
ಎ ಆರ್ ಮಣಿಕಾಂತ್
ಪುಸ್ತಕದ ಹೆಸರು ಸುಮಾರಾಗಿದೆ ಕಣೋ ಅಂದಿದ್ದರು!!
”ವಿಜಯ ಕರ್ನಾಟಕ”ದಲ್ಲಿ ”ಸಿಂಪ್ಲಿ ಸಿಟಿ ಪೇಜ್” ಅನ್ನುವ ಒಂದು ಅಪರೂಪದ ಸಪ್ಲಿಮೆಂಟ್ ವಾರಕ್ಕೆ ೩ ಬಾರಿ (ಸೋಮವಾರ, ಗುರುವಾರ ಮತ್ತು ಶನಿವಾರ) ಪ್ರಕಟವಾಗುತ್ತಿತ್ತು. ಆ ಪುಟದಲ್ಲಿ ಲೀಡ್ ಸೇರಿದಂತೆ ಹೆಚ್ಚಿನ ಬರಹಗಳನ್ನು ನಾನು ಬರೆಯುತ್ತಿದ್ದೆ. ಸಂಚಿಕೆ ಮಾರುಕಟ್ಟೆಗೆ ಬಂದ ದಿನ ಸಾಮಾನ್ಯವಾಗಿ ೫-6 ಫೋನ್ ಕಾಲ್ ಗಳು, ೧೦-೧೨ ಮೇಲ್ ಗಳು ಬರುತ್ತಿದ್ದವು. ಆದರೆ ”ಅಮ್ಮ ಹೇಳಿದ ೮ ಸುಳ್ಳುಗಳು” ಬರಹ ಪ್ರಕಟವಾದ ದಿನ ಮಾತ್ರ ೨೮ ಫೋನ್ ಕಾಲ್ ಗಳು ಬಂದವು.
ಅವತ್ತು ಸಂಜೆ ಸಂಪಾದಕೀಯ ವಿಭಾಗದ ಮೀಟಿಂಗ್ ನಡೆದಾಗ,(ಸಪ್ಲಿಮೆಂಟ್ ವಿಭಾಗದಲ್ಲಿ ಇದ್ದ ಕಾರಣದಿಂದ ನಾನು ಮೀಟಿಂಗ್ ಗೆ ಹೋಗುತ್ತಿರಲಿಲ್ಲ) ಪ್ರಧಾನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ಅವರು, ಎಲ್ಲರನ್ನೂ ಉದ್ದೇಶಿಸಿ ಹೇಳಿದರಂತೆ: ”ಇವತ್ತು ಮಣಿಕಾಂತ್ ”ಸಿಂಪ್ಲಿ ಸಿಟಿ ಪೇಜ್” ನಲ್ಲಿ ಒಂದು ಅಪರೂಪದ ಸ್ಟೋರಿ ಬರೆದಿದ್ದಾರೆ. ಆ ಸ್ಟೋರಿನ ಮೆಚ್ಚಿ ಬೆಳಗಿನಿಂದ ನನಗೆ ೨೦ಕ್ಕೂ ಹೆಚ್ಚು ಫೋನ್ ಗಳು ಬಂದವು. ಮೂರ್ನಾಲ್ಕು ಜನ ಆಫೀಸ್ ಗೂ ಬಂದು ಆ ಬರಹದ ಬಗ್ಗೆ ಮೆಚ್ಚುಗೆ ತಿಳಿಸಿ ಹೋಗಿದ್ದಾರೆ. ನೀವೆಲ್ಲರೂ ಆ ಬರಹವನ್ನು ತಪ್ಪದೇ ಓದಬೇಕು…”
ಅವತ್ತು , ಮೀಟಿಂಗ್ ಮುಗಿಸಿ ಹೊರಬಂದ ಸಹೋದ್ಯೋಗಿಗಳೆಲ್ಲಾ -”ಎಡಿಟರ್ ನಿಮ್ಮ ಬರಹದ ಬಗ್ಗೆ ತುಂಬಾ ಒಳ್ಳೆಯ ಮಾತು ಹೇಳಿದ್ರು,ಅಭಿನಂದನೆ ” ಅಂದರು. ಐದಾರು ನಿಮಿಷದ ನಂತರ ಸಂಪಾದಕರಿಂದಲೇ ಕರೆ ಬಂತು. ಸಂಕೋಚದಿಂದಲೇ ಅವರ ಎದುರು ನಿಂತೆ: ”ನಿಮ್ಮ ಇವತ್ತಿನ ಬರಹ ತುಂಬಾ ಇಷ್ಟ ಆಯ್ತು. ಬೆಳಗ್ಗೆಯಿಂದ ನನಗೆ ತುಂಬಾ ಫೋನ್ ಕಾಲ್ಸ್ ಬಂದವು. ಹೀಗೆಯೇ ಬರೆಯುತ್ತಾ ಇರಿ. ನಿಮಗೆ ಒಳ್ಳೆಯದಾಗಲಿ” ಅಂದರು ವಿಶ್ವೇಶ್ವರ ಭಟ್.
***********
ನನ್ನ ಬರಹಗಳನ್ನು ಪುಸ್ತಕದ ರೂಪದಲ್ಲಿ ತರಬೇಕು ಅಂದುಕೊಂಡಾಗ, ಇದೆಲ್ಲಾ ನೆನಪಾಯಿತು. ಅತೀ ಹೆಚ್ಚು ಜನಮೆಚ್ಚುಗೆ ಪಡೆದ ”ಅಮ್ಮ ಹೇಳಿದ ೮ ಸುಳ್ಳುಗಳು” ಎಂಬ ಶೀರ್ಷಿಕೆಯನ್ನೇ ಪುಸ್ತಕಕ್ಕೂ ಇಡುವುದೇ ಒಳ್ಳೆಯದು ಅಂತ ನನಗೆ ನಾನೇ ಹೇಳಿಕೊಂಡೆ. ಅದೇ ಹೆಸರಿನಲ್ಲಿ ಮುಖಪುಟ ವಿನ್ಯಾಸ ಮಾಡಿಸಿದಾಗ ಪರಿಚಯದ ಗೆಳೆಯರು- ”ಮಣಿ, ಹೆಸರು ಚೆನ್ನಾಗಿಲ್ಲ ಕಣೋ. ಬೇರೆ ಯಾವುದಾದ್ರೂ ಹೆಸರು ಇಡು. ಅಮ್ಮ ಸುಳ್ಳು ಹೇಳಿದಳು ಅಂತ ಹೆಸರು ಇಟ್ರೆ ಅದನ್ನು ಯಾರೂ ತಗೋಳ್ಳೋದಿಲ್ಲ ಮಾರಾಯ. ಒಮ್ಮೆ ಈ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡು” ಅಂದರು. ಉಳಿದವರ ಮಾತು ಹಾಗಿರಲಿ; ನನ್ನ ಹೆಂಡತಿ ಕೂಡ- ”ನಿನ್ನ ಬುಕ್ ಹೆಸರು ಏನೇನೂ ಇಷ್ಟ ಆಗಲಿಲ್ಲ. ಬೇರೆ ಯಾವುದಾದ್ರೂ ಒಳ್ಳೆಯ ಹೆಸರು ಹುಡುಕು” ಅಂದುಬಿಟ್ಟಳು.
ಆನಂತರದಲ್ಲಿ ಎಷ್ಟೆಲ್ಲಾ ಯೋಚಿಸಿದರೂ ಬೇರೊಂದು ಒಳ್ಳೆಯ ಹೆಸರು ನನ್ನ ತಲೆಗೆ ಹೊಳೆಯಲೇ ಇಲ್ಲ. ಕಡೆಗೊಮ್ಮೆ, ಆಗಿದ್ದಾಗಲಿ, ಅಮ್ಮ ಹೇಳಿದ ಎಂಟು ಸುಳ್ಳುಗಳು ಅನ್ನುವ ಹೆಸರಿನಲ್ಲೇ ಪುಸ್ತಕ ಪ್ರಕಟಿಸೋಣ ಅಂತ ನಿರ್ಧಾರ ಮಾಡಿದ್ದಾಯ್ತು 🙂
ಆಮೇಲೆ ಏನಾಯಿತು ಅಂದರೆ…
ಪುಸ್ತಕ ಬಿಡುಗಡೆಗೆ ಅವತ್ತು ೧೨೦೦ ಜನ ಬಂದಿದ್ದರು!!!
”ಅಮ್ಮ ಹೇಳಿದ ೮ ಸುಳ್ಳುಗಳು” ಪುಸ್ತಕದಲ್ಲಿ ಜೀವನ ಪ್ರೀತಿ ಹುಟ್ಟಿಸುವ ಬರಹಗಳಿದ್ದವು.ಸಕ್ಸಸ್ ಸ್ಟೋರಿಗಳಿದ್ದವು. ಪುಸ್ತಕವನ್ನು ಯಾರಿಂದ ಬಿಡುಗಡೆ ಮಾಡಿಸಬೇಕು ಎಂದು ಯೋಚಿಸಿದಾಗ ನನಗೆ ಹೊಳೆದ ಒಂದೇ ಒಂದು ಹೆಸರು -ಪ್ರಕಾಶ್ ರೈ!
ತೆರೆಯ ಮೇಲೆ ವಿಲನ್ ಆಗಿ ಅಬ್ಬರಿಸುತ್ತಿದ್ದ ಪ್ರಕಾಶ್ ರೈ ಅವರ ಒಳ್ಳೆಯ ಮನಸ್ಸಿನ ಬಗ್ಗೆ ಹಿರಿಯರಾದ ಗಣೇಶ್ ಕಾಸರಗೋಡು ಮತ್ತು ನಿರ್ದೇಶಕ ಪಿ ಶೇಷಾದ್ರಿ ಅವರು ಹೇಳಿದ್ದ ಮಾತುಗಳು ನನ್ನನ್ನು ವಿಪರೀತ ಇಂಪ್ರೆಸ್ ಮಾಡಿದ್ದವು. ಹಾಗಾಗಿ, ಬರಿಗೈಲಿ ಚೆನ್ನೈ ಗೆ ಹೋಗಿ, ನಂತರ ದೇಶವೇ ಬೆರಗಾಗುವಂಥ ಸಾಧನೆ ಮಾಡಿದ ಪ್ರಕಾಶ್ ರೈ ಅವರಿಂದಲೇ ಪುಸ್ತಕ ಬಿಡುಗಡೆ
ಮಾಡಿಸಬೇಕು ಎಂಬುದು ನನ್ನ ಮಹದಾಸೆ ಆಗಿತ್ತು. ಆವತ್ತಿನವರೆಗೂ ತೆರೆಯ ಮೇಲಿನ ಒಬ್ಬ ನಟನಾಗಿ ಮಾತ್ರ ಪರಿಚಯವಿದ್ದ ಪ್ರಕಾಶ್ ರೈ ಅವರನ್ನು ನನ್ನ ಮತ್ತೊಬ್ಬ ಪ್ರೀತಿಪಾತ್ರರಾದ ಬಿ ಸುರೇಶ್ ಅವರ ಮೂಲಕ ಒಪ್ಪಿಸಿದ್ದೂ ಆಯ್ತು. ೨೦೦೯,ಏಪ್ರಿಲ್ ೨೬ರ ಭಾನುವಾರ ಬೆಳಗಿನ ಮೊದಲ ವಿಮಾನ ಹತ್ತಿ ಬೆಂಗಳೂರಿಗೆ ಬರ್ತೇನೆ ಎಂದು ರೈ ಅವರು ಬಿ ಸುರೇಶ್ ಅವರಿಗೆ ಎಸ್ಸೆಮ್ಮೆಸ್ ಕಳಿಸಿದ್ದೂ ಆಯ್ತು .
ಆಗ ಶುರುವಾಯ್ತು ನೋಡಿ ಭಯ….
ಯಾಕೆಂದರೆ, ರೈ ಅವರ ಡೇಟ್ ನಮಗೆ ಸಿಕ್ಕಿದ್ದೇ ಏಪ್ರಿಲ್ ೬ ರಂದು. ಬಾಕಿ ಉಳಿದಿದ್ದ ೨೦ ದಿನದಲ್ಲಿ ಕಾರ್ಯಕ್ರಮ ನಡೆಸಲು ನಾನು ರೆಡಿ ಆಗಬೇಕಿತ್ತು. ಪುಸ್ತಕ ಬಿಡುಗಡೆ ವಿಷಯದಲ್ಲಿ ಬೆಂಗಳೂರಿನಲ್ಲಿ ಆವತ್ತಿಗೂ- ಈವತ್ತಿಗೂ ಇರುವ ದೊಡ್ಡ ಸಮಸ್ಯೆ ಅಂದ್ರೆ ಸಭಾಂಗಣದ್ದು. ನಮಗೆ ಅಗತ್ಯವಿದ್ದ ದಿನ ಯಾವ ಸಭಾಂಗಣವೂ ಖಾಲಿ ಇರಲಿಲ್ಲ. ಕಡೆಗೊಮ್ಮೆ, ಒಂದು ಮೈದಾನದಲ್ಲಿ ಶಾಮಿಯಾನ ಹಾಕಿಸಿ ಪುಸ್ತಕ ಬಿಡುಗಡೆ ಮಾಡಿಬಿಡಿ ಎಂದೂ ಕೆಲವರು ಸಲಹೆ ಕೊಟ್ಟರು. ಆ ಬಗ್ಗೆ ವಿಚಾರಿಸಿದಾಗ, ಶಾಮಿಯಾನಾ ಬಾಡಿಗೆಯೇ ೨೫೦೦೦ ರೂಪಾಯಿ ಅಂದರು. ನಮ್ಮ ಬಜೆಟ್ ಅಷ್ಟಿಲ್ಲ ಅನ್ನುತ್ತಾ, ಮುಂದೇನು ಮಾಡಬೇಕೋ ತಿಳಿಯದೆ ಒದ್ದಾಡುತ್ತಿದ್ದಾಗ, ”ಭಾಗವತರು” ಸಂಘಟನೆಯ ರೇವಣ್ಣ ಅವರು ಹೇಳಿದರು: ”೨೬ ರ ಭಾನುವಾರ ನಡೆಯಬೇಕಿದ್ದ ಒಂದು ಪ್ರೋಗ್ರಾಮ್ ಕ್ಯಾನ್ಸಲ್ ಆಗಿದೆ. ಹಾಗಾಗಿ ಅವತ್ತು ರವೀಂದ್ರ ಕಲಾಕ್ಷೇತ್ರ ಖಾಲಿಯಿದೆ. ತಕ್ಷಣ ಬಂದು ದುಡ್ಡು ಕಟ್ಟಿ ಬುಕ್ ಮಾಡಿ.”
ತಕ್ಷಣ ಓಡುತ್ತಾ ಹೋಗಿ ಹಾಗೆಯೇ ಮಾಡಿದ್ದಾಯಿತು. ಈ ವಿಷಯ ತಿಳಿದಾಗ ಜನ ತಮಾಷೆ ಮಾಡಿದರು. ”ರವೀಂದ್ರ ಕಲಾಕ್ಷೇತ್ರದಲ್ಲಿ ಬುಕ್ ರಿಲೀಸಾ? ಅದೇನು ತಮಾಷೆ ಮಾಡ್ತಾ ಇದ್ದೀರಾ? ಅಲ್ಲಿ ೧೦೦೦ ಸೀಟ್ ಇದ್ದಾವೆ. ಅಷ್ಟು ಜನ ಎಲ್ಲಿಂದ ಬರ್ತಾರೆ? ಪ್ರಕಾಶ್ ರೈ ಮಾಡ್ತಾ ಇರೋದು ಕೇಡಿ ಪಾತ್ರಗಳನ್ನು ತಾನೇ? ಇದು ಗೊತ್ತಿದ್ರೂ, ಅವರನ್ನ ಗೆಸ್ಟ್ ಅಂತ ಕರೆಸಿ, ಅಷ್ಟು ದೊಡ್ಡ ಜಾಗದಲ್ಲಿ ಬುಕ್ ರಿಲೀಸ್ ಮಾಡ್ತಾ ಇದ್ದೀರಲ್ಲ? ಅಷ್ಟ್ ಜನ ದೇವರಾಣೆಗೂ ಬರಲ್ಲ. ಒಂದ್ ಕೆಲಸ ಮಾಡಿ. ಕಾರ್ಯಕ್ರಮದ ದಿನ ಕಲಾಕ್ಷೇತ್ರದ ಬಾಲ್ಕನಿಗೆ ಬೀಗ ಹಾಕ್ಸಿಬಿಡಿ. ಅಮ್ಮಮ್ಮಾ ಅಂದ್ರೆ ೩೦೦ ಜನ ಬರಬಹುದು. ಅವರನ್ನೆಲ್ಲಾ ಮುಂದೆ ಕೂರಿಸಿ,. ಹಿಂದಕ್ಕೆ ಕ್ಯಾಮೆರಾ ಫೋಕಸ್ ಮಾಡಬೇಡಿ ಸಾರ್ ಅಂತ ಟಿವಿ ರಿಪೋರ್ಟರ್ಸ್ ಹತ್ರ ಮನವಿ ಮಾಡ್ಕೊಳ್ಳಿ. ಹಾಗೆ ಮಾಡದೇ ಹೋದ್ರೆ, ಟಿವಿಯಲ್ಲಿ ಖಾಲಿ ಖುರ್ಚಿಗಳು ಕಾಣಿಸಿ ಜನ ನಗೋದಕ್ಕೆ ಒಂದು ಕಾರಣ ಸಿಗುತ್ತೆ ” ಎಂದೆಲ್ಲಾ ಸಲಹೆ ಮಾಡಿದರು. ಎಲ್ಲರ ಮನವಿಗಳಿಗೂ ಹೂಂ ಗುಟ್ಟುತ್ತಾ ಒಂದೊಂದೇ ಸಿದ್ಧತೆ ಮಾಡಿಕೊಳ್ಳತೊಡಗಿದೆ.
ಕಾರ್ಯಕ್ರಮ ಹೇಗಾಗುತ್ತೋ, ಜನ ಬರ್ತಾರೋ ಇಲ್ವೋ ಅಂತೆಲ್ಲಾ ನಾನು ಕಂಗಾಲಾದಾಗ- ”ತಮ್ಮಾ, ನಿನ್ನ ಜೊತೆ ನಾನು ಇರ್ತೇನೆ. ಕಾರ್ಯಕ್ರಮ ಗ್ರ್ಯಾಂಡ್ ಆಗೇ ಆಗುತ್ತೆ. ಟೆನ್ಶನ್ ಮಾಡ್ಕೋಬೇಡ” ಅಂದವರು ಬಿ ಸುರೇಶ್. ”ಎಲ್ಲವನ್ನೂ ನಮ್ಮ ಹೆಗಲಿಗೆ ಹಾಕಿ ನೀವು ನೆಮ್ಮದಿಯಾಗಿ ನಿದ್ರೆ ಮಾಡಿ” ಅಂದವರು ಉಪಾಸನಾ ಮೋಹನ್ ಮತ್ತು ಜಿ ಪಿ ರಾಮಣ್ಣ.
ಕೊನೆಗೊಮ್ಮೆ ಕಾರ್ಯಕ್ರಮ ನಡೆವ ದಿನ ಬಂದೇ ಬಿಟ್ಟಿತು. ಅವತ್ತು, ಎಲ್ಲರಿಗಿಂತ ಮೊದಲು ರವೀಂದ್ರ ಕಲಾಕ್ಷೇತ್ರಕ್ಕೆ ಬಂದವರು ನನ್ನ ಹೀರೋ ಪ್ರಕಾಶ್ ರೈ! ಅವತ್ತು, ನಾವ್ಯಾರೂ ನಿರೀಕ್ಷಿಸದ ಪವಾಡವೊಂದು ನಡೆದುಹೋಯಿತು. ಪುಸ್ತಕ ಬಿಡುಗಡೆಗೆ ಅವತ್ತು ೧೨೦೦ ಜನ ಬಂದಿದ್ದರು!!!
ಇದನ್ನೆಲ್ಲಾ ನಾನು ಯಾಕೆ ಹೇಳ್ತಾ ಇದ್ದೇನೆ ಅಂದರೆ….





0 Comments