ಇನ್ನೆಂದೂ ಸಿಗಲಾರದ ಶ್ರೇಷ್ಠ ಗುರುವಿನ ಮರುಭೇಟಿ…

ಐ ಕೆ ಬೊಳುವಾರು ಅವರ ಫೇಸ್ ಬುಕ್ ವಾಲ್ ನಿಂದ

ಕಳೆದ 42 ವರ್ಷಗಳಿಂದ ನನ್ನನ್ನು ಯಾವತ್ತೂ ಎಚ್ಚರದಿಂದ ಇರುವ ಹಾಗೆ ಎಚ್ಚರಿಸುತ್ತಿದ್ದ ಜಿ .ರಾಜಶೇಖರ್ ಅವರಿಗೆ ಗೌರವದ ನಮನಗಳು. 1985 ಇರಬೇಕು ನಾನು ರಂಗಭೂಮಿಗೆ ಸಂಬಂಧಿಸಿದ ಹಾಗೆ ಐದು ಚುಟುಕು ಕವಿತೆಗಳನ್ನು ಬರೆದು ಉದಯವಾಣಿಗೆ ಕಳುಹಿಸಿದ್ದೆ. ಭಾನುವಾರದ ಪುರವಣಿಯಲ್ಲಿ ಅದು ಪ್ರಕಟವೂ ಆಗಿತ್ತು. ಅದನ್ನು ನೋಡಿದ ಜಿ. ರಾಜಶೇಖರ್ ನನಗೆ ಪತ್ರ ಬರೆದಿದ್ದರು. ಚೆನ್ನಾಗಿದೆ. ನೀನು ಚಂದ ಕವಿತೆ ಬರೆಯಬಲ್ಲೆ. ಅದನ್ನು ಮುಂದುವರಿಸು ಅಂತ. ಆದರೆ ನಾನು ಅವರ ಮಾತಿಗೆ ಗೌರವ ನೀಡಲಿಲ್ಲವೇನೋ….ಮುಂದೆಂದೂ ಕವಿತೆ ಬರೆಯುವುದಾಗಲಿ ಪ್ರಕಟಿಸುವುದಾಗಲಿ ಮಾಡಲೇ ಇಲ್ಲ. ಕ್ಷಮಿಸಿ ಸರ್ ನಿಮ್ಮೆಲ್ಲ ಮಾತುಗಳನ್ನು ಪುಸ್ತಕಗಳನ್ನು ಭಾಷಣಗಳನ್ನು ಅಪಾರವಾಗಿ ಗೌರವಿಸುವವನು ನಾನು.ನಿಮ್ಮಿಂದಲೇ ಪ್ರಭಾವಿತನೂ ಆದವನು. ಹಾಗೆ ಮಾಡದೆ ಇದ್ದುದ್ದಕ್ಕಾಗಿ ನನ್ನನ್ನು ಕ್ಷಮಿಸುತ್ತೀರಿ ಎಂದು ನಂಬುವೆ.

ಮಗಳು ‘ಸಹಮತ’ ಜಿ.ರಾಜಶೇಖರ್ ಪರಿಚಯದಿಂದ ತುಂಬಾ ಪ್ರಭಾವಿತಳಾದವಳು.
ಅವಳ ಬರಹವನ್ನೂ ಇಲ್ಲಿ ಸೇರಿಸಿದ್ದೇನೆ

ನಾನಾವಾಗ ಎಂಟನೆಯ ತರಗತಿಯಲ್ಲಿದ್ದೆ. ಸಾಗರ ತಾಲೂಕಿನ‌ ತುಮರಿಯಲ್ಲಿ ಸಂಸ್ಕೃತಿ ಶಿಕ್ಷಣ ಶಿಬಿರ ನಡೆಯುತ್ತಿತ್ತು. ಎಪ್ರಿಲ್ ತಿಂಗಳ‌ ಬಿರು ಬೇಸಿಗೆಯಲ್ಲಿ ಸಮಾಜ, ಶಿಕ್ಷಣ, ರಂಗಭೂಮಿ, ಸಂಗೀತ, ಸಿನೆಮಾ ಎಂದೆಲ್ಲಾ ಮಾತುಕತೆ, ಕಾರ್ಯಗಾರ ನಡೆಯುತ್ತಿತ್ತು. ಒಂದು ದಿನ ರಾತ್ರಿ ಎಲ್ಲರೂ “ರಾಜಶೇಖರ್ ಬರುತ್ತಾರೆ, ರಾಜಶೇಖರ್ ಬರುತ್ತಾರೆ” ಎಂದು ಗಾಬರಿಯಿಂದ ಪಿಸುಗುಡುತ್ತಿದ್ದರು. ಇನ್ನೂ ಪ್ರಪಂಚ ನೋಡಿರದ ನನಗೆ, ಇನ್ನೊಬ್ಬ ಖಾದಿ ಜುಬ್ಬ, ಗಡ್ಡದಾರಿ, ಆಜಾನುಬಾಹು, ಎಲೆ ಅಡಿಕೆ ಮೆಲ್ಲುತ್ತಾ ಲೆಕ್ಚರ್ ಕೊಡಬಹುದು, ಇನ್ನೂ ಮಿಡಲ್ ಸ್ಕೂಲಿನಲ್ಲಿರುವ ನನ್ನಂತವರಿಗೆ ಏನೂ ಅರ್ಥವಾಗಲಾರದು ಎಂದು ಕೊಂಡೆ.

ಮರುದಿನ‌ ಹತ್ತು ಗಂಟೆಯ ಹೊತ್ತಿಗೆ ಚೆಕ್ಸು ಷರ್ಟು, ಕರಿ ಬಣ್ಣದ ಪಾಂಟು ತೊಟ್ಟ, ಅಷ್ಟೇನೂ ತೂಕವಿಲ್ಲದ ವ್ಯಕ್ತಿ ರೂಮಿನ ಬಳಿ ಬರುತ್ತಿರುವುದು ನೋಡಿ ಇವೆರೇ ರಾಜಶೇಖರ ಇರಬೇಕೆಂದು ಅಂದುಕೊಂಡು ಎರಡೂ ಕೈ ಮೇಲೆತ್ತಿದೆ. ಎಂದೂ ಮಾತು ಶುರು ಹಚ್ಚದವಳು ಸುಮ್ಮನೆ, “ಉಡುಪಿಯಿಂದ ಎಷ್ಟು ಹೊತ್ತಿಗೆ ಹೊರಟಿರಿ” ಎಂದು ಕೇಳಿದಾಗ, ಆ ವ್ಯಕ್ತಿ “ಉಡುಪಿಯಿಂದ ಬಂದವರು ಈಗಾಗಲೇ ರೂಮಿನಲ್ಲಿ ಕುಳಿತಿದ್ದಾರೆ” ಎಂದಾಗ ಪೇಚುಗೊಂಡಿದ್ದೆ. ತಲೆತಗ್ಗಿಸಿ ರೂಮಿನ‌ ಬಳಿ‌ ನಡೆದು ಇಣುಕಿ ನೋಡಿದಾಗ, ಅಲ್ಲೂ ಒಬ್ಬ ಚೆಕ್ಸು ಷರ್ಟಿನ, ದಪ್ಪ ಕನ್ನಡಕ ಧರಿಸಿದ ವ್ಯಕ್ತಿ ತಲೆತಗ್ಗಿಸಿ ಪುಸ್ತಕ‌ ಓದುತ್ತಿದ್ದರು. ರಾಜಶೇಖರ ರಾಜರಂತೇನೂ ಕಾಣಲಿಲ್ಲ ಬದಲಾಗಿ ನಮ್ಮ ನಿಮ್ಮಂತಹ ಸರಳ, ಗಂಭೀರ ವ್ಯಕ್ತಿಯಾಗಿ ತೋರಿದರು.

ಇದು ರಾಜಶೇಖರ ಅವರ ಜೊತೆ ನನ್ನ ಮೊದಲ‌ ಭೇಟಿ. ಯಾರೊಂದಿಗೂ ಮಾತನಾಡದ, ಮಾತು ನುಂಗಿಕೊಂಡು ಇದ್ದ ನನಗೆ ಇವರ ಸರಳತೆ ನೋಡಿ ಸಂತೋಷ, ಆಶ್ಚರ್ಯ, ದಿಗಿಲು ಎಲ್ಲ ಒಟ್ಟಿಗೇ ಆಗುತ್ತದೆ. ಇಂದು ನನ್ನಲ್ಲಿ ಅಲ್ಪ ಮಟ್ಟಿಗಾದರೂ ಸಮಾಜದ ಬಗ್ಗೆ ಅರಿವು, ಕಾಳಜಿ ಇದ್ದರೆ ಅದಕ್ಕೆ ಕಾರಣ ಜಿ.‌ರಾಜಶೇಖರ್ ರಂತಹ ಕೆಲವೇ ಕೆಲವು ವ್ಯಕ್ತಿ ಗಳು ಎಂದು ಅಳುಕಿಲ್ಲದೆ ಹೇಳಬಲ್ಲೆ.

ಅಂದು ಮೊದಲ‌ ತರಗತಿ ಅವರದ್ದೇ ಆಗಿತ್ತು.‌ “ಆವರಣ” ಕಾದಂಬರಿ ಕುರಿತಾಗಿ ಮಾತನಾಡುವವರಿದ್ದರು. ನಾವೆಲ್ಲ ಕುತೂಹಲದಿಂದ ಕಣ್ಣು , ಕಿವಿ ಅಗಲಿಸಿ ಕೇಳಲು ಸಿದ್ಧವಾಗಿತ್ತಿದ್ದಂತೆಯೇ, “ಆ-ವ-ರ-ಣ.‌ ಇದು ಕಥೆಯೂ ಅಲ್ಲದ,‌ ಕಾದಂಬರಿಯೂ ಅಲ್ಲದ ಹೇಸರಗತ್ತೆ” ಎಂದು ಶುರುಮಾಡಿದರು. ಯಾರ ಮಾತುಗಳು ನನಗೆ ಅರ್ಥವಾಗುವುದಿಲ್ಲ ಎಂದುಕೊಂಡಿದ್ದೆನೋ, ಯಾವ ವಿಚಾರಗಳು ನನ್ನ ತಲೆಗೆ ಹೋಗುವ ವಯಸ್ಸಲ್ಲವಿದು ಎಂದು ಕೊಂಡಿದ್ದೆನೋ ಅವೆಲ್ಲವನ್ನೂ ಮೀರಿ ನನ್ನಂತಹ ಒಬ್ಬಳು ಮಿಡಲ್ ಸ್ಕೂಲಿನ ಹುಡುಗಿಗೂ ಅರ್ಥ ವಾಗುವಂತೆ, ಮನ ತಟ್ಟುವಂತೆ, ನೇರವಾಗಿ ಮಾತನಾಡಿದ್ದರು. ತರಗತಿ ಮುಗಿಯುವ ಹೊತ್ತಿಗೆ ಅವರ ಮಾತುಗಳಿಗೆ ಮಾರು ಹೋಗಿಯಾಗಿತ್ತು. ಅಪ್ಪ ನನ್ನನ್ನು ಕರೆದು ಅವರ ಬಳಿ ಪರಿಚಯಿಸಿದಾಗ ನನ್ನ ಹೆಸರು ತರಗತಿ ಕೇಳದೆ,
“ಪುಸ್ತಕ ಓದುವ ಅಭ್ಯಾಸ ಇದೆಯಾ?”
“ಹೌದು”
“ಹಾಗಾದರೆ, ದಯವಿಟ್ಟು ಆವರಣ ಓದಬೇಡ” ಎಂದಿದ್ದರು.‌

ಅವರ ಮಾತನ್ನು ಇನ್ನೂ ಪಾಲಿಸುತ್ತಲೇ ಬಂದಿದ್ದೇನೆ.

ಮುಂದೆ ಮೈಸೂರಿನಲ್ಲಿ ಓದುವಾಗ ಅದು ಹೇಗೋ ರೇಮಂಡ್‌ ವಿಲಿಯಂಸ್ ರ ಪುಸ್ತಕ ಕೈಗೆ ಸಿಕ್ಕಿ, ಓದು ಮುಗಿಸಿ ಮುದಗೊಂಡು ಅಪ್ಪನ ಬಳಿ “ಇದನ್ನು ಯಾರಾದರು ಕನ್ನಡಕ್ಕೆ ಭಾಷಾಂತರ ಮಾಡಿದ್ಡರೆ ಅವರಿಗೆ ಪುಣ್ಯ ಬರುವುದು” ಎಂದಿದ್ದೆ.‌ ಅವಾಗ ತಂದೆ, “ಆ ಪುಣ್ಯ ಕಟ್ಟಿಕೊಂಡವರು ಉಡುಪಿಯಲ್ಲೇ ಇದ್ದಾರೆ. ನಿನಗವರು ಗೊತ್ತು” ಎಂದು ಹಳದಿ ಬಣ್ಣದ ಬೈಂಡಿನ ಸಣ್ಣ ಪುಸ್ತಕ‌ ತಂದು ನನ್ನ ಕೈಯಲ್ಲಿರಿಸಿದರು. ಅದರಲ್ಲಿ “ಅನುವಾದ : ಜಿ‌.‌ ರಾಜಶೇಖರ್” ಎಂದು ಬರೆದಿತ್ತು. ಇದು ಅನುವಾದಕ್ಕೆ ದಕ್ಕಿದ ಪುಣ್ಯ ಎಂದುಕೊಂಡೆ.

ಮುಂದೆ ಯಾವುದಾದರು ವಿಚಾರ ಕಲಿಯಬೇಕೆಂದಿದ್ದರೆ ರಾಜಶೇಖರ್ ಅಂತವರಿಂದಲೇ ಕಲಿಯಬೇಕು, ಎಂತಹ ಸ್ಥಿತಿಯಲ್ಲೂ ಗಟ್ಟಿ ನಿಲುವು ತೆಗೆದುಕೊಳ್ಳುವಂತೆ ಮನಸ್ಸು-ದೇಹವನ್ನು ಅಣಿಗೊಳಿಸಬೇಕು..

ಇಂದು ವಿಜ್ಞಾನ ಶಿಕ್ಷಣದಲ್ಲಿ ಕೆಲಸ ಮಾಡುತ್ತಿರುವ ನನಗೆ ಕಾಲೇಜು-ಯುನಿವರ್ಸಿಟಿಯಲ್ಲಿ ದಕ್ಕಿದ ಶಿಕ್ಷಣಕ್ಕಿಂತ, ರಾಜಶೇಖರ ಅವರಂತಹ ವ್ಯಕ್ತಿಗಳ ಜೊತೆಗಿನ ಒಡನಾಟದಿಂದಲೇ ವೈಜ್ಞಾನಿಕ ಮನೋಭಾವ ವನ್ನು ಗಟ್ಟಿಯಾಗಿ ಬೆಳೆಸಿಕೊಳ್ಳಲು ಸಾಧ್ಯ ವಾಯಿತು. ಪ್ರತಿಯೊಂದು ವಿಚಾರ ವನ್ನು ವಿವರವಾಗಿ ನೋಡಿ, ಪ್ರಶ್ನೆ ಮಾಡಿ, ಗುದ್ದಾಡಿ, ತಮ್ಮ ನಿಲುವನ್ನು ಓದುಗರಿಗೆ, ಕೇಳುಗರಿಗೆ ಅರ್ಥ ವಾಗುವಂತೆ ವಿವರಿಸುವ ಇವರ ರೀತಿಗೆ, ಕಾಳಜಿಗೆ, ವಿದ್ವತ್ತಿಗೆ ಇಂದಿಗೂ ಮಾರು ಹೋಗುತ್ತೇನೆ.

ರಾಜಶೇಖರ ಅವರ ಆರೋಗ್ಯ ದ ಬಗ್ಗೆ ಗೆಳೆಯ ಸಂವರ್ತನಿಂದ ಆಗ್ಗಾಗ್ಗೆ ನ್ಯೂಸ್ ಸಿಗುತ್ತಿತ್ತು. ಎಷ್ಟೋ ಬಾರಿ ಎದ್ದು ಹೋಗಿ ನೋಡಿ ಬರೋಣ ಎಂದು ಅನ್ನಿಸಿಯೂ ಹೋಗಲಾರದೆ ಕುಳಿತೆ. ಇಂದು ಇದನ್ನು ಬರೆಯುತ್ತಾ ಕೈಗಳು ನಡುಗುತ್ತಿವೆ, ಕಣ್ಣೀರು ಕೆನ್ನೆಯನ್ನು ದಾಟಿ ಕೆಳಗುರುಳುತ್ತಿವೆ. ಅಗಾಧ ನೋವು ಹೃದಯದಲ್ಲಿದೆ. ಇನ್ನೆಂದೂ ಸಿಗಲಾರದ ಒಬ್ಬ ಶ್ರೇಷ್ಠ ಗುರುವಿನ ಮರುಭೇಟಿಗೆ ಜೀವನದುದ್ದಕ್ಕೂ ಕಾಯಬೇಕಿದೆ…

‍ಲೇಖಕರು Admin

July 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: