ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಲೂರು ಅಂಕಣ: ಇಂಗ್ಲಿಷ್, ಇಂಗ್ಲಂಡ್ ಎಂದಾಗ ನ್ಯೂಟನ್ ನೆನಪಾಗುವುದಿಲ್ಲ

ಚಂದ್ರಶೇಖರ ಆಲೂರು

ಇಂದಿಗೂ ಇಂಗ್ಲಿಷ್, ಇಂಗ್ಲಂಡ್ ಎಂದಾಕ್ಷಣ (ನಾನು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಹೇಳುತ್ತಿಲ್ಲ!) ಮಹಾನ್ ವಿಜ್ಙಾನಿ ನ್ಯೂಟನ್ ಯಾಕೆ ನೆನಪಾಗುವುದಿಲ್ಲ. ಹದಿನೇಳನೆಯ ಶತಮಾನದಲ್ಲಿ ಜನಿಸಿ ಹದಿನೆಂಟನೆಯ ಶತಮಾನದವರೆಗೂ ಬದುಕಿ, ಬಾಳಿ ತನ್ನ ಚಲನೆಯ ನಿಯಮಗಳಿಂದಾಗಿ ಇಂದಿಗೂ ನಮ್ಮೊಂದಿದಿಗಿರುವವನು ನ್ಯೂಟನ್. ಮಹಾಕವಿ ಶೇಕ್ಸ್ಪಿಯರ್ ಅಸ್ತಂಗತನಾದ ಇಪ್ಪತ್ತೈದು ವರ್ಷಗಳ ನಂತರ ಹುಟ್ಟಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ…. ಹೀಗೆ ಒಟ್ಟಾರೆ ಜನಜೀವನವನ್ನು ಗ್ರಹಿಸಲು ನಮಗೆ ನೆರವಾಗುವವನು ಶೇಕ್ಸ್ಪಿಯರ್, ನ್ಯೂಟನ್ ಅಲ್ಲ. ಬಹುಶಃ ಈ ಕಾರಣಕ್ಕೆ ಇಂಗ್ಲಿಷ್ ಎಂದಾಕ್ಷಣ ನಮ್ಮನ್ನು ಶೇಕ್ಸ್ಪಿಯರ್ ಇಡಿಯಾಗಿ ಆವರಿಸುತ್ತಾನೆ.

ಕಳೆದೆರಡು ವಾರದ ಹಿಂದೆ ನಮ್ಮ ಸಾಹಿತಿ ಮಿತ್ರರನೇಕರು ಸಾಹಿತ್ಯದ ಕುಬ್ಜತೆಯ ಬಗ್ಗೆ ಮಾತಾಡುತ್ತಿರುವಾಗ ನನಗೆ ಶೇಕ್ಸ್ಪಿಯರ್ ನೆನಪಾದ.

ಸಾಮಾನ್ಯವಾಗಿ ಸ್ವಮೋಹಿಗಳಾದ ನಮ್ಮ ಸಾಹಿತಿಗಳು ಇದ್ದಕ್ಕಿದ್ದಂತೆ ಆತ್ಮನಿಂದನೆ, ಆತ್ಮಭರ್ತ್ಸನೆಯಲ್ಲಿ ತೊಡಗಿ ಸಾವಿರ ಪ್ರತಿಯೂ ಮಾರಾಟವಾಗದ ಪುಸ್ತಕ ಬರೆಯುವ ನಮ್ಮಂಥ ಸಾಹಿತಿಗಳಿಂದ ಯಾವ ಕನ್ನಡಿಗನ ಉದ್ಧಾರವಾಗುತ್ತದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಆರಂಭಿಸಿದ್ದು ಕುತೂಹಲಕರವಾಗಿತ್ತು. ಇಂಥ ಕೆಲವರು ತಾವೇ ಒಂದು ಊಹಾತ್ಮಕವಾದ ಪ್ರತಿಪಕ್ಷವನ್ನು ನಿರ್ಮಿಸಿಕೊಂಡು ಸಾಹಿತಿಗಳೇ ವಿಶ್ವಕನ್ನಡ ಮೇಳ ಉದ್ಘಾಟನೆ ಮಾಡಬೇಕೆಂಬ ಕಾನೂನು ಎಲ್ಲಿದೆ (ಹಾಗಂತ ಯಾರೂ ಹೇಳಿರಲಿಲ್ಲ!) ಎಂದು ವಾದ ಮಂಡಿಸಿ ಕಡೆಗೆ ‘ಲಕ್ಷಾಂತರ ಕನ್ನಡಿಗರಿಗೆ’ ಕೆಲಸ ನೀಡಿದ ನಾರಾಯಣ ಮೂರ್ತಿಯವರು ಉದ್ಘಾಟಿಸಿದರೆ ಏನು ತಪ್ಪು ಎಂಬಲ್ಲಿಗೆ ಬಂದು ತಲುಪಿದರು.

ಈ ನೆಲದ ಉದ್ಯಮಿಯೊಬ್ಬ ಉದ್ಘಾಟಿಸಿದರೆ ತಪ್ಪೇ ಎನ್ನುತ್ತಿದ್ದವರು ಕೂಡ ನಾರಾಯಣಮೂರ್ತಿ ಐದಾರು ವರ್ಷಗಳ ಹಿಂದೆಯೇ ಬೆಂಗಳೂರನ್ನ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳಿದ್ದರು ಎಂಬುದು ಗೊತ್ತಾಗುತ್ತಿದ್ದಂತೆ ಹಿಂದೇಟು ಹಾಕಿದರು. ಉದ್ಯಮಿ, ವಣಿಕ…. ಯಾರಾದರೂ ಆಗಬಹುದು. ಆತ ಕಡೆಯ ಪಕ್ಷ ಕನ್ನಡದ ಮನಸ್ಸಿನವನಾದರೂ ಆಗಿರಬೇಕು ಎಂಬುದು ನನ್ನಂಥ ಜನಸಾಮಾನ್ಯರ ಅಭಿಪ್ರಾಯವಾಗಿತ್ತು. ಕನ್ನಡದ ಮನಸ್ಸು ಎಂದರೇನು?

ಲೇಖಕಿ ಸುಧಾಮೂರ್ತಿ ಒಂದು ಕಡೆ ಬರೆಯುತ್ತಾರೆ: ಅವರಿಗೆ ಒಮ್ಮೆ ಮಾಜಿ ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಂರಿಂದ ಫೋನ್ ಬರುತ್ತದೆ. ಅವರು “ಸುಧಾಮ್ಮ” ಎಂದು ತಮಿಳಿನಲ್ಲಿ ಮಾತಾಡಲು ಆರಂಭಿಸುತ್ತಾರೆ. ತಮಿಳು ವಾರಪತ್ರಿಕೆ ಒಂದರಲ್ಲಿ ಪ್ರಕಟವಾಗುತ್ತಿದ್ದ ಸುಧಾಮೂರ್ತಿಯವರ ಧಾರಾವಾಹಿ ಕಾದಂಬರಿಯ ಬಗ್ಗೆ ತಮ್ಮ ಸದಭಿಪ್ರಾಯ ತಿಳಿಸಲು ಕಲಾಂ ಫೋನ್ ಮಾಡಿರುತ್ತಾರೆ. ಅವರು ಒಂದೆರಡು ವಾಕ್ಯಗಳನ್ನು ಪೂರೈಸಿದ ನಂತರ ಸುಧಾಮೂರ್ತಿಯವರು ತಮಗೆ ತಮಿಳು ಬರುವುದಿಲ್ಲವೆಂದೂ ಬೇರೊಬ್ಬರು ಅದನ್ನು ತಮಿಳಿಗೆ ತರ್ಜುಮೆ ಮಾಡಿರುವುದಾಗಿಯೂ ತಿಳಿಸುತ್ತಾರೆ.

ಅದು ತಮಿಳು pride. ಈಗಲೂ ಕಲಾಂ ತಮಿಳುನಾಡಿನ ಸಂಸ್ಥೆಗಳಿಗೆ ಹೋದಾಗ ಸಾಮಾನ್ಯವಾಗಿ ತಮಿಳಿನಲ್ಲಿಯೇ ಮಾತನಾಡುತ್ತಾರೆ. ಅವರೊಬ್ಬ ಅಂತಾರಾಷ್ಟ್ರೀಯ ಮನ್ನಣೆ ಪಡೆದ ವಿಜ್ಞಾನಿ, ಬೃಹತ್ ರಾಷ್ಟ್ರವೊಂದರ ಮಾಜಿ ರಾಷ್ಟ್ರಪತಿಯಾದರೂ, ಅವರಿಗೆ ಅವರ ಮಾತೃಭಾಷೆಯ ಬಗೆಗಿನ ಅಭಿಮಾನ ಕಿಂಚಿತ್ತೂ ತಗ್ಗಿಲ್ಲ. ನಾರಾಯಣಮೂರ್ತಿಯವರಿಗೆ ಕನ್ನಡದ ಬಗ್ಗೆ ಇಂಥ pride ಇದೆಯೇ? ಅಕಸ್ಮಾತ್ ಇದ್ದಿದ್ದರೆ, ಕೆಂಪೇಗೌಡನೆಂಬ ಹಳ್ಳಿಗ ದೂರದೃಷ್ಠಿಯಿಂದ ಕಟ್ಟಿದ, ಕರ್ನಾಟಕದ ಅಪ್ಪಟ ದೇಸಿ ನಗರದಲ್ಲಿ ಒಂದಾದ ಬೆಂಗಳೂರು ಕೇಂದ್ರಾಡಳಿತಕ್ಕೆ ಒಳಪಡಲಿ ಎನ್ನುತ್ತಿದ್ದರೇ? ಈ ಸಂದರ್ಭದಲ್ಲಿ ನಾಲ್ಕು ವರ್ಷಗಳ ಹಿಂದೆ ಇದೇ ಅಂಕಣದಲ್ಲಿ ಇನ್ಫೋಸಿಸ್ ನ ಭೂ ದಾಹವನ್ನು ಕುರಿತು ಬರೆದ ಬರಹ ‘ನಾರಾಯಣಮೂರ್ತಿ  ಫೋಟೋ ಇಕ್ಕೊಂಡು ಪೂಜೆ ಮಾಡ್ಬೇಕು’ ನೆನಪಾಗುತ್ತಿದೆ. ಈ ಸಂದರ್ಭಕ್ಕೂ ಪ್ರಸ್ತುತವಾಗಿರುವುದರಿಂದ ಅದರ ಆಯ್ದ ಭಾಗವನ್ನು ಇಲ್ಲಿ ಕೊಡುತ್ತಿದ್ದೇನೆ: 2006-2007 ರ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್ ನಾಲ್ಕು ಸಾವಿರ ಕೋಟಿ ರುಪಾಯಿ ಲಾಭಗಳಿಸಲಿದೆ ಎಂದು ನುಡಿದು…

…ಮುಂದೆ ಟಿ. ಎ. ಮೋಹನ್ ದಾಸ್ ಪೈ ಹೇಳಿಕೊಂಡಿದ್ದರು. ಬೆಂಗಳೂರಿನ ಬಳಿ 845 ಎಕರೆ ಜಮೀನು ಮಂಜೂರು ಮಾಡಲು ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷಗಳಾಗವು. KIADB ಅದಕ್ಕೆ ಪ್ರತಿಕ್ರಿಯಿಸಿಲ್ಲ. ಸುಮಾರು 25,000 ಉದ್ಯೋಗಿಗಳಿಗೆ ಉದ್ಯೋಗ- ವಸತಿ ಒದಗಿಸಬಲ್ಲಂಥ Software Develop Centre ನಿರ್ಮಿಸಬೇಕು ಅಂದುಕೊಂಡಿದ್ದೆವು. ಅದಕ್ಕೆ ಹಿನ್ನಡೆಯಾಗಿದೆ.

ಇನ್ ಫೋಸಿಸ್ ಗೆ 845 ಎಕರೆ ಜಮೀನು ಯಾಕೆ ಬೇಕು? ಅದೇನು ಹಡಗು ಕಟ್ಟುವ ಯಾರ್ಡ್ (Ship building yard ) ಅಥವಾ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪಿಸುವುದೇ? ಇಂದಿನ ಆಧುನಿಕ ತಂತ್ರಜ್ಙಾನದ ಯುಗದಲ್ಲಿ ಕೇವಲ 45  ಎಕರೆ ಜಾಗದಲ್ಲಿ ಸುಮಾರು 50 ,000 ಉದ್ಯೋಗಿಗಳಿಗೆ ಕೆಲಸ ಮಾಡಬಲ್ಲಂಥ ಅದ್ಭುತವಾದ ವಾತಾವರಣವನ್ನು, ಕಚೇರಿಯನ್ನೂ ಸೃಷ್ಟಿಸಬಹುದಾಗಿದೆ. ಈ ಪ್ರಶ್ನೆ ಬರುತ್ತದೆ ಎಂದೇ ಇನ್ ಫೋಸಿಸ್ ಉದ್ಯೋಗಿಗಳಿಗೆ ವಸತಿ ಕಲ್ಪಿಸುವ ಮಾತಾಡಿದೆ. ಇನ್ ಫೋಸಿಸ್, ವಿಪ್ರೊದಂತಹ ಐ. ಟಿ. ಸಂಸ್ಥೆಗಳು ಕೆಲವು ರಸ್ತೆ ನಿರ್ಮಿಸಿಕೊಳ್ಳಬಹುದು ಎಂಬ  ಸೂಚನೆ ಸರ್ಕಾರದಿಂದ ಬಂದಾಗ ನಾರಾಯಣಮೂರ್ತಿಯವರು ವ್ಯಂಗ್ಯವಾಗಿ “ರಸ್ತೆ ಮಾಡುವುದು ಇನ್ ಫೋಸಿಸ್ ಕೆಲಸವಲ್ಲ, ನಮ್ಮದು ಐ. ಟಿ. ಕಂಪನಿ, road building corporation ಅಲ್ಲ” ಅಂದಿದ್ದರು. ನಿಜ. ಉದ್ಯೋಗಿಗಳಿಗೆ ಮನೆ ಕಟ್ಟಿಕೊಡುವುದು ಕೂಡಾ ಐ. ಟಿ. ಕಂಪನಿಯ ಕೆಲಸವಿರಲಾರದು! ಉದ್ಯೋಗಿಗಳಿಗೆ quarters ಕಟ್ಟಿದ ಸಾರ್ವಜನಿಕ ಉದ್ದಿಮೆಗಳೆಲ್ಲ ಒಂದೊಂದಾಗಿ ಮುಳುಗುತ್ತಿವೆ!

ಇಂದು ಬಹುತೇಕ ಕೆಲಸಗಾರರಿಗೆ ತಾವು ದುಡಿಯುವ ಸಂಸ್ಥೆಗಳ ಬಗೆಗೆ ಭಾವನಾತ್ಮಕ ಬೆಸುಗೆ ಇಲ್ಲ. ಭಾರತದಲ್ಲಿಯಂತೂ ಈ ಬೆಳವಣಿಗೆಗೆ ಐ. ಟಿ ಕಂಪನಿಗಳೇ ಕಾರಣ. ಹಣವೇ ಸರ್ವ ಸಮರ್ಥ ಎಂಬುದೇ ಆಧುನಿಕ ಮಂತ್ರ. ಬಹುಶಃ ಒಂದು ಕಾಲದಲ್ಲಿ ಇನ್ ಪೋಸಿಸ್ ಸ ನಂದನ್ ನಿಲೇಕಣಿ, ಮೋಹನ್ ದಾಸ್ ಪೈ ಮುಂತಾದವರಿಗೆ ಟಾಟಾ, ಬಿರ್ಲಾ, ರಿಲಯನ್ಸ್ ಸಂಸ್ಥೆಗಳಲ್ಲಿ ನಿಷ್ಠೆಯಿಂದ ದುಡಿಯುವ ಉದ್ಯೊಗಿಗಳು ‘ out of  fashion’ ಆಗಿ ಕಾಣುತ್ತಿದ್ದರು.

ನಾನು ಮೇಲೆ ತಿಳಿಸಿದ ಸಂದರ್ಭದಲ್ಲಿಯೇ ನಿಲೇಕಣಿ ತುಂಬಾ ನೋವಿನಿಂದ ಒಂದು ಸತ್ಯ ಸಂಗತಿಯನ್ನು ಹೇಳಿದ್ದಾರೆ: ” ಈಚಿನ ಎರಡು ವರ್ಷಗಳಲ್ಲಿ ಇನ್ ಫೋಸಿಸ್ ಗೆ ಸೇರಿದ ಯುವಕರು ತುಂಬಾ restless ಆಗಿದ್ದಾರೆ. ಕಾರ್ಪೋರೆಟ್  ಏಣಿಯ ಮೆಟ್ಟಿಲುಗಳನ್ನು ಹಾರುತ್ತಾ ಮೇಲೇರುವ ತವಕ ಅವರದ್ದು. ಹಿಂದೆ ನಾವೆಲ್ಲ ಒಂದು ಸಂಸ್ಥೆಯಲ್ಲಿ ನೆಲೆನಿಂತು ನಿಧಾನವಾಗಿ ಅರಿತುಕೊಂಡು ಹಂತ ಹಂತವಾಗಿ ಮೇಲೇರುವ ಯತ್ನ ಮಾಡಿದ್ದೇವೆ.

(ಇದೇ ಮಾತನ್ನು ನಾರಾಯಣ ಮೂರ್ತಿ ತಮ್ಮ ಉದ್ಘಾಟನಾ ಭಾಷಣದಲ್ಲಿಯೂ ಹೇಳಿದ್ದಾರೆ) ಆದರೆ ಇಂದಿನ ಯುವಕರಲ್ಲಿ ಕಲಿಯುವ ಆಸ್ಥೆ ಕಿಂಚಿತ್ತೂ ಇಲ್ಲ… “These youngsters show absolutely no inclination to learn”. ಬೇವು ಬಿತ್ತಿ ಮಾವನ್ನು ನಿರೀಕ್ಷಿಸಬಾರದು. ಅಲ್ಲದೆ ಇಂಥ ಜಂಗಮರಿಗೆ, ವೇಗಿಗಳಿಗೆ ಮನೆ ಏಕೆ ನಿಲೇಕಣಿ?

ಇದಾದ ಕೆಲವು ದಿನಕ್ಕೆ ರಿಯಲ್ ಎಸ್ಟೇಟ್ ನ ಐನಾತಿ ಆಸಾಮಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎಂಬ ಸಚಿವರು ಬೆಂಳೂರಿನ ಐವತ್ತು ಕಿಮೀ ಸುತ್ತಳತೆಯಲ್ಲಿ ಎಲ್ಲೂ ಜಮೀನು ಕೊಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಇನ್ ಫೋಸಿಸ್ ನ ಪೈ ಪರವಾಗಿಲ್ಲ, ಐವತ್ತು ಕಿಮೀ ಆದ ಮೇಲೆ ಕೊಡಿ ಎಂದು ಗೋಗರೆದರು.

ಬಹುಶಃ ಬ್ರೋಕರ್ ಗಳು ಈಗ ಚನ್ನಪಟ್ಟಣದ ಕಣ್ವ ಬಯಲನ್ನೋ, ರಾಮನಗರದ ಹೆಬ್ಬಂಡೆಗಳನ್ನೋ ತೋರುತ್ತಾ ಇಲ್ಲಿ ಇನ್ಫೋಸಿಸ್ ಗೆ ಜಾಗ ಮಂಜೂರಾಗಿದೆ ಎಂದು ಹೇಳಿ ವ್ಯಾಪಾರ ಕುದುರಿಸುತ್ತಿರಬಹುದು!

ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆ ಎಂಬಂತೆ ಈ ಎಲ್ಲಕ್ಕೂ ನಾರಾಯಣಮೂರ್ತಿಯವರನ್ನು ದೂಷಿಸುವುದು, ಅವರತ್ತ ಬೆರಳು ಮಾಡಿತೋರುವುದು ಸರಿಯಲ್ಲ. ಅವರ ಉದ್ದೇಶ ಸಾಧುವಾದದ್ದೇ ಇರಬಹುದು. ಆದರೆ ಇದರಿಂದ ಏನಾಗುತ್ತದೆಂದರೆ ನಮ್ಮಭ್ರಷ್ಟ ಸರ್ಕಾರಗಳು ಇನ್ ಫೋಸಿಸ್ ನೆಪದಲ್ಲಿ ನೂರಾರು ಕಂಪನಿಗಳಿಗೆ ಸದ್ದಿಲ್ಲದೆ ಕನ್ನಡ ನೆಲವನ್ನು ಹರಾಜು ಹಾಕಿ ಬಿಡುತ್ತದೆ. ನಾರಾಯಣಮೂರ್ತಿಯವರು ಇಂಥದೊಂದು ಅನ್ಯಾಯಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ನಾವೆಲ್ಲ ತಿಳಿದಂತೆ ಈಗ ಬೆಂಗಳೂರು-ಮೈಸೂರು ಸುತ್ತಮುತ್ತ ಕ್ರಷಿಯೇತರ ಭೂಮಿ ಇರುವುದು ಬಹು ಕಮ್ಮಿ. ಇಂಥ ದೈತ್ಯ ಕಂಪನಿಗಳಿಗೆ ಸರ್ಕಾರ ಕೃಷಿ ಭೂಮಿಯನ್ನೇ ವಶಪಡಿಸಿಕೊಂಡು ಕೊಡಬೇಕಾಗುತ್ತದೆ.

ಮತ್ತೆ ನಾಲ್ವಡಿ ಕೃಷ್ಣರಾಜ ಒಡೆಯರ್ ರ ನೆನಪಾಗುತ್ತದೆ. ನಾಲ್ವಡಿ ಮಣ್ಣಿನ ಮಕ್ಕಳ ಹಿತ ಕಾಪಾಡಲು ತಮ್ಮ ಖಾಸಗಿ ಭಂಡಾರದಲ್ಲಿದ್ದ ವಜ್ರ ವೈಡೂರ್ಯಗಳನ್ನು ಮಾರಿದರು, ಅಂದಿನ ಮಹಾರಾಜರು. ದಿನಕ್ಕೆ ಹತ್ತು ಕೋಟಿ ಲಾಭಗಳಿಸುವ ಆಧುನಿಕ ಮಹಾರಾಜರು ಪ್ರತಿ ಮೂರು ತಿಂಗಳಿಗೊಮ್ಮೆ ಭೂಮಿ ಬೇಡುತ್ತಾರೆ.

ಸರ್. ಎಂ. ವಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರಂಥವರು ಹಚ್ಚಿದ ನಂದಾದೀಪವನ್ನು ಇವರು ನಂದಿಸಲಿ ಹೊರಟ್ಟದ್ದಾರೆಯೇ ಎಂಬ ಆತಂಕವಾಗುತ್ತದೆ.

ಇದನ್ನು ಮತ್ತೆ ಇಷ್ಟೊಂದು ವಿವರವಾಗಿ ಪ್ರಸ್ತಾಪಿಸುವುದಕ್ಕೆ ಕಾರಣವಿದೆ. ಎಷ್ಟೆಂದರೂ ನಾರಾಯಣಮೂರ್ತಿ  ಒಬ್ಬ ಅಪ್ಪಟ ವಣಿಕ. ವಾಣಿಜ್ಯ ಅಂದರೆ ವ್ಯಾಪಾರವೇ ಅವರ ಧರ್ಮ, ಭಾಷೆ ಮತ್ತು ಸಂಸ್ಕೃತಿ.

***

ಸಾಹಿತ್ಯ, ಸಂಗೀತ, ಕಲೆಯನ್ನು ಹೊರತುಪಡಿಸಿ ಅನ್ಯ ಕ್ಷೇತ್ರದವರಿಗೆ ಇಂಥ ಗುರುತರ ಜವಾಬ್ದಾರಿ ಹೊರಿಸಬೇಕೆಂಬ ಇಚ್ಛೆ ಸರ್ಕಾರಕ್ಕೆ ಇದ್ದಿದ್ದರೆ ಅದು ಖ್ಯಾತ ವಿಜ್ಞಾನಿ ಡಾ. ಸಿ. ಎನ್. ಆರ್. ರಾವ್ ಅವರನ್ನು ಆಯ್ಕೆ ಮಾಡಬಹುದಿತ್ತು. ರಾವ್ ಎಷ್ಟು ಸೊಗಸಾಗಿ ಸ್ಫುಟವಾಗಿ ಕನ್ನಡ ಮಾತಾಡುತ್ತಾರೆಂದರೆ, ಹತ್ತು ನಿಮಿಷ ಅವರ ಮಾತು ಕೇಳಿದರೆ ನನ್ನಂಥವನಿಗೇ ನನ್ನ ಕನ್ನಡದ ಬಗ್ಗೆ ಕೀಳರಿಮೆ ಮೂಡುತ್ತದೆ. ವೈಜ್ಙಾನಿಕ ಸಂಗತಿಗಳನ್ನ ಕೂಡ ಅತ್ಯಂತ ಸರಳ, ಸುಂದರ ಕನ್ನಡದಲ್ಲಿ ಬಣ್ಣಿಸುವ ಸಾಮಥ್ರ್ಯ ಅವರದ್ದು. ತನ್ನ ಭಾಷೆಯ ಬಗ್ಗೆ ಅಂಥ ಅನುರಾಗ, ಹೆಮ್ಮೆ ಇಲ್ಲದಿದ್ದರೆ ಹಾಗೆ ಮಾತಾಡುವುದು ಸಾಧ್ಯವಾಗುವುದಿಲ್ಲ.

***

ಇಷ್ಡಾಗಿಯೂ ಒಂದು ರಾಜ್ಯದ ಭಾಷೆ, ಸಾಹಿತ್ಯ, ಸಂಸ್ಕೃತಿಯ ವಿಚಾರ ಬಂದಾಗ (ಕಳೆದ ವಾರ ರವಿಯವರು ಬರೆದಿರುವಂತೆ) ಇಂಥ ಮೇಳಗಳಲ್ಲಿ ಸಹಜವಾಗಿಯೇ ಅಗ್ರಸ್ಥಾನ ಸಲ್ಲಬೇಕಾದುದು ಕಲಾಕಾರರಿಗೆ. ಆತ ಶಿಲ್ಪಿ ಇರಬಹುದು, ಕುಂಚ ಹಿಡಿದ ಕಲಾವಿದನಿರಬಹುದು, ಲೇಖಕನಿರಬಹುದು ಅಥವಾ ನಟ-ನಟಿ, ಗಾಯಕ, ಗಾಯಕಿಯರಿರಬಹುದು. ಯಾಕೆಂದರೆ ಇಂದಿಗೂ ಇಂಗ್ಲಿಷ್, ಇಂಗ್ಲಂಡ್ ಎಂದಾ ಕ್ಷಣ ನೆನಪಾಗುವವನು ವಿಲೆಯಂ ಶೇಕ್ಸ್ಪಿಯರ್!

‍ಲೇಖಕರು G

18 March, 2011

11 Comments

  1. ಸಂದೀಪ್ ಕಾಮತ್

    ಶಿಲ್ಪಿ , ನಟ ನಟಿ ,ಗಾಯಕ ಗಾಯಕಿಯರೂ ವಣಿಕರೇ. ಇವತ್ತಿನ ಪೇಪರ್ ನಲ್ಲಿ ಬಂದಿತ್ತು ಕಲಾವಿದರಿಗೆ ಸರಿಯಾಗಿ ಸಂಭಾವನೆ ಸಿಕ್ಕಿಲ್ಲ ,ಯಾರೋ ಎಲ್ಲೋ ಗುಳುಂ ಮಾಡಿದ್ದಾರೆ ಅಂತ. ಕಾಸಿದ್ದೋನೆ ಬಾಸು . ಕಲಾ ಸೇವೆ ಅಂತ ಕೊಟ್ಟಿದ್ದು ಇಸ್ಕೊಂಡು ಹೋಗ್ತಾರಾ ಯಾರಾದ್ರೂ ?

  2. abburprakash

    ಮತ್ತದೇ ಆತ್ಮರತಿ ಅಲ್ವ ,ಸಾಹಿತಿ ,ಕಲಾಕಾರರದು ,ಹೊರಟಲ್ಲಿಗೇ ಬರುತ್ತಿದ್ದೀರಿ!

  3. Vasanth

    Excellent article. Those who have supported Infi NR must read this article. Some of our great writer (they produce books every fortnightly and write novels in weeks) must understand the importance of cultural icons.

  4. Sudha ChidanandaGowda.

    sir, nimma anisiskegalu ella bareyuva manasugala anisakeyagiddare eshtu chennagittu?! aadare adaaguttilla. samsakrutiya parikalpaneye badalaguttide- kaige sikkadde aane anno hage.saavira pratigala lekkachaarave hali tappide. ondu pratiyannu obbane odiralla- adu bouddikavagi haradutta hogiruttade emba sanna sangatiyannu kuuda vivarisabekada dourbhagya kannada barahagaararige barabaaradaagituu.
    shakespearnannu nenedaddu khushiyaayitu sir. carry on.
    Sudha chidanandagowda.

    • chandrualur

      naanantu kannada sahithi,nata natiyara svattu yendu baredilla.why u r trying to put your words in my mouth.idanne naanu oohatmaka prathi paksha yendu karediruvudu

      • Sudha ChidanandaGowda.

        Sir , this reply is for Malavika. I am sure. Why have you posted this in my reply box?

        • chandrualur

          that was meant for malavika only.

  5. malavika

    ಕನ್ನಡ ಸಾಹಿತಿ, ನಟ,ನಟಿಯರ ಸೊತ್ತಲ್ಲ…. ಇಂದು ಕನ್ನಡ ಚಿತ್ರೋದ್ಯಮದಲ್ಲಿ ಎಷ್ಟು ಅಪ್ಪಟ ಕನ್ನಡ ನಟಿಯರಿದ್ದಾರೆ? ೯೦% ಗಿಂತಲೂ ಅಧಿಕ ಹೊರ ರಾಜ್ಯದವರೇ.
    ಇಂಥ ನಟಿಯರಿಗಿಂತ ನಾರಾಯಣಮೂರ್ತಿಗಳೇ ವಾಸಿ ಅಲ್ಲವೇ?

  6. H.LAKSHMANA RAO

    NIMMA MAATU NIJA HAAGU SATYA.

  7. ssrao

    Infy Nararayana murthy kannadakkaagi enu maadiddaare ennuva prashne bahala haleyadu. Neevu eega kelabekiruvadu karnataka avarigaagi enella madide endu. eega duddillade yavodoo illa. allave?
    Rao.

  8. ಶಮ, ನಂದಿಬೆಟ್ಟ

    “ತನ್ನ ಭಾಷೆಯ ಬಗ್ಗೆ ಅಂಥ ಅನುರಾಗ, ಹೆಮ್ಮೆ ಇಲ್ಲದಿದ್ದರೆ ಹಾಗೆ ಮಾತಾಡುವುದು ಸಾಧ್ಯವಾಗುವುದಿಲ್ಲ.” – ನಿಜ ಸರ್.

    ಇಂಗ್ಲಿಷ್ ವ್ಯಾಮೋಹದ ಇಂದಿನ ದಿನಗಳಲ್ಲೂ ಮಗಳು ಸೊಗಸಾದ ಕನ್ನಡ ಮಾತಾಡುವುದು ನನ್ನ ಖುಷಿ ಮತ್ತು ಹೆಮ್ಮೆ. ಭಾಷೆಯ ಬಗ್ಗೆ ಅನುರಾಗ ಹೆಮ್ಮ ಎರಡೂ ಇರಲೇ ಬೇಕು. ಆವಾಗಷ್ಟೇ ನಾವದನ್ನು ಮುಂದಿನ ಜನಾಂಗಕ್ಕೂ ದಾಟಿಸಲು ಸಾಧ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading