ಇನ್ನಷ್ಟು ತೇಜಸ್ವಿ 2
ಬಿ.ಆರ್. ಸತ್ಯನಾರಾಯಣ
ಸಹಜಾಭಿವ್ಯಕ್ತಿ
ತಮ್ಮ ವೈಚಾರಿಕ ನಿಲುವುಗಳನ್ನು, ಆದರ್ಶಗಳನ್ನು ಅಭಿವ್ಯಕ್ತಿಗೊಳಿಸಲೋಸುಗವೇ ಯಾವುದೇ ಪಾತ್ರವನ್ನು ತಮ್ಮ ಸಾಹಿತ್ಯದಲ್ಲಿ ತೇಜಸ್ವಿ ಸೃಷ್ಟಿಸಿದವರಲ್ಲ. ಕಥಾಸಂವಿಧಾನ, ಸನ್ನಿವೇಶ ಪಾತ್ರದ ಔಚಿತ್ಯಗಳ ಚೌಕಟ್ಟಿನಲ್ಲಿಯೇ ಅಭಿವ್ಯಕ್ತಿಗೊಂಡಿರುತ್ತವೆ. ಯಾವ ಪಾತ್ರವನ್ನೂ ಉದ್ದೇಶಪೂರ್ವಕವಾಗಿ ಕ್ರಾಂತಿಕಾರಿಯನ್ನಾಗಿ ಅವರು ಸೃಷ್ಟಿಸಿಲ್ಲ. ಯಾವ ಪಾತ್ರವೂ ಕ್ರಾಂತಿಕಾರಿಯಂತೆ ಭಾಷಣ ಬಿಗಿಯುವುದಿಲ್ಲ. ಹಾಗೆ ನೋಡಿದರೆ ಏನಾದರೂ ಆಗಲಿ ಕ್ರಾಂತಿ ಆಗಬೆಕು ಎನ್ನುವ ಚಿದಂಬರ ರಹಸ್ಯದ ಪಡ್ಡೆಗಳು, ಜುಗಾರಿ ಕ್ರಾಸ್ನ ಗಂಗೂಲಿ ಇವರಂಥ ಪಾತ್ರಗಳು ಯಾವ ಕ್ರಾಂತಿಯನ್ನೂ ಮಾಡದೆ ಹೋಗುತ್ತವೆ. ತಮ್ಮ ಸಹಜ ಬದುಕಿನಲ್ಲಿಯೇ ಆಯಾಯ ಪಾತ್ರಗಳು, ನಮಗೆ ಕ್ರಾಂತಿಕಾರಿಯಂತೆ ಕಂಡರೆ ಅದು ನಮ್ಮ ಗ್ರಹಿಕೆ ಅಷ್ಟೆ.
ಬುರ್ಖಾ ತೊಡದೆ, ಬಜ್ಜಿ ವ್ಯಾಪಾರದಲ್ಲಿ ತೊಡಗಿರುವ ಫಾತಿಮಾಳನ್ನು ನಾವು ಕ್ರಾಂತಿಕಾರಿ ಎನ್ನಾಲಾದೀತೆ? ಮನುಷ್ಯನಿಗೆ ಬದುಕು ಮೊದಲ ಆದ್ಯತೆಯಾಗಿರುತ್ತದೆ. ನಂತರ ಧರ್ಮ, ಉಳಿದವುಗಳಿಗೆ ಆದ್ಯತೆ ದೊರಕಬಹುದು. ಫಾತಿಮಾಳಿಗೆ ತನ್ನ ಬದುಕು ಮುಖ್ಯ. ಹಿಂದೂಗಳೇ ಬಹುಸಂಖ್ಯಾತರಾಗಿರುವ ಗೊಂದಲಗೇರಿಯಲ್ಲಿ ತಾನು ಬುರ್ಖಾ ತೊಟ್ಟುಕೊಂಡು ಜಾತಿಯನ್ನೇ ಮುಂದೆ ಮಾಡಿದರೆ ವ್ಯಾಪಾರಕ್ಕೆ ಕಲ್ಲು ಬೀಳುತ್ತದೆ ಎಂಬ ಅವಳ ವಾದ ಮೇಲಿನ ಮಾತಿಗೆ ಸಮರ್ಥನೆ. ಅವಳು ಬುರ್ಖಾ ತೊಡದೆ, ಸೀರೆಯನ್ನಷ್ಟೇ ಉಟ್ಟುಕೊಂಡು ಕೆಲವೊಮ್ಮೆ ಕುಂಕುಮವನ್ನೂ ಇಟ್ಟುಕೊಂಡು ವ್ಯಾಪಾರಕ್ಕೆ ಬರುವುದು ಕೇವಲ ಒಂದು ಶುದ್ಧ ವ್ಯಾಪಾರಧರ್ಮ ಹಾಗೂ ಅದರಿಂದ ನಡೆಯಬಹುದಾದ ತನ್ನ ಹೊಟ್ಟೆಪಾಡು ಅಷ್ಟೇ ಹೊರತು, ಯಾವ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವುದಾಗಲಿ ಕ್ರಾಂತಿ ಮಾಡುವುದಾಗಲಿ ಫಾತಿಮಾಳ ಉದ್ದೇಶವಾಗಿರಲಿಲ್ಲ ಎಂಬುದು ಸ್ಪಷ್ಟ.
ಅವನತಿ ಕಥೆಯ ಗೌರಿ ಮತ್ತು ಸೀತೆಯ ನಡುವೆ ನಡೆಯುವ ಸಂಭಾಷಣೆಯನ್ನು ಗಮನಿಸಿ. ಮಂಗನ್ನ ತಿಂದ ಮೇಲೆ ಮನಸರನ್ನ ತಿಂದಂಗೇನೆ ಸೈ ನೀನು ಕುರಿ ಕೋಳಿ ತಿಂದಿಲ್ಲಾ ಕುರಿ ಕೋಳಿಗೂ ಮಂಗನಿಗೂ ಒಂದೇನಾ ಎರಡೂ ಜೀವ ಅಲ್ಲೇನು? ಆದರೂ ಮಂಗಕ್ಕೆ ಮನಸರ ಹಂಗೆ ಕೈ ಇರುತ್ತೆ! ತುರಿಸಿಕೊಳ್ಳುತ್ತೆ! ಎರಡು ಕಾಲಿನ ಮ್ಯಾಲೆ ನಿಲ್ಲುತ್ತೆ! ಹೇನು ತಕ್ಕೊಳ್ಳುತ್ತೆ! ಕೂಸು ಕರಕೊಂಡಿರುತ್ತೆ! ಕುರೀಗೂ ಕೋಳಿಗೂ ಮಕ್ಳೂ ಮರಿ ಇರ್ತಸದವ್ವಾ….. ಹೀಗೆ ಮಾತು ಮುಂದುವರೆಯುತ್ತದೆ. ಇವರಿಬ್ಬರೂ ತಮ್ಮ ಸಮಸ್ಯೆಯನ್ನು ಕುರಿತು ಮಾತನಾಡುತ್ತಿದ್ದಾರೆಯೇ ಹೊರತು ಯಾವುದೇ ಸಿದ್ಧಾಂತ ಪ್ರತಿಪಾದನೆಗಾಗಿ ಪ್ರಯತ್ನಿಸುತ್ತಿಲ್ಲ. ಸಸ್ಯಾಹಾರ ಮತ್ತು ಮಾಂಸಾಹಾರಗಳ ಬಗ್ಗೆ ಚರ್ಚೆ ನಡೆಸಿಲ್ಲ. ಅಥವಾ ಯಾವುದೇ ಧರ್ಮದ ಬಗ್ಗೆ ವಕಾಲತ್ತು ವಹಿಸುತ್ತಿಲ್ಲ. ಆದರೆ ಮನುಷ್ಯನ ಮೂಲಭೂತವಾದ ಆಹಾರ ವೈವಿಧ್ಯತೆ, ಸಮಸ್ಯೆ ಮೊದಲಾದವುಗಳ ಜೊತೆಗೆ ಇಂದು ಗೋಮಾಂಸಭಕ್ಷಣೆಗೆ ನಿಷೇಧ ಹೇರಬೇಕು ಎನ್ನುವವರನ್ನೂ ಈ ಮಾತುಗಳ ಎದುರುಗೊಳ್ಳುತ್ತವೆ. ಗೋಮಾಂಸ ತಿನ್ನಬಾರದು ಎನ್ನುವುದಾದರೆ, ಕುರಿ ಕೋಳಿ ಹಂದಿಗಳ ಮಾಂಸವನ್ನೂ ತಿನ್ನಬಾರದು ಅಲ್ಲವೆ?
ಕರ್ವಾಲೊ ಕಾದಂಬರಿಯಲ್ಲೇ ಇಂತಹ ಒಂದು ಸನ್ನಿವೇಶ ಬರುತ್ತದೆ. ಹಂದಿ ಮಾಂಸದ ವಿಚಾರವಾಗಿ ಪ್ಯಾರನ ಮಾತುಗಾರಿಕೆ, ಆತನ ಹುಡುಗುಬುದ್ದಿಗೆ ಸಹಜವಾಗಿಯೇ ಬಂದಿದೆಯೇ ಹೊರತು, ಬಲವಂತವಾಗಿ ಅವನ ಬಾಯಿಂದ ಹೇಳಿಸಿದ್ದಲ್ಲ. ಹಂದಿ ಮಾಂಸ ತಿಂದವರಿಗೆ ಮಸಣದಲ್ಲಿ ಜಾಗ ಸಿಗೋದಿಲ್ಲ, ಹೆಣ ತಗೆದುಕೊಂಡು ಹೋಗೋದಿಕ್ಕೆ ಮಸೀದಿಯಲ್ಲಿರುವ ಪೆಟ್ಟಿಗೆ ಕೊಡೋದಿಲ್ಲ ಎಂಬ ಭಯದ ನಡುವೆ, ಏಕೆ ಸಾಬರು ಹಂದಿ ಮಾಂಸ ತಿನ್ನೋಲ್ಲ ಎಂಬುದಕ್ಕೆ ವಿವರಣೆಯನ್ನು ಕೊಡುತ್ತಾನೆ. ಸಣ್ಣ ಇಚಾರನ್ನೆಲ್ಲಾ ದೊಡ್ದು ಮಾಡಿ ತಿನ್ನಾಕೆ ಕೂಡ್ದೂಂತ ಮಾಡಿದರೆ ಹೇಗೆ ಸಾಮಿ? ಎನ್ನುವ ಅವನ ಪ್ರಶ್ನೆಯಲ್ಲಿ ಯಾವ ಧರ್ಮದ ನಂಬಿಕೆಯನ್ನು ಅಲುಗಾಡಿಸುವ ಇರಾದೆಯಿಲ್ಲ. ಬದಲಿಗೆ ಮಾಂಸ ಎಂದರೆ ಮಾಂಸ. ಅದು ಕುರಿಯದಾದರೇನು? ಹಂದಿಯದಾದರೇನು? ಎಂಬ ಮೂಲಭೂತ ಪ್ರಶ್ನೆಯಿದೆ ಅಷ್ಟೆ.
ಇದನ್ನು ಹೊರತುಪಡಿಸಿ ನೋಡುವುದಾದರೆ, ಚಿದಂಬರ ರಹಸ್ಯ ಕಾದಂಬರಿಯಲ್ಲಿ ಸೆಕ್ಯುಲರ್ ಮನಸ್ಥಿತಿಯುಳ್ಳ ಒಂದಷ್ಟು ಜನರ ಗುಂಪು ಕ್ರಿಯಾಶೀಲವಾಗಿರುವುದನ್ನು ಕಾಣಬಹುದು. ಇಂದಿನ ಭಾರತದ ಸೆಕ್ಯುಲರ್ ಪರಿಸರಕ್ಕೆ ಆಗುತ್ತಿರುವ ಆಘಾತವನ್ನೇ ಆ ಗುಂಪು ಅನುಭವಿಸುತ್ತಿರುವುದನ್ನು ನಾವು ನೋಡಬಹುದು. ಅಷ್ಟೆಲ್ಲಾ ಕ್ರಿಯಾಶೀಲರಾಗಿದ್ದ ಸೆಕ್ಯುಲರ್ ಮನಸ್ಸುಗಳಿಗೂ ಕೆಸರೂರಿನ ದುರಂತವನ್ನು ತಡೆಯಲಾಗಲೀ, ಕೊನೆಗೆ ಅದರ ತೀವ್ರತೆಯನ್ನಾಗಲೀ ಕಡಿಮೆ ಮಾಡಲಾಗಲೀ ಆಗುವುದೇ ಇಲ್ಲ. ಇದೊಂದೇ ಕಾದಂಬರಿಯಲ್ಲಿ ಒಂದು ವಿಚಾರವನ್ನು ಉದ್ದೇಶಪೂರ್ವಕವಾಗಿ ಆದರೆ ಅತ್ಯಂತ ಕಲಾತ್ಮಕವಾಗಿ ಅಭಿವ್ಯಕ್ತಿಸಿದ್ದಾರೆ ಎಂದು ನನಗಿನ್ನಿಸುತ್ತದೆ. ಮನುಷ್ಯ ಪ್ರಜ್ಞೆ ನಿಜವಾಗಿ ಸ್ವತಂತ್ರವೋ? ಅಥವ ಅದೊಂದು ಭ್ರಮೆಯೋ? ಇಡೀ ಗ್ರಹತಾರೆ ನಿಹಾರಿಕೆಗಳ ಈ ವಿಶ್ವವೆಲ್ಲಾ ತಮ್ಮ ತಮ್ಮ ನಿಯಮಕ್ಕೆ ಬದ್ಧವಾಗಿ ವರ್ತಿಸುತ್ತಿವೆ. ಪ್ರತಿಯೊಂದು ಅಣು ಪರಮಾಣುವಿನಲ್ಲೂ ಎಲೆಕ್ಟ್ರಾನ್ ಪ್ರೋಟಾನ್ಗಳೂ ತಮ್ಮ ನಿಯಮಗಳ ಸರಹದ್ದಿನಲ್ಲಿ ಸುತ್ತುತ್ತಿವೆ.
ಅಂಥದರಲ್ಲಿ ಇದರಿಂದ ಹೊಮ್ಮಿದ ಈ ಪ್ರಜ್ಞೆ ನಿಯಮಾತೀತವೇ? ನಿಜವಾಗಿಯೂ ಸ್ವತತಂತ್ರವೆ? ಇದು ನನ್ನನ್ನು ನಿಜಕ್ಕೂ ಚಕಿತಗೊಳಿಸುವ ಚಿದಂಬರ ರಹಸ್ಯ ಎನ್ನುವ ಜಯರಾಮನ ಮಾತುಗಳನ್ನು ನಾವು ಗಮನಿಸಬಹುದು. ದೇವರು ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ ಎನ್ನುವ ತೇಜಸ್ವಿಯವರ ಅನಿಸಿಕೆಯನ್ನು ಇದರೊಂದಿಗೆ ವಿವೇಚಿಸಬಹುದು. ಮನುಷ್ಯ ಪ್ರಜ್ಞೆ ಸ್ವತಂತ್ರ ಎಂದಾಗ ನಮಗೆ ಆಗುವಷ್ಟೇ ವಿಸ್ಮಯ ಅಲ್ಲ ಎಂದಾಗಲೂ ಆಗುತ್ತದೆ ಅಲ್ಲವೆ? ಆದರೆ ಇಲ್ಲಿ ತೇಜಸ್ವಿ ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ. ಅದೊಂದು ಚಿದಂಬರ ರಹಸ್ಯ ಎಂದು ಮೊದಲೇ ಹೇಳಿಬಿಟ್ಟಿದ್ದಾರೆ. ರಾಮಚಂದ್ರ ಮಂಡಿಸುವ ಜಟಿಲ ತರ್ಕಕ್ಕೆ ಎಲ್ಲರೂ ತಲಮೇಲೆ ಕೈಹೊತ್ತು ಕೂರುವುದು ಅದೇ ಕಾರಣಕ್ಕೆ. ಸದ್ಯಕ್ಕೆ ಸಮಾಧಾನವೆಂದರೆ ಜಯರಾಮ ಹೇಳುವಂತೆ ಈಗ ನಾವೆಲ್ಲಾ ನಮಗೆ ಹೇಗನ್ನಿಸುತ್ತದೋ ಹಾಗೆ ವರ್ತಿಸೋಣ ಎಂಬುದು ಅಷ್ಟೆ.
ತೇಜಸ್ವಿ ತಮ್ಮ ವೈಚಾರಿಕ ನಿಲುವಗಳನ್ನು ಸ್ಪಷ್ಟಪಡಿಸುವುದಕ್ಕಾಗಲೀ ಪ್ರತಿಪಾದಿಸುವುದಕ್ಕಾಗಲೀ ಕಥೆ ಕಾದಂಬರಿಗಳನ್ನು, ಅವುಗಳ ಪಾತ್ರಗಳನ್ನು ಸೃಷ್ಟಿಸಿದವರಲ್ಲ. ಅವರ ವೈಚಾರಿಕ ನಿಲುವಗಳ ಸ್ಪಷ್ಟತೆಗಾಗಿ, ನಿಖರತೆಗಾಗಿ ನಾವು ಸಾಹಿತ್ಯಕ್ಕಿಂತ ಹೆಚ್ಚಾಗಿ ಅವರ ಸಾಹಿತ್ಯೇತರ ಅಂದರೆ ಲೇಖನ, ಪತ್ರಿಕಾ ಹೇಳಿಕೆಗಳು, ಸಂವಾದ ಕಾರ್ಯಕ್ರಮಗಳಲ್ಲಿ ಮಾಡಿದ ಭಾಷಣಗಳು, ಅವರು ನೀಡಿದ ಉತ್ತರಗಳು, ಸಂದರ್ಶನಗಳು ಇವುಗಳನ್ನು ಆಶ್ರಯಿಸುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ. ಅದಕ್ಕಿಂತ ಹೆಚ್ಚಾಗಿ ಅವರ ಬದುಕೇ ಒಂದು ವೈಚಾರಿಕ ಕೃತಿ.






ತೇಜಸ್ವಿಯವರೇ ಹೇಳಿದ ಹಾಗೆ ಅವರ ಸಾಹಿತ್ಯ ಕೃತಿಗಳಲ್ಲಿ ಯಾವುದೇ ಸಂದೇಶವನ್ನ ಕೊಡೋಕೆ ಅವರು ಪ್ರಯತ್ನ ಪಟ್ಟಿಲ್ಲ. ಸಂದೇಶ ಕೊಡೋದಿದ್ದರೆ ನೇರವಾಗಿ ಕೊಡುತ್ತಿದ್ದರು.
ಅವರ ‘ವಿಮರ್ಶೆಯ ವಿಮರ್ಶೆ’ ಪುಸ್ತಕದಲ್ಲಿ ಇದರ ಬಗ್ಗೆ ಒಳ್ಳೆಯ ವಿವರಗಳು ಸಿಕ್ಕುತ್ತವೆ.
ತುಂಬ ತುಂಬಾ ದನ್ಯವಾದಗಳು ಅವದಿಯ ಅಧಿಕಾರಿಗೆ… ನನ್ನ ತೇಜಸ್ವಿ ಬಗ್ಗೆ ಹೆಚ್ಚು ಹೆಚ್ಚು ವಿಷಯ ಬರುತ್ತಿದೆ..thank u MOHAN sir and specail thanks to ಅರಿವಿನ “ಅವದಿ”ಗೆ…