರದು.

   ಪ್ರತಿಕ್ರಿಯೆ
   • ಕಟ್ಟಿಮನಿ

    ಆರಾಧ್ಯ, ಪದೇ ಪದೇ ವೈದಿಕ ವೈರಸ್ ಎಂದು ಅವಧಿಯ ಓದುಗರನ್ನು ಹೆದರಿಸಲು ನೀವು ಪಡುತ್ತಿರುವ ಪ್ರಯತ್ನ ಅತ್ಯಂತ ಬಾಲಿಶ ಹಾಗೂ ಅಮಾನವೀಯವಾದದ್ದು. ಬಸವ ಸಂಸ್ಕೃತಿಯು ಪ್ರತಿವಾದಿಯನ್ನು ಹೆದರಿಸಿ ಅವನ ಬಾಯನ್ನು ಮುಚ್ಚಿಸುವ ಇಂತಹ ಎಲ್ಲಾ ಯತ್ನಗಳನ್ನು ವಿರೋಧಿಸುತ್ತದೆ. ನಮ್ಮದೆನಿದ್ದರ್ರೂ ಸಂವಾದದ ಮಾರ್ಗ.

    ಪ್ರತಿಕ್ರಿಯೆ
    • ವಿಶ್ವಾರಾಧ್ಯ ಸತ್ಯಂಪೇಟೆ

     ಕಟ್ಟಿಮನಿಯವರೆ,
     ಅವಧಿಯ ಓದುಗರು ಪ್ರಜ್ಞಾವಂತರು. ನಾನು ವೈದಿಕ ವೈರಸ್ ಎಂದು ಕರೆದದ್ದು ಕಟ್ಟಿಮನಿಯವರನ್ನೇ ವಿನಃ ಅವಧಿಯ ಓದುಗರನ್ನಲ್ಲ. ಅವಧಿಯ ಓದುಗರು ವಿಚಾರವಂತರೂ ಪ್ರಾಜ್ಞರೂ ಆಗಿದ್ದಾರೆ. ತಾವುಗಳು ಸುಖಾ ಸುಮ್ಮನೆ ಅವಧಿಯ ಓದುಗರನ್ನು ತಮ್ಮೊಂದಿಗೆ ನಿಲ್ಲಿಸಿಕೊಂಡು ಬರುವ ತಂತ್ರವನ್ನು ನಿಲ್ಲಿಸಿರಿ ರಾಯರೆ……

     ಪ್ರತಿಕ್ರಿಯೆ
 8. ಕೃಷ್ಣೇಗೌಡ ಟಿ.ಎಲ್.

  ನನ್ನ ಮೆಚ್ಚಿನ ಗುರುಗಳಾದ CPN ಸರಿಯಾಗೇ ಹೇಳಿದ್ದಾರೆ.

  ಪ್ರತಿಕ್ರಿಯೆ
 9. ಕಟ್ಟಿಮನಿ

  ಮಾನ್ಯರೇ, ಮಾರ್ಕ್ಸ್ ವಾದವನ್ನೂ ಸಮಾಜವಾದವನ್ನೂ ಮಾನವಹಕ್ಕುಗಳನ್ನೂ ಯುರೋಪ್ ಕಂಡುಕೊಳ್ಳುವ ಅನೇಕ ಶತಮಾನಗಳ ಮೊದಲೇ ಬಸವಣ್ಣನವರು ಲೋಕಕ್ಕೆ ನೀಡಿದ್ದರು ಅಂತ ವಾದ ಮಾಡುವ ನೀವುಗಳು ಬಸವಣ್ಣನವರಿಗೆ ಮುಸ್ಲಿಂ ಧಾಳಿಕೋರರ ಅಪಾಯದ ಬಗ್ಗೆ ಸುಳಿವೇ ಇರಲಿಲ್ಲ ಎಂದು ವಾದ ಮಾಡಿದರೆ ಹೇಗೆ?!! ಇಂದು ಭಾರತ ಉಪ ಮಹಾಖಂಡ ಎಂದು ಗುರುತಿಸಲ್ಪಟ್ಟಿರುವ ಭೌಗೋಳಿಕ ಪ್ರದೇಶದ ಮೇಲೆ ಮುಸಲ್ಮಾನ ಧಾಳಿಕೋರರ ಆಕ್ರಮಣ ಎಂಟನೆಯ ಶತಮಾನದಿಂದಲೇ ಶುರುವಾಗಿತ್ತು ಎಂದು ಇತಿಹಾಸಕಾರರು ಹೇಳಿದ್ದಾರೆ. ಅರಬ್ಬರು ಸಿಂಧ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಅಲ್ಲೆಲ್ಲ ದೇವಸ್ಥಾನಗಳನ್ನು ಕೆಡಿಸುವ ಕೃತ್ಯಗಳಲ್ಲಿ ತೊಡಗಿದ್ದರು ಅಂತ ಅವರೇ ಬರೆಸಿದ ಚಚನಾಮ ಎಂಬ ಕೃತಿಯು ಹೇಳಿದೆ. ಮುಹಮ್ಮದ್ ಬಿನ್ ಕಾಸಿಂ ಎಂಬ ಧಾಳಿಕೋರನು ಸಿಂಧ್ ಪ್ರಾಂತ್ಯದಾದ್ಯಂತ ದೇವಸ್ಥಾನಗಳನ್ನು ಕೆಡವಿದನು (ಇದರ ಉಲ್ಲೇಖವನ್ನು ಸ್ವತಹ ರಂಜಾನ್ ದರ್ಗಾ ಅವರೇ ಮಾಡಿದ್ದಾರೆ). ತದನಂತರದ ಕಾಲದಲ್ಲಿ, ಅಂದರೆ ಬಸವಣ್ಣನವರ ಕಾಲಕ್ಕಿಂತ ಮೊದಲು, ಅನೇಕ ಧಾಳಿಗಳು ನಡೆದಿದ್ದವು. ಇವುಗಳಲ್ಲಿ ೧೧ನೆಯ ಶತಮಾನದಲ್ಲಿ ಮಹಮ್ಮದ್ ಘಜನಿಯ ನೇತೃತ್ವದಲ್ಲಿ ನಡೆದ ೧೭ ಧಾಳಿಗಳು ಲೋಕಜನಿತವಾಗಿವೆ. ಈತನು ಅನೇಕಾನೇಕ ದೇವಸ್ಥಾನಗಳನ್ನು ಕೆಡವಿದನು ಅಂತ ಇತಿಹಾಸಕಾರರೇ ಹೇಳಿದ್ದಾರೆ. ಬಸವಣ್ಣನವರ ಕಾಲದಲ್ಲೂ ಮಹಮದ್ ಘಜನಿಯ ವಂಶದವರು ಲಾಹೋರ್ ಸುತ್ತ ಮುತ್ತದ ಪ್ರಾಂತ್ಯದಲ್ಲಿ ಬೇರು ಬಿಟ್ಟಿದ್ದರು. ಘಜನಿಯ ಬಳಿಕ ಮಹಮ್ಮದ್ ಘೋರಿಯು ಭಾರತ ಉಪ ಮಹಾಖಂಡವನ್ನು ಆಕ್ರಮಿಸಿಕೊಂಡನು. (ನಮ್ಮ ನೆರೆಯ ದೇಶವಾದ ಪಾಕಿಸ್ತಾನವು ಈತನ ಸ್ಮರಣಾರ್ಥ ಮಿಸೈಲುಗಳಿಗೆ ಘೋರಿ ಎಂದು ಹೆಸರಿಟ್ಟಿದೆ!) ಈತನೂ ಬಸವಣ್ಣನವರ ಸಮಕಾಲೀನನು ಅಂತ ಇತಿಹಾಸ ಹೇಳುತ್ತದೆ. ಬಸವಣ್ಣನವರ ಕಾಲದಲ್ಲೇ ಧಾಳಿಕೋರರು ಅಯೋಧ್ಯೆಯ ದೇವಾಲಯಗಳನ್ನು ಕೆಡವಿದ್ದು. ಉತ್ತರ ಭಾರತದಲ್ಲಿ ಧಾಳಿಕೋರರ ಆಕ್ರಮಣದಿಂದ ಇಷ್ಟೆಲ್ಲಾ ವಿಪ್ಲವ ಘಟಿಸುತ್ತಿರುವಾಗ ಧಾಳಿಕೋರರ ಸುದ್ದಿ ಹಾಗೂ ಭೀತಿ ದಕ್ಷಿಣ ಭಾರತಕ್ಕೆ ಹಬ್ಬದೇ ಇರುತ್ತದೆಯೇ?! ಬಸವಣ್ಣನಂತಹ ಮಹಾಜ್ಞಾನಿಯ ಗಮನಕ್ಕೆ ಬೀಳದೇ ಇರುತ್ತದೆಯೇ?! ಬಿಜ್ಜಳನಾಳಿದ ನೆಲದ ಮೇಲೆ ಧಾಳಿಕೋರರು ಕಾಲಿಡುವ ವರೆಗೆ ಅವರು ಕಾಯಬೇಕಿತ್ತೇ?!

  ಪ್ರತಿಕ್ರಿಯೆ
  • Kanna

   ಕಟ್ಟಿಮನಿ ಅವರೇ, ಬಸವಣ್ಣನವರು ಜನ್ಮ ತಾಳುವ ನೂರು ವರ್ಷಗಳ ಹಿಂದೆ ಮಹಮದ್ ಘಜನಿ ಗುಜರಾತ ಪ್ರಾಂತ್ಯದ ಮೇಲೆ ಧಾಳಿ ನಡೆಸಿ ಸೋಮನಾಥ ದೇವಸ್ಥಾನವನ್ನು ಲೂಟಿಗೈದ. ಬಸವಣ್ಣನವರು ಲಿಂಗೈಕ್ಯರಾದ ನೂರು ವರ್ಷಗಳ ಬಳಿಕ ಅಲಾವುದ್ದೀನ್ ಖಿಲ್ಜಿಯು ಸೋಮನಾಥ ದೇವಸ್ಥಾನದ ಮೇಲೆ ಧಾಳಿ ನಡೆಸಿದ್ದಲ್ಲದೆ ೫೦,೦೦೦ಕ್ಕೂ ಹೆಚ್ಚು ಸ್ಥಳೀಯರ ಬರ್ಬರ ಹತ್ಯೆ ಗೈದ. ಈ ಎರಡು ಘಟನೆಗಳ ನಡುವಿನ ಕಾಲದಲ್ಲಿ ಮುಸಲ್ಮಾನ ಧಾಳಿಕೋರರ ಭೀತಿ ಹಾಗೂ ಅಪಾಯ ದೇಶಾದ್ಯಂತ ಇರಲಿಲ್ಲ ಅಂದರೆ ನಂಬಲು ಸಾಧ್ಯವೇ? ಬಸವಣ್ಣನವರ ಕಾಲದಲ್ಲಿ ಬಿಜ್ಜಳನಿಗೆ ಧಾಳಿಯ ಅಪಾಯ ಇದ್ದದ್ದು ಹೊಯ್ಸಳರು, ಯಾದವರು ಹಾಗೂ ಚಾಲುಕ್ಯರಿಂದ ಮಾತ್ರ ಎಂಬ ಶ್ರೀ ಸತ್ಯನಾರಾಯಣರ ವಾದ ನಿಜಕ್ಕೂ ಜಾಣ ವಿಸ್ಮೃತಿ ಅಲ್ಲದೇ ಮತ್ತೇನಲ್ಲ!

   ಪ್ರತಿಕ್ರಿಯೆ
  • Ramana

   Kattimaniji, we must remember that basaveshwara was the prime minister of bijjala. He was the chief administrator of the state. Obviously he had the mouth of the spies in his ears. How hard it would be for him to come to know about Muslim invasions of north and north-west India?

   ಪ್ರತಿಕ್ರಿಯೆ
  • ವಿಶ್ವಾರಾಧ್ಯ ಸತ್ಯಂಪೇಟೆ

   ಕಟ್ಟಿಮನಿ ರಾಯರೆ,
   ಘಜನಿ ಮಹ್ಮದ ಭಾರತದ ಸೋಮನಾಥ ದೇವಾಲಯದ ಮೇಲೆ ಧಾಳಿ ಮಾಡಿದ್ದು ಅದು ಹಿಂದೂ ದೇವಾಲಯವೆಂದಲ್ಲ. ಅಲ್ಲಿ ಸಾಕಷ್ಟು ಬಂಗಾರದ ಒಡವೆ,ನಾಣ್ಯ, ಮುತ್ತು ರತ್ನಗಳು ಆ ದೇವಸ್ಥಾದಲ್ಲಿ ಲಭ್ಯ ಇರುತ್ತವೆ ಎಂಬ ಖಚಿತ ಮಾಹಿತಿಯ ಮೇರೆಗೆ ಧಾಳಿ ಮಾಡಿದ್ದು. ಈ ಮಾತಿಗೆ ಉದಾಹರಣೆಯಾಗಿ ನೋಡುವುದಾದರೆ ಕೇರಳದ ತಿರವನಂತರಪುರದ ಅನಂತ ಪದ್ಮ ದೇವಾಲಯದಲ್ಲಿ ಸಿಕ್ಕಿರುವ ಕೋಟ್ಯಂತರ ಮೌಲ್ಯದ (ಲೆಕ್ಕಕ್ಕೆ ಸಿಗದ ) ಬಂಗಾರದ ಒಡವೇಗಳೇ ಸಾಕ್ಷಿ. ಯಾರೋ ಒಬ್ಬ ಅವಿವೇಕಿ ಮತಾಂಧ ಮುಸ್ಲಿಂ ಹಿಂದೂ ದೇವಾಲಯಗ ಳ ಮೇಲೆ ನಡಕೊಂಡ ಎಂಬ ಸಂಗತಿಗೆ ಇಡೀ ಜನಾಂಗವನ್ನು ದೂಶಿಸುವುದು ಸರಿಯಲ್ಲ.

   ಪ್ರತಿಕ್ರಿಯೆ
 10. ಕೃಷ್ಣೇಗೌಡ ಟಿ.ಎಲ್.

  ಮಾನ್ಯ Kanna ಮತ್ತು ಕಟ್ಟಿಮನಿ ಇಬ್ಬರೂ ಚರ್ಚೆಯ ದಿಕ್ಕನ್ನೇ ತಪ್ಪಿಸುತ್ತಿದ್ದಾರೆ.ಇಷ್ಟಲಿಂಗ ಧಾರಣೆಯ ಕಾರಣಗಳು ಮತ್ತು ಪರಿಣಾಮಗಳನ್ನು ಬಿಟ್ಟು ಚರ್ಚೆಯನ್ನು ಕೋಮುವಾದೀಕರಿಸುವುದುಬೇಡ.ಮುಸಲ್ಮಾನರ ಆಕ್ರಮಣದಿಂದ ಕೇವಲ ಆರಾಧನೆಯ ನೆಲೆಗಾಗಿ ಲಿಂಗಧಾರಣೆ ಮಾಡಿಸಿದ್ದರೆ,ಇಷ್ಟಲಿಂಗ ಧಾರಣೆ ಮೂಲಕ ಹೊಲೆಯರ,ಮಹಿಳೆಯರ ಇತರ ಹೀನರ ದೇಹವನ್ನೂ ದೇಗುಲ ಮಾಡಲು ವಚನಕಾರರಿಗೆ ಬುದ್ದಿಭ್ರಮಣೆಯಾಗಿತ್ತೆ?

  ಪ್ರತಿಕ್ರಿಯೆ
  • Ramana

   Krishnaji, you guys first argued there was no Muslim threat during basaveshwara’s time. Kanna and Kattimaniji proved you guys wrong. Now instead of admitting flaws in your argument you guys are accusing them of derailing the discussion! The Muslim threat angle to ishtalinga practice is plausible and can’t be dismissed. Why do bring in communalism into discussion on history? Are you saying that Muslim invaders didn’t destroy temples?

   ಪ್ರತಿಕ್ರಿಯೆ
 11. ಲಿಂಗರಾಜು ಬಿ.ಎಸ್.

  ಮಾನ್ಯ ಕಟ್ಟೀಮನಿ ಹಾಗೂ ಕಣ್ಣ ಆವರೇ
  ದೇಹವೇ ದೇಗುಲ ಎಂಬ ಕಲ್ಪನೆ ದೇವಾಲಯವನ್ನು ದೂರವಿಡುವ ಉದ್ದೇಶಕ್ಕೆ ಹುಟ್ಟಿದ್ದು ಎಂಬುದರಲ್ಲಿ ಸುಳ್ಳೇನು ಇಲ್ಲ. ಏಕೆಂದರೆ ದೇವಾಲಯಕ್ಕೆ ಇಂಥವರು ಬರಬಾರದು, ಮಹಿಳೆಯರು ಇಂಥ ಸಮಯದಲ್ಲಿ ಬರಬಾರದು ಮುಂತಾದ ನಿರ್ಬಂಧಗಳನ್ನು ಹೇರಿದ್ದರಿಂದ ಪಾಪ ಭಕ್ತರು ಪೂಝೆಗೆ ಎಲ್ಲಿಗೆ ಹೋಗಬೇಕು. ದೇವಸ್ಥಾನಕ್ಕೆ ಬರಬೇಡಿ ಎಂದರೆ ನೀವ್ಯಾಕೆ ಚಿಂತೆ ಮಾಡುತ್ತೀರಿ, ನಿಮ್ಮ ದೇಹವೇ ದೇಗುಲವಾಗಿದೆ. ಮೈಲಿಗೆ ಎಂಬುದು ದೇವಸ್ಥಾನಕ್ಕಾದರೆ ನಿಮ್ಮ ದೇಃವನ್ನೇ ದೇಗುಲ ಮಾಡಿಕೊಳ್ಳಿ, ದೇವಸ್ಥಾನದಲ್ಲಿರುವ ಲಿಂಗಕ್ಕೆ ನೀವು ಪೂಜೆ ಮಾಡಲು ಮೈಲಿಗೆ ಅಡ್ಡಿಯಾದರೆ ನಿಮ್ಮ ದೇಹದಲ್ಲೇ ಲಿಂಗ ಧರಿಸಿ ಎಂದು ಇಷ್ಟಲಿಂಗ ನೀಡಿದ್ದು ದೇವಾಲಯದ ನಿರಾಕರಣೆ ಅಲ್ಲದೆ ಮತ್ತೇನು.
  ನಾಗರಾಜ್ ಅವರ ಲೇಖನಕ್ಕೆ ಆಧಾರ ಕೇಳಿದ ನೀವು ಬಿಜ್ಜಳನ ರಾಜ್ಯದ ಮೇಲೆ ಮುಸ್ಲಿಮರ ದಾಳಿ ಕುರಿತು ದಾಖಲೆ ಒದಗಿಸಿ.

  ಪ್ರತಿಕ್ರಿಯೆ
  • Ramana

   Lingarajuji, please first learn to read comments carefully and then criticise. Where has Kattimaniji said that Bijjala was attacked by Muslim invaders? He said Northern India was attacked by Muslim marauders during the time of Basavanna. If you want proof, you can read any history book to know more about the invasions of Ghazni and Ghori and the temples they looted. At the time of Basavanna there was a definite threat of Muslim attack on many parts of South India. Basavanna was Bijjala’s prime minister. He must have had intelligence reports on potential Muslim attacks. So we can’t rule out the plausibility of him introducing ishtalinga practice as an antidote for Muslim attacks.

   ಪ್ರತಿಕ್ರಿಯೆ
 12. Anonymous

  “ಇಷ್ಠ ಲಿಂಗ ಧಾರಣೆ ದೇವಾಲಯಗಳನ್ನು ನಿರಾಕರಿಸುವ ಸ್ಪಷ್ಠ ಉದ್ದೇಶದಿಂದ ಹುಟ್ಟಿದ್ದು.” ಅಂತ ಬರೆದಿದ್ದಾರೆ. ಇದು ಅವರ ಗೃಹೀತ. ಇದಕ್ಕೆ ವಚನಗಳಲ್ಲಿ ಯಾವ ಆಧಾರವೂ ಇಲ್ಲ. ಬೇಕಿದ್ದರೆ ನಾಗರಾಜ್ ಅವರು ಆಧಾರಗಳನ್ನು ಕೊಟ್ಟು ವಾದ ಮಾಡಲಿ, ಆಗ ಅವರ ವಾದವನ್ನು ಒಪ್ಪೋಣ. ನಾಗರಾಜ್ ಅವರು ಬಸವಣ್ಣನವರ ಕಾಲದ ವಿದ್ಯಮಾನಗಳ ಪ್ರತ್ಯಕ್ಷದರ್ಶಿಯಲ್ಲ. ಅಥವಾ ಆ ಕಾಲಕ್ಕೆ ವರ್ತಮಾನದಿಂದಲೇ ಪಯಣಿಸಬಲ್ಲ ಕಾಲಜ್ಞಾನಿಯೂ ಅಲ್ಲ. ಆದುದರಿಂದ ಖಚಿತವಾಗಿ “ಇಷ್ಠ ಲಿಂಗ ಧಾರಣೆ ದೇವಾಲಯಗಳನ್ನು ನಿರಾಕರಿಸುವ ಸ್ಪಷ್ಠ ಉದ್ದೇಶದಿಂದ ಹುಟ್ಟಿದ್ದು.” ಅಂತ ಹೇಳುವಾಗ ಅದು ಅವರ ಅಭಿಪ್ರಾಯ ಮಾತ್ರವಾಗಿದ್ದರೆ ಸಾಲದು. ಆ ಅಭಿಪ್ರಾಯಕ್ಕೆ ಆಧಾರಗಳನ್ನೂ ಒದಗಿಸುವುದು ನಾಗರಾಜ್ ಅವರ ಕರ್ತವ್ಯ. ಕಟ್ಟಡವು ಮುರಿದು ಹೋಗಬಹುದು ಕಾಲದ ಹೊಡೆತಕ್ಕೆ ಸಿಕ್ಕಿ. ಅಥವಾ ತುರುಕರ ಮಂಗೋಲರ ಧಾಳಿಗೆ ಸಿಕ್ಕಿ ನಾಶವಾಗಬಹುದು (ಬಸವಣ್ಣನವರ ಕಾಲದಲ್ಲೇ, ಅಂದರೆ ಹನ್ನೆರಡನೆಯ ಶತಮಾನದಲ್ಲಿ ಅಲ್ಲವೇ ಮುಸ್ಲಿಂ ಧಾಳಿಕೋರರ ವಿಧ್ವಂಸ ಕ್ರಿಯೆಗಳು ಮುಂಚೂಣಿಗೆ ಬಂದದ್ದು). ಅದೆಷ್ಟೋ ದೇವಸ್ಥಾನಗಳು ಧಾಳಿಕೋರರಿಂದ ಲೂಟಿಗೆ ಒಳಪಟ್ಟು ಧ್ವಂಸವಾದವಲ್ಲವೇ! ಆಗ ಭಕ್ತರು ಏನು ಮಾಡಬೇಕು? ನಂಬಿದ ದೇವಾಲಯಗಳೇ ನಾಶವಾದಾಗ ಭಕ್ತಿಗೆ ನೆಲೆ ಎಲ್ಲಿ? ಈ ಎಲ್ಲ ಸಮಸ್ಯೆಗಳ ಗಹನವಾದ ಅರಿವು ಬಸವಣ್ಣನವರಿಗೆ ಇತ್ತು. ಕಾಲ ಹಾಗೂ ಧಾಳಿಕೋರರ ಹಾವಳಿಗೆ ದೇವಾಲಯಗಳು ನಾಶವಾದರೂ ಭಕ್ತಿಗೆ ನೆಲೆಯೊಂದು ಇರಬೇಕು ಎಂದು ಅವರು ತಿಳಿದರು. ಎಂತಹ ಉನ್ನತ ಹಾಗೂ ಮುಂದಾಲೋಚನೆ ಅವರದ್ದಾಗಿತ್ತು ನೋಡಿ! ಆದುದರಿಂದಲೇ ಅವರು ಇಷ್ಟ ಲಿಂಗ ಹಾಗೂ ಜಂಗಮಕ್ಕೆ ಮಹತ್ವ ನೀಡಿದ್ದು.”
  ಎಂದು ಇಲ್ಲೊಬ್ಬರು ಬರೆದಿದ್ದಾರೆ. ಆ ಅಭಿಪ್ರಾಯವನ್ನು ಗಂಭೀರವಾಗಿ ತೆಗೆದುಕೊಂಡು ಚರ್ಚೆಯೂ ನಡೆದಿದೆ. ಅವರೇನೋ ನಾಗರಾಜ್ ರವರು ಕಾಲಜ್ಞಾನಿಯೂ ಅಲ್ಲ, ಪ್ರತ್ಯಕ್ಷದರ್ಶಿಯೂ ಅಲ್ಲ, ಅವರು ವಚನಗಳ ಆಧಾರ ಕೊಡಲಿ ಎಂದು ಹೇಳಿದ್ದಾರೆ. ನಾಗರಾಜ್ ರವರು ವಚನಗಳ ುದಾಹರಣೆ ಕೊಡುವುದಾದರೆ ಕೊಡಲಿ.ವಚನಗಳ ಬಗ್ಗೆ ಆಸ್ಥೆಯುಳ್ಳ ಯಾರಿಗಾದರೂ ಈ ಬಗ್ಗೆ ವಿವರ, ವಚನಗಳ ುದಾಹರಣೆ ನೀಡುವ ಹಲವಾರು ಲೇಖನಗಳಿವೆ ನೋಡಲಿ. ವಚನಗಳನ್ನೇ ಓದಲಿ.
  ಆದರೆ ಈ ಮಹಾನುಭಾವರು ಹೇಳುತ್ತಿರುವ ಹೊಸ ಥಿಯರಿ- ಮುಸ್ಲಿಮರ ಧಾಳಿಯ ಥಿಯರಿಗೆ ಒಂದೇ ಒಂದು ವಚನದ ುದಾಹರಣೆಯನ್ನು ಕೊಡಬಲ್ಲರೇ ? ಇವರೇನು ಕಾಲಜ್ಞಾನಿಗಳೇ, ಪ್ರತ್ಯಕ್ಷದರ್ಶಿಗಳೇ ? ಇಂತಹ ಡಂಭಾಚಾರವ ಮೆಚ್ಚ ನಮ್ಮ ಕೂಡಲ ಸಂಗಮದೇವ. ಅಂತೂ ಕೊನೆಗೆ ತಂತಾನೆ ಹೊರಬಿತ್ತು ಸತ್ಯ. ಹಸುವಿನ ವೇಷ ತೊಟ್ಟ ಹುಲಿ ಕೊನೆಗೆ ವೇಷವನ್ನು ಬಿಸುಟು ನಿಜ ವೇಷದಲ್ಲಿ ಕಾಣುವುದು ಅನಿವಾರ್ಯವಾದಂತೆ “ಸಂಶೋಧಕ” ರು ತಮ್ಮ ವೇಶ ಕಿತ್ತೊಗೆದು ತಾವು ಯಾರು ಎಂಬುದನ್ನು ತೋರಿಸಿಕೊಂಡಿದ್ದಾರೆ. ವಚನಗಳು ಜಾತಿ ವಿರೋಧವಲ್ಲ.ಜಾತಿ ವ್ಯವಸ್ಥೆಯೇ ಅಲ್ಲ ಎಂದು ಎಲ್ಲಾ ಆಧಾರಗಳನ್ನೂ ನಿರಾಕರಿಸಿ ಏಕೆ ಹೀಗೆ ಮೊಲಕ್ಕೆ ಮೂರೇ ಕಾಲು ಎಂದು ಸಾಧಿಸಲು ಹಠ ಹಿಡಿದಿದ್ದಾರೆ ಎಂಬುದು ಹೊರಬಿದ್ದೇ ಬಿಟ್ಟಿತು.

  ಪ್ರತಿಕ್ರಿಯೆ
 13. rudresh basava chetana

  ಲಿಂಗವಿಲ್ಲದೆ ನಡೆವವರ ಲಿಂಗವಿಲ್ಲದೆ ನುಡಿವವರ
  ಲಿಂಗವಿಲ್ಲದೆ ಉಗುಳ ನುಂಗಿದಡೆ ಅ೦ದ೦ದಿಗೆ ಕಿಲ್ಬಿಷವಯ್ಯ ..
  ಏನೆಂಬೆನೇನೆಂಬೆನಯ್ಯಾ
  ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ ಮುಟ್ಟಲಾಗದು
  ಲಿಂಗವಿಲ್ಲದೆ ನುಡಿವವರ ಶಬ್ದ ಸೂತಕ ಕೇಳಲಾಗದು
  ಲಿಂಗವಿಲ್ಲದೆ ಗಮನಿಸಿದಡೆ ಆ ನಡೆ ನುಡಿಗೊಮ್ಮೆ ವ್ರತಗೇಡಿ
  ಕೂಡಲಸಂಗಮದೇವಾ…
  ಒಂದು ವಚನ ಓದಿದರೆ ಸಾಲದು ಸಂಪೂರ್ಣ ವಚನ ಅಧ್ಯಯನ ಮಾಡಿ ಸತ್ಯ ತಿಳಿಯುತ್ತದೆ …. ಮನಕ್ಕೆ ಮಾತನಾಡುವುದನ್ನು ಕಲಿಸಿ ….

  ಪ್ರತಿಕ್ರಿಯೆ
 14. ಲಿಂಗರಾಜು ಬಿ.ಎಸ್.

  mr, ramana
  see, kattimani’s comment @ July 26, 2013 at 11:56 am
  2nd para, 5th line(ಬಸವಣ್ಣನವರ ಕಾಲದಲ್ಲೇ, ಅಂದರೆ ಹನ್ನೆರಡನೆಯ ಶತಮಾನದಲ್ಲಿ ಅಲ್ಲವೇ ಮುಸ್ಲಿಂ ಧಾಳಿಕೋರರ ವಿಧ್ವಂಸ ಕ್ರಿಯೆಗಳು ಮುಂಚೂಣಿಗೆ ಬಂದದ್ದು).

  ಪ್ರತಿಕ್ರಿಯೆ
 15. ಲಿಂಗರಾಜು ಬಿ.ಎಸ್.

  ಎಂಥಾ ವೈರಸ್ಗಳು ಇವು, ಜಾತಿ, ಮಡಿ, ಮೈಲಿಗೆ ಕಾರಣಕ್ಕೆ ದೇವಸ್ಥಾನ ಪ್ರವೇಶ ನಿಷಿದ್ದಗೊಳಿಸಿದ ವೈದಿಕ ಮನಸುಗಳ ರಕ್ಷಣೆಗೆ ಮುಸ್ಲಿಂ ದಾಳಿಯನ್ನು ಗುರಾಣಿಯನ್ನಾಗಿ ಬಳಸುತ್ತಿರುವುದು ನಿಜಕ್ಕೂ ಮಹಾನ್ ಸಂಶೋಧನೆಯೇ ಸರಿ. ದುರಂತವೆಂದರೆ ಈ ಸಂಶೋಧನೆ ಇವರದ್ದಾಗಿರದಿರುವುದು. ಇದು ನಮ್ಮ ಭಾಷೆಯಲ್ಲಿ ಏತ ನೀರಾವರಿ ಎನ್ನುತ್ತೇವೆ. ಪಾಪ…. ಕರುಣಾಜನಕ.
  ಇದೇ ರೀತಿ ಸತಿ ಪದ್ಧತಿಗೂ ಮುಸ್ಲಿಂ ದಾಳಿಯ ಕತೆ ಹೇಳಲಾಗಿತ್ತು. ಈಗಾಗಲೇ ಹಿಂದೂ ಧರ್ಮ ಅಪಾಯದಲ್ಲಿದೆ, ಮತಾಂತರ ಹೆಚ್ಚಾಗಿ ಹಿಂದೂ ಹೆಣ್ಣು ಮಕ್ಕಳು ಓಡಿಹೋಗುತ್ತಿದ್ದಾರೆ ಎಂದು ಹುಯಿಲೇಳುತ್ತಿದೆ. ಮತ್ತೆ ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ಸತಿ ಪದ್ಧತಿ ತಂದೀರಿ ಸ್ವಾಮಿ ಅಲ್ಲಲ್ಲ ಜೀ.

  ಪ್ರತಿಕ್ರಿಯೆ
 16. Sushanth Gowda

  Kattimani’s theory seems plausible. I agree with Kanna and Ramana that Kattimani’s theory can potentially explain Ishtalinga practice. I don’t know why others are unnecessarily attacking Kattimani. May be they want to stop Kattimani present his explanation of ishtalinga practice at any cost. It is one thing to counter Kattimani’s theory with sound logical argument and another thing to prevent him from speaking is anti-democratic and anti-secular. Editor must intervene and put brakes on such intentions.

  ಪ್ರತಿಕ್ರಿಯೆ
  • Ramana

   Sushanthji, some minds here have just one point agenda. By hook or crook they want to portray Vachanas as caste criticism. They pick up some or the other vachana and they try to force fit their theory on that vachana. They insist that what they say is always right and you must accept it as the truth. If you counter them by exposing the glaring flaws in their argument they start calling you vaidika virus and link you with all evils of India. They played this game for decades in print journalism where readers didn’t have a voice. Now they are trying to play the same game in online media. They will shout, yell, call names, cry foul, take moral high stand, and do everything to drive away voices that critique their argument. This is what we are seeing here now.

   ಪ್ರತಿಕ್ರಿಯೆ
 17. Shivappa Nayak

  “ನನ್ನ ಗುರುಗಳು ಬರೆದದ್ದನ್ನೂ ಅವರು ಓದಬೆಕೆಂದು ಅವರ ವಿಶ್ಲೇಷಣೆಯನ್ನೂ ಆದ್ಯಯನ ಮಾಡಬೇಕೆಂದು ನಾನೂ ನಿರೀಕ್ಷಿಸಬಹುದಲ್ಲ.” Who is your Guru Sir? Is it URA?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: