ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುವೆ ಸಾಲಿನಂತೆ ಸಾಗುವ ಕಥನ..

ರವೀಂದ್ರ ಮುದ್ದಿ ಅವರ ಕಾದಂಬರಿ ‘ಗಾಡ್ is not ರೀಚಬಲ್’

ಈ ಕೃತಿಯನ್ನು ‘ಮುದ್ದಿ ಮೈ೦ಡ್ಸ್’ ಪ್ರಕಟಿಸಿದೆ.

ಈ ಕೃತಿಯ ಕುರಿತು ಬಸವರಾಜ ಮುದನೂರ್ ಅವರ ಅನಿಸಿಕೆ ಇಲ್ಲಿದೆ.

ಬಸವರಾಜ ಮುದನೂರ್

‘ಗಾಡ್ is not ರೀಚಬಲ್’ ಕಾದಂಬರಿ ಸಿನೆಮಾಗೆ Suitable!

ಸಹೋದರ ರವೀಂದ್ರ ಮುದ್ದಿ ಮಾಧ್ಯಮ ಕ್ಷೇತ್ರದ Busy Work ಮದ್ಯೆ ಸಾಹಿತ್ಯ ಕ್ಷೇತ್ರದ ನಂಟು ಬಿಡದೆ ಆಪ್ತವಾಗಿ ಅಂಟಿಕೊಂಡಿರುವುದು Really Great. ವರ್ಷದ ಹಿಂದೆ ‘ಸಿಗ್ನಲ್ ಜಂಪ್’ ಕೃತಿ ಬಿಡುಗಡೆಗೊಂಡಾಗ ಓದುವ ಕುತೂಹಲದಿ ದುರ್ಗದ ಹರಿಶಂಕರ್ ಬುಕ್ ಸ್ಟಾಲ್ ಗೆ ಹುಡುಕಿಕೊಂಡು ಹೋಗಿ Book ಖರೀದಿಸಿ ಒಂದೇ ದಿನದಲ್ಲಿ ಓದಿ ಮುಗಿಸಿದ್ದೆನು. ಗೊರವಪ್ಪ ವಿಧಾನಸೌಧ ನಡುಗಿಸಿದ ‘ಡಮರುಗ’ ಕಥನ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. 

ಹುಡುಕಾಟ, ನಿರ್ದೇಶಕನ ಕನಸು, ಮಠದ ಮೆಟ್ಟಿಲು ಸೇರಿ ಪ್ರತಿ Story ನಿರಾಯಾಸವಾಗಿ ಓದಿಸಿಕೊಳ್ಳುತ್ತವೆ. ಉತ್ತರ ಕರ್ನಾಟಕದಿಂದ ಬೆಳೆದು ಬಂದು ರಾಜಧಾನಿಯಲ್ಲಿ ನೆಲೆಸಿರುವ ರವೀಂದ್ರ ಮುದ್ದಿ ಅವರ ಬರಹ ಶೈಲಿಯೇ ವಿಭಿನ್ನ. ಅನುಭಾವದಿಂದ ಹುಟ್ಟಿದ ಬರಹದಲ್ಲಿ ಸತ್ವ ಇರುತ್ತದೆಂಬುದಕ್ಕೆ ಮುದ್ದಿ ಅವರ ಬರಹಗಳು ಸಾಕ್ಷಿ ಗುಡ್ಡೆಯಾಗಿವೆ.

‘ವರದಾ ತೀರದ ಕಥೆಗಳು’ ಹೇಳಿದ ರವೀಂದ್ರ ಮುದ್ದಿ ‘ಸಿಗ್ನಲ್ ಜಂಪ್’ ಮಾಡಿ ವರ್ಷ ಕಳೆದಿಲ್ಲ; ಆಗಲೇ ‘ಗಾಡ್ is not ರೀಚಬಲ್’ ಕಾದಂಬರಿ ಲೋಕಾರ್ಪಣೆ ಎಂಬ ವಿಚಾರ ತಿಳಿದಾಗ ನಿಜಕ್ಕೂ Shock ಆಯಿತು. ಒಂದು ಕ್ಷಣ ಒಂದೂವರೆ ದಶಕದ ಹಿಂದೆ ಓದಿದ ಬನ್ನಂಜೆ ಗೋವಿಂದಾಚಾರ್ಯರು ವಿರಚಿತ ಬಾಣಭಟ್ಟನ ಕಾದಂಬರಿ ಸ್ಮೃತಿಪಟಲದಲಿ ಗರಿಬಿಚ್ಚಿತು. ಕಾದಂಬರಿಗಳ ಕರ್ತೃ ಬಾಣಭಟ್ಟನ ಕಾದಂಬರಿಯನ್ನು ಸಂಸ್ಕೃತದಿಂದ ಕನ್ನಡಕ್ಕೆ ತಂದ ಬನ್ನಂಜೆ ಅವರು ಬಾಣಭಟ್ಟನ ಕಾದಂಬರಿ ಅಳೆದು ತೂಗಿ ಚಿಕ್ಕ ಚೊಕ್ಕದಾಗಿಸಿದ್ದಾರೆ. 

‘ಬಾಣನ ಕಾದಂಬರಿ ಭಾರಿ ಜರದ ಶಾಲಿಯುಟ್ಟ ನೀರೆ. ಬನ್ನಂಜೆಯವರು ಅಪ್ಸರೆಗೆ ನೈಲಾನ ಸೀರೆ ಉಡಿಸಿದ್ದಾರೆ. ಶೃಂಗಾರವು ಬಯಲ‌ ಬಂಗಾರವಾಗಿದೆ. ಬಾಣಭಟ್ಟನು ಕಾದಂಬರಿ ಪೂರ್ಣಗೊಳ್ಳುವ ಮುನ್ನವೇ ಕೈಲಾಸ ಸೇರಿದ್ದು ಬಾಣಭಟ್ಟನ ಮಗ ಕಾದಂಬರಿ ಪೂರ್ಣಗೊಳಿಸಿದ್ದನು. ಗಿಳಿ ಹೇಳಿದ ಗೆಳೆತನದ ಕಥೆಯಿದು’ ಎಂಬುದಾಗಿ ದ.ರಾ ಬೇಂದ್ರೆ ಬರೆದಿದ್ದಾರೆ. ಕಾದಂಬರಿ ಪ್ರಕಾರ ಹುಟ್ಟಿಗೆ ಬಾಣಭಟ್ಟನ ‘ಕಾದಂಬರಿ’ಯೇ ಮೂಲ ಎಂಬ History ನೆನಪಾಯಿತು.

ಕಾದಂಬರಿಗಳ ಲೋಕಕ್ಕೆ ನಮ್ಮ ರವೀಂದ್ರ ಮುದ್ದಿ Entry ಆಗಿದ್ದು ಕೇಳಿ ಖುಷಿ ಜತೆಗೆ ಬಿಡುವಿಲ್ಲದ ಕೆಲಸದ ಮದ್ಯೆ  ಕಾದಂಬರಿ ಬರೆದಾರೆಯೇ?. ಬರೆದಿದ್ದರೆ ಹೇಗಿದ್ದೀತೆಂಬ ಕೌತುಕ ಕಾಡಿತು. ಕೊನೆಗೂ ಪುಸ್ತಕ ತರಿಸಿಕೊಂಡು ಓದಲು ಶುರು ಮಾಡಿದರೆ ಪುಟ ಪುಟಕ್ಕೂ ಓದುವ ಒಲವು ಮೂಡಿತು. ಎಡೆಬಿಡದೆ ಕುತೂಹಲ ಕೆರಳಿತು. ಹೆಣ್ಮಕ್ಕಳು ದಾರಾವಾಹಿಗಾಗಿ ಕಾದಿರುವುದು ಕಂಡು ಅಪಹಾಸ್ಯ ಮಾಡುತ್ತಿದ್ದವನು ನಾನು; ಅಲ್ಪ ಸಮಯ ಸಿಕ್ಕರೂ ಸಾಕು ಓದಲು ಕೂಡುವಂತಾಯಿತು! ಮನೆಯಲ್ಲಿ ಮಕ್ಕಳ ಆಟ, ಟಿವಿ ಯಾವುದರ ಪರಿವಿಲ್ಲದೆ ಪುಸ್ತಕದ ಹುಳುವಾದೆನು.

PSI ಸುಬ್ರಮಣಿ, ಗೌತಮನ ಸಹೋದರತ್ವ, ಗೌತಮ-ಅಹಲ್ಯೆಯ ಪ್ರೇಮ ಕಹಾನಿ, ತಾಯಿ ದೇವರ ಹುಡುಕಾಟ, ಕುಂದಾಪುರ, ಕಾಶಿ, ಮುಂಬೈ ಮುಂತಾದೆಡೆ ಅಲೆದಾಟ. ವಿಧಿಯಾಟದಿ ಕಳೆದು ಹೋಗುವ ಜೀವಗಳು. ಕಾಡುವ ಅನಾಥಭಾವಕ್ಕೆ ಸ್ನೇಹ-ಬಂಧುತ್ವದ ಬೆಸುಗೆ, ಆಧ್ಯಾತ್ಮ ಹೀಗೆ ಪ್ರತಿ ಪುಟದಲ್ಲೂ Thrill and ತಿರುವುಗಳು ಬೆರಗು ಮೂಡಿಸುತ್ತವೆ. ಇರುವೆ ಸಾಲಿನಂತೆ  ಸಾಗುವ ಕಥನಕ್ಕೆ ಸುಲಲಿತವಾಗಿ ಓದಿಸಿಕೊಳ್ಳುವ ಸ್ಪಷ್ಟತೆಯಿದೆ.

ಇನ್ನೊಂದೆರಡು ಪುಟ ಓದಿ ಬ್ರೇಕ್ ತೆಗೆದುಕೊಳ್ಳೋಣ ಎಂದರೆ ಬಿಟ್ಟರೂ ಬಿಡದೀ ಮಾಯೆ ಎಂಬಂತೆ interval ಸಹ ಇಲ್ಲದಂಥ ಓದಿನ ಹುಚ್ಚು ಹಿಡಿದಿಡುತ್ತದೆ. Cinematic ಆಗಿರುವ ಕಾದಂಬರಿಯ ಓದಿನಿಂದ ಒಂದು ಅದ್ಭುತ ಸಿನೆಮಾ‌ ನೋಡಿದ ರೋಚಕ ಅನುಭವ ಆವರಿಸುತ್ತದೆ. ಪ್ರೀತಿ-ಪ್ರೇಮ, ಸರಸ-ವಿರಸ, ನೋವು-ನಲಿವು, ಊರು-ಕೇರಿ, ಜೀವ-ಜೀವನ, ಆಧ್ಯಾತ್ಮ ದರ್ಶನ ಸೇರಿ ನವರಸಗಳೂ ಈ ಕಾದಂಬರಿಯಲ್ಲುಂಟು. 

ನವಿರಾದ ಪ್ರೇಮಕಥೆ ಮೈನೆರೆದ ಹೆಣ್ಣಿಗೆ ಮಲ್ಲಿಗೆ ಮೊಗ್ಗಿನ ಜಡೆ ತೊಡಿಸಿದ ಸಿಂಗಾರ ಸಿರಿಯಂತಿದೆ. ಈ ಕಾದಂಬರಿ ಓದಿನ ಸಂಪ್ರೀತಿ ಮತ್ತು ಸಂಕಟ ಮಾತಿನಲಿ ಹೇಳಲಾಗದು, ಕೆಲ ಸಾಲುಗಳಲಿ ಬರೆಯಲಾಗದು. ಇದೊಂದು ಅದ್ಭುತ ಸಿನೆಮಾ ಆಗಲು Suitable ಕಾದಂಬರಿ!. ಕಾದಂಬರಿಕಾರರು ವಿರಳ ಆಗುತ್ತಿರುವ ಕಾಲಘಟ್ಟದಲ್ಲಿ ಕನ್ನಡಕ್ಕೋರ್ವ ಭರವಸೆಯ ತರುಣ ಕಾದಂಬರಿಕಾರ ಸಿಕ್ಕರೆಂಬ ಪುಣ್ಯಭಾವ ಮೂಡಿತು.

‍ಲೇಖಕರು Admin

9 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading