ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಪುಟದಲ್ಲಿತ್ತು ಎದೆಯುರಿ!

chetana5.jpg 

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ 

ಜಿರಳೆ ಮೊಟ್ಟೆ ಅಂಟಿಕೂತ ಡೈರಿಗಳ  ದೂಳು ಕೊಡವಿದಾಗ ಹಳೆ ನೆನಪುಗಳು ಉದುರಿಬಿದ್ದವು. ಜೊತೆಗೇ ಕೋಪ, ತಾತ್ಸಾರ, ಹೇವರಿಕೆ…
ನೋವು ಯಾಕೆ?

ಅದೊಂದು ಪುಟದಲ್ಲಿ ಬರೆದಿಟ್ಟ ಎದೆಯುರಿ ಹಾಗೇ ಇತ್ತು.
ಕಣ್ಣೀರಿಗೆ ಕಲಸಿಹೋದ ಇಂಕು, ತಿಕ್ಕಿ ಸವೆದ ಹಾಳೆ, ಹದಿನೆಂಟರ ಹುಡುಗುತನದಲ್ಲಿ ಅಂವನ್ನ ‘ಪಿಶಾಚಿ’ಯಾಗಿಸಿ ಬರೆದ ಕೋರೆಹಲ್ಲಿನ ಚಿತ್ರ… ನುಗ್ಗಿ ಬಂತು ನೆನಪು,
ರೂಮಿನ ತುಂಬ ಚೆಲ್ಲಾಪಿಲ್ಲಿ ಟೆಡ್ಡೀಬೇರುಗಳು. ಒಂದು, ಎರಡು, ಮೂರು…!

ಮದುವೆಯಾಗಿ ತಿಂಗಳು ಕಳೆದಿರಲಿಲ್ಲ. ರಾತ್ರಿ ಹನ್ನೆರಡು ಮೀರಿದರೂ ಅಂವ ಬಂದಿರಲಿಲ್ಲ. ನಡುವಿನೆರಡು ಹಾಳೆ ತುಂಬ, ಅಂವ ಸೇಫಾಗಿ ಮನೆಮುಟ್ಟಲಿ ಅಂತ “ಓಂ ಶ್ರೀ ಜಗನ್ಮಾತರೈ….” ಬರೆದಿದ್ದೆ ನಾನು!
ಹ್ಹ್! ಅದೆಂಥ ಹುಚ್ಚು? “ನೀ ನನ್ನ ಹುಚ್ಚು, ಹಗಲು, ರಾತ್ರಿ, ನಿದ್ರೆ, ಎಚ್ಚರ, ಎಲ್ಲವೂ!” ಅಣಕಿಸುತ್ತಿವೆ ಸಾಲುಗಳು.
ನಡುರಾತ್ರಿ ಮೀರುವ ಹೊತ್ತಿಗೆ ಕಣ್ಣು ಕೆಂಡದುಂಡೆ. ಅತ್ತತ್ತು ನನ್ನದು, ಕುಡಿಕುಡಿದು ಅವನದು!

*

ಇಲ್ಲಿ ಹೀಗಿದೆ, ಯುವಜನ ಮೇಳಕ್ಕೆ ಹೋಗಿದ್ದವನ ಸಂಗತಿ. ಅಲ್ಲಿಂದಲ್ಲೇ ಎರಡು ದಿನ ಇಲ್ಲವಾಗಿದ್ದವನ, ಎಲ್ಲಿದ್ದೆ ಅನ್ನೋದನ್ನ ಈವರೆಗೂ ಹೇಳದವನ ಸಂಗತಿ. ಹಾಗೆ ಅಂವ ಫೋನಿಗೂ ಸಿಗದೆ ದಿನಗಟ್ಟಲೆ ಮಾಯವಾಗಿದ್ದಾಗ ನನ್ನಪ್ಪ ಅಮ್ಮ, ಪಾಪ! ಸೋಡಾಭಟ್ಟರಿಗೆ ಅಂಜನ ಹಾಕಿಸಿ ಅಂವನ್ನ ಪತ್ತೆ ಮಾಡಿಸಹೊರಟಿದ್ದರು.
ಮನೆಗೆ ಬಂದವ,”ಸಿಕ್ಕಾಪಟ್ಟೆ ಜ್ವರ ಬಂದು ಮಲಗಿಬಿಟ್ಟಿದ್ದೆ ಅಲ್ಲೇ” ಅಂದ. ನಾನು,’ಅಯ್ಯೋ’ ಅಂದು ಸಂಕಟಪಡುತ್ತ ‘ಅಮೃತಾರಿಷ್ಟ’ ಕುಡಿಸಿದ್ದೆ.

*

ಅಲ್ಲೊಂದು ದಿನದ ಮುಂದೆ ಭೀಮನ ಅಮವಾಸ್ಯೆ ಅಂತಿದೆ. ಹೌದು. ಅಣ್ಣ ಬಂದಿದ್ದ. ಭಾವನ ಜೀವನ ಸುಖವಾಗಿರಲಿ ಅಂತ ಹೊಸಿಲಲ್ಲಿ ಕುಂತು ಭಂಡಾರ ಒಡೀತಿದ್ದ. ಅದು, ಮದುವೆಯಾದ ಮೂರನೇ ವರ್ಷದ ಪೂಜೆ. ಅವತ್ತಿನ ನಿಮಿಷ ನಿಮಿಷ ನೆನಪಿದೆ ನನಗೆ.
ಅಂವನ್ನ ಕೂರಿಸಿ ಕಡಲಾರತಿ ಎತ್ತುವ ಹೊತ್ತಿಗೆ,
ಬಾಗಿಲಲ್ಲಿ ಪೋಲಿಸರು!
ಪುಣ್ಯಾತ್ಮ! ಯಾರದೋ ತಲೆಯೊಡೆದು ಸಿಕ್ಕಿಬಿದ್ದಿದ್ದ!!
ಇಲ್ಲ… ನೀವಂದುಕೊಂಡಿದ್ದು ಸುಳ್ಳು. ಅಂವನ್ನ ಅವರೇನೂ ಕೈಕೋಳ ಹಾಕಿ ಮೆರವಣಿಗೆ ಮಾಡಲಿಲ್ಲ. ಇಂವ ಅದೇನೋ ಪಿಸಿಪಿಸಿ ಮಾಡುತ್ತ ಪೋಲಿಸರನ್ನ ಕರಕೊಂಡು ಒಳನಡೆದ. ಅವರು ಆಚೆ ಹೋಗುತ್ತಲೇ ಷರಟೇರಿಸಿ ಕಾರುಹೊರಡಿಸಿ ಹೊಂಟುಬಿಟ್ಟ.
ಎಲ್ಲಿಗೆ?
ಗೊತ್ತಿಲ್ಲ!
ಈ ಸಾರ್ತಿ ಅಪ್ಪ ಅಮ್ಮ ಯಾರಿಗೂ ಅಂಜನ ಹಾಕಿಸುವ ಉಸಾಬರಿಗೆ ಹೋಗಲಿಲ್ಲ. ಆದರೆ ಅಣ್ಣ ಮಾತ್ರ, “ಮದುವೆ ಗೊತ್ತುಮಾಡುವ  ಮುಂಚೆ ನನ್ನ ಕೇಳಬೇಕಿತ್ತು ನೀವು” ಅಂತ ಕೂಗಾಡಿ ಉಪ್ಪು ಸುರಿದ.

*

ಅದು ನಾನು ಹಾಳೆ ತೋಯಿಸಿದ ಕೊನೆಯ ಹುಟ್ಟುಹಬ್ಬ.
ಅವತ್ತು ಕಾಣೆಯಾದವ ಸುಮಾರು ನಾಲ್ಕು ವರ್ಷ ಕಳೆದು ಮನೆಗೆ ಹೋಗಿದ್ದ. ಹೌದು. ಅಲ್ಲಿ ನಾನಿರಲಿಲ್ಲ.
ಅಂವ ಹೋದ ವರ್ಷಕ್ಕೆಲ್ಲ ಅಲ್ಲಿನ ಹಿಂಸೆ ತಾಳಲಾರದೆ ಮನೆಬಿಟ್ಟು ಬಂದುಬಿಟ್ಟಿದ್ದೆ.
ಅತ್ತೆ ಮಾವ ಫೋನ್ ಮಾಡಿ “ಬಾ” ಅಂತ ಕರೆದಿದ್ದರು. ನಾದಿನಿ ನುಲಿಯುತ್ತ, “ದೇವರೇ ಹುಟ್ಟುಹಬ್ಬದ ಉಡುಗೊರೆ ಕಳಿಸಿದಾನೆ ಬಾರೇ” ಅಂದಿದ್ದಳು.
ಓ! ಅದೊಂದು ಮಹಾಭಾರತ. ಅದನ್ನೆಲ್ಲ ಇಲ್ಲಿ ಬರೆದಿಟ್ಟಿಲ್ಲ ನಾನು.

*

ಇಗೋ! ಬಾಗಿಲು ಬಡಿಯುವ ಸದ್ದು! ಹೀಗೆ ಒನಕೆ ಕುಟ್ಟಿದಹಾಗೆ ಕುಟ್ಟೋದು ಇಂವ ಮಾತ್ರ.
ಸರಸರನೆ ಕಣ್ಣೊರೆಸಿಕೊಳ್ಳುತ್ತ ಜೀವನ ತೂಕಕ್ಕೆ ಹಾಕಿದೆ. ಆಗ ಕಳಕೊಂಡಿದ್ದಕ್ಕಿಂತ ಈಗ ಪಡಕೊಂಡಿದ್ದೇ ಹೆಚ್ಚಾಗಿತ್ತು!
ಬಾಗಿಲು ತೆಗೆಯುತ್ತ, “ಡೈರಿಯನ್ನ ಗಾರ್ಬೇಜಿಗೆ ಹಾಕಬೇಕು” ಅಂದುಕೊಂಡೆ.
ಒಳಬಂದವನ ಮೆಲುನಗು, “ಬಿಸಾಡು ಆ ಹಳೆಯ ನೋವುಗಳನ್ನೂ” ಅಂದಿತು.

‍ಲೇಖಕರು avadhi

25 February, 2008

1 Comment

  1. ನಾ.ಸೋಮೇಶ್ವರ

    “ಸರಸರನೆ ಕಣ್ಣೊರೆಸಿಕೊಳ್ಳುತ್ತ ಜೀವನ ತೂಕಕ್ಕೆ ಹಾಕಿದೆ. ಆಗ ಕಳಕೊಂಡಿದ್ದಕ್ಕಿಂತ ಈಗ ಪಡಕೊಂಡಿದ್ದೇ ಹೆಚ್ಚಾಗಿತ್ತು!“

    “ಬಿಸಾಡು ಆ ಹಳೆಯ ನೋವುಗಳನ್ನೂ” ಅಂದಿತು.

    ಜೀವನವನ್ನು ತೂಕಕ್ಕೆ ಹಾಕಿ, ಸತ್ಯವನ್ನು ಕಂಡುಕೊಂಡ ಆಕೆಯ ಧೈರ್ಯವನ್ನು ಮೆಚ್ಚಬೇಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading