ಈ ಮುತ್ತುಗಕ್ಕೊಂದು ಮುನ್ನುಡಿ ….
ಹುಲಗಪ್ಪ ಕಟ್ಟಿಮನಿ
ಈ ಎಡವಟ್ಟನ ಊರು ನಾರಾಯಣದೇವರ ಕೆರೆ. ಅದೊಂದು ಸುಂದರವಾದ ಪಟ್ಟಣ. ಈ ಊರ ಪಕ್ಕದಲ್ಲೇ ತುಂಗ-ಭದ್ರೆಯರು ತಮ್ಮ ಸಿಟ್ಟು ಸೆಡವು ಬಿಟ್ಟು ಒಂದಾಗಿ ಹರಿಯುತ್ತಿದ್ದರು. ಈ ನದಿಗಳ ಉತ್ತರ ತೀರದ ಕಿಷ್ಕಿಂದೆಯ ಮಂದಿ ಈ ಅಕ್ಕ-ತಂಗಿಯರಿಗೆ ‘ಅಲ್ರವ್ವಾ….. ಸುಮ್ಮನೆ ಹೀಗೆ ಕುಣಕೋಂತ…. ಕುಣ….ಕೋಂತ ಹೋದರೆ ಏನು ಚೆಂದ? ಸ್ವಲ್ಪ ಇಲ್ಲೇ ನಿಂತು ದಣಿವಾರಿಸಿಕೋ ಬಾರ್ದ್? ಎಂದು ಅವರ ಸ್ವಾಟಿಗೆ ತಿವಿದರಂತೆ. ಈ ಅಕ್ಕ-ತಂಗಿಯರು ಬೆರಗಾಗಿ ನೋಡ ನೋಡುತ್ತಿದ್ದಂತೆ ಅವರಿಗೆ ಅಡ್ಡ ಕಟ್ಟೆ ಕಟ್ಟಿ ಅವನ್ನು ಅಲ್ಲೇ….. ನಿಲ್ಲಿಸಿಯೇ ಬಿಟ್ಟರು. ಮುಂದೇನಾಯಿತು… ಈ ಅಕ್ಕ-ತಂಗಿಯರ ಪಾತ್ರವನರಿಯದ ಮಂದಿ ನೋಡನೋಡುತ್ತಿದ್ದಂತೆ ಅವರ ಪಾದಗಳು, ಮೊಣಕಾಲುಗಳು ನೀರಲ್ಲಿ ಮುಳುಗ ತೊಡಗಿದವು. ಸೊಕ್ಕಿನಿಂದ ಮತ್ತೂ ಹಿಗ್ಗಿದರು ಈ ಅಕ್ಕ-ತಂಗಿಯರು, ಆಗ ನಾರಾಯಣ ದೇವರ ಕೆರೆಯ ಜೊತೆ ಹಲವಾರು ಊರುಗಳೇ ಅವರ ಮಡಿಲಲ್ಲಿ ಮುಳುಗಿದವು. ಒಂದು ಕಡೆ ಇವರನ್ನು ತಡೆಗಟ್ಟಿ ನಿಲ್ಲಿಸಿದ ಸಂಭ್ರಮ. ಮತ್ತೊಂದೆಡೆ ನೂರಾರು ವರ್ಷ ಬಾಳಿ ಬದುಕಿದವರ ಬದುಕೇ ನೀರಲ್ಲಿ ಮುಳುಗಿತ್ತು. ಮಕ್ಕಳೊಂದಿಗೆ, ದನಕರುಗಳೊಂದಿಗೆ ನನ್ನಪ್ಪ ಪಕ್ಕೀರಪ್ಪ, ಅವ್ವ ಬರಮವ್ವ ಸರಕಾರದ ಆದೇಶದ ಚೀಟಿ ಹಿಡಿದು ಎಲ್ಲರಂತೆ ನೀರಲ್ಲಿ ನಿಂತರು.

ಇಂದಿಗೆ 63 ವರ್ಷಗಳ ಹಿಂದೆ…
…… ಮುಂದೆ ಊರು ಹಂಚಿಕೆ ಆಯಿತು. ಹಂಚಿಕೆಯಾದದ್ದು ಹಗರಿಬೊಮ್ಮನಹಳ್ಳಿಯಾಯಿತು. ಅಪ್ಪ-ಅವ್ವರಿಗೆ ಮನೆ ಕಟ್ಟಲಿಕ್ಕೆ ಸರಕಾರ ನೀಡಿದ್ದು ಹತ್ತು ಕುಂಟೆ ಜಾಗ. ಸಾಗುವಳಿಗಾಗಿ ಸರಕಾರದಿಂದ ಬಂದ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಕಡಿದು (‘ಕಾಡನ್ನು ಕಡಿದು ನಾಡನ್ನಾಗಿಸೋಣ….’ ಎನ್ನುವ ನಾಣ್ಣುಡಿಯ ಕಾಲ.) ನನ್ನಜ್ಜ ಹುಲುಗಜ್ಜ (ತಾಯಿಯ ತಂದೆ, ಆತನ ಹೆಸರನ್ನೇ ನನಗಿಟ್ಟಿದ್ದಾರೆ.) ನ ಮನೆಯ ವಿನ್ಯಾಸದಂತೆಯೇ ನನ್ನಪ್ಪ ಮನೆ ಕಟ್ಟಿದ. ನಾನು, ನನ್ನ ಕೊನೆಯ ಅಣ್ಣ ವಿಠೋಬ (ಕರಿಯಜ್ಜ) ಈ ಹೊಸ ಮನೆಯಲ್ಲಿಯೇ ಹುಟ್ಟಿದ್ದು. ನಾಲ್ಕು ಜನ ಅಣ್ಣಂದಿರ, ಇಬ್ಬರು ಅಕ್ಕಂದಿರ ತಮ್ಮನಾಗಿ, ಹೆಗಲಿಂದ-ಹೆಗಲಿಗೆ, ಬಗಲಿಂದ-ಬಗಲಿಗೆ ಬದಲಾಗುತ್ತ ಬೆಳೆದೆ. ಅಂತೆಯೇ ನನ್ನವ್ವನ ಬಾಯಲ್ಲಿ ನಾನು ‘ಕಡೇ ಹುಟ್ಟು ಎಡವಟ್ಟು’ ಆದೆ.
ಅಪ್ಪ ಕಟ್ಟಿದ ಈ ಮನೆ ಹದಿನಾರು ಕಂಬಗಳ ಪಡಸಾಲೆಯ ಮನೆ. ನಾಗೊಂದಿಗೆಗಳು, ಅಡಕಲು ಗಡಿಗೆಗಳು, ಇಪ್ಪತ್ತು ಮೂವತ್ತು ದನಗಳ ಕೊಟ್ಟಿಗೆ, ಮೇವು ಕತ್ತರಿಸುವ ಜಾಗ, ಕತ್ತರಿಸಿದ ಮೇವು ಕತ್ತರಿ ಇಡುವ ಅಟ್ಟ, ಸಾಯಂಕಾಲ ಜನರ್ಾಲು (ಕಿಡಕಿ) ಹತ್ತಿ ಕಡ್ಲೆ ಬೆಲ್ಲ ತಿನ್ನುತ್ತಿದ್ದ ಜಾಗ, ಹಾಲು-ಮೊಸರು ಇಡಲು ಕಟ್ಟಿದ್ದ ನಲುವು, ನಾಗರ ಪಂಚಮಿಗೆ ಪಡಸಾಲೆಯಲ್ಲಿ ಕಟ್ಟುತ್ತಿದ್ದ ಜೋಕಾಲಿ… ಮಳೆಗಾಲ ಬಂತೆಂದರೆ ನನ್ನವ್ವನ ಕಾಟ ತಾಳಲಾರದೆ ಅಣ್ಣಂದಿರು ಹಳ್ಳದ ಅರಲು ಮಣ್ಣನ್ನು ತಂದು ಮಾಳಿಗೆಗೆ ಹಾಕುತ್ತಿದ್ದದ್ದು…. ಮಾಳಿಗೆಯಲ್ಲಿ ಹುಲ್ಲು ಬೆಳೆಯಲು ಬಿಡಬಾರದು ಎಂದು ಹುಲ್ಲನ್ನು ನಾವು ಮಕ್ಕಳು ಕಿತ್ತು ಹಾಕುತ್ತಿದ್ದದ್ದೂ…. ನನ್ನ ದೊಡ್ಡಣ್ಣ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಲೇ ಕುಡಿದುಳಿದ ಹಾಲನ್ನು ತಂದು ‘ಆಕಳ ಒದ್ದು ಬಿಡ್ತವ್ವ’ ಎಂದು ಹೇಳುತ್ತಿದ್ದದ್ದೂ… ಅದೇ ದೊಡ್ಡಣ್ಣ ಬಾವಿ ಕಡಿದು ಬಾವಿಯಲ್ಲಿ ನೀರು ಬಿತ್ತೆಂದು ಒಂದೇ ಉಸುರಿನಲ್ಲಿ ಓಡೋಡಿ ಬಂದು, ಅವ್ವ ಪಡಸಾಲೆಯ ಉದ್ದಕ್ಕೂ ಕಟ್ಟಾಕಿಸಿದ್ದ ದೇವರುಗಳಿಗೆ ನಮಸ್ಕರಿಸಿದ್ದು ನನ್ನ ಸ್ಮೃತಿಯಲ್ಲಿ ಹಾಗೇಇದೆ. ನನ್ನ ಮೂರನೇ ಅಣ್ಣ, ಅವ್ವ ತನಗೆ ಕೊಟ್ಟ 20 ಪೈಸೆಯಲ್ಲಿ ಪ್ರೀತಿಯಿಂದ ನನಗೇ 5 ಪೈಸೆ ಕೊಡುತ್ತಿದ್ದ.

ನನ್ನವ್ವ ದುಡ್ಡೆಣಿಸಿ ದೇವರ ಹುಂಡಿಗೆ ಹಾಕುವಾಗ ನನ್ನ ಎರಡನೇ ಅಣ್ಣ ನಾಗಪ್ಪಣ್ಣ (ನಾಗರ ಅಮಾವಾಸೆಯಂದು ಹುಟ್ಟಿದಾತ, ಈಗಲೂ ಈತನನ್ನು ಮಾತನಾಡಿಸಲು ಭಯ, ಅಕ್ಕಂದಿರೊಂದಿಗೆ ಉಳಿದಿರುವಾತ ಈತನೊಬ್ಬನೆ.) ಚಿಕ್ಕವನಿದ್ದಾಗ ಅಳುತ್ತ ನನ್ನವ್ವನಿಗೆ ಊಂ… ಊಂ… ಎಣಿಸು ಎಣಿಸು…. ಅಪ್ಪಂಗೆ ಹೇಳ್ತೀನಿ ಎನ್ನುತ್ತ ನಿಲ್ಲುತ್ತಿದ್ದ ಬಾಗಿಲುಗಳ ಸಂದಿ, ಹೊರಗೆ ದೊಡ್ಡ ಅಂಗಳ, ತೊಗರಿ ಪುಳ್ಳೆಯಿಂದ ಬಲರ್ು ಮಾಡಿಕೊಂಡು, ನೀರೊಡೆದು ಗುಡಿಸಬೇಕು. ಬೇಸಿಗೆಯಲ್ಲಿ ಸಾಮಾನ್ಯವಾಗಿ ನಜಾವೆಲ್ಲರೂ ಅಂಗಳದಲ್ಲಿಯೇ ಮಲಗುತ್ತಿದ್ದುದು, ಊರಿಂದ ಬಂದ ನನ್ನ ಸಣ್ಣವ್ವ ಆಕಾಶದಲ್ಲಿ ಚುಕ್ಕಿಗಳನ್ನು ತೋರಿಸಿ ಅದೋ ! ‘ಚನ್ನಮ್ಮನ ದಂಡಿ’, ಅಲ್ಲಿದೆಯಲ್ಲ ಅದು ‘ಕೂರಿಗೆ ತಾಳ’, ಇಲ್ಲಿದೆಯಲ್ಲ ಇದು ‘ಸಪ್ತಶರ್ಿ ಮಂಡಲ’ ಎಂದು ಅವುಗಳ ಬಗ್ಗೆ ಕತೆ ಹೇಳುತ್ತ, ಮತ್ತೊಂದು ಕಡೆ ಮಿಣುಕುವ ಚುಕ್ಕಿ ತೋರಿಸಿ ಅದು ‘ಕುಲ್ಡು ಕುಂಬಾತರ್ಿ, ತನ್ನ ಗಂಡ ಬೇಟೆಗೊಗ್ಯಾನೆಂದು ಖಾರ ಕುಟ್ತಾ ಇದ್ದಾಳೆ ಎನ್ನುತ್ತಿದ್ದಳು. ಹಗಲಿನಲ್ಲಿ ಈ ಅಂಗಳದಲ್ಲಿಯೇ ಗೋಲಿ, ಬುಗುರಿ ಆಡಿದ್ದು… ಕೊಯ್ಲಾದ ಕಾಳು, ಕಡಿ ಒಣಗಿಸೋದು, ಮಳೆ ಬರುವ ಲಕ್ಷಣ ಕಂಡರೆ ಮಕ್ಕಳು ಮರಿ ಎನ್ನದೆ ಎಲ್ಲರೂ ಹಾಂ, ಹೂಂ ಎನ್ನುವುದರೊಳಗೆ ಸಾಗಿಸಿಬಿಡುತ್ತಿದ್ದದ್ದು, ಇದೇ ಅಂಗಳದಲ್ಲಿಯೇ ನನ್ನ ಸಣ್ಣಕ್ಕ ನನ್ನನ್ನು ಆಡಿಸುವಾಗ ತಾನೂ ಕೂತು, ತಾನುಟ್ಟ ಲಂಗವನ್ನೇ ನೆಲಕ್ಕೆ ಹಾಸಿ ಅದರ ಮೇಲೆ ನನ್ನ ಮುಕಳಿ ಮಣ್ಣಾಗದಂತೆ ನನ್ನನ್ನು ಕೂರಿಸಿಕೊಳ್ಳುತ್ತಿದ್ದದ್ದು….. ನನ್ನ ದೊಡ್ಡ ಅಕ್ಕನಂತೂ ಅಷ್ಟೊತ್ತಿಗೆ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಿದ್ದಳು.
ರಾತ್ರಿ ಪಡಸಾಲೆಯಲ್ಲಿ ಕಂದೀಲು, ಅಡುಗೆ ಮನೆಯಲ್ಲಿ ಎಣ್ಣೆ ದೀಪ. ಉಳಿದ ಕಡೆಯ ಬೆಳಕಿಗಾಗಿ ಈ ಕಂದೀಲೇ ಓಡಾಡಬೇಕು. ಅಪ್ಪನ ಬಯಲಾಟದ ತಾಲೀಮಿಗೂ ಇದೇ ಕಂದೀಲು ಹೋಗಬೇಕು. ಮನೆ ಮುಂದಿನ ಬೇವಿನ ಮರದ ಕೆಳಗೆ, ತಾನು ಹಾಕುವ ಘಟೋದ್ಗಜ ವೇಷದ ಪ್ರಭಾವಗಳಿಗಾಗಿ ಎತ್ತಿನ ಗಾಡಿಯ ಮರದ ಗಾಲಿಯನ್ನು ತನ್ನ ಭುಜಗಳಿಗೆ ನಿಲ್ಲುವಂತೆ ಬಡಗಿಯಿಂದ ಅಳವಡಿಸಿಕೊಳ್ಳುತ್ತಿದ್ದದ್ದು… ಆಟದ ಮದ್ದಳೆ ಇಡುವ ನಾಗೊಂದಿಗೆ…. ಕಾಲು ಪೆಟ್ಟಿಗೆ ಇಡುವ ಮೂಲೆ, ಮಜ್ಜಿಗೆ ಕಡೆಯುವ ಕಂಬ, ಯಾವುದೇ ಪತ್ರ ಯಾವುದೇ ರಶೀದಿ ಬಂದರೂ ತಂತಿಯಿಂದ ಚುಚ್ಚಿಸಿಕೊಂಡು ನೇತಾಡುವ ಕಾಗದಗಳ ಗುಚ್ಛ…. ನನ್ನತ್ತಿಗೆಯರ ಸಹಾಯದಿಂದ ನನ್ನವ್ವ ನನಗೆ ಸ್ನಾನ ಮಾಡಿಸುತ್ತಿದ್ದ ದೊಡ್ಡ ಸ್ನಾನದ ಬಚ್ಚಲು ಹಾಗಿರುತ್ತಿತ್ತಂತೆ ನನ್ನ ಹಾರಾಟ. ಬಚ್ಚಲು ಮನೆಯ ಪಕ್ಕ ನೀರು ಸೇದುವ ಹಗ್ಗ ನೇತಾಕಿಕೊಂಡ ಗೂಟ, ಕೊಟ್ಟಿಗೆಯಲ್ಲಿ ಕಂಟಿ, ರಂಟಿ, ಮೇಣಿ, ಬಿತ್ತುವ ಕೂರಿಗಿ, ನೊಗಗಳನ್ನು ಸುರಕ್ಷಿತವಾಗಿಡುವ ಜಾಗ, ಮಿಣಿ, ಬಾರುಕೋಲು, ಕೊಳ್ಳಗ್ಡ, ಎತ್ತಿನ ಬಾಯಿಗೆ ಕಟ್ಟುವ ಚಿಕ್ಕಗಳನ್ನು ನೇತಾಕಿಕೊಂಡ ಮರದ ಕೊಕ್ಕೆ…. ಹರಿತವಾದ ಕುಚರ್ಿ, ಕುಡುಗೋಲುಗಳೊಂದಿಗೆ ಮಕ್ಕಳಿಗೆ ಸಿಗದಂತೆ ನೇತಾಕಿದ ನೆಲಗಣಿ… ಜೊತೆಗೆ ಮರದ ದೊಡ್ಡ ಪೆಟ್ಟಿಗೆ…..

ಎಷ್ಟೋ ಸಣ್ಣ ಪುಟ್ಟ ನ್ಯಾಯ ಪಂಚಾಯ್ತಿಗಳು ತೀಮರ್ಾನವಾಗುತ್ತಿದ್ದದ್ದು ನಮ್ಮ ಪಡಸಾಲೆಯಲ್ಲೇ. ನನ್ನಪ್ಪನಂತೂ ಚಾಕ್ ಸರ್ಕಲ್ ನಾಟಕದ ಅಜ್ಡಾಕನೇ ಸರಿ. ಮಳೆಗಾಲದ ಮುನ್ನ ಭೂಮಿ-ಆಕಾಶ ಒಂದಾಗಿ ಏಳುವ ಕೆಂದೂಳು ಎದ್ದರೆ ಮೈ ಎಲ್ಲ ನಡುಕ. ನನ್ನ ಅಣ್ಣಂದಿರು ನೀರು ಸೇದುವ ಹಗ್ಗಗಳಿಂದ ಕೊಟ್ಟಿಗೆಯ ಚಪ್ಪರವನ್ನು ಬಿಗಿಯಬೇಕಾಗುತ್ತಿತ್ತು. ಒಮ್ಮೆ ಗಾಳಿಯ ರಭಸಕ್ಕೆ ಹಾರಿದ ತಾಳೆಯ ತೀರುಗಳು ಮುರಿದು ಚಪ್ಪರವು ಕವುಚಿ ಬಿದ್ದಾಗ ಒಳಗಡೆ ದನಕರುಗಳ ಅಂಬಾಕಾರ…. ಈಗಲೂ ನೆನಪಿದೆ. ಆ ಸಮಯದಲ್ಲಿ ಭಯದಿಂದ ನಾನು ನನ್ನ ದೊಡ್ಡ ಅತ್ತಿಗೆಯ ಮಡಿಲಲ್ಲಿ ಮುದುಡಿ ಮಲಗಿದ್ದೆ. ಈ ಎಲ್ಲದರ ಘಮಲು ನಾನು ಮಾಡುವ ಪಾತ್ರಗಳಲ್ಲಿ, ಆಡಿಸಿದ ನಾಟಕಗಳಲ್ಲಿ ಬಂದಿವೆ. ನನ್ನ ಮೊದಲ ಗುರುಗಳು ಶ್ರೀ ಚಿದರಂಬರ ರಾವ್ ಜಂಬೆಯವರು ವಾಸ್ತವ ಶೈಲಿಯ ನಾಟಕಕ್ಕೆ ಹಾಕುತ್ತಿದ್ದ ರಂಗ ಸಜ್ಜಿಕೆಯಲ್ಲಿ ನಾನು ಮತ್ತೆ ನನ್ನೂರಿಗೆ ಹೋಗಿಬಿಡುತ್ತಿದ್ದೆ. ಅಂತೆಯೇ ಏಳೆಂಟು ವರ್ಷಗಳ ಹಿಂದೆಯೇ ಮನೆ ಕಟ್ಟುವ ಯೋಚನೆ ಶುರುವಾದಾಗ ಮಕ್ಕಳೊಂದಿಗೆ ಕಾಗದದಲ್ಲಿ ಗೆರೆ ಎಳೆದೆಳೆದು ಪ್ರಮೀಳಾಗೆ ತೋರಿಸಿ, ಅಳಿಸಿ…. ಮಾತಾಡಿ… ಮಾತಾಡಿ ಸುಮ್ಮನಾಗಿ ಬಿಡುತ್ತಿದ್ದೆ. ಇತ್ತೀಚೆಗೆ ‘ಚಿರೇ ಬಂದಿವಾಡೆ’ ಗಾಗಿ ನಮ್ಮ ದ್ವಾರಕಿ ರಂಗ ಸಜ್ಜಿಕೆ ಹಾಕಿದ ಮೇಲೆ ಮತ್ತೆ ಗೆರೆಗಳನ್ನು ಎಳೆಯಲಾಳರಂಭಿಸಿದೆ. ಕುಂತಿ ಕಣ್ವ ತಮ್ಮ ಪಾದಗಳಿಂದ ಜಾಗವನ್ನು ಮನೆಯಲ್ಲೇ ಅಳೆಯತೊಡಗಿದರು. ಇದೊಂದು ಹುಚ್ಚಾಟವೇ ಆಯಿತು. ಸ್ವಲ್ಪ ದಿನಗಳ ಕಾಲ ರಂಗಾಯಣಕ್ಕಾಗಿ ಧಾರವಾಡಕ್ಕೆ ಹೋದೆ. ಅಲ್ಲಿಯ ಹಳೇ ಮನೆಗಳನ್ನು ನೋಡಿದೆ. ಪಕ್ಕದ ನರೇಂದ್ರ ಎಂಬ ಹಳ್ಳಿಯಲ್ಲಿ ‘ದ್ಯಾಮಣ್ಣ’ ಎಂಬ ಬಡಗಿ, ಅವನ ಇಂಜಿನಿಯರಿಂಗ್ ತತ್ವದಲ್ಲೇ ಮನೆಗಳ ನಿಮರ್ಾಣ. ಕಲಾತ್ಮಕತೆ ಅಂದರೆ ಅದುವೆ. ಮರ ಮುಟ್ಟುಗಳಿಂದ ಹೆಬ್ಬಾಗಿಲು-ಹಿತ್ತಲ ಬಾಗಿಲು ಒಂದೇ ನೇರದಲ್ಲಿ. ನಡುಮನೆಯಲ್ಲಿ ತಂಪಾದ ಗಾಳಿ… ನನಗೆ ಮತ್ತೆ ಮನೆ ಕಟ್ಟುವ ಹಂಬಲವಾಯಿತು.
ಈ ಮಧ್ಯೆ ಕಳೆದ ದೀಪಾವಳಿ ಅಲ್ಲ ಅದರ ಹಿಂದಿನ ದೀಪಾವಳಿ. ಕೆಲಸದ ಒತ್ತಡದಿಂದ ಪ್ರಮೀಳಳನ್ನು ಮಕ್ಕಳೊಂದಿಗೆ ಮಂಗಳೂರಿಗೆ ಅವಳ ತಂಗಿಯ ಬಳಿ ಕಳುಹಿಸಿಕೊಟ್ಟು, ಮಾರನೆಯ ದಿನವೇ ಯಾರೂ ಇಲ್ಲದ ಮನೆಯಲ್ಲಿ ಕೂರದೆ ನಾನೂ ಮಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದೆ. ಆ ಖುಷಿಯಲ್ಲಿ ನನ್ನ ಷಡ್ಕ ಮಂಗಳದಾಸ ಗುಪ್ತ ಈ ದಿನ ‘ನಿಮ್ಮ ದಿನ’ ನೀವು ಹೇಳಿದಂತೆ ಎಂದ. ‘ಕಂಬಗಳು ಸಿಕ್ಕುವುದೆಲ್ಲಿ’ ಎಂದೆ, ‘ಕೈಕಂಬಕ್ಕೆ ಹೋಗಬೇಕು’ ಎಂದ. ಸರಿ ಹೊರಾಟಾಯ್ತು. ಕೈ-ಕಂಬದ ಮಾರ್ಗ ಮಧ್ಯದಲ್ಲಿ ಕಂಬಗಳನ್ನು ನಿಲ್ಲಿಸಿದ್ದರು. ಅದರ ಅಂಗಡಿ ಬೇರೊಂದು ಕಡೆ ಇದೆ ಎಂಬುದು ಗೊತ್ತಾಯಿತು.

ಅದರ ಮಾಲಿಕ ಉಸ್ಮಾನ್ ಎಂಬ ವ್ಯಾಪಾರಿ ‘ರೈಂಬೋ ಆ್ಯಂಟಿಕ್ ಶಾಪ್’ ಅಂಗಡಿ ಹೆಸರು (9845705825). ಅಲ್ಲಿ ನಿಲ್ಲಿಸಿದ್ದ ಕೆತ್ತನೆಯ ಬಾಗಿಲುಗಳು, ಕಂಬಗಳು, ಕಂಬದ ಬೋದಿಗೆಗಳು, ಮಂಚ, ಅಕ್ಕಿ ತುಂಬುವ ಬಳ್ಳ, ಮರದ ದೊಡ್ಡ ದೊಡ್ಡ ಪೆಟ್ಟಿಗೆಗಳು, ಮರದ ಖುಚರ್ಿಗಳು, ಒಂದು ಎತ್ತಿನ ಗಾಡಿಯೂ ಸಹ. ಮೈಸೂರು ಮಹಾರಾಜರಲ್ಲೂ ಇದ್ದಿರಲಾರದು ಅಂತಹ ಕೆತ್ತನೆಯ ಕುಸುರಿಯ ಮರದ ಎತ್ತಿನ ಗಾಡಿ, ಗತಿಸಿದ ಮಲೆನಾಡ ಬದುಕೇ ಅವನ ಅಂಗಡಿಯಲ್ಲಿತ್ತು. ಹತ್ತಾರು ಬಡಗಿಗಳು ಉಜ್ಜುತ್ತ, ತಿಕ್ಕುತ್ತ ಬಣ್ಣ ಹಾಕುತ್ತಿದ್ದರೆ, ಈ ಉಸ್ಮಾನ್ ಮಾಲಿಕ ಪೋನಿನಲ್ಲಿ ಲಕ್ಷಗಳಲ್ಲಿ ಮಾತಾಡುತ್ತಿದ್ದಾನೆ. ಆಳೆತ್ತರದ ಕಂಬಗಳನ್ನು ತೋರಿಸಿ ಇವು ಮುಂಬೈಗೆ, ಈ ಬಾಗಿಲು ಬೆಂಗಳೂರಿನ ಯಾವುದೋ ಇಂಟರ್ ನ್ಯಾಷನಲ್ ಹೋಟೆಲ್ಗೆ ಎಂದು ಪಟಪಟನೆ ವ್ಯವಹರಿಸುತ್ತಿದ್ದಾನೆ. ನನ್ನ ಮನೆಯ ವಿನ್ಯಾಸ ಇಲ್ಲಿ ನನಗೆ ಕಾಣತೊಡಗಿತು. ಲಕ್ಷ-ಲಕ್ಷಗಳಲ್ಲಿ ನೇತಾಕಿಕೊಂಡು ಜೋತಾಡುತ್ತಿದ್ದ ಉಸ್ಮಾನ್ನನ್ನು ಹಗ್ಗ ಕಟ್ಟಿ ಎಳೆದೆಳೆದು ಸೋತು ಸುಣ್ಣಾಗುವಂತೆ ಮಾಡಿದೆವು. ಕಡೆಗೆ ‘ಮರಾಯ್ರೆ… ನಿಮ್ಮನ್ನು ನೋಡ್ಲಿಕ್ಕೆ ನನ್ನಿಂದಾಗ್ತಿಲ್ಲ ಯಾರಿಗೂ ಹೇಳಬೇಡಿ, ಆಯ್ತು ಕೊಡ್ತೇನೆ ಎಂದು ಒಂದು ವಾರದ ನಂತರ ಕಂಬ, ಕಿಟಕಿ, ಬಾಗಿಲು, ಬೋದಿಗೆಯೊಂದಿಗೆ ಮೈಸೂರಿಗೇ ಬಂದು ನೋಡಿ ನಮ್ಮ ಮನೆಗೆ ಬಂದಾಗ ಈ ಎರಡು ಕಂಬಗಳ ಎದರು ನೀವು ತುಂಬ ಹೊತ್ತು ನಿಂತಿದ್ದಿರಿ, ಹಾಗಾಗಿ ಅವನ್ನೂ ತಂದು ಬಿಟ್ಟೆ. ಇದು ನಿಮ್ಮ ಮೇಲಿನ ನನ್ನ ಪ್ರೀತಿಗಾಗಿ ಎಂದುಬಿಟ್ಟ ಪುಣ್ಯಾತ್ಮ.
ನನ್ನ ಹೆಂಡತಿ ಇನ್ನು ನೀವು ಗೆರೆ ಎಳೆಯುತ್ತ ಕೂಡುವಂತಿಲ್ಲ ಶುರು ಮಾಡಲೇಬೇಕೆಂದಳು. ಸರಿ ಮಾತೆತ್ತಿದರೆ ಸ್ಕೈಯರ್ ಫೀಟ್ ಲೆಕ್ಕದಲ್ಲಿ ಮಾತಾಡುವವರ ಜೊತೆ ಕಟ್ಟುವುದು ಹೇಗೆ? ಭಯವಾಯಿತು. ನಮ್ಮನ್ನು ಅರ್ಥಮಾಡಿಕೊಳ್ಳುವವರನ್ನು ಹುಡುಕಬೇಕಿತ್ತು. ಅಂತೂ ಕೊನೆಗೆ ಮರಿನಾ ಪ್ರಸಾದ್ ಹಾಗೂ ರಮೇಶ್ ಅವರನ್ನು ನಂಬಿ, ಮರಿನಾ ಅವರಿಗೆ ವಿನ್ಯಾಸಕಿಯ ಪಾತ್ರ, ರಮೇಶರಿಗೆ ಇಂಜಿನಿಯರ್ ಪಾತ್ರ ಕೊಟ್ಟು ನಕ್ಷತ್ರಿಕನ ಪಾತ್ರವನ್ನು ನಾನೇ ತೊಟ್ಟೆ. ಅವರ ಪಾಡನ್ನು ಅವರೇ ಹೇಳಬೇಕು. ಜೊತೆಗೆ ರಮೇಶ್ ತಮ್ಮಂದಿರು ತೇಜಸ್ವಿ, ಮನು ಶಿಸ್ತಿನ ಸಿಪಾಯಿಗಳು. ಅನುಕರಿಸಬೇಕಾದ ಸರಳತೆಯವರು.

ಅಂತೂ ಶುರುವಾಯಿತು ನಮ್ಮ ಮನೆ ! ಹಿತೈಷಿಗಳು ತೋರಿದ ಗಣೇಶ ಚೌತಿಯಂದು ನನ್ನ ಕೊನೇ ಅತ್ತಿಗೆ ಗುದ್ದಲಿ ಪೂಜೆ ಮಾಡಿಸಿದರು. ವರ್ಷದುದ್ದಕ್ಕೂ ಹದವಾದ ನಡೆ. ಈ ಮಿತ್ರರು ಎಲ್ಲೂ ಹುಬ್ಬುಗಂಟಿಕ್ಕಿಕೊಳ್ಳಲೇ ಇಲ್ಲ. ಸಣ್ಣ ದನಿಯಲ್ಲಿ, ಮೇಲ್ಸ್ತರದಲ್ಲಿ ಮಾತಾಡುವ ‘ಕೆಂಚ’ ಮೇಸ್ತ್ರಿಯಂತೂ ದೇವನೂರರ ಕುಸುಮಬಾಲೆಯ ಅಮಾಸನಂತೆ. ಹೊರ ಬಾಗಿಲ ಮೇಲೆ ಕಲ್ಲು ಚಪ್ಪಡಿ ಎತ್ತಿಡುವಾಗ ಏಳೆಂಟು ಜನ ದೊಡ್ಡ ದೊಡ್ಡ ದನಿಯಲ್ಲಿ ‘ಹಾಂ’ ‘ಹೂಂ’ ‘ಎತ್ತು’ ಎನ್ನುವವರ ಗಲಾಟೆಯಲ್ಲಿ ಈ ಕೆಂಚ ಮೇಸ್ತ್ರಿಯ ಕೂಗಾಟದ ದನಿಯೇ ಚೆಂದ. ಧಾರವಾಡದ ಕೇಶವ ಬಡಿಗೇರ, ದ್ಯಾಮಣ್ಣ ಕೈ ಕಂಬದಲ್ಲಿ ನಾವು ನೋಡಿದ ಬಾಗಿಲಿನಂತೆಯೇ ಹೆಬ್ಬಾಗಿಲನ್ನು ಕೆತ್ತಿ ನಿಲ್ಲಿಸಿದ್ದಾರೆ. ಹಾಗೇ ಮೋಹನ್, ಪ್ರಭು, ಸುಂದರ್, ಜಾನ್, ಮನೆ ಕಾದ ಭಾಗ್ಯಮ್ಮ, ಕುಮಾರ ಈ ಎಲ್ಲರ ಶ್ರಮವೇ ಈ ಮನೆ.
ಗೆಳೆಯ ಯೋಗೇಶ್ 1998 ರಲ್ಲಿ ಬೇಡ ಬೇಡ ಎಂದರೂ ಕೈ ಹಿಡಿದೆಳೆದೊಯ್ದು ಸುವರ್ಣ ಅವರ ಎದುರಿನಲ್ಲಿ ನಿಲ್ಲಿಸಿ ‘ಸಾರ್ ಇವರನ್ನು ಈ ರೂಪಾನಗರದಲ್ಲೇ ಉಳಿಸಿಕೊಳ್ಳಿ ಎಂದು ಒತ್ತಾಣತಿ ಮಾಡಿದ ಫಲ ಈ ಮನೆ. ಅಂದು ಯಾವುದೋ ಶಕ್ತಿ ಅವರ ಬಾಯಿಂದ ನುಡಿಸಿತ್ತು. ಕೊನೆಗೂ ನಮ್ಮ ಗುರು ಕಾರಂತರ ಬಾಯಿಂದ ಆಗಾಗ ಬರುತ್ತಿದ್ದ ಹಾಗೆಯೇ ಇದೆಲ್ಲ………
ಯೋಗಾ……. ಯೋಗವೇ ಸರಿ……….







0 Comments