ನೀರ ನಿಲುತಾಣದ ವಿಮರ್ಶೆಯ ವಿವಾದ: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ!
ಈ ಲೇಖನ ಕೊಂಚ ದೀರ್ಘವಾಗುವುದು ಅನಿವಾರ್ಯ ಎಂದು ಕಾಣುತ್ತದೆ.
ನನ್ನ ಸಾಹಿತ್ಯಾಸಕ್ತಿ ಸೀಮಿತವಾದದ್ದೆಂದು ಮೊದಲೇ ಹೇಳಿದ್ದೆನಷ್ಟೆ. ಶ್ರೀ ನರೇಂದ್ರ ಪೈಗಳು “ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು.” ಎಂದಿದ್ದಾರೆ. ಅವರ ಈ ಮಾತು, ವಿಷಯವನ್ನು ಸಂಪೂರ್ಣವಾಗಿ ಬೇರೆ ಕಡೆ ತಿರುಗಿಸುವುದಕ್ಕೆ ನನಗೊಂದು ಅವಕಾಶ ಮಾಡಿಕೊಟ್ಟಿದೆ. ಅವರಿಗೆ ಧನ್ಯವಾದ..
ನನಗೆ ಮುಖ್ಯವಾದ ಪ್ರಶ್ನೆ ನಾಟಕಕ್ಕೆ ಮಾತು ಇಲ್ಲದಿದ್ದರೂ ನಡೆಯುತ್ತದೆಯೇ, ನಟರ ಚಲನೆ ಅತಿವಿಲಂಬಿತವಾದರೆ ಅದು ಪ್ರೇಕ್ಷಕರ ಮೇಲೆ ಏನು ಪರಿಣಾಮ ಮಾಡುತ್ತದೆ ಎಂಬುದು. ಅಸಹನೆ, ಪೂರ್ವಾಗ್ರಹ, ಮೋಸ ಇದಕ್ಕೆಲ್ಲ ನನ್ನಲ್ಲಿ ವಿವರಣೆ ಇಲ್ಲ. ಆದರೆ ನಿಮ್ಹಾನ್ಸ್ ಬಗ್ಗೆ ಒಂದು ಸಣ್ಣ ವಿವರಣೆ ಅಗತ್ಯ ಎಂದು ಅನಿಸುತ್ತಿದೆ. ಮೊನ್ನೆ ಒಂದು ಮದುವೆಗೆ ಹೋಗಿದ್ದೆ. ದೇವು ಹನೆಹಳ್ಳಿ ಸಹ ಬಂದಿದ್ದರು. ಸ್ನೇಹಿತರ ದೊಡ್ಡ ಗುಂಪೇ ಅಲ್ಲಿತ್ತು. ಮಾತು ಎಲ್ಲಿಂದ ಎಲ್ಲಿಗೋ ಹೋಗಿ ಅದು ಹೇಗೋ ಒಬ್ಬರು ಮಹಿಳೆಯ ವಿಷಯಕ್ಕೆ ಬಂತು. ದೇವು “ಅಯ್ಯ ಅವಳು (ದೊಡ್ಡ ಮನುಷ್ಯರೊಬ್ಬರ ಹೆಸರು ಹೇಳಿ) ಕೀಪ್ ಮಾರಾಯ್ರೆ” ಎಂದರು. ನನಗೆ ಆ ಮಹಿಳೆಯ ಹೆಸರೂ ಗೊತ್ತು. ದೇವು ಯಾರ ಹೆಸರು ಹೇಳಿದರೆನ್ನುವುದೂ ಗೊತ್ತು. ಹಾಗಂತ, ಮನೆಗೆ ಬಂದವನು, “ದೇವು ಹೀಗೆ ಹೇಳಿದರು” ಎಂದು ಅವರು ಹೇಳಿದ್ದನ್ನು ಯಥಾವತ್ತಾಗಿ ಅಂತರ್ಜಾಲದಲ್ಲಿ ತೇಲಿಬಿಡಲೆ? ಅದು ಸರಿಯೆ? ದೇವು ಹೇಳಿದ ಮಾತು ಒಂದು ಸಣ್ಣ ಗುಂಪಿಗೆ ಸೀಮಿತವಾಗಿರಬೇಕಾದ ಮಾತಲ್ಲವೆ?
ಸಾಮಾನ್ಯವಾಗಿ ನಾವೆಲ್ಲ, ಸ್ನೇಹಿತರ ಒಂದು ಸಣ್ಣ ಗುಂಪಿನಲ್ಲಿದ್ದಾಗ, ಕೆಲವು ಸಡಿಲ ಮಾತುಗಳನ್ನು ಆಡುತ್ತೇವೆ. ಗುಂಪಿನಲ್ಲಿ ಹೆಂಗಸರು, ಮಕ್ಕಳು ಇಲ್ಲದಿದ್ದರೆ “ಅವಾಚ್ಯ” ಶಬ್ದಗಳನ್ನೂ ಬಳಸಲು ಹಿಂದೆ ಮುಂದೆ ನೋಡುವುದಿಲ್ಲ. ಈ ಮಾತುಗಳನ್ನು, ಯಾರ ಕುರಿತು ಆಡಿರುತ್ತೇವೋ, ಅಂಥವರ ಕಿವಿಗೆ ಹಸಿಹಸಿಯಾಗಿ ಅವು ಹೋಗಿಬೀಳುತ್ತವೆ ಎಂಬ ಅನುಮಾನವಿದ್ದರೆ ಮಾತ್ರ ಮಾತಾಡುವಾಗ ಎಚ್ಚರ ವಹಿಸುತ್ತೇವೆ. ಐದಾರು ಜನ ಪರಸ್ಪರ ಪರಿಚಿತರೇ ಇದ್ದ (ಅಶೋಕರಂತೂ ನನ್ನ ನಿಡುಗಾಲದ ಗೆಳೆಯ) ಒಂದು ಸಣ್ಣ ವೃತ್ತದಲ್ಲಿ ನಾನಾಡಿದ ಮಾತು, ಮಾರನೆಯ ದಿನ ಅಂತರ್ಜಾಲದ ಮೂಲಕ ನೇರವಾಗಿ ನೀನಾಸಂ ಕಿವಿಗೇ ಹೋಗಿಬಿಡುತ್ತದೆ, ಇಡೀ ಜಗತ್ತಿಗೆ ಪ್ರಚಾರವಾಗಿಬಿಡುತ್ತದೆ ಎಂದು ಗೊತ್ತಿದ್ದರೆ, ಬಹುಶಃ ನಾನು ಎಚ್ಚರ ವಹಿಸುತ್ತಿದ್ದೆ. ಈಗ ನನಗೆ ಉಳಿದಿರುವ ಸಮಾಧಾನ ಇಷ್ಟೆ: ಈ ಮಾತುಗಳನ್ನು ನಾನು ಪತ್ರಿಕಾಗೋಷ್ಟಿ ಕರೆದೋ, ನಾಟಕದ ಕುರಿತ ಸೆಮಿನಾರ್ ನಲ್ಲೋ ಆಡಲಿಲ್ಲ. ಕೇವಲ ಖಾಸಗಿಯಾಗಿ ಆಡಿದ್ದೆ ಎಂಬುದು.
ಅಭಯರ ಈಗಿನ ಮಾತು: “ನಾಟಕಕ್ಕೆ ಮಾತು ಖಂಡಿತಾ ಅಗತ್ಯವಲ್ಲ ಎಂದು ನನ್ನ ಅನಿಸಿಕೆ”. ಕಳೆದ ತಿಂಗಳು ಪಿ. ಆರ್. ಮೀರಾಗೆ ಕೊಟ್ಟ ಸಂದರ್ಶನದಲ್ಲಿ ಅಭಯ ಉವಾಚ:”ಹಾಡು ಚಿತ್ರಕ್ಕೆ ಒಂದು ಅಡ್ವಾಂಟೇಜ್. ಆರು ಗಂಟೆಯಲ್ಲಿ ಹೇಳುವ ಕಥೆಯನ್ನ ಒಂದಿಷ್ಟು ಹಾಡುಗಳನ್ನು ಜೊತೆಗಿಟ್ಟುಕೊಂಡು ಮೂರು ಗಂಟೆಯಲ್ಲಿ ಕಟ್ಟಿಕೊಡಬಹುದು ಹಾಡನ್ನೂ ಕಥೆಯ ಒಂದು ಭಾಗವಾಗಿಸಿದಾಗ”. ಹಾಡು ಮಾತಿನ ಮತ್ತೊಂದು ರೂಪ ತಾನೆ? ಸಿನಿಮಾಕ್ಕೇ ಅದು ಅಡ್ವಾಂಟೇಜ್ ಎನ್ನುವುದಾದರೆ, ಅಭಯ, ನಾಟಕಕ್ಕೆ ಯಾಕಲ್ಲ? ಇನ್ನು “ಕೂಟಶ್ಲೋಕ”ದ ಕುರಿತಾದ ಅಭಯರ ಪ್ರಶ್ನೆಗೆ ಉತ್ತರ ಸುಲಭವಲ್ಲ. ಅವರು ಶತಾವಧಾನಿ ಆರ್. ಗಣೇಶರಂಥ ವಿದ್ವಾಂಸರ ಶಿಷ್ಯತ್ವ ಒಂದೋ ಎರಡೋ ವರ್ಷ ಮಾಡಿದರೆ ಈ ಪ್ರಶ್ನೆಗೆ ಅವರಿಗೆ ಉತ್ತರ ಸಿಗಬಹುದು. ಇದು ಪುಸ್ತಕ ಓದಿದರೆ, ಅರ್ಥವಾಗುವ ವಿಷಯ ಎಂದು ನನಗೆ ಅನಿಸುವುದಿಲ್ಲ. ಸಂಗೀತ, ನೃತ್ಯಗಳ ಹಾಗೆ ಗುರುಮುಖೇನ ಅರ್ಥ ಮಾಡಿಕೊಳ್ಳಬೇಕಾದದ್ದು.
ಇಲ್ಲಿಗೆ ನಾಟಕದ ಬಗ್ಗೆ ನನ್ನ ಚರ್ಚೆ ನಿಲ್ಲಿಸುತ್ತೇನೆ.








ಆಪ್ತವಲಯದಲ್ಲಿ ಆಡಿದ್ದನ್ನು ಅಂತರ್ಜಾಲದಲ್ಲಿ ಕಾಣಿಸಿದ ಔಚಿತ್ಯದ ಬಗ್ಗೆ ಬೇಸರಿಸಿರುವ ಹಿರಿಯರೂ ನಾನು ತುಂಬ ಗೌರವಿಸುವ ವ್ಯಕ್ತಿತ್ವದವರೂ ಆದ ಶ್ರೀ ಸುಂದರ ರಾಯರಲ್ಲಿ ನಾನು ಈ ಬಗ್ಗೆ ಕ್ಷಮೆಯಾಚಿಸುತ್ತೇನೆ. ಅವರ ಅನ್ನಿಸಿಕೆಯನ್ನು ನಾನು ಕೇವಲ ಒಂದಾನೊಂದು ಅನ್ನಿಸಿಕೆ ಎಂದು ಗ್ರಹಿಸಿದ್ದೆನೇ ಹೊರತು ವ್ಯಕ್ತಿಗತವಾಗಿ ಕಾಣಲಿಲ್ಲ. ಒಂದು ಖಾಸಗಿ ಪತ್ರವನ್ನೆ ಅವಧಿಗೆ ಅಪ್ಲೋಡ್ ಮಾಡಿದ್ದರಿಂದ ಈ ಒಂದು ತಪ್ಪು ನನ್ನಿಂದಾಗಿದೆ, ಕ್ಶಮೆಯಿರಲಿ.
ಸುಂದರರಾವ್ ಸರ್… ನನ್ನ ಮಾತನ್ನು ಭಿನ್ನವಾಗಿ ವಿಶ್ಲೇಷಿಸಿದ್ದಕ್ಕೆ ಉತ್ತರ ಕೊಡಲಷ್ಟೇ ಬರೆಯುತ್ತಿದ್ದೇನೆ…
ಇಲ್ಲಿ ಖಂಡಿತವಾಗಿಯೂ ಮಾತಿಗೆ ನನ್ನ ವಿರೋಧವಿಲ್ಲ. ಆದರೆ ಅದು ಅಗತ್ಯ ಇದ್ದಾಗ ಮಾತ್ರ ಬಳಸಬೇಕು ಎಂದು ನಾನು ಹೇಳುತ್ತಿರುವುದು. ಸಂವಹನೆಗೆ ತೊಡಕಾಗದಂತೆ, ಒಟ್ಟು ಬಂಧ ಸಡಿಲವಾಗದಿದ್ದಂತೆ ಮಾತನ್ನು ಬಿಟ್ಟರೆ ತಪ್ಪಿಲ್ಲ, ಹೀಗಾಗಿ ಮಾತು ಅನಿವಾರ್ಯವಲ್ಲ. ಆದರೆ ಮಾತಿಲ್ಲದೆಯೂ, (ಸಿನೆಮಾದಲ್ಲಿ ಹಾಡಿಲ್ಲದೆಯೂ) ಸಂವಹನ ಸಾಧ್ಯ ಎಂದಾಗ ಹಾಡಾಗಲೀ ಮಾತಾಗಲೀ ಖಂಡಿತಾ ಕಿರಿಕಿರಿಯೇ ಸರಿಯಲ್ಲವೇ? (ನಮ್ಮ ಹೆಚ್ಚಿನ ಕಮರ್ಷಿಯಲ್ ಚಿತ್ರಗಳಲ್ಲಿ ಇರುವಂತೆ ಕಥೆಯ ನೇರ ಓಟಕ್ಕೆ ಸಂಬಂಧ ಇಲ್ಲದ ಹಾಡು, ಹಾಸ್ಯದಂತೆ)
ಇನ್ನು ನನ್ನ ಮಾತುಗಳಿಂದ ತಮಗೆ ಬೇಸರವಾದಂತೆ ಅನಿಸಿತು. ನಾನು ಅದಕ್ಕೆ ಕ್ಷಮೆ ಕೇಳುತ್ತೇನೆ… ಒಂದು ಆರೋಗ್ಯಕರ ಚರ್ಚೆ ನಡೆಯುತ್ತಿದೆ ಅನಿಸಿತು. ನನಗೆ ತೋಚಿದ್ದನ್ನು ಸೇರಿಸಿದೆ. ಅಷ್ಟೇ. ಇದು ಖಂಡಿತಾ ವ್ಯಕ್ತಿಗತವಾಗಿರಲಿಲ್ಲ. sorry.
ಬೀಸು ಮಾತುಗಳ ನಡುವೆ ಬರುವ `ಎಲ್ಲೋ ಹುಚ್ಚು’, `ಮೆಂಟಲ್ಲೂ’, (ಮಾನಸಿಕ ರೋಗಿಗಳ ಆಸ್ಪತ್ರೆಯ ಬಸ್ಸುದ್ದೇಶಿಸಿ)`- ನಂಬರ್ ಬಸ್ಸಿಗೆ ಹಾಕಿ’ ಇತ್ಯಾದಿಗಳ ಧ್ವನಿ ಒಂದೇ – ತಿರಸ್ಕಾರ. ಹಾಗೇ ನಾಟಕದ ಕುರಿತಂತೆ ಸುಂದರರಾಯರ ಅಭಿಪ್ರಾಯದ ಸಮರ್ಥ ಅಭಿವ್ಯಕ್ತಿ ಎಂದಷ್ಟೇ ನಾನು `ನಿಮಾನ್ಸ್ಗೆ ಹಾಕಿ’ ಬಳಸಿಕೊಂಡೆ. ನನ್ನ ಟಿಪ್ಪಣಿಯನ್ನು ಹಿಂಬಾಲಿಸಿದ ರಾಯರ ಬರಹದಲ್ಲೇ ಬಂದ `ಕುರ್ಚಿಯನ್ನು ಒದ್ದು, ಎದ್ದು ಹೋಗಬೇಕೆನಿಸಿತು’, ವೆಂಕಟ್ರಮಣ ಉಪಾಧ್ಯರ `ಇನ್ನು ಮುಂದೆ ನಾಟಕ ನೋಡುವುದಿಲ್ಲ’, ಮುರಳೀಧರ ಉಪಾಧ್ಯಾಯರ `ನೀನಾಸಂ ತಲೆನೋವು ತರಿಸಿತು’ ಇತ್ಯಾದಿಗಳ ಧ್ವನಿಯೂ ಅದೇ. ಇದನ್ನು ದೇವುಹನೆಹಳ್ಳಿ ಸ್ಪಷ್ಟ ಎರಡು ವ್ಯಕ್ತಿಗಳ ದೈಹಿಕ ಸಂಬಂಧಗಳ ಕುರಿತಾಡಿದ ಮಾತಿನೊಂದಿಗೆ ಹೋಲಿಸಬಾರದು. ಶಿವರಾಮ ಕಾರಂತರು ಆತ್ಮಕಥೆಯನ್ನು `ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂದೇ ಬಣ್ಣಿಸಿಕೊಂಡದ್ದು, ಒಳ್ಳೆಯದರ ಗೀಳಿರುವವರು `ನನಗೆ ಹುಚ್ಚು’ ಎಂದು ಹೇಳಿಕೊಳ್ಳುವುದೆಲ್ಲಾ ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತನೆ ವಿಕಸಿಸಲೆಂದೇ ಹೊರತು ಶಬ್ದಾರ್ಥ ವಿಸ್ತರಣೆ ಬಯಸಿ ಅಲ್ಲ.
ನನ್ನ ಬರಹವಾದರೋ ನನ್ನ ವೈಯಕ್ತಿಕ ಅಭಿಪ್ರಾಯವನ್ನಷ್ಟೇ ಬಿಂಬಿಸುತ್ತದೆ. ನಾನು ಸ್ಪಷ್ಟವಾಗಿ ನನ್ನ ಒಂದು ನೀರಿನ ನಿಲುತಾಣವಾದ ಅಡ್ಡಹೊಳೆಯ ಅನುಭವವನ್ನು ವಿಸ್ತರಿಸಿಯೇ ನಾಟಕದ ಕುರಿತು ಅಭಿಪ್ರಾಯ ಮಂಡಿಸಿದೆ. (ಈ ನಿಲುತಾಣ ರಾಯಾರಿಗೂ ಅಪರಿಚಿತವೇನಲ್ಲ)ಭಿನ್ನಾಭಿಪ್ರಾಯಗಳೂ ಇವೆ ಎನ್ನುವುದಕ್ಕೇ ಮಿತ್ರರಿಬ್ಬರ ಉದ್ಗಾರ ಬಳಸಿದೆ. ನನ್ನ ಮಾತುಗಳು ನಾಟಕದ ಸಮರ್ಥನೆಯೇ ಆದರೂ ಪ್ರೇಕ್ಷಕರೆಂಬ ಸಮುದಾಯವನ್ನು ವಹಿಸಿಕೊಂಡು ಬರೆದದ್ದಲ್ಲ ಎನ್ನುವುದನ್ನು ಗಮನಿಸಬೇಕು. ಹಿಂದೊಬ್ಬ ಉಡುಪಿಯ ಪತ್ರಿಕಾ ವಿಮರ್ಶಕ ಪ್ರದರ್ಶನ ಒಂದರ ಕುರಿತು (ನಾಟಕದ ಹೆಸರು ಮರೆತಿದ್ದೇನೆ. ನಿರ್ದೇಶಕ – ರಘುನಂದನ್) ಬರೆಯುತ್ತಾ `ಮುಂದೆ ನೀನಾಸಂ ನಾಟಕಗಳನ್ನೇ ಉಡುಪಿ ಬಹಿಷ್ಕರಿಸಬೇಕು’ ಎಂದೇ ಕರೆಕೊಟ್ಟದ್ದು ನೆನಪಾಗುತ್ತದೆ. ಗೆಳೆಯ ಸುಂದರರಾಯರದು ಖಂಡಿತವಾಗಿಯೂ ಆ ಧೋರಣೆಯಲ್ಲ ಎಂದು ಸ್ಫುಟಪಡಿಸಲು ನಾನು ಚರ್ಚೆ ಬೆಳೆಸಿದೆ. ಇಲ್ಲಿಗೆ ನಾನೂ ಮುಗಿಸಿದ್ದೇನೆ.
ಅಶೋಕವರ್ಧನ