ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಲ್ವಿನ್ ಸೆರಾವೊ ಎಂಬ ಬೆರಗು

ಇತ್ತೀಚೆಗಷ್ಟೇ ಫಾ. ಆಲ್ವಿನ್ ಸೆರಾವೊ ಅವರಿಗೆ ಈ ವರ್ಷದ ‘ಅರೆಹೊಳೆ ರಂಗಭೂಮಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮಂಗಳೂರಿನ ಪಾದುವ ಕಾಲೇಜಿನ ಪ್ರಾಂಶುಪಾಲರಾದ ಫಾ. ಆಲ್ವಿನ್ ಸೆರಾವೊರವರ ಬಗ್ಗೆ

ಅವರನ್ನು ಹತ್ತಿರದಿಂದ ಕಂಡ ರಂಗಕರ್ಮಿ ಕ್ರಿಸ್ಟಿ ನೀನಾಸಂ ಒಂದು ಆತ್ಮೀಯ ನೋಟವನ್ನು ಕಟ್ಟಿಕೊಟ್ಟಿದ್ದಾರೆ-

ಕ್ರಿಸ್ಟಿ ನೀನಾಸಂ

ಈ ವರ್ಷದ ಅರೆಹೊಳೆ ರಂಗಭೂಮಿ ಪ್ರಶಸ್ತಿಗೆ ಆಯ್ಕೆಯಾದ ಪಾದುವ ಕಾಲೇಜಿನ ಪ್ರಾಂಶುಪಾಲರು ಹಾಗೂ ಪಾದುವ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರೂ ಆದ ವಂದನೀಯ ಆಲ್ವಿನ್ ಸೆರಾವೊರವರು ನಾನು ನೋಡಿದ ಲೆಕ್ಕಾಚಾರದಲ್ಲಿ ಕೇವಲ ಬರಹಗಾರರು ಮಾತ್ರವಲ್ಲದೇ ಒಬ್ಬ ಪೂರ್ಣಪ್ರಮಾಣದ ರಂಗಕರ್ಮಿ ಎಂದೇ ಕರೆಯಲು ಇಚ್ಚಿಸುತ್ತೇನೆ.

ಅವರು ನಮ್ಮ ತಂಡಕ್ಕೆ ಕೇವಲ ನಾಟಕ ಬರೆದಿಟ್ಟು, ನಾನು ಬರೆದಿದ್ದೇನೆ ನೀವು ಮಾಡಿ, ಪ್ರದರ್ಶನದ ದಿನ ಬಂದು ನೋಡುತ್ತೇನೆ ಎಂದು ಹೇಳುವ ಜಾಯಮಾನದವರು ಅಲ್ವೇ ಅಲ್ಲ.. ಬದಲಾಗಿ ಸಾಧ್ಯವಾದಷ್ಟು ದಿನಗಳು ನಮ್ಮ ಜೊತೆ ಅಭ್ಯಾಸದಲ್ಲಿದ್ದು, ಎಲ್ಲಾ ರಂಗಸಜ್ಜಿಕೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಜೊತೆ, ಜೊತೆಯಾಗಿ ಸೇರಿ ಕಲಿತು ಕಲಿಯುವ ಒಬ್ಬ ಉತ್ತಮ ವಿದ್ಯಾರ್ಥಿ.

ಈಗಲೂ ನಮ್ಮ ನಾಟ್ಕದ ಪರದೆ ಕಟ್ಟುವ ಕೆಲಸವನ್ನು ಯಾರಿಗೂ ಬಿಟ್ಟು ಕೊಡದ ಹಠಮಾರಿ, ಹಾಗೂ ಅಪ್ಪಿ ತಪ್ಪಿ ನಾವೇನಾದರೂ ಕಟ್ಟಿ ಎಡವಟ್ಟಾದರೆ ಮತ್ತೆ ಎಲ್ಲಾವನ್ನು ಬಿಚ್ಚಿ ಮೊದಲಿನಿಂದಲೇ ಕೆಲಸ ಶುರು ಮಾಡಿ, ಸರಿಯಾಗಿ ಚೆಂದಗಾಣಿಸುವವರೆಗೆ ಬಿಡದ ಛಲವಾದಿ. ಕಳೆದ ವಾರ ಶಾರ್ಜಾದಲ್ಲಿ ಪ್ರದರ್ಶನದ ವೇಳೆಯೂ ಅಲ್ಲಿನ event organizers ಜೊತೆ ಇವರೂ ಕೆಲಸ ಮಾಡಿದ್ದನ್ನು ನೋಡಿ ನಮ್ಮ ಜೊತೆಗಾರರಿಗೆ ಬೆರಗೋ ಬೆರಗು.

ಈ ಎಲ್ಲಾ ವಿಷಯಗಳಿಗೆ ಈ ಮೇಲಿನ ಚಿತ್ರ ಪಟಗಳೇ ಸಾಕ್ಷಿ. ಇವೆಲ್ಲಾವೂ ಅವರಿಗೆ ಅರಿವಿಲ್ಲದೇ ತೆಗೆದವುಗಳು. ಒಂದು ಚಿತ್ರವಂತೂ ತಾವೇ ವಿನ್ಯಾಸಗೊಳಿಸಿ ತಯಾರು ಮಾಡಿದ ಬಯಲು ರಂಗಮಂದಿರದ ಕೆಲಸ ಪೂರ್ಣಗೊಂಡಾಗ ಖುಷಿಯಿಂದ ಅದೇ ಬಯಲು ರಂಗಮಂದಿರದ ಏಣಿಯಲ್ಲಿ ತಾನೊಬ್ಬ ಅರ್ಧ ಶತಮಾನ ಕಳೆದಿರುವ ಯುವಕನೆಂದು ಮೈಮರೆತು ಹತ್ತಿದ ಕ್ಷಣದಲ್ಲಿ ತೆಗೆದದ್ದು.

ಪ್ರಚಾರಕ್ಕಾಗಿ ಎಂದೂ ಕೆಲಸ ಮಾಡದ ಇವರು, ಪ್ರತೀ ನಾಟಕದ ಆರಂಭ ಶೂನ್ಯ ಬಂಡವಾಳದಿಂದಲೇ ಆರಂಭಿಸಿ, ಹೆಚ್ಚಾದುದನ್ನು ವಾಪಾಸ್ಸು ನೀಡಿ, ಮತ್ತೆ ಹೊಸ ನಾಟಕದ ಸಮಯದಲ್ಲಿ ಕೈ ಮುಂದೆ ಚಾಚಿ ಪ್ರತೀ ಸಲ ಚಾಚೂ ತಪ್ಪದೇ ಲೆಕ್ಕಾಚಾರಗಳನ್ನು ಪ್ರೇಕ್ಷಕರ ಮುಂದೆ ಇಡುವ ವಿಶಿಷ್ಟ ವ್ಯಕ್ತಿ.

ಒಬ್ಬ ಪಾದ್ರಿಯಾಗಿಯೂ, ಕಾಲೇಜಿನ ಪ್ರಾಂಶುಪಾಲರಾಗಿಯೂ, ಮೂರು ಸ್ನಾತಕೋತ್ತರ ಪದವಿಗಳನ್ನು ಪಡೆದೂ, ನಮ್ಮಂತಹ ಯುವಕರ ಜೊತೆ ರಾತ್ರಿಯಿಡೀ ನಾಟ್ಕದ ಕೆಲಸಗಳಲ್ಲಿ ಜೊತೆಗೂಡಿ, ನಮ್ಮ ಹೊರಗಿನ ಎಲ್ಲಾ ಪ್ರದರ್ಶನಗಳಲ್ಲೂ ತಪ್ಪದೇ ಹಾಜರಾಗಿ, ಮಧ್ಯರಾತ್ರಿ 3 ಘಂಟೆಗೆ ಮನೆ ಸೇರಿ, ಬೆಳಗ್ಗೆ 5 ಘಂಟೆಗೆ ಎದ್ದು, ದೇವಾಲಯದ ಪೂಜಾವಿಧಿಗಳನ್ನು ಪೂರೈಸಿ, ನಿತ್ಯ ಕಾಲೇಜಿಗೆ ಹಾಜರಾಗಿ ಲವಲವಿಕೆಯಿಂದ ಇರುವ ಈ ವ್ಯಕ್ತಿಯ energy, ನಮ್ಮ ಎಲ್ಲಾ ಕೆಲಸಗಳಿಗೊಂದು ಸ್ಪೂರ್ತಿ.

ಇವರ ಕೋಣೆಗೆ ಒಮ್ಮೆ ಭೇಟಿ ನೀಡಿದರೆ ಪುಸ್ತಕಗಳ ಭಂಡಾರವೇ ಕಾಣಸಿಗುತ್ತದೆ. 80% ಕೋಣೆಯ ಭಾಗ ಪುಸ್ತಕಗಳಿಂದ ತುಂಬಿ ತುಳುಕುತ್ತಿದೆ. 2013ರಲ್ಲಿ ಇವರು ‘ರಗ್ತಾಚಿ ಸಾಕ್ಸ್’ ಎಂಬ ನಾಟಕವನ್ನು ಅನುವಾದಿಸಿದ್ದರು. ಅಲ್ಲಿಂದ ಇತ್ತೀಚಿಗೆ ಅನುವಾದಿಸಿದ ನಾಟಕಗಳವರೆಗೆ ಇವರು ಬೆಳೆದು ಬಂದ ರೀತಿ ಗಮನಿಸಿದರೆ ಇವರು ನಿರಂತರ ಹೊಸತನದ ಹುಡುಕಾಟಕ್ಕಾಗಿ ಹಸಿದಿರುವ ಬರಹಗಾರನೆಂದು ಸಾಬೀತಾಗುತ್ತದೆ.

ಈ ತನಕ ಸುಮಾರು 7 ಪಾಶ್ಚಾತ್ಯ ನಾಟಕಗಳನ್ನು ಕೊಂಕಣಿಗೆ ಅನುವಾದಿಸಿದ್ದಾರೆ. ಅದರಲ್ಲಿ ಜೀನ್ ಪಾಲ್ ಸಾತ್ರ್ ಇವರು ಬರೆದ ‘NO EXIT’ ಒಂದು ಪ್ರಮುಖ ಕೃತಿಯಾಗಿದೆ. 6 ತಮ್ಮ ಸ್ವಂತ ಕೃತಿಗಳನ್ನು ಕೊಂಕಣಿಯಲ್ಲಿ ರಚಿಸಿದ್ದಾರೆ. ಹಾಗೂ 15ಕ್ಕಿಂತ ಹೆಚ್ಚು ನಾಟಕಗಳನ್ನು ನಿರ್ಮಿಸಿದ್ದಾರೆ.‌ ಹಾಗೂ ಎಷ್ಟೋ ನಾಟಕಗಳನ್ನು ಅಯೋಜಿಸಲು ಸಹಕರಿಸಿದ್ದಾರೆ.

ಇವೆಲ್ಲಾ ವಿಷಯಗಳು ಬಹುತೇಕರಿಗೆ ತಿಳಿದಿದೆ. ತುಂಬಾ ಜನರಿಗೆ ತಿಳಿಯದ, ಅಥವಾ ತಿಳಿದೂ ಮಾತನಾಡುವ, ಅವರಿಗ್ಯಾಕೆ ಪ್ರಶಸ್ತಿ ಎಂದು ಕೇಳುವವರಿಗೆ ಇಷ್ಟು ಹೇಳಬೇಕಾಯಿತು.

ಒಂದು‌ ಮಾತಂತೂ ಸತ್ಯ ನನ್ನನ್ನು ಹಿಡಿದು, ನಮ್ಮ ತಂಡದ ಒಂದಷ್ಟು ಯುವಜನರು ಇವರಿಂದ ಒಂದಷ್ಟು ಹೆಸರು, ಕೆಲಸ, ಜೀವನ ನಡೆಸಲು ಸ್ವಲ್ಪ ಆರ್ಥಿಕ ಆದಾಯವನ್ನೂ ಪಡೆಯುವುದಂತೂ ಸತ್ಯ. ಆದರೆ ಇವೆಲ್ಲಾವುಗಳಿಗಿಂತ ನಾವು #ಫಾ_ಆಲ್ವಿನ್_ಸೆರಾವೊನವರೊಂದಿಗೆ ದುಡಿದಿದ್ದೇವೆ, ಅವರ ಜೊತೆ ತಂಡ ಕಟ್ಕೊಂಡು ನಾಟ್ಕ ಮಾಡಿದ್ದೇವೆ ಎಂದು ಹೇಳುವ ಸೌಭಾಗ್ಯ ನಮ್ಮದಾಗಿದೆ ಎಂಬುದು ಮತ್ತಷ್ಟು ಖುಷಿಯ ವಿಚಾರ.

‍ಲೇಖಕರು

27 January, 2020

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. T S SHRAVANA KUMARI

    ಉತ್ತಮ ಪರಿಚಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading