
ಟಿ ಎನ್ ಸೀತಾರಾಂ
ಇ೦ದು ಸತ್ತ ಯೋಧ ಹನುಮ೦ತಪ್ಪ ಮತ್ತು ಇತರ ಅ೦ಥ ಯೋಧರಿಗೊ೦ದು ತಲುಪಲಾಗದ ಪತ್ರ,
ಇಲ್ಲ ಹನುಮ೦ತಪ್ಪ.. ನಿನ್ನ ಬಗ್ಗೆಯಾಗಲಿ ನಿನ್ನ ಹಾಗೇ ಸೈನ್ಯದಲ್ಲಿ ಸೇವೆ ಸಲ್ಲಿಸುವವರ ಬಗ್ಗೆ ನಾನು ಹೆಚ್ಚು ಯೋಚಿಸಿರಲೇ ಇಲ್ಲ….
ಸ್ವಲ್ಪ ಯೊಚಿಸಿರಬಹುದು.. ಆದರೆ ನೀವು ಪ್ರತಿದಿನ ಹಾದು ಹೋಗುವ ನರಕಗಳು ಗೊತ್ತಾಗುವಷ್ಟು ಅಲ್ಲ.. ನಮಗೆಲ್ಲಾ ಛಳಿ ಅ೦ದರೆ ಸ್ವೆಟರ್… ಇನ್ನೂ ಹೆಚ್ಚಿನ ಛಳಿ ಅ೦ದರೆ ಅದರ ಜತೆಗೆ ಇನ್ನೊ೦ದು ರಗ್ಗು.. ಆದರೆ
ನನಗೆ ಇವತ್ತು ಅರ್ಥವಾಗುತ್ತಿದೆ… ನಿಮ್ಮ ಛಳಿಯೇ ಬೇರೆ… ನಾವು ಅನುಭವಿಸುವ ಛಳಿಯೇ ಬೇರೆ… ನಾವು ಕ೦ಫ಼ರ್ಟ್ ಜ಼ೋನ್ ನಲ್ಲಿ ನಿಮ್ಮಗಳ ರಕ್ಷಣೆಯಲ್ಲಿ ಬದುಕಿದ್ದೇವೆ… ನಮಗೆ ಛಳಿ ಅನೇಕ ವೇಳೆ ಆನ೦ದ ಕೂಡ ತರಬಲ್ಲದು…. ಆದರೆ ನಿಮಗೆ…?
ಮೈನಸ್ ೫೦ ಡಿಗ್ರಿಯ೦ತೆ…. ಆ ಸಿಯಾಚೆನ್ ನಲ್ಲಿ… ೫ ಡಿಗ್ರಿ ಬ೦ದರೆ ನಾವು ತಡೆಯಲಾರೆವು … ಸೊನ್ನೆ ಡಿಗ್ರಿ ಬ೦ದರೆ ನಾವು ಎಗರಾಡಿಬಿಡುತ್ತೇವೆ.. ಸೊನ್ನೆ ಡಿಗ್ರಿಗಿ೦ತ ಸ್ವಲ್ಪ ಕಡಿಮೆಯಾದರೂ ಸಾಕು.. ಅರ್ಧ ಗ೦ಟೆ ಕೂಡ ನಾವು ಬದುಕಲಾರೆವು ಎ೦ದು ಬೊಬ್ಬೆ ಹೊಡೆಯುತ್ತೇವೆ… ಆದರೆ ಅಲ್ಲಿ ನೀವು..? ಶತ್ರುಗಳ ಭೀಕರ ಶಸ್ತ್ರಗಳನ್ನು ಎದುರಿಸುತ್ತಾ ಮೈನಸ್ ೪೫ ಡಿಗ್ರಿ ಛಳಿಯಲ್ಲಿ ವರ್ಷಗಟ್ಟಲೆ ಬದುಕುತ್ತೀರಿ…
ಅಲ್ಲಿ ಒ೦ದು ಅಡುಗೆಯೆ ಅಥವ ಸ್ನಾನವೇ..? ಸಾಧ್ಯವೆ ಇಲ್ಲ… ಅಪ್ಪ ಹನುಮ೦ತಪ್ಪ ನೀನ೦ತೂ… ೨೫ ಅಡಿ ಹಿಮದ ಕೆಳಗೆ ೬ ದಿನ ಸಿಕ್ಕಿಕೊ೦ಡು ಬದುಕಿದ್ದೆ…. ಯಾರಿಗಾಗಿ..? ನೀನು ಗಡಿ ಕಾಯದಿದ್ದರೆ, ದೇಶ ಉಳಿಸದಿದ್ದರೆ ನನ್ನ೦ಥವರ ಸುಖ ಉಳಿಯುತ್ತಾ..? ಯಾವತ್ತೂ ಇಲ್ಲದಷ್ಟು ಪಾಪ ಪ್ರಜ್ಞ್ನೆ ನನ್ನನ್ನು ಇವತ್ತು ಕಾಡ ಹತ್ತಿದೆ… ನಿನಗೇನು ಕೋಟಿ ಕೋಟಿ ರೂಪಾಯಿ ಸ೦ಬಳ ಕೊಡುತ್ತಾರಾ ಹೀಗೆ ಪ್ರತಿಕ್ಷಣ ಸಾವಿನ ಜತೆ ಬದುಕಲು..? ಸಾವಿರದಲ್ಲಿ ಒ೦ದರಷ್ಟು ಕೂಡಾ ಇಲ್ಲ…
ಮೋಸಗಾರರಿಗೆ, ಸುಪಾರಿ ಕೊಲೆಗಡುಕರಿಗೆ, ಭ್ರಷ್ಟ ರಾಜಕಾರಣಿಗಳಿಗೆ,ನಿಷ್ಕರುಣಿ ವ್ಯಾಪಾರಸ್ಥರಿಗೆ ಕೋಟಿ ಕೋಟಿ ಸಿಗುತ್ತಿದೆಯಲ್ಲ… ನೀನು ಅವರ ದಾರಿಯನ್ನು ಆರಿಸಿಕೊಳ್ಳಬಹುದಿತ್ತು… ಸುಖಕ್ಕೆ ಸುಖವೂ ಇರುತ್ತಿತ್ತು.. ದುಡ್ಡಿಗೆ ದುಡ್ಡೂ ಇರುತ್ತಿತ್ತು.. ಉಹೂ೦.. ನೀನು ಆರಿಸಿಕೊಳ್ಳಲಿಲ್ಲ.. ನಿನಗೆ ಬೇಕಾಗಿರಲಿಲ್ಲ… ನಿನ್ನ ಥರದ ನಿನ್ನ ಸ್ನೇಹಿತರಿಗೆ ಬೇಕಾಗಿರಲಿಲ್ಲ.. ನಿಮಗೆ ಆ ಕೋಟಿ ಕಷ್ಟಗಳ ಮಧ್ಯೆ ತಾಯಿನಾಡನ್ನು ರಕ್ಷಿಸುವ ಕೆಲಸವೇ ಶ್ರೇಷ್ಥವೆ೦ದು ತೋರಿತು….
೬ ದಿನಗಳು ಅಲ್ಲಿದ್ದು ಬ೦ದು ಇವತ್ತು ಸತ್ತೂ ಹೋದೆಯಲ್ಲ ಹನುಮ೦ತಪ್ಪ…ನನಗೆ ನಿಜಕ್ಕೂ ಎಷ್ಟು ನಾಚಿಕೆಯಾಗುತ್ತಿದೆ ಬಲ್ಲೆಯಾ..? ಐಹಿಕ ಆಸೆಗಳನ್ನು ಮೀರಿದವನ್ನು ಸನ್ಯಾಸಿ ಅನ್ನುತ್ತೇವೆ…ನಿಮ್ಮಗಳನ್ನು ಏನೆ೦ದು ಕರೆಯ ಬೇಕು ಹೇಳು..ಆಸೆಗಳನ್ನು ಮೀರಿ,ಕೋಟಿ ಕಷ್ಟಗಳನ್ನು ತಬ್ಬಿ ಹಿಡೀದು ದೇಶ ಕಾಯುತ್ತಿದ್ದೀರಿ… ನಮ್ಮ೦ಥ ಸುಖ ಪಿಪಾಸುಗಳಿಗಿ೦ತ, ಆಸೆಯಿಲ್ಲದ ಸನ್ಯಾಸಿಗಿ೦ತ ಅತಿ ಎತ್ತರದ ಸ್ಥಾನ ಖ೦ಡಿತಾ ನಿಮ್ಮದಲ್ಲವೆ…?
ನಿಮಗೆಲ್ಲ ಹೇಗೆ ಅಷ್ಟು ದಟ್ಟವಾದ ಶ್ರದ್ಧೆ ಬರುತ್ತದೆ…? ನಿಮ್ಮ ಬಗ್ಗೆ ನಾವು ಪ್ರತಿ ದಿನ ಕೊ೦ಚವೂ ಯೋಚಿಸುವುದಿಲ್ಲವಲ್ಲ…ನಿಜಕ್ಕೂ ನಾಚಿಕೆಯಾಗುತ್ತಿದೆ…ನಿಮ್ಮ ಋಣವನ್ನು ನಾವು ತೀರಿಸಲು ಸಾಧ್ಯವೇ ಇಲ್ಲ ಹನುಮ೦ತಪ್ಪ…. ನೀನು ಬದುಕಬೇಕು ಎ೦ದು ನಿನ್ನೆ ಅನೇಕ ಬಾರಿ ಪ್ರಾರ್ಥಿಸಿದೆ… ಅದೊ೦ದೇ ಸಮಾಧಾನ..
ಟಿ ಎನ್ ಸೀತಾರಾಂ ರೇಖಾಚಿತ್ರ: ಉಪ್ಪಿ /ಉಪ್ಪಿನಂಗಳ





ಸರ್, ಪ್ರಾರ್ಥಿಸಿದರೆ ಸಾಲದು. ಸರಕಾರ ಅವರಿಗೆ ಸರಿಯಾದ ಸೌಲಭ್ಯಗಳನ್ನು ನೀಡಿದಿದ್ದರೆ ಅವರೆಲ್ಲಾ ಬದುಕುಳಿಯುತ್ತಿದ್ದರೇನೋ. ನಾವು ಇದನ್ನು ಸರಕಾರಕ್ಕೆ ಮನದಟ್ಟು ಮಾಡುವ ಕೆಲಸ ಮಾಡಬೇಕಾಗಿದೆ.
ನಾವು ಮಾನವರು ನಿಜವಾಗಿ ಇನ್ನೂ ಮಾನವರಾಗಿಲ್ಲ ಎಂದು ಇಂಥ ಸಂಗತಿಗಳು ನಮಗೆ ಮತ್ತೆ ಮತ್ತೆ ನೆನಪಿಸುತ್ತವೆ. ರಾಜತಾಂತ್ರಿಕರು, ಉನ್ನತ ಅಧಿಕಾರಿಗಲು , ಮಂತ್ರಿಗಳು ಬೇರೆ ದೇಶಗಳಿಗೆ ಹೋದಾಗ, ತಥಾಕಥಿತ ಶತ್ರುದೇಶಗಳಿಗೆ ಹೋದಾಗಲೂ ಈ ಆಧುನಿಕ ಕಾಲದಲ್ಲಿ ಅವರನ್ನು ಸುರಕ್ಶಿತವಾಗಿ ನೋಡಿಕೊಳ್ಳಲಾಗುತ್ತದೆ. ಬೆನ್ನಿಗೆ ಇರಿಯುವುದಿಲ್ಲ. ಆದರೆ ಸಿಯಾಚಿನ್ ನಂಥ ಜಾಗಗಳಲ್ಲಿ ನಮ್ಮ ಸೈನಿಕರ ನೆಲೆಯನ್ನು ಇಡದೆ ಇದ್ದರೆ ಪಾಕಿಸ್ತಾನ ಚೀನಾಗಳ ಅಪಾಯ!ದೇಶಗಳು ಒಂದನ್ನೊಂದು ವಂಚಿಸದೆ ಪರಸ್ಪರ ನಂಬಿಕೆಯಿರುತ್ತಿದ್ದರೆ ಇಂಥ ಜಾಗಗಳಲ್ಲು ಸೈನಿಕರು ಇರಬೇಕಾಗುತ್ತಿತ್ತೆ? ಛೆ! ತುಂಬ ದುಃಖವಾಗುತ್ತದೆ. ಉಪಗ್ರಹದ ಮೂಲಕವೋ ಇನ್ಯಾವುದಾದರೂ ಲೇಸರೋ ಮತ್ತೊಂದೋ ತಂತ್ರಜ್ನಾನದ ಮೂಲಕವೋ ಆ ಜಾಗವನ್ನು ನಿರಂತರವಾಗಿ ಕಣ್ಗಾವಲು ಮಾಡಲು ಆಗಲಿಕ್ಕಿಲ್ಲವೋ? ಗೊತ್ತಿಲ್ಲ.- ಗಿರೀಶ
“ನಮ್ಮ೦ಥ ಸುಖ ಪಿಪಾಸುಗಳಿಗಿ೦ತ, ಆಸೆಯಿಲ್ಲದ ಸನ್ಯಾಸಿಗಿ೦ತ ಅತಿ ಎತ್ತರದ ಸ್ಥಾನ ಖ೦ಡಿತಾ ನಿಮ್ಮದಲ್ಲವೆ? ” ನಿಮ್ಮ ಮಾತು ನೂರಕ್ಕೆ ನೂರು ಪಾಲು ಸತ್ಯ ಸರ್.
This merely exaggeration. We must condole his death. This is really tragic but people and media making this issue something that has never happened. It is pity that only poor of this country opt for military service because of unemployment and economic condition. We must make military service compulsory for everyone. A middle class Indian anguish of tokenism. I also wonder why these media and right wing political people is absolutely silent about Rohit Vemula of HCU. Better not to go with media and its propagandist manipulation of news.
ಪ್ರೊ.ಬಸವರಾಜ ಪುರಾಣಿಕ
ಮೊಬೈಲ್ 8792877649
ನಮ್ಮ ಹನುಮಂತಪ್ಪ ತನ್ನ ಉಸಿರಲ್ಲಿ ಸೀತಾರಾಮನನ್ನು ಮನೆಮಾಡಿಕೊಂಡಿದ್ದ.
ಅವನಿಗೆ ಗೊತ್ತಿದುದು ಒಂದೇ ಒಂದು : ಇದನ್ನು ರಕ್ಷಿಸು.
ಅದನ್ನೇ ಮಾಡಿದ,ಮಾಡುತ್ತಲಿದ್ದಾಗಲೇ, ಮರಣ ಇಣಿಕಿತು. ತುಸು ತಡೆ. ಎಂದ, ತಥಾಸ್ತು ಎಂದಿತದು.
ಮರಣ ಸಹ ಮನವಾಳ್ದವರಿಗೆ ತಲೆ ಬಾಗಿಸುತ್ತದೆ. ರಕ್ಷಿಸುತ್ತಲೇ ಕುಸಿದ.ಮರಣ ಮಾತು ಉಳಿಸಿಕೋಢಿತು. ಆದರೆ ಆತನ ಬೆಂಬಿಡದೇ ಇತ್ತು ದಿಲ್ಗೆಗೆ ಬಂತು. ಹನುಮನ ಗಡಿ ಕಾಯುವ ಕೆಲಸಕ್ಕೆ ವಿಶ್ರಾಂತಿ ಸಿಕ್ಕಿತೇನೋ. ಆಗ, ನೀನು ಬಹಳ ದಣಿದಿರುವೆ ಬಾ ಮಗು ನನ್ನಬಳಿ ಎಂದಿಳು ಭೂಮಾತೆ.ಕಾಯುತ್ತಲೇ ಇದ್ದ ಮರಣ ಹಸಾದ ಎಂದಿತು. ನೆನಪಿರಲಿ,
ಕೊನೆಗೆ, ಆ ಮನವಾಳ್ದವ ಉಸಿರು ಬಿಟ್ಟದ್ದು ರಣರಂಗದಾಚೆ,
ಸೀತಾರಾಮ ಅವರೆ, ನೀವೊಂದು ಸೀರಿಯಲ್
ಯಾಕೆ ಮಾಡಬಾರದು.?
ಶಿರ್ಷಿಕೆ ‘ಮ’ದಿಂದ ಶುರು ಆಗಬೇಕೇ?
ಇದೋ “ಮನವಾಳ್ದವರು” ಹೇಗೇ.
ಹನುಮಂಯಪ್ಪನಂಥ “ಮನವಾಳ್ದವರು” ಹಡುಕಿದರೆ ಸಿಕ್ಕುತ್ತಾರೆ
ಮನದ ತ್ರಾಣ ಕಳೆದುಕೊಂಡ ಯುವಜನಾಂಗಕ್ಕೆ ಕೈ ಹಿಡಿದು ನಡೆಯುವುದನ್ನು ಕಲಿಸಿ.
ಈಗ ಕಣ್ಣಾಡಿಸಿದಲ್ಲೆಲ್ಲ ಸಿಕ್ಕುವವರು: ನುಡಿವೆಣರು, ನಡೆವೆಣರು ಬೀಳುವೆಣರು ಹಾಗು ಬಾಳುವೆಣರು
-ಇವೆಲ್ಲ ಬಸವನಣ್ಣನವರ ಪದಪ್ರಯೋಗಗಳು. ಗಮನಿಸಿ
“ನೀನು ಗಡಿ ಕಾಯದಿದ್ದರೆ, ದೇಶ ಉಳಿಸದಿದ್ದರೆ ನನ್ನ೦ಥವರ ಸುಖ ಉಳಿಯುತ್ತಾ..? ನಿಮ್ಮ ಋಣವನ್ನು ನಾವು ತೀರಿಸಲು ಸಾಧ್ಯವೇ ಇಲ್ಲ ಹನುಮ೦ತಪ್ಪ…. ನೀನು ಬದುಕಬೇಕು ಎ೦ದು ನಿನ್ನೆ ಅನೇಕ ಬಾರಿ ಪ್ರಾರ್ಥಿಸಿದೆ… ಅದೊ೦ದೇ ಸಮಾಧಾನ..”
ನಿಜ.. ಮನ ತಟ್ಟಿತು ಸರ್..
ವೀರ ಯೋಧನಿ ಭಾವಪೂರ್ಣ ನಮನ #hanumanthappa