ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಾನು ಧನ್ಯಳು…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

23

ಭರತವಾಕ್ಯ -ಲೇಖಕಿ

ಈ ಹೊತ್ತಿಗೆ ತೆರೆದು ತೋರುವಂತೆ, ಒಂದು ಶತಮಾನದಷ್ಟು ದೀರ್ಘವಾದ ಕಾಲದ ಬೀಸಿನಲ್ಲೂ ಕೂಡ ಶ್ರೀಕಂಠನ್ ರವರಂತಹ ಬಹಳ ಜನರನ್ನು ಕಾಣುವುದು ಅಸಾಧ್ಯ. ಶ್ರೀಕಂಠನ್ ಬಾಳಿದಂತೆ ಬಾಳಲು, ಹಾಡಿದಂತೆ ಹಾಡಲು ಅನುವು ಮಾಡಿಕೊಟ್ಟ ಅವರ ಗತಿಶೀಲ ಗುಣಗಳೇ ನನ್ನನ್ನು, ಕರ್ನಾಟಕ ಸಂಗೀತದ ನಾಯಕರಾದ ಅವರ ಜೀವನಚರಿತ್ರೆಯನ್ನು ಬರೆಯುವ ಯೋಜನೆಯತ್ತ ಸೂಜಿಗಲ್ಲಿನಂತೆ ಸೆಳೆದದ್ದು.  

ವಿಶೇಷ ಪರಿಣತಿಯನ್ನು ಅಪೇಕ್ಷಿಸುವ ಇತರ ಕ್ಷೇತ್ರಗಳಂತೆ ಸಂಗೀತದಲ್ಲೂ ಉತ್ತುಂಗದಲ್ಲಿ ಉಳಿಯುವುದು ಆ ಔನ್ನತ್ಯಕ್ಕೇರುವುದಕ್ಕಿಂತ ದುಷ್ಕರವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. ಶಿಖರಾಗ್ರದಲ್ಲಿ ಹೆಚ್ಚು ಕಾಲ ಉಳಿದಷ್ಟೂ ಸಾಧನೆಗೆ ಹೆಚ್ಚು ಮೌಲ್ಯ ದೊರೆಯುತ್ತದೆ. ಶೃಂಗಕ್ಕೇರಿದ ಮೇಲೂ ತೊಂಭತ್ತು ಮೀರಿದ ವಯೋಮಾನದ ಶ್ರೀಕಂಠನ್ ಅಲ್ಲೇ ನೆಲಸಿದ್ದವರು. ಅವರು ಸಾಧಿಸಿರುವ ವಿಕ್ರಮ ಮತ್ತು ಯಶಸ್ಸು ಇಂಥದ್ದು. ಶ್ರೀಕಂಠನ್ ರವರು ತಮ್ಮ ಜೀವದಲ್ಲಿ ಗೈದಿರುವ ಸಾಧನೆ, ಸಂಗೀತ ಎನ್ನುವ ಶ್ರದ್ಧಾಸಮನ್ವಿತವಾದ ಉಪಾಸನೆಯೊಡನೆ ಎಂದಿಗೂ ಬೇರ್ಪಡದಂತೆ ಬೆಸೆದುಕೊಂಡಿರುವ ದೃಢನಂಬಿಕೆಯೊಂದರ ಹೆಗ್ಗುರುತು. ಗಾನದಲ್ಲಿ ನಿಮಗ್ನವಾಗಿದ್ದ ಅವರ ಬದುಕನ್ನು ‘ಸಂಗೀತಮಯ ಸಾಧನಾ ಸಮುಚ್ಚಯ’ ಎಂದು ಬಣ್ಣಿಸುವುದು ಅತ್ಯಂತ ಸಮರ್ಪಕವೆನಿಸುತ್ತದೆ.  ‘ನಾದತಪಸ್ವಿ’ಯಾಗಲು ಕ್ರಮಿಸಬೇಕಾದ ಹಾದಿಯನ್ನು ಮುಂದಿನ ಪೀಳಿಗೆಗಳು ಕಂಡುಕೊಳ್ಳಲು ಲಭ್ಯವಿರುವ ಅತಿ ಶ್ರೇಷ್ಠ ಉದಾಹರಣೆ ಅವರ ಜೀವನ. 

ಸುಳಿದಲ್ಲೆಲ್ಲ ಸುರಿಮಳೆಗೊಳ್ಳುವ ಗೌರವಾದರಗಳು ಶ್ರೀಕಂಠನ್ ರವರಲ್ಲಿ ದರ್ಪವನ್ನು ಮೂಡಿಸಲಿಲ್ಲ. ಅವರು ತಮ್ಮ ಶ್ರೋತೃಗಳನ್ನು ಎಂದೂ ಅಸಡ್ಡೆಯಿಂದ ಕಂಡಿರಲಿಲ್ಲ. ಅವರು ತುಂಬ ಸುಲಭರು ಎನ್ನುವುದು ನಿಜವೇ ಆದರೂ, ಅವರಲ್ಲಿ ಹಾಸುಹೊಕ್ಕಾಗಿರುವ ಘನತೆಯನ್ನು ಅತಿಕ್ರಮಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಶ್ರೀಕಂಠನ್, ‘ಸರಳ ಜೀವನ ಮತ್ತು ಉನ್ನತ ಚಿಂತನ’ ಎನ್ನುವ ತತ್ವದ ವ್ಯಕ್ತರೂಪ. ತಮ್ಮ ವ್ಯವಹಾರದಲ್ಲಿ ಅವರು ಶರದಂತೆ ನೇರ, ನಿರ್ದಿಷ್ಟ. ಅವರ ಚಮತ್ಕಾರಪೂರ್ಣ ಮಾತುಕತೆಗಳು ಅವರಿಗೆ ಅನೇಕ ಸ್ನೇಹಿತರನ್ನು ಸಂಪಾದಿಸಿಕೊಟ್ಟಿದ್ದವು. ಅದ್ಭುತವಾದ ಪ್ರಸಂಗಾವಧಾನತೆ ಅವರ ಶಾಂತ, ಸಮಾಹಿತ ಮನೋವೃತಿಯನ್ನು ಮತ್ತಷ್ಟು ಬಲಪಡಿಸಿತ್ತು.

ಕೇವಲ ಸುದೀರ್ಘ ಮತ್ತು ರಂಜನೀಯವಾದ ಸಂಗೀತ ಪಯಣವೇ ಶ್ರೀಕಂಠನ್ ರವರನ್ನು ಸಂಗೀತದಲ್ಲಿ ಪ್ರತಿಮಾಸದೃಶ ಸ್ಥಾನಮಾನವನ್ನು ಗಳಿಸುವ ಹಾದಿಯಲ್ಲಿ ಕರೆದೊಯ್ಯಲು ಪರ್ಯಾಪ್ತ ಎನಿಸದೆ ಇರಬಹುದಾಗಿತ್ತು. ಆದರೆ ಅವರೇ ನುಡಿದಂತೆ ಅವರ ಸಂಗೀತ ಮತ್ತು ವ್ಯಕ್ತಿತ್ವವನ್ನು ಎತ್ತಿಹಿಡಿಯುವ ಅಂಶಗಳು ಅವರ ಆದರ್ಶಯುತ ಜೀವನವನ್ನು ಬಿಂಬಿಸುತ್ತವೆ. ಅವರೆನ್ನುತ್ತಿದ್ದರು, “ನನ್ನನ್ನು ನಾನು ನಾದಬ್ರಹ್ಮನಿಗೆ ಸಮರ್ಪಿಸಿಕೊಂಡಿದ್ದೇನೆ” ಎಂದು. ‘ಒಂದು ತಲೆಮಾರಿನ ದನಿ’ ಎಂದು ಕರೆಯಬಹುದಾದ ಅವರ ಕಂಠವನ್ನು ನೂರರ ಆಸುಪಾಸಿನ ವಯಸ್ಸಿನಲ್ಲೂ ಕಛೇರಿ ನೀಡಲು ಅಗತ್ಯವಾದ ಸ್ವರೂಪದಲ್ಲಿರುವಂತೆ ಕಾಪಾಡಿದ್ದುದು ಅವರ ಸಂಗೀತನಿಷ್ಠೆ.

ಅವರ ಶಾರೀರ ಇಷ್ಟು ಸತ್ವಭರಿತವಾಗಿದ್ದುದು ಕೇವಲ ಮನ್ನಣೆಯನ್ನು ತನ್ನತ್ತ ಸೆಳೆದುಕೊಳ್ಳುವ ಮಾಧುರ್ಯದಿಂದಲ್ಲ, ವಸ್ತುಸಾಂದ್ರತೆಯಿಂದ ಕೂಡಿದ ತಮ್ಮ ಉಪನ್ಯಾಸಗಳಲ್ಲಿ ಅವರು ಹೊಮ್ಮಿಸುತ್ತಿದ್ದ ಶಕ್ತಿಯಿಂದಾಗಿ. ಇದು ಸಂಗೀತ ಪ್ರಪಂಚ ಎಚ್ಚೆತ್ತು ಕುಳಿತು ಅವರತ್ತ ಗಮನ ಹರಿಸುವಂತೆ ಮಾಡುತ್ತಿತ್ತು. 

ನಮ್ರತೆ ತುಂಬಿರುವ ಮತ್ತು ಸಂಗೀತದಲ್ಲಿ ತಾವು ಏರಿರುವ ಯಶಃಶೃಂಗದ ಎತ್ತರವನ್ನು ಸ್ವತಃ ಅರಿಯದ ಮೇರು ವ್ಯಕ್ತಿಯೊಬ್ಬರ ‘ಜೀವನಚರಿತ್ರೆ’ ರಚಿಸುವ ಕೆಲಸವನ್ನು ಕೈಗೆತ್ತಿಕೊಂಡ ನಾನು ಧನ್ಯಳು ಎಂಬ ಭಾವನೆ ನನ್ನಲ್ಲಿದೆ. ಕಾರ್ಯಬಾಹುಳ್ಯದ ಒತ್ತಡದಿಂದ ಕೂಡಿದ ಮತ್ತು ಎಡೆಬಿಡದ ಚಟುವಟಿಕೆಯನ್ನು ಅಪೇಕ್ಷಿಸಿದ ಈ ಕೆಲಸವನ್ನು ನಾನು ಮಹಾವ್ಯಕ್ತಿಯಾದ ಶ್ರೀಕಂಠನ್ ರವರಿಗಾಗಿ ಕಳಕಳಿಯಿಂದ ಮಾಡಿದೆ.

ಲೇಖಕಿ

ಬೆಂಗಳೂರಿನಲ್ಲಿ ಜನನ, ವಿದ್ಯಾಭ್ಯಾಸ. ನಗರದ ಎನ್.ಎಂ.ಕೆ.ಆರ್.ವಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ. ಮುಂದೆ ಪುಣೆಯ ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ನಿಂದ ಮಾಧ್ಯಮ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ. 

ಬೆಂಗಳೂರಿನ ದೂರದರ್ಶನ ಕೇಂದ್ರದ ಕಾರ್ಯಕ್ರಮ ವಿಭಾಗದಲ್ಲಿ ಕೆಲಕಾಲ ಸೇವೆ. ನಂತರ ದೆಹಲಿಯ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ದಲ್ಲಿ ಉದ್ಯೋಗ. ಯುನಿಸೆಫ್ ಮತ್ತು ಪಿಟಿಐ ಉಪಕ್ರಮವಾಗಿ ಮಾಸ್ಕೋದಲ್ಲಿ ನಡೆದ ಹಾಗೂ 27 ರಾಷ್ಟ್ರಗಳು ಭಾಗವಹಿಸಿದ್ದ ವಿಶ್ವ ಮಹಿಳಾ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಭಾರತವನ್ನು ಪ್ರತಿನಿಧಿಸಿದ ಗೌರವ. 

ಪಿಟಿಐ-ದೂರದರ್ಶನದ ಉದ್ಯೋಗಿಯಾಗಿದ್ದಾಗ ದೂರದರ್ಶನದ ರಾಷ್ಟ್ರೀಯ ಪ್ರಸಾರದಲ್ಲಿ ಬಿತ್ತರಗೊಂಡ ಹಲವು ಸಾಕ್ಷ್ಯಚಿತ್ರಗಳು ಮತ್ತು ಇತರ ನೂತನ ಕಾರ್ಯಕ್ರಮಗಳ ನಿರ್ಮಾಣ. ’ಹತ್ತು ವರ್ಷಗಳ ಭಾರತ-ಶ್ರೀಲಂಕಾ ಒಪ್ಪಂದ’ದ ಕಾರ್ಯಕ್ರಮ ಸರಣಿಯ ಭಾಗವಾಗಿ ದೂರದರ್ಶನದಲ್ಲಿ ಹಾಗೂ ಇತರ ಅಂತರರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರಗೊಂಡ ಕಾರ್ಯಕ್ರಮಗಳಿಗಾಗಿ ನಿರ್ಮಾಣ ತಂಡದಲ್ಲಿ ಸಹಾಯಕ ನಿರ್ಮಾಪಕಿಯಾಗಿ ಶ್ರೀಲಂಕಾದ ವಿವಿಧ ಭಾಗಗಳಲ್ಲಿ ಪ್ರವಾಸ. 

ನಂತರ ’ದ ಹಿಂದೂ’ ಪತ್ರಿಕೆಗೆ ಸೇರಿ, ತನ್ನ ಅಭಿರುಚಿಯ ವಿಷಯಗಳಾದ ಸಂಗೀತ, ಕಲೆ, ಸಂಸ್ಕೃತಿ ಮತ್ತು ಗೃಹಾಲಂಕಾರದ ಕುರಿತ ವಿಷಯಗಳ ಬಗ್ಗೆ ನಿಯತವಾಗಿ ಪತ್ರಿಕೆಯಲ್ಲಿ ಲೇಖನ. 

ಶಾಸ್ತ್ರೀಯ ಕಲೆಗಳ ಜೊತೆ ನಿಬಿಡ ಸಂಬಂಧವನ್ನಿರಿಸಿಕೊಂಡಿರುವ ಮನೆತನದಲ್ಲಿ ಬೆಳೆದು, ಬರವಣಿಗೆಯ ಮೂಲಕ ಶಾಸ್ತ್ರೀಯ ಕಲಾಸಮೂಹದ ಕುರಿತ ತನ್ನೊಲವನ್ನು ಜೀವಂತವಾಗಿಟ್ಟಿರುವ ಸಾರ್ಥಕತೆ. ಚಿಕ್ಕಮ್ಮ ವಿಜಯಲಕ್ಷ್ಮಿ ಶ್ರೀರಂಗಾಚಾರ್ ರವರಿಂದ ಹಾಡುಗಾರಿಕೆಯಲ್ಲಿ ಪಡೆದ ಪ್ರಾರಂಭಿಕ ಸಂಗೀತ ಶಿಕ್ಷಣ, ನಂತರ ಶಾಂತಿ ರಾವ್ ರವರಿಂದ ಗಳಿಸಿದ ವೀಣಾ ಶಿಕ್ಷಣ ಕರ್ನಾಟಕ ಸಂಗೀತದ ಕುರಿತು ಲೇಖನಗಳನ್ನು ಬರೆಯುವಲ್ಲಿ ನೀಡಿರುವ ಸಹಕಾರ ಗಮನಾರ್ಹ.

ವೈದ್ಯಕೀಯ ವಿದ್ಯುನ್ಮಾನ ಕ್ಷೇತ್ರದಲ್ಲಿ ವೃತ್ತಿಪರ ವ್ಯಾಪಾರಿಗಳಾದ ಆರ್.ಗೋವಿಂದ್ ರವರೊಡನೆ ಪರಿಣಯ. ’ದ ಹಿಂದೂ’ ಪತ್ರಿಕೆಯಲ್ಲಿ ಎರಡು ದಶಕಗಳ ಲೇಖನಕಾರ್ಯ. ಇಂದಿಗೂ ಸಾಹಿತ್ಯ, ಸಂಸೃತಿ  ಮತ್ತು  ಭಾರತದ ಕಲಾಶ್ರೀಮಂತಿಕೆಯ ಕುರಿತು ಮುಂದುವರಿಯುತ್ತಿರುವ ಅಕ್ಷರ ಸೇವೆ.

ಗ್ರಂಥಋಣ* 

* Sanketi Studies”, ಸಮುದಾಯ ಅಧ್ಯಯನ ಕೇಂದ್ರ ದತ್ತಿ, ಮೈಸೂರು 

* ‘ಸಂಕೇತಿ ಆತ್ಮಚರಿತ್ರೆಗಳು ಮತ್ತು ಸಂಕೇತಿ ಇತಿವೃತ್ತಗಳು’ (ಕನ್ನಡ)- ಸಮುದಾಯ ಅಧ್ಯಯನ ಕೇಂದ್ರ ದತ್ತಿ, ಮೈಸೂರು

*ಕಲಾಚೇತನ’ (ಕನ್ನಡ)- ಕರ್ನಾಟಕದ ಸಂಗೀತ ಮತ್ತು ನೃತ್ಯಕಲಾವಿದರ ಕುರಿತಾದ ಪುಸ್ತಕ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು 

* ‘ಶ್ರೀಕಂಠ’- 1995ರಲ್ಲಿ ವಿದ್ವಾನ್ ಆರ್.ಕೆ. ಶ್ರೀಕಂಠನ್ ರವರ 75 ನೆಯ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ, ಬೆಂಗಳೂರಿನ ರಾಮಸುಧಾ ದತ್ತಿಯಿಂದ ಪ್ರಕಟಿಸಲಾದ ಸ್ಮರಣಸಂಚಿಕೆ ಗ್ರಂಥ

**”ಕರ್ನಾಟಕ ಸಂಗೀತಕ್ಕೆ ಸಂಕೇತಿ ಸಮುದಾಯದ ಯೋಗದಾನ’ – ನಿಬಂಧ, ಡಾ.ಕೆ.ರಾಘವೇಂದ್ರರಾವ್, ಮೈಸೂರು

*”Voice of the Veena- S Balachander’ ವಿಕ್ರಂ ಸಂಪತ್,  (ರೂಪಾ ಪ್ರಕಾಶಕರ ಪ್ರತಿಕೃತಿ)

* ’Spleandour of Royal Mysuru- the untold story’ ವಿಕ್ರಂ ಸಂಪತ್, ರೂಪಾ ಅಂಡ್ ಕೋ, 2008

* ಶ್ರುತಿ- ಸಂಗೀತ ಮಾಸಿಕಪತ್ರಿಕೆ, ಚೆನ್ನೈ

* ಮೈಸೂರು ಅರಮನೆಯ ದಾಖಲೆಗಳ ಆಯ್ದ ಭಾಗಗಳು, ಸಂಪುಟ ೧, “ಸಂಗೀತಗಾರರು, *ನಟರು ಮತ್ತು ಕಲಾವಿದರು”, ಸಂಪಾದನೆ ಜಿ.ವಿ.ಗಾಯತ್ರೀ, – Divisional Archives Office,  ಕರ್ನಾಟಕ ಸರ್ಕಾರ, ಮೈಸೂರು

*”ಸಂಕೇತಿ ಸೌರಭ’- ಬೆಂಗಳೂರು ಜಯನಗರದ ಕೌಶಿಕ ಸಂಕೇತಿ ಸಂಘದವರು 1994ರಲ್ಲಿ ಸುವರ್ಣ  ಮಹೋತ್ಸವದ ಸಂದರ್ಭದಲ್ಲಿ ಪ್ರಕಟಿಸಿದ ಸ್ಮರಣಸಂಚಿಕೆ

*’ನಮ್ಮ ಸಂಗೀತ ಕಲಾವಿದರು’ – ಸಂಗೀತಗಾರರ ನಿರ್ದೇಶಿಕೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, 1990

* ’ಕನ್ನಡ ನಾಡಿನ ಕಲಾವಿದರು” – ಜಿ.ಆರ್.ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು – 1986

* ’ಕಲೋಪಾಸಕರು’ – ಡಿ.ವಿ.ಜಿ, ಮೈಸೂರಿನ ಜಯನಗರದ ಕಾವ್ಯಾಲಯ ಪ್ರಕಾಶಕರಿಂದ ಮರುಮುದ್ರಣ

* ಕರ್ನಾಟಕ ಸಂಗೀತ ಪಾರಿಭಾಷಿಕ ಶಬ್ದಕೋಶ- ಡಾ.ವಿ.ಎಸ್.ಸಂಪತ್ಕುಮಾರಾಚಾರ್ಯ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ

* ’ಲಕ್ಷ್ಮೀರಮಣ ಕೃತಿಮಂಜರಿ”- ಪ್ರೊ ಆರ್.ಎನ್. ದೊರೆಸ್ವಾಮಿ, ಜಯನಗರ, ಮೈಸೂರು – 1989

* ‘ಸಂ-ಗ್ರಾಮ’- ಭಾಸ್ಕರ ಅವಧಾನಿ

* The Hindu ಪತ್ರಿಕೆಯ ದಾಖಲೆಗಳಿಂದ

* Indian Express, Deccan Herald, ಉದಯವಾಣಿ, ಕನ್ನಡಪ್ರಭ ಮತ್ತು ಪ್ರಜಾವಾಣಿ ಪತ್ರಿಕೆಗಳ ದಾಖಲೆಗಳು

* ’ಅನನ್ಯ ಕಲಾಸಿಂಚನ”, ಅನನ್ಯ ಸಾಂಸ್ಕೃತಿಕ ಸಂಸ್ಥೆಯ ಪ್ರಕಟನೆ –ಎಸ್.ವಿ.ರಾಘವೇಂದ್ರ

Photos by Mohan Srenivasan

। ಮುಕ್ತಾಯ ।

‍ಲೇಖಕರು Admin

26 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading