ಸಂತೋಷ್ ಅನಂತಪುರ
**
ಕತೆಗಾರ ಸಂತೋಷ್ ಅನಂತಪುರ ಅವರ ಹೊಸ ಕಥಾ ಸಂಕಲನ ‘ತೃಷೆ’.
ಈ ಕೃತಿಯನ್ನು ‘ಅಂಕಿತ ಪುಸ್ತಕ’ ಪ್ರಕಟಿಸಿದೆ.
ಈ ಕೃತಿಯ ಬಿಡುಗಡೆ ಜುಲೈ 7 ರಂದು ಬೆಂಗಳೂರಿನಲ್ಲಿ ಜರುಗುತ್ತಿದೆ
ಈ ಕೃತಿಗೆ ಲೇಖಕರು ಬರೆದ ಮಾತುಗಳು ಇಲ್ಲಿವೆ.

**
ಮೊದಲ ಕಥಾಸಂಕಲನ ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ’ವನ್ನು ಸ್ವೀಕರಿಸಿ ಹರಸಿದ ಓದುಗ ಮಹಾಶಯರಿಗೆ ಶರಣು. ಇದೀಗ ನನ್ನ ಎರಡನೇ ಕಥಾಸಂಕಲನ ‘ತೃಷೆ’ಯನ್ನು ನಿಮ್ಮ ಕೈಗಳಲ್ಲಿರಿಸುತ್ತಿದ್ದೇನೆ. ತೀವ್ರವಾಗಿ ಬದುಕನ್ನು ಅನುಭವಿಸುವ ಜೀವಗಳ ದಾಹ ಹೇಳತೀರದ್ದು. ಎಂದಿಗೂ ಕಡಿಮೆಯಾಗದ ಅಂತಹ ದಾಹಗಳು ಸ್ಥಿತ್ಯಂತರಗೊಳ್ಳುತ್ತಲ್ಲಿರುತ್ತವೆ. ಇವು ಹಲವು ಬಗೆಯಲ್ಲಿ ನಮ್ಮ ಒಳ-ಹೊರಗನ್ನು ಸುಡುತ್ತಲೂ, ತಂಪೆರೆಯುತ್ತಲೂ ಇರುತ್ತವೆ. ಉರಿದೆಸೆಯುವ ಬದುಕಲ್ಲಿ ಹುಚ್ಚೆಬ್ಬಿಸಿ ಕುಣಿಸುವ ಆಸೆ, ದಾಹಗಳಿಗೇನೂ ಕಡಿಮೆಯಿಲ್ಲ. ಅದೆಷ್ಟೇ ಒತ್ತಡಗಳಿದ್ದರೂ, ನೋವು-ವೇದನೆಗಳು ಅಪ್ಪಿಕೊಂಡಿದ್ದರೂ ಇರುಳ ಸುಖವನ್ನು ಬಯಸದಿರುವ ಜೀವ ಇಲ್ಲದಿರಲು ಸಾಧ್ಯವಿಲ್ಲ. ಮತ್ತೆಮತ್ತೆ ಹಸಿರಿನತ್ತ, ಒಸರಿನತ್ತ ಉಸಿರನ್ನು ಹಿಡಿದುಕೊಂಡು ಜೀವವು ಚಲಿಸುತ್ತಲೇ ಇರುತ್ತದೆ.
ಹಾಗೊಮ್ಮೆ ಮನಸ್ಸು ಹೊರಳಿದ್ದೇ- ಬತ್ತದ, ತೀರದ ದಾಹಗಳ ನಿರಂತರ ಹುಡುಕಾಟದಲ್ಲಿರುವ ಹೃದಯಗಳು ಅರಳುತ್ತವೆ. ಬಹಳಷ್ಟನ್ನು ಬಾಳಲ್ಲಿ ಕಳೆದುಕೊಳ್ಳುತ್ತಾ ಬಂದರೂ, ಚಿಮ್ಮುತ್ತಲೇ ಇರುವ ಕಾಮನೆಗಳ ಅಂಚು ಸುಲಭದಲ್ಲಿ ಗೋಚರಿಸುವುದಿಲ್ಲ. ಮಗ್ಗುಲು ಬದಲಾದಂತೆ ವಾಂಛೆಗಳು ಹೆಚ್ಚುತ್ತಲೇ ಹೋಗಿ, ಬದುಕಿನ ಮೂಲ ದ್ರವ್ಯವಾದ ಕಾಮವು ಇನ್ನಿಲ್ಲದಂತೆ ಕಾಡುತ್ತಿರಲು; ಬೇಯುವ ಮನಸ್ಸಿನಾಟಕ್ಕೆ ಕೊನೆಯೇ ಇರುವುದಿಲ್ಲ. ಉಸಿರು ನಿಲ್ಲುವ ತನಕವೂ ಕಾಮ ಮೋಹವು ಜೀವವನ್ನು ಆವರಿಸಿಕೊಂಡಿರುತ್ತದೆ ಎನ್ನುವ ನಿಜದ ಹಂಗು- ಭವದಲ್ಲಿ ಉಸಿರಾಡುವ ಎಲ್ಲರಿಗೂ ಅನ್ವಯ.

ವ್ಯತ್ಯಸ್ತ ಘಟ್ಟಗಳಲ್ಲಿ ಕಾಲ-ಲೋಕದ ಸಮಯವನ್ನೂ ಮೀರಿ ಎಬ್ಬಿಸುವ ಕಾಮನೆಗಳಿಗೆ ಲೌಕಿಕದಲ್ಲಿ ಬಾಗಿ ಮಿಡಿಯದ ದೇಹ ಮನಸ್ಸುಗಳಿಲ್ಲ. ಆಧುನಿಕ ಬದುಕಲ್ಲಿ ಬಲು ಮುಕ್ತವಾಗಿ ಕಾಣುವ ದಾಹವು ಹಿಂದಿಲ್ಲವೆಂದಲ್ಲ. ಕೆಲವು ಚೌಕಟ್ಟಿನ ಪರಿಮಿತಿಯೊಳಗೆ ಇತ್ತು. ಆದರಿಂದು ಕ್ಷಣಕ್ಷಣದ ಸುಖಗಳ ಬೆಂಬತ್ತಿ ನಡೆಯುವ ಉಮೇದು ಜೀವಕೋಶಗಳಲ್ಲಿ ಹೆಚ್ಚೇ ತುಂಬಿಕೊಂಡಿದೆ. ಹಾಗಾಗಿ ಚೌಕಟ್ಟುಗಳನ್ನು ಬದಿಗೆ ಸರಿಸುವ ಹಕೀಕತ್ತು ಈಗಿನ ಲೋಕದ್ದು. ಇಶಾರೆಗಳಲ್ಲೇ ಅರ್ಥಗಳನ್ನು ಡಿ-ಕೋಡ್ ಮಾಡುವ ತಂತ್ರಜ್ಞಾನ ಯುಗದಲ್ಲಿ ಕಾಮಾರ್ಥ ಸಿದ್ಧಿಗಳು ತಣ್ಣಗೆ ನಡೆಯುತ್ತಿರುತ್ತವೆ. ಅವೆಲ್ಲದರ ಅರಿವಿದ್ದೂ ಇಲ್ಲದಂತಿರುವ ಕಟ್ಟಿಕೊಂಡ ಬಂಧಗಳು ನೋಡುವ ಕಣ್ಣಿಗೆ ಶುಭ್ರಜ್ಯೋತ್ಸ್ನವಾಗಿ ಕಾಣುತ್ತವೆ. ಸೂಕ್ಷ್ಮ ಮತ್ತು ಮುಕ್ತ ಮನಸ್ಸಿನೊಂದಿಗೆ ತೆರೆದುಕೊಂಡ ಬಾಯಾರಿದ ಹೃದಯವು ಆಸೆಯ ದಾಹವನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಸೃಷ್ಟಿ ಮತ್ತು ಲಯಗಳೆರಡರಲ್ಲೂ ಆಸೆಯು ಪ್ರಭಾವ ಬೀರುವುದರಿಂದ-ಆಸೆಗಳೇ ಕಥೆಗಳಾಗಿ ಬಿಡುವ ಸೋಜಿಗವನ್ನು ಕಾಣುತ್ತೇವೆ.
ಕಥೆಗಳು ಜೀವನ ಕ್ರಮವನ್ನು ಹೇಳುವ ಒಂದು ವಿಧಾನವಷ್ಟೇ. ಭಾರವೆನಿಸಿಕೊಳ್ಳುವ ಬದುಕಲ್ಲಿ ಕ್ಷಣಗಳು ನೀಡುವ ಒಂದಷ್ಟು ಮುದಗಳನ್ನು ಅನುಭವಿಸಿ ಹಗುರಾಗುವ ಪ್ರಯತ್ನಗಳು ಎಲ್ಲರ ಬದುಕಲ್ಲೂ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಸಂಕಟ-ಸಂಭ್ರಮವನ್ನು ಹಂಚಿಕೊಳ್ಳುವುದು ಮನುಕುಲದ ಆಸೆಯೂ ಹೌದು. ಎದೆಭಾರವನ್ನು ಇಳಿಸಿಕೊಳ್ಳಲು ಕಥೆ ಹೇಳದೆ ಉಳಿಯುವುದು ಕಷ್ಟದ ಕೆಲಸ. ಭಾವ ವಿಕಾರಗಳಿಗೆ ಅನುಗುಣವಾಗಿ ನಿಮಿಷ ನಿಮಿಷಕ್ಕೆ ಒಂದೊಂದು ಪಾತ್ರಗಳಾಗುತ್ತಾ ಹೋಗುವ ಚಮತ್ಕಾರ ಜೀವಕ್ಕಿದೆ. ಒಳಗಿನ ಒತ್ತಡದ ಬಿಡುಗಡೆಗೆ ಬರವಣಿಗೆಯೇ ರಹದಾರಿ. ಇಲ್ಲಿನ ಕಥೆಗಳು ಗ್ರಹಿಸುವ ಮನಸ್ಸಿಗೆ ತಟ್ಟಿದ್ದೇ ಹೆಚ್ಚು.ಬದುಕಿನ ನಿತ್ಯ ಜಂಜಾಟ, ತುಮುಲಗಳನ್ನು ನಿಭಾಯಿಸುವುದಕ್ಕಿಂತ ಹಿರಿದಾದದ್ದೇನಲ್ಲ ಈ ಕಥೆಗಳು ಅನುಭವಿಸಿಯೂ ತೀರದಾದಾಗ ಏಳುವ ಹೊಚ್ಚ ಹೊಸ ದಾಹಗಳನ್ನು ಅರಸುತ್ತಾ, ಕಳಕೊಂಡದ್ದನ್ನು ಪಡೆವ ನಿಟ್ಟಿನಲ್ಲಿ ಸಾಗುವ ಪ್ರತಿಯೊಬ್ಬನ ಮನದ ಯಾತ್ರೆಯಿದು.ಅಷ್ಟೇ. ಇಳಿಯುವುದು, ಬೆಳೆಯುವುದು, ಅಳಿಯುವುದು ಆಯಾ ಹೃದಯ-ಮನಸ್ಸಿಗೆ ಬಿಟ್ಟದ್ದು.






0 Comments