ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇತ್ತೀಚೆಗೆ ನಾನು ಮಿಥಿಲೆಗೆ ಹೋಗುತ್ತಿಲ್ಲ ಕಣೆ..

ಸೀತೆಗೊಂದು ಪತ್ರ

ಉಷಾ ನರಸಿಂಹನ್ /ಮೈಸೂರು 

ಸೀತೆ,

ಹೇಗಿದ್ದೀಯೆ? ಎಷ್ಟು ಕಾಲವಾಯಿತು ನಿನ್ನ ನೋಡಿ… ಅರಮನೆಯಿಂದ ಹೊರಡುವಾಗ ತುಂಬಿದ ಬಸುರಿ, ಮೊದಲೇ ಭುವನೇಕ ಸುಂದರಿ. ಜೊತೆಗೆ ಮೈತುಂಬಿದ ತಾಯ್ತನ. ಕಣ್ಣು ಕೀಳಲಾರದಂತೆ ಕಂಗೊಳಿಸುತ್ತಿದ್ದೆ. ನಿಜ… ನೀನು ಹಾಗಿದ್ದದರಿಂದಲೇ ನಿನಗಷ್ಟು ಕಷ್ಟಗಳು ಅಮರಿಕೊಂಡಿತೆನಿಸುತ್ತೆ ಒಮ್ಮೊಮ್ಮೆ.

ಆದರೆ ಮರುಕ್ಷಣವೇ ಅದೆಲ್ಲ ಸುಳ್ಳು, ಅವಳಿಗೆ ಬಂದ ಕಷ್ಟಕ್ಕೆ ಕಾರಣಗಳು ಅವಳ ಅಂದ ಚೆಂದಗಳಲ್ಲವೇ ಅಲ್ಲ… ಎಷ್ಟು ಮಾತ್ರಕ್ಕೂ ಅಲ್ಲ ಅನಿಸುತ್ತದೆ. ಮೊನ್ನೆ ಬಿಸಿಲು ಮಚ್ಚಿನ ಮೇಲೆ ತಲೆಯೊಣಗಿಸಲು ಹೋದಾಗ, ಅಲ್ಲಿಯ ಕಲ್ಲುಹಾಸಿನ ಮೇಲೆ ನಿನ್ನ ಹೆಣಿಗೆಯೊಂದು ಸಿಕ್ಕಿತು. ನಾನದನ್ನು ನಿನ್ನ ಬಳಿ ನೋಡಿದ್ದೆ. ಚಿಕ್ಕಂದಿನಿಂದ ನೀನದನ್ನಿಟ್ಟು ಕೊಂಡಿರುತ್ತಿದ್ದೆಯಲ್ಲ… ಕೆನೆ ಬಣ್ಣದ ದಂತದ ಬಾಚಣಿಗೆ… ನೀನೆಲ್ಲೋ ಮರೆತಿರಬೇಕು. ನೀನು ಹೋದಾಗಿಂದ ಅದು ಅಲ್ಲೇ ಇತ್ತೆನ್ನಿಸುತ್ತದೆ. ಬಿಸಿಲು-ಮಳೆಗೆ, ಧೂಳು, ಮಣ್ಣು ಬೆರೆತು ಬಣ್ಣ ಮಾಸಿತ್ತು. ಆದರೂ ಅದರ ಹಲ್ಲುಗಳು, ಹಿಡಿಕೆ ಚೂರೂ ಒಡೆಯದೇ ಹಾಗೇ ದೃಢವಾಗಿತ್ತು. ನಮ್ಮ ಬದುಕಿನ ಹಾಗೇ! ನಾನದನ್ನು ತೆಗೆದಿಟ್ಟುಕೊಂಡೆ. ನಿನ್ನ ನೆನಪಿಗಾಗಿ…

ನಿನ್ನ ನೆನಪುಗಳು ಆ ನಿರ್ಜೀವ ವಸ್ತುವಿನಿಂದ ಆಗುತ್ತದೆಂದಲ್ಲ. ಜೀವಂತ ದಹಿಸುವ ನೂರು ನೆನಪುಗಳು ನನ್ನನ್ನು ಮುಕುರಿಕೊಂಡಿದೆ. ಆ ನೆನಪುಗಳಲ್ಲಿ ನನ್ನಕ್ಕ ಸೀತೆ, ನನ್ನ ಬಾಲ್ಯದ ಒಡನಾಡಿ ಸೀತೆ, ನನ್ನನ್ನು ಅಪರಿಮಿತವಾಗಿ ಪ್ರೀತಿಸುವ ಸೀತೆ ನನ್ನ ಜೊತೆಗಿದ್ದಾಳೆ. ಚೆಂಡಾಟ ಮುಟ್ಟಾಟಗಳನ್ನಾಡುತ್ತಲೇ ಆ ಮನೆಯ ಅಂಗಳದಿಂದ ಹೊರಬಿದ್ದು ನಾವೆಲ್ಲ ಲೋಕಾರ್ಪಣವಾದ ನೆನಪಾಗುತ್ತದೆ.

ನಿಜವಾಗಿ ಸೀತೆ… ಸಾಧಾರಣರಾಗಿದ್ದರೆ ನಾವು ಯಾರದೋ ಹೆಂಡತಿಯಾಗಿ, ಸೊಸೆಯಾಗಿ, ತಾಯಾಗಿ… ಕಡೆಯಪಕ್ಷ ಒಂದು ನೆಮ್ಮದಿಯ ಬದುಕನ್ನಾದರೂ ಕಾಣುತ್ತಿದ್ದೆವೇನೊ! ಚಕ್ರವರ್ತಿಯ ಅರಮನೆಗೆ ಸೊಸೆಯರಾಗಿ ಬಂದು ನಮ್ಮ ಬದುಕಿನ ಖಾಸಗಿತನಕ್ಕೆ ಕುತ್ತುಬಂತು. ನಾವು ಸಾರ್ವತ್ರಿಕವೆನ್ನುವ ಬದುಕಿನಲ್ಲಿ ನಮಗೆ ಗೊತ್ತಿಲ್ಲದೇನೆ ಸೇರಿಕೊಂಡೆವು.

ನಿನ್ನ ನೆನಪುಗಳೂ ಹಾಗೇ ಕಣೆ, ಈ ನಾಕುವರ್ಷಗಳಲ್ಲಿ ಒಂದಿಷ್ಟು ದುಃಖ ದುಮ್ಮಾನ ನೀನಿರದ ಅರಮನೆಯ ನಿರ್ವಾತ ಕಾಡಿ, ಕಾಲದೊಂದಿಗೆ ಕಡಿಮೆಯಾಯಿತೆನಿಸುತ್ತಿತ್ತು. ಊಹೂಂ… ಹಾಗಾಗಲೆ ಇಲ್ಲ. ಮನದೊಳಗೆ ಭದ್ರವಾಗಿ ಉಳಿದಿರುವ ನಿನ್ನ ನೆನಪಿನ ಪಲುಕುಗಳು, ‘ಸೀತೆ’ ಎಂದರೆ ಹಾದು ಹೋಗುವ ಮಾರ್ದವದ ಸೊಗಸು, ಕಣ್ಣಂಚಲ್ಲಿ ತುಂಬಿಕೊಳ್ಳುವ ಹನಿಗಳು, ತುಟಿಯ ದಂಡೆಗಳಲ್ಲಿ ಕಂಡೂ ಕಾಣದಂತೆ ಹಾಯುವ ನಿನ್ನ ಹೆಸರು, ಮೂಗಿನ ಹೊರಳೆಗಳಲ್ಲಿ ಸುಯ್ಯುವ ನಿಟ್ಟುಸಿರು, ಅದರ ಆವಿಯಲ್ಲಿ ಕಾಣಿಸುವ ನಿನ್ನ ಮುಗ್ಧ ಮುಖ… ಯಾವುದೂ ನೀನು ನಮ್ಮ ಚಿತ್ತದಿಂದ ಮರೆಯಾಗಿಲ್ಲವೆಂದು ಪದೇ ಪದೇ ಮನದಟ್ಟು ಮಾಡುತ್ತದೆ.

ನನಗೊಬ್ಬಳಿಗಲ್ಲ ಸೀತೆ… ಮಾಂಢವಿ, ಶ್ರುತ ಕೀರ್ತಿಯರಿಗೂ ಮತ್ತುಳಿದ ದಾಸಿಯರು, ಅರಮನೆಯ ರಾಜಮಾತೆಯರು, ಮಹಾಪ್ರಭುಗಳು, ನನ್ನ ಸ್ವಾಮಿ ಸೌಮಿತ್ರಿ, ಭರತ, ಶತ್ರುಜ್ಞರು, ಮಂತ್ರಿಗಳು, ವಂದಿಮಾಗಧರು… ಎಲ್ಲರೂ ಆಗ್ಗಾಗ್ಗೆ ನಿನ್ನ ಹೆಸರಿನೊಂದಿಗೆ ನಿಟ್ಟುಸಿರುಸುಯ್ಯುತ್ತಾರೆ.

ನಿನ್ನ ಗಂಡ ರಾಮಭದ್ರನೂ ಆಗ್ಗಾಗ್ಗೆ ನಿನ್ನ ನೆನಪು ತೆಗೆದು ನಿಡುಸುಯ್ಯುತ್ತಾನೆ. ಎಲ್ಲರಿಗೂ ಗೊತ್ತಾಗುವಂತೆಯೇ ವ್ರತ ಹಿಡಿದವನಂತೆ ವರ್ತಿಸುತ್ತಾನೆ. ಒಂದು ಒಳ್ಳೆಯ ಭೋಜನ, ಊಟ, ಉತ್ಸವ ಉಲ್ಲಾಸ… ಊಹೂಂ ಯಾವುದರಲ್ಲೂ ಮನಸ್ಸಿಲ್ಲ. ಎಲ್ಲರೂ ಅಯ್ಯೋ ಪಾಪ, ಪತ್ನಿಯನ್ನು ನೆನೆದು ಅದೆಷ್ಟು ಕೊರಗುತ್ತಾರೆ ಪ್ರಭುಗಳು ಎನ್ನುವಷ್ಟು!

ಆದರೆ ನನಗೆ ನಂಬಿಕೆಯಾಗುವುದಿಲ್ಲ ಕಣೆ, ಎಲ್ಲವೂ ತೋರಿಕೆ ಎನಿಸುತ್ತೆ. ತನಗಷ್ಟು ಪ್ರೀತಿ ಪಾತ್ರವಾದ ಜೀವವನ್ನು ಯಾರೂ ಬಿಟ್ಟುಕೊಡುವುದಿಲ್ಲ. ಪ್ರಜೆಗಳ ಮನಸ್ಸಂತೋಷ ಪಡಿಸುವುದೇ ರಾಜನ ಧರ್ಮವಾಗಿದ್ದರೆ ಯಾವನೋ ಒಬ್ಬ ಪ್ರಜೆಯ ಒಡಕು ಮಾತಿಗೆ ತನ್ನ ಗರ್ಭಿಣಿ ಪತ್ನಿಯನ್ನು ಯಾರೂ ತ್ಯಜಿಸುವುದಿಲ್ಲ. ಬದಲಾಗಿ ರಾಜಪ್ರಮುಖರ ಪ್ರಜಾ ಮುಖ್ಯರ ಸಭೆ ಕರೆದು, ತನ್ನ ಪತ್ನಿಯ ವಿಷಯ ಅವರ ಅಭಿಪ್ರಾಯ ಕೇಳಿ ನಿರ್ಧರಿಸುತ್ತಾನೆ. ಒಬ್ಬ ರಜಕ ಸೀತೆ ತಪ್ಪಿದವಳೆಂದರೆ ನೂರು ಪ್ರಜೆಗಳು ಅವಳು ಸಾಧ್ವಿ ಎನ್ನುವವರಿದ್ದರು. ಕಡೆಯ ಪಕ್ಷ ನಾಡಿನ ಹೆಣ್ಣುಮಕ್ಕಳಿಗೆ ಸೀತೆಯ ಪರಿಸ್ಥಿತಿ, ಜೌನ್ನತ್ಯದ ಅರಿವಿರುತ್ತಿತ್ತು.

ನನಗನ್ನಿಸುತ್ತೆ. ಬಹುಶಃ ರಜಕನ ನುಡಿ ಎನ್ನುವುದು ಒಂದು ಕುಂಟುನೆಪ. ರಾಮನಿಗೆ ನಿನ್ನ ಮೇಲೆ ಇದ್ದ ಸಂದೇಹವನ್ನು ಆ ಮೂಲಕ ಹೊರಹಾಕಿದನಷ್ಟೆ. ಇಷ್ಟಕ್ಕೂ ಪತ್ನಿಯ ಶೀಲ ಚಾರಿತ್ರ್ಯಗಳು ಒಬ್ಬ ರಾಜನ ಅಂತಃಪುರದ ಖಾಸಗಿ ವಿಷಯಗಳೇ ವಿನಾ ಪ್ರಜೆಗಳ ಅನುಮೋದನೆಯ ಸಾರ್ವತ್ರಿಕ ವಿಷಯವಲ್ಲ. ಇವೆಲ್ಲ ನನ್ನಂತಹ ಹೆಣ್ಣೊಬ್ಬಳಿಗೇ ಅನ್ನಿಸಿದರೆ ವಿದ್ಯಾವಂತ ಮಹಾರಾಜ ರಾಮಚಂದ್ರನಿಗೆ ಗೊತ್ತಾಗಲಿಲ್ಲವೆಂದರೆ ಅಚ್ಚರಿಯಾಗುತ್ತೆ. ಹೋಗಲಿ ಬಿಡು. ಆದರೆ ಅದು ಯಾವುದೂ ನಿಜವೆನಿಸುವುದಿಲ್ಲ ಕಣೆ. ನಾನು, ಮಾಂಢವಿ, ಶ್ರುತಕೀರ್ತಿಯರು ಕಲೆತಾಗ ನಿನ್ನ ಕುರಿತು ಆಡಿಕೊಳ್ಳುವ ಮಾತುಗಳೂ, ಕಾಡುವ ನಿನ್ನ ನೆನಪುಗಳು, ಹನಿಯುವ ನಮ್ಮಕಣ್ಣುಗಳು ಮಾತ್ರ ಸತ್ಯವೆನ್ನಿಸುತ್ತೆ.

ಶಿಶುಮುಗ್ದತೆಯ ಬಾಲ್ಯದ ಪ್ರಫುಲ್ಲತೆಯಿಂದ ಕೌಮರ‍್ಯದ ಕೌತುಕಕ್ಕೂ ಜೀಕಿ ಮುಂದೆ ಯೌವನದ ಕನಸುಗಳಿಗೆ ಬರುವಷ್ಟರಲ್ಲಿ ನಮ್ಮ ವಾಸ್ತವ್ಯ ಬದಲಾಗಿಬಿಟ್ಟಿತು. ಮಿಥಿಲೆಯರಮನೆಯ ಚೆಲ್ಲಾಟದ ಆಪ್ತಪ್ರೇಮದ ನೆರಳಿಂದ ಅಯೋಧ್ಯೆಯ ಸಾಮ್ರಾಟನರಮನೆಯ ಗಂಭೀರ ತಾವಿಗೆ, ಸೊಸೆತನದ ಹಿರಿಮೆಯ ಹೊರೆಹೊತ್ತು ನಾವೆಲ್ಲ ಬಂದುಬಿಟ್ಟೆವು. ಅದರಲ್ಲು ನೀನಂತೂ ಯುವರಾಜ ರಾಮಚಂದ್ರನಮಡದಿ. ನಿನಗಿದ್ದ ಭಾಧ್ಯಸ್ಥಿಕೆಗಳು ಹೆಚ್ಛೇ ಇತ್ತೇನೋ! ಆದರೂ ಎಲ್ಲವನ್ನು ನೀನು ನಿಭಾಯಿಸಿದೆ. ಅತ್ತೆಯಂದಿರು, ಮಾವನವರು, ಮೈದುನರು, ತಂಗಿಯರು, ಕಡೆಗೆ ಚೇಟಿಯರು… ಎಲ್ಲರಿಗೂ ಪ್ರೀತಿಪಾತ್ರಳಾಗುತ್ತಲೇ ನಿನ್ನದೊಂದು ವರ್ಚಸ್ಸನ್ನು ಮೂಡಿಸಿಕೊಂಡೆ. ರಾಮನೊಡನೆ. ವನವಾಸಕ್ಕೆ ಹೊರಟುನಿಂತಾಗಲಂತು ನೀನೊಬ್ಬಳು ದೇವಿಯೆ ಆಗಿಬಿಟ್ಟೆ. ಎಲ್ಲವು ನಿನಗೆ ಲೀಲಾಜಾಲವಾಗಿ ಆಗುತ್ತಿತ್ತು. ಸಹಜವಾಗಿ… ಈ ಎಲ್ಲದರ ನಡುವೆ ನಾವೆಲ್ಲ ಒಟ್ಟಿಗೆ ಆಡಿ ನಲಿಯುತ್ತಾ ಬೆಳೆದ ಬಾಲ್ಯದ ಸೀತೆ ಕಳೆದೇ ಹೋಗಿದ್ದಳು. ಅವಳ ತುಂಟ ಮುಗ್ದ ಕಣ್ಣುಗಳಲ್ಲಿ ರಾಣೀತನದ ಗಾಂಭೀರ‍್ಯ ಮೆಲ್ಲಮೆಲ್ಲನೆ ತುಂಬಿಕೊಳ್ಳತೊಡಗಿತ್ತು. ನಾನು ಮಾಂಢವಿ, ಶ್ರುತಕೀರ್ತಿಯರು ಅದೆಷ್ಟೊ ಬಾರಿ ಮಾತಾಡಿಕೊಳ್ಳುತ್ತಿದ್ದೆವು.

ಇತೀಚೆಗೆ ನಾನು ಮಿಥಿಲೆಗೆ ಹೋಗುತ್ತಿಲ್ಲ ಕಣೆ. ಅಲ್ಲಿ ನನ್ನಪ್ಪ ಜನಕ ಮಹಾರಾಜರನ್ನು ನೋಡಲು ನನ್ನಿಂದಾಗುವುದೇ ಇಲ್ಲವೆ. ಅಂಥ ಪರಮ ಸಂತನಂತಹ ಅಪ್ಪ ರಸವಿಂಡಿದ ಕಬ್ಬಿನಂತೆ ಶುಷ್ಕವಾಗಿದ್ದಾರೆ. ಯಾವಾಗ ಹೋದರೂ ಒಂದೇ ಮಾತು… ‘ಸೀತೆ ಎಲ್ಲಿದ್ದಾಳೆಂದು ಗೊತ್ತಾಯಿತೆ? ಅವಳ ಕ್ಷೇಮ ಸಮಾಚಾರವಾದರು ಗೊತ್ತಾಗಿದ್ದರೆ…’ ಎಲ್ಲಿಂದ ಗೊತ್ತಾಗಬೇಕು? ಮನಸ್ಸು ಮಾಡಿದರೆ ಗೊತ್ತು ಹಚ್ಚುವುದು ಅಷ್ಟೇನೂ ಕಷ್ಟವಲ್ಲ. ಆದರೆ ಯಾರು ಹುಡುಕಿಸಬೇಕು? ಅವರಿಗೆ ಮನಸ್ಸು ಕಲ್ಲಾಗಿದ್ದರೆ… ನಾನು ಕೆಲಬಾರಿ ಸೌಮಿತ್ರಿಯನ್ನು ಕೇಳಿದೆ, ಗೋಗರೆದೆ… ಕಡೆಗೆ ಜಗಳವೂ ಆಡಿದೆ… ವೈದೇಹಿಯನ್ನು ಕಾನನಕ್ಕೆ ಬಿಟ್ಟು ಬಂದ ತಪ್ಪಿಗೆ ನೀನೇ ಅವಳನ್ನು ಹುಡುಕಿಕೊಂಡು ಬಾ ಅಂತ.

ಅವನದೊಂದೇ ಮಾತು… ಶ್ರೀರಾಮನಾಣತಿಯನ್ನಷ್ಟೆ ಪಾಲಿಸಿದೆ. ಅದರಾಚೆಗೆ ನನಗೇನೂ ಹೊಣೆಗಾರಿಕೆಯಿಲ್ಲ ಎಂದು. ನಿನ್ನನ್ನು ಅಡವಿಯಲ್ಲಿ ಬಿಟ್ಟು ಬಂದ ದಿನ ಇರುಳು ಸ್ವಾಮಿ ನನ್ನ ಸಜ್ಜೆಗೆ ಬರಲಿಲ್ಲ. ಏನೋ ರಾಜಕಾರ್ಯವೆಂದುಕೊಂಡಿದ್ದೆ. ಸತ್ಯದೊಂದಿಗೆ ನನ್ನನ್ನೆದುರಿಸುವ ಭಯದಿಂದ ಬಂದಿಲ್ಲವೆಂದು ಆಮೇಲೆ ಗೊತ್ತಾಯಿತು. ಅಂದು ಬರಲಿಲ್ಲ. ಮಾರನೆಯ ದಿನವೂ ಇಲ್ಲ. ಮೂರನೆಗೆ ಬಂದ, ಮೆಲ್ಲನೆ ಮುಖವನ್ನು ಮರೆಸುತ್ತಾ. ನಾನು ಕೇಳಿದೆ ‘ಅಕ್ಕ ಯಾವತ್ತು ಮರಳಿ ಬರುತ್ತಾಳೆ? ಅವಳಿಲ್ಲದೆ ಅರಮನೆಯೇ ಭಣಗುಟ್ಟುತ್ತಿದೆ’ ಎಂದು.

ಆಗ ನನಗೇನೂ ಗೊತ್ತಿರಲಿಲ್ಲ. ನನಗೇ ಏನು… ಯಾರಿಗೂ ನಿನಗಾದ ಅಮಾನವೀಯ ಕ್ರೌರ್ಯ ಗೊತ್ತೇ ಇರಲಿಲ್ಲ. ನಾನು ಕೇಳಿದೊಡನೆ ಧ್ವನಿತೆರೆದು ಹಸುಮಗುವಿನಂತೆ ಅಳಹತ್ತಿದ. ನಿನ್ನನ್ನು ಬಿಟ್ಟು ಬಂದ ಕರ್ಮದ ಕತೆಯನ್ನು ಹೇಳಿದ. ನನ್ನ ಇಂದ್ರಿಯಗಳು ಮರಗಟ್ಟಿ ನಿಷ್ಪ್ಪಂದವಾದವು. ‘ಅಯ್ಯೋ ಪಾಪಿ, ತುಂಬಿದ ಬಸುರಿಯನ್ನು ಕಾಡಿನಲ್ಲಿ ಬಿಟ್ಟು ಬರಲು ನಿನ್ನ ಮನಸ್ಸು ಹೃದಯ ಕಳವಳಿಸಲಿಲ್ಲವೆ? ನಿನ್ನನ್ನದು ಬಾಧಿಸಲಿಲ್ಲವೇ’ ಎಂದು.

ಏನೂ ಉತ್ತರಿಸಲಿಲ್ಲ. ಅಳುತ್ತಾ ನನ್ನ ಕಾಲಬಳಿ ಕೆಡೆದ. ನಾನು ಹೇಳಿದೆ ‘ಹೀಗೆ ಪಶ್ಚಾತ್ತಾಪಪಡುವ ಬದಲು ನನಗಿಷ್ಟು ಸುಳಿವು ಕೊಟ್ಟಿದ್ದರೆ, ಅವಳನ್ನೆಲ್ಲಾದರೂ ಜೋಪಾನ ಮಾಡುತ್ತಿದ್ದೆ. ನಿನ್ನಣ್ಣ ರಾಮಚಂದ್ರ ಪ್ರಭುವಿಗೂ ಗೊತ್ತಾಗದ ಹಾಗೇ ಅವಳನ್ನು ಅಡಗಿಸಿಡುತ್ತಿದ್ದೆವಲ್ಲ’ ಅಂದೆ. ‘ಅಯ್ಯೋ ಅಣ್ಣನಿಗೆ ಸುಳ್ಳು ಹೇಳಲಾದೀತೆ’ ಎಂದು ಹಲುಬಿದ. ವಿಷಯ ಮಿಥಿಲೆಗೆ ಮುಟ್ಟಿತು. ಮಗಳ ಸೀಮಂತ ಸಂಭ್ರಮದಲ್ಲಿದ್ದ ಅಪ್ಪ, ಮೊಮ್ಮಗುವಿನ ಹಂಬಲದಲ್ಲಿದ್ದ ಅಪ್ಪನಿಗೆ ಇಂಥ ಸುದ್ದಿಯಿಂದ ಹೇಗಾಗಿರಬೇಕು! ಸೀದಾ ಬಂದರು. ನನ್ನ ಕಕ್ಷೆಗೆ.

ನಾನೇ ಸೌಮಿತ್ರಿಯ ಕೈಲಿ ಹೇಳಿ ಕಳಿಸಿದೆ. ಪಾಪ! ನಿನ್ನರಸ ರಾಮಚಂದ್ರಪ್ರಭುವಿಗೆ ರಾಜಕಾರ್ಯ ವಿಪರೀತ! ರಾತ್ರಿಯ ಎರಡನೇ ಪ್ರಹರಕ್ಕೆ ಇಲ್ಲಿಗೆ ಬಂದರು, ರಜಕನ ಕತೆ, ಸೀತಾ ಪರಿತ್ಯಾಗದ ಅನಿವಾರ‍್ಯವನ್ನು ಬಹಳ ನಾಜೂಕಾಗಿ ಜನಕರಾಜರಿಗೆ ಹೇಳಿದರು. ಕೇಳಿದ ಅಪ್ಪ ಗಳಗಳನೆ ಕಂಬನಿ ಹರಿಸಿದರು. ‘ಸರಿ ಅಳಿಯದೇವರು ನಮ್ಮ ಪುತ್ರಿಯನ್ನು ಅಗ್ನಿ ಪರೀಕ್ಷೆಗೊಡ್ಡಿದ್ದೂ ಲೋಕಾಪವಾದಕ್ಕೆ ಹೆದರಿಯೇ, ಈಗವಳನ್ನು ಅಡವಿಗಟ್ಟಿದ್ದೂ ಲೋಕಾಪವಾದಕ್ಕೆ ಅಂಜಿ! ಇಷ್ಟು ಅಪವಾದಕ್ಕೆ ಅಂಜುವವರು ಸೀತೆಯನ್ನು ವನವಾಸಕ್ಕೆ ಕರೆದೊಯ್ಯಲೇಬಾರದಿತ್ತು. ತನ್ನ ಸ್ತ್ರೀಯನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವಿಲ್ಲದವರು ಎಲ್ಲಿಗೂ ಕರೆದೊಯ್ಯಬಾರದು ಹಾಗೂ ಅವಳ ಚಾರಿತ್ರ್ಯದಲ್ಲಿ ಸಂಶಯವಿದ್ದಲ್ಲಿ ಅಥವಾ ಲೋಕಾಪವಾದದ ಭಯವಿದ್ದಲ್ಲಿ ಅವಳ ತಂದೆಯಾದ ನನ್ನ ಬಳಿಗೆ ಕಳಿಸಬೇಕಲ್ಲದೆ ಅಡವಿಗಟ್ಟುವ ಕ್ರೌರ್ಯವೇಕೋ ಕಾಣೆ? ಮರ್ಯಾದಾ ಪುರುಷೋತ್ತಮರಿಗೆ ಮರ್ಯಾದೆ ತರುವ ಮಾತಲ್ಲವಿದು’ ಎಂದುಬಿಟ್ಟರು ನಿಧಾನವಾಗಿ ಅಷ್ಟೆÃ ಖಚಿತವಾಗಿ.

ನನ್ನ ಸ್ವಾಮಿಗೆ ಮಹಾಕೋಪ ಉಕ್ಕಿಬಂತು. ‘ಮಾವನವರು ಸ್ಥಾನದ ಔಚಿತ್ಯ ಮೀರುತ್ತಿದ್ದೀರಿ. ಅಣ್ಣನವರ ಸಾಮರ್ಥ್ಯ ವರ್ತನೆಗಳಲ್ಲಿ ಕುಂದೆಣಿಸಿದರೆ ನಾವು ಎಷ್ಟುಮಾತ್ರಕ್ಕೂ ಸಹಿಸುವುದಿಲ್ಲ’ ಎಂದರು. ಅಪ್ಪ ಅಷ್ಟೇ ಶಾಂತವಾಗಿ ‘ನೀವು ಪರಾಕ್ರಮಿಗಳೋ ಅಲ್ಲವೋ ಕೇಳುತ್ತಿಲ್ಲ. ನಾನು ಕೇಳುತ್ತಿರುವುದು ನನ್ನ ಮಗಳನ್ನು. ನೀವು ಕಾಪಾಡಿಕೊಳ್ಳುತ್ತೀರೆಂದು ಭರವಸೆಕೊಟ್ಟು ಕೈಹಿಡಿದ ನನ್ನ ಮಗಳನ್ನು ಮಾತ್ರ’ ಎಂದರು. ರಾಮಚಂದ್ರ ಪ್ರಭುಗಳು ಪರಮ ವಿವೇಕಿಗಳು! ‘ಸುಮ್ಮನಿರು ಲಕ್ಷ್ಮಣ, ಅವರ ಮಾತಲ್ಲಿ ಅನುಚಿತವೇನಿಲ್ಲ’ ಎಂದು ಸಮಾಧಾನಿಸಿದರು. ಅಪ್ಪ ಮರುದಿನವೇ ಒಂದು ಹನಿ ನೀರನ್ನು ಸ್ವೀಕಾರ ಮಾಡದೇ ದುರ್ದಾನ ತೆಗೆದುಕೊಂಡಂತೆ ಹೊರಟುಬಿಟ್ಟರು. ತಡೆಯುವವರು ಯಾರೂ ಇರಲಿಲ್ಲ.

ಸೀತೆ, ಚಿಕ್ಕಂದಿನಿಂದ ನಾವೆಲ್ಲ ಒಟ್ಟಿಗೇ ಒಂದೇ ಅರಮನೆಯಲ್ಲಿ ಬೆಳೆದೆವಾದರೂ, ಅಪ್ಪನ ಪ್ರೀತಿ ನಿನ್ನಮೇಲೆ ಒಂದುತೂಕ ಹೆಚ್ಛೇ ಇತ್ತು. ಅದೆಷ್ಟೋ ವೇಳೆ ಆ ಕುರಿತು ನನಗೆ ಅಸೂಯೆಯಾದದ್ದಿದೆ. ನೀನು ಎಲ್ಲರಿಗಿಂತ ಚೆಲುವೆಯೊಂದೋ ಹಲವು ಕಲೆಗಳಲ್ಲಿ ನಿಪುಣೆಯೆಂದೋ ಅಥವಾ ಬರ‍್ಯಾವ ಕಾರಣವೋ… ಸ್ವಂತ ಮಗಳಾದ ನನಗಿಂತ ಅವರ ಹೊನ್ನಾರಿಗೆ ಸಿಕ್ಕು ದತ್ತವಾದ ಪೆಟ್ಟಿಗೆಯಲ್ಲಿನ ಶಿಶುವಾದ ನಿನ್ನ ಕುರಿತು ಅವರಿಗೆ ಅಕ್ಕರೆ ಮೋಹಗಳು ಹೆಚ್ಛೇ ಇತ್ತು. ಕೇವಲ ಅವರಿಗೆ ಮಾತ್ರವಲ್ಲ ನಮಗೂ ಸಹ ನೀನೆಂದರೆ ಆಯಿತು.

ನಾವೆಲ್ಲ ಒಂದೇ ಮನೆಗೆ ಲಗ್ನವಾಗಿ ಹೊರಟು ನಿಂತಾಗ ನಾನು ಹಿರಿ ಹಿರಿ ಹಿಗ್ಗಿದ್ದೆ. ಇನ್ನು ಮುಂದೆಯೂ ನಾವೆಲ್ಲ ಒಂದೇ ಕಡೆ ಇರುತ್ತೇವೆಂದು. ಆದರದು ಎಂಥ ಮೂರ್ಖತನ ಎಂದು ಈಗ ಅರಿವಾಗಿದೆ. ನಾವೆಲ್ಲ ಬೇರೆ-ಬೇರೆ ಅರಮನೆಗಳಲ್ಲಿದಿದ್ದರೆ ಬಹುಶಃ ಇಷ್ಟರಲ್ಲಿ ನೀನೆಲ್ಲಿದ್ದರೂ ಹುಡುಕಿ ಕರೆತಂದು ಗುಟ್ಟಾಗಿ ಪೊರೆಯಬಹುದಿತ್ತು. ಒಂದೇ ಅರಮನೆಯ ಅಣ್ಣತಮ್ಮಂದಿರ ಸರ್ಪಗಾವಲಿನಲ್ಲಿ ಅಂಥದ್ದೆಲ್ಲ ಸಾಧ್ಯವಿಲ್ಲ. ನೀನು ವನವಾಸಕ್ಕೆ ಹೋಗಿದ್ದೇ ಇದಕ್ಕೆಲ್ಲ ಕಾರಣ. ನೀನು ಹೋಗಲೇ ಬಾರದಿತ್ತು ಸೀತೆ. ನಮ್ಮ ಜೊತೆ ಅರಮನೆಯಲ್ಲೇ ಇರಬೇಕಿತ್ತು. ನೀನೋ ನಿನ್ನ ಆದರ್ಶಗಳೋ… ಬಿಡು ಆಗಿನ್ನೂ ಪ್ರಾಯ ಚಿಕ್ಕದಿತ್ತು.

ನಾನೂ ಸೌಮಿತ್ರಿಯೊಂದಿಗೆ ಹಠ ಹಿಡಿದಿದ್ದೆ, ನಾನೂ ಬರುತ್ತೇನೆ ಅಂತ. ಖಡಾಖಂಡಿತ ಬೇಡವೆಂದರು. ‘ನಾನು ಹೋಗುತ್ತಿರುವುದು ಅಣ್ಣ ಅತ್ತಿಗೆಯರ ರಕ್ಷಣೆ ಮತ್ತು ಸೇವೆಗಾಗಿ. ನೀನು ಬಂದರೆ ನನಗೆ ಹೆಚ್ಚಿನ ಹೊರೆಯಾಗುತ್ತೆ’ ಅಂದರು. ನಾನೂ ವಿರಹಿಣಿಯಂತೆ ಅಯೋಧ್ಯೆಯಲ್ಲಿದ್ದೆ. ಈಗನ್ನಿಸುತ್ತೆ ಬಹುಶಃ ಅದೇ ಸರಿ ಎಂದು. ನಾನು ಕಾಡಿಗೆ ಬಂದು, ನನ್ನನ್ನು ಇನ್ಯಾವನಾದರೂ ಕಾಮುಕ ಎತ್ತಿಕೊಂಡು ಹೋಗಿದ್ದರೆ… ನನಗ್ಯಾವ ಕರ್ಮ ಅಗ್ನಿ ಪರೀಕ್ಷೆ ಪರಿತ್ಯಾಗಗಳದ್ದು… ಹಾಗಂತ ನಾನೇನು ನಿನ್ನ ಹಾಗೆ ಲೋಕೋತ್ತರ ಚೆಲುವೆಯೇನಲ್ಲ. ರಾವಣನಂತವರಿಗೆ ಚೆಲುವೆಯೇ ಬೇಕಿಲ್ಲ. ತನ್ನ ಶೌರ್ಯ ಪ್ರದರ್ಶನಕ್ಕೂ ಗಂಡಸರು ಹೆಣ್ಣು ಮಕ್ಕಳನ್ನು ಉಪಯೋಗಿಸುತ್ತಾರೆ. ಎಷ್ಟೇ ಆಗಲಿ ನಾವೆಲ್ಲ ವಸ್ತುಗಳ ಹಾಗೆ ಬಳಸಲ್ಪಟ್ಟವರಲ್ಲವೆ?

ಇನ್ನು ಇಲ್ಲಿಯ ರಾಜಮಾತೆಯರಿಗೆ ತಮ್ಮ ಮಕ್ಕಳು ಏನು ಮಾಡಿದರೂ ಸರಿಯೆ. ಯಾರೂ ಗಂಡು ಮಕ್ಕಳಿಗೆ ಬುದ್ಧಿ ಹೇಳುವವರಿಲ್ಲ. ಅಂದಹಾಗೆ ನೀನು ಎಲ್ಲಿದ್ದೀಯ? ಹೆರಿಗೆ ಸುಗಮವಾಯ್ತ? ಮಗು ಹೆಣ್ಣೋ-ಗಂಡೋ? ನಿನ್ನನ್ನು ನಿನ್ನ ಮಗುವನ್ನು ನೋಡಬೇಕೆಂದು ಕಡುಹಂಬಲ… ಪುಣ್ಯಕ್ಕೆ ಮಾಂಢsÀವಿ ತುಂಬ ಜಾಣೆ, ಯಾರೋ ಗುಪ್ತಚರರ ಮೂಲಕ ನಿನ್ನನ್ನು ಹುಡುಕಿಸುತ್ತಿದ್ದಾಳೆ. ಇವತ್ತಲ್ಲ ನಾಳೆ ನೀನು ಸಿಕ್ಕೇ ಸಿಗ್ತೀಯ ಅನ್ನೊ ನಂಬಿಕೆ ಅವಳದು, ನಮ್ಮೆಲ್ಲರದೂ ಸಹ! ನಿನ್ನ ಆರೋಗ್ಯ ನೋಡಿಕೋ. ನೀನು ಸಿಕ್ಕ ತಕ್ಷಣ ನಾವೆಲ್ಲ ಅಲ್ಲಿಗೇ ಬರುತ್ತೇವೆ. ಹೇಗಾದರೂ ಕಣ್ಣು ತಪ್ಪಿಸಿಯಾದರು! ಅದೆಲ್ಲ ಸರಿ ಸೀತೆ ನೀನೆಲ್ಲಿರುವೆಯೆಂದು ಗೊತ್ತಿಲ್ಲದೆ ಈ ಪತ್ರವನ್ನು ನಿನಗೆ ಹೇಗೆ ತಲುಪಿಸಲಿ? ನನ್ನ ಮನಸ್ಸಿನ ಕಸಿವಿಸಿ, ನೋವಿನ ಜತೆ ನಿನ್ನ ನೋಡುವ ಹಂಬಲದಿಂದ ಇದನ್ನೆಲ್ಲ ಬರೆದೆ. ನೀನೆಂದಾದರೂ ಸಿಕ್ಕಾಗ ನಾನೇ ಇದನ್ನು ನಿನ್ನ ಕೈಗೆ ಕೊಡ್ತೀನಿ ಆಗ ಓದು

-ನಿನ್ನ ಊರ್ಮಿಳೆ.

‍ಲೇಖಕರು avadhi

8 July, 2019

5 Comments

  1. ಹೆಚ್ಚೆನ್ ಮಂಜುರಾಜ್

    ಉಷಾ ನರಸಿಂಹ ಅವರ ಬರೆಹ ಮನ ಕಲಕಿತು……ಸೊಗಸಾಗಿದೆ….ಪ್ರಕಟಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

  2. T S SHRAVANA KUMARI

    ಸೊಗಸಾಗಿದೆ

  3. S.P.Vijayalakshmi

    ಸುಂದರ ಬರಹ. ಉಷಾ ನರಸಿಂಹನ್ ಅವರ ಕತೆಗಳೇ ಹೀಗೆ ಹಿಡಿದಿಡುತ್ತವೆ ಓದುಗರನ್ನು

    • ushanarasimhan

      ಧನ್ಯವಾದಗಳು

  4. Geetha Naval

    ಹೆಣ್ಣಿನ ಮನಸ್ಸಿನ ಸೂಕ್ಷ್ಮಕಂಪನಗಳನ್ನು ಸ್ಪರ್ಶಿಸಿದ ಅನುಭವ ‘ ಇತ್ತೀಚೆಗೆ ನಾನು….. .’ ಕಥೆಯದ್ದು. ಅಭಿನಂದನೆಗಳು.ಉಷಾ .
    ಗೀತಾ ನಾವಲ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading