ಇಲಕಲ್ಲಿನ ಪೂಜ್ಯ ಮಹಾಂತ ಅಪ್ಪಗಳು ಇನ್ನಿಲ್ಲ.
ಅವರು ತಮ್ಮ ಮಿತಿಯೊಳಗೆ ಮಾಡಿದ ಬದಲಾವಣೆಗಳು ಅನೇಕ
ಜಗದ ದುಶ್ಚಟಗಳನ್ನು ಗುಡಿಸಿಹಾಕಬೇಕು ಎಂಬ ಕನಸ ಕಂಡಿದ್ದವರು ಅವರು.
ಹಾಗಾಗಿಯೇ ‘ಮಹಾಂತ ಜೋಳಿಗೆ’ಯನ್ನು ರೂಪಿಸಿದ್ದರು
ಈ ಜೋಳಿಗೆಯನ್ನು ಅವರು, ಅವರ ಶಿಷ್ಯ ವೃಂದ ಮುಂದೆ ಒಡ್ಡಿದರೆ ದುಶ್ಚಟಗಳನ್ನು ಜನರು ಅದರಲ್ಲಿ ಸುರಿಯುತ್ತಿದ್ದರು
ಅವರು ಇಲ್ಲವಾದ ಈ ಹೊತ್ತಲ್ಲಿ ‘ಪ್ರಜಾವಾಣಿ’ಯಲ್ಲಿ ೧೮ ವರ್ಷಗಳ ಹಿಂದೆ ಇಳಕಲ್ ಸ್ವಾಮಿಗಳ ಆಂದೋಲದ ಬಗ್ಗೆ ಬರೆದ ಲೇಖನವನ್ನು ಪ್ರಕಟಿಸುತ್ತಿದ್ದೇವೆ
ಜೊತೆಗೆ ಸ್ವಾಮಿಗಳನ್ನು ಹತ್ತಿರದಿಂದ ಕಂಡ ಅವರ ಪ್ರಯೋಗದ ಜೊತೆ ಕೈಗೂಡಿಸಿದ್ದ ಸಿದ್ದು ಯಾಪಲಪರವಿ ಅವರೂ ತಮ್ಮ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ

ಜಗದ ದುಶ್ಚಟಗಳನ್ನು ಗುಡಿಸಿ ಮುಂದೆ ನಡೆದ ‘ಮಹಾಂತ ಜೋಳಿಗೆ’
ಜಿ ಎನ್ ಮೋಹನ್
ಕಲ್ಬುರ್ಗಿಯ ಬೀದಿಗಳಲ್ಲಿ ಅಂದು ವಿಶೇಷ ಸಂಭ್ರಮ. ತಳಿರು ತೋರಣಗಳು, ಮನೆಯ ಮುಂದೆ ಚಿತ್ತಾರದ ರಂಗೋಲಿ, ಮುಖದಲ್ಲಿ ಮುಗುಳ್ನಗು, ಅವರು ಕಾಯುತ್ತಲೇ ಇದ್ದರು.
ಈಗ ಬರುತ್ತದೆ ಆಗ ಬರುತ್ತದೆ ಇನ್ನೇನು ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದುದು ಜೋಳಿಗೆಯನ್ನು.
ಶಿವಶರಣರ ಹೆಗಲೇರಿ ಬರುವ ಕಾವಿಯ ಜೋಳಿಗೆಯತ್ತಲೇ ಆ ದಿನ ಎಲ್ಲರ, ಗಮನ. ‘ಕೂಡಲ ಸಂಗನ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ..’ ಎನ್ನುವ ಭಕ್ತಾದಿಗಳು ಅಂದು ಶರಣರಿಗೆ ಮಾತ್ರವಲ್ಲ ಶರಣರ ಜೋಳಿಗೆಗೂ ಕಾಯುತ್ತಿದ್ದರು.
ಆ ಜೋಳಿಗೆ ಮನೆ ಮನೆಯ ಮುಂದೆ ಹೋಯಿತು. ಕೊಳೆಗೇರಿಗಳನ್ನು ಪ್ರವೇಶಿಸಿತು. ದುಡಿದು ಹಣ್ಣಾದ ಕಾರ್ಮಿಕರ ಗಂಜ್ ಪ್ರದೇಶಕ್ಕೆ ಹೋಯಿತು, ಊರ ಮಧ್ಯೆ ಇರುವ ಸುಲಫಲಮಠವನ್ನು ಪ್ರವೇಶಿಸಿತು.
ಹೊರವಲಯದಲ್ಲಿರುವ ರೇವಣಸಿದ್ದೇಶ್ವರ ನಗರ ಹೊಕ್ಕು ಬಂದಿತು. ಶಹಾಬಜಾರದಲ್ಲಿ ಸುತ್ತೇ ಸುತ್ತಿತು. ಈ ಜೋಳಿಗೆಗೆ ದಣಿವು ಎಂಬುದೇ ಇಲ್ಲ. ದಶಕಗಳಿಗೂ ಹೆಚ್ಚು ಕಾಲದಿಂದ ಹೀಗೆ ಸುತ್ತುತ್ತಲೇ ಇದೆ. ಪ್ರತಿಯೊಬ್ಬರ ಮುಂದೆ ನಿಂತು ಅದು ಕೇಳುತ್ತದೆ ನಿಮ್ಮೊಡಲಲ್ಲಿರುವ ದುರ್ಗುಣಗಳನ್ನು ದಾನ ಮಾಡಿ.
ಕಲ್ಬುರ್ಗಿಯ ಬೀದಿ ಬೀದಿಗಳಲ್ಲಿ ಈ ಜೋಳಿಗೆ ಸಂಚಾರ ಹೊರಡುತ್ತದೆ ಎಂಬ ಸುದ್ದಿ ಗೊತ್ತಾಗಿದ್ದೇ ತಡ ಜೋಳಿಗೆ ಜನರ ಮುಂದೆ ನಿಲ್ಲುವುದಕ್ಕೆ ಮುನ್ನವೇ ಜನರು ಜೋಳಿಗೆಯತ್ತ ಬಂದರು. ‘ಇಳೆ ನಿಮ್ಮದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ…’ ಎಂದು ಸ್ವೀಕರಿಸಿದ್ದ ಭಕ್ತರೇ ಈಗ ದಾನ ಮಾಡುವ ಕಾಲ,
ಮಟ್ಕಾ ಚಟ, ಗುಟ್ಕಾ ಚೀಟಿ, ಸಿಗರೇಟಿನ ಪ್ಯಾಕೆಟ್ ಗಳು, ಬೀಡಿಯ ತುಂಡುಗಳು, ಸಾರಾಯಿ ಬಾಟಲಿಗಳು, ಜೋಳಿಗೆಯೊಳಗೆ ಒಂದೊಂದೇ ದುರ್ಗುಣಗಳು ಬಂದು ಸೇರತೊಡಗಿದವು. ಜೋಳಿಗೆ ಬಿರಿಯುತ್ತಾ ಹೋಯಿತು.
ಇಳಕಲ್ ನ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಮಹಾಂತ ಶಿವಯೋಗಿಗಳ ವಿಶೇಷ ಜೋಳಿಗೆ ಇದು.
ಸಮಾಜದ ದುರ್ಗುಣಗಳನ್ನು ಈ ಜೋಳಿಗೆಯಲ್ಲಿ ಹಾಕಿ ಎಂದು ಶಿವಯೋಗಿಗಳು ಕೋರಿದ್ದೇ ತಡ ‘ದಿನಮಪಿ ರಜನಿ ಸಾಯಂ ಪ್ರಾತಃ…’ ಮಹಾಂತ ಜೋಳಿಗೆಯೊಳಗೆ ದುರ್ಗುಣಗಳು ಸೇರುತ್ತಲೇ ಇವೆ.
ಸಮಾಜದೊಳಗಿನ ದುರ್ಗುಣ ದುಶ್ಚಟಗಳನ್ನು ನಿವಾರಿಸಿ ನೆಮ್ಮದಿಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಹಾಂತ ಶಿವಯೋಗಿಗಳು ಕಟ್ಟಿದ ಕನಸು ಇದು. ಮಹಾಂತ ಜೋಳಿಗೆ ಒಂದು ರೀತಿಯಲ್ಲಿ ಸಮಾಜದ ಶುದ್ಧೀಕರಣ ನಡೆಸಿದೆ.
‘ದಾಸನಂತೆ ತವನಿಧಿಯ ಬೇಡುವವನಲ್ಲ, ಚೋಳನಂತೆ ಹೊನ್ನ ಮಳೆಯ ಕರಸೆಂಬುವವನಲ್ಲ…’ ಬಸವಣ್ಣನವರ ವಚನದಂತೆ ಶಿವಯೋಗಿಗಳು ಬೇಡುವುದು ದುಶ್ಚಟಗಳನ್ನು ಎಂಬುದು ಈಗ ಇಡೀ ರಾಜ್ಯದಲ್ಲಿ ಜೋಳಿಗೆ ತಮ್ಮ ಚಟಗಳನ್ನು ಅರ್ಪಿಸುವ ಎಲ್ಲರಿಗೂ ಗೊತ್ತಿರುವ ಸಂಗತಿ.
ಈ ಜೋಳಿಗೆ ಕಲ್ಬುರ್ಗಿಯಲ್ಲಿ ದಿನದಿನವೂ ಗಂಟೆಗಟ್ಟಲೆ ಅಲೆಯುತ್ತಿತ್ತು. ಒಬ್ಬಿಬ್ಬರಲ್ಲ ಜೋಳಿಗೆ ಹಿಡಿದ ಹಿರಿಯ ಸ್ವಾಮಿಗಳ ಹಿಂದೆ ನೂರಾರು ಯುವಜನರ ದಂಡು. ದಾನ, ದಾಸೋಹವನ್ನು ಉಸಿರಾಗಿಸಿಕೊಂಡು ಬೆಳೆದ ಪರಂಪರೆಯಲ್ಲಿ ಈಗ ಕೇಳುತ್ತಿದ್ದುದು ದುಶ್ಚಟಗಳನ್ನು ನೀಡು ಎಂದೇ..’
ಹತ್ತು ವರ್ಷಗಳ ನಂತರ ಕಲ್ಬುರ್ಗಿಯಲ್ಲಿ ಶಿವಾನುಭವದ ತರಬೇತಿಯನ್ನು ಜಿಲ್ಲಾ ವೀರಶೈವ ಸಮಾಜ, ಬಸವ ಕೇಂದ್ರ, ಬಸವತತ್ವ ಪ್ರಸಾರ ಸಂಸ್ಥೆ, ಬಸವ ಮಂಟಪ, ವಚನೋತ್ಸವ ಮಹಾಪರಿಷತ್ ಒಗ್ಗೂಡಿ ನಡೆಸಿದಾಗ ಜೋಳಿಗೆಯ ಸಂಚಾರ ಆರಂಭವಾಯಿತು. ಬೆಳಗಾಗಿ ಎದ್ದು ವಚನಗಳ ಚಿಂತನೆ ನಡೆಸಿ ವಚನ ಜ್ಯೋತಿಯ ಬೆಳಗಿದ ನಂತರ ಇಷ್ಟಲಿಂಗ ಪೂಜೆಯ ಪ್ರಾಯೋಗಿಕ ಪಾಠ ಆರಂಭ. ನಂತರ ಶಿವಾನುಭವದ ಪಾಠ, ನಂತರ ಮಹಾಂತ ಜೋಳಿಗೆಯ ಸಂಚಾರ.
ಮಹಾಂತ ಜೋಳಿಗೆ ಬಂದಾಗ ಗುಟ್ಕಾ ಚಟ ಇದ್ದವರು ಆ ಚೀಟಿಗಳನ್ನೇ ಜೋಳಿಗೆಗೆ ಹಾಕಿದರು, ಮಟ್ಕಾ ಚಟ ಇದ್ದವರು ಚೀಟಿ ಹಾಕಿದರು. ಆದರೆ ವರದಕ್ಷಿಣೆ ಕೀಳುವ ಚಟ ಇದ್ದವರು ಕಣ್ಣೀರಿಟ್ಟರು. ತಾವು ದುಡ್ಡಿಗಾಗಿ ಪಶುಗಳಾಗಿದ್ದನ್ನು ಬಣ್ಣಿಸಿ ಪ್ರತಿಜ್ಞೆ ಮಾಡಿದರು.
ಇದೊಂದು ವಿಶೇಷ ಅನುಭವ ಎಂದು ಬಣ್ಣಿಸುತ್ತಾರೆ ಶಿಬಿರದ ಸಂಘಟನಾ ಕಾರ್ಯದರ್ಶಿಗಳಾದ ರವೀಂದ್ರ ಶಾಬಾದಿ. ಕಾರ್ಯದರ್ಶಿ ವೀರಣ್ಣಾ ಕಡಗುಂಚಿ ಅವರು ಇದು ಜನರಿಗೆ ಹೊಸ ಪಾಠ. ಅದರಲ್ಲಿಯೂ ವೇಗದಲ್ಲಿ ಹೊಸ ಶತಮಾನಕ್ಕೆ ನುಗ್ಗುತ್ತಿರುವ ಯುವ ಪೀಳಿಗೆ ಈ ಜೋಳಿಗೆಯ ಸಂಚಾರದಿಂದ ಹೊಸ ನೋಟ ಪಡೆದಿದೆ ಎನ್ನುತ್ತಾರೆ.
ಕೊಲ್ಲೆನಯ್ಯಾ ಪ್ರಾಣಿಗಳಿಗೆ/ ಮೆಲ್ಲೆನಯ್ಯಾ ಬಾಯಿಚ್ಚೆಗೆ/ ಒಲ್ಲೆನಯ್ಯ ಪರಸತಿಯರ ಸಂಗವ/ ಬಲ್ಲೆನಯ್ಯ ಮುಂದೆ ತೊಡಕುಂಟೆಂಬುದ/ ಬಳ್ಳದಾ ಬಾಯಂತೆ ಒಂದೆ ಮನ ಮಾಡಿ/ ನಿಲ್ಲೆಂದು ನಿಲಿಸಯ್ಯ ಕೂಡಲ ಸಂಗಮದೇವ.. ಎಂಬಂತೆ ಬಳ್ಳದ ಬಾಯಂತೆ ಒಂದೆ ಮನ ಮಾಡಿದವರು ಮಹಾಂತ ಜೋಳಿಗೆಯ ಒಡಲಿಗೆ ಇನ್ನಷ್ಟು ಮತ್ತಷ್ಟು ದುರ್ಗುಣ, ದುಶ್ಚಟಗಳನ್ನು ಸುರಿದೇ ಸುರಿದರು. ಜಗದ ಜಲಗಾರನಂತೆ ಜೋಳಿಗೆ ಮುಂದೆ ನಡೆಯಿತು…. ಮತ್ತೊಂದು ಊರಿಗೆ.
13 ನವೆಂಬರ್ 1999 / ಕರ್ನಾಟಕ ದರ್ಶನ / ಪ್ರಜಾವಾಣಿ
ಬಸವಪ್ರಜ್ಞೆ-ಜೋಳಿಗೆಯ ಹರಿಕಾರ: ಮಹಾಂತ ಅಪ್ಪಗಳು
ಸಿದ್ದು ಯಾಪಲಪರವಿ
ಇಲಕಲ್ಲಿನ ಪೂಜ್ಯ ಮಹಾಂತ ಅಪ್ಪಗಳು ದೈಹಿಕವಾಗಿ ದೂರವಾದರಷ್ಟೇ.
ಬಾಲ್ಯದಿಂದ ಮನದ ಮೇಲೆ ಮರೆಯಲಾಗದ ಪ್ರಭಾವಳಿ. ಬಸವಪ್ರಜ್ಞೆ ಬಿತ್ತಿ ಬೆಳೆಸಿ, ಭಾಷಣ ಮಾಡಲು ಕರೆದು ವೇದಿಕೆಯನೇರಿಸಿ ಹರಸಿದವರು.
ಮೊದಲ ಸಾರ್ವತ್ರಿಕ ಕಾರ್ಯಕ್ರಮ 90 ರ ದಶಕದಲಿ.
ಈಗ ಸಾವಿರದ ಗಡಿ. ನನ್ನ ವಚನ ಚಳುವಳಿಯ ಮಾತು ಮಂಥನ ಚಿಂತನೆಗೆ.
ಪೂಜ್ಯರದು ಮುಖವಾಡವಿಲ್ಲದ ಬಸವ ನಿಷ್ಟೆ. ಅಂಜದ ಅಳುಕದ ಚೇತನ.
ಉತ್ತರಾಧಿಕಾರಿ ವಿಷಯವಾಗಿ ತೆಗೆದುಕೊಂಡ ನಿರ್ಣಯ ಅವಿಸ್ಮರಣೀಯ.
ಪಂಪಿಗಳ ಕೆರಳಿಸಿದ ಮೊಟ್ಟ ಮೊದಲ ಘಟನೆ.
ಕಲ್ಲುಗಳ ತೂರಾಟದಂಥ ಹೀನ ಕೆಲಸ.
ಆಚಾರ-ವಿಚಾರಗಳಲಿ ಕಟ್ಟರ್ ನಿಲುವು. ಮಾತೂ ಹಾಗೆ.ಒಮ್ಮೊಮ್ಮೆ ನುಂಗಲಾಗದ ಬಿಸಿ ತುಪ್ಪ.
***
ನನ್ನ ಮದುವೆಯ ಘಟನೆ ನೆನಪಾಗುತ್ತದೆ.
ಸಂಪ್ರದಾಯವಾದಿಗಳು ಇಲಕಲ್ ಅಜ್ಜಾ ಅವರು ಬರುವದರೊಳಗೆ ಸುರಗಿ ಸುಡುಗಾಡು ಮಾಡಿ ತಮ್ಮ ಹಟ ತೀರಿಸಿಕೊಂಡರು.
ಅಜ್ಜಾ ಅವರು ಬಂದ ಮೇಲೆ ಎಂದಿನಂತೆ ಹೂ ಹಾಕಿ ಶರಣ ಪರಂಪರೆಯ ಕಲ್ಯಾಣದ ಸೋಗು.
ನಾನು ಅಸಹಾಯಕ. ಸಹಿಸಿಕೊಂಡೆ.
ಮದುವೆ ಮುಗಿದ ಒಂದೇ ವಾರದಲ್ಲಿ ಬಾಗಲಕೋಟೆಯ ಶಿರೂರಿನಲ್ಲಿ ಶಿವಾನುಭವ ತರಬೇತಿ ಶಿಬಿರ.
ನಾನು ಸಂಪನ್ಮೂಲ ವ್ಯಕ್ತಿ. ಒಳಗೊಳಗೆ ಇನ್ನಿಲ್ಲದ ಪಾಪಪ್ರಜ್ಞೆ.
*ಎನ್ನ ತಪ್ಪು ಅನಂತ ಕೋಟಿ ನಿಮ್ಮ ಸೈರಣೆಗೆ ಲೆಕ್ಕವಿಲ್ಲ* ಎನ್ನುತ್ತಲೇ ಮಾತನಾಡುತ್ತ ವಾರದ ಹಿಂದಿನ ನನ್ನ ಮದುವೆಯ ಅಪರಾಧ ಒಪ್ಪಿಕೊಂಡೆ.
*ಪೂಜ್ಯರ ಕಣ್ಣಾಲೆಯಲಿ ನೀರು*
‘ಕ್ಷಮಿಸಿದೆ ಮಗನೇ’ ಎಂಬಂತೆ.
ಅವರಿಗೂ ವಿಷಯ ಗೊತ್ತಿದ್ದರೂ ಹೇಳದೇ ಸಹಿಸಿಕೊಂಡು, ನಾನು ಒಪ್ಪಿಕೊಳ್ಳುತ್ತೀನೋ ಇಲ್ಲವೋ ಎಂಬ ಕುತೂಹಲ.
ಒಪ್ಪಿಕೊಂಡ ಕೂಡಲೇ ಭಾವುಕರಾದರು.
ನಿರಂತರ ಒಡನಾಟ. ಅನೇಕರು ನನ್ನ ಬಗ್ಗೆ ಪೂಜ್ಯರಿಗೆ ದೂರಿದರು.
*ನಾನು ಇಷ್ಟಲಿಂಗ ಪ್ರೇಮಿಯಲ್ಲ ಲಿಂಗ ಧಾರಣೆ,ಲಿಂಗ ಪೂಜಕನಲ್ಲ ಇತ್ಯಾದಿ ಇತ್ಯಾದಿ…*
ಹೌದು ಈಗಲೂ ಅಷ್ಟೇ ತೋರಿಕೆಯ ಬಸವ ನಿಲುವು ನನ್ನದಲ್ಲ.
ಅಪ್ಪಟ ಬಸವಪ್ರಜ್ಞೆ.
ಒಲವು, ನಿಲುವು, ಭಕ್ತಿ, ಭಾವ. ಎಲ್ಲದರಲ್ಲೂ.
ಅದಕೆ ಕಾರಣ ನೀವೇ. ನಿಮ್ಮ ಕ್ಷಮಾ ಗುಣ.*ತಾಯಿ ಪ್ರೀತಿ ಮರೆಯಲಾದೀತೇ?*
***
ನಾಲ್ಕಾರು ತಿಂಗಳ ಹಿಂದೆ ಅನಾರೋಗ್ಯದ ಸ್ಥಿತಿಯಲ್ಲೂ ಅದೇ ವಾತ್ಸಲ್ಯ ತೋರಿ ಹೆಸರು ಉಂಡಿ ತಿನಿಸಿದರು.
***
*ಗುರುಮಹಾಂತ ಅಪ್ಪಗಳ ಸೇವೆಯೂ ಅನನ್ಯ*
ಪೂಜ್ಯರನ್ನು ಮಗುವಿನಂತೆ ಜೋಪಾನ ಮಾಡಿದರು.
ಅವರ ಶ್ರದ್ಧೆ ಅನುಪಮ. ಅವಿಸ್ಮರಣೀಯ.
ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಧ್ಯವಾದಷ್ಟು ನಡೆಯುವ ಶಕ್ತಿ, ತಾಕತ್ತು ಉಳಿದರೆ ಸಾಕು.
ನಿಮ್ಮ ಆಶಿರ್ವಾದ ನಮ್ಮ ಮೇಲೆ ಇದ್ದೇ ಇದೆ. ಅದಕ್ಕೆ ಇನ್ನೂ ಜೀವಂತವಾಗಿದ್ದೇವೆ. ಇರುತ್ತೇವೆ ಕೂಡಾ.
ನೀವು ಅಷ್ಠೇ. ಈಗ ದೈಹಿಕ ನಿರ್ಗಮನ. ಮೌಲಿಕ ಚೈತನ್ಯವಾಗಿ ಸದಾ ನಮ್ಮ ಒಡಲೊಳಗೆ.
ಈಗಲೂ ನಾವು ಸ್ವಾರ್ಥಿಗಳು. ತಮ್ಮ ಕೃಪೆ ಸದಾ ನಮ್ಮ ಮೇಲಿರಲಿ ಎಂದೇ ಬೇಡುತ್ತೇವೆ.
*ಶರಣರಿಗೆ ಮರಣವೇ ಮಹಾನವಮಿ*
*ಭಕ್ತರಿಗೆ ನಿಮ್ಮ ನೆನಹೆ ಶಿವರಾತ್ರಿ*






0 Comments