ಇನ್ನಷ್ಟು ತೇಜಸ್ವಿ 4
ಡಾ ಬಿ.ಆರ್. ಸತ್ಯನಾರಾಯಣ
ಜಾತಿ ಎಂಬುದೇ ಸ್ಥಾಯಿ
ನಮ್ಮ ತೋಟದ ಪಕ್ಕದಲ್ಲಿ ಮೂಡನಹಳ್ಳಿ ಎಂಬ ಗ್ರಾಮವಿದೆ. ಊರಿನಲ್ಲಿ ಹೆಚ್ಚಾಗಿರುವವರು ಒಕ್ಕಲಿಗರು ಮತ್ತು ಕುಂಬಾರರು. ಇನ್ನುಳಿದ ಕೆಲವರು ಉಪ್ಪಾರರು, ಮರಾಠಿಗಳು, ಬಡಗಿಗಳು. ಎಲ್ಲಾ ಸೇರಿ ನೂರು ಮನೆಗಳಿರಬಹುದು ಅಷ್ಟೆ. ನಾನು ಬಾಲ್ಯದಿಂದಲೂ ಗಮನಿಸುತ್ತಿದ್ದೇನೆ. ಈ ಊರಿನಲ್ಲಿ ಎರಡು ಪಾರ್ಟಿಗಳಿವೆ. ಕುಂಬಾರರದೊಂದು ಮತ್ತು ಒಕ್ಕಲಿಗರದೊಂದು. ದಿನ ಬೆಳಗೆದ್ದರೆ ಒಂದೇ ಹೊಲದಲ್ಲಿ ಒಟ್ಟಾಗಿ ದುಡಿಯುವ ಈ ಜನ ಜಾತಿಯ ವಿಷಯ ಬಂದಾಗ ಪರಸ್ಪರ ದ್ವೇಷಿಸುತ್ತಾರೆ.
ಪಾರ್ಟನರ್ಶಿಪ್ಪಿನಲ್ಲಿ ಟೆಂಪೋ ಇಟ್ಟುಕೊಂಡು ವ್ಯಾಪಾರ ಮಾಡುವ ಕುಂಬಾರ ಮತ್ತು ಒಕ್ಕಲಿಗ ಯುವಕರು ತಮ್ಮ ತಮ್ಮ ಜಾತಿಯವರ ಜೊತೆ ಇದ್ದಾಗ, ಈ ಬಾರಿ ಒಕ್ಕಲಿಗರಿಗೆ ಚೆನ್ನಾಗಿ ಇಕ್ಕಬೇಕು ಎಂದು ಕುಂಬಾರರೂ ಮತ್ತು ಕುಂಬಾರರರಿಗೆ ಬುದ್ದಿ ಕಲಿಸುತ್ತೇವೆ ಎಂದು ಒಕ್ಕಲಿಗರೂ ಮಾತನಾಡುತ್ತಾರೆ. ಎರಡೂ ಜಾತಿಗೆ ಬೇರೆ ಬೇರೆ ದೇವಾಲಯಗಳಿವೆ. ಕರಗಲ್ಲು ಇರುವ ಊರಿನಲ್ಲಿ ಕುಂಬಾರರಿಗೆ ಏಳಿಗೆ ಇಲ್ಲ ಎಂಬ ಮೂಡನಂಬಿಕೆಯನ್ನು ನಂಬಿದ ಒಕ್ಕಲಿಗ ಮುಖಂಡರು, ಸಾವಿರಾರು ರೂಪಾಯಿ ಖರ್ಚು ಮಾಡಿ ಕರಗಲ್ಲು ಸ್ಥಾಪಿಸುತ್ತಾರೆ. ಒಬ್ಬರು ಕಾಂಗ್ರೆಸ್ ಬೆಂಬಲಿಸಿದರೆ, ಇನ್ನೊಬ್ಬರು ಜೆಡಿಎಸ್ ಬೆಂಬಲಿಸುತ್ತಾರೆ. ಹಬ್ಬ ಹರಿದಿನಗಳಲ್ಲಿಯೂ ಸಾಮಾನ್ಯ ದಿನಗಳಲ್ಲಿಯೂ ಪರಸ್ಪರ ಕಲೆತು ಕೆಲಸ ಮಾಡುವ, ಊಟ ಮಾಡುವ ಇವರು, ಬೇರೆ ಬೇರೆಯಾಗಿಯೇ ನಾಟಕಗಳನ್ನು ಆಡುತ್ತಾರೆ. ಇವರು ರಾಮಾಯಣ ಮಾಡಿದರೆ ಇನ್ನೊಬ್ಬರು ಮಹಾಭಾರತ.
ಒಂದು ವರ್ಷವಂತೂ ಒಬ್ಬರು ರಾಜಾ ವಿಕ್ರಮನ ಕಥೆ ಮಾಡಿದರೆ ಇನ್ನೊಬ್ಬರು ರಾಜಾ ಸತ್ಯವ್ರತನ ಕಥೆ ಮಾಡಿದ್ದರು. ಎರಡೂ ಶನಿಗೆ ಸಂಬಂಧಿಸಿದ ಕಥೆಗಳೇ. ಆದರೆ ಈ ಊರವರಿಗೆ ವಕ್ಕರಿಸಿರುವ ಶನಿ ಮಾತ್ರ ಇನ್ನೂ ಬಿಟ್ಟಿಲ್ಲ. ಪ್ರತಿಬಾರಿ ನಾನು ಊರಿಗೆ ಹೋದಾಗಲೂ ಏನಾದರೊಂದು ಬೆಳವಣಿಗೆ ಈ ಜಾತಿಗಳ ನಡುವೆ ಆಗುವುದನ್ನು ಕೇಳುತ್ತಿರುತ್ತೇನೆ. ಮೊನ್ನೆ ಹೋದಾಗ ಒಕ್ಕಲಿಗರು ಜೀರ್ಣೋದ್ಧಾರ ಮಾಡಿದ ಈಶ್ವರ ದೇವಾಲಯದ ಉದ್ಘಾಟನೆಗೆ ಕುಂಬಾರರು ಹೋಗಿರಲಿಲ್ಲ. ನಾವೆಲ್ಲಾ ಒಂದೇ ಊರಿನವರು. ಒಟ್ಟಿಗೇ ಬಾಳುತ್ತಿರುವವರು. ನಾವೇಕೆ ಜಾತಿಯ ದೃಷ್ಟಿಯಿಂದ ಬೇರೆ ಬೇರೆ ಗುರುತಿಸಿಕೊಳ್ಳಬೇಕು? ಅದು ತಪ್ಪಲ್ಲವೇ? ಎಂದು ಇವರಿಗೇಕೆ ಅನ್ನಿಸುವುದೇಲ್ಲ. ನೂರಾರು ವರ್ಷಗಳಿಂದ ಇದೇ ರೀತಿ ಬಾಳುತ್ತಿರುವ ಈ ಜಾತಿಗಳ ನಡುವೆ ಒಂದೂ ಅಂತಾರ್ಜಾತಿ ವಿವಾಹವಾಗಿಲ್ಲವೇಕೆ? ಈ ಪ್ರಶ್ನೆಗಳು ನನಗೆ ಯಾವಾಗಲೂ ಕಾಡುತ್ತಿರುತ್ತವೆ. ಆದರೆ ತೇಜಸ್ವಿ ವ್ಯಕ್ತಿ ವಿಶಿಷ್ಟ ಸಿದ್ಧಾಂತದಲ್ಲಿಯೇ ಈ ಅಪಾಯವನ್ನು ಗುರುತಿಸಿದ್ದಾರೆ. ಜನಸಮುದಾಯಗಳಲ್ಲಿ ಈ ಜಾತೀಯತೆ ಎಂಬುದು ಆನುಷಂಗಿಕವಾಗಿಯೇ ಬರುವಂತದ್ದು. ದ್ವೇಷದಂತೆ ಜಾತೀಯತೆಯೂ ಸ್ಥಾಯಿಯಾಗಿ ನೆಲೆನಿಂತುಬಿಟ್ಟಿದೆ ಎನ್ನುತ್ತಾರೆ.
ಪರಂಪರೆ ಮತ್ತು ಕುವೆಂಪು ಎಂಬ ಲೇಖನದಲ್ಲಿ ತೇಜಸ್ವಿ ಇದನ್ನು ಇನ್ನೂ ಸ್ಪಷ್ಟ ಪಡಿಸುತ್ತಾರೆ. ಮನುಷ್ಯನ ಇತಿಹಾಸದಲ್ಲಿ ವರ್ಗವರ್ಗಗಳ ತಿಕ್ಕಾಟ ಹೇಗೆ ಚರಿತ್ರೆಯನ್ನು ರೂಪಿಸುತ್ತಾ ಹೋಗಿದೆಯೋ ಅದೇ ರೀತಿ ಮಾನವನ ಇತಿಹಾಸವನ್ನು ಜನಾಂಗಗಳ ನಡುವಿನ ಸಮರವನ್ನಾಗಿಯೂ ನೋಡಲು ಸಾಧ್ಯ. ಇದು ಜಾಗತಿಕ ಮಟ್ಟದಲ್ಲೂ ಸತ್ಯ. ಕನ್ನಡದ ಮಟ್ಟಿಗೂ ಸತ್ಯ. ಇದೆಲ್ಲವನ್ನು ಗಮನಿಸಿದಾಗ ನಾವು ಜಾತಿಯನ್ನು ನಿರ್ಮೂಲನೆ ಮಾಡಲು ಶ್ರಮವಹಿಸುವ ಬದಲು, ಪರಸ್ಪರ ಅರ್ಥಪೂರ್ಣ ಸಹಬಾಳ್ವೆಗೆ ಹೆಚ್ಚಿನ ಒತ್ತು ನೀಡುವುದೇ ಒಳ್ಳೆಯದು ಎಂಬ ಬಾವ ಮೂಡದಿರದು. ಆದರೆ ತೇಜಸ್ವಿ ಆಶಾವಾದಿ. ಅದರಲ್ಲೂ ಯುವಕರ ಬಗ್ಗೆ ಅವರಿಗೆ ಬೆಟ್ಟದಷ್ಟು ನಂಬಿಕೆ. ಇಂದಿನ ಜಾಗತೀಕರಣದ ಸನ್ನಿವೇಶದಲ್ಲಿ ಮುನ್ನುಗ್ಗುತ್ತಿರುವ ಯುವ ಸಮುದಾಯ, ಜಾಗತೀಕರಣದ ಹುಚ್ಚು ಹೊಳೆಯಲ್ಲಿ ಮಿಂದು, ಜಾತೀಯತೆಯ ಸೋಂಕನ್ನು ಪೂರ್ಣವಾಗಿ ಅಲ್ಲವಾದರೂ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳುತ್ತದೆ ಎಂದು ನಂಬುತ್ತಾರೆ.
ಜಾತೀಯತೆನ್ನು ಪ್ರತಿನಿಧಿಸುತ್ತಿರುವ ಮತ್ತು ಪ್ರತಿಪಾದಿಸುತ್ತಿರುವ ಮಠಗಳು
ಭಾರತದ ಇತರ ಬಾಗಗಳಲ್ಲಿ ಹೇಗೋ ಗೊತ್ತಿಲ್ಲ. ಆದರೆ ಕರ್ನಾಟಕದಲ್ಲಂತೂ ಜಾತಿಗೊಂದು ಮಠ ಇದ್ದೇ ಇದೆ. ಕಳೆದ ವರ್ಷವೋ ಅದರ ಹಿಂದಿನ ವರ್ಷವೋ ಮಾದಿಗ ಜನಾಂಗದವರೂ ಒಂದು ಮಠವನ್ನು ಸ್ಥಾಪಿಸಿಕೊಂಡರು. ಆಗ ಹಿರಿಯ ಸ್ವಾಮೀಜಿಯೊಬ್ಬರು ಪ್ರತಿಯೊಂದು ಜಾತಿಗೂ ಒಂದೊಂದು ಮಠದ ಅಗತ್ಯವಿದೆಯೆಂದು ಪ್ರತಿಪಾದಿಸಿದರು. ತೀರಾ ಇತ್ತೀಚಿನವರೆಗೂ ಮಠ ಇಲ್ಲದಿದ್ದ ಈಡಿಗ ಸಮುದಾಯ ಮೊನ್ನೆ ಮೊನ್ನೆ ಒಬ್ಬ ಸ್ವಾಮೀಜಿಯನ್ನು ನೇಮಿಸಿಕೊಂಡು, ಮಠ ಸ್ಥಾಪನೆ ಮಾಡಿದ್ದನ್ನು ನಾವು ನೋಡಿದ್ದೇವೆ. ನನಗೆ ಪರಿಚಯವಿರುವ ಈಡಿಗ ಸಮುದಾಯದ, ಪ್ರಗತಿಪರ ಮನಸ್ಸುಳ್ಳ ಒಬ್ಬ ಗೆಳೆಯರನ್ನು ನಾನು ಇಷ್ಟು ದಿನ ಏಕೆ ಸುಮ್ಮನಿದ್ದಿರಿ? ಎಂದು ಕೇಳಿದ್ದೆ. ಅದಕ್ಕೆ ಅವರು ಕೊಟ್ಟ ಉತ್ತರ ಹೀಗಿತ್ತು.
ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆಯೇ ನಮ್ಮ ಸಮಾಜದ ಕೆಲವರು ಮಠ ಸ್ಥಾಪನೆ ಮಾಡುವ ವಿಚಾರವಾಗಿ ಡಾ. ರಾಜ್ಕುಮಾರ್ ಅವರನ್ನು ಬೇಟಿಯಾಗಿದ್ದರು. ಆಗ ರಾಜ್ಕುಮಾರ್, ನೀವಿರುವ ಮನೆಯೇ ಮಠ, ನೀವೇ ಸ್ವಾಮೀಜಿ. ಎಲ್ಲರೂ ವಿಶ್ವಮಾನವರಾಗಬೇಕು ಎಂದು ಏನೇನೋ ಹೇಳಿದರಂತೆ. ಅದೊಂದೂ ಅರ್ಥವಾಗದ ನಮ್ಮ ಜನ ರಾಜ್ಕುಮಾರ್ ಅವರನ್ನು ಬಿಟ್ಟು ಮಠ ಮಾಡಿದರೆ ಅದಕ್ಕೆ ಹೆಚ್ಚಿನ ಜನಮನ್ನಣೆ ದೊರೆಯಲಾರದು ಎಂದು ಸುಮ್ಮನಾಗಿದ್ದರಂತೆ. ಇದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ ರಾಜಕುಮಾರ್ ನಿಧನರಾಗಿ ಎರಡು ವರ್ಷ ಕಳೆಯುವ ಮೊದಲೇ ಈಡಿಗ ಸಮುದಾಯಕ್ಕೆ ಮಠ ಮತ್ತು ಸ್ವಾಮೀಜಿ ಬಂದಿರುವುದು ನಿಜ.
ಇವೆಲ್ಲವನ್ನು ಗಮನಿಸಿದರೆ, ಭಾರತದ ಜನಜೀವನವನ್ನು ಜಾತಿಪದ್ಧತಿ, ಮತಾಂಧತೆ, ಅಸ್ಪೃಷ್ಯತೆ, ಮೂಡನಂಬಿಕೆ ಮೊದಲಾದ ಅನಿಷ್ಠ ಸಂಕೋಲೆಗಳಿಂದ ಹೊರತರಲು ಶ್ರಮಿಸಿದ್ದ ಭಾರತದ ಸೆಕ್ಯುಲರ್ ಸಮುದಾಯ ದುರ್ಬಲಗೊಂಡು ಮತ್ತೆ ಅದೇ ಅನಿಷ್ಠಗಳನ್ನು ಪ್ರತಿಪಾದಿಸುವ ಮಠಸಂಸ್ಕೃತಿಗೆ ಮನ್ನಣೆ ಸಿಕ್ಕುತ್ತಿದೆ ಎಂದಾಯಿತು. ತೇಜಸ್ವಿಯವರ ಚಿಂತೆಗೆ ಕಾರಣವಾಗಿರುವುದು ಜಾತಿಗೊಂದು ಮಠ ಸ್ಥಾಪನೆಯಾಗುತ್ತಿರುವುದಕ್ಕಲ್ಲ. ಆದರೆ ಆ ಮಠಗಳು ಅನುಸರಿಸುತ್ತಿರುವ ಪದ್ಧತಿಗಳ ಬಗ್ಗೆ. ಸನಾತನ ಧರ್ಮದ ಹೆಸರಿನಲ್ಲಿ ಬೇರೂರಿದ್ದ ಎಲ್ಲಾ ಅನಿಷ್ಟ ಪದ್ಧತಿಗಳನ್ನು ಮತ್ತೆ ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿರುವಂತೆ ಈ ಶೂದ್ರ ಮತ್ತು ದಲಿತ ಮಠಗಳು ಕಾರ್ಯ ನಿರ್ವಹಿಸುತ್ತಿರುವುದು ಆತಂಕದ ವಿಷಯ ಎನ್ನುತ್ತಾರೆ.
ಚಿದಂಬರ ರಹಸ್ಯ ಕಾದಂಬರಿಯಲ್ಲಿ ಸುಲೇಮಾನ್ ಬ್ಯಾರಿ ಕಡೆಯವರನ್ನು ಅಂದರೆ ಮಸೀದಿ ಗುಂಪನ್ನು ವಿರೋಧಿಸುವ ಏಕೈಕ ದೃಷ್ಟಿಯಿಂದ ಸಂಘಟಿತರಾಗಿ, ಮಸೀದಿಯ ಮೈಕಿಗಿಂತ ಜೋರಾಗಿ ಸುಪ್ರಬಾತ ಹಾಕುವ ವೆಂಕಟೇಶ್ವರ ಗುಂಪು ಅಂದರೆ ಸನಾತನವಾದಿಗಳಲ್ಲಿ ಶಿಕ್ಷಿತ ಸಮುದಾಯವೂ ಇರುವುದನ್ನು ಗಮನಿಸಬೇಕು. ಕಾಲೇಜಿನ ಪ್ರಾಂಶುಪಾಲರೇ ಅದರ ನೇತೃತ್ವ ವಹಿಸುವುದು ಗಾಬರಿ ಹುಟ್ಟಿಸುತ್ತದೆ. ಆದರೆ ಸೆಕ್ಯುಲರ್ ಮನಸ್ಥಿತಿಯ ಕೆಲವರ ಗುಂಪೂ ಅಲ್ಲಿ ಕಾರ್ಯನಿರ್ವಹಿಸುತ್ತದೆಯಾದರೂ, ಆಗುವ ಅನಾಹುತವನ್ನು ತಡೆಗಟ್ಟಲು ಅಸಾಧ್ಯವಾಗುತ್ತದೆ. ಚಿದಂಬರ ರಹಸ್ಯ ನಮ್ಮ ಅಧೋಮುಖ ಸಮಾಜದ ದುರಂತದ ಸಾಕ್ಷಿಚಿತ್ರ.
ಚಿದಂಬರ ರಹಸ್ಯ ಕಾದಂಬರಿಯಲ್ಲಿ ಇಡೀ ವ್ಯವಸ್ಥೆಯೇ ನಾಶವಾಗಿ ಹೊಸದೊಂದು ಹುಟ್ಟಿಬರಬೇಕು ಎನ್ನುವ ನಿರ್ಧಾರಕ್ಕೆ ಬಂದವರಂತೆ ತೇಜಸ್ವಿ ಗೋಚರಿಸುತ್ತಾರೆ. ಕಾಡು ನಾಶವಾಗಿ ಲಾಂಟಾನ ಕಳೆ ಬೆಳೆದಿರುವುದನ್ನು ಸಿದ್ದಪ್ಪ, ವಿಜ್ಞಾನಿ ಪಾಟೀಲರಿಗೆ ತೋರಿಸಿದಾಗ ಪಾಟೀಲರು ಹೇಳುವ ಮಾತುಗಳಿವು. ನೋ ನೋ. ಹೇಳ್ತೀನಿ ಕೇಳು. ಇಡೀ ಜೀವರಾಶಿ ಎಲ್ಲಾ ಸ್ಮಶಾನದಿಂದ್ಲೆ ಉದ್ಭವಿಸಿದ್ದು. ಕುದಿಯೋ ಭೂಗೋಲದ ಬೆಂಕಿ ಉಂಡೆಯಿಂದ.
ಈಗ ಲಂಟಾನ ಬಂದಿದೆಯಲ್ಲಾ ಅದು ಮಣ್ಣು ತೊಳೆದು ಹೋಗದ ಹಾಗೆ ಅದರ ಕಸಕಡ್ಡಿಗಳು, ಮಣ್ಣಿನ ಜೈವಿಕ ವಸ್ತುಗಳು ಸೂರ್ಯನ ಬಿಸಿಲಿಂದ ಸುಟ್ಟುಹೋಗದ ಹಾಗೆ ನೋಡಿಕೊಳ್ಳುತ್ತವೆ. ಅದರಡಿಯಿಂದಲೇ ಹೊನ್ನೆ ತೇಗ ನೇರಿಳೆ ಆಲ ಧೂಪ ಎಲ್ಲಾ ಮೊಳಕೆ ಒಡೆದು ಲಂಟಾನದ ಮುಳ್ಳಿನ ರಕ್ಷಣೆಯಲ್ಲಿ ಮೆಲ್ಲಗೆ ಅದರ ಮೇಲೆ ಪುಟಿಯುತ್ತವೆ. ಇವು ಮೇಲೆ ಬಂದು ಕೊಂಬೆಗಳಾಗಿ ಛತ್ರಿ ತರ ಬಿಚ್ಚಿಕೊಳ್ಳುತ್ತಲೂ ಕಾಡಿನ ನೆರಳು ಕೊಡಲಾರಂಭಿಸಿ ಲಂಟಾನ ನಶಿಸೋದಿಕ್ಕೆ ಆರಂಭವಾಗುತ್ತೆ. ಕೊನೆಕೊನೆಗೆ ಕಾಡಿಗೆ ಜಾಗ ಬಿಟ್ಟು ಲಂಟಾನ ವಿದಾಯ ಹೇಳುತ್ತೆ. ಆಮೇಲೆ ಆ ನೆರಳಲ್ಲಿ ಬರುವ ಗಿಡಗಳೇ ಬೇರೆ. ತರಗೆಲೆಗಳ ದಟ್ಟ ರಾಶಿಯಲ್ಲಿ ಕುಸಿದು ಬೀಳುವ ಲಂಟಾನವು ಸೇರಿ ಮಣ್ಣು ಫಲವತ್ತಾಗುತ್ತೆ ಎನ್ನುತ್ತಾರೆ.
ಈ ಮಾತು ಇಕಾಲಜಿಗೆ ಸಂಬಂಧಿಸಿದ್ದು. ಮನುಷ್ಯನೂ ಇಕಾಲಜಿಯ ಒಂದು ಭಾಗ. ತೇಜಸ್ವಿ ಇವೆರಡನ್ನೂ ಬೇರೆ ಬೇರೆಯಾಗಿ ಭಾವಿಸಿದವರೇ ಅಲ್ಲ. ನೀವು ಪರಿಸರ ರಕಸ್ಷಣೆಗೆ ತವಕ ಪಡ್ತಿರೋ ಹಾಗೇನೆ ಅನೇಕ ಅದೃಶ್ಯ ಶಕ್ತಿಗಳೂ ತವಕದಿಂದ ಕೆಲಸ ಮಾಡ್ತಿವೆ ಅನ್ನೋದನ್ನ ಮರೀಬ್ಯಾಡ ಎನ್ನುವ ಪಾಟೀಲರ ಮಾತಿನಲ್ಲಿ ಏನೇ ಆದರೂ ಏನೆಲ್ಲಾ ನಾಶವಾದರೂ ಸೃಷ್ಟಿ ಎಂಬುದು ನಿರಂತರ. ಅಂತಹುದಕ್ಕಾಗಿ ಈಗಿನ ದುರಂತ ನಡೆಯಲೇಬೇಕಾಗಿದೆ ಎಂಬ ಆಶಯವಿದೆ. ನಮಗೆ ಕಾಣ್ತದೆ! ಅವರಿಗೆ ಕಾಣ್ತದ? ಈ ಹೊಗೇಲಿ ಎಂದ ರಫಿಯ ಮಾತಿನಲ್ಲಿ ನಾಶ ಎಂಬುದು ನಿಶ್ಚಿತ ಅನ್ನಿಸುತ್ತದೆ. ಕೆಸರೂರು ಎಂಬ ಹೆಸರೇ ನಶಿಸುತ್ತಿರುವುದರ ಸಂಕೇತವಾಗಿರುವಂತೆ, ಹೊಸ ಹುಟ್ಟೊಂದರ ಮುನ್ಸೂಚನೆಯನ್ನೂ ಕೊಡುತ್ತದೆ.
ಹೀಗೆ ಎಲ್ಲಾ ಜಾತಿಯ ಮಠಗಳು ಸನಾತನಿಗಳಾಗುತ್ತಾ ಹೋದರೆ, ಮಠಗಳು, ಸಮಾಜ, ಜನಸಾಮಾನ್ಯರು ಜಾತೀಯತೆಯನ್ನು ಪೋಷಿಸುತ್ತಾ ಹೋದರೆ, ಭಾರತದ ಸೆಕ್ಯುಲರ್ ಮನಸ್ಥಿತಿಯ ಗತಿ ಏನಾಗಬೇಡ? ಯಾವುದರ ವಿರುದ್ದ ಶೂದ್ರರು ಸೆಟೆದು ನಿಂತಿದ್ದರೊ ಅದರ ಬಗ್ಗೆಯೇ ಮೃದುವಾದರೆಂದರೆ ಶುದ್ರರೂ ದಲಿತರೂ ಮತ್ತೆ ಸನಾತನಿಗಳ ಊಳಿಗಕ್ಕಿಳಿಯುವ ಸಾಧ್ಯತೆಯಿದೆ ಎಂದು ತೇಜಸ್ವಿ ಹೇಳಿದ್ದು ಈ ಅರ್ಥದಲ್ಲೆ. ಆದರೆ ಕೊನೆಗೆ ಅವರಿಗಿದ್ದ ಒಂದೇ ಒಂದು ಸಮಾಧಾನವೆಂದರೆ ತೀವ್ರತರವಾಗಿ ತಾಗುತ್ತಿರುವ ಜಾಗತೀಕರಣದ ಪರಿಣಾಮವಾಗಿ ಜಾತೀಯತೆ ಬೇರುಗಳು ಶಿಥಿಲವಾಗಬಹುದು ಎಂಬುದು. ಹಾಗಾಗಲಿ ಎಂಬುದೇ ಪ್ರತಿಯೊಬ್ಬ ತೇಜಸ್ವಿ ಓದುಗನ ಆಶಯವೂ ಕೂಡ ಆಗಿರುತ್ತದೆ. ಆದರೆ ವಸ್ತುಸ್ಥಿತಿ ಇದಕ್ಕೆ ತೀರಾ ಭಿನ್ನವಾಗಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮೆಟಿರ್ನಿಟಿ ಕಾಲಮ್ಮಿನಲ್ಲಿ ವರ ಮತ್ತು ವಧುವಿಗಾಗಿ ಜಾಹಿರಾತು ನೀಡುವವರಲ್ಲಿ ಶೇಕಡಾ ೯೦ಕ್ಕೂ ಹೆಚ್ಚು ಜನ ಜಾತಿಗೆ ಪ್ರಾಮುಖ್ಯತೆ ಕೊಟ್ಟಿರುತ್ತಾರೆ. ನಾನು ಮಾನಸಗಂಗೋತ್ರಿಯಲ್ಲಿ ಇದ್ದಾಗಲೇ, ಎಂ.ಸಿ.ಎ. ಮಾಡಿದ ನನ್ನ ಹಾಸ್ಟೆಲ್ ಮಿತ್ರರೊಬ್ಬರು ಐಟಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.
ಸಾಕಷ್ಟು ವಿದೇಶ ಪ್ರವಾಸ ಮಾಡಿರುವ ಇವರ ಸಂಬಳ ತಿಂಗಳಿಗೆ ಅರವತ್ತು ಸಾವಿರ ದಾಟುತ್ತದೆ. ಹೆಚ್ಚು ಕಡಿಮೆ ಇವರಷ್ಟೇ ವಿದ್ಯಾವಂತೆಯೂ, ರೂಪವತಿಯೂ ಆದ ಹುಡುಗಿಯೊಬ್ಬಳಿಂದ ಮದುವೆಯ ಪ್ರಪೋಸಲ್ ಬಂದಿತ್ತು. ಅವರಿಗೂ ಐದಂಕಿಯ ಸಂಬಳವಿತ್ತು. ನಮ್ಮ ಮಿತ್ರರ ತಂದೆ ತಾಯಿ ಅಣ್ಣಂದಿರೂ ಒಪ್ಪಿದ್ದರು. ಕೊನೆಗೆ, ತಮ್ಮದೇ ಜಾತಿಯ ಯಾವುದೋ ಉಪಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಮದುವೆ ಮುರಿದು ಬಿತ್ತು. ಅದಕ್ಕೆ ನಮ್ಮ ಸನ್ಮಾನ್ಯ ಮಿತ್ರರು ಕೊಟ್ಟ ಕಾರಣ ನಾವೇನೋ ಈವತ್ತು ಮಾಡಿಕೊಳ್ಳಬಹುದು. ಆದರೆ ಮುಂದೆ ನಮ್ಮ ಮಕ್ಕಳು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತೆ ಎಂಬುದಾಗಿತ್ತು. ತಮ್ಮ ನಂತರವೂ ಈ ಜಾತಿವ್ಯವಸ್ಥೆ ಹೀಗೇ ಇರುತ್ತದೆ; ಇರಬೇಕು ಎಂಬುದು ಕೆಲವರ ಆಸೆಯಿರುವಂತೆ ಕಾಣುತ್ತದೆ. ಇಂಥಹವರನ್ನು ನೋಡಿದಾಗ, ಜಾಗತೀಕರಣವನ್ನೂ ಈ ಜಾತೀಯತೆ ಅರಗಿಸಿಕೊಂಡುಬಿಡುತ್ತದೆ ಎಂದು ನನಗನ್ನಿಸುತ್ತದೆ.




Thanks avadhi, for getting articles on our beloved tejaswi….
ಪ್ರೀತಿಯ ಅವಧಿ
ನಮ್ಮ ಹಾಗೆ ನಿನಗೂ ತೇಜಸ್ವಿ ತುಂಬ ಇಷ್ಟ ಅಂತ ಗೊತ್ತಾಯಿತು.ಅದಕ್ಕೆ ಮೇಲಿಂದ ಮೇಲೆ ನೆನಪುಗಳ ಮಳೆ ಸುರಿಸುತ್ತಿದ್ದೀಯಾ.
ಸತ್ಯನಾರಾಯಣ ಸರ್ ನಿಮ್ಮ ಕಾರು ಹೇಗಿದೆ? ಅವಧಿಯಲ್ಲಿ ನಿಮ್ಮ ಲೇಖನ ಮಾಲೆ ಶುರುವಾಗಿದೆ ಸಂತೋಷ. ಈಗೀಗ ಅನ್ನಿಸತೊಡಗಿದೆ ತೇಜಸ್ವಿ ಬದುಕಿದ್ದಾಗ ಕೂಡ ಇಶ್ಟೊಂದು ಮಂದಿಯನ್ನು ಬರಹಗಾರರನ್ನಾಗಿ ಮಾಡಿರಲಿಲ್ಲ. ಆದರೆ ಅವರು ಹೋದ ನಂತರ ಅವರೊಡನೆಯ ಒಡನಾಟದ ನೆನಪುಗಳನ್ನ ಹಂಚಿಕೊಳ್ಳುವುದರ ಮೂಲಕವೇ ಎಷ್ಟೊಂದು ಮಂದಿ ಬೆಳಕಿಗೆ ಬರಲಾರಂಭಿಸಿದ್ದಾರೆ!.
ಹೌದು ತೇಜಸ್ವಿ ಯಾರನ್ನೂ ಬರಹಗಾರರಾಗಿ ಎಂದು ನೇರವಾಗಿ ಹೇಳಲೇ ಇಲ್ಲ. ಆದರೆ ಅವರ ಬರಹಗಳೇ ಆ ಕೆಲಸವನ್ನು ಸದ್ದುಗದ್ದಲವಿಲ್ಲದೆ ಮಾಡಿವೆ, ಮಾಡುತ್ತಿವೆ.ಕಾರು ಚೆನ್ನಾಗಿದೆ. ಧನ್ಯವಾದಗಳು
good one Satyanarayana
its nice to remember our Tejaswi and his ideology towards nature and casteism
Nice Post Keep posting….