ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರ ಮೌನದಲ್ಲಿ ಧ್ಯಾನವಿತ್ತು..

ಇವರ ಮೌನದಲ್ಲಿ ಧ್ಯಾನವಿತ್ತು..
ಮರೆವಿನಲ್ಲಿ ಸಮ ಸಮಾಜದ ಕನಸುಗಳಷ್ಟೇ ಇದ್ದವು..

ನಾನು ಮತ್ತು ನನ್ನ ಪತ್ನಿ ಸುಧಾ ಇವರ ಮನೆಗೆ ಹೋದಾಗ ಸಹ್ಯಾದ್ರಿಯ ಕಗ್ಗಾಡಿನ ಮಧ್ಯದಿಂದ ಬೆಳ್ಳಿ ಚುಕ್ಕಿಯಾಗಿ ಹಸಿರು ಶಾಲು ಹೆಗಲೇರಿಸಿ ಕೊಂಡಿದ್ದ ಶಾಮಣ್ಣನವರನ್ನು ಶ್ರೀದೇವಕ್ಕ ಮತ್ತು ಮಗಳು ಉಲೂಪಿ ಇವರುಗಳು ನಡೆಸಿಕೊಂಡು ಬರುತ್ತಿದ್ದರು.

ಶಾಮಣ್ಣನವರ ಮೌನದಲ್ಲಿ ಧ್ಯಾನವಿತ್ತು. ತಮ್ಮ ಮರೆವಿನಲ್ಲಿ ಹೊಸ ಸಮಾಜ ನಿರ್ಮಾಣದ ಕನಸುಗಳು ತುಂಬಿಕೊಂಡಿದ್ದವು. ಮನೆಯ ಒಳಗೂ ಹೊರಗೂ ಪ್ರಶಾಂತ ವಾತಾವರಣವೊಂದು ಮನೆ ಮಾಡಿತ್ತು. ಮನೆಗೆ ಚಾಚಿಕೊಂಡಿದ್ದ ಗಿಡ ಮರಗಳ ಮೇಲೆ ಕೂತಿದ್ದ ಪಿಕಳಾರ, ಗಿಳಿ, ಗೊರವಂಕ, ಚಿಟ್ಟು ಗಿಳಿ, ಮಂಗಟ್ಟೆ, ಹೂವಿನ ಹಕ್ಕಿಗಳು ಶಾಮಣ್ಣನವರ ಬಾಯಿಂದ ಹೊರ ಬರುವ ಒಂದೊಂದೇ ಮಾತಿಗೆ ಕಾದು ಕುಳಿತಂತಿದ್ದವು.

ತಮ್ಮ ಮನೆಯ ಸುತ್ತಲಿನ ಪರಿಸರವನ್ನು ಮಲೆನಾಡ ಕಗ್ಗಾಡಾಗಿಸಿಕೊಳ್ಳುವಲ್ಲಿ ಶಾಮಣ್ಣ ದಂಪತಿಗಳು ತೆಗೆದುಕೊಳ್ಳುತ್ತಿದ್ದ ರಿಸ್ಕ್ ಗಳು ಒಂದೊಂದಾಗಿ ಮಗಳು ಉಲೂಪಿಯಿಂದ ಹೊರ ಬರತೊಡಗಿದವು. ಕಲ್ಲು ಕುರುಚಲು ಆಗಿದ್ದ ಭಗವತಿಕೆರೆಯನ್ನು ‘ಕರಡಿ ಕ್ಯಾಂಪ್ ‘ಎನ್ನುತ್ತಿದ್ದರಂತೆ. ಈಗಲೂ ಭಗವತಿಕೆರೆ ಎಂದು ಬರೆದು ಬ್ರಾಕೆಟ್ಟಿನಲ್ಲಿ ಕರಡಿ ಕ್ಯಾಂಪ್ ಎಂದೇ ಬರೆಯುವುದು ರೂಢಿಯಾಗಿದೆಯಂತೆ.

ಶಾಮಣ್ಣನವರು ಐವತ್ತು ವರ್ಷಗಳ ಹಿಂದೆ ಕಡಿದಾಳಿನಿಂದ ಭಗವತಿಕೆರೆ ಅಥವಾ ಕರಡಿ ಕ್ಯಾಂಪ್ ಗೆ ಬಂದು ಗುಡಿಸಲೊಂದನ್ನು ನಿರ್ಮಿಸಿಕೊಂಡಾಗಿನ ದಿನ ಮಾನಗಳ ಭೀಕರತೆಯನ್ನು ಶ್ರೀದೇವಕ್ಕ ನೆನಪಿಸಿ ಕೊಂಡು ಹೇಳಿದರೆ ಭಯಬೀಳುವಂತಾಗುತ್ತದೆ. ಕಳೆದ ಎರಡು ವಾರಗಳ ಹಿಂದೆ ಶಾಮಣ್ಣ ಪೂರ್ಣ ಜರ್ಝರಿತ ರಾಗಿದ್ದರು. ಹಾಸಿಗೆ ಬಿಟ್ಟು ಏಳಲಾಗುತ್ತಿರಲಿಲ್ಲ.

ಜನರನ್ನು ಗುರುತು ಹಿಡಿವ ಮಾತು ದೂರವೆ ಆಗಿತ್ತು. ಈಗಲೂ ಅವರು ಗುರುತಿಸಲು ಪ್ರಯತ್ನಿಸುತ್ತಾರೆ. ಆಗುತ್ತಿಲ್ಲ. ನೆನಪುಗಳಿಗಾಗಿ ತಲೆಗೆ ಕೆಲಸ ಕೊಡುತ್ತಾರೆ. ಬಾಯಿಗೆ ಬರದು. ಆದರೇ ಒಂದು ವಾರದ ಹಿಂದೆ ಪವಾಡ ಸದೃಷ ರೀತಿಯಲ್ಲಿ ಇವರು ಬದಲಾಗುತ್ತಿರುವ ಸುದ್ದಿ ಕೇಳಿಯೂ ನೋಡಿಕೊಂಡು ಬರದಿರಲಾದೀತೆ? ಇದೀಗ ಇವರನ್ನು ಹಿಡಿದುಕೊಂಡರೆ ಹೆಜ್ಜೆ ಊರುತ್ತಾರೆ. ಕುರ್ಚಿಯಲ್ಲಿ ಕೂರುತ್ತಾರೆ. ಹಾಡುಗಳನ್ನು ತದೇಕ ಚಿತ್ತರಾಗಿ ಕೇಳುತ್ತಾರೆ. ಇವರ ಮನೆಯಲ್ಲಿದ್ದಾಗಿನ ಈ ಎರಡು ಗಂಟೆಗಳ ಆಧ್ಯಾತ್ಮಿಕ ಪರಿಸರದಿಂದ ಹೊರ ಬರುತ್ತಿದ್ದಾಗ ಅದಾವುದೋ ಹೇಳಲಾಗದ ಭಾವವೊಂದು ನಮ್ಮಗಳ ಹೃದಯ ಮತ್ತು ಮನಸ್ಸನ್ನು ಪೊರೆಯುತ್ತಾ ಹೋಗುತ್ತಿತ್ತು.

ಶಾಮಣ್ಣ ಶ್ರೀದೇಕ್ಕನವರ ಹಿರಿಯ ಅಳಿಯ ಡಾ.ವಿನಯ್ ರವರ ಹಿತ ಮಿತವಾದ ಸಮಾಜ ಮುಖಿ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಹೋದೆವು. ಸ್ವಲ್ಪ ದೂರ ತೆರಳಿದ ಮೇಲೆ ವ್ಯಾಟ್ಸಪ್ ಸಂದೇಶ ಬಿಚ್ಚಿದೆವು. “ನೀವು ಭಗವತಿಕೆರೆಗೆ ಬಂದ ವಿಷಯ ತಿಳಿಯಿತು. ನಿಮ್ಮ ಅಭಿಮಾನಕ್ಕೆ ಮತ್ತು ಆಸೆಗೆ ದನ್ಯವಾದಗಳು” ಎಂದು ಕಿರಿಯ ಮಗಳು ಲಾಜವಂತಿ ಮತ್ತು ಸತೀಶ್ ದಂಪತಿಗಳು ಬಾಳೇ ಹೊನ್ನೂರಿನಿಂದ ಕಳುಹಿಸಿದ್ದನ್ನು ಓದಿ ಮತ್ತಷ್ಟು ಕುಷಿಗೊಂಡೆವು.

‍ಲೇಖಕರು Admin

16 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading