ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಮ್ರೋಜ್ ಮತ್ತು ಅಮೃತಾ 

ವಿ. ಹರಿನಾಥ ಬಾಬು ಸಿರುಗುಪ್ಪ

*

‘ಇಮ್ರೋಜ್’

ಇದು ಅವನಿಗೆ ಅವಳಿಟ್ಟ ಹೆಸರು

‘ಅವನು’ 

ಅವಳ ‘ಸಾಹಿರ್’

ಇಮ್ರೋಜ್ ಎಂದರೆ

‘ಇಂದು’

ಇಂದು ಎಂದರೆ

ನಿನ್ನೆ ನಾಳೆಗಳ ಮಧ್ಯದ ಬಿಂದು

ಅಮೃತಾ

ಗಂಗೆಯಂತೆ ಸಾವಿಲ್ಲದವಳು

ಅವಳು ಹರಿವ ತೊರೆ

ಇವನು

ತಬ್ಬಿ ಹಿಡಿದ ದಡ

ಇವರ ಪ್ರೇಮವೆಂಬುದು ಅಮರ

ಹೂ ಬಿಟ್ಟ ಪಾರಿಜಾತದ ಮರ

ಇರುಳ ಕತ್ತಲೆ ಕಳೆವ ಬೆಳಕ ಚೆಂಡು

ಎದೆಯಿಂದ ಎದೆಗೆ ತೂರಿ ಬಿಟ್ಟ ಮನ್ಮಥನ ಅಂಬು

ಅವಳು ಅಂಕೆಯಿರದ ಆಸೆ

ಇವನು ಶಂಕೆಯಿರದ ಮುಗ್ಧ ಮಗು

ಈರ್ವರೆದೆ

ನಗುವ ಕೆಂಗುಲಾಬಿ

‘ಇಂದು’

ಅವನೆಂದರೆ ಪ್ರತಿ ಹೆಣ್ಣಿನ ಮನಸು

ಅವಳ ನಿತ್ಯದ ಕನಸು

ನಿನ್ನೆ ನಾಳೆಗಳ ತುಂಬಿಕೊಂಡು ನಿಂತ ಅಮೃತಾ

ಳ 

ಉಸಿರು

ಅದೇ ಹೆಸರು

‘ಇಂದು’

ಕೊನೆಯಿರದ ಒಂದು ಪ್ರೇಮ ಯಾನ!

*

ಅಮೃತಾ ಪ್ರೀತಂ ಮತ್ತು ಇಮ್ರೋಜ್ ರನ್ನು ಮುಖ್ಯ ಪಾತ್ರಗಳನ್ನಾಗಿಟ್ಟುಕೊಂಡು ಸಾರ್ವತ್ರಿಕ ಪ್ರೇಮವನ್ನು ಬಿಂಬಿಸುವ ಪ್ರಯತ್ನವನ್ನು ಈ ಕವಿತೆಯಲ್ಲಿ ಮಾಡಲಾಗಿದೆ

ಅಮೃತಾ ಪ್ರೀತಂ ಪಂಜಾಬ್ ನ ಪ್ರಖ್ಯಾತ ಕವಯತ್ರಿ

ಈಕೆಯ ಕುಟುಂಬ ಅವಿಭಜಿತ ಭಾರತದ ಲಾಹೋರ್ ನಲ್ಲಿದ್ದು ದೇಶ ವಿಭಜನೆಯಾದಾಗ ಭಾರತಕ್ಕೆ ಬಂದವರು

ಈಕೆಗೆ ಜ್ಞಾನಪೀಠ ಪ್ರಶಸ್ತಿ ಜೊತೆಗೆ ಅನೇಕ ದೇಶ ವಿದೇಶದ ಬಹುಮಾನ, ಪ್ರಶಸ್ತಿ, ಮಾನ ಸಮ್ಮಾನಗಳು ಸಂದಿವೆ

ಈಕೆಗೆ ಸಣ್ಣ ವಯಸ್ಸಿನಲ್ಲೇ ಮದುವೆ ನಿಶ್ಚಯವಾಗಿ ಹದಿನಾಲ್ಕನೆ ವರ್ಷಕ್ಕೆ ಮದುವೆಯಾಗುತ್ತದೆ ಮತ್ತು ಸಣ್ಣ ವಯಸ್ಸಿಗೆ ಎರಡು ಮಕ್ಕಳ ತಾಯಿಯಾಗುತ್ತಾಳೆ

ಈಕೆಯ ಒಪ್ಪಿಗೆಯಿಲ್ಲದೆ ನಡೆದ ವಿವಾಹದಿಂದ ಅವಳ ಮನಸ್ಸು ಸದಾ ಅವಳ ಕನಸಿನ ರಾಜಕುಮಾರನ ಹುಡುಕಾಟದಲ್ಲಿರುತ್ತದೆ

ಈ ಹುಡುಕಾಟದಲ್ಲಿ ಸಾಹಿರ್ ಲುಧಿಯಾನ್ವಿ ಒಂದು ಕವಿಗೋಷ್ಠಿಯಲ್ಲಿ ಜೊತೆಯಾಗುತ್ತಾರೆ

ಸಾಹಿರ್ ನ ಮೇಲೆ ಅಮರ ಪ್ರೇಮ ಬೆಳಸಿಕೊಂಡ ಇವಳು ಅವನನ್ನು ತನ್ನ ಸಾವಿನವರೆಗೂ ಅತ್ಯಂತ ಜತನದಿಂದ ಮತ್ತು ಪ್ರೀತಿಯಿಂದ ಆರಾಧಿಸುತ್ತಾಳೆ

ಆದರೆ ಸಾಹಿರ್ ಇವಳ ಪ್ರೇಮಕ್ಕೆ ಸಿಗುವುದಿಲ್ಲ

ಆಗಲೆ ಅವನಿಗೆ ಮದುವೆ ಮತ್ತು ಮಕ್ಕಳಾಗಿರುತ್ತವೆ.

ಈ ನಡುವೆ ಪ್ರೀತಂ ಮತ್ತು ಅವಳ ಗಂಡ ವಿಚ್ಛೇದನ ಪಡೆಯುತ್ತಾರೆ

ಇಷ್ಟಕ್ಕೂ ಮುಂಚೆ ಇಮ್ರೋಜ್ ಒಬ್ಬ ಮಹಾನ್ ಚಿತ್ರ ಕಲಾವಿದನಾಗಿದ್ದು ಅವನು ಬಾಲ್ಯದಿಂದಲೂ ಅಮೃತಾಳ ಕನಸು ಕಾಣುತ್ತಿರುತ್ತಾನೆ!

ಅಕಸ್ಮಿಕವಾಗಿ ಅವಳ ಸಂಪರ್ಕಕ್ಕೆ ಬಂದವನು ಅವಳ ಜೀವನದಲ್ಲಿ ಶಾಶ್ವತವಾಗಿ ಉಳಿದುಬಿಡುತ್ತಾನೆ. ಅಮರ ಪ್ರೇಮಕ್ಕೆ ಇಮ್ರೋಜ್ ಮತ್ತು ಅಮೃತಾ ಸಾಕ್ಷಿಯಾಗಿ ಬದುಕುತ್ತಾರೆ

ಬಹುಶಃ ಈ ದೇಶದ ಮೊದಲ ‘ಲಿವಿಂಗ್ ಟುಗೆದರ್’ ಜೋಡಿಯಾಗಿ ಹೆಸರಾಗುತ್ತದೆ

ಅಮೃತಾಳ ಬಗ್ಗೆ ತಿಳಿಯಬೇಕಾದರೆ ಅವರ ‘ರಸೀದಿ ತಿಕೀಟು’ ಅನುವಾದಿತ ಆತ್ಮ ಕಥೆ ಮತ್ತು ರೇಣುಕಾ ನಿಡಗುಂದಿ ಬರೆದ ‘ಇಮ್ರೋಜ್ ಮತ್ತು ಅಮೃತಾ’ ಎಂಬ ಪುಸ್ತಕ ಓದಬೇಕು

‍ಲೇಖಕರು avadhi

28 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading