ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಬಿಡುಗಡೆಯಾದ ಪುಸ್ತಕ

ಅನುವಾದಕರಾದ ಶಾಂತಾ ನಾಗರಾಜ್ ಅವರು ತಮ್ಮ ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ… ಎಂ.ವೈ. ಘೋರ್ಪಡೆಯವರ `ವಿಂಗ್ಡ್ ಫ್ರೆಂಡ್ಸ್’ ಕೃತಿಯನ್ನು ಕನ್ನಡಕ್ಕೆ ನಾವು ಅನುವಾದ ಮಾಡಿದ್ದು ಎರಡು ಪ್ರಮುಖ ಕಾರಣಗಳಿಗಾಗಿ. ಒಂದು ಘೋರ್ಪಡೆ ಅವರು ಸಂಡೂರು ಎನ್ನುವ ಕಣಿವೆಯೂರಿನ ಸುತ್ತಮುತ್ತಲಿನ ಹಕ್ಕಿಗಳ ಬಗ್ಗೆ ಬರೆಯುತ್ತಾರೆ. ಇಂಥಾ ಹಕ್ಕಿಗಳು ಸಂಡೂರಿನಂತೇ ಎಲ್ಲ ಗ್ರಾಮಪ್ರದೇಶಗಳಲ್ಲೂ ಇರಬಹುದು. ಇಲ್ಲಿ ಗ್ರಾಮಜೀವನದ ಅನುಭವ ದಟ್ಟವಾಗಿದೆ. ಹಕ್ಕಿಗಳ ಬಗ್ಗೆ ಮಾತೃಹೃದಯದ ಅಂತಃಕರಣವಿದೆ. ಪುಟ್ಟ ಮಕ್ಕಳ ಮುಗ್ಧ ಕುತೂಹಲವಿದೆ. ಈ ಪುಸ್ತಕವನ್ನು ಓದುವ ನಮ್ಮ ಗ್ರಾಮದ ಮಕ್ಕಳು ತಮ್ಮ ಹಳ್ಳಿಯ ಹಕ್ಕಿಗಳ ಒಡನಾಡಿಗಳಾಗಿ ಇಂಥದೇ ಅಂತಃಕರಣವನ್ನೂ, ಮುಗ್ಧ ಕುತೂಹಲವನ್ನೂ ಸರ್ವಕಾಲಕ್ಕೂ ಬೆಳೆಸಿ ಉಳಿಸಿಕೊಳ್ಳಲಿ ಎನ್ನುವುದು ನಮ್ಮದೊಂದು ಸಣ್ಣ ಆಶಯ. ಎರಡನೆಯ ಪ್ರಮುಖ ಕಾರಣ ಘೋರ್ಪಡೆಯವರು ಜಗದ್ವಿಖ್ಯಾತ ಫೋಟೋಗ್ರಾಫರ್. ಇವರು ಹಕ್ಕಿಗಳ ಭಾವಚಿತ್ರವನ್ನು ತೆಗೆಯಲು ಗಂಟೆಗಟ್ಟಲೇ ತಾಳ್ಮೆಯಿಂದ ಕಾದಿದ್ದಾರೆ. ಸರಿಯಾದ ಸಮಯದಲ್ಲಿ ಕ್ಲಿಕ್ಕಿಸಿರುವ ಕಾರಣ ಚಿತ್ರಗಳು ಅತ್ಯಂತ ಭಾವಪೂರ್ಣವಾಗಿಯೂ ಇವೆ. ಕೆಲವು ಚಿತ್ರಗಳಂತೂ ಕಾವ್ಯಗಳಂತೆ ಸುಂದರ ಅನುಭವವನ್ನು ಕಟ್ಟಿಕೊಡುತ್ತವೆ. ಪ್ರತಿ ಭಾವಚಿತ್ರದ ಹಿಂದೆಯೂ ಸಣ್ಣ ಅನುಭವದ ಕಥೆಯಿದೆ. ಅದನ್ನು ಯಾವ ಅಹಮಿಕೆಯಿಲ್ಲದೇ ಅತ್ಯಂತ ಸರಳವಾಗಿ ಲೇಖಕರು ವಿವರಿಸಿದ್ದಾರೆ. ಇದೊಂದು ಅತ್ಯದ್ಭುತವಾದ ಪ್ರಯತ್ನವಾದರೂ ಘೋರ್ಪಡೆಯವರು ವಿನೀತಭಾವದಿಂದ `ನಾನು ಈ ಪುಸ್ತಕವನ್ನು ಬರೆದಿರುವುದು ಮಕ್ಕಳಿಗಾಗಿ ಅಷ್ಟೇ’ ಎಂದು ಸಜ್ಜನಿಕೆಯ ಮಾತನ್ನೇ ಹೇಳುತ್ತಾರೆ! ಇದನ್ನು ಓದುವ ಮಕ್ಕಳು ಹಕ್ಕಿಗಳನ್ನು ಗಮನಿಸುವುದನ್ನು ಹವ್ಯಾಸ ಮಾಡಿ ಕೊಳ್ಳುವುದಲ್ಲದೇ, ತಾವೂ ಇವರಂತೆ ಭಾವಚಿತ್ರವನ್ನೂ ತೆಗೆಯುವ ಸ್ಪೂರ್ತಿ ಬೆಳೆಸಿಕೊಂಡರೆ ಈ ಪುಸ್ತಕದ ಅನುವಾದ ಸಾರ್ಥಕತೆಯನ್ನು ಪಡೆಯುತ್ತದೆ. 82ರ ಹರೆಯದಲ್ಲೂ ಮಕ್ಕಳಿಗೆ ಪಾಠಮಾಡುತ್ತಾ, ಜನಾನುರಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾ ಎಲೆಮರೆಯ ಕಾಯಿಯಂತೆ ಉಳಿದಿರುವ ಶ್ರೀ ಘೋರ್ಪಡೆ ಅವರ ಈ ಪುಸ್ತಕವನ್ನು ಶಾಲಾ ಮಕ್ಕಳ ಕೈಯಿಂದ ಬಿಡುಗಡೆ ಮಾಡಿಸುತ್ತಿರುವುದು ಒಂದರ್ಥದಲ್ಲಿ ಪಕ್ಷಿಗಳ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸದಂತೆ ಕಾಣುತ್ತದೆ
]]>

‍ಲೇಖಕರು avadhi

16 June, 2010

2 Comments

  1. ವಸುಧೇಂದ್ರ

    ಮಾನ್ಯರೆ,
    ಘೋರ್ಪಡೆಯವರು ತೆಗೆದ ಎರಡೂ ಫೋಟೋಗಳನ್ನು ನೋಡಿ ತುಂಬಾ ಖುಷಿಯಾಯ್ತು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ತಪ್ಪದೆ ಗೋಡೆಯ ಮೇಲೆ ಸ್ಥಾನ ಪಡೆಯುತ್ತಿದ್ದ ಅವರ ಸ್ಮಯೋರ್ ಕಂಪನಿಯ ಕ್ಯಾಲೆಂಡರಿನಲ್ಲಿ ಇರುತ್ತಿದ್ದುದು ಇವೇ ಸೊಗಸಾದ ಕಪ್ಪು ಬಿಳುಪು ಫೋಟೋಗಳು. ಪ್ರತಿ ವರ್ಷವೂ ತಪ್ಪದಂತೆ ಇಂತಹ ಹಲವಾರು ಸುಂದರ ವನ್ಯಜೀವಿ ಫೋಟೋಗಳನ್ನು ನಾನು ನೋಡುತ್ತಾ ಬೆಳೆದಿದ್ದೇನೆ. ಅವರ ಪುಸ್ತಕವೊಂದು ಕನ್ನಡದಲ್ಲಿ ಬರುತ್ತಿರುವುದು ಬಹಳ ಸಂತಸದ ಸಂಗತಿ. ಘೋರ್ಪಡೆಯವರಿಗೂ, ಅನುವಾದಕಿ ಶಾಂತಾ ನಾಗರಾಜ್‌ರವರಿಗೂ ಹೃತ್ಪೂರ್ವಕ ಅಭಿನಂದನೆಗಳು.
    ವಸುಧೇಂದ್ರ

  2. Muralidhar bhat

    nice effort good luck

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading