ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನಷ್ಟು ತೇಜಸ್ವಿ: ಹೀಗಿತ್ತು ತೇಜಸ್ವಿ ಬರಹ ಧ್ವನಿ

 

ಡಾ ಬಿ.ಆರ್. ಸತ್ಯನಾರಾಯಣ

ಮಹಿಳಾ ಪರವಾದ ದ್ವನಿ

ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದ ಸಂವಾದದಲ್ಲಿ ಪ್ರೊ. ರಾಮದಾಸ್ ಅವರಿಗೆ ಮಹಿಳೆಯೊಬ್ಬರು ತೇಜಸ್ವಿಯವರ ಮಹಿಳಾ ಪರವಾದ ನಿಲುವುಗಳೇನು? ಎಂಬ ಪ್ರಶ್ನೆ ಕೇಳಿದ್ದರು. ರಾಮ್ದಾಸ್ ಅವರು ತೇಜಸ್ವಿಯವರ ಸಾಹಿತ್ಯವನ್ನು ಯಾವುದೇ ಇಸಂಗಳಿಂದಲೂ ಗುರುತಿಸುವುದು ಕಷ್ಟ. ಅವರ ಬರದಿದ್ದೆಲ್ಲವೂ ಒಂದು ರೀತಿಯಲ್ಲಿ ಅವರ ಆತ್ಮ ಕಥನವೇ. ಅದು ಪರಿಸರ ಸಾಹಿತ್ಯ, ಅನುವಾದ ಯಾವುದಾದರೂ ಅದು ತೇಜಸ್ವಿಯವರ ಅನುಭವದಿಂದಲೇ ಮೂಡಿ ಬಂದದ್ದಾಗಿರುತ್ತದೆ. ಅವರ ಒಟ್ಟು ಸಾಹಿತ್ಯದಲ್ಲಿ ಮಹಿಳಾಪರವಾದ ದ್ವನಿ ಗಟ್ಟಿಯಾಗಿಯೇ ಇದೆ. ಆದರೆ ತೇಜಸ್ವಿ ಎಲ್ಲೂ ನಾನು ಮಹಿಳಾ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಘೊಷಿಸುವುದಿಲ್ಲ ಅಷ್ಟೆ ಎಂದು ಹೇಳಿ ಸಾಕಷ್ಟು ಉದಾಹರಣೆಯನ್ನು ಕೊಟ್ಟಿದ್ದರು.

ಮಾತುಕತೆಯ ನಡುವೆಯೂ ತೇಜಸ್ವಿ ಮಹಿಳಾ ಸಬಲೀಕರಣದ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದುದ್ದನ್ನು ಹೇಳಿದ್ದರು. ಆದರೆ ಮೊನ್ನೆ ಮೊನ್ನೆ ನಡೆದ ಒಂದು ವಿಚಾರ ಸಂಕಿರಣದಲ್ಲಿ ಮಹಿಳಾ ಪ್ರಾಧ್ಯಾಪಕಿಯೊಬ್ಬರು ಕಿರಗೂರಿನ ಗಯ್ಯಾಳಿಗಳು ಕಥೆಯನ್ನು ಮಹಿಳಾ ಪರವಾದ ಕಥೆಯಾಗಿಸುವಲ್ಲಿ ತೇಜಸ್ವಿ ಎಡವಿದ್ದಾರೆ. ಸ್ವಲ್ಪ ಮಟ್ಟಿನ ಸಂಯಮ ವಹಿಸಿದ್ದರೆ ಇದೊಂದು ಮಹಿಳಾ ಪರವಾದ ದ್ವನಿಯೆತ್ತುವ ಒಳ್ಳೆಯ ಕಥೆಯಾಗಿ ಮೂಡಿ ಬರುತ್ತಿತ್ತು. ಅದರಲ್ಲಿ ಬರುವ ಎಲ್ಲಾ ಹೆಂಗಸರನ್ನು ಗಯ್ಯಾಳಿಗಳನ್ನಾಗಿ ಚಿತ್ರಿಸಿದ್ದಾರೆ ಎಂದು ಮುಂತಾಗಿ ಹೇಳಿದ್ದರು. ಇಲ್ಲಿ ನನಗಿರುವ ಸಮಸ್ಯೆಯಂದರೆ, ಒಬ್ಬ ಸಾಹಿತಿಯಿಂದ ನಾವು ಏನನ್ನು ನಿರೀಕ್ಷಿಸಬಹುದು.

ಒಳ್ಳೆಯ ಸಾಹಿತ್ಯವನ್ನಷ್ಟೇ. ಆದರೆ ಅದು ಹಾಗಿರಬೇಕು, ಹೀಗಿರಬೇಕು. ಅದನ್ನು ಬರೆಯಬಾರದಿತ್ತು. ಅಲ್ಲಿ ಸಂಯಮ ವಹಿಸಬೇಕಿತ್ತು ಎಂದು ನಿರ್ದೇಶಿಸಲು ಓದುಗರಾದ ನಮಗೆ ಸಾಧ್ಯವೇ? ಇದನ್ನು ಒತ್ತಟ್ಟಿಗಿಟ್ಟು ನೋಡಿದರೂ ಮೇಲಿನ ಮಾತಿಗೆ ನನ್ನ ಆಕ್ಷೇಪಣೆಗಳಿವೆ. ತೇಜಸ್ವಿ ಕಿರಗೂರಿನ ಗಯ್ಯಾಳಿಗಳು ಕಥೆಯಲ್ಲಿ ಸ್ತ್ರೀ ಪಾತ್ರಗಳ ಗಯ್ಯಾಳಿತನವನ್ನು ಚಿತ್ರಿಸಿರುವಂತೆಯೇ ಇತರ ಪುರುಷ ಪಾತ್ರಗಳ ಸೋಮಾರಿತನ, ಕೊಳಕು, ಅಸಹಾಯಕತೆ, ಕೇಡಿಗತನ, ಪೋಲಿತನ ಎಲ್ಲವನ್ನೂ ಚಿತ್ರಿಸಿದ್ದಾರೆ. ಬಲೇ ಗಾಂಚಲಿ ಮುಂಡೇರು, ಮಲೆ ಬಂದೋರಿಗೆ ನೆಲಾ ಕಾಣದಿಲ್ಲಂತೆ, ಸೊಕ್ಕಿ ನೆಣಾ ಉಕ್ತದೆ ಅವರ ಮೈಯಾಗೆ, ಒಬ್ಬೊಬ್ರೂ ಹತ್ತು ಹತ್ತು ಹಡಿಯೋ ಹಂಗೆ ಮಾಡಬೇಕು, ಪುರುಸೊತ್ತೇ ಕೊಡಬಾರ್ದುಲ. ಹಂಗಿದ್ರೆ ನೋಡಪ್ಪಾ ಈ ಹಾಳ್ಮುಂಡೇರನ್ನ ಹದ್ಬಸ್ತಿಗೆ ತರಬೌದು ಎನ್ನುವ ಮಾರನ ಮಾತಿಗೆ, ಸಿದ್ದನ ಉತ್ತರ ಹಂಗೇ ಮಾಡನ ತಗಾ ಎನ್ನುವುದು. ಮಾರನ ಮಾತಿನಲ್ಲಿ ಪುರುಷನ ಅಹಂಕಾರ, ದೌರ್ಜನ್ಯ, ದೌರ್ಬಲ್ಯ ಮೊದಲಾದವುಗಳು ವ್ಯಕ್ತವಾಗಿದ್ದರೆ, ಸಿದ್ದ ಹೇಳುವ ಮೂರೇ ಪದದಲ್ಲಿ ಗಂಡಸರ ಅಸಾಹಯಕತೆ ಪರಿಣಾಮಕಾರಿಯಾಗಿ ವ್ಯಕ್ತವಾಗುತ್ತದೆ.

ಇಷ್ಟರ ಮಟ್ಟಿಗೆ ಸ್ತ್ರೀ ಮತ್ತು ಪುರುಷರ ಸಹಜ ಗುಣಗಳನ್ನು ಚಿತ್ರಿಸಿದ್ದರೂ, ಕೇವಲ ಮಹಿಳಾ ಸಾಹಿತ್ಯದ ನೆಲೆಯಲ್ಲಿ ನಿಂತು ನೋಡಿದಾಗ ತೇಜಸ್ವಿ ನಮಗೆ ದಕ್ಕುವುದಿಲ್ಲ. ಜುಗಾರಿ ಕ್ರಾಸ್ನ ಗೌರಿಯಂತಹ ವಿಚಾರವಂತ ಹಾಗೂ ಧಾನಮ್ಮನಂತಹ ಗ್ರಾಮೀಣ ಮನೋಸ್ಥಿತಿಯ ಮಹಿಳೆಯರು ತೇಜಸ್ವಿಯಿಂದ ಸೃಸ್ಟಿಯಾಗಿದ್ದಾರೆ. ಅವನತಿ ಕಥೆಯ ಗೌರಿ, ಚಿದಂಬರ ರಹಸ್ಯದ ಜಯಂತಿಯರ ಮುಗ್ಧತೆಯನ್ನು ತೇಜಸ್ವಿ ಚಿತ್ರಿಸಿದ್ದಾರೆ. ಎಲ್ಲವಕ್ಕಿಂತ ಹೆಚ್ಚಾಗಿ ಕಿರಗೂರಿನ ಗಯ್ಯಾಳಿಗಳು ಕೃತಿಯನ್ನು ತಮ್ಮ ಆತ್ಮಗೌರವಕ್ಕಾಗಿ ಅವಿರತ ಹೋರಾಡುತ್ತಿರುವ ಎಲ್ಲ ಮಹಿಳೆಯರಿಗೆ ಅರ್ಪಿಸಿಬಿಟ್ಟಿದ್ದಾರೆ. ಇದೊಂದೇ ಸಾಲು ಸಾಕು ಅವರ ಸಮಷ್ಟಿ ಪ್ರಜ್ಞೆಯ ಸಾಕ್ಷಿಗೆ. ಬ್ರಾಂಡ್ ಮಾಡಬಹುದಾದ ಮಹಿಳಾ ಸಾಹಿತ್ಯವನ್ನು ತೇಜಸ್ವಿ ಸೃಷ್ಟಿಸಿಲ್ಲ. ಹಾಗೆಯೇ ಪುರುಷ ಸಾಹಿತ್ಯವನ್ನೂ ಅವರು ಸೃಷ್ಟಿಸಿಲ್ಲ. ಒಟ್ಟಾರೆ ಅವರದು ಬದುಕಿನ ಪರವಾದ ಸಾಹಿತ್ಯ.

ಪ್ರವೃತ್ತಿಪ್ರಿಯ ಶಿಕ್ಷಕ ಸಮುದಾಯ

ಅವರ ಮೊದಲ ಕಥೆ ಲಿಂಗ ಬಂದದಲ್ಲಿಯೇ ಒಂದು ವಾಕ್ಯ ಯಾವ ಪೂರ್ವಾಗ್ರಹ ಉದ್ದೇಶವೂ ಇಲ್ಲದೆ ಸಹಜವಾಗಿ ಬಂದಿದೆ. ಓದೋದಿಕ್ಕಿಂತ ತೊಟ್ಲು ತೂಗೋದೆ ಎಷ್ಟೋ ವಾಸಿ ಅಂತ. ಅಲ್ಲಿಂದ ಮುಂದೆ ಅಬಚೂರಿನ ಪೋಸ್ಟಾಫೀಸು ಕೃತಿಯ ಮುನ್ನುಡಿಯಲ್ಲಿ ಶಿಕ್ಷಕವರ್ಗದ ಆಶಾಡಭೂತಿತನವನ್ನು ವಿವೇಚಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಸಂದರ್ಶನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇಂದಿನ ಶಿಕ್ಷಣ ಕ್ಷೇತ್ರದ ಅದೋಗತಿಗೆ ಈ ಕೆಲವು ಮೇಸ್ಟರುಗಳ ಕೂಟವೇ ಕಾರಣ ಎಂಬ ಪ್ರಬಲ ನಂಬಿಕೆ ತೇಜಸ್ವಿಯವರಿಗಿತ್ತು. ಕನ್ನಡ ಮೇಸ್ಟ್ರುಗಳನ್ನು ಅವರು ಗುಜರಿಗಳು ಎಂದೇ ಮೂದಲಿಸುತ್ತಿದ್ದರು. ಈ ನಂಬಿಕೆ ನಿರಾಕಾರಣದಿಂದ ಬಂದಿದ್ದಲ್ಲ. ಅದಕ್ಕೆ ಅವರು ಕೊಡುವ ಕಾರಣಗಳೂ ತಗೆದುಹಾಕುವಂತಿಲ್ಲ.

ಶಿಕ್ಷಕ ಸಮುದಾಯದ ಬಗ್ಗೆ ಇಷ್ಟೊಂದು ಕಠೋರವಾಗಿರುವ ತೇಜಸ್ವಿಯವರ ಬಗ್ಗೆ ಯಾವ ಶಿಕ್ಷಕನೂ ದನಿಯೆತ್ತುವುದಿಲ್ಲ. ಅಲ್ಲಲ್ಲಿ ಇರುವ ಕೆಲವೊಂದು ಒಳ್ಳೆಯ ಆದರ್ಶಪ್ರಾಯ ಶಿಕ್ಷಕರು ತೇಜಸ್ವಿಯವರ ಬೆಂಬಲಕ್ಕೇ ನಿಂತುಬಿಡುತ್ತಾರೆ. ಸಾಹಿತ್ಯಕ್ಷೇತ್ರವನ್ನು ಗುತ್ತಿಗೆ ತಗೆದುಕೊಂಡಂತೆ ಮಾತನಾಡುವ ಅಧ್ಯಾಪಕ ಮಿತ್ರರು ಪಠ್ಯಪುಸ್ತಕ ರಚನೆ, ಪುಸ್ತಕ ಪ್ರಕಟಣೆ, ಪ್ರಸಾರಣೆ ಇವುಗಳನ್ನೂ ಬಿಟ್ಟಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಅಧ್ಯಾಪಕ ಮಿತ್ರರು ಇಂದು ಪಾಠ ಮಾಡುವುದಕ್ಕಿಂತ ರಿಜಿಸ್ಟ್ರಾರ್ ಆಗಿಯೋ, ಪ್ರಸಾರಂಗದ ಅಧಿಕಾರಿಯಾಗಿಯೋ, ಅಕಾಡೆಮಿಗಳ ಅಧ್ಯಕ್ಷರೋ ಸದಸ್ಯರೋ ಆಗಿ ಕಾರ್ಯ ನಿರ್ವಹಿಸುತ್ತಿರುವುದೇ ಹೆಚ್ಚು. ಸರ್ಕಾರದ ಯಾವ ಅಕಾಡೆಮಿಗಳಲ್ಲಿ ಮೇಸ್ಟರುಗಳಿಲ್ಲ ಹೇಳಿ.

ಇಂದು ಕನ್ನಡ ಸಂಸ್ಕೃತಿ ಇಲಾಖೆ, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮೊದಲಾದವುಗಳಲ್ಲಿ ರಿಜಿಸ್ಟ್ರಾರ್ ಆಗಿ ನಿಯೋಜಿತ ರಜೆಯ ಮೇಲೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇವರುಗಳಲ್ಲಿ ಹೆಚ್ಚಿನವರು ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವವರೇ ಇರುವುದು ಮಾತ್ರ ವಿಷಾದದ ಸಂಗತಿ. ಇಲ್ಲಿಯಾದರೂ ಇವರೆಲ್ಲಾ ಮಾಡುತ್ತಿರುವುದೇನು. ಅಕಾಡೆಮಿಗಳ ಆಶ್ರಯದಲ್ಲಿ ನಡೆಯುವ ಎಲ್ಲಾ ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮ ಕೃತಿಗಳನ್ನೋ ಅಥವಾ ತಮಗೆ ಬೇಕಾದವರ ಕೃತಿಗಳನ್ನು ಮೇಲೆತ್ತಲು ಪ್ರಯತ್ನಿಸುವುದು!. ಪ್ರಶಸ್ತಿಗಳಿಗೆ ವಶೀಲಿಬಾಜಿ ನಡೆಸುವುದು!!. ಜಿಲ್ಲಾ ಸಾಹಿತ್ಯ ಪರಿಷತ್ತೊಂದರ ಪದಾಧಿಕಾರಿಯಾಗಿದ್ದ ಯುವ ಉಪನ್ಯಾಸಕರೊಬ್ಬರು ಒಮ್ಮೆ ನನಗೆ ಸಿಕ್ಕು, ಬಿ.ಸಿ.ಎ. ಹುಡುಗರಿದ್ದರೆ ಹೇಳಿ. ನಮ್ಮವರೇ ಎಕ್ಸಾಮ್ ಚೀಫ್ ಆಗಿದ್ದಾರೆ. ಪಾಸ್ ಮಾಡಿಸಿಕೊಡುತ್ತಾರೆ. ನಿಮಗೂ ಕಮೀಷನ್ ಸಿಗುತ್ತದೆ ಎಂದಿದ್ದರು. ಅದೂ ಸಾಹಿತ್ಯ ಪರಿಷತ್ ಆವರಣದಲ್ಲೇ!. ಇವುಗಳೆನ್ನೆಲ್ಲಾ ನೋಡಿದರೆ, ಯಾರು ಎಲ್ಲೇ ಕೆಲಸ ಮಾಡಲಿ. ಪರಿಣಾಮ ಮಾತ್ರ ಒಂದೆ ಎನ್ನಿಸುತ್ತದೆ. ಎಲ್ಲವೂ ಅದೋಗತಿಗಿಳಿಯುತ್ತಿದೆ. ಗಂಗೋತ್ರಿಯಲ್ಲಿ ತೇಜಸ್ವಿ ಮಾಡಿದ ಭಾಷಣವನ್ನು ಕೆಲವರು ವಿರೋಧಿಸಿದ್ದು, ಕೆಲವರು ಸಭಾತ್ಯಾಗ ಮಾಡಿದ್ದು ಇದೇ ಕಾರಣಕ್ಕೆ. ಸತ್ಯವನ್ನು ಅರಗಿಸಿಕೊಳ್ಳುವಷ್ಟು ಆರೋಗ್ಯಕರ ಸಂಸ್ಕೃತಿ ನಮ್ಮಲ್ಲಿ ಇನ್ನೂ ನಿರ್ಮಾಣವಾಗಿಲ್ಲದಿರುವುದು ವಿಷಾದನೀಯ.

ಶಿಕ್ಷಣ ಮಾಧ್ಯಮ

ಇನ್ನು ಶಿಕ್ಷಣ ಮಾಧ್ಯಮದ ಬಗ್ಗೆ ಅವರದು ಸ್ಪಷ್ಟ ನಿಲುವು. ಶಿಕ್ಷಣ ಮಾದ್ಯಮ ಕನ್ನಡವೇ ಆಗಬೇಕು ಎಂಬುದು ತೇಜಸ್ವಿಯವರ ಅಚಲವಾದ ನಿಲುವು. ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಿಧನರಾಗುವವರೆಗೂ ಅದೇ ಅವರ ಮಂತ್ರವಾಗಿತ್ತು. ಅದಕ್ಕೆಂದೇ ಕನ್ನಡದಲ್ಲಿ ಎಲ್ಲಾ ವಿಷಯಗಳ ಪುಸ್ತಕಗಳೂ ಸಿಗಬೇಕು ಎಂದು ಮಿಲೆನಿಯಂ ಸರಣಿಯನ್ನು ಸಿದ್ದಪಡಿಸಿದರು. ವಿವಿಧ ವಸ್ತು ವಿಷಯದ ಪುಸ್ತಕಗಳು ಬರಬೇಕೆಂದು ಆಶಿಸಿದರು. ಬಹುಶಃ ಇಂಗ್ಲೀಷನ್ನು ಅವರಷ್ಟು ದ್ವೇಷಿಸಿದ್ದ ವಿದ್ಯಾರ್ಥಿ ಇನ್ನೊಬ್ಬನಿರಲಾರನು.

ನಾವೆಲ್ಲಾ ಇಂಗ್ಲಿಷ್ನಲ್ಲಿ ಕೇವಲ ೩೫ ಅಂಕಗಳನ್ನು ತಗೆದುಕೊಂಡು ಪಾಸದವರೇ. ಆದ್ದರಿಂದ ತೇಜಸ್ವಿವರಿಗಾದ ಅನುಭವ ನಮಗೂ ಆಗಿದೆ. ಆದರೆ ಇತ್ತೀಚಿಗೆ ಇಂಗ್ಲೀಷ್ ಬೇಕೆ ಬೇಡವೇ ಎಂಬ ವಿಷಯ ಬಂದಾಗ ರಾತ್ರೋರಾತ್ರಿ ತೇಜಸ್ವಿಯವರನ್ನು ಕನ್ನಡ ವಿರೋಧಿಯಂತೆ ಚಿತ್ರಿಸಲಾಯಿತು. ಸ್ವತಃ ಚಂಪಾ ಅವರೇ ತೇಜಸ್ವಿಯವರನ್ನು ಮೂದಲಿಸಿ ಕಾಗದ ಬರೆದರು. ಆದರೆ ಯಾವುದೇ ಭಾವೋದ್ವೇಗಕ್ಕಳಗಾಗದೇ ತೇಜಸ್ವಿಯವರು ಕೊಟ್ಟ ಉತ್ತರ ಎಲ್ಲರ ಕಣ್ಣು ತೆರೆಸಿತ್ತು. ಹಿಂದೆ ಸಂಸ್ಕೃತವನ್ನು ಬಹುಸಂಖ್ಯಾತರಿಂದ ದೂರವಿಟ್ಟಿದ್ದ ಮನಸ್ಸುಗಳೇ ಇಂದೂ ಇಂಗ್ಲೀಷನ್ನು ಬಹುಸಂಖ್ಯಾತರಿಂದ ದೂರವಿಡುವ ಹುನ್ನಾರ ಎಲ್ಲರಿಗೂ ಅರ್ಥವಾಗುವಂತದ್ದೆ. ಈ ಹಿಂದೆಯೂ ಕುವೆಂಪು ಅವರನ್ನು ಇಂಗ್ಲಿಷ್ ಪರ-ವಿರೋಧಿಯಂತೆ ಚಿತ್ರಿಸಿದ್ದನ್ನು ನಾವು ನೋಡಿದ್ದೇವೆ.

ಮೌನವೇ ಉತ್ತರ

ಇಲ್ಲೇ ಇನ್ನೊಂದು ವಿಷಯವನ್ನು ಪ್ರಸ್ತಾಪಿಸಬಹುದು. ವಿಜಯಮೋರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿಬಳಿದ ಪ್ರಕರಣದ ಬಗ್ಗೆ ಸಿನಿಮಾ ಬುದ್ದಿಜೀವಿಯೊಬ್ಬರು ವಾಚಕರ ವಾಣಿಯಲ್ಲಿ ಬರೆದಿದ್ದರು. ಮಸಿ ಬಳಿಯದೆ ಫೇರ್ ಅಂಡ್ ಲೌವ್ಲಿ ಹಚ್ಚಬೇಕಾ? ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ದೂರದ ಕಾಫಿತೋಟದಲ್ಲಿ ಬೆಚ್ಚಗೆ ಮನೆಯಲ್ಲಿ ಕುಳಿತಿರುವ ತೇಜಸ್ವಿ, ಕನ್ನಡಕ್ಕೆ ಕಡಿದು ಕಟ್ಟೆ ಹಾಕಿರುವುದೇನು? ಎಂದು ಪ್ರಶ್ನಿಸಿದ್ದರು. ಇದಕ್ಕೆ ತೇಜಸ್ವಿಯವರು ಉತ್ತರಿಸುತ್ತಾರೆ ಎಂದು ನಾವೆಲ್ಲಾ ಕಾದಿದ್ದೆವು. ಕೊನೆಗೆ ತಡೆಯಲಾಗದೇ ನಾವೇ ವಾಚಕರ ವಾಣಿಗೆ ಪತ್ರ ಬರೆದು ಬುದ್ಧಿಜೀವಿಗಳನ್ನು ಖಂಡಿಸಿದೆವು ಕೂಡಾ. ಆದರೆ ಈಗ, ತೇಜಸ್ವಿಯವರ ಮೌನವೇ ಅರ್ಥಪೂರ್ಣವಾಗಿತ್ತು ಎನ್ನಿಸುತ್ತದೆ. ಇರಲಿ.

ಆದರೆ ಬೆಂಗಳೂರಿನಲ್ಲಿ ನಡೆದ ಒಂದು ಸಮಾರಂಭದ ನಂತರ ತೇಜಸ್ವಿಯವರ ಗಮನಕ್ಕೆ ಈ ಹೇಳಿಕೆಯನ್ನು ತರಲಾಯಿತು. ನೋಡ್ರಿ. ನಾನು ಕನ್ನಡಕ್ಕೆ ಏನು ಮಾಡಿಲ್ಲ. ನಿಜ. ಆದರೆ ಅನ್ಯಾಯವನ್ನೂ ಮಾಡಿಲ್ಲ ಎಂದು ತಣ್ಣಗೆ ಉತ್ತರಿಸಿದರು. ಇದು ತೇಜಸ್ವಿಯವರ ದೊಡ್ಡತನ. ಆದರೆ ಈಗ, ನನಗನ್ನಿಸಿದ್ದು, ಆ ಬುದ್ದಿಜೀವಿಗಳಿಗೆ ತೇಜಸ್ವಿಯವರ ಕನ್ನಡ ಪ್ರೇಮವನ್ನು ಪ್ರಶ್ನಿಸುವುದಕ್ಕಿಂತ ಹೆಚ್ಚಾಗಿ ಬೇರೊಂದು ಉದ್ದೇಶ ಇತ್ತೇನೋ ಎಂದು. ನಾವೆಲ್ಲಾ ಇಲ್ಲೇ ವಿಧಾನಸೌಧದ ಮೆಟ್ಟಿಲ ಮೇಲೆಯೇ ಇರುವಾಗ ಅವನೊಬ್ಬ ಅಲ್ಲಿ ದೂರದಲ್ಲಿ ಸ್ವಚ್ಚಂದವಾಗಿ ಬದುಕುತ್ತಿದ್ದಾನಲ್ಲ. ಅವನೂ ಇಲ್ಲಿಗೇ ಬಂದರೆ ಆಗ ನಮ್ಮನ್ನೂ ಯಾರೂ ದೂರುವುದಿಲ್ಲ ಎಂಬ ದು(ದೂ)ರಾಲೋಚನೆ ಇತ್ತು ಎಂದು ನನಗನ್ನಿಸಲು ಕಾರಣ, ಕಾಫಿ ತೋಟದ ಮನೆಯಲ್ಲಿ ಬೆಚ್ಚಗೆ ಕುಳಿತಿರುವ ಎಂಬ ಅಡ್ಡಮಾತು.

ಸಮೂಹ ಮಾಧ್ಯಮಗಳ ರಾಜಕೀಯ

ಸಮೂಹ ಮಾಧ್ಯಮಗಳ ಬಗ್ಗೆ ತೇಜಸ್ವಿಯವರಿಗಿದ್ದ ನಿಲುವುಗಳೇನು ಎಂಬುದನ್ನು ಗಮನಿಸಬಹುದಾಗಿದೆ. ಮಾಧ್ಯಮಗಳೂ ಇಂದು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಅದಕ್ಕೆ ನಮ್ಮ ವ್ಯವಸ್ಥೆ ಎಷ್ಟು ಕಾರಣವೋ ಸ್ವತಃ ಮಾಧ್ಯಮಗಳೂ ಅಷ್ಟೇ ಕಾರಣ. ತಮಗೆ ಬೇಕಾದವರ, ತಮಗೆ ಬೇಕಾದ ಸರ್ಕಾರಗಳಿಗೆ ಅನುಕೂಲವಾಗುವಂತಹ ಸುದ್ದಿಗಳನ್ನು ಹೆಚ್ಚು ಜನರಿಗೆ ತಲುಪುವಂತೆ ಮುಖಪುಟಗಳಲ್ಲಿ ಮುದ್ರಿಸುವುದು. ತಮಗೆ ಬೇಡವಾದವುಗಳನ್ನು ಇನ್ನೆಲ್ಲೋ ಸಣ್ಣದಾಗಿ ಮುದ್ರಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಕನ್ನಡದ ಪ್ರಮುಖ ದಿನಪತ್ರಿಕೆಯೊಂದು ಅದರ ಮಾಲೀಕರು ಸೇರುವ ಪಕ್ಷಗಳೆಲ್ಲವನ್ನು ಒಳ್ಳೆಯ ಪಕ್ಷಗಳೆಂದು, ಅವರು ಬಿಟ್ಟು ಬಂದ ಪಕ್ಷಗಳು ಭ್ರಷ್ಟಪಕ್ಷಗಳು ಎನ್ನುವಂತೆ ಬರೆಯುತ್ತಿರುವುದನ್ನು ನೋಡುತ್ತಿದ್ದೇವೆ. ಆ ಮಹಾನುಭಾವರು ಈಗಾಗಲೇ ನಾಲ್ಕನೇ ಪಕ್ಷದಲ್ಲಿದ್ದಾರೆ.

ಅಣ್ಣನ ನೆನಪು ಕೃತಿಯಲ್ಲಿ ತೇಜಸ್ವಿ ಬೂಸಾ ಪ್ರಕರಣದ ಉದಾಹರಣೆಯನ್ನು ಕೊಡುತ್ತಾರೆ. ಬಸವಲಿಂಗಪ್ಪನವರ ಮೇಲೆ ದ್ವೇಷವಿದ್ದ ಸುದ್ದಿ ಮಾಧ್ಯಮದ ಸನಾತನಿಗಳೆಲ್ಲಾ ಒಟ್ಟಾಗಿ ಕನ್ನಡ ಚಳುವಳಿಯವರನ್ನು ಸಣ್ಣಪುಟ್ಟ ಸಾಹಿತಿಗಳನ್ನು ಉದ್ರೇಕಿಸಿ ಪತ್ರಿಕೆಗಳ ಮುಖಪುಟದಲ್ಲಿ ಬಸವಲಿಂಗಪ್ಪನವರ ಹೇಳಿಕೆಗಳನ್ನು ಪ್ರಕಟಿಸಿ ಚಿತಾವಣೆ ಆರಂಭಿಸಿದರು. ಕನ್ನಡದ ಎರಡು ಪ್ರಮುಖ ದಿನಪತ್ರಿಕೆಗಳ ಸಂಪಾದಕ ವರ್ಗದವರು ಎಷ್ಟು ವ್ಯವಸ್ಥಿತವಾಗಿ ಈ ಕೆಲಸ ಮಾಡಿದರೆಂದರೆ ಇದರ ವಿರುದ್ದ ಎಲ್ಲೆಲ್ಲೋ ನಡೆದ ಪುಡಿ ಪ್ರತಿಭಟನೆಗಳೆನ್ನೆಲ್ಲಾ ಮುಖಪುಟದಲ್ಲಿ ದಪ್ಪಕ್ಷರದಲ್ಲಿ ಪ್ರಕಟಿಸತೊಡಗಿದರು. ಬಸವಲಿಂಗಪ್ಪನವರ ಪರವಾಗಿ ದೊಡ್ಡ ದೊಡ್ಡ ಸಾಹಿತಿಗಳೆಲ್ಲ ಕೊಟ್ಟ ಹೇಳಿಕೆಗಳನ್ನು, ನಡೆದ ಸಭೆಗಳನ್ನು ಅವರು ಪ್ರಕಟಿಸಲೇ ಇಲ್ಲ.

ಬೂಸಾ ಪ್ರಕರಣವು ಕುವೆಂಪು ಅವರ ಹೇಳಿಕೆಯಿಂದ ತೀವ್ರವಾಗುವಂತೆ ಮಾಡಿದ್ದ ಪತ್ರಿಕೆಗಳು, ಅದಕ್ಕೆ ಕುವೆಂಪು ನೀಡಿದ್ದ ಸ್ಪಷ್ಟೀಕರಣವನ್ನು ಮಾತ್ರ ಪ್ರಕಟಿಸದೆ, ಪ್ರಕರಣದ ತೀವ್ರತೆ ಇಳಿಮುಖವಾಗದಂತೆ ನೋಡಿಕೊಂಡ ಪ್ರಕರಣವನ್ನು ತೇಜಸ್ವಿ ದಾಖಲಿಸಿದ್ದಾರೆ. ಸ್ವತಃ ತೇಜಸ್ವಿ ಮತ್ತು ಸಮಾನಮನಸ್ಕರು ಬಸವಲಿಂಗಪ್ಪನವರನ್ನು ಬೆಂಬಲಿಸಿ ನೀಡಿದ ಪತ್ರಿಕಾ ಹೇಳಿಕೆಗಳನ್ನು ಹಾಗೂ ನಡೆಸಿದ ಸಭೆಗಳ ವರದಿಯನ್ನು ಯಾವ ಪತ್ರಿಕೆಯೂ ಪ್ರಕಟಿಸಲಿಲ್ಲ. ಈ ಯಾವ ರಾಜಕೀಯವೂ ಗೊತ್ತಿರದ, ಪಿಯುಸಿ ಓದುತ್ತಿದ್ದ ನಮ್ಮ ಮನೋಭಿತ್ತಿಯಲ್ಲಿಯೂ ನಮ್ಮ ಮೇಸ್ಟ್ರು, ಬಸವಲಿಂಗಪ್ಪನವರನ್ನೇ ವಿಲನ್ ಎನ್ನುವಂತೆ ಬಿಂಬಿಸಿದ್ದರು. ಇವೆಲ್ಲದರ ಪರಿಣಾಮ, ಬಸವಲಿಂಗಪ್ಪನವರು ರಾಜಿನಾಮೆ ಕೊಡುವಷ್ಟರ ಮಟ್ಟಿಗೆ ಸನಾತನವಾದಿಗಳು ನೋಡಿಕೊಂಡರು. ಅದಕ್ಕೆ ಅವರು ಬಳಸಿಕೊಂಡಿದ್ದು ಮತ್ರ ದಲಿತ ಮತ್ತು ಶೂದ್ರವರ್ಗದವರನ್ನೇ ಎಂಬುದು ಮಾತ್ರ ವಿಷಾದನೀಯ.

ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು

ತೇಜಸ್ವಿಯವರದು ಅವರೇ ಹೇಳುವಂತೆ ಸಂಶ್ಲೇಷಣೆ ಮತ್ತು ವಿಶ್ಲೇಷಣೆ ವಿಧಾನ. ತೇಜಸ್ವಿ ಒಂದು ಸಮಸ್ಯೆಯನ್ನು ಅದು ಯಾವುದೇ ಆದರೂ ಅನೇಕ ಆಯಾಮಗಳಿಂದ ಪರಿಶೀಲಿಸುತ್ತಿದ್ದರು. ಕೇವಲ ಕೋಮುವಾದದ ಹಿನ್ನೆಲೆಯಲ್ಲಿ ನೋಡುತ್ತಿದ್ದ ಗೋಹತ್ಯೆ ನಿಷೇಧವನ್ನು ತೇಜಸ್ವಿ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿಂದ ನೋಡಿದ್ದಾರೆ. ವಾಜಪೇಯಿವರಿಗೊಂದು ಬಹಿರಂಗ ಪತ್ರ ಬರೆದ ತೇಜಸ್ವಿ ಆದರಲ್ಲಿ ಗೋಹತ್ಯೆಯನ್ನು ನಿಷೇಧ ಮಾಡುವುದರಿಂದ ಆಗಬಹುದಾದ ಸಾಮಾಜಿಕ ದುಷ್ಪರಿಣಾಮಗಳು, ಅಶಾಂತಿ ಮತ್ತು ಆರ್ಥಿಕ ಅಸಮತೋಲನವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು.

ಇಂದು ರೈತರಿಗೆ ಆದಾಯ ಎಂಬುದೇ ಮರೀಚಿಕೆಯಾಗಿರುವಾಗ, ಮುದಿಯಾದ ಹಾಗೂ ಕೆಲಸಕ್ಕೆ ಯೋಗ್ಯವಲ್ಲದ ಜಾನುವಾರುಗಳನ್ನು ಇಟ್ಟುಕೊಂಡು ಮತ್ತಷ್ಟು ನಷ್ಟಕ್ಕೆ ಒಳಗಾಗಬೇಕೆ? ಅವುಗಳನ್ನು ಮಾರಬಹುದು ಎಂದಾದರೆ ಯಾರಿಗೆ ಮಾರಿದರೇನಂತೆ. ಸಾಬರಿಗೆ ಮಾರಿದರೆ ಕೊಲ್ಲುತ್ತಾರೆ ಎಂಬ ಕಾರಣಕ್ಕೆ ಮಾರದಿದ್ದರೆ, ಮುದಿ ದನಗಳ ಸಂಖ್ಯೆಗೆ ನಿಯಂತ್ರಣವೇ ಇಲ್ಲದಂತಾಗುತ್ತದೆ. ಮೇವು ಸಮಸ್ಯೆ ಎದುರಾಗುತ್ತದೆ. ಜಾಗದ ಹಾಗೂ ಜಾನುವಾರುಗಳನ್ನು ನೋಡಿಕೊಳ್ಳಲು ಬೇಕಾದ ಮಾನವಸಂಪನ್ಮೂಲದ ಅಪವ್ಯವಯವೂ ಆಗುತ್ತದೆ. ಅವುಗಳನ್ನು ಮಾರದೇ ಧರ್ಮಬುದ್ಧಿಯಿಂದ ಎಲ್ಲಾದರೂ ಬದುಕಿಕೊಳ್ಳಲಿ ಎಂದು ಹಾಗೇ ಬೀದಿಗೆ ಬಿಟ್ಟು ಬಿಟ್ಟರೆ ಅವುಗಳ ಸಂಖ್ಯೆ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂದರ್ಭ, ಅವುಗಳಿಂದ ಸಾಮಾಜಿಕ ಜನಜೀವನದ ಮೇಲೆ ಆಗಬಹುದಾದ ಪರಿಣಾಮ ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿದ್ದರು.

ಗೋಮಾಂಸ ಭಕ್ಷಣೆಯನ್ನು ನಿಷೇಧಿಸುವುದರಿಂದ ಬೇರೆ ರೀತಿಯ ಮಾಂಸಕ್ಕೆ ಹಾಗೂ ತರಕಾರಿಗಳಿಗೆ ಉಂಟಾಗುವ ಬೇಡಿಕೆ, ಅದರ ಪೂರೈಕೆಯಲ್ಲಾಗುವ ಗುಣಮಟ್ಟದ ಏರಿಳಿತ ಮೊದಲಾದವುಗಳ ಬಗ್ಗೆಯೂ ಗಮನ ಹರಿಸಿದ್ದರು. ಇದು ಒಂದು ಉದಾಹರಣೆ ಮಾತ್ರ. ತೇಜಸ್ವಿಯವರು ಬದುಕನ್ನು ನೋಡುತ್ತಿದ್ದ ರೀತಿಯೇ ಆಗಿತ್ತು. ಅಣ್ಣನ ನೆನಪು ಕೃತಿಯಲ್ಲಿನ ಸ್ಕೂಟರ್ ರಿಪೇರಿ ಅಧ್ಯಾಯದಲ್ಲಿ ವ್ಯಕ್ತವಾಗು ತೇಜಸ್ವಿಯವರ ಮನೋಭಾವ ಅತ್ಯಂತ ವಿಭಿನ್ನವಾದದ್ದು. ನಮಗೆ ತಲಪುವ ಗುರಿ ಮುಖ್ಯವಾಗಿದ್ದರೆ, ಅವರಿಗೆ ನಡೆಯುವ ದಾರಿಯೂ ಮುಖ್ಯವಾಗಿತ್ತು. ಅವರ ಏಕೈಕ ಪ್ರವಾಸ ಬರಹ ಎನ್ನಬಹುದಾದ ಅಲೆಮಾರಿಯ ಅಂಡಮಾನ್ನಲ್ಲಿಯೂ ಅವರು ಅಂಡಮಾನಿನ ಜನಪ್ರಿಯ ಸ್ಮಾರಕಗಳಿಗಿಂತ ಹೆಚ್ಚಾಗಿ ಗಮನಿಸಿದ್ದ ಅಲ್ಲಿಯ ಇಕಾಲಜಿಯನ್ನು. ಅದನ್ನು ಓದಿದ ಒಬ್ಬರು ಏನ್ರಿ, ಮೀನು ಹಿಡಿಯಲು ತೇಜಸ್ವಿ ಅಂಡಮಾನಿಗೆ ಹೋಗಬೇಕಿತ್ತಾ ಎಂದು ತಮಾಷೆ ಮಾಡಿದ್ದರು.

ಸ್ವಂತ ಬದುಕು; ಸ್ವಂತ ಚಿಂತನೆ – ಇದು ತೇಜಸ್ವಿಯವರ ಮಂತ್ರ

ತೇಜಸ್ವಿಯವರ ವೈಚಾರಿಕ ಚಿಂತನೆ ಸ್ವಂತಿಕೆಯದು. ಅದು ಯಾರಿಂದಲೂ ಎರವಲು ಪಡೆದಿದ್ದಲ್ಲ. ಅಬಚೂರಿನ ಪೋಸ್ಟಾಫೀಸು ಕೃತಿಯ ಮುನ್ನುಡಿಯಲ್ಲಿ ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನ ದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಮವನ್ನುಂಟು ಮಾಡಿರುವುವು ಎಂದು ಹೇಳಿದ್ದರೂ, ನಂತರದ ವರ್ಷಗಳಲ್ಲಿ ಈಗ ಅವರ್ಯಾಹರೂ ಪ್ರಸ್ತುತರಲ್ಲ ಎನ್ನುವ ಮಾತುಗಳನ್ನು ತೇಜಸ್ವಿ ಹೇಳಿದ್ದರು. ಹಾಗೆಂದು ಸುಮ್ಮನೆ ಕುಳಿತುಕೊಳ್ಳದೆ ಹೊಸಹೊಸ ಮಾರ್ಗಗಳ ಅನ್ವೇಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಡಿದ್ದವರು. ಅದು ಅವರ ಬದುಕಿನ ಹಾಗೆಯೇ ಸಮೃದ್ಧವಾದುದ್ದು.

ಇಲ್ಲಿಯೂ ತೇಜಸ್ವಿಯವರದ್ದು ಸರ್ವತೋಮುಖವಾದ ಹಾಗೂ ಸಮಷ್ಠಿಪರವಾದ ನಿಲುವು. ಇತರರೂ ತನ್ನಂತೆಯೇ ಅವರದೇ ಆದ ಯೋಚನೆಗಳನ್ನು ನೆಚ್ಚಿಕೊಳ್ಳಬೇಕು. ಅವರದೇ ಆದ ಬದುಕನ್ನು ಕಟ್ಟಿಕೊಳ್ಳಬೇಕು. ಬೇರೆಯವರಿಗೋಸ್ಕರ ಬದುಕುವವನಿಗೆ, ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಅಂಜಿಕೆ ಇರುವವನಿಗೆ ಸ್ವಂತಿಕೆಯಿರತಲಾರದು, ಸ್ವತಂತ್ರವೂ ಇರದು ಎಂಬ ಆಶಯವನ್ನು ಹೊಂದಿರುವವರು.

ಮನುಷ್ಯನ ಬದುಕು, ಪ್ರಯತ್ನ, ಕಾರ್ಯವಿಧಾನ ಎಲ್ಲವೂ ಪರಿಸರದಿಂದಲೇ ನಿಯಂತ್ರಿತವಾಗುತ್ತಿರುತ್ತವೆ ಎಂಬ ನಂಬಿಕೆಯಿಂದ ತೇಜಸ್ವಿ ಮಾಯಾಲೋಕದಲ್ಲಿ ದೃಶ್ಯಕಾವ್ಯವನ್ನೇ ತೆರೆದಿಟ್ಟಿದ್ದಾರೆ. ಮಳೆಯ ವಿಷಯವನ್ನು ಪ್ರಸ್ತಾಪಿಸದೇ ಕೇವಲ ರೈತ ಚಳುವಳಿಯ ಬಗ್ಗೆ ಪ್ರಕಾಶವಾಣಿ ಪತ್ರಿಕೆಗೆ ವರದಿ ಬರೆಯುವ ಕರಾಟೆ ಮಂಜನಿಗೆ ಹಂಗಾದರೆ ಇದ್ದಕ್ಕಿದ್ದಂತೆ ಆಕಾಶ ಕಪ್ಪಾಗಿ ದೋರ್ದಂಡ ಮಳೆ ಹಿಡಿದುಕೊಂಡಿದ್ದು, ರೈತಸಂಘದವರ ರಸ್ತೆರೋಕೊಗೆ ಆಸ್ಪದ ಕೊಡದೆ ಮಳೆಯೇ ಅವರ ಕೆಲಸ ಮಾಡಿದ್ದು, ಒಂದೇ ಮಳೆಗೆ ನಿನ್ನೆಯ ಸಮಸ್ಯೆಗಳೆಲ್ಲಾ ಅಪ್ರಸ್ತುತವಾಗಿದ್ದು ಇವ್ಯಾವುವೂ ನಿನ್ನ ದೃಷ್ಟಿಯಲ್ಲಿ ಸುದ್ದಿಯೇ ಅಲ್ಲವಾ? ಎಂದು ಕೇಳುತ್ತಾರೆ. ಆಗ ಕರಾಟೆ ಮಂಜ ಹಂಗಾದರೆ ಇದನ್ನೆಲ್ಲಾ ವರದಿಯಲ್ಲಿ ಬರೀಬೌದ? ಪ್ರಕಾಶಣ್ಣ ರೈತ ಚಳುವಳಿ ಬಿಟ್ಟು ಇದನ್ನೆಲ್ಲಾ ಬರ್ದಿ್ದ್ದೀಯಾ ಅಂದರೆ? ಎಂದು ಕೇಳುತ್ತಾನೆ. ಆಗ ತೇಜಸ್ವಿ ಹೇಳುವ ಮಾತುಗಳು ಮೇಲೆ ಬುದ್ಧ ಹೇಳಿದ ಮಾತುಗಳಿಗೆ ಸಂವಾದಿಯಾಗಿ ನಿಲ್ಲುತ್ತವೆ. ಅವನು ಏನಾದರೂ ಅಂದುಕೊಳ್ಳಲಿ.

ಬೇಕಾದರೆ ಪ್ರಕಟಿಸಲಿ, ಬೇಡದಿದ್ದರೆ ಬಿಡಲಿ. ಇಲ್ಲಿ ಮುಖ್ಯ ನೀನು ಹೇಗೆ ಯೋಚನೆ ಮಾಡ್ತೀಯ ಅನ್ನೋದು ಎನ್ನುತ್ತಾರೆ. ಹಾಗೇ ಚಿದಂಬರ ರಹಸ್ಯದಲ್ಲಿ ಜಯರಾಮ ಹೇಳುವ ಈಗ ನಾವೆಲ್ಲಾ ನಮಗೆ ಹೇಗನ್ನಿಸುತ್ತದೋ ಹಾಗೆ ವರ್ತಿಸೋಣ ಎನ್ನುವ ಮಾತೂ ಸ್ವಂತ ಯೋಚನೆಗಳಿಗೆ ಅವಕಾಶವನ್ನು ಸೃಷ್ಟಿಸುವಂತದ್ದೇ ಆಗಿದೆ. ಪ್ರತಿಯೊಂದಕ್ಕೂ ಪರಂಪರೆ, ಸಂಪ್ರದಾಯ ಪುರಾಣಗಳ ಹೆಸರು ಹೇಳಿಕೊಳ್ಳುತ್ತಿದ್ದರೆ, ನಮ್ಮ ಯೋಚನೆಗಳಿಗೆ, ನಮ್ಮ ಮುಂದುವರಿಕೆಗೆ ನಾವೇ ನಿರ್ಬಂದ ಹೇರಿಕೊಂಡಂತೆ ಅಲ್ಲವಾ? ಒಂದು ಸಮಾರಂಭದ ನಂತರ, ಬೆಂಗಳೂರಿನ ಒಬ್ಬ ಮಹಿಳೆ ತೇಜಸ್ವಿಗೆ, ದತ್ತಪೀಠ ವಿವಾದದ ಹಿನ್ನೆಲೆಯಲ್ಲಿ ನಡೆದ ಘಟನೆಗಳ ಬಗ್ಗೆ ಹೇಳುತ್ತಿದ್ದರು.

ಇಂದು ಪ್ರತಿಯೊಂದು ಘಟನೆಯನ್ನೂ ಕೋಮುದೃಷ್ಟಿಯಿಂದಲೇ ನೋಡಲಾಗುತ್ತಿದೆ. ತೀರಾ ವೈಯಕ್ತಿಕ ಎನ್ನಬಹುದಾದ ಸಮಸ್ಯೆಗೂ ಕೋಮುವಾದದಿಂದಲೇ ಪರಿಹಾರ ಕಂಡುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಮನುಷ್ಯ ಮನುಷ್ಯನನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾನೆ. ನಮ್ಮ ಪರಂಪರೆಗೆ ಇದೆಲ್ಲ ಹೊಸತು. ಇದಕ್ಕೆಲ್ಲಾ ಏನಾದರೂ ಮಾಡಬೇಕು. ನೀವು ಅಲ್ಲಿಯೇ ಇರುವವರು. ಏನಾದರೂ ಮಾಡಬೇಕು. ಎಂದು. ಆಗ ತೇಜಸ್ವಿ ಹೇಳಿದ್ದು ಚೆನ್ನಾಗಿ ನೆನಪಿದೆ.

ನೋಡ್ರಿ, ಮನುಷ್ಯ ಮನುಷ್ಯನನ್ನು ಕೊಲ್ಲಬಾರದು ಅಂತ ಹೇಳೋದಿಕ್ಕೆ ಭಗವದ್ಗೀತೆ ಖುರಾನು ಬೈಬಲ್ ಪುರಾಣ ಇವು ಬೇಕಿಲ್ಲಾರಿ. ವೇದದಲ್ಲಿ ಹಾಗೆ ಹೇಳಿದೆ, ಪುರಾಣದಲ್ಲಿ ಹೀಗೆ ಹೇಳಿದೆ. ಭಗವದ್ಗೀತೆಯಲ್ಲ್ಲಿ ಅದನ್ನು ಹೇಳಿಲ್ಲ ಖುರಾನಿನಲ್ಲಿ ಇದನ್ನು ಹೇಳಿಲ್ಲ ಅಂದ್ರೆ, ವೇದ ಹೇಳೊಕೆ ಬದನೆಕಾಯಿ ತಿನ್ನೋಕೆ ಎಂಬ ಜೀವಪರವಾದ ಗಾದೆಯನ್ನೂ ಸವಕಲು ನಾಣ್ಯ ಮಾಡಿಬಿಡುತ್ತಾನೆ. ಕೊಲೆ ಎಂಬ ಕಲ್ಪನೆಯೇ ತಪ್ಪು ಎಂಬುದು ಆತನ ಒಳಗಿನಿಂದ ಬರಬೇಕು. ಅಂದಿದ್ದರು. ಈ ದೃಷ್ಟಿಯಿಂದಲೇ ತೇಜಸ್ವಿ ಬುದ್ಧ, ಗಾಂಧಿ, ಲೋಹಿಯಾ ಯಾರೂ ರಿಲವೆಂಟ್ ಆಗಿ ಉಳಿದಿಲ್ಲ ಎಂದು ಹೇಳಿದ್ದು. ತೇಜಸ್ವಿಯವರ ದೃಷ್ಟಿಯಲ್ಲಿ ಮನುಷ್ಯ ತನ್ನನ್ನು ತಾನು ನೋಡಿಕೊಳ್ಳುವುದಲ್ಲ, ಕಂಡುಕೊಳ್ಳುವುದು. ಆಗ ಮಾತ್ರ ಬದುಕು ಹಸನಾದೀತು.

ಅಣ್ಣನ ನೆನಪು ಕೃತಿಯಲ್ಲಿ ಅವರೇ ವಿವರಿಸಿರುವ ಒಂದು ಘಟನೆಯನ್ನು ಇಲ್ಲಿ ಹೇಳಿದರೆ ಮೇಲಿನ ವಿವರಣೆಗೆ ಅದಿಕೃತ ಪರಿಸಮಾಪ್ತಿಯೂ ಆಗುತ್ತದೆ ಹಾಗೂ ತೇಜಸ್ವಿಯವರ ಸಾಹಿತ್ಯ ಮತ್ತು ಬದುಕು ಏಕವಾಗಿತ್ತು ಎಂಬುದಕ್ಕೂ ಸಾಕ್ಷಿಯಾಗುತ್ತದೆ. ಕುವೆಂಪು ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶವಾಗುವ ಮುಂಚೆ ನಡೆದ ಘಟನೆಯಿದು. ಗಂಧದ ಚಕ್ಕೆಯೊಂದನ್ನು ತೇಜಸ್ವಿ ಬಲಗೈಯಲ್ಲಿ ಇಡುತ್ತಿರುತ್ತಾರೆ. ಅದನ್ನು ಕಂಡ ಜಾತ್ಯಾತೀತ ಪಕ್ಷದ ನಾಯಕರೊಬ್ಬರಾದ ಚಂದ್ರೇಗೌಡರು ಅಯ್ಯೊಯ್ಯೊ ಬಲಗೈಯಲ್ಲಿ ಇಡಬಾರದು.

ಎಡಗೈಯಲ್ಲಿ ಇಡಬೇಕು ಎನ್ನುತ್ತಾರೆ. ಆಗ ತೇಜಸ್ವಿ ಚಂದ್ರೇಗೌಡರೇ, ಕುವೆಂಪು ಇಡೀ ಜೀವಮಾನ ಹೇಳಿದ್ದೆಲ್ಲಾ ನಿರರ್ಥಕ, ನಾನೀಗ ಎಡಗೈಯಲ್ಲಿ ಇಟ್ಟರೆ! ಏನು ಮಾಡಲಿ ಹೇಳಿ ಎನ್ನುತ್ತಾರೆ. ಇದು ಚಂದ್ರೇಗೌಡರ ಆಕ್ಷೇಪಣೆಗೆ ತೇಜಸ್ವಿ ಯೋಚಿಸಿ ನೀಡಿದ ಉತ್ತರವಲ್ಲ. ತತ್ಕ್ಷಣಕ್ಕೆ ಹೇಳಿದ್ದು. ಯೋಚಿಸಿ ಹೇಳಿದ್ದಾಗಿದ್ದರೆ, ಅದಕ್ಕೊಂದು ಉದ್ದೇಶವನ್ನು ಆರೋಪಿಸಬಹುದಿತ್ತು. ಅವರ ಬದುಕೇ ಅಂತಹ ಒಂದು ವೈಚಾರಿಕ ಪ್ರಯೋಗಶೀಲತೆಯಾಗಿದ್ದರಿಂದ ಮಾತ್ರ ದಿಢೀರನೆ ಅಂತಹ ಹೇಳಿಕೆ ಕೊಡಲು ಸಾಧ್ಯವಾಗಿತ್ತು. ಇಂತಹ ಹಲವಾರು ಸಂಗತಿಗಳನ್ನು ತೇಜಸ್ವಿಯವರ ಸಾಹಿತ್ಯವನ್ನು ಓದಿರುವವರಿಗೆ ಮತ್ತೆ ಮತ್ತೆ ವಿವರಿಸಬೇಕಾದ ಅಗತ್ಯವಿಲ್ಲವೆಂದುಕೊಳ್ಳುತ್ತೇನೆ.

ಜ್ಞಾನದ ಅಹಂಕಾರ ಮತ್ತು ಜ್ಞಾನಮೂಲದ ನಿರಾಕರಣೆ

ಕನ್ನಡ ಪುಸ್ತಕೋದ್ಯಮದ ಬಗ್ಗೆ ತೇಜಸ್ವಿಯವರಿಗೆ ಸ್ಪಷ್ಟನಿಲುವುಗಳಿದ್ದುದ್ದು ಎಲ್ಲರಿಗೂ ತಿಳಿದ ವಿಷಯ. ಕನ್ನಡಿಗರು ಅಭಿಮಾನಶೂನ್ಯರು. ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿಯಿಲ್ಲದವರು. ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಸಾಮಾನ್ಯವಾಗಿ ಇಂತಹ ಆರೋಪ ಮಾಡುವವರು ಸಾಹಿತಿಗಳೆ ಆಗಿರುತ್ತಾರೆ. ತಾವು ಬರೆದುದ್ದನ್ನು ಯಾರೂ ಪ್ರಕಟಿಸಲಿಲ್ಲ. ತಾವೇ ಪ್ರಕಟಿಸಿದರೂ ಯಾರೂ ಕೊಂಡುಕೊಳ್ಳುತ್ತಿಲ್ಲ ಎಂದು ಪ್ರಲಾಪಿಸುತ್ತಾರೆ. ನಾನು ಬುದ್ಧಿವಂತ, ನಾನು ಬರೆದದ್ದು ಶ್ರೇಷ್ಟ. ಅದನ್ನು ಎಲ್ಲರೂ ಓದಬೇಕೆಂಬ ನಿಲುವು ಜ್ಞಾನದ ಅಹಂಕಾರದಿಂದ ಜನಿತವಾದದ್ದು. ಇವರಿಗೆಲ್ಲ ತೇಜಸ್ವಿ ಹೇಳುತ್ತಿದ್ದ ಒಂದೇ ಮಾತು ಓದುಗರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿಲ್ಲಾರಿ. ಆದರೆ ನೀವು ಬರೆದ ಕಗ್ಗವನ್ನೆಲ್ಲ ಅವರು ಕೊಂಡು ಓದುತ್ತಿಲ್ಲ ಅಷ್ಟೆ ಎಂಬುದಾಗಿತ್ತು.

ಒಂದು ಕಾಲಕ್ಕೆ ಹಾಗೂ ಈಗಲೂ ಅಲ್ಲಲ್ಲಿ ಸಾಹಿತ್ಯ ಓದುವದರಲ್ಲೂ ಅಸ್ಪೃಶ್ಯತೆ ಕಾಣುತ್ತಿದೆ. ಕುವೆಂಪು ಅವರು ಬರೆಯಲು ಪ್ರಾರಂಭಿಸಿದಾಗ ಶೂದ್ರ ಬರೆದದ್ದು ಎಂಬ ಕಲ್ಪನೆಯಿಂದಾಗಿ ಎಷ್ಟೋ ಮಂದಿ ಅದನ್ನು ಓದುವ ಮಾತಿರಲಿ ಅದರ ಬಗ್ಗೆ ಮಾತನಾಡಲೂ ಇಷ್ಟಪಡದ ವಾತಾವರಣ ಇತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯ. ಈಗಲೂ ಒಬ್ಬ ದಲಿತ ಸಾಹಿತಿ ಬರೆದ್ದನ್ನು ಮೇಲ್ಜಾತಿಯ ಸಾಹಿತಿ ಓದದೇ ಇರುವ ಪ್ರಸಂಗಗಳಿವೆ. ಈಗಿನ ಯುವಕರ ಬರವಣಿಗೆಯನ್ನು ಅನುಮಾನದಿಂದಲೇ ನೋಡುವ ಕೆಲವು ಹಿರಿಯ ಸಾಹಿತಿಗಳು, ಪುಸ್ತಕ ಬಿಡುಗಡೆಗೋ ವಿಚಾರ ಸಂಕಿರಣಕ್ಕೋ ಬಂದಾಗ ಪಕ್ಕದವರನ್ನು ಇವನು ಏನೇನು ಬರೆದಿದ್ದಾನೆ ಎಂದು ಕೇಳಿ ತಿಳಿದುಕೋಳ್ಳುವುದನ್ನೂ ನಾವು ನೋಡಿದ್ದೇವೆ. ತೀರಾ ಇತ್ತೀಚಿಗೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಹೊಸ ಆವೃತ್ತಿಯನ್ನು ನೋಡಿದ ನಮ್ಮ ಕಾಲೇಜಿನ ಸಂಸ್ಕೃತ ಮೇಸ್ಟರೊಬ್ಬರು ಪುಟ್ಟಪ್ಪ ಬದುಕಿದ್ದಾಗ ಕನ್ನಡಕ್ಕೆ ಏನು ಮಾಡಲಿಲ್ಲ.

ಈಗ ಕೇವಲ ೧೮೦ ರೂಪಾಯಿಗೆ ಪುಸ್ತಕ ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ. ನಾನಂತು ಇನ್ನೂ ಓದಿಲ್ಲ ಎಂದು ಮೂದಲಿಸಿದ್ದರು. ಈ ವಿಷಯವನ್ನು ನನ್ನ ಮಿತ್ರರೊಬ್ಬರ ಬಳಿ ಹೇಳಿದಾಗ, ಅವರು ನಿನ್ನ ಹೆಸರು ನೋಡಿ ನಿನ್ನನ್ನೂ ಬ್ರಾಹ್ಮಣರೆಂದು ತಪ್ಪು ತಿಳಿದುಕೊಂಡಿರಬಹುದು ಎಂದಿದ್ದರು. ಹೇಗಿದೆ ನೋಡಿ. ಇಂದು ನಮ್ಮ ಹೆಸರುಗಳಿಗೂ ಜಾತೀಯತೆಯ ಸೋಂಕು ಅಂಟಿಬಿಟ್ಟಿದೆ. ಅಂದು ಅವರ ಪುಟ್ಟಪ್ಪ ಎಂಬ ಮಾತಿನಲ್ಲೇ ಜ್ಞಾನ ಮೂಲದ ನಿರಾಕರಣೆಯನ್ನು ನಾನು ಗುರುತಿಸಿದ್ದೆ. ಇಂತಹ ಯೋಜಿತ ಹುನ್ನಾರಗಳಿವೆಯಲ್ಲಾ, ಅವುಗಳಿಗೆ ಆಯಸ್ಸು ಕಡಿಮೆ ಎಂಬುದು ಮಾತ್ರ ನಾವು ಇತಿಹಾಸದಿಂದ ಕಲಿಯಲೇಬೇಕಾದ ಆದರೆ ಇದುವರೆಗೂ ಕಲಿಯದಿರುವ ಪಾಠ.

ಮಿಲನಿಯಮ್ ಸರಣಿಯ ಮೊದಲ ಪುಸ್ತಕದ ಮುನ್ನುಡಿಯ ಮೊದಲನೇ ವಾಕ್ಯವೇ ಜ್ಞಾನಕ್ಕೆ ನೀರಿನ ಗುಣ ಇದೆ ಎಂಬುದಾಗಿದೆ. ಹರಿಯುವ ನೀರು ಕುಡಿಯಲೂ ಯೋಗ್ಯವಾಗಿರುತ್ತದೆ. ಆದರೆ ಹರಿಯುವ ನೀರಿನ ಮೂಲವನ್ನು ಹುಡುಕುತ್ತಾ ಕುಳಿತರೆ ನಾವು ಬಾಯಾರಿಕೆಯಿಂದ ಸಾಯಬೇಕಾಗುತ್ತದೆ. ರೋಗಿಯೊಬ್ಬನಿಗೆ ರಕ್ತಬೇಕಾದಾಗ ನಾವು ರಕ್ತದ ಗುಂಪನ್ನು ನೊಡುತ್ತೇವೆಯೇ ಹೊರತು, ಆ ರಕ್ತ ಕೊಟ್ಟವನ ವರ್ಣ ಮತ್ತು ವರ್ಗವನ್ನು ಕೇಳುವುದಿಲ್ಲ.

ನೀರನ್ನು ನಿರಾಕರಿಸಿದ ಜೀವಿ, ಹಾಗೇ ರಕ್ತವನ್ನು ನಿರಾಕರಿಸುವ ರೋಗಿ ಇವರು ನಾಶವಾಗುವ ರೀತಿಯಲ್ಲೇ ಜ್ಞಾನವನ್ನು, ಅದರ ಮೂಲವನ್ನು ಆಧರಿಸಿ ಅದನ್ನು ನಿರಾಕರಿಸುವ ವ್ಯಕ್ತಿ ಸಾಂಸ್ಕೃತಿಕವಾಗಿ ನಾಶವಾಗುತ್ತಾನೆ. ಜಾತಿ ಕಾರಣದಿಂದ ಕರಿಯನ ಕೈಯಲ್ಲಿ ಉಳುಕು ತೆಗೆಸಿಕೊಳ್ಳಲು ನಿರಾಕರಿಸಿದರೆ ನರಳಬೇಕಾದವರು ಉಳುಕಿಸಿಕೊಂಡವರೇ ಹೊರತು, ಕರಿಯನಲ್ಲ? ಎಂಬುದನ್ನು ಕಿರಗೂರಿನ ಗಯ್ಯಾಳಿಗಳು ಕಥೆಯಲ್ಲಿ ನೋಡಬಹುದು. ಜಾತಿಯನ್ನು ಮೀರಿದಾಗಲೇ ನೋವಿಗೆ ಮುಕ್ತಿ.

ತೇಜಸ್ವಿ ಸ್ವತಃ ಒಬ್ಬ ದೊಡ್ಡ ಸಾಹಿತಿಯಾಗಿದ್ದರೂ ಬೇರೆಯವರು ಬರೆದದ್ದನ್ನು ಅದರಲ್ಲೂ ಯುವಕರ ಸಾಹಿತ್ಯವನ್ನು ನಿರಕಾರಿಸುವ ಜಾಯಮಾನದವರಲ್ಲ. ಅವರು ಯಾವಾಗಲೂ ಹುಡುಕಾಟದಲ್ಲಿ ತೊಡಗಿದವರು. ಸಿಕ್ಕಿದ್ದೆಲ್ಲವನ್ನೂ ಕುತೂಹಲದಿಂದ ನೋಡಿದವರು. ಅಂತಹ ಸಹಜ ಕುತೂಹಲ ಅವರಿಗಿಲ್ಲದಿದ್ದರೆ, ಬೀಡಾ ರೀತಿ ಎಲೆಯನ್ನು ಸುತ್ತಿ ಸಂತಾನೋತ್ಪತ್ತಿ ಮಾಡುವ ಕೀಟವೊಂದನ್ನು ತಮ್ಮ ತೋಟದ ಕೆಲಸದಾಳು ತಂದಾಗ ಅವರು ಆಸಕ್ತಿ ತೋರಿಸುತ್ತಿರಲಿಲ್ಲ. ಅವರು ಆಸಕ್ತಿ ತೋರಿಸಿ ಅದನ್ನು ಕೀಟಶಾಸ್ತ್ರಜ್ಞರ ಬಳಿಗೆ ಕಳಿಸಿ ಹೆಚ್ಚಿನ ಅಧ್ಯಯನ ನಡೆಸಿದ್ದರ ಪರಿಣಾಮವಾಗಿ ಪಶ್ಚಿಮಘಟ್ಟದಲ್ಲಿ ಮಾತ್ರ ಇರುವ ವಿಶೇಷ ಕೀಟ ಅದೆಂದು ದಾಖಲಾಯಿತು. ಇದು ತೇಜಸ್ವಿಯವರ ಒಳ್ಳೆಯದು ಯಾವ ಮೂಲದ್ದಾದರೂ ಪುರಸ್ಕರಿಸುವ ಗುಣವನ್ನು ತೋರಿಸುತ್ತದೆ.

ಪುಸ್ತಕ ಪ್ರಕಟಣೆ, ಸಾಹಿತ್ಯ ಸೇವೆ ಎಂಬ ಕಾಳದಂಧೆ

ಕನ್ನಡ ಪುಸ್ತಕೋದ್ಯಮದ ದುಸ್ಥಿತಿಗೆ ತೇಜಸ್ವಿ ಬರಹಗಾರರು, ಪ್ರಕಾಶಕರು ಮತ್ತು ಸರ್ಕಾರವನ್ನು ನೇರ ಹೊಣೆಗಾರರನ್ನಾಗಿಸುತ್ತಾರೆ. ಮೊದಲಿಗೆ ತೇಜಸ್ವಿ ಗುರುತಿಸುವಂತೆ, ಬರಹಗಾರರ ಹೊಣೆಗೇಡಿತನವನ್ನು ನೋಡೋಣ. ಪ್ರಸ್ತುತ ಕನ್ನಡದಲ್ಲಿ ಬರದೇ ಬದುಕು ಸಾಗಿಸಬೇಕಾದ ವೃತ್ತಿ ಬರಹಗಾರರು ಇಲ್ಲ ಎಂಬುದು ತೇಜಸ್ವಿಯವರ ಮೊದಲ ಆಕ್ಷೇಪ. ಇರುವವರೆಲ್ಲಾ ಪಾರ್ಟ್ಟೈಮ್ ಬರಹಗಾರರೆಂದೇ ಹೇಳಬಹುದು. ಬರೆಯುವುದು ಒಂದು ತರ ಶೋಕಿಯಾಗುತ್ತಿದೆ. ಬರೆದುದ್ದು ಪುಸ್ತಕ ರೂಪದಲ್ಲಿ ಬಂದರೆ ಸಾಕು.

ಸಾಹಿತಿ ಎಂಬ ಲೇಬಲ್ ಅಂಟಿಸಿಕೊಂಡುಬಿಡುತ್ತಾರೆ. ತಾವು ಬರೆದುದ್ದನ್ನು ಬೇರೆಯವರು ಓದುತ್ತಿದ್ದಾರೊ ಇಲ್ಲವೋ ಎಂಬುದರ ಬಗ್ಗೆ ಇವರಿಗೆ ಪ್ರಾಥಮಿಕ ಜ್ಞಾನವೂ ಇಲ್ಲ. ತಮ್ಮ ಪುಸ್ತಕದ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆಯೂ ಯೋಚಿಸುವ ವ್ಯವಧಾನವೂ ಇಲ್ಲ. ಇಂದು ಕನ್ನಡದಲ್ಲಿ ಒಂದೂ ಪೈಸೆ ಗೌರವಧನ ಪಡೆಯದೆ ತಮ್ಮ ಪುಸ್ತಕಗಳು ಪ್ರಕಟವಾದರೆ ಸಾಕು ಎಂದು ಪ್ರಕಾಶಕರಿಗೆ ಕೊಟ್ಟು ಬಿಡುವ ಲೇಖಕರ ಸಂಖ್ಯೆಯೇ ಶೇಕಡಾ ಎಂಬತ್ತನ್ನು ಮೀರಬಹುದು. ಇದರಲ್ಲಿ ಹೆಚ್ಚಿನವರು ಸಾಹಿತ್ಯ ಕ್ಷೇತ್ರಕ್ಕೆ ಹೊಸಬರಿರುತ್ತಾರೆ. ಪ್ರಕಟವಾದ ಪುಸ್ತಕದ ಒಂದಷ್ಟು ಕಾಪಿಗಳನ್ನು ಪಡೆದುಕೊಂಡು, ಪತ್ರಿಕೆಗಳಿಗೆ, ಸ್ನೇಹಿತರಿಗೆ ಹಂಚಿ ಉಳಿದಿದ್ದನ್ನು ಅಟ್ಟಕ್ಕೆ ಸಾಗಿಸಿ ಸುಮ್ಮನಾಗಿಸಿಬಿಡುತ್ತಾರೆ. ಇನ್ನು ಇಂತಹವರ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರೂ ಅಷ್ಟೆ. ಸರ್ಕಾರಿ ಗ್ರಂಥಾಲಯಗಳಿಗೆ ಒಂದಷ್ಟು ಪ್ರತಿಗಳನ್ನು ಮಾರಿ ಹಾಕಿದ ಬಂಡವಾಳ ಹಿಂತೆಗೆದುಕೊಂಡು ಸುಮ್ಮನಾಗಿಬಿಡುತ್ತಾರೆ.

ಮೊದಲ ಬಗೆಯ ಬರಹಗಾರರಲ್ಲದೆ ಉಳಿದ ಶೇಕಡಾ ಇಪ್ಪತ್ತು ಬರಹಗಾರರೂ ಸಿರಿಯಸ್ಸಾಗೇನೂ ಬರವಣಿಗೆಯನ್ನು ತಗೆದುಕೊಂಡವರಲ್ಲ. ತಾವು ಆಗಾಗ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು, ಮಂಡಿಸಿದ ಪ್ರಬಂದಗಳನ್ನು, ಕೊನೆಗೆ ಎಲ್ಲೋ ಮಾಡಿದ ಭಾಷಣಗಳನ್ನು ಬರಹ ರೂಪಕ್ಕೆ ತಂದು ಪುಸ್ತಕ ಪ್ರಕಟಣೆಗೆ ಕೊಟ್ಟುಬಿಡುತ್ತಾರೆ. ಇವರೆಲ್ಲರೂ ಸ್ವಲ್ಪ ಸಾಹಿತ್ಯ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಹೆಸರು ಮಾಡಿದಂತವರು. ಆದರೆ ಇವರೂ ತಮ್ಮ ಪುಸ್ತಕದ ಮಾರುಕಟ್ಟೆಯ ಬಗ್ಗೆ ಯಾವುದೇ ಫೀಡ್ಬ್ಯಕ್ ಹಾಗೂ ಓದುಗರ ಅಭಿರುಚಿಯ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ. ನಿಜವಾಗಿ ಸಾಹಿತ್ಯವನ್ನು ಸೀರಿಯಸ್ಶಾಗಿ ತೆಗೆದುಕೊಂಡು ತಾವು ಬರೆದುದ್ದು ಮಾರಾಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮನಗಂಡು, ಓದುಗರ ಪ್ರತಿಕ್ರಿಯೆಗಳನ್ನು ಗಮನಿಸಿ ಮುಂದಡಿಯಿಡುವ ಕನ್ನಡ ಬರಹಗಾರರ ಸಂಖ್ಯೆ ಬೆರಳೆಣಿಕೆಯಷ್ಟಿಲ್ಲ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಇನ್ನು ಪ್ರಕಾಶಕರು. ಇವರಿಂದಲೇ ಇಡೀ ಪುಸ್ತಕೋದ್ಯಮ ಈ ಮಟ್ಟಿನ ದುಸ್ಥಿತಿಗೆ ಇಳಿದಿದೆ ಎಂಬುದು ತೇಜಸ್ವಿಯವರ ಎರಡನೇ ಆಕ್ಷೇಪಣೆ. ಪಠ್ಯಪುಸ್ತಕಗಳನ್ನು ಮಾತ್ರ ಪ್ರಕಟಿಸುವ ಪ್ರಕಾಶಕರು ಶಿಕ್ಷಣ ಕ್ಷೇತ್ರದ, ತನ್ಮೂಲಕ ಇಡೀ ದೇಶದ ಸಂಸ್ಕೃತಿಯ ದುಸ್ಥಿತಿಗೆ ಕಾರಣರಾಗಿದ್ದಾರೆ. ಇದರಲ್ಲಿ ಬರಹಗಾರರ ಪಾಲೂ ಇದೆ. ಕೇವಲ ಪಠ್ಯಪುಸ್ತಕಗಳನ್ನೇ ಬರೆಯುವ ವೃತ್ತಿಬರಹಗಾರರು ಅಲ್ಲಲ್ಲಿ ಸಿಗುತ್ತಾರೆ. ಹೆಸರನ್ನು ಹಾಕಿಕೊಳ್ಳದೇ ಕನ್ನಡ ಪಠ್ಯಪುಸ್ತಕಗಳಿಗೆ ಗೈಡ್ ಬರೆಯುವ ಅಧ್ಯಾಪಕರೂ ನಮ್ಮ ನಡುವೆ ಇದ್ದಾರೆ. ಕನ್ನಡವನ್ನು ಮಾತೃಭಾಷೆಯನ್ನಾಗಿ ಉಳ್ಳ ಒಬ್ಬ ವಿದ್ಯಾರ್ಥಿ, ಕನ್ನಡ ಪಠ್ಯವನ್ನು ಗೈಡ್ ಮುಖಾಂತರ ಓದುವ ದುಸ್ಥಿತಿಯೇ ಭಯಂಕರವಾದದ್ದು. ಇನ್ನು ಕೆಲವರು ಸರಸ್ವತಿಯ ಸೇವೆ ಎಂದೋ ಕನ್ನಡದ ಸೇವೆ ಎಂದೋ ಪುಸ್ತಕಗಳನ್ನು ಪ್ರಕಟಿಸುವವರು. ಇವರು ಪುಸ್ತಕೋದ್ಯಮಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಇರುವವರು. ಇವರಿಂದಲೂ ಬರಹಗಾರರಿಗೆ ಯಾವುದೇ ರೀತಿಯ ಫೀಡ್ಬ್ಯಾಕ್ ಸಿಗುವುದಿಲ್ಲ.

ರಾಜ್ಯ ಹಾಗೂ ಕೇಂದ್ರಸರ್ಕಾರದ ಯಾವ ಯಾವ ಸ್ಕೀಮ್ಗಳಲ್ಲಿ ಎಷ್ಟೆಷ್ಟು ಹಣವಿದೆ ಎಂಬುದನ್ನು ತಿಳಿದು ಆ ಸ್ಕೀಮಿಗೆ ಬೇಕಾದಂತಹ ಪುಸ್ತಕಗಳನ್ನು ಮುದ್ರಿಸುವ ಒಂದು ಪ್ರಕಾಶಕ ವರ್ಗವಿದೆ. ಇವರು ಕೆಲವೇ ದಿನಗಳಲ್ಲಿ, ಬೇಡಿಕೆಯಿರುವ ಎಲ್ಲಾ ವಿಷಯಗಳ ಪುಸ್ತಕಗಳನ್ನು ಬರೆಯಿಸಿ ಮುದ್ರಿಸಿ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಆಯಾಯ ಸ್ಕೀಮಿನ ಸರ್ಕಾರಿ ಅಧಿಕಾರಿಗೆ ಇದರಲ್ಲಿ ಸಿಂಹಪಾಲು ಲಾಭವಿದೆ. ಆದರೆ ಬರಹಗಾರನಿಗೂ ಓದುಗನಿಗೂ ಯಾವುದೇ ಲಾಭವಿಲ್ಲ.

ಇನ್ನು ಕೊನೆಯವರು ಕೇವಲ ಗ್ರಂಥಾಲಯಕ್ಕೆ ಸರ್ಕಾರ ಕೊಂಡುಕೊಳ್ಳುವ ಸೀಮಿತ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಪುಸ್ತಕ ಪ್ರಕಟಿಸಿ ಲಾಭ ಮಾಡುವವರು. ಇವರು ಸರ್ಕಾರ ಕೊಂಡುಕೊಳ್ಳುವ ನೂರೋ ಇನ್ನೂರೋ ಪ್ರತಿಗಳಲ್ಲೇ ತಾವು ಹಾಕಿದ ಬಂಡವಾಳವನ್ನು ವಾಪಸ್ ಪಡೆಯಬಲ್ಲ ಚಾಣಕ್ಯರು. ಇಲ್ಲೂ ಲೇಖಕರಿಗೆ ಗೌರವಪ್ರತಿಗಳೇ ಗತಿ. ಇಂತಹ ಪ್ರಕಾಶಕರಿಂದ ಸಂಭಾವನೆ ಪಡೆಯುವ ಲೇಖಕರ ಸಂಖ್ಯೆ ಶೇಕಡಾ ಐದೋ ಹತ್ತೋ ಇರಬಹುದು ಅಷ್ಟೆ. ಆದರೆ ಗ್ರಂಥಾಲಯಗಳಲ್ಲಿ ಮಾತ್ರ ಕಸದ ರಾಶಿಯಂತೆ ಪುಸ್ತಕಗಳನ್ನು ತುಂಬಿಕೊಳ್ಳುತ್ತಾರೆ.

ಇದರಲ್ಲಿ ಪುಸ್ತಕ ಆಯ್ಕೆ ಸಮಿತಿಯವರು, ಗ್ರಂಥಾಲಯ ಅಧಿಕಾರಿಗಳು, ಗ್ರಂಥಪಾಲಕರು ಪಾಲು ಪಡೆಯುತ್ತಾರೆ. ಐದು ವರ್ಷ ಗ್ರಂಥಾಲಯಗಳಿಗೆ ಯಾವುದೇ ಪುಸ್ತಕ ಖರೀದಿಸದಿದ್ದರೆ, ಈ ಬಗೆಯ ಪ್ರಕಾಶಕರಲ್ಲೆ ಶೇಕಡಾ ತೊಂಬತ್ತಕ್ಕೂ ಹೆಚ್ಚುಜನ ತಮ್ಮ ಉದ್ಯೋಗ ಬದಲಾಯಿಸಬೇಕಾಗುತ್ತದೆ ಇಲ್ಲ ಬಿಡಬೇಕಾಗುತ್ತದೆ. ನಿಜವಾಗಿ ಕನ್ನಡ ಪುಸ್ತಕೋದ್ಯಮದಲ್ಲಿ, ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಾ ಮಾರುಕಟ್ಟೆಯನ್ನು ಬೆಳೆಸುತ್ತಾ ಬಂದಿರುವ ಪ್ರಕಾಶಕ ಸಂಸ್ಥೆಗಳ ಸಂಖ್ಯೆ ಹತ್ತನ್ನು ದಾಟುವುದಿಲ್ಲ.

ಇಂದು ಸರ್ಕಾರ ಎಲ್ಲವಕ್ಕೂ ಅನುಧಾನ ಕೊಡುತ್ತಾ ಎಲ್ಲವನ್ನೂ ಹಾಳು ಮಾಡುತ್ತಿದೆ. ಚಲನಚಿತ್ರೋದ್ಯಮಕ್ಕೆ, ಪುಸ್ತಕೋದ್ಯಮಕ್ಕೆ, ಕನ್ನಡದ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ, ಕೆಲವು ನಾಟಕ ಕಂಪೆನಿಗಳಿಗೆ ಎಲ್ಲವಕ್ಕೂ ಸರ್ಕಾರದ ಅನುದಾನವೇ ಉಸಿರಾಗಿದೆ. ಇಂದೊಮ್ಮೆ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಭೆಯಲ್ಲಿ ಚಂದ್ರಹಾಸ ಗುಪ್ತ ಎಂಬ ಅಧಿಕಾರಿಯೊಬ್ಬರು ಆಗಿನ ಸಾಹಿತ್ಯ ಪರಿಷತ್ ಪದಾಧಿಕಾರಿಗಳಗೆ ಒಂದು ಪ್ರಶ್ನೆ ಕೇಳಿದ್ದು ನೆನಪಾಗುತ್ತಿದೆ. ಒಂದು ಆಪ್ಸೆಟ್ ಮುದ್ರಣ ಯಂತ್ರವನ್ನು ಇಟ್ಟುಕೊಂಡಿರುವವನು ನಾಲ್ಕಾರು ಜನಕ್ಕೆ ಕೆಲಸಕೊಟ್ಟೂ ಸಂಬಳ ಕೊಟ್ಟೂ ತಾನೂ ಲಾಭ ಮಾಡುತ್ತಾ ಇರಬೇಕಾದರೆ ಪರಿಷತ್ ಮೂರು ಆಫ್ಸೆಟ್ ಮುದ್ರಣ ಯಂತ್ರಗಳನ್ನು ಇಟ್ಟುಕೊಂಡೂ, ಅವುಗಳ ರಿಪೇರಿಗೆಂದು ಅನುದಾನಕ್ಕಾಗಿ ಸರ್ಕಾರಕ್ಕೆ ಕೈ ಚಾಚುತ್ತಿರುವುದೇಕೆ? ಈ ರೀತಿ ಅನುದಾನದಿಂದಲೇ, ನಡೆಯುವ ಪುಸ್ತಕೋದ್ಯಮದ ಅಗತ್ಯವಾದರೂ ಏನು? ಎಂದು ಪ್ರಶ್ನಿಸಿದ್ದರು. ತೇಜಸ್ವಿ ಇದನ್ನೇ ಇನ್ನೂ ನಿಖರವಾಗಿ ಖಾರವಾಗಿ ಹೇಳುತ್ತಾರೆ.

ನನ್ನಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟುಕೊಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ ಎಂದು. ತೇಜಸ್ವಿ ಈ ಮಾತನ್ನು ಹೇಳಿದ್ದು ರಂಗಾಯಣದ ಕಲಾವಿದರನ್ನು ಕುರಿತು. ಈ ಮಾತನ್ನು ಕೇಳಿದ ನಂತರ ರಂಗಾಯಣದ ಎಷ್ಟೋ ಜನ ಕಲಾವಿದರು ಹೊರಬಂದು ಸಿನಿಮಾ ಟೀವಿಗಳಲ್ಲಿ ತಮ್ಮ ಹೊಟ್ಟೆ ಪಾಡು ಕಂಡುಕೊಂಡರು. ಇದೇ ಮಾತು ಕೋಟಿಗಟ್ಟಲೆ ಅನುದಾನ ಪಡೆಯುತ್ತಿರುವ ಅಕಾಡೆಮಿಗಳು, ಪ್ರಾಧಿಕಾರಗಳು ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ. ಗ್ರಂಥಾಲಯಗಳ ಪುಸ್ತಕ ಖರೀದಿ, ಅಕಾಡೆಮಿಗಳ ಕಾರ್ಯನಿರ್ವಹಣೆ, ಪುಸ್ತಕ ಪ್ರಾಧಿಕಾರದ ದುಂದುವೆಚ್ಚದ ಪ್ರಕಟಣೆಗಳು ಇವನ್ನು ನೋಡಿದಾಗ ಸಾರ್ವಜನಿಕರ ಹಣವನ್ನು ಕೆಲವೇ ಮಂದಿ ಸೇರಿಕೊಂಡು ಮಜಾ ಉಡಾಯಿಸುತ್ತಿದ್ದಾರೆ ಎಂಬ ಅನುಮಾನ ಬಾರದಿರದು.

ಅನುದಾನ ಎಂಬುದು ಯಾವುದೇ ಕಲೆಗೆ, ಸಂಸ್ಥೆಗೆ ತತ್ಕಾಲಿಕವಾಗಿ ಇರಬೇಕಾದ್ದು. ಅದೇ ನಿರಂತರವಾದರೆ ಅದರಿಂದ ನಡೆಯುವ ಸಂಸ್ಥೆಗಳು ಸ್ವಂತಿಕೆಯನ್ನು ಕಳೆದುಕೊಂಡು ಬರೇ ಲೆಕ್ಕ ಕೊಡುತ್ತಾ ಕೂರಬೇಕಾಗುತ್ತದೆ ಎನ್ನುತ್ತಾರೆ ತೇಜಸ್ವಿ. ಕಡೆಗೆ ತೇಜಸ್ವಿ ಸರ್ಕಾರಕ್ಕೆ ನೀವು ಕೊಟ್ಟ ಅನುದಾನ ಏನಾಗತ್ತಿದೆ ಎಂಬುದನ್ನಾದರೂ ಸರಿಯಾಗಿ ಗಮನಿಸಿ ಲೆಕ್ಕ ಕೇಳಿ ಎಂದು ಸಲಹೆ ಕೊಟ್ಟಿದ್ದರು.

 

 

 

 

 

‍ಲೇಖಕರು G

28 July, 2011

1 Comment

  1. Sukhesh M.G.

    ತುಂಬಾ ಒಳ್ಳೆಯ ಲೇಖನ. ತೇಜಸ್ವಿಯವರ ವಿಚಾರಗಳನ್ನು, ನಿಮ್ಮ ವಿಚಾರಗಳನ್ನು ಚೆನ್ನಾಗಿ consolidate ಮಾಡಿ ಹೇಳಿದೀರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading