ನಾನು ಪಿಯುಸಿ ಫೇಲಾಗಿ ನನ್ನೊಳಗೆ ಪಿಯುಸಿ ಪಾಸುಮಾಡುವ, ಕತೆ ಕವನ ಬರೆಯುವ ಆಸೆ ಇಟ್ಟುಕೊಂಡು ಅಲೆದಾಡುತ್ತಿದ್ದಾಗ ಆಗಲೇ ಶ್ರೀಕೃಷ್ಣ ಆಲನಹಳ್ಳಿಯವರ ಹೆಸರು ಕರ್ನಾಟಕದ ತುಂಬಾ ಮೆರೆದಾಡುತ್ತಿತ್ತು. ಹಾಗೂ ಹೀಗೂ ಪರಿಚಯವಾಗಿ ಮೊದಲ ಭೇಟಿಯಲ್ಲೆ ಆಲನಹಳ್ಳಿ ನನ್ನನ್ನು ತನ್ನ ತಮ್ಮನಂತೆ ಕಂಡರು.
ಮೈಸೂರಿಗೆ ಬಂದಾಗ ಉಳಿದುಕೊಳ್ಳಲು ಅವರ ರೂಮು ಆಯ್ತು. ಮಹಾರಾಜ ಕಾಲೇಜಿಗೆ ಸೇರಿದಾಗ ಕೆಲಕಾಲ ಗುರುವೂ ಆದರು. ಲಾ ಸೇರಬೇಕೆಂದಿದ್ದ ನನ್ನನ್ನು ಕನ್ನಡ ಎಂಎಗೆ ಒತ್ತಾಯಿಸಿ ಸೇರಿಸಿದರು. ಆಲನಹಳ್ಳಿ ಇಸ್ಪೀಟು ಆಡುವಾಗ, ಅಶುಭ ಅಂತ ಯಾರಿಗೂ ಕಾಸನ್ನು ಎಂಥ ಪರಿಸ್ಥಿತಿಯಲ್ಲೂ ಕೈ ಎತ್ತಿ ಕೊಡುತ್ತಿರಲಿಲ್ಲ. ಇಸ್ಪೀಟನ್ನು ನೋಡುತ್ತಾ ಕೂರುತ್ತಿದ್ದ ನನಗೆ ಆಗಾಗ ತಮ್ಮ ಧರ್ಮ ಸಾಯಿಸಿ ಕಾಸನ್ನೂ ಕೊಡುತ್ತಿದ್ದರು. ಸಿಐಐಎಲ್ನಲ್ಲಿ ಇಬ್ಬರಿಗೂ ಜೊತೆಗೇ ಕೆಲಸ ಸಿಕ್ಕಿ ಸಹೊದ್ಯೋಗಿಗಳೂ ಆದೆವು. ಹೀಗೆ ಒಡನಾಟ ಇದ್ದು ಆಲನಹಳ್ಳಿ ತೀರಿಕೊಂಡಾಗ ‘ನನ್ನ ಪಿಪ್ಟಿ ಇಲ್ಲವಾಯ್ತು’ ಅಂದೆ.
ಆಲನಹಳ್ಳಿಯ ತೋಟ ಮಾಡುವ, ವಿಸ್ತರಿಸುವ ಮಹತ್ವಾಕಾಂಕ್ಷೆಯು ಉತ್ಸಾಹದ ಚಿಲುಮೆ ಆಲನಹಳ್ಳಿಯನ್ನು ಹೆಚ್ಚು ಜರ್ಜರಿತಗೊಳಿಸಿತು.ಆಗಾಗ ಆ ತೋಟಕ್ಕೆ ನಾನೂ ಜೊತೆಯಲ್ಲೇ ಹೋಗುತ್ತಿದ್ದೆ.ಅಲ್ಲಿ ಆಲನಹಳ್ಳಿ ತಳ ಸಮುದಾಯಕ್ಕೆ ಸೇರಿದ ಕೆಲಸಗಾರರನ್ನು ‘ಲೋ ಬಾರ್ಲಾ’, ‘ಲೇ ಬಾರಮ್ಮಿ’ ಎಂದು ಮಾತಾಡಿಸುತ್ತಿದ್ದುದು ಮಾತ್ರ ನನಗೆ ಭಜರ್ಿಯಲ್ಲಿ ತಿವಿದಂತಾಗುತ್ತಿತ್ತು.ನಾನು ತಡೆದೂ ತಡೆದೂ ತಡೆಯಲಾರದೆ ಒಂದು ದಿನ ‘ಹಿಂಗೆಲ್ಲ ಮಾತಾಡ್ಸದು ಸರೀನಾ?’ಅಂದೆ.ಅದಕ್ಕೆ ಆಲನಹಳ್ಳಿ ಗಹಗಹಿಸಿ ನಕ್ಕು ‘ಅದ್ಕೆ ಮಾದೇವ, ನಿನಗೆ ಏನೂ ಗೊತ್ತಾಗಲ್ಲ ಅನ್ನದು.ನಾನು ಹಾಗೆ ಮಾತಾಡಿಸದೇ ಇದ್ದರೆ ಅವ್ರು ಬೇಜಾರು ಮಾಡ್ಕಬುಡ್ತರೆ.ನಿನಗೆ ಹಳ್ಳೀನೆ ಗೊತ್ತಿಲ್ಲ’ ಅಂದರು.ಆಲನಹಳ್ಳಿ ಹೀಗೆ ಅಂದಿದ್ದರೂ ಅವರ ಒಳಗೆ ಜಾತಿ ಸೋಂಕಿಲ್ಲ ಎಂಬುದರ ಅರಿವಿತ್ತು.
ಹೀಗೆ ಆಗ್ತಾ ಒಂದು ದಿನ ಆಲನಹಳ್ಳಿ ಗಂಟಲಲ್ಲಿ ಏನನ್ನೊ ಇಟ್ಟುಕೊಂಡು ನುಂಗಕ್ಕೂ ಆಗ್ತಾ ಇಲ್ಲ ಉಗಿಯಾಕೂ ಆಗ್ತಾ ಇಲ್ಲ ಎಂಬಂತೆ ಇದ್ದರು.ಏನು ಸಮಾಚಾರ ಅಂದೆ.ಏನೂ ಇಲ್ಲ ಅಂತ ಮಾತು ಮರೆಸಿದರು. ಹೇಳಕೂ ಆಗ್ದೆ ಬಿಡಕೂ ಆಗ್ದೆ ಒದ್ದಾಡುತ್ತಿದ್ದ ಆಲನಹಳ್ಳಿ ಎಷ್ಟು ಕಾಲ ತಾನೇ ತಡೆದುಕೊಂಡಾರು?ನಿಧಾನಕ್ಕೆ ಬಾಯಿಬಿಟ್ಟರು.’ನೆನ್ನೆ ಮುಖ್ಯಮಂತ್ರಿ ಅರಸು ಅವರ ಮನೆಗೆ ಹೋಗಿದ್ದೆ. ನನ್ನನ್ನು ನೋಡಿ ಫುಲ್ ಖುಷಿಯಾಗಿ ಬಿಟ್ಟರು’ ಎಂದು ಹೇಳಿ ನನ್ನ ಕಡೆಗೊಮ್ಮೆ ನೋಡಿ ಅವರೇ ಮಾತು ಮುಂದುವರಿಸಿದರು-
‘ಆಮೇಲೆ ಅವರಿಗಿಂತಲೂ ಹೆಚ್ಚು ಖುಷಿಯಾದ್ದು ಯಾರಿಗೆ ಗೊತ್ತಾ?ಮುಖ್ಯಮಂತ್ರಿ ಅರಸು ಅವರ ಮಗಳಿಗೆ! ಆಲನಹಳ್ಳಿ ಕೃಷ್ಣ ಬಂದವರೆ ಎಂದು ಗೊತ್ತಾದ್ದೇ ತಡ, ಆ ತಿಂಡಿ ಏನು ಆ ಡ್ರಿಂಕ್ಸ್ ಏನು?’ ಎಂದು ಹೇಳಿ ಆಮೇಲೆ-
‘ಆಮೇಲೆ ಇನ್ನೊಂದು ಗೊತ್ತಾ? ನಾನು ಬರೆದಿರೋದ ಎಲ್ಲಾ ಓದವರೆ ಮುಖ್ಯಮಂತ್ರಿ ಮಗಳು!ನನಗೆ ಆಶ್ಚರ್ಯ ಆಯ್ತು!’
ಇದನ್ನು ಹೇಳಿದ ಮೇಲೆ ತಮ್ಮ ಮಾತಿನ ಓಟಕ್ಕೆ ಒಂದು ಪಾಸ್ ಕೊಟ್ಟು ಮುಂದುವರೆಸಿದಿರು.
‘ಆದರೆ ಅರಸು ಮಗಳು ಒಂದು ತಪ್ಪು ಮಾಡಿಬಿಟ್ಟಳು.ಅದೇ ನಾನು ಅವರ ಮನೆಗೆ ಬಂದ ಖುಷಿಗೆ ಓಡೋಗಿ ಅವರ ತಾಯಿನ ಕರ್ಕಂಬಂದ್ಬುಟ್ರು…’
‘ಅದರಲ್ಲೇನು ತಪ್ಪು’ ಅಂದೆ.
‘ಆದ್ರೆ ಮಾದೇವ ಹೇಳ್ತೀನಿ- ಅರಸು ಹೆಂಡ್ತಿಯಂತು ಫುಲ್ ಅನಕಲ್ಚರ್ಡ್ ಲೇಡಿ, ಅನಾಗರಿಕಳು’
ಅರ್ಥವಾಗದೆ ಆಲನಹಳ್ಳಿ ಮುಖ ನೋಡಿದೆ.ಅವರ ಮುಖದಲ್ಲಿ ದುಮ್ಮಾನವಿತ್ತು. ಆಲನಹಳ್ಳಿ ಮಾತನ್ನು ತಡೆದೂ ತಡೆದು ಹೇಳತೊಡಗಿದರು-
ಕೇಳಿದರೆ… ನಿಂಗೂ ಬೇಜಾರಾಗುತ್ತೆ.ಅರಸು ಮಗಳು ತನ್ನ ತಾಯಿಗೆ ‘ಅಮ್ಮಾ ಇವರೇ ಆಲನಹಳ್ಳಿ ಕೃಷ್ಣ. ಸಿಕ್ಕಾಬಟ್ಟೆ ದೊಡ್ಡ ಕವಿ’ ಅಂತ ಪರಿಚಯ ಮಾಡಿಕೊಟ್ಟರೆ ಅದಕ್ಕೆ ಅರಸು ಹೆಂಡ್ತಿ ‘ಯಾರಯ್ಯ ಅಲ್ಲಿ ನೀನು…? ಅಲ್ಲಿ ಯಾರೊ ಎತ್ತೇಗೌಡ್ನೊ ಏನೋ ಅಂತ ಇದ್ನಲ್ಲಾ…?ಅವನ ಮೊಮ್ಮಗನ್ಯೆ?’ಅಂತ ಕೇಳಿ ಬಿಡುವುದೆ?
ಆಲನಹಳ್ಳಿಗೆ ಮುಂದಕ್ಕೆ ಮಾತಾಡಲು ಕಷ್ಟವಾಗುತ್ತಿತ್ತು.ಆಲನಹಳ್ಳಿ ದುಃಖಿತರಾಗಿದ್ದರು.ನಾನು ನನ್ನ ಸುಖ ಹಂಚಿಕೊಳ್ಳಲು ‘ಇದಕ್ಕೆ ಯಾಕೆ ಬೇಜಾರು?ಆ ರೀತಿ ಮಾತಾಡದಿದ್ದರೆ ನಿಮಗೆ ಬೇಜಾರು ಆಗಬಹುದು ಅಂತ ಅರಸು ಪತ್ನಿ ಆ ರೀತಿ ಮಾತಾಡಿರಬಹುದು!’ಅಂದೆ. ಆಲನಹಳ್ಳಿಗೆ ಅರ್ಥವಾಗದೇ ಇದ್ದುದು ಅರ್ಥವಾಗತೊಡಗಿದೆ ಅನ್ನಿಸತೊಡಗಿತು.
neevu heliddu poorthi sari iralaradu.alanahalli,thejaswi,k t shivaprsad munthadavara alochane arasu hendathiya alochane onde iralaradu..
chenda nimma nenapugalu ..:)