
ಕೆ ಪಿ ಲಕ್ಷ್ಮಣ್
ಅರ್ಜೆಂಟೀನದ ಕವಿ ಬೋರ್ಗಿಸ್ ನ ಕವಿತೆಯೊಂದನ್ನು ಆಧರಿಸಿದ ರಂಗ ಕೃತಿಯದು. ನಾಟಕ ನನಗೆ ಚೂರು ಅತಿ ಅನ್ನುವ ಹಾಗೆ ಇಷ್ಟವಾಗಿ ಬಿಟ್ಟಿತ್ತು . ೫೫ನೇ ವರ್ಷಕ್ಕೆ ಕುರುಡಾದ ಕವಿಯವನು. ಕಣ್ಣು ಕುರುಡಾದರೆನಂತೆ ಅವನ ಕಲ್ಪನೆಯಲ್ಲಿ ಬಿಚ್ಚಿಕೊಳ್ಳುವ ಹಲವಾರು ಪ್ರೇಮಿಗಳ ಪ್ರಣಯ ಸಲ್ಲಾಪದ ಸದ್ದುಗಳನ್ನು ತನ್ನ ಕವಿತೆಯಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾನೆ. ಅವನೇ ಹೇಳುವ ಹಾಗೆ ಯಾವಾಗಲೂ ಅವನ ಲಕ್ಷ್ಯವಿರುವುದು “ಪದಗಳ ಕಡೆಗಲ್ಲ ಅದರಲ್ಲಿರುವ ಮೌನಗಳ ಕಡೆಗೆ”. ಪ್ರೇಮ ತನ್ನ ಉತ್ತುಂಗ ತಲುಪುವುದು ಪ್ರಣಯ ಮೌನದಲ್ಲಿ. ಅರೇ ಇವನು ಸದ್ದೇ ಇಲ್ಲದ ಪರಿಷೆಯ ಬಗ್ಗೆ ಮಾತಾಡುತ್ತಿದ್ದಾನೆ ಅನ್ನಿಸುವುದಿಲ್ಲವೇ ನಿಮಗೆ? ಆದರೂ ಸದ್ದೆನ್ನುವುದು ಪರಿಷೆಯ ಜೀವಾಳವಲ್ಲವೇ? ಸದ್ದು ಮತ್ತು ಮೌನ ಕಾವ್ಯದಲ್ಲಿ ಸಮಾನಾರ್ಥಕವಾಗಬೇಕು ಅನ್ನುತ್ತಾನೆ ಬೋರ್ಗಿಸ್.
ನಾಟಕವೂ ಹಾಗೆಯೇ ಇತ್ತು. ದೂರದಲ್ಲಿ ಎಂಬಂತೆ ಕೇಳುವ ಪಿಯಾನೋದ ಸ್ವರಗಳ ಸದ್ದಿನಿಂದ ಆರಂಭಗೊಂಡು ಮುಂದುವರೆಯುತ್ತದೆ. ಊಹಿಸಿಕೊಳ್ಳಿ ಚಂದದ ಹೂ ಗುಚ್ಚವನ್ನು ಹಿಡಿದುಕೊಂಡ ಚೆಲುವೆ ಹೆಣ್ಣೊಬ್ಬಳು ಕಣ್ಣಿಲ್ಲದ ಬೋರ್ಗಿಸ್ ಭುಜವನ್ನಿಡಿದು ನಡೆಯುತ್ತಾಳೆ, ಅವನು ಮುಂದೆ ಇವಳು ಹಿಂದೆ. ಅವನು
ಕಾಣದ ಕಣ್ಣುಗಳಲ್ಲಿ ನಗು ತುಂಬಿಕೊಂಡು ಮೆಲ್ಲನೆ ಎನ್ನುವಂತೆ ನುಡಿಯುತ್ತಾನೆ “ದೇವರು ನನಗೆ ಪುಸ್ತಕ ಮತ್ತು ಕತ್ತಲನ್ನು ಒಟ್ಟಿಗೆ ಕೊಟ್ಟಿದ್ದಾನೆ”. ನಿಜಕ್ಕೂ ಅವನ ಮಾತಿನಲ್ಲಿ ನಿಂದನೆ ಇರಲಿಲ್ಲ ಆದರೆ ಯಾತನೆ ಇರಲಿಲ್ಲ ಎನ್ನುವುದನ್ನು ಹೇಗೆ ಹೇಳಲಿ.
ಮತ್ತೂ ಮುಂದೆ ಸಾಗಿ ಅವಳಿಗೆ ಮಾತ್ರ ಕೇಳಿಸಬೇಕು ಅನ್ನುವ ಹಾಗೆ ಅನ್ನುತ್ತಾನೆ “ಒಳ್ಳೆಯ ಸಾಹಿತ್ಯ ಎನ್ನುವುದು ಯಾರಿಗೂ ಸೇರಿದ್ದಲ್ಲ , ಸ್ವತಃ ಲೇಖಕನಿಗೆ ಕೂಡ” (ಅಂದರೆ ಎಲ್ಲರಿಗು ಸೇರಿದ್ದು ಅಂತಲೂ ಆಗಬಹುದೇನೋ?) ಅಬ್ಬ ಅದೆಂತಾ ಮಾತು. ಬೋರ್ಗಿಸ್ ತನ್ನ ಕಡೆಯ ಕಾಲಕ್ಕೆ ಬುದ್ಧಿಸಂನ ಕಡೆಗೆ ವಾಲಿದ್ದ ಬಹುಷಃ ಇವನ ಪ್ರೇಮದ ಹುಡುಕಾಟವು ಬುದ್ಧನ ಹುಡುಕಾಟದ ಹೀಗೆ ಇತ್ತು ಅನಿಸುತ್ತದೆ. ಲಂಕೇಶ್ ಹೇಳುತ್ತರಾಲ್ಲ “ಪ್ರೇಮಿಸುವುದೆಂದರೆ ಸಿದ್ಧಾರ್ಥ ಹುಡುಕಿ ಹೊರಟ ಹಾಗೆ”. ಸರೋಜಾಳ ಬೆನ್ನು ಬಿದ್ದ ಲಂಕೇಶರು ಹಾಗೆಯೇ .
ಇವರಿಬ್ಬರ ಯಾನಕ್ಕೆ ಸಾಥಿಯಾದಂತೆ ಮತ್ತೊಬ್ಬಳು ಚೆಲುವೆ ಗಿಟಾರ್ ಮೀಟುತ್ತಾ ಎದ್ದುನಿಲ್ಲುತ್ತಾಳೆ. ಈಗ ಬೋರ್ಗಿಸ್ ಕಣ್ಣು ಅವಳ ಗಿಟಾರ್ ಸದ್ದಿನ ಮೇಲೆ ಅವನಿಗೆ ಆ ಗಿಟಾರಿನ ತರಂಗಗಳು ಅವಳ ಇನಿಯನ ಬರುವಿಕೆಗೆ ಕಾಯುತ್ತಿವೆ ಅನ್ನಿಸುತ್ತವೆ ‘ಆಗೋ ವೈನು ಗ್ಲಾಸಿಡಿದ ಅವಳ ಚೆಲುವ ಇನಿಯ ನೋಟ ತಪ್ಪಿಸದೇ ಅವಳನ್ನೇ ನೋಡುತ್ತಾ ಗಿಟಾರ್ ಮೀಟುವ ಆ ಚೆಲುವೆಯ ಬಳಿಗೆ ಬಂದೇಬಿಟ್ಟ, ಇನ್ನು ನಮಗಿಲ್ಲಿ ಕೆಲಸವಿಲ್ಲ ದೂರ ಸರಿಯೋಣ” ಮಜವೆಂದರೆ ಬೋರ್ಗಿಸ್ ಅವನೇ ಸೃಷ್ಟಿಸಿದ ಪಾತ್ರಗಳಿಗೆ ಪ್ರೇಮಿಸಲೆಂದು ಏಕಾಂತ ಸೃಷ್ಟಿಸಿ ದೂರ ನಿಲ್ಲುತ್ತಾನೆ.
“ಪ್ರೇಮ ಮತ್ತು ಲೈಂಗಿಕತೆ ಒಂದು ಉನ್ನತ ವರ , ಲೈಂಗಿಕತೆ ಅದು ಯಾವಾಗಲೂ ಸುಂದರ ಮತ್ತು ಅದು ಯಾವಾಗಲೂ ಸಂಕೋಚ ಸ್ವಭಾವದ್ದು” ಗಿಬ್ರಾನ್ ನ ಉಲಿ. ಅದಕ್ಕೆ ಇರಬೇಕು ಅವನ ಚಿತ್ರಗಳೆಲ್ಲವೂ ಬೆತ್ತಲಾಗಿರುತ್ತವೆ. ಅವನು ಅವುಗಳಿಗೆ ಬಟ್ಟೆ ತೊಡಿಸುವ ಹೇಯ ಮತ್ತು ಪಾಪದ ಕೆಲಸಕ್ಕೆ ಕೈ ಹಾಕುವುದಿಲ್ಲ. ಮರದ ಹಾಗೆ, ಮಣ್ಣಿನ ಹಾಗೆ, ಹೂವಿನ ಹಾಗೆ, ನದಿ ಸಾಗರದ ಹಾಗೆ ಬೆತ್ತಲೆ ಬಿಟ್ಟು ಬಿಡುತ್ತಾನೆ .
ಆ ವೈನು ಚೆಲುವ ಮತ್ತು ಗಿಟಾರು ಚೆಲುವೆ ಕುಣಿಯುತ್ತಾರೆ. ಅದೆಂಥಾ ನೋಟ, ನಿಲುವು , ವೈಯ್ಯಾರ, ಬಳುಕು, ಆಕ್ರಮಣ ಥೇಟು ಸರಸದ ಹಾಗೆ ಇವನು ಅವಳನ್ನು ಮೀಟುತ್ತಾನೆ ಅವಳು ಇವನನ್ನು ಹೀರುತ್ತಾಳೆ “ಮರುಳು ಮಾಡಾಕ ಹೋಗಿ ಮರುಳ ಸಿದ್ಧನಾ ನಾರಿ ಮರುಳಾಗ್ಯಾಳೋ ಜಂಗಮೈಯಾಗ ಕಿನ್ನರಿ ಆಗ್ಯಾಳೋ ಕೈಯ್ಯಾಗ ನುಡಿದಳೋ ಬನ್ದಾಂಗ ಮೈಯ್ಯಾಗ , ಆಡುತ್ತಾಡುತ್ತಾ ಬಂದು ಸಿಂಗಾರಿ ಸೊಳ್ಳೆ ಹಾಂಗ ಹಾಡಲ್ಲೇ ಕಿವಿ ಗಲ್ಲ ಕಡಿದೇನಾ , ಮಾಯೆಯೇ ತಾ ಮಯ್ಯಿಗೆ ಮಯ್ಯಿ ಕೂಡಿದಾಂಗ” ಸರಸವೋ ಕುಣಿತವೋ ನಡದೇ ಇದೆ..
ಮತ್ತೇನು ಬೇಕಿತ್ತು ಬೋರ್ಗಿಸ್ ಗೆ, ಪ್ರಾರ್ಥನೆಯಂತೆ ಕೂಗುತ್ತಾನೆ “ಓ ತುಂಟ ತುಂಬು ಚಂದಿರ ಲೋಕವನ್ನು ಹಾಳು ಮಾಡುವುದರಲ್ಲಿ ನಿನ್ನ ಪಾಲು ದೊಡ್ದದಯ್ಯ , ನಿನ್ನ ಕುಸರಿ ಕಸುಬನ್ನು ಹೀಗೆ ಮುಂದುವರೆಸು ಚೂರು ಹಾಳಾಗಲಿ ಲೋಕವೆಲ್ಲ”
ಬೋರ್ಗಿಸ್ ಮತ್ತು ಅವಳು ಪಯಣ ಮುಂದುವರೆಸುತ್ತಾರೆ “ಬೋರ್ಗಿಸ್ ವೈನು, ಗಿಟಾರು, ತುಂಬು ಚಂದಿರ, ಹೊನಲು, ಹಾಡು ಎಷ್ಟೊಳ್ಳೆ ಪ್ರತಿಮೆಗಳು ಅಲ್ಲವೇ?ಆದರೂ ನನಗ್ಯಾಕೋ ಕೆಲವು ಸಾರಿ ಪ್ರೇಮವೆನ್ನುವುದು ಈ ಪ್ರತಿಮೆಗಳ ಆಚೆಗೆ ಇದೆ ಅನ್ನಿಸುತ್ತದೆ? ನಿನಗೆ? ಬೋರ್ಗಿಸ್ ನಕ್ಕವನಂತೆ ಮಾಡಿ “ಇಲ್ಲ ಎಂದು ನಾನು ಹೇಗೆ ಹೇಳಲಿ”
ಮತ್ತೆ ಪಾತ್ರಗಳ ಏಕಾಂತ: ಬೋರ್ಗಿಸ್ ಗೆ ಇಲ್ಲಿ ಜಾಗವಿಲ್ಲ. ನದಿ ತೀರ, ಇಲ್ಲಿಯೂ ಚಂದಿರನಿದ್ದಾನೆ ಆದರವನು ಹೆಣ್ಣಿನ ಹಾಗೆ ಕಾಣುತ್ತಾನೆ. ಮುಖವಾಡ ತೊಟ್ಟ ಮುಖ, ಉಳುಕುಗಳಿಲ್ಲ ಪ್ರಶಾಂತ ಬುದ್ಧನ ಹಾಗೆ, ಮತ್ತೆ ಬಣ್ಣ ಮಾತ್ರ ಹಾಲುಗೆಂಪು. ಕೆನೆಯ ಬಣ್ಣದ ಉದ್ದ ನಿಲುವಂಗಿ ತೊಟ್ಟಿದ್ದಾನೆ ಅದಕ್ಕೆ ಬಳ್ಳಿಯಂತೆ ಹಬ್ಬಿದ ನೀಲಿ, ಕಂದು, ತೆಳು ಚಿನ್ನದ ಕಸೂತಿ, ಕಸೂತಿ ಬಳ್ಳಿಯೂ ಮದನ ಪುಷ್ಪದಂತ ಹೂವು ಬಿಟ್ಟಿದೆ ಘಮಲೂ ಹಬ್ಬಿಕೊಂಡಿದೆ. ಜೊತೆ ಕೈನಲ್ಲೊಂದು ಲಾಂದ್ರ ನಿಧಾನಕ್ಕೆ ನೋಹ್ ಕಲೆಯ ಕುಣಿತದಂತೆ ಹರಿಯುವ ನಡಿಗೆ ಅವನದು.
ಇಬ್ಬರು ಪ್ರೇಮಿಗಳು ಆ ನದಿ ತೀರದಲ್ಲಿ ಗಾಳ ಹಾಕಿ ಜೊತೆಯಾಗಿ ಕೂತಿದ್ದಾರೆ. ಇಬ್ಬರದು ಬೇರೆ ಬೇರೆ ಗಾಳ. ಕತ್ತಲಾಗುವಷ್ಟು ಸಂಜೆಯಾಗಿದೆ. ಈ ನಮ್ಮ ತುಂಟ ಚಂದಿರ ಅವರ ಬೆನ್ನಿಗೆ ಬಂದು ನಿಂತಿದ್ದಾನೆ, ಪುಸಲಾಯಿಸಲು ತನ್ನ ಮೌತ್ ಆರ್ಗನ್ ತೆಗೆದು ನುಡಿಸಲು ಶುರುವಿಡುತ್ತಾನೆ. ಕಾಳಿದಾಸ ಹೇಳುತ್ತಾನಲ್ಲ “ಮದನನ ಮೊದಲ ಬಾಣಗಳು ಯಾವಾಗಲೂ ಪ್ರಿಯತಮ ದೂರವಿರುವ ವಿರಹಿಣಿಯ ಎದೆಗುದಿಯನ್ನ ಹೆಚ್ಚಿಸುವ ಕಡೆಗೆ ಮುಖ ಮಾಡಿರುತ್ತವಂತೆ”.
ಪಾಪ ಆ ಹುಡುಗಿ ತಾನೇ ಏನು ಮಾಡಿಯಾಳು ತುಂಬು ಚಂದಿರನ ಸಂಗೀತವಿರುವಾಗ, ಪ್ರಿಯಕರ ಮಗ್ಗುಲಲ್ಲಿರುವಾಗ ಗಾಳ ಹಾಕಿ ಹಾಳು ಮೀನು ಹಿಡಿಯುವ ಕೆಲಸ ಯಾರಿಗೆ ಬೇಕು? ಸಣ್ಣದೊಂದು ಸಲ್ಲಾಪ ಸಾಧ್ಯವಿದ್ದಿದ್ದರೆ? ಅವಳು ಅವನ ಕಡೆಗೆ ನೋಡುತ್ತಾಳೆ. ಆವನು ಮಾತ್ರ ಘನ ಗಂಭೀರ ಮುಖದಲ್ಲಿ ನೀರೊಳಗಿನ ಗಾಳದೊಂದಿಗೆ ಮಗ್ನ. ಚಂದಿರನಿಗಂತೂ ಸುಮ್ಮನಿರುವ ಬುದ್ದಿಯಿಲ್ಲ. ಇದನ್ನು ಕಂಡು ಮತ್ತೂ ಹಿತವಾದ ಸ್ವರಗಳನ್ನ ನುಡಿಸುತ್ತಾನೆ. ಅವಳು ಇನಿಯನ ಮೈಯ್ಯಿಗೊರಗುತ್ತಾಳೆ, ಅವನ ಸೊಂಟ ಬಳಸುತ್ತಾಳೆ, ಕೆನ್ನೆಯ ಸುತ್ತ ಬೆರಳಾಡಿಸುತ್ತಾಳೆ. ಅವನು ಮಾತ್ರ ಸಂವೇದನೆ ಕಳೆದುಕೊಂಡ ಕಲ್ಲುಬಂಡೆ. ಇದಾವುದರ ಅರಿವು ಇಲ್ಲದೆ ತನ್ನ ಗಾಳದ ಕಡೆಗೆ ದೃಷ್ಟಿ ನೆಟ್ಟು ಕೂತಿದ್ದಾನೆ. ಇವಳು ಮತ್ತೂ ಮುಂದುವರೆದು ಅವನ ಕಿವಿಯ ಬಳಿಗೆ ಬಾಯಿಟ್ಟು “ನನಗೊಂದು ಮುತ್ತನಿಡುತ್ತೀಯಾ ..” ಅವನು ಇವಳ ಕಡೆ ಅದೇ ಗಂಭೀರ ಮುಖದಲ್ಲಿ ತಿರುಗಿ ಕೆಲಹೊತ್ತು ಮೌನದಿಂದಿದ್ದು “ಏನಂದೆ ನೀನು, ಏನಾದರು ಹೇಳಿದೆಯ”?
“ನೀನು ಕೇಳಿಸಿಕೊಳ್ಳಲಿಲ್ಲವೇ”?
“ಇಲ್ಲ!! ನಾನು ನನ್ನ ದೇಶದ ಸ್ಥಿತಿಗತಿಗಳ ಬಗ್ಗೆ ಯೋಚಿಸುತ್ತಿದೆ. ಈಚೆಗೆ ಯಾರಿಗೂ ಅದರ ಬಗ್ಗೆ ಗಮನವೇ ಇಲ್ಲ. ಎಲ್ಲರೂ ಸಂವೇದನೆ ಕಳೆದುಕೊಂಡು ಬಿಟ್ಟಿದ್ದಾರೆ. ನಡಿ ಹೋಗೋಣ ಇಷ್ಟು ಕತ್ತಲಾದ ಮೇಲೆ ಇಲ್ಲಿರುವುದು ಸರಿಯಲ್ಲ”
ಪಿಸುಮಾತು ಕೇಳಲಾರದವನು ಹೇಗೆ ಪ್ರೇಮಿಯಾದಾನು?
ಅವನು ಗಾಳ ಸುತ್ತಿಕೊಂಡು ಹೊರಟಾದ ಮೇಲೆ, ಇವಳು ಒಂಟಿ ನಿಂತಿದ್ದಾಳೆ, ಚಂದಿರನ ಮೋರೆ ಸಪ್ಪೆಯಾಗಿದೆ, ಮೌತ್ ಆರ್ಗನ್ ನಾದ ಬದಲಾಗಿದೆ. ಇವಳು ಹಿಡಿದ ಗಾಳದ ಬೆಂಡು ನೀರಿನಲ್ಲಿ ಮಿಡುಕುತ್ತಾ ಮುಳುಗುತ್ತಿದೆ. ಬಹುಶ ಗಾಳಕ್ಕೆ ಈಗ ಮೀನು ಸಿಕ್ಕಿ ಹಾಕಿಕೊಂಡಿರಬೇಕು.
“ಚಂದ್ರನು ಕೆಲವೊಮ್ಮೆ ಸೋಲುತ್ತಾನೆ ಅವನ ಹಾಡು ಕೆಲಸ ಮಾಡುವುದಿಲ್ಲ ” ಬೋರ್ಗಿಸ್ ನಗುತ್ತ ಮಾತಾಡುತ್ತಾನೆ
ಈಗ ಅವನು ಸ್ಮಶಾನದ ಗೋರಿಯ ಹತ್ತಿರ ಇದ್ದಾನೆ. ಅವನ ಕೊನೆಯ ಗಳಿಗೆ. ಬೋರ್ಗಿಸ್ ನ ಗೋರಿಕಲ್ಲಿನ ಮೇಲೆ ಕೆತ್ತುವ ಶಬ್ದಗಳ ಕುರಿತು ಯಾರೋ ಸಲಹೆ ಕೇಳುತ್ತಿದ್ದಾರೆ. ಅವಳೂ ಜೊತೆಯಲ್ಲಿ ಇದ್ದಾಳೆ. ಪಿಯಾನೋ ರಿಂಗಣ ಇನ್ನೂ ನಿಂತಿಲ್ಲ.
ಚಂದಿರ ಮುನಿಸಿಕೊಂಡವನಂತೆ ಹಾಡು ಹೇಳುತ್ತಿದ್ದಾನೆ. ಬೋರ್ಗಿಸ್ ಗೋರಿಯ ಒಳಗೆ ಜಾರುತ್ತಾನೆ..
ಅವನ ಸಾಥಿ ಮೆಲ್ಲಗೆ ಉಸುರುತ್ತಾಳೆ. ಅವಳ ಮಾತಿಗೂ ಈಗ ಸಂಗೀತದ ಘನತೆ ಬಂದಹಾಗಿದೆ “ಪ್ರೇಮಗೀತ ಮಾತ್ರ ಎಂದೂ ಗೋರಿ ಸೇರುವುದಿಲ್ಲ. ಅದು ನಿರಂತರವಾದ ಅನಂತವಾದ ಉಸಿರು…
ಗೊತ್ತೇ ನಿಮಗೆ? ಅಂದಿನಿಂದಲೇ ಚಂದಿರ ಅಲೆಮಾರಿಯಾದದ್ದು ಊರೂರು ಸುತ್ತಲು ಶುರು ಮಾಡಿದ್ದು.
ಇಲ್ಲಿಗೆ ನಾಟಕ ಮುಗಿಯಿತು ಪ್ರೇಮವಲ್ಲ …

ಇದು ನಾನೊಂದು ನಾಟಕ ನೋಡಿ ಬರೆದದ್ದು.ಇದು ಸಿಂಗಪುರದಲ್ಲಿ ನಾನು ನೋಡಿದ ಮೊದಲ ನಾಟಕ.
ಅರ್ಜೆಂಟೀನದ ಕವಿ ಬೋರ್ಗಿಸ್ ನ ಕುರಿತಾದದ್ದು





ನಾಟಕದ ಬಗ್ಗೆ ಬರೆದ ಈ ಬರಹ ಕಾವ್ಯಮಯ
ಲಕ್ಷ್ಮಣ್, ಇದು ಕಾವ್ಯವೋ, ಪ್ರೇಮ ಗೀತೆಯೋ, ದೃಶ್ಯ ಲಹರಿಯೋ ತಿಳಿಯದಂಥ ಭಾವ
ಮೊದಲ ಪ್ರೇಮದಷ್ಟೇ ಸಹಜವಾಗಿ ಆವರಿಸಿತು
ನಿಮ್ಮ ಬರಹದೊಳಗಿನ ನಾದ, ಓದು ಮುಗಿದ ಮೇಲೂ ಕಾಡುತ್ತದೆ.
ಬೋರ್ಹೇಸ್….!
ಪುಸ್ತಕಗಳ ಕುರಿತು ಅದ್ಭುತವಾಗಿ ಚರ್ಚಿಸಿದ ಕವಿ..!
ಆತನ ಕುರಿತೊಂದು ನಾಟಕವಿರುವುದು ಗೊತ್ತಿರಲಿಲ್ಲ.
ಧನ್ಯವಾದ.
ಕಾಡುವ ಹಿತವಾದ ಬರಹ …. ತಣ್ಣಗೆ …. ಇನಿಯನ ನೆನಸಿಕೊಂಡಾಗ ತುಟಿಗಳ ಮೇಲೆ ಸದ್ದಿಲ್ಲದಂತೆ ಬರುವ ತುಂಟ ನಗೆಯಂತೆ
ಧನ್ಯವಾದಗಳು ಎಲ್ಲರಿಗೂ