ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಇದು ಅವಳೊಬ್ಬಳ್ದೇ ಕಥೆಯಲ್ಲ’ – ಹೇಮಲತಾ ಬರೆದಿದ್ದಾರೆ

ಹೇಮಲತಾ

ಮೊದಲೆಲ್ಲ ಸುಮ್ಮಸುಮ್ಮನೆ ನೆಪಮಾಡಿಕೊಂಡು ಬೈಕ್ನಲ್ಲಿ ಕೂಡಿಸಿಕೊಂಡು ಆಕ್ಸಿಲರೇಟರ್ ಕೊಡುತ್ತ ನೀನು ಹಿಂಗೆಲ್ಲ ಹಳ್ಳಿ ಗಮಾರೆತರಹ ಹಿಂದುಗಡೆಯ ಸರಳು ಬಿಗಿಹಿಡಿದು ಕೂತರೆ ಎಂತ ಪೆದ್ದಿಯನ್ನ ಮದುವೆ ಆಗುತ್ತಿದ್ದೇನೆ ಅಂತ ಬೇಸರವಾಗುತ್ತೆ ಅಂತ ಅವನು ರೇಗಾಡಿದರೆ, ಹುಡುಗ ಇಷ್ಟೊಂದು ರೋಮ್ಯಾಂಟಿಕ ಅಂತ ಒಳಗೊಳಗೇ ಖುಷಿ ಅವಳಿಗೆ . ಕೇವಲ ಅವಳ ಕೈ ಸ್ಪರ್ಶಿಸುವುದಕ್ಕೆ ಪ್ಲಾನ್ ಮಾಡಿ ಕಾರ್ ಕಲಿಸುಕೊಡುವ ಆಟ ಆಡುತ್ತಿದ್ದವನ ಬಗ್ಗೆ ಗೆಳತಿಯರೊಂದಿಗೆ ಅದೆಷ್ಟು ನಗಾಡಿಕೊಂಡು ಹೇಳಿಕೊಂಡಿದ್ದಳು…ಅದಾಗಲೇ ಮದುವೆಯಾದವರಿಗೆ ಅಸೂಯೆಯಾದರೆ, ಆಗದೆ ಇದ್ದವರಿಗೆ ಮೈಯೆಲ್ಲಾ ಮೂಡಿದ್ದ ಕೆಂಪು ನಾಚಿಕೆ ..
ಆಮೇಲೆ ಅದೇನಾಯಿತು , ಪೂಜಾರಿ ಸರಿಯಾದ ಸುಮುಹೂರ್ತ ನಿಗದಿ ಮಾಡಿಕೊಡಲಿಲ್ಲವ ತಾಳಿ ಬಿಗಿಯಲು ?
ಅವನ ಪ್ರೀತಿಯ ಪರಿಕಲ್ಪನೆಯೇ ಮಕಾಡೆ ಮಲಗಿಕೊಂಡು ಬಿಟ್ಟಿತು …
ಬೆಚ್ಚನೆಯ ತಬ್ಬುಗೆ ಇರಲಿ ನಗುತ್ತ ನಿಂತುಕೊಂಡರು ಹಾವು ತುಳಿದವನಂತೆ ರೇಗಾಡಿ ಬಿಡುತ್ತಿದ್ದ, ಮನೆಯಲ್ಲಿ ಹಾಗೆಲ್ಲ ಬೆಳಗ್ಗೆ ಬೆಳಗ್ಗೆ ಸದರ ಮಾಡುವುದು ಪಾಪ ಎನ್ನುವಂತೆ, ಅಮ್ಮನಿಗೆ ಮಾಡುವ ದ್ರೋಹವೆನ್ನುವಂತೆ ಉರಿಉರಿ ಕುಣಿಯುತ್ತಿದ್ದ . ನಾಲ್ಕು ಒಳ್ಳೆ ಮಾತಿಗೂ ಮೂರು ಸಂವತ್ಸರ ಕಾಯಬೇಕಿತ್ತು ಅವಳು .
ತಿಳಿಗೆಂಪು ತುಟಿ ಕೂಡ ಹೊಗಳಿಕೆಗೆ ಪಾತ್ರವಾಗಿದ್ದ ಕಾಲ ಹೋದಜನ್ಮದ್ದೇನೋ ಎನ್ನುವಂತೆ ಏನೇ ಮಾಡಿದರು ತೃಪ್ತಿಗೊಳ್ಳದು ಅವನಾತ್ಮ! ಅದು ಮಾಡಲಿಲ್ಲ, ಇದು ಪೂರೈಸಲಿಲ್ಲ ಎಷ್ಟೇ ಬೆವರು ಹರಿಸಿದರು ಅವನ ಕಂಪ್ಲೇಂಟ್ ಮುಗಿಯಲ್ಲೊಲ್ಲದು. ಶೂ ಪೋಲಿಷ್ ಮಾಡಿದಳ , ಬಟ್ಟೆ ಐರನ್ ಮಾಡಿಟ್ಟಿದ್ದಾಳ ಅವಳಿಗೆಲ್ಲಿ ನನ್ನ ಬಗ್ಗೆ ಪ್ರೀತಿ, ಕಾಳಜಿ ? ಅವನ ದೂರು ..!
ಪ್ರೀತಿಗೂ ಪ್ರೀತಿಯಾ ಅಭಿವ್ಯಕ್ತಿಗೂ ಅವನು confuse ಮಾಡಿಕೊಂಡಿದ್ದಾನೆ ಎನ್ನುವುದನ್ನು ಅವಳು ತಿಳಿಸುವುದಾದರು ಹೇಗೆ …ನಿಮ್ಮನ್ನು ಏನಂತ ಕರೆಯಬೇಕು ಎಂದವಳಿಗೆ ನೀನು ಏನೇ ಅಂದರು ಅಮೃತ, ಲೋಫರ್ ಅಂದರೆ ಪರಮಾನಂದ ಅಂದವನು ಅವನೇ ಅಲ್ಲವ …ಈಗ ಹೋಗಿ ಬನ್ನಿ ಅವರು ಇವರು ಏನೂಂದ್ರೆ ಹಳೆ ಪಿಕ್ಚರ್ ತೋರಿಸುತ್ತಿದ್ದಾನೆ …
ಅಲ್ಲಿ ಹಾಗೆ love you honey , my sweet heart , ಗಳಿಗೆಗೊಂದು ಅಪ್ಪುಗೆ ಮಾತಿಗೊಂದು ಚುಂಬನ …. ಪಾಪ ಇಂಗ್ಲಿಷ್ ಪಿಕ್ಚರ್ ನೋಡುತ್ತಾಳವಳು …!
ಬೆಳಗ್ಗೆ ಸಿಡಿದು ಅವನುಗುಳಿದ ಲಾವರಸವೇ ಇನ್ನು ಅವಳೆದೆಯಲ್ಲಿ ತಣ್ಣಗಾಗಿರೋಲ್ಲ, ಅದು ಹೇಗೆ ತಾನೇ ನಗಬಲ್ಲಳು ರಾತ್ರಿ ಮರೆತು ಭಯ. ಸ್ನೇಹವಿಲ್ಲದೆ ಮಾಡಿಮುಗಿಸಿದರೆ ಅದು ಕರ್ತವ್ಯವ , ಪ್ರೇಮವ ಅವಳ ಗೊಂದಲ .ಯಾವ ಯುಗದಲ್ಲಿ ಬದುಕುತ್ತಿದ್ದೇನೆ ಕ್ಯಾಲೆಂಡರ್ ನೋಡುತ್ತಾಳೆ.

ಅದೆಲ್ಲ ಹಾಳುಬಿದ್ದು ಹೋಗಲಿ , ಯಾರದು 60 ವರ್ಷದ ಅಜ್ಜ ಹೆಂಡತಿಯ ತಲೆ ಕಡಿದು ಊರೆಲ್ಲ ಹಿಡಿದುಕೊಂಡು ಓಡಾಡ್ದಿದ್ದು? ತನ್ನ ಮಾತು ಕೇಳುತ್ತಿರಲಿಲ್ಲ , ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಅಂತ ತಲೆ ಕಡೆಯಬಹುದ ಈ ನೆಲದಲ್ಲಿ ?ಓ ಹೆಂಡತಿಯನ್ನು ಅನುಮಾನಿಸಿ ಬೆಂಕಿಗೆ ನೂಕಿದ ಪರಂಪರೆ ಇದೆ ಅಲ್ಲವ…ಏನು ಬೇಕಾದರೂ ಸರಿ ಆಗಬಹುದು !
ಹತ್ತುವರ್ಷ ಗಂಡನನ್ನ ಸಾಕಿಬಿಟ್ಟರೆ, ಸುಧಾರಿಸಿಬಿಟ್ಟರೆ ಇನ್ನುಳಿದ 40 ವರ್ಷ ಸಾಕುತ್ತಾನೆ ಎನ್ನುವ ಲಾಜಿಕ್ ಹೇಳಿದವರಿಗೆಲ್ಲ ಕೇಳಬೇಕು 50 ವರ್ಷದ ಆ ಮುದುಕಿ ಪಾಪ ಅದೇನು ಹಾದರ ಮಾಡಲು ಹೋಗಿದ್ದಳು ಅಂತ …ಜೊತೆಗೆ ಹಳ್ಳಿ ಹೆಣ್ಣುಮಕ್ಕಳು ತಗ್ಗಿಬಗ್ಗಿ ಬಾಳುತ್ತಾರೆ ಎಂದೆಲ್ಲ ಪ್ರವಚನಕೊಟ್ಟ ಅವರನ್ನು ನಿಮ್ಮೂರ ಸೊಸೆ ವಿಷ ಕುಡಿದು ಸತ್ತದ್ದು ಯಾಕೆ , ಅದ್ಯಾಕೆ ಆ ಮನೆಯ ಅವಿದ್ಯಾವಂತ ಕೂಲಿಮಾಡುವ ಮಗಳು ಗಂಡನ ಬಿಟ್ಟುಬಂದಿರುವಳು ಪ್ರಶ್ನೆ ಹಾಕಬೇಕು ?
ಗಂಡ , ಅತ್ತೆ ಹೇಳಿದಂಗೆ ಕೇಳಬೇಕು ಅದಕ್ಕಿಂತ ಮತ್ತೇನು ಧ್ಯೇಯ -ಗುರಿ ಎನ್ನುವ ಅರಿಶಿನ ಗುಳಿ ತುಂಬಿದ ಮುತ್ತೈದೆಯರಿಗೆ ಹೇಗೆ ತಾನೇ ಅರ್ಥಮಾಡಿಸಬಹುದು ಈ ಕಾಲದ individuality , identity ಗಳ ಅಗತ್ಯ .ಅದೆಷ್ಟೋ ಹೆಣ್ಣುಗಳೊಳಗಿನ ಹಾಡುಗಾರ್ತಿ, ನರ್ತಕಿ , ಚಿತ್ರಸಾಹಿತಿ, ಕಂಪನಿ ಬಾಸ್ ಗಳು ಘಾಟು ಒಗ್ಗರಣೆ ಹೊಗೆಗೆ ಉಸಿರುಕಟ್ಟಿ ಸತ್ತಿದ್ದು ಹೇಗೆ ಗೊತ್ತಾ ??
ಬೆಳಗ್ಗೆ ಎದ್ದು ಮನೆ ಒಪ್ಪಓರಣ , ಅಡಿಗೆತಿಂಡಿ, ಅತ್ತೆಮಾವ ಗಂಡನ ಸೇವೆ , 4 ಗಂಟೆಗಳ ಪ್ರಯಾಣ , 12 ಗಂಟೆ ದುಡಿಮೆ , 40 ಸಾವಿರ ಸಂಬಳವನ್ನ ವರ್ಷಕ್ಕೆ ಮನೆಹೊಡೆದು ಗಂಡನನ್ನ ಮನೆಬಿಡಿಸಿದ ನಾದಿನಿ , ಡಿಸೈನ್ ಬ್ಲೌಸ್ ಹೊಲೆಸಲು ಲಜ್ಜೆಗೆಟ್ಟು ಕೇಳುತ್ತಾಳಲ್ಲ , ಜೊತೆಗೆ ಗಂಡನ ಕೈಲಿ ಒದೆತಿನ್ನಬೇಕು , ಸತ್ತರು ಗಂಡನ ಮನೆಯಲ್ಲಿ ಸಾಯಬೇಕು , ಅಮ್ಮನ ಮನೆ ಸೇರಿದ ಹೆಣ್ಣಿಗೆ ಬೆಲೆಯಿಲ್ಲ ಎಂದು ಕಾನೂನು ಮಾತಾಡಿ, ಹಿಡಿದು ನಾಲ್ಕು ಚಚ್ಚೋ ಆಜ್ಞೆ ಹೊರಡಿಸುತ್ತಾಳಲ್ಲ ಅವಳು ಹೆಣ್ಣು ಜಾತಿಗೆ ಸೇರಿದವಳ ಕೇಳುವವರು ಯಾರು ಅಂತ ?
ಅವನು ನಂಬಿಕೆಯ ಪ್ರಶ್ನೆ ಎತ್ತಿದಾಗೆಲ್ಲ ಯಾಕೆ ಜನಕ್ಕೆ ಅವನು ಎಲ್ಲಿಂದ, ಯಾಕಾಗಿ ಅನುಮಾನಪಟ್ಟ ಪ್ರಶ್ನೆ ಕೇಳುವ ಕೆಟ್ಟ ಚಾಳಿ ಮತ್ತು ಕುತೂಹಲ ??
ಪ್ರತಿನಿತ್ಯ ಪತ್ರಿಕೆ tv ಗಳಲ್ಲಿ ‘ಶಂಕೆ -ಕೊಲೆ’ ಓದುತ್ತಿದ್ದರು ಇನ್ನೂ ಅನುಕಂಪ ಬಂದಿಲ್ಲವೇ ಹೆಣ್ಣುಗಳ ಮೇಲೆ !
ನಿನ್ನ ಮೇಲೆ ನಿನಗೆ ನಂಬಿಕೆ ಇದ್ದರೆ ಮಾತಿಗೆ ಮಕ್ಕಳಾಗುತ್ತೆ ಅಂತ ಯಾಕೆ ಹೆದರುತ್ತೀಯ ಅಂತ ಗದರಿ ಕೇಳುವ ಗಂಡಸರು ಇನ್ನು ಹುಟ್ಟಿಲ್ಲವ?
ಗಂಡಸರು ಹಾಳಾಗಿ ಹೋಗಲಿ, ನನ್ನ ಮಗ, ನನ್ನ ಸಹೋದರ ಅನುಮಾನ ಯಾಕೆ ಪಡಬಾರದು, ಸರಿಯಾಗೇ ಇದೆಯಲ್ಲ ಎಂದೆಲ್ಲ ದಬಾಯಿಸಿ ಕೇಳುವ ಹೆಣ್ಣುಗಳು ಇರುವವರೆಗೂ ಯಾವ ಹೆಣ್ಣು ಪ್ರೀತಿಯಲ್ಲಿ ನಿಜವಾಗಲು ನಗುನಗುತ್ತ ಸಂಸಾರ ಮಾಡುತ್ತಾಳೆ , ಮತ್ತು ಹೆಣ್ಣಿಗೆ ಹೆಣ್ಣು ಶತ್ರು ಗಾದೆ ಯಾವಾಗ ಸುಳ್ಳು ಆಗುತ್ತೆ….
ಎಲ್ಲಿನವರೆಗೂ ಹೆತ್ತ ತಾಯಿಯಂದಿರು , ಒಡಹುಟ್ಟಿದ ಅಕ್ಕ ತಂಗಿಯರು so called ಗಂಡನಾದ ಗಂಡಸಿಗೆ , ಹೆಂಡತಿಯನ್ನು ಪ್ರೀತಿಯಿಂದ ಮಾತಾಡಿಸು , ಹೆದರಿಸದೆ ಹೊಡೆಯದೆ ಅಕ್ಕರೆಯಲ್ಲಿ ಸಂಬಾಳಿಸು ಪಾಠ ಹೇಳದೆ , ಗಂಡಸಾಗಿ ಏನು ಮಾಡಿದರು ನಾವು ಕಾಪಾಡುತ್ತೇವೆ ಎನ್ನುವ strength ಕೊಡುತ್ತಿರುತ್ತಾರೋ , ಪೋಲಿಸಿನವರು ಲಂಚ ಪಡೆದು ಕೇಸ್ ಮುಚ್ಚಿಹಾಕುತ್ತಾರೋ , ಕೋರ್ಟ್ ಎವಿಡೆನ್ಸ್ ಕೇಳಿ ತಬ್ಬಿಬ್ಬುಗೊಳಿಸುತ್ತಿರುತ್ತದೋ ಅಲ್ಲಿವರೆಗೂ ರಾಹುಲ್ ಗಾಂಧಿ ಅದೆಷ್ಟೇ women empowerment ಅಂತ ಬಡಬಡಿಸಿದರು ದೇಶದ ಹೆಣ್ಣುಮಕ್ಕಳ ಗೋಳು ಮುಗಿಯುವುದಿಲ್ಲ.

‍ಲೇಖಕರು G

7 May, 2014

4 Comments

  1. shashikala

    so realistic , a piece out of day to day life, a portrait of very much happening scene

  2. Anonymous

    With so much dream and aspiration gals get into married life, Pls give space for her feelings.. respect her values … correct her politely when she is wrong as no one is perfect in this world..
    Well narrated ma…

  3. Anonymous

    Thanks all ladies.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading