ಲಿಬಿಯಾ ತಪ್ಪಿದ್ದೆಲ್ಲಿ? ತಪ್ಪಿದ್ದಕ್ಕೆ ಪರಿಹಾರವಿದೆಯೇ?
ಉದಯ್ ಇಟಗಿ
ಗಡಾಫಿಯ ಹತ್ಯೆಯಾದ ನಂತರ ಇಡಿ ಜಗತ್ತು ಲಿಬಿಯಾದತ್ತ ಕುತೂಹಲದ ಕಂಗಳನ್ನು ನೆಟ್ಟು ಕುಳಿತಿತ್ತು. ಒಬ್ಬ ಬಲಿಷ್ಟ ಸರ್ವಾಧಿಕಾರಿಯ ಹಿಡಿತದಿಂದ ಲಿಬಿಯಾ ಪಾರಾಯಿತು. ಅವನ ಶೋಷಣೆಯಿಂದ ಲಿಬಿಯನ್ರು ಮುಕ್ತಿ ಹೊಂದಿದರು. ಅಲ್ಲಿ ಪ್ರಜಾರಾಜ್ಯ ಸ್ಥಾಪನೆಯಾಗಿ ಇನ್ನು ಮುಂದೆ ಲಿಬಿಯನ್ರಿಗೆ ಒಳ್ಳೆಯ ದಿನಗಳು ಬರಲಿವೆ. ಲಿಬಿಯಾ ಬಹಳ ಬೇಗನೆ ಅಭಿವೃದ್ಧಿಯ ಪತಾಕೆಯನ್ನು ಹಾರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡುತ್ತದೆ ಎಂಬೆಲ್ಲಾ ನಿರೀಕ್ಷೆಗಳನ್ನಿಟ್ಟುಕೊಂಡು ಇಡಿ ಜಗತ್ತು ಕಾಯುತ್ತಾ ಕೂತಿತ್ತು. ಆದರೆ ದುರಾದೃಷ್ಟವಶಾತ್ ಗಡಾಫಿ ಸತ್ತ ದಿನದಿಂದಲೇ ಲಿಬಿಯಾದಲ್ಲಿ ಅರಾಜಕತೆ, ಅಶಾಂತಿ ನೆಲೆಯೂರುತ್ತಾ ಹೋಯಿತು. ಹಾಗೆ ನೋಡಿದರೆ ಗಡಾಫಿ ಸತ್ತ ಮೇಲೆ ಲಿಬಿಯಾ ತನ್ನ ಸಂಕ್ರಮಣದ ಕಾಲಘಟ್ಟವನ್ನು ಒಂದು ಸುಸಂಬದ್ಧ, ಸುಶಾಂತ ಕಾಲವನ್ನಾಗಿ ಮಾರ್ಪಡಿಸಿ ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕಬಹುದಿತ್ತು. ಲಿಬಿಯಾದಲ್ಲಿ ಅಪಾರ ತೈಲ ಸಂಪತ್ತಿತ್ತು. ಯೂರೋಪ್ ದೇಶಗಳಿಗೆ ಹತ್ತಿರವಾಗಿತ್ತು. ಮೇಲಾಗಿ ಅದೇ ಹಾದಿಯಲ್ಲಿ ಸಾಗಿದ ಅಕ್ಕಪಕ್ಕದ ರಾಷ್ಟ್ರಗಳ ಉದಾಹರಣೆಗಳಿದ್ದವು. ಹಾಗಿದ್ದೂ ಲಿಬಿಯಾ ಅಭಿವೃದ್ಧಿಯ ಪಥದತ್ತ ಸಾಗದೆ ಅಧೋಗತಿಗೆ ಇಳಿಯಿತು. ಯಾಕೆ? ಇದಕ್ಕೆಲ್ಲಾ ಏನು ಕಾರಣ? ಯಾರು ಹೊಣೆ? ಲಿಬಿಯಾ ತಪ್ಪಿದ್ದೆಲ್ಲಿ? ಎಂಬೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಏಳುವದು ಸಹಜ. ಈ ಎಲ್ಲ ಪ್ರಶ್ನೆಗಳನ್ನು ಕೇಳುವದಕ್ಕಿಂತ ಮುಂಚೆ ನಾವು ಇವತ್ತಿನ ಸ್ಥಿತಿ-ಗತಿಯನ್ನು ದೊರೆ ಇದ್ರಿಸ್ ಮತ್ತು ಗಡಾಫಿ ಕಾಲದಲ್ಲಿನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿಟ್ಟು ಪರಿಶೀಲಿಸಬೇಕಾಗುತ್ತದೆ.
ನಮಗೆಲ್ಲಾ ಗೊತ್ತಿರುವಂತೆ 1943 ರವರೆಗೆ ಲಿಬಿಯಾ ಇಟ್ಯಾಲಿಯನ್ರರ ಅಧೀನಕ್ಕೆ ಒಳಪಟ್ಟಿತು. ಆದರೆ ಎರಡನೆ ಮಹಾಯುದ್ಧದಲ್ಲಿ ಇಟಲಿ ಸೋತ ನಂತರ ಲಿಬಿಯಾ ಒಕ್ಕೂಟ ರಾಷ್ಟ್ರಗಳ ಅಧೀನಕ್ಕೆ ಒಳಪಟ್ಟಿತು. ಮುಂದೆ ಅಂದರೆ ಡಿಸೆಂಬರ್ 24, 1951 ರಂದು ಲಿಬಿಯಾ ಈ ಎಲ್ಲ ದಾಸ್ಯದಿಂದ ಬಿಡುಗಡೆಹೊಂದಿ ತನ್ನನ್ನು ಒಂದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು. ಅಲ್ಲಿಂದಾಚೆ 1969ರ ತನಕ ಅಲ್ಲಿಯ ರಾಜ ಇದ್ರಿಸ್ ಎಂಬವನ ಅಧೀನಕ್ಕೆ ಒಳಪಟ್ಟಿತು. ಲಿಬಿಯಾದ ಮೊಟ್ಟಮೊದಲ ಅರಸನಾಗಿ ಅಧಿಕಾರ ಸ್ವೀಕರಿಸಿದ ಇದ್ರಿಸ್ ಅಷ್ಟೊಂದು ಸಮರ್ಥನಾಗಿರಲಿಲ್ಲ. ಅನೇಕ ಬುಡಕಟ್ಟು ಜನಾಂಗಗಳನ್ನು ಹೊಂದಿದ್ದ ಲಿಬಿಯಾದ ಎಲ್ಲ ಜನತೆಯನ್ನು ತೃಪ್ತಿಪಡಿಸುವಲ್ಲಿ ಆತ ಯಶಸ್ವಿಯಾಗಲಿಲ. ಮೇಲಾಗಿ ಆತ ಎಣ್ಣೆ ಬಾವಿಗಳಿಂದ ಎಣ್ಣೆ ತೆಗೆಯುವ ತಂತ್ರಜ್ಞಾನಕ್ಕಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಸಂಪೂರ್ಣವಾಗಿ ಅವಲಂಬಿತನಾದ. ಇದನ್ನು ದುರುಪಯೋಗ ಪಡೆದುಕೊಂಡ ಹೊರದೇಶಿಯ ಕಂಪನಿಗಳು ತಮ್ಮ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಎಣ್ಣೆಯ ದರವನ್ನು ನಿಗದಿಗೊಳಿಸಿ ಎಣ್ಣೆ ವ್ಯಾಪಾರದಲ್ಲಿ ಅರ್ಧ ಲಾಭವನ್ನು ಹೊಡೆಯುತ್ತಿದ್ದವು. ತೈಲಸಂಪನ್ಮೂಲವನ್ನೂ ಮಾರಿಕೊಂಡು, ಲಾಭವನ್ನೂ ಪಡೆಯದೆ ಲಿಬಿಯಾ ಸಂಕಷ್ಟಕ್ಕೀಡಾಯಿತು. ಆಗ ಇಲ್ಲಿನ ಪ್ರಜೆಗಳು ಹೀಗಾದರೆ ದೇಶ ಉದ್ಧಾರವಾಗುವದು ಯಾವಾಗ? ಅದರ ಬದಲು ದೇಶವನ್ನು ಒಡೆದು ಮೂರು ಭಾಗಗಳನ್ನಾಗಿ ಮಾಡಿ ಕೊಟ್ಟುಬಿಡಿ. ನಮಗೆ ಯಾರು ಬೇಕೋ ಅವರನ್ನು ಅರಸರನ್ನಾಗಿ ಮಾಡಿ ದೇಶ ನಡೆಸುತ್ತೇವೆ ಎಂದು ಹೇಳುವದರ ಮೂಲಕ ಮೊಟ್ಟಮೊದಲಿಗೆ ವಿಭಜನೆಯ ಕೂಗನ್ನು ಹಾಕಿದ್ದರು. ಈ ಕೂಗು 1969 ರವರೆಗೆ ಕೇಳಿಸುತ್ತಲೇ ಇತ್ತು. ಆದರೆ 1969ರಲ್ಲಿ ಅಧಿಕಾರಕ್ಕೆ ಬಂದ ಗಡಾಫಿ ತಕ್ಷಣ ಪರದೇಶಿ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡ. ತನ್ನ ನಿರ್ಧಾರವನ್ನು ಒಪ್ಪದ ಕಂಪನಿಗಳಿಗೆ ಎಣ್ಣೆ ಉತ್ಪಾದನೆಯನ್ನು ನಿಲ್ಲಿಸುವ ಬೆದರಿಕೆ ಹಾಕಿದ. ಬೇರೆ ದಾರಿಯಿಲ್ಲದೆ ಹೊರದೇಶಿ ಕಂಪನಿಗಳು ಬಗ್ಗಬೇಕಾಯಿತು. ಪರಿಣಾಮವಾಗಿ ಲಿಬಿಯಾ ಹೇರಳ ಲಾಭವನ್ನು ಗಳಿಸತೊಡಗಿತು. ಲಿಬಿಯಾದಲ್ಲಿ ಹೇರಳ ತೈಲಸಂಪನ್ಮೂಲವಿತ್ತು. ಆದರೆ ಜನಸಂಖ್ಯೆ ಕಡಿಮೆಯಿತ್ತು. ಇದನ್ನರಿತ ಗಡಾಫಿ ತೈಲಸಂಪನ್ಮೂಲಗಳಿಂದ ಬಂದ ಲಾಭವನ್ನು ಲಿಬಿಯನ್ರ ಉದ್ದಾರಕ್ಕಾಗಿ ಚೆಲ್ಲಿದ. ಆ ಮೂಲಕ ಗಡಾಫಿ ಸಹಜವಾಗಿ ಲಿಬಿಯನ್ರಿಗೆ ಒಬ್ಬ ಭರವಸೆಯ ನಾಯಕನಾಗಿ ಕಂಡನಲ್ಲದೇ ಈ ದೇಶವನ್ನು ನಡೆಸಲು ಇವನೇ ಸಮರ್ಥ ನಾಯಕನೆಂದು ತೀರ್ಮಾನಿಸಿ ಜನ ತಮ್ಮ ಸಂಪೂರ್ಣ ಬೆಂಬಲವನ್ನು ಆತನಿಗೆ ಸೂಚಿಸಿಯೂ ಬಿಟ್ಟರು. ಆ ಮೂಲಕ ಲಿಬಿಯಾದಲ್ಲಿ ಎದ್ದಿದ್ದ ವಿಭಜನೆಯ ಕೂಗು ತಾನೇತಾನಾಗಿ ಹಿಂದೆ ಸರಿಯಿತು.
ಇನ್ನು ಇಲ್ಲಿಯ ಸಾಮಾಜಿಕ ವ್ಯಸ್ಥೆಯ ಬಗ್ಗೆ ಹೇಳುವದಾದರೆ ನಾನು ಲಿಬಿಯಾಕ್ಕೆ ಬಂದ ಹೊಸತರಲ್ಲಿ ನನ್ನ ಲಿಬಿಯನ್ ಸಹೋದ್ಯೋಗಿಯೊಬ್ಬ ಒಮ್ಮೆ ಹೀಗೇ ನನ್ನ ಜೊತೆ ಮಾತನಾಡುತ್ತಾ ಹೇಳಿದ್ದ; ಗಡಾಫಿ ಸತ್ತ ಮೇಲೆ ಇಲ್ಲಿಯ ಜನ ಅವರವರೇ ಹೊಡೆದಾಡಿಕೊಂಡು ಸಾಯದಿದ್ದರೆ ಕೇಳಿ ಎಂದು. ನಾನು ಕುತೂಹಲ ತಡೆಯಲಾರದೆ “ಯಾಕೆ?” ಎಂದು ಕೇಳಿದ್ದೆ. ಅದಕ್ಕವನು “ಲಿಬಿಯಾ ಅನೇಕ ಬುಡಕಟ್ಟುಗಳಿರುವ ರಾಷ್ಟ್ರ. ಈ ಎಲ್ಲ ಬುಡಕಟ್ಟುಗಳನ್ನು ಗಡಾಫಿ ಅದ್ಹೇಗೊ ಸರಿದೂಗಿಸಿಕೊಂಡು ಹೋಗುತ್ತಿದ್ದಾನೆ. ಆದರೆ ಅವನ ನಂತರ ಬರುವವರು ಹೀಗೆ ಇರುತ್ತಾರೆ ಎಂದು ಹೇಳಲು ಬರುವದಿಲ್ಲ.” ಎಂದು ಹೇಳಿದ್ದ. ಅವನ ಮಾತು ಇವತ್ತು ಅಕ್ಷರಶಃ ನಿಜವಾಗಿದೆ. ಗಡಾಫಿಯ ನಂತರ ಇಲ್ಲೀಗ ಎಲ್ಲ ಬುಡಕಟ್ಟುಗಳು ಎದ್ದು ಕುಳಿತಿವೆ. ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಒಬ್ಬರ ಮೇಲೊಬ್ಬರು ದ್ವೇಷ ಕಾರುತ್ತಾ ಜನರು ಅವರವರೇ ಬಡಿದಾಡಿಕೊಂಡು ಸಾಯುತ್ತಿದ್ದಾರೆ. ಈ ಪ್ರಕ್ರಿಯೆ ಗಡಾಫಿ ಸತ್ತ ಮಾರನೆಯ ದಿನದಿಂದಲೇ ಆರಂಭವಾಯಿತು. ಅದೂ ಮೊಟ್ಟಮೊದಲಿಗೆ ಗಡಾಫಿ ವಿರುದ್ಧ ಬಂಡೆದ್ದ ನೆಲವಾದ ಬೆಂಗಾಜಿಯಲ್ಲಿ. ಹಾಗೆ ಶುರುವಾದ ಬಡಿದಾಟ ನಿಧಾನವಾಗಿ ಪ್ರಮುಖ ನಗರಗಳಾದ ಟ್ರಿಪೋಲಿ, ಜಾವಿಯಾ, ಮಿಸ್ರತಾ, ಸೆಭಾ ಇನ್ನೂ ಮುಂತಾದ ನಗರಗಳಿಗೆ ಹಬ್ಬಿತು. ಆಗ ನ್ಯಾಟೋ ಇನ್ನೂ ಲಿಬಿಯಾದಲ್ಲಿಯೇ ಇತ್ತು. ಮನಸ್ಸು ಮಾಡಿದ್ದರೆ ನ್ಯಾಟೋ ಇದಕ್ಕೊಂದು ಮಂಗಳವನ್ನು ಆಗಲೇ ಹಾಡಬಹುದಿತ್ತು. ಆದರೆ ಹಾಗೆ ಮಾಡದೆ ಈ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿ ತಾತ್ಕಾಲಿಕವಾಗಿ ಅವರನ್ನು ಹತ್ತಿಕ್ಕಿ ತಮ್ಮ ಒಪ್ಪಂದಗಳಿಗೆ ಸಹಿ ಹಾಕಿದ NTC (National Transitional Council) ಹಂಗಾಮಿ ಸರಕಾರವನ್ನು ರಾಜಧಾನಿಯಲ್ಲಿ ಕೂರಿಸಿ ಹೊರಟೇಬಿಟ್ಟಿತು. ಹಾಗೆ ಸರಕಾರವನ್ನು ರಚಿಸುವಾಗ ಒಂದು ದೊಡ್ಡ ತಪ್ಪಾಯಿತು. ಅದೇನೆಂದರೆ ಕ್ರಾಂತಿಯ ಸಮಯದಲ್ಲಿ ಯುದ್ಧಭೂಮಿಯಲ್ಲಿ ಭಾಗವಹಿಸದ ಬಹಳಷ್ಟು ಜನಕ್ಕೆ ಮುಖ್ಯ ಸ್ಥಾನಗಳು ಸಿಗದೇ ಹೋದವು. ಬದಲಿಗೆ ಹೊರದೇಶಗಳಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಮಂತ ಲಿಬಿಯನ್ರನ್ನು ಕರೆತಂದು ದೊಡ್ಡದೊಡ್ಡ ಹುದ್ದೆಗಳಲ್ಲಿ ಕೂರಿಸಲಾಯಿತು. ಇದರಿಂದ ಸಹಜವಾಗಿ ಯುದ್ಧದಲ್ಲಿ ಭಾಗವಹಿಸಿದ ಅನೇಕರು ಅತೃ ಪ್ತಗೊಂಡರು. ಜೊತೆಗೆ ಅಲ್ಲಿ ಬಹಳಷ್ಟು ಜನ ಗಡಾಫಿ ಬೆಂಬಲಿಗರಿದ್ದರು. ಅವರನ್ನು ಸಹ ಸಂಪೂರ್ಣವಾಗಿ ಕಡೆಗಣಿಸುವದರ ಮೂಲಕ ಅವರಲ್ಲೂ ಅಸಮಧಾನದ ಹೊಗೆಯನ್ನೆಬ್ಬಿಸಿದರು.

ಈ ಎಲ್ಲದರ ಜೊತೆಗೆ ನ್ಯಾಟೋವನ್ನು ಕರೆಸಿಕೊಂಡುದರ ಬಗ್ಗೆ ಅವರವರಲ್ಲಿ ಕಿತ್ತಾಟ ಶುರುವಾಯಿತು. ಹಾಗೆ ನೋಡಿದರೆ ನ್ಯಾಟೋ ಲಿಬಿಯಾಕ್ಕೆ ಬಂದಿದ್ದು ಕೊನೆ ಘಳಿಗೆಯಲ್ಲಿ. ಅಂದರೆ ಹೆಚ್ಚುಕಮ್ಮಿ ಮುಕ್ಕಾಲು ಪಾಲು ಲಿಬಿಯಾ ಗಡಾಫಿಯ ಕೈ ತಪ್ಪಿಹೋದ ಮೇಲೆ. ಆಗ ಅಮೆರಿಕಾ ಕೆಲವು ಮುಖ್ಯ ನಾಯಕರನ್ನು ಕರೆದು ನೀವು ನ್ಯಾಟೊದ ಸಹಾಯ ತೆಗೆದುಕೊಳ್ಳಿ. ಇದಕ್ಕೊಂದು ಅಂತ್ಯ ಹಾಡಿಬಿಡೋಣ ಎಂದು ಹೇಳಿತು. ಅದಕ್ಕವರು ಹಿಂದುಮುಂದು ನೋಡದೆ ಒಪ್ಪಿಗೆಯನ್ನು ಸೂಚಿಸಿದರು. ಇದು ಕೆಲವರನ್ನು ಕೆರಳಿಸಿತು. ನಾವು ಗೆಲ್ಲುವದು ಬಹುತೇಕ ಖಚಿತವಾದ ಸಮಯದಲ್ಲಿ ನ್ಯಾಟೋವನ್ನು ಕರೆಸಿಕೊಂಡಿದ್ದೇಕೆ? ನಾವು ನಾವೇ ಸೇರಿಕೊಂಡು ಗಡಾಫಿಯನ್ನು ಹೊಡೆದುರುಳಿಸಬಹುದಿತ್ತಲ್ಲ? ಈಗ ನೋಡಿ ನಾವು ನ್ಯಾಟೋದ ಒಪ್ಪಂದಗಳಿಗೆ ಅನವಶ್ಯಕವಾಗಿ ತಲೆಬಾಗಬೇಕಿದೆ ಹಾಗೂ ಬಿಟ್ಟಿಯಾಗಿ ಅವರಿಗೆ ತೈಲವನ್ನು ಕೊಡಬೇಕಿದೆ ಎಂದು ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಅಸಹನೆ ಅವರನ್ನು ಬಾಧಿಸುತ್ತಲೇ ಇತ್ತು. ಒಂದು ದಿನ ಅದೇ ರೊಚ್ಚಿನಲ್ಲಿ ಹೋಗಿ ಅಮೆರಿಕಾದ ರಾಯಭಾರಿಯನ್ನು ಕೊಂದುಹಾಕಿ ಬಿಟ್ಟರು.
ಕ್ರಾಂತಿಯ ನಂತರ ಅಧಿಕಾರ ವಹಿಸಿಕೊಂಡ NTC ಹಂಗಾಮಿ ಸರಕಾರ ಇತ್ತ ಯುದ್ಧ ಮುಗಿದ ಮೇಲಿನ ತತ್ಕ್ಷಣದ ಅವಶ್ಯಕತೆಗಳನ್ನು ಪೂರೈಸುವದರಲ್ಲಿ ಮಗ್ನವಾದರೆ ಅತ್ತ ಅಧಿಕಾರ ಹಾಗೂ ಹಣದ ದಾಹದಿಂದ ತಹತಹಿಸುತ್ತಿದ್ದ ಕೆಲವು ಪ್ರಜಾಸೇನೆ ಸಂಘಟನೆಗಳು ಹುಟ್ಟಿಕೊಂಡು ಅಲ್ಲಿ ಸ್ಥಾಪನೆಯಾಗಿದ್ದ ಹಂಗಾಮಿ ಸರಕಾರಕ್ಕೆ ತೊಂದರೆ ಕೊಡಲಾರಂಭಿಸಿದವು. ಅದರಲ್ಲಿ ಲಿಬಿಯಾ ಡಾನ್, ಆಲ್ ಅನ್ಸಾ ಶೆರಿಯಾ, ಖಲಿಫಾ ಹಪ್ತಾರ್ ಎಂಬ ಸಂಘಟನೆಗಳು ಮುಖ್ಯವಾದವು. ಹಣದ ಅವಶ್ಯಕತೆ ಬಿದ್ದಾಗ ಹಾಗೂ ತಾವು ಹೇಳಿದಂತೆ ಕೇಳದೆ ಹೋದಾಗ ಶಸ್ತ್ರಗಳ (ಬಂದೂಕು ಮತ್ತು ಗನ್ನುಗಳು) ಸಮೇತ ಬೆದರಿಕೆಯನ್ನೊಡ್ಡಿ ಸರಕಾರದಿಂದ ಹಣ ಕೀಳುವದು ಮಾಮೂಲು ದಂಧೆಯಾಯಿತು. ಆಶ್ಚರ್ಯವೆಂದರೆ ಸರಕಾರ ಇಂಥವರನ್ನು ಬಗ್ಗು ಬಡಿಯುವ ಬದಲು ದೇಶದಲ್ಲಿ ಶಾಂತಿಯನ್ನು ಕಾಪಾಡುವದಕ್ಕೋಸ್ಕರ ಇವರಿಗೆ ಹಣ ನೀಡುತ್ತಾ ಬಂತು. ಹಣ ಮಾಡುವದು ಇಷ್ಟೊಂದು ಸುಲಭವಾದ ಮೇಲೆ ದಿನ ಕಳೆದಂತೆ ಇತರೆ ಜನ ಒಬ್ಬರಾದ ಮೇಲೊಬ್ಬರು ತಮ್ಮದೇ ಒಂದಷ್ಟು ಸಂಘಟನೆಗಳನ್ನು ಹುಟ್ಟು ಹಾಕಿ ಇವರಿಗೆ ಪೈಪೋಟಿ ಎಂಬಂತೆ ಅವರೂ ಸಹ ಸರಕಾರಕ್ಕೆ ತೊಂದರೆ ಕೊಡಲಾರಂಭಿಸಿದರು. ದುರಂತವೆಂದರೆ ಸರಕಾರ ಅವರಿಗೂ ಹಣ ನೀಡಿ ಅವರ ಬಾಯಿಯನ್ನು ಮುಚ್ಚಿಸುತ್ತಾ ಬಂತೇ ವಿನಃ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನೇ ಮಾಡಲಿಲ್ಲ.
ಈ ಪ್ರಜಾಸೇನೆ ಸಂಘಟನೆಗಳು ಬರೀ ಪ್ರತಿಭಟನೆಕಾರರಾಗಿದ್ದರೆ ಅವರನ್ನು ಅದ್ಹೇಗೋ ಹತ್ತಿಕ್ಕಬಹುದಿತ್ತು. ಆದರೆ ಅವರ ಕೈಗೆ ಶಸ್ತ್ರಗಳು ಬಂದಿದ್ದವು. ಅವು ಹೇಗೆ ಬಂದವು ಎಂಬುದನ್ನು ನಾನು ನಿಮಗೆ ಹೇಳಲೇಬೇಕು. ಫೆಬ್ರುವರಿ 17, 2011 ರ ಕ್ರಾಂತಿಯ ಸಮಯದಲ್ಲಿ ಈ ದೇಶದಲ್ಲಿ ಒಂದು ದೊಡ್ಡ ಅವಘಡವೇ ನಡೆದುಹೋಯಿತು. ಕ್ರಾಂತಿಯ ಸಮಯದಲ್ಲಿ ಸಹಜವಾಗಿ ಎಲ್ಲೆಡೆ ಅರಾಜಕತೆಯುಂಟಾಗಿ ಯಾರೂ ಹೇಳುವವರು ಕೇಳುವವರು ಇಲ್ಲದಂತಾಯಿತು. ಅದೇ ಸಮಯದಲ್ಲಿ ಇನ್ನೇನು ಗಡಾಫಿ ಸೋತುಹೋಗುತ್ತಾನೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಜನರು ಟ್ರಿಪೋಲಿಯ ಪೋಲಿಷ್ ಠಾಣೆಗಳಲ್ಲಿನ ಕಾವಲಿಲ್ಲದ ಶಸ್ತ್ರಾಗಾರದ ಮೇಲೆ ದಾಳಿ ಮಾಡಿ ಗನ್ನು ಮತ್ತು ಬಂದೂಕುಗಳನ್ನು ವಶಪಡಿಸಿಕೊಂಡರು. ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಜನ ದೇಶದೆಲ್ಲೆಡೆ ತಮ್ಮನ್ನು ರಕ್ಷಿಸಿಕೊಳ್ಳಲು ಆಯಾಯ ಪ್ರದೇಶಗಳ ಶಸ್ತ್ರಾಗಾರಗಳ ಮೇಲೆ ದಾಳಿ ಮಾಡಿ ಆಯುಧಗಳನ್ನು ವಶಪಡಿಸಿಕೊಂಡರೆಂದು ಇಲ್ಲಿನವರು ಹೇಳುತ್ತಾರೆ. ಇನ್ನು ಕೆಲವರು ಸ್ವತಃ ಗಡಾಫಿಯೇ ತಾನು ಸೋಲುತ್ತೇನೆಂಬುದು ಖಚಿತವಾಗುತ್ತಿದ್ದಂತೆಯೇ ಇನ್ನು ನಿಮ್ಮನ್ನು ಶತೃಗಳಿಂದ ರಕ್ಷಿಸಿಕೊಳ್ಳಿ ಎಂದು ಎಲ್ಲ ಲಿಬಿಯನ್ರ ಮನೆಮನೆಗೂ ಬಂದೂಕು ಮತ್ತು ಗನ್ನುಗಳನ್ನು ಹಂಚಿದನೆಂದು ಹೇಳುತ್ತಾರೆ. ಪರಿಣಾಮವಾಗಿ ಇವತ್ತು ಲಿಬಿಯಾದ ಪ್ರತಿಯೊಂದು ಮನೆಯಲ್ಲಿ ಕನಿಷ್ಟಪಕ್ಷ ಐದರಿಂದ ಆರು ಗನ್ನು ಮತ್ತು ಬಂದೂಕುಗಳಿವೆ ಹಾಗೂ ಅವರು ಸದಾ ಅವನ್ನು ತಮ್ಮ ರಕ್ಷಣೆಗೋಸ್ಕರ ಜೊತೆಯಲ್ಲಿಟ್ಟುಕೊಂಡೇ ಓಡಾಡುತ್ತಾರೆ. ಕ್ರಾಂತಿ ಮುಗಿದ ಮೇಲೆ ಆಗಿನ ಹಂಗಾಮಿ ಸರಕಾರ ಇವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಯಿತು. ಸಾಲದ್ದಕ್ಕೆ ಆವತ್ತಿನಿಂದ ಜನರು ಗನ್ನುಗಳನ್ನು ಟ್ರಿಪೋಲಿಯ ಬೀದಿಗಳಲ್ಲಿ ಆಟಿಕೆಗಳಂತೆ ಮಾರಾಟ ಮಾಡಲು ಶುರುವಾದರು. ಆಗಲೂ ಸರಕಾರ ಇದನ್ನು ಹತ್ತಿಕ್ಕುವ ಪ್ರಯತ್ನವನ್ನೇ ಮಾಡಲಿಲ್ಲ.
ಈ ಎಲ್ಲದರ ಮಧ್ಯ ಚುನಾವಣೆಗಳನ್ನು ನಡೆಸಿ ಆದಷ್ಟು ಬೇಗ ಒಂದು ಪ್ರಜಾಸತ್ತಾತ್ಮಕ ಸ್ಥಿರ ಸರಕಾರವನ್ನು ರಚಿಸಿಬಿಡೋಣ ಎಂಬ ತೀರ್ಮಾನವನ್ನು ತೆಗೆದುಕೊಂಡರು. ಆದರೆ ಅಷ್ಟೊತ್ತಿಗಾಗಲೇ ತುಂಬಾ ತಡವಾಗಿತ್ತು. ಆಗಷ್ಟೇ ಹುಟ್ಟಿಕೊಂಡಿದ್ದ ಸಂಘಟನೆಗಳು ಬಲಿತುಬಿಟ್ಟಿದ್ದವು. ಆಗ ಮತ್ತೆ ಟ್ರಿಪೋಲಿ ಮತ್ತು ಬೆಂಗಾಜಿಗಳಲ್ಲಿ ಗಲಾಟೆ, ಗದ್ದಲಗಳು ಶುರುವಾದವು. ಕೆಲವರು ಮೊದಲು ಸಂವಿಧಾನ ರಚನೆಯಾಗಲಿ ನಂತರ ಸರಕಾರ ರಚನೆಯಾಗಲಿ ಎಂದರು. ಇನ್ನು ಕೆಲವರು ಸರಕಾರ ರಚನೆಯಾದ ಮೇಲೆ ಸಂವಿಧಾನ ರಚಿಸೋಣ ಎಂದರು. ಕೊನೆಗೂ ಅಳೆದು ತೂಗಿ ಮೊದಲು ಸಂವಿಧಾನ ರಚನೆಯಾಗಲಿ ಎಂಬ ತೀರ್ಮಾನಕ್ಕೆ ಬಂದು ಅದರ ಸಮಿತಿಯ ರಚನೆಗಾಗಿ ಜುಲೈ 7, 2012 ರಂದು ಲಿಬಿಯಾದಲ್ಲಿ ಏಕಕಾಲಕ್ಕೆ ಎಲ್ಲ ಭಾಗದಲ್ಲಿ ಸಾಕಷ್ಟು ಗಲಾಟೆ, ಗದ್ದಲ, ಪ್ರತಿಭಟನೆ, ವಿರೋಧಗಳ ನಡುವೆಯೇ ಚುನಾವಣೆಗಳು ನಡೆಸಿದರು. ಆಗಲೂ ಅಷ್ಟೇ ಕೆಲವರು ಈ ಸಮಿತಿ ರಚನೆಯಲ್ಲಿ ಕೆಲವು ಬುಡಕಟ್ಟುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಊಳಿಟ್ಟರು. ಇನ್ನು ಕೆಲವರು ಟಿಕೇಟು ಹಂಚುವಲ್ಲಿ ಪ್ರಾದೇಶಿಕ ಅನ್ಯಾಯವಾಗಿದೆ ಎಂದು ಆಕ್ಷೇಪಿಸಿದರು. ಈ ಗದ್ದಲದ ನಡುವೆಯೇ ಸಮಿತಿಯ ಸಹಾಯದಿಂದ ಸಂವಿಧಾನವೇನೋ ರಚನೆಯಾಯಿತು. ಆದರೆ ಅದನ್ನು ರಚಿಸುವದರಲ್ಲಿಯೇ ಸುಮಾರು ಎರಡು ವರ್ಷಗಳಷ್ಟು ವೃಥಾ ಕಾಲಹರಣವನ್ನು ಮಾಡಿಬಿಟ್ಟರು. ಅಷ್ಟೊತ್ತಿಗಾಗಲೇ ಆಗಿನ ಸರಕಾರದ ವಿರುದ್ಧ ಬಂಡೆದ್ದ ವಿವಿಧ ಸಂಘಟನೆಗಳು ಬಲಿಷ್ಟಗೊಂಡಿದ್ದವು.
ಸಂವಿಧಾನ ರಚನೆಯಾದ ಮೇಲೆ ಪೂರ್ಣ ಪ್ರಮಾಣದ ಪ್ರಜಾರಾಜ್ಯ ಸ್ಥಾಪನೆಗಾಗಿ ಮತ್ತೆ 2014 ಜೂನ್ ತಿಂಗಳ ಕೊನೆವಾರದಲ್ಲಿ ದೇಶದ ಎಲ್ಲೆಡೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಿದರು. ಆದರೆ ಇಲ್ಲಿಯ ಕೆಲವು ಮೂಲಭೂತವಾದಿಗಳಿಗೆ ಪ್ರಜಾರಾಜ್ಯ ಸ್ಥಾಪನೆಯಾಗುವದು ಬೇಕಾಗಿರಲಿಲ್ಲ. ಅವರಿಗೆ ಗಡಾಫಿಯಂತವರೇ ಯಾರಾದರೊಬ್ಬರು ದೇಶವನ್ನು ಮುನ್ನೆಡೆಸುವವರು ಬೇಕಾಗಿತ್ತು. ಅಂತೆಯೇ Libya Dawn (ಮಿಸ್ರತಾ ಎಂಬ ಊರಿನವರು) ಎಂಬ ಸಂಘಟನೆಯವರಿಗೆ ತಾವೇ ಇಡಿ ದೇಶವನ್ನು ನಡಿಸಿಬಿಡೋಣ ಎನ್ನುವಷ್ಟರಮಟ್ಟಿಗೆ ಅವರಲ್ಲಿ ಅಧಿಕಾರದ ದಾಹ ತೀವ್ರಗೊಂಡಿತ್ತು. ಹಾಗಾಗಿ ಇವರು ನಾಮಕಾವಸ್ಥೆಗೆ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಅಸಮಾಧಾನವನ್ನು ಹತ್ತಿಕ್ಕಿ ಬೂದಿ ಮುಚ್ಚಿದ ಕೆಂಡದಂತೆ ಕುಳಿತುಬಿಟ್ಟರು. ಅತ್ತ ಆಯ್ಕೆಗೊಂಡ ಸಂಸದರು ಪ್ರಮಾಣ ವಚನ ಸ್ವೀಕಾರಕ್ಕಾಗಿ ಸಿದ್ಧರಾಗುತ್ತಿದ್ದರೆ ಇತ್ತ ವಿವಿಧ ಸಂಘಟನೆಗಳು ಸರಕಾರವನ್ನು ನಿರ್ನಾಮ ಮಾಡಿ ತಮ್ಮ ಹತೋಟಿಯನ್ನು ಸಾಧಿಸಲು ಸರಿಯಾದ ಸಮಯಕ್ಕಾಗಿ ಕಾದುಕೂತವು. ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೊಟ್ಟಮೊದಲಿಗೆ ಗಡಾಫಿ ವಿರುದ್ಧ ಬಂಡೆದ್ದ ನೆಲವಾದ ಬೆಂಗಾಜಿಯಲ್ಲಿ ನಡೆಯಬೇಕೆಂದು ನಿರ್ಧಾರವಾಗಿತ್ತು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಇನ್ನೇನು ಎಂಟು ದಿನಗಳು ಬಾಕಿ ಇವೆ ಅನ್ನುವಷ್ಟರಲ್ಲಿ ಮಿಸ್ರತಾದವರು ಜುಲೈ 13, 2014 ರಂದು ಟ್ರಿಪೋಲಿ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿಬಿಟ್ಟರು. ನೋಡನೋಡುತ್ತಿದ್ದಂತೆ ಇದು ಭುಗಿಲೇಳುತ್ತಾ ಹೋಯಿತು. ಇದೇ ಸಮಯಕ್ಕೆ ಸರಿಯಾಗಿ ಅತ್ತ ಬೆಂಗಾಜಿಯಲ್ಲೂ ವಿವಿಧ ಸಂಘಟನೆಗಳ ನಡುವೆ ಬಡಿದಾಟ ಆರಂಭವಾಯಿತು. ಅಲ್ಲಿ ಕೂಡಾ ಕಾದಾಟ ತೀವ್ರಗೊಂಡು ರಾಕೇಟ್, ಕ್ಷಿಪಣಿ ಪ್ರಯೋಗಗಳೆಲ್ಲಾ ಆದವು. ಜನ ಭಯಭೀತರಾಗಿ ಪಕ್ಕದ ರಾಷ್ಟ್ರಗಳಾದ ಟುನಿಶಿಯಾ, ಈಜಿಪ್ಟ್ಗಳಿಗೆ ವಲಸೆಹೋದರು. ಹೆಚ್ಚುಕಮ್ಮಿ ಲಿಬಿಯಾ ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಯಿತು. ಇನ್ನೂ ಸ್ಥಾಪನೆಯೇ ಆಗಿರದ ಸರಕಾರ ಅಕ್ಷರಶಃ ಕೈ ಚೆಲ್ಲಿ ಕುಳಿತುಬಿಟ್ಟಿತು. ಇತ್ತ ಮಿಸ್ರತಾದವರು ಟ್ರಿಪೋಲಿ ವಿಮಾನ ನಿಲ್ದಾಣ ಮತ್ತು ಅಲ್ಲಿಯ ಸರಕಾರಿ ಕಛೇರಿಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಇತ್ತ ಬೆಂಗಾಜಿಯಲ್ಲಿ ಆಲ್-ಆನ್ ಶೆರಿಯಾ ಉಗ್ರ ಸಂಘಟನೆಯು ಸರಕಾರಿ ಸ್ವಾಮ್ಯದ ಕಛೇರಿಗಳನ್ನು ವಶಪಡಿಸಿಕೊಳ್ಳಲಾರಂಭಿಸಿತು. ಇದೇ ಸಮಯದಲ್ಲಿ ಅದಾಗಲೇ ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಬಿರುಸುಗೊಳಿಸಿದ್ದ ISIS ಉಗ್ರ ಸಂಘಟನೆಕಾರರು ತಮ್ಮ ಕಾರ್ಯ ಚಟುವಟಿಕೆಗಳನ್ನು ಲಿಬಿಯಾಕ್ಕೂ ವಿಸ್ತರಿಸಲು ನಿರ್ಧರಿಸಿ ಈ ದೇಶದೊಳಕ್ಕೆ ನುಸುಳಿಬಿಟ್ಟರು.
ಇನ್ನೂ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿರದ ಸರಕಾರಕ್ಕೆ ಇದೊಂದು ದೊಡ್ದ ತಲೆನೋವಾಯಿತು. ಹೀಗಾದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಆಯ್ಕೆಗೊಂಡ ಸಂಸದರು ಬೇಗಬೇಗನೆ ಪ್ರಮಾಣ ವಚನವನ್ನು ಸ್ವೀಕರಿಸಿ ಸರಕಾರವನ್ನು ರಚಿಸಿಬಿಡೋಣ ಎಂಬ ತೀರ್ಮಾನವನ್ನು ತೆಗೆದುಕೊಂಡರು. ಆದರೆ ಬೆಂಗಾಜಿಯಲ್ಲಿ ಗಲಾಟೆ ತೀವ್ರಗೊಂಡಿದ್ದರಿಂದ ಪ್ರಮಾಣ ವಚನ ಸ್ವೀಕಾರವನ್ನು ತೂಬ್ರೂಕ್ ಎನ್ನುವ ಊರಿಗೆ ಸ್ಥಳಾಂತರಿಸಿದರು. ಇದು ಬೆಂಗಾಜಿಯವರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತು. ಇತ್ತ ಪ್ರಮಾಣ ವಚನ ಸ್ವೀಕರಿಸಿ ಸರಕಾರ ರಚನೆಯಾಗುವಷ್ಟರಲ್ಲಿ ಅತ್ತ ಗಲಾಟೆಗಳು ಜಾವಿಯಾ, ಜ್ವೋರಾ, ಮುಂತಾದ ಪ್ರಮುಖ ನಗರಗಳಿಗೆ ಹರಡಿ ದೆಶದೆಲ್ಲೆಡೆ ಅಭದ್ರತೆ ಹೆಚ್ಚಾಯಿತು. ಅಪಹರಣ, ಅತ್ಯಾಚಾರ, ದರೋಡೆ, ಕಳ್ಳತನ, ಸುಲಿಗೆಗಳಂತ ಪ್ರಕರಣಗಳು ಟ್ರಿಪೋಲಿ ಮತ್ತು ಬೆಂಗಾಜಿಗಳಲ್ಲಿ ಸಾಮಾನ್ಯವಾದವು. ಆಗ ಅಮೆರಿಕಾ, ಈಜಿಪ್ಟ್, ಇಂಗ್ಲೆಂಡ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಇನ್ನೂ ಮುಂತಾದ ದೇಶಗಳು ಒಂದೊಂದಾಗಿ ತಮ್ಮ ರಾಯಭಾರ ಕಛೇರಿಗಳನ್ನು ಮುಚ್ಚಿ ರಾಜಧಾನಿಯಿಂದ ಕಾಲು ಕೀಳತೊಡಗಿದವು. ಇದನ್ನು ನೋಡಿ ಪ್ರಧಾನಿ ಥಿನ್ನಿ ನಮ್ಮನ್ನು ಒಂಟಿಯಾಗಿ ಬಿಟ್ಟುಹೋಗಬೇಡಿ. ಗಡಾಫಿಯನ್ನು ಕಿತ್ತೊಗೆಯಲು ಸಹಾಯ ಮಾಡಿದ ನೀವು ಈಗ ಇಲ್ಲೊಂದು ಸ್ಥಿರ ಸರಕಾರವನ್ನು ಸ್ಥಾಪಿಸಲು ಸಹಾಯ ಮಾಡದೆ ನಮ್ಮನ್ನು ನಡುನೀರಲ್ಲಿ ಕೈ ಬಿಟ್ಟುಹೋಗುವದು ಸರಿಯಲ್ಲ. ದಯವಿಟ್ಟು ಸಹಾಯ ಮಾಡಿ ಎಂದು ಈ ಎಲ್ಲ ರಾಷ್ಟ್ರಗಳನ್ನು ಗೋಗರೆಯತೊಡಗಿದ. ಆದರೆ ಅಮೆರಿಕಾದ ಅಧ್ಯಕ್ಷ ಒಬಾಮಾ, ಲಿಬಿಯಾ ಅನೇಕ ಬುಡಕಟ್ಟುಗಳಿರುವ ರಾಷ್ಟ್ರ, ಅಲ್ಲಿ ನಾವು ಕೈ ಹಾಕುವದು ತಪ್ಪಾಗುತ್ತದೆ ಎಂದು ಹಾರಿಕೆಯ ಉತ್ತರವನ್ನು ಕೊಟ್ಟು ತಮ್ಮವರನ್ನು ಲಿಬಿಯಾದಿಂದ ಸುರಕ್ಷಿತವಾಗಿ ಕರೆಸಿಕೊಂಡನು. ಆದರೆ ಒಬಾಮನಿಗೆ ತಮ್ಮ ರಾಯಭಾರಿಯನ್ನು ಕೊಂದುಹಾಕಿದ್ದರ ಬಗ್ಗೆ ಸಿಟ್ಟಿತ್ತು. ಹೀಗಾಗಿ ಅಮೆರಿಕಾ ತಟಸ್ಥವಾಗಿ ಉಳಿಯಿತು. ಅಮೆರಿಕಾನೇ ತಟಸ್ಥವಾದ ಮೇಲೆ ಉಳಿದ ರಾಷ್ಟ್ರಗಳು ಏನು ತಾನೆ ಮಾಡಬಲ್ಲವು? ಅವು ಕೂಡಾ ಅದನ್ನೇ ಹಿಂಬಾಲಿಸಿದವು.
ಇತ್ತ ಟ್ರಿಪೋಲಿ ಮತ್ತು ಬೆಂಗಾಜಿಗಳು ಬಂಡುಕೋರರ ಕೈಗೆ ಸಿಕ್ಕು ನಲುಗುತ್ತಿದ್ದರೆ ಅತ್ತ ಸರಕಾರ ಇವರನ್ನು ಬಗ್ಗು ಬಡಿಯಲು ಹರಸಾಹಸ ಪಡುತ್ತಿತ್ತು. ಏಕೆಂದರೆ ಸರಕಾರದ ಮಿಲ್ಟ್ರಿಪಡೆಯ ಸಂಖ್ಯೆಗಿಂತ ಬಂಡುಕೋರರ ಸಂಖ್ಯೆಯು ಎರಡರಷ್ಟಿತ್ತು. ಹಾಗೆ ಮಿಲ್ತ್ರಿಪಡೆಯ ಸಂಖ್ಯೆ ಕಡಿಮೆಯಾಗಲು ಇನ್ನೊಂದು ಕಾರಣವೂ ಇತ್ತು. ಅದೇನೆಂದರೆ ಆಗಿನ ಹಂಗಾಮಿ ಸರಕಾರ ಗಡಾಫಿ ಆಡಳಿತದಲ್ಲಿ ನೇಮಕಗೊಂಡ ಅರ್ಧದಷ್ಟು ಸೈನಿಕರು ಮತ್ತು ಪೋಲಿಸ್ರ ಮೇಲೆ ಅನುಮಾನಪಟ್ಟು ನಮಗೆ ನಿಮ್ಮ ಮೇಲೆ ವಿಶ್ವಾಸವಿಲ್ಲ, ನೀವಿನ್ನೂ ಕೆಲಸಕ್ಕೆ ಬರುವದು ಬೇಕಾಗಿಲ್ಲ ಎಂದು ಹೇಳಿ ಅವರಿಗೆ ತಿಂಗಳು ತಿಂಗಳು ಸಂಬಳ ಕೊಟ್ಟು ಮನೆಯಲ್ಲಿ ಕೂರಿಸಿದರು. ಇವರು ಕೂಡಾ ಖುಷಿಯಿಂದಲೇ ಹೊರಬಂದು ಈ ಸಂಬಳದೊಂದಿಗೆ ಬೇರೆ ಕೆಲಸ ಮಾಡುತ್ತಾ ಇನ್ನೊಂದಿಷ್ಟು ಸಂಪಾದಿಸತೊಡಗಿದರು. ಆದರೆ ಸರಕಾರ ಇವರನ್ನು ಕೆಲಸದಿಂದ ತೆಗೆದ ಮೇಲೆ ತಕ್ಷಣ ಹೊಸಬರನ್ನು ನೇಮಕ ಮಾಡಿಕೊಳ್ಳದೆ ದೊಡ್ದ ತಪ್ಪು ಮಾಡಿತು. ಜೊತೆಗೆ ಬಂಡುಕೋರರ ಕೈಗೆ ಒಳಗೊಳಗೆ ಅತ್ಯಾಧುನಿಕ ಶಸ್ತ್ರಗಳು ಮಿಸ್ರತಾ ಬಂದರಿನ ಮೂಲಕ ಟುರ್ಕಿ, ಖತಾರ್, ಸುಡಾನ್, ದುಬೈಗಳಿಂದ ಬರುತ್ತಿರುವದು ಇವರ ಗಮನಕ್ಕೆ ಬಾರದೆ ಹೊಯಿತು.
ಇದೀಗ ರಾಜಧಾನಿ ಟ್ರಿಪೋಲಿಯು ಸೇರಿದಂತೆ ಬಹಳಷ್ಟು ಪ್ರದೇಶಗಳನ್ನು ಮಿಸ್ರತಾದವರು ಆಕ್ರಮಿಸಿಕೊಂಡು ತಮ್ಮದೇ ಸರಕಾರವನ್ನು ಸ್ಥಾಪಿಸಿಕೊಂಡಿದ್ದಾರೆ. ಹಾಗಾಗಿ ಇಲ್ಲೀಗ ಎರಡು ಸರಕಾರಗಳಿವೆ. ಮೊದಲನೆಯದು ಜನರಿಂದ ಚುನಾಯಿತವಾದ ಸರಕಾರ. ಎರಡನೆಯದು ಮಿಸ್ರತಾ (ಇಸ್ಲಾಂ ಮೂಲಭೂತವಾದಿಗಳ) ಸರಕಾರ. ಈ ಎರಡು ಸರಕಾರಗಳ ನಡುವಿನ ತಿಕ್ಕಾಟ ಮುಂದುವರಿದಿದೆ. ಇದನ್ನೆಲ್ಲಾ ನೋಡುತ್ತಿರುವ ಇಲ್ಲಿಯ ಜನ ಈ ದೇಶ ಒಡೆದು ಎರಡು (ಪೂರ್ವ ಲಿಬಿಯಾ ಮತ್ತು ಪಶ್ಚಿಮ ಲಿಬಿಯಾ) ಹೋಳಾಗಬಹುದು ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿಯ ಬಹಳಷ್ಟು ಜನರ ಬೆಂಬಲ ಚುನಾಯಿತ ಸರಕಾರಕ್ಕೇ ಇದೆ. ಅಂತೆಯೇ ಅಮೆರಿಕಾ, ಯೂರೋಪ್, ಯುನೈಟೆಡ್ ಕಿಂಗಡಮ್, ಈಜಿಪ್ಟ್ ಇನ್ನೂ ಮುಂತಾದ ದೇಶಗಳು ಸಹ ಚುನಾಯಿತ ಸರಕಾರದ ಜೊತೆಯಲ್ಲಿವೆ. ಈ ನಡುವೆ ಲಿಬಿಯಾದ ಉಚ್ಛ ನ್ಯಾಯಾಲಯವು ಈ ಎರಡು ಸರಕಾರಗಳಲ್ಲಿ ಮಿಸ್ರತಾ ಸರಕಾರವೇ ದೇಶವನ್ನು ಚನ್ನಾಗಿ ಮುನ್ನಡೆಸಬಲ್ಲದು ಎಂಬ ತೀರ್ಮಾನವನ್ನಿತ್ತಿದೆ. ಆದರೆ ಈ ತೀರ್ಪು ಸಮ್ಮತವಾದ ತೀರ್ಪಲ್ಲ ಎಂದು ಚುನಾಯಿತ ಸರಕಾರ ಅಲ್ಲಗಳೆದಿದೆ. ಇಲ್ಲಿಯ ಜನರು ಕೂಡಾ ಮಿಸ್ರತಾದವರು ನ್ಯಾಯಾಧೀಶರಿಗೆ ಹಣ ಮತ್ತು ಬೆದರಿಕೆಯನ್ನೊಡ್ಡಿ ತೀರ್ಪು ತಮ್ಮ ಕಡೆ ಆಗುವಂತೆ ನೋಡಿಕೊಂಡಿದ್ದಾರೆ ಎಂದು ಹೇಳುತ್ತಾರೆ.
ಇವತ್ತಿನ ಲಿಬಿಯಾದ ರಾಜಕೀಯ ಬಿಕ್ಕಟ್ಟನ್ನು ನೋಡುತ್ತಿದ್ದರೆ ಈ ಸಮಸ್ಯೆಗೆ ಶೀಘ್ರದಲ್ಲಿಯೇ ಪರಿಹಾರ ಸಿಗುವಂತೆ ಕಾಣುತ್ತಿಲ್ಲ. ಒಂದೋ ಯಾರಾದರೊಬ್ಬರು ಗಡಾಫಿಯಂಥವರು ತುರ್ತಾಗಿ ಈ ದೇಶಕ್ಕೆ ಬೇಕಿದೆ. ಇಲ್ಲವೇ ಪ್ರಜಾಪ್ರಭುತ್ವದ ಬೆಲೆಯನ್ನು ಅರಿತುಕೊಂಡು ಪ್ರಜಾರಾಜ್ಯ ಸ್ಥಾಪನೆಯಾಗಲು ಎಲ್ಲ ಜನರು ಸಹಕಾರ ನೀಡಬೇಕಿದೆ. ಸಧ್ಯದ ಪರಿಸ್ಥಿತಿಯಲ್ಲಿ ಇವೆರೆಡೂ ಆಗುವದು ಕಷ್ಟದ ಕೆಲಸವೇ ಸರಿ. ಇಲ್ಲವಾದಲ್ಲಿ ಗಡಾಫಿಯನ್ನು ಕಿತ್ತೊಗೆಯಲು ಸಹಾಯ ಮಾಡಿದ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಮಧ್ಯ ಪ್ರವೇಶಿಸಿ ಇಲ್ಲೊಂದು ಸ್ಥಿರ ಸರಕಾರವನ್ನು ಸ್ಥಾಪಿಸುವ ಹೊಣೆಯನ್ನು ಹೊರಬೇಕಿದೆ.
ಹಾಗಾದರೆ ಲಿಬಿಯಾದಲ್ಲಿ ಮುಂದೇನಾಗುತ್ತದೆ? ಇಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದಾ? ಅಥವಾ ಮತ್ತೆ ಏಕಚಕ್ರಾಧಿಪತ್ಯ ಸ್ಥಾಪನೆಯಾಗುತ್ತದಾ? ಸಧ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಈಗಲೇ ಏನನ್ನೂ ಹೇಳಲು ಬರುವದಿಲ್ಲ. ಅಸಲಿಗೆ ಲಿಬಿಯನ್ರಿಗೇ ಒಳಗೆ ಏನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗುತ್ತಿಲ್ಲ. ಎಲ್ಲವನ್ನೂ ಕಾದು ನೋಡಬೇಕಿದೆ.







I think this is the problem with all middle eastern countries.. Too many divisions and tribes within themselves and they fight amongst each other all the time. So only dictatorship is solution.
Yes Krishna sir, you are right.
Complete package, awesome writing and information. Thank you sir 🙂