ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಲೂರು ಕಾಲಂ: ಫಸ್ಟ್ ಕ್ಲಾಸ್ ಪ್ರಯಾಣಿಕರು

ಚಂದ್ರಶೇಖರ ಆಲೂರು

ಇದು ರಷ್ಯಾದ ಪ್ರಸಿದ್ಧ ಲೇಖಕ ಆಂಟನ್ ಚೆಕಾವ್ ೧೮೮೬ರಲ್ಲಿ ಬರೆದ ಕಥೆ. ಒಂದು ಕಾಲು ಶತಮಾನದ ನಂತರವೂ, ಮಾಧ್ಯಮಗಳು ಸೃಷ್ಟಿಸುವ ಹೀರೋಗಳ ಜಗತ್ತಿನಲ್ಲಿರುವ ನಮ್ಮ ಪರಿಸರಕ್ಕೆ ಇದು ಪ್ರಸ್ತುತ ಅನ್ನಿಸುತ್ತದೆ.

***

ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದ ಮಾರ್ಗ ಮಧ್ಯದ ಸ್ಟೇಷನ್ ರೆಸ್ಟುರಾಂಟ್‌ನಲ್ಲಿ ದಿವಿನಾದ ವೈನ್, ಸೊಗಸಾದ ಭೋಜನ ಮುಗಿಸಿ ಬಂದು ಸಹಯಾತ್ರಿಕನನ್ನ ಮಾತಿಗೆ ಎಳೆದೆ: ಕ್ಷಮಿಸಿ, ನನ್ನದೊಂದು ದುರಭ್ಯಾಸ. ಒಳ್ಳೆ ಊಟ ಮಾಡಿದ ಮೇಲೆ ನನಗೆ ಕೊಂಚ ಮಾತಿನ ಚಪಲ. ಯಾರೊಂದಿಗಾದರೂ ಮಾತಾಡಿದರೇ ಸಮಾಧಾನ, ನಿಮಗೆ ಪರವಾಗಿಲ್ಲ ತಾನೆ ಎಂದು ಮಾತಿಗೆ ಆರಂಭಿಸಿಯೇಬಿಟ್ಟೆ. ಪ್ರಸಿದ್ಧ ಪುರುಷನಾಗಬೇಕೆಂಬ ಆಸೆಯಿಂದ ನಾನು ಕಷ್ಟ ಪಟ್ಟು ಓದಿದೆ, ಶ್ರದ್ಧೆಯಿಂದ ದುಡಿದೆ, ನಾನೊಬ್ಬ ನಿಷ್ಣಾತ ಇಂಜಿನಿಯರ್. ರಷ್ಯಾದಲ್ಲಿ ಇಪ್ಪತ್ತು ಅದ್ಭುತವಾದ ಸೇತುವೆಗಳನ್ನ ಕಟ್ಟಿದ್ದೇನೆ. ರಷ್ಯಾ, ಇಂಗ್ಲಂಡ್, ಬೆಲ್ಜಿಯಂನಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿಷಯಕ್ಕೆ ಸಂಬಂಧಪಟ್ಟಂತೆ ಹತ್ತಾರು ಸಂಶೋಧನಾ ಲೇಖನಗಳನ್ನ ಬರೆದಿದ್ದೇನೆ… ನಿಮ್ಮ ಗಮನ ಸೆಳೆಯಬೇಕೆಂದು ನಾನು ಹೊಗಳಿಕೊಳ್ಳುತ್ತಿಲ್ಲ. ಅದೇ ರೆಸ್ಟುರಾಂಟಿನಲ್ಲಿ ನೋಡಿದರಲ್ಲ. ಅದ್ಯಾವುದೋ ಒಪೆರಾದಲ್ಲಿ ಕಾಣಿಸಿಕೊಂಡವನ ಬಳಿ ಜನ ಮುತ್ತಿಕೊಂಡಿದ್ದರು. ನಾನು ಇಂಥ

ನೂರಾರು ಸೆಲೆಬ್ರಿಟಿಗಳನ್ನ ಮೀರಿಸುವಂಥ ಕೆಲಸ ಮಾಡಿದ್ದೇನೆ. ಆದರೆ ಏನಾಯ್ತು? ಜೀವನದ ಸಂಧ್ಯೆಯಲ್ಲಿರುವ ನಾನು ಅದೋ ಆ ಹಳಿಯ ಬಳಿ ಹಾದು ಹೋದ ನಾಯಿಗಿಂತ ಕಡೆ, ಅಲ್ಲವೇ?

“ಅದು ಹೇಗೆ ಹೇಳುತ್ತೀರಿ, ನೀವು ಪ್ರಸಿದ್ಧರಿರಬಹುದು, ಎಲ್ಲರಿಗೂ ತಿಳಿದಿರಬಹುದು.”

“ಆಯ್ತು ಅದನ್ನು ಇಲ್ಲಿಯೇ ಪರೀಕ್ಷಿಸಿ ಬಿಡೋಣ ಸರ್. ನೀವು ಎಲ್ಲಾದರೂ, ಎಂದಾದರೂ ಕ್ರಿಕೆನೊವ್‌ರ ಹೆಸರು ಕೇಳಿದ್ದೀರಾ?” “ಕ್ರಿಕಿನೊವ್… ಇಲ್ಲ. ಆ ಹೆಸರು ಕೇಳಿಯೇ ಇಲ್ಲ.”

“ಅದು ನನ್ನ ಹೆಸರು ಸರ್. ನೋಡಿದ್ರಾ, ನಾನು ಆಗಲೆ ಹೇಳಲಿಲ್ಲವೆ, ನೀವು ಸುಸಂಸ್ಕೃತರು, ಮಧ್ಯವಯಸ್ಕರು, ನಿಮ್ಮಂಥವರೇ ನನ್ನ ಹೆಸರು ಕೇಳಿಲ್ಲ. ಅಲ್ಲಿಗೆ

ನನ್ನ ಪಾಯಿಂಟ್ ಕರೆಕ್ಟ್ . ಪ್ರಸಿದ್ಧಿ ಗಳಿಸುವ ಹಾದಿಯಲ್ಲಿ ನಾನು ತಪ್ಪು ಮಾಡಿದೆ ಸರ್. ಏನು ಮಾಡಬೇಕಿತ್ತೋ ಅದನ್ನು ಮಾಡಲಿಲ್ಲ ಸರಿಯಾದ ಮಾರ್ಗದಲ್ಲಿ ಹೋಗಲಿಲ್ಲ.”

“ಹಾಗಿದ್ದರೆ, ನಿಮ್ಮ ಪ್ರಕಾರ ಸರಿಯಾದ ಮಾರ್ಗ ಯಾವುದು.”

“ಆ ಸೈತಾನನಿಗೇ ಗೊತ್ತು. ನೀವು ಹೇಳುತ್ತೀರಿ: ಬುದ್ಧಿ ಮತ್ತೆ, ಪ್ರತಿಭೆ… ಅದಾವುದೂ ಅಲ್ಲ ಸರ್. ನನಗೆ ಕಿಂಚಿತ್ತೂ ಹೋಲಿಸಲಾಗದಂಥ ಶತದಡ್ಡರು, ಮೂಢರು, ಘಾತುಕರು ಹೆಸರು ಮಾಡಿದರು. ಮೂರು ನಯಾ ಪೈಸದ ಕೆಲಸ ಮಾಡದೆ ಅವರು ಪ್ರಸಿದ್ಧರಾದರು. ದಿನನಿತ್ಯ ಪತ್ರಿಕೆಗಳಲ್ಲಿ ಅವರದೇ ಸುದ್ದಿ. ಜನರ ಬಾಯಲ್ಲಿ ಅವರದ್ದೇ ಮಾತು- ಒಂದು ಉದಾಹರಣೆ ಹೇಳುತ್ತೀನಿ: ಕೆಲವು ವರ್ಷಗಳ ಹಿಂದೆ ಸಣ್ಣ ಪಟ್ಟಣವೊಂದರಲ್ಲಿ ನಾನೊಂದು ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದೆ. ವೈನು, ವನಿತೆಯರು, ಇಸ್ಪೀಟ್ ಇಲ್ಲದಿದ್ದರೆ ಅಲ್ಲಿ ಬದುಕುವುದು ಇನ್ನೂ ಕಷ್ಟವಾಗುತ್ತಿತ್ತು ಅದೊಂದು ದೊಡ್ಡ ಚರಿತ್ರೆ, ಹಳೆಯ ಕತೆ ಬಿಡಿ. ದೀರ್ಘಕತೆಯನ್ನು ತುಂಡರಿಸಿ ಹೇಳುತ್ತೇನೆ. ಆ ಪಟ್ಟಣದ ಸ್ಥಳೀಯ ಗಾಯಕಿಯೊಬ್ಬಳೊಂದಿಗೆ ನನಗೆ ಅಫೇರ್ ಇತ್ತು. ಅವಳ ಬಗ್ಗೆ ಕರಾರುವಾಕ್ಕಾಗಿ ಹೇಳಬೇಕೆಂದರೆ ಅವಳೊಬ್ಬ ತೀರಾ, ತೀರಾ ಸಾಧಾರಣ ಗಾಯಕಿ, ದಡ್ಡಿ , ಜುಗ್ಗಿ… ಇನ್ನೇನು ಹೇಳಬಹುದು… ಕಂಠಪೂರ್ತಿ ಕುಡಿಯುತ್ತಿದ್ದಳು, ಹೊಟ್ಟೆ ಬಿರಿಯ ತಿನ್ನುತ್ತಿದ್ದಳು… ಸಂಜೆ ಐದರವರೆಗೂ ಮಲಗುತ್ತಿದ್ದಳು. ಅಂಥವರು ಈ ಜಗತ್ತಿನಲ್ಲಿ ಲಕ್ಷಾಂತರ ಜನ ಸಿಗುತ್ತಾರೆ. ಆದರೂ ಅಲ್ಲಿನ ಜನ ಆಕೆಯನ್ನ ಪ್ರಸಿದ್ಧ ಗಾಯಕಿ, ಕಲಾವಿದೆ ಎನ್ನುತ್ತಿದ್ದರು. ಕಾರಣ ಇಷ್ಟೆ ಅವಳು ಹಾಡಲು ಬಂದಾಗ ಅನಗತ್ಯವಾಗಿ ದೇಹ ಪ್ರದರ್ಶನ ಮಾಡುತ್ತಿದ್ದಳು, ನರ್ತಕಿಯಂತೆ ಬಳುಕುತ್ತಿದ್ದಳು, ಅಭಿಮಾನದ ನೆಪದಲ್ಲಿ ಪುರುಷರು ಡ್ರೆಸಿಂಗ್‌ರೂಂಗೆ ಬಂದರೆ ಸ್ವಲ್ಪವೂ ಲಜ್ಜೆಯಿಲ್ಲದೆ ಅವರೊಂದಿಗೆ ಹರಟುತ್ತಿದ್ದಳು… ಸರ್ ಅದೆಲ್ಲ ಯಾಕೆ ಒಂದು ಸಣ್ಣ ಪ್ರಸಂಗ ಹೇಳಿಬಿಡ್ತೀನಿ:

ಅದು ನಿನ್ನೆ ಮೊನ್ನೆ ನಡೆದಂತಿದೆ. ನಾನು ನಿರ್ಮಾಣ ಮಾಡಿದ ಸೇತುವೆಯ ಬಿಡುಗಡೆ ಸಮಾರಂಭ. ಸರ್ ಸುಳ್ಳೇಕೆ ಹೇಳಲಿ, ಅದೊಂದು ಅದ್ಭುತವಾದ ಸೇತುವೆ, ನವೀನ ತಂತ್ರeನವನ್ನು ಬಳಸಿದ್ದೆ. ಬಿಡುಗಡೆ ಕಾರ್ಯಕ್ರಮಕ್ಕೆ ಇಡೀ ಪಟ್ಟಣವೇ ನೆರೆದಿತ್ತು. ನಾನು ರೋಮಾಂಚಿತನಾಗಿದ್ದೆ. ಜನರೆಲ್ಲ ಈ ಸೇತುವೆಯ ನಿರ್ಮಾತೃವನ್ನ ಅಭಿಮಾನದಿಂದ ನೋಡುವಾಗ ಸಂಕೋಚಗೊಂಡ ನಾನೆಲ್ಲಿ ಬಚ್ಚಿಟ್ಟುಕೊಳ್ಳುವುದು ಎಂಬ ಆತಂಕ ನನ್ನನ್ನ ಕಾಡುತ್ತಿತ್ತು. ಸರ್ ಆದರೆ ಅಂಥದ್ದೇನೂ ಆಗಲಿಲ್ಲ. ಕಾರ್ಯಕ್ರಮಕ್ಕೆ ಬಂದಿದ್ದ ಒಂದಿಬ್ಬರು ಅಕಾರಿಗಳು ಆ ಬಗ್ಗೆ ಔಪಚಾರಿಕವಾಗಿ ವಿಚಾರಿಸಿದರು, ಅಷ್ಟೆ. ಜನರೆಲ್ಲಾ ಸೇತುವೆಯ ನಿರ್ಮಾತೃವಿನ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರದೆ ದೂರದಲ್ಲಿ ಗುಂಪಾಗಿ ಹರಟುತ್ತಾ ನಿಂತಿದ್ದರು. ಅಷ್ಟರಲ್ಲಿ ಅಲ್ಲೊಂದು ಕ್ಷಣ ನಿಶ್ಶಬ್ದ ಮತ್ತೆ ಗುನು ಗುನು, ಮಾತು-ಕಾರಣ, ಆ ಗಾಯಕಿ ಅಲ್ಲಿಗೆ ಬಂದಿದ್ದಳು.

ನನ್ನ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ‘ಆಕೆ ಯಾರು ಗೊತ್ತೆ?’ ಎಂದು ನನ್ನನ್ನ ಕೇಳಿದ. ನನ್ನ ನಿರುತ್ಸಾಹವನ್ನು ಕಂಡು ಆತನೇ ಮಾತು ಮುಂದುವರಿಸಿ ‘ಆಕೆ ಅಪ್ರತಿಮ ಗಾಯಕಿ, ಎಷ್ಟು ಚಂದ ಕಾಣಿಸುತ್ತಿದ್ದಾಳೆ ಅಲ್ಲವೇ’ ಎಂದ. ನಾನು ಇರಲಾರದೆ ಕೇಳಿದೆ: ‘ಈ ಸೇತುವೆ ನಿರ್ಮಿಸಿದವರು ಯಾರು ಗೊತ್ತೇ?’ ‘ಇಲ್ಲಪ್ಪ, ನಿಜವಾಗಲೂ ಗೊತ್ತಿಲ್ಲ. ಯಾರೋ ಒಬ್ಬ ಇಂಜಿನಿಯರ್ ಕಟ್ಟಿರುತ್ತಾನೆ’ ಎಂದು ತಣ್ಣಗೆ ಹೇಳಿದ. ಹೋಗಲಿ ಈ ಪಟ್ಟಣದ ಖ್ಯಾತ ವಾಸ್ತು ಶಿಲ್ಪಿ, ಖ್ಯಾತ ಶಿಕ್ಷಕ ಯಾರು ಎಂಬುದು ಗೊತ್ತೆ ಎಂದರೆ ಇಲ್ಲ ಎಂಬ ಉತ್ತರ. ನಿಮ್ಮ ಪಟ್ಟಣದ ಚರ್ಚ್ ಬಹು ಪ್ರಸಿದ್ಧಿ ಪಡೆದಿದೆಯಲ್ಲ ಅದನ್ನು ನಿರ್ಮಿಸಿದವರ‍್ಯಾರು ಗೊತ್ತೇ- ಅದಕ್ಕೂ ಆತ ನಿರುತ್ತರ. ‘ಸರಿ ಬಿಡಿ… ಹುಂ. ಆ ಗಾಯಕಿಯ ಈಚಿನ ಪ್ರಿಯಕರ ಯಾರು…’ ಪ್ರಶ್ನೆ ಮುಗಿಸುವ ಮುನ್ನವೇ ಆತ ಹೇಳಿದ ‘ಯಾರೋ ಕ್ರಿಕೆನೊವ್ ಅಂತ ಇಂಜಿನಿಯರ್ ಅಂತೆ ಅವನು.’

ಕೇಳಿದಿರಾ ಸರ್, ಇನ್ನೂ ಮಜಾ ಕೇಳಿ. ಮರುದಿನ ಅತ್ಯಂತ ಕುತೂಹಲದಿಂದ ಸ್ಥಳೀಯ ಪತ್ರಿಕೆಯನ್ನು ನೋಡಿದೆ. ಕಷ್ಟಪಟ್ಟು ಹುಡುಕಿದ ಮೇಲೆ ಎಲ್ಲೋ ಒಂದು ಕಡೆ ಸೇತುವೆ ಬಿಡುಗಡೆ ಕಾರ್ಯಕ್ರಮದ ಸಣ್ಣ ಸುದ್ದಿ ಇತ್ತು: ಹೊಸ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಡೆಯಿತು. ರಾಜ್ಯಪಾಲರು ಮತ್ತು ಇನ್ನಿತರ ಗಣ್ಯ ಅತಿಥಿಗಳು ಹಾಜರಿದ್ದರು. ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪ್ರಸಿದ್ಧ ಗಾಯಕಿ ಕಲಾವಿದೆ… ತನ್ನ ಆಗಮನದಿಂದ ಸಭೆಯಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದಳು. ಆಕೆ ಅಂದವಾದ ತೆಳು ನೀಲಿ ಉಡುಪು ಧರಿಸಿ… ಸರ್ ಅಂಥ ಅದ್ಭುತ ಸೇತುವೆ ನಿರ್ಮಾಣ ಮಾಡಿದ ನನ್ನ ಬಗ್ಗೆ ಒಂದೇ ಒಂದು ಅಕ್ಷರ ಇರಲಿಲ್ಲ. ಉಕ್ಕಿದ ಕೋಪದಲ್ಲಿ ನಾನು ಗಳಗಳನೆ ಅತ್ತುಬಿಟ್ಟೆ ಸರ್.

ಆದರೆ ನಂತರ ನಾನೇ ಸಮಾಧಾನ ಮಾಡಿಕೊಂಡೆ. ಇಂಥ ಸಣ್ಣ ಪುಟ್ಟ ನಗರಗಳಲ್ಲಿ ನನ್ನಂಥ ಪ್ರತಿಭಾವಂತನಿಗೆ ಬೆಲೆ ಇಲ್ಲ. ಈ ರಾಷ್ಟ್ರದ ರಾಜಧಾನಿಯಲ್ಲಿ ಎಲ್ಲ ಬಗೆಯ ಬುದ್ಧಿ ಜೀವಿಗಳು, ಕಲಾಕಾರರು, ವಿeನಿಗಳು, ಪ್ರತಿಭಾವಂತರು ಇರುತ್ತಾರೆ. ನನ್ನ ಸಾಧನೆ ಅಂಥವರ ಗಮನಕ್ಕೆ ಬಂದರೆ ನನಗೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ… ಇದೇ ಸಮಯದಲ್ಲಿ ರಾಜಧಾನಿ ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿ ಸ್ಪರ್ಧೆಯೊಂದರಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ನನ್ನೊಂದಿಗೆ ಆ ಗಾಯಕಿಯೂ ಬಂದಳು. ಬಹುದೂರದ ಪಯಣವನ್ನು ಆನಂದದಾಯಕವಾಗಿ ಕಳೆದವು. ಅಲ್ಲಿಗೆ ತಲುಪಿದ ಮರುದಿನವೇ ಸ್ಪರ್ಧೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ನನ್ನ ಪ್ರಾಜೆಕ್ಟ್‌ಗೇ ಮೊದಲ ಬಹುಮಾನ. ನಾನು ಇಡೀ ರಾತ್ರಿ ಮತ್ತಿನಲ್ಲಿ ತೇಲಿಹೋದೆ. ಮರುದಿನ ಬೆಳಗ್ಗೆ ಬೇಗನೇ ಎದ್ದು ಹೊರ ಹೋಗಿ ಎಪ್ಪತ್ತು ಕೊಪಕ್‌ಗಳನ್ನ ನೀಡಿ ರಾಜಧಾನಿಯಿಂದ ಪ್ರಕಟವಾಗುವ ಎಲ್ಲ ಪತ್ರಿಕೆಗಳನ್ನೂ ಕೊಂಡುತಂದೆ. ಹೊಟೇಲ್ ರೂಮಿನಲ್ಲಿ ಕುಳಿತು ಅವನ್ನು ತೆರೆಯುವಾಗ ನನ್ನ ಬೆರಳುಗಳು ಕಂಪಿಸುತ್ತಿದ್ದವು.

ಒಂದು ಪತ್ರಿಕೆಯನ್ನ ಪೂರ್ಣವಾಗಿ ತಲಾಶ್ ಮಾಡಿದೆ. ಏನೂ ಇರಲಿಲ್ಲ. ನಂತರ ಎರಡನೆಯದು, ಮೂರನೆಯದು ಉಹುಂ ಏನೂ ಇಲ್ಲ. ಒಂದು ಪದವೂ ಇಲ್ಲ. ನಾಲ್ಕನೆಯ ಪತ್ರಿಕೆ ತೆರೆದೆ ಮಧ್ಯದ ಪುಟದಲ್ಲಿ ಒಂದು ಕಡೆ “ದಕ್ಷಿಣ ಪ್ರಾಂತೀಯ ಭಾಗದ ಪ್ರಸಿದ್ಧ ನಟಿ ನಿನ್ನೆ ರಾತ್ರಿಯ ಎಕ್ಸ್‌ಪ್ರೆಸ್ ಟ್ರೈನಿನಲ್ಲಿ ರಾಜಧಾನಿಗೆ ಬಂದು ಇಳಿದಳು. ದಕ್ಷಿಣ ಭಾಗದ ಹವೆಯಿಂದ ಆಕೆಯ ಸೌಂದರ್ಯ ಆಹ್ಲಾದಕಾರಿಯಾಗಿದೆ…” ಮುಂದೆ ಓದಲಿಲ್ಲ.

ಆ ವರದಿಯ ಕೆಳಗೆ ಸಣ್ಣ ಅಕ್ಷರಗಳಲ್ಲಿ ನಿನ್ನೆ ನಡೆದ ಇಂಜಿನಿಯರುಗಳ ಸ್ಪರ್ಧೆಯಲ್ಲಿ ಕಿರ್ಕುನೂವ್ ಎಂಬ ಇಂಜಿನಿಯರ್ ಮೊದಲ ಬಹುಮಾನ ಪಡೆದರು… ಸಾರ್ ನನ್ನ ಹೆಸರನ್ನೂ ತಪ್ಪಾಗಿ ಅಚ್ಚು ಮಾಡಿದ್ದರು. ನಾನು ಒಂದು ತಿಂಗಳು ಪೀಟರ್ಸ್ ಬರ್ಗ್‌ನಲ್ಲಿ ಇದ್ದ ಅವಯಲ್ಲಿ ನನ್ನೊಂದಿಗೇ ಇದ್ದ ಆ ‘ಕಲಾವಿದೆ’ಯ ಬಗ್ಗೆ ಹಲವು ವರದಿಗಳು ಪ್ರಕಟವಾದವು.

ಅದೂ ಇರಲಿ ಸರ್ ಮಾಸ್ಕೊ ನಗರವನ್ನು ನೂರು ವರ್ಷದಿಂದ ಕಾಡುತ್ತಿದ್ದ ಸಮಸ್ಯೆಯ ಬಗ್ಗೆ ಸಲಹೆ ಪಡೆಯಲು ಅಲ್ಲಿನ ಮೇಯರ್ ನನ್ನನ್ನ ಖುದ್ದಾಗಿ ಕರೆಸಿಕೊಂಡರು. ಅಲ್ಲಿ ಬಿಡುವಿನ ಅವಯಲ್ಲಿ ನಾನೊಂದು ಮ್ಯೂಸಿಯಂನಲ್ಲಿ ಸತತವಾಗಿ ಉಪನ್ಯಾಸಗಳನ್ನು ನೀಡಿದೆ. ಸಂಭಾವನೆಯನ್ನೆಲ್ಲ ಸಂಸ್ಥೆಯೊಂದಕ್ಕೆ ದಾನವಾಗಿ ನೀಡಿದ್ದೆ. ಈ ಸುದ್ದಿಯೂ ಮಾಸ್ಕೊ ಪತ್ರಿಕೆಗಳಲ್ಲಿ ಬರಲಿಲ್ಲ.

ಇರಲಿ ಬಿಡಿ ಸರ್ ಇಂಥ ನೂರಾರು ಉದಾಹರಣೆಗಳನ್ನು ಕೊಡಬಲ್ಲೆ. ನನ್ನದಿರಲಿ, ನನ್ನ ಸಮಕಾಲೀನರಲ್ಲಿ ನನಗಿಂತ ಪ್ರತಿಭಾವಂತರಾದ ಹಲವರು ಅನಾಮಿಕರಾಗಿಯೇ ಬಾಳಿ, ಅನಾಮಿಕರಾಗಿಯೇ ನಿರ್ಗಮಿಸಿದ್ದಾರೆ. ಕಲಾವಿದರು, ಶಿಲ್ಪಿಗಳು, ಸಾಹಿತಿಗಳು…

ಅಷ್ಟರಲ್ಲಿ ಯಾರೋ ಒಬ್ಬ ವ್ಯಕ್ತಿ ಅಲ್ಲಿ ಹಾದು ಹೋದ. ದೂರದಲ್ಲಿ ಕುಳಿತಿದ್ದ ಪ್ರಯಾಣಿಕ ಪಕ್ಕದವನಿಗೆ ಪಿಸು ಮಾತಿನಲ್ಲಿ ಹೇಳಿದ: ಅಲ್ಲಿ ಹೋದವನು ದೊಡ್ಡ ದರೋಡೆಕೋರ. ಮೊನ್ನೆ ನಡೆದ ಬ್ಯಾಂಕ್ ದರೋಡೆಯಲ್ಲಿ ಅವನ ಹೆಸರಿದೆ. ಇದನ್ನ ಕೇಳಿಸಿಕೊಂಡ ಕ್ರಿಕೆನೊವ್ ಜೋರಾಗಿ ನಕ್ಕ. ನೋಡಿ ಅವನಿಗೆ ಅವನ್ಯಾರೋ ಕಳ್ಳ ಗೊತ್ತಿದ್ದಾನೆ. ಕಲಾವಿದ ಸೆಮಿರಾಸ್ಕಿ, ಕಂಪೋಸರ್ ಶಾಕಿಯೊಸ್ಕಿ , ತತ್ವಜ್ಞಾನಿ ನೂಲೊವಿವ್ ಗೊತ್ತಿದ್ದಾರ ಕೇಳಿ. ಆ ಮಹಾಶಯ ತಲೆ ಆಡಿಸುತ್ತಾನೆ. ಇಂಥ ದರಿದ್ರ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ.

ಕ್ರಿಕೆನೊವ್‌ನ ಮಾತುಗಳನ್ನ ಸಹನೆಯಿಂದ ಆಲಿಸಿದ ಸಹ ಪ್ರಯಾಣಿಕ ಕಡೆಯಲ್ಲಿ ಆತನಿಗೆ “ನಿಮಗೆ ಪುಷ್ಕೊವ್ ಗೊತ್ತೇ” ಎಂದು ಕೇಳಿದ. ಇಲ್ಲವಲ್ಲ ನಾನು ಆ ಹೆಸರು ಕೇಳಿಯೇ ಇಲ್ಲ. ಸಹಯಾತ್ರಿಕ ನಗುತ್ತಾ ಹೇಳಿದ: ಅದು ನಾನೇ. ರಷ್ಯನ್ ವಿಶ್ವವಿದ್ಯಾಲಯದಲ್ಲಿ ನಾನು ಪ್ರೊಫೆಸರ್ ಆಗಿದ್ದೇನೆ. ಮೂವತ್ತೈದು ವರ್ಷಗಳಿಂದ. ಅಕಾಡೆಮಿಯ ಸದಸ್ಯ… ಹಲವಾರು ಕೃತಿಗಳನ್ನು ಪ್ರಕಟಿಸಿದ್ದೇನೆ. ಅವನು ಮಾತು ನಿಲ್ಲಿಸುತ್ತಿದ್ದಂತೆಯೇ ಇಬ್ಬರೂ ಪರಸ್ಪರರನ್ನು ದಿಟ್ಟಿಸಿ ಗಹಗಹಿಸಿ ನಕ್ಕರು,

ನಿರುಮ್ಮಳವಾಗಿ.

‍ಲೇಖಕರು G

7 March, 2011

2 Comments

  1. prashanth

    indigu prasthutha..adare ‘bekkige gante kattoryaru!’

  2. ಹೆಚ್.ವಿ.ವೇಣುಗೋಪಾಲ್

    ಕಥೆ ತುಂಬಾ ಚೆನ್ನಾಗಿದೆ.ಕಥೆಯ ಕೊನೆಯಲ್ಲಿ ಆ ಇಬ್ಬರು ಪ್ರಖ್ಯಾತರ ಪರಸ್ಪರ ನುಗುವಿನಲ್ಲಿ (’ನಿರುಮ್ಮಳ’) ಕಥೆಗಾರನ ಉದ್ದೇಶ ಕಾಣುತ್ತದೆ. ಕುವೆಂಪು ಅವರ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎಂಬ ಮಾತು ನೆನಪಿಗೆ ಬರುತ್ತದೆ.ಆದರೆ ಈ ಕಥೆಗೆ ಮುನ್ನ ಬರೆದ ಒಂದು ಸಾಲಿನ ಬಗ್ಗೆ ನನ್ನ ಭಿನ್ನಾಭಿಪ್ರಾಯವಿದೆ. ಈ ಕಥೆ ಮಾಧ್ಯಮಗಳು ಸೃಷ್ಟಿಸುವ ಹೀರೋಗಳ ಬಗ್ಗೆ, ಪ್ರಚಾರ ವೈಖರಿಯ ಬಗ್ಗೆ, ಅಸೂಯೆಯ ಮನಸ್ಸಿನ ಬಗ್ಗೆ. ಸ್ವಪ್ರಚಾರದ ಬಗ್ಗೆ ಹೇಳುತ್ತಿಲ್ಲ ಎಂದೇ ನನ್ನ ಓದಿನ ತಿಳಿವಾಗಿದೆ. ಇಲ್ಲಿನ ವಿವರ ಮತ್ತು ವರ್ಣನೆಗಳ ಹಾಸುಹೊಕ್ಕಿನ ತುದಿಯಲ್ಲಿ ನಮಗೆ ದೊರಕುವುದು ’ನಿರುಮ್ಮಳ’ ವಾಗಿರುವಿಕೆ ಎಂಬುದೇ ಆಗಿದೆ ಎಂದು ನನ್ನ ಅನಿಸಿಕೆ. ಈ ಕಥೆ ಅದರೊಳಗೇ ತಣ್ಣಗೆ ಕುಳಿತಿರುವ ತಾತ್ವಿಕ ಚಿಂತನೆಯನ್ನು-ನಿರ್ಲಿಪ್ತತೆಯ ಸ್ಥಾಯೀಭಾವವನ್ನು ಪ್ರಚೋದಿಸುತ್ತದೆ ಎಂದು ತಿಳಿಯುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading