ನವೀನ್ ಸಾಗರ್
ನಮಸ್ತೆ…
ನನಗೆ ತುಂಬ ಹಿರಿಯರೊಂದಿಗೆ ಮಾತಾಡಿ ಗೊತ್ತಿಲ್ಲ.. ನೀವು ಪ್ರತಿಕ್ರಿಯಿಸುವುದಿಲ್ಲ ಅಂತ ಗೊತ್ತಿರುವುದಕ್ಕೇ ಬರೆಯುತ್ತಿದ್ದೀನೋ ಏನೋ. ತಪ್ಪುತಪ್ಪು ಮಾತಾಡಿದ್ದರೆ, ಏನೇನೋ ಕೇಳಿದೆ ಅನಿಸಿದರೆ ಕ್ಷಮೆ ಇರಲಿ. ನಿಮ್ಮ ಪರವಾಗಿ ಇದನ್ನು ಓದಿದ ಹಿರಿಯರು ಕ್ಷಮಿಸುತ್ತಾರೆ ಅಂದುಕೊಳ್ಳುವೆ.

ಎಂಬತ್ತೆರಡು ವರ್ಷ ಇದ್ರಿ… ನಾ ಹುಟ್ಟಿದ ಮೇಲೇ ಮೂವತ್ತಾರ್ ವರ್ಷ ಇದ್ರಿ.
ಇವತ್ತಿಂದ ನೀವಿಲ್ಲ.. ಎಲ್ಲರೂ ತುಂಬಾ ಭಾವುಕರಾಗಿ ನಿಮ್ಮ ಬಗ್ಗೆ ಮಾತಾಡ್ತಾ ಇದ್ರೆ… ಛೇ ನಂಗೇನೂ ಫೀಲೇ ಆಗ್ತಿಲ್ವಲ್ಲಾ ಅಂತ ಬೇಜಾರಾಗತ್ತೆ.
ಹಾಗಂತ ನೀವು ನನಗೆ ಗೊತ್ತಿಲ್ಲದವರಾ? ಅಲ್ಲ. ನೀವು ಹಾಡಿದ ಪ್ರತಿ ಹಾಡೂ ಪರಿಚಿತವೇ!
ನಿಮ್ಮನ್ನೆಂದೂ ಮರೀಲಿಲ್ಲ… ಹಾಗಂತ ತುಂಬ ಇಷ್ಟಾನೂ ಪಡಲಿಲ್ಲ.
ಕಾರಣ ನಾ ಹುಟ್ಟೋ ಹೊತ್ತಿಗೆ ರಾಜ್ಕುಮಾರ್ ಹಾಡೋಕೆ ಶುರುಮಾಡಿ ಆಗಿಹೋಗಿತ್ತು… ನೀವು ಆಲ್ಮೋಸ್ಟ್ ಹಾಡೋದನ್ನ ನಿಲ್ಲಿಸಿ ಆಗೋಗಿತ್ತು. ನನ್ನ ಹಾಗೂ ನನ್ನ ನಂತರ ಹುಟ್ಟಿದೋವ್ರಿಗೆ ರಾಜ್ಕುಮಾರ್, ಎಸ್ಪೀಬಿನೇ ಹೆಚ್ಚು ಆಕರ್ಷಿಸಿದ್ದು. ಕಲರ್ ಸಿನಿಮಾಗಳು ಬ್ಲಾಕ್ ಅಂಡ್ ವೈಟನ್ನು ಓವರ್ ಟೇಕ್ ಮಾಡಿದ ಹಾಗೆ… ನಿಮ್ಮ ದನಿಯನ್ನು ಎಸ್ಪೀಬಿ,ರಾಜಣ್ಣರ ದನಿಯು ಹಿಮ್ಮೆಟ್ಟಿಸಿಬಿಟ್ಟಿದ್ದವು. ಒಂದರ್ಥದಲ್ಲಿ ಸಂಪೂರ್ಣವಾಗಿ ಅಡಗಿಸೇಬಿಟ್ಟಿದ್ದವು.
ಅದೊಂದು ಪಾರ್ಟಿಷನ್ ಆಗೋಗಿತ್ತು.. ನೀವು ಅಂದರೆ ಬ್ಲಾಕ್ ಅಂಡ್ ವೈಟ್… ಮಿಕ್ಕವರೆಲ್ಲ ಕಲರ್ ಅನ್ನೋ ಥರ. ನ್ಯಾಚುರಲಿ ಕಲರ್ ಗೆ ಅಟ್ರಾಕ್ಟ್ ಆಗೋದ್ವಿ…
ಆದರೆ…. ಯಾವಾಗಲೂ ಅಷ್ಟೇ.. ಸ್ವಲ್ಪ ಹಳೆಯದನ್ನು ನಾವು ಸೈಡಿಗಿಡ್ತೀವಿ. ಆದರೆ ಅದೇ ತುಂಬ ಹಳತಾದಾಗ… Antic ಎಂಬಂತೆ ಮತ್ತೆ ಹತ್ತಿರಕ್ಕೆಳೆದುಕೊಳ್ಳುತ್ತೇವೆ.
ಅಮಿತಾಭ್ ಯುವಕನಿದ್ದಾಗ ಇಷ್ಟವಾದ… ನಡುವಯಸ್ಸಿನಲ್ಲಿ ಬೋರಾದ… ಮತ್ತೆ ಇಳಿವಯಸ್ಸಿಗೆ ಜಾರುತ್ತಿದ್ದಂತೆ ಇಷ್ಟವಾದ.
ಕಲರ್ ನೋಡಿ ಕಣ್ಣು ಬಳಲಿದಾಗ…. ವಿಪರೀತ ಎಡಿಟೆಡ್ ಶಾಟ್ ಗಳಿಂದ ತಲೆ ಗುಮ್ಮೆಂದಾಗ… ಒಮ್ಮೆ ಟೀವಿಯನ್ನು ಬ್ಲಾಕ್ ಅಂಡ್ ವೈಟ್ ಮಾಡಿಕೊಂಡು ನೋಡೋಣ ಎನಿಸುವಂತೆ.. ಅಥವಾ ಹಳೆಯ ಹಾಡನ್ನು ನೋಡಿಬರೋಣವೆನಿಸಿದಂತೆ..
ಸಿಕ್ಕಾಪಟ್ಟೆ ಜಿಂಕ್ ಚಾಕ್ ಎನಿಸೋ ಮ್ಯೂಸಿಕ್ಕು, ಡಮಡಮ ಬಡಿತಗಳು, ಅರ್ಥವಾಗದ ಸಾಹಿತ್ಯ, ಮಿಕ್ಸಿಂಗಿನಿಂದ ಕೀರಲಾದ ಗಾಯನ ಇತ್ಯಾದಿಗಳನ್ನೆಲ್ಲ ಕೇಳಿದಾಗ… ಯಾವುದಾದ್ರೊಂದು ಹಳೆಯ ಮೆಲೋಡಿಯನ್ನು ಕೇಳಿಬರೋಣ ಎನಿಸುವಂತೆ…
ಹಳೆಯ ಹಾಡುಗಳಿಗೆ ಹಿಂದಿರುಗಿದೆವು.
ಹಿಂದಿಯಲ್ಲಾದರೆ…. ರಫಿ, ಮುಖೇಶ್, ತಲತ್, ಮನ್ನಾಡೆ, ಹೀಗೆ ಹಲವರಿದ್ದರು.
ಕನ್ನಡಕ್ಕೆ….? ಆಗೊಂದು ಈಗೊಂದು ಅಂತ ಹಾಡುತ್ತಿದ್ದವರು ಹಲವರಿದ್ದರೂ ಕೂಡ… ಸಿಂಹಾಸನ ನಿಮ್ಮದೇ ಆಗಿತ್ತು.!
ಎಂಥೆಂಥಾ ಹಾಡುಗಳು ಸ್ವಾಮಿ!
ಆಗಲೇ ಗೊತ್ತಾಗಿದ್ದು… ನೀವಂದ್ರೆ ಏನು ಅಂತ!
ಈಗ ಬಿಡಿ ನಿಮ್ಮ ಹಾಡುಗಳ ದೊಡ್ಡ ಕಲೆಕ್ಷನ್ನೇ ಇದೆ.
ಹಾಡೊಂದ ಹಾಡುವೆ ನೀ ಕೇಳು ಮಗುವೇ..
ಒಲವೇ ಜೀವನ ಸಾಕ್ಷಾತ್ಕಾರ
ಇವಳು ಯಾರು ಬಲ್ಲೆಯೇನು…
ಚೆಲುವಾದಾ ಮುದ್ದಾದಾ…
ನಿನದೇ ನೆನಪೂ ದಿನವೂ..
ಪ್ರೀತಿನೇ ಆ ದ್ಯಾವ್ರು ತಂದ…
ಭಕ್ತ ಕುಂಬಾರದ ಹಾಡುಗಳು, ಲಿಸ್ಟ್ ಮಾಡಿ ಮುಗಿದೀತಾ??
ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಗಂಗಾಧರ್, ರಾಜೇಶ್, ಎಲ್ಲರಿಗೂ ನಿಮ್ ವಾಯ್ಸು ಸೂಟ್ ಆಗ್ತಾ ಇತ್ತಾದ್ರೂ… ರಾಜ್ಕುಮಾರ್ ತಮ್ಮ ನಟನೆಯನ್ನೇ ನಿಮ್ಮ ವಾಯ್ಸಿಗೆ ಸೂಟ್ ಮಾಡ್ಕೊಂಡ್ ಬಿಟ್ರೋ ಅಥವಾ ನೀವೇ ಅಣ್ಣಾವ್ರ ಶಾರೀರವಾಗಬೇಕು ಅಂತ ಡಿಸೈಡ್ ಮಾಡ್ಕೊಂಡ್ ಬಿಟ್ಟಿದ್ರೋ ಗೊತ್ತಿಲ್ಲ. ನೀವು ರಾಜ್ಕುಮಾರ್ ಅವ್ರು ಪೀಬಿಶ್ರೀನಿವಾಸ್ ಅನ್ನೋಥರ ಆಗೋಗಿತ್ತು.
ಈಗಲೂ ಅನಿಸುತ್ತೆ… ಯಾವುದೋ ಒಂದು ಬ್ಲಾಕ್ ಅಂಡ್ ವೈಟ್ ಸಿನಿಮಾ ತೆಗೆದರೆ… ಅದಕ್ಕೆ ಈಗಿನ ಗಾಯಕರ್ಯಾರೂ ಬೇಡ… ನೀವೇ ಹಾಡಲಿ ಅಂತ! ಆ ಫೀಲ್ ನೀವು ಮಾತ್ರ ಕೊಡಬಲ್ಲಿರಿ ಅಂತ.
ಆದರೆ ಹಾಡೋಕೆ ನೀವೆಲ್ಲಿದ್ದೀರಿ?

ಸರಿ.. ಇಷ್ಟು ದಿನ ಇಲ್ಲದ ಪ್ರಶ್ನೆಗಳು ನೀವಿಲ್ಲವಾದಮೇಲೇ ಯಾಕೆ ಕೇಳಬೇಕೆನಿಸುತ್ತಿದೆ?? ಆದರೂ ಕೇಳಿಬಿಡ್ತೀನಿ
ರಾಜ್ಕುಮಾರ್ ತಮಗೆ ತಾವೇ ಹಾಡೋಕೆ ಶುರು ಮಾಡಿದ ಮೇಲೆ ನಿಮಗೆ ಅವಕಾಶ ಕಮ್ಮಿ ಆಯ್ತು ಅಂತಾರಲ್ಲ. ಅದು ನಿಜವಾ? ಅಥವಾ ರಾಜ್ ಕುಮಾರ್ ಗೆ ಬೇಡದ ದನಿ ಇನ್ಯಾರಿಗ್ಯಾಕೆ ಅಂತ ನೀವೇ ಹಾಡೋದು ಕಮ್ಮಿ ಮಾಡಿಬಿಟ್ರಾ?
ರಾಜ್ಕುಮಾರ್ ಅವರು ಹಾಡಲು ಪ್ರಾರಂಭಿಸಿದಾಗ ನಿಜಕ್ಕೂ ಏನನಿಸಿತ್ತು ನಿಮಗೆ?
ಅಷ್ಟೊಂದ್ ಭಾಷೆ ನಿರರ್ಗಳ ನಿಮಗೆ. ಆದರೂ ಯಾಕೆ ಬೇರೆ ಭಾಷೆಗಳಲ್ಲಿ ಹಾಡುವತ್ತ ಹೆಚ್ಚು ಒಲವು ತೋರಲೇ ಇಲ್ಲ ನೀವು?
ಈಗೆಲ್ಲ ಸಿಂಗರ್ ಅಂತ ಆಗ್ತಿದ್ದ ಹಾಗೆಯೇ… ಸ್ಟುಡಿಯೋ ಅಂತೆ, ಮ್ಯೂಸಿಕ್ ಕ್ಲಾಸ್ ಅಂತೆ, ಸಿಂಗಿಂಗ್ ಇಂದ ಜಂಪ್ ಆಗಿ ಮ್ಯೂಸಿಕ್ ಡೈರೆಕ್ಟರ್ ಅಂತೆ, ಕೆಸೆಟ್ ಮಾಡೋದಂತೆ, ಆಡಿಯೋ ಕಂಪನಿ ಮಾಡೋದಂತೆ ಹೀಗೆ… ಏನೇನೋ ಮಾಡ್ಕೊತಾರೆ. ನೀವ್ಯಾಕೆ ಏನೂ ಮಾಡಲಿಲ್ಲ…?
ಪಿಬಿಎಸ್ ಅಂದ್ರೆ ಪ್ಲೇಬ್ಯಾಕ್ ಸಿಂಗರ್ ಗೆ ಅನ್ವರ್ಥ ಅಂತಾರೆ… ನೀವು ಪ್ರತಿವಾದಿ ಭಯಂಕರ ಶ್ರೀನಿವಾಸ್ ಅಂತ ಕರೆಸ್ಕೊಂಡ್ರಿ. ಅದ್ಯಾಕೆ ಹಾಗೆ ನಿಮ್ ಹೆಸ್ರು? ಹೇಗ್ ಬಂತು ಅದು?
ನೀವು ಆಗಿಂದಲೂ ತಲೆಮೇಲೆ ಟೋಪಿ ಇಲ್ಲದೇ ಕಾಣಿಸ್ಕೊಳ್ಳಲೇ ಇಲ್ಲ. ಮೈಸೂರು ಪೇಟ,ಶಾಲು ಇತ್ತೀಚೆಗೆ ನೀವು ಪರಮನೆಂಟಾಗಿ ಧರಿಸುತ್ತಿದ್ರಿ… ಆ ಥರದ ಡ್ರೆಸ್ಸಿಂಗು ನಿಮಗಿಷ್ಟಾನಾ? ಹೆವಿ ಅನಿಸ್ತಾ ಇರಲಿಲ್ವಾ?
ನಿಮ್ಮ ಜೇಬಲ್ಲಿ ಪೆನ್ ಇರದ ಫೋಟೋ ಅಥವಾ ವಿಡಿಯೋ ನಾ ಕಂಡದ್ದು ಅಪರೂಪ. ಆದರೆ ಇತ್ತೀಚೆಗೆ ಅಷ್ಟೊಂದು ಪೆನ್ ಇಟ್ಟುಕೊಳ್ಳುತ್ತಿದ್ದಿರಲ್ಲ. ಯಾಕೆ?
ವಿದ್ವಾಂಸರು, ಅದ್ಭುತ ಸಾಹಿತಿ ಅಂತ ಎಲ್ಲರೂ ನಿಮ್ಮ ಬಗ್ಗೆ ಹೇಳುತ್ತಿದ್ದರು.. ಆದರೆ ನೀವ್ಯಾಕೆ ಗೀತರಚನೆ ಕಡೆಗೆ ಒಲವು ತೋರಲೇ ಇಲ್ಲ? ನಿಮ್ಮಿಂದ ದೊಡ್ಡ ಬರಹಗಳಾಗಲೀ ಪುಸ್ತಕಗಳಾಗಲೀ ಬರಲೇ ಇಲ್ಲವಲ್ಲ?
ಗಂಟಲು ಬತ್ತಿ, ದನಿಯಲ್ಲಿ ಶಕ್ತಿ ಕುಂದಿದಾಗಲೂ ಸಭೆಗಳಿಗೆ ಹೋದಾಗ ಅತ್ಯುತ್ಸಾಹದಿಂದ ನಿಮ್ಮ ಹಳೆಯ ಹಾಡುಗಳನ್ನು ಹಾಡಲು ಪ್ರಯತ್ನಿಸುತ್ತಿದ್ದಿರಿ. ನಿಮ್ಮ ಉತ್ಸಾಹ ನೋಡಿ ಖುಷಿಯಾಗುತ್ತಿದ್ದರೂ ಸಹ…ಎಷ್ಟು ಚೆಂದವಾಗಿ ಅವರೇ ಹಾಡಿದ್ದ ಹಾಡನ್ನು.. ಈಗ ಅವರ ದನಿಯಲ್ಲಿ ಕೇಳಲು ಕಷ್ಟವಾಗ್ತಿದೆ ಅನಿಸುತ್ತಿತ್ತು. ನಿಮ್ಮನ್ನು ಯಾರೂ ಒತ್ತಾಯಿಸುತ್ತಿರಲಿಲ್ಲ ಹಾಡಿ ಅಂತ. ಆದರೂ ಹಾಡುತ್ತಿದ್ದಿರಿ. ಹಾಡುವುದನ್ನು ಅಷ್ಟೊಂದು ಮಿಸ್ ಮಾಡ್ಕೊಳ್ತಿದ್ದಿರಾ?
ಏನ್ ಗೊತ್ತಾ… ರೇಡಿಯೋದಲ್ಲಿ ಹಾಡಿನ ಮೊದಲು ಕೊಡೋ ವಿವರಗಳನ್ನ ಕೇಳಿ ಕೇಳಿ, ಪೀ ಬಿ ಶ್ರೀನಿವಾಸ್ -ಪೀ ಸುಶೀಲ ಗಂಡ ಹೆಂಡ್ತಿ… ಎಸ್ ಪಿ ಬಾಲಸುಬ್ರಮಣ್ಯಂ-ಎಸ್ ಜಾನಕಿ ಗಂಡ ಹೆಂಡ್ತಿ ಅಂದ್ಕೊಂಡ್ ಬಿಟ್ಟಿದ್ದೆ. ಅದಕ್ಕೇ ನೀವಿಬ್ರೂ ಜೊತೇಲೇ ಹಾಡೋದು ಅಂತ.!
ಆಮೇಲೆ ಅರ್ಥ ಆಯ್ತು ಬಿಡಿ. ಅಂದ ಹಾಗೆ ನಿಮ್ಮನೇಲಿ ಇನ್ಯಾರೂ ಸಿಂಗರ್ ಆಗಲೇ ಇಲ್ವಾ?
ನಿಮಗೆ ಆಶುಕವಿತೆ-ಆಶುಗೀತೆ ಬರೆಯೋ ಅಭ್ಯಾಸ ಬಂದದ್ದು ಹೇಗೆ? ಕೆಲವೊಮ್ಮೆ ಅವು ಖುಷಿಯಾಗುವಂತಿರುತ್ತಿದ್ದವು. ಕೆಲವು ಬಾರಿ.. ಇವ್ರಿಗೆ ಯಾಕೋ ಅರುಳುಮರುಳು ಹೆಚ್ಚಾಗಿದೆ ಅನಿಸುವಂತಿರುತ್ತಿದ್ದವು.
ಪದ್ಮಭೂಷಣಕ್ಕೆ ಸಲೀಸಾಗಿ ಅರ್ಹರು ನೀವು. ಕೊನೆಗೂ ಕೊಡಲೇ ಇಲ್ಲವಲ್ಲ. ಅಟ್ ಲೀಸ್ಟ್ ಪದ್ಮಶ್ರೀ ಕೂಡ. ನಿಮಗಾದರೂ ಯಾವತ್ತೂ ಅದೆಲ್ಲ ಗೌರವ ಬೇಕನಿಸಲೇ ಇಲ್ವಾ? ಕರ್ನಾಟಕ ರಾಜ್ಯ ಸರ್ಕಾರದಿಂದ ಸಹ ಏನೂ ನಿರೀಕ್ಷಿಸದೆಯೇ ಉಳಿದುಬಿಟ್ಟಿರಲ್ಲ… ಹೇಗೆ ಇಷ್ಟೊಂದು ನಿರಪೇಕ್ಷ ಬದುಕು ಸಾಧ್ಯಮಾಡಿಕೊಂಡಿರಿ?
ಕೊನೆಯಾಸೆ ಅಂತೇನಾದ್ರೂ ಇತ್ತಾ? ಇನ್ನು ಒಂದೇ ಒಂದು ಸಿನಿಮಾಗಾದ್ರೂ ಹಾಡು ಹಾಡಬೇಕಂತ ಆಸೆ ಇತ್ತಾ?
ಯಾವುದಕ್ಕೂ ಉತ್ತರ ಬೇಡ. ಪ್ರಶ್ನೆಗಳು ಹಾಗೆಯೇ ಇರಲಿ. ಉತ್ತರ ಸಿಕ್ಕು ನಾ ಏನು ಮಾಡಿಯೇನು.?
ಗಣೇಶ ಹಬ್ಬ ಆಗಲೀ… ಅಥವಾ ಬೇರೇನೇ ಕಾರ್ಯಕ್ರಮ ನಡೆಯಲಿ…
ಮೂಷಿಕ ವಾಹನ.. ಮೋದಕ ಹಸ್ತಾ…. ಅಂತ ಶುರುವಾಗುವ ನಿಮ್ಮ ಹಾಡಿಲ್ಲದೆ ಅದು ಕಾರ್ಯಕ್ರಮವೇ ಅಲ್ಲ. ಅಷ್ಟರಮಟ್ಟಿಗೆ ನೀವು ನಮ್ಮೊಂದಿಗಿದ್ದೀರ. ಮಿಕ್ಕಂತೆ ನಿಮ್ಮ ನೂರಾರು ಚೆಂದದ ಸಿನಿಮಾ ಹಾಡುಗಳಿವೆ. ನೀವೆಲ್ಲೂ ಹೋಗಿಲ್ಲ..
ಇಷ್ಟೆಲ್ಲ ಮಾತಾಡಿದ ಮೇಲೂ …ನೀವು ನನ್ನ ಫೇವರಿಟ್ ಗಾಯಕನಲ್ಲ.. ಆದರೆ ತುಂಬ ಗೌರವಿಸುವ ವ್ಯಕ್ತಿತ್ವ.
ನಿಮ್ಮನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ನೀವು ಇದ್ದಾಗಲೂ ಇಲ್ಲದಂತೆ ಇದ್ದಿರಿ. ಈಗ ಇಲ್ಲದಾಗ್ಯೂ ಇದ್ದಂತೆ ಇರುತ್ತೀರಿ. ನಿಮ್ಮ ಹಾಡುಗಳ ಮೂಲಕ. ನೆನಪುಗಳ ಮೂಲಕ
ಶುಭಂ






Good emotions..thanks
so good frd thnks
Good details, observations and questions!!
Felt like.. he should have been there to answer these questions.
Thanks…