
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.
ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.
ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.
ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…
। ಕಳೆದ ವಾರದಿಂದ ।
22
ವಿ.ಶಂಕರ್, ಅಧ್ಯಕ್ಷರು. ಷಣ್ಮುಖಾನಂದ ಫೈನ್ ಆರ್ಟ್ಸ್ ಹಾಗೂ ಸಂಗೀತಸಭಾ, ಮುಂಬೈ
ಜಗತ್ತಿನಲ್ಲಿ ಕೋಟಿಗಟ್ಟಲೆ ಜನರು ಬಂದು ಹೋಗುತ್ತಾರಾದರೂ, ಅವರ ಪೈಕಿ ಕೆಲವರು ಮಾತ್ರವೇ ತಮ್ಮ ಸಾಧನೆ ಮತ್ತು ಕಾರ್ಯಗಳಿಂದಾಗಿ ಜನಮಾನಸದಲ್ಲೂ ಹೃದಯಗಳಲ್ಲೂ ಶಾಶ್ವತಸ್ಥಾನವನ್ನು ಪಡೆಯುತ್ತಾರೆ. ಅಂತಹವರು ತಮ್ಮ ಪಾತ್ರವನ್ನು ಘನತೆಯಿಂದಲೂ ಒಪ್ಪಿನಿಂದಲೂ ಪ್ರಾಮಾಣಿಕತೆಯಿಂದಲೂ ವಹಿಸಿರುತ್ತಾರೆ. ಜನಮಾನಸದ ಮೇಲೆ ಇಂತಹ ಪ್ರಭಾವವನ್ನು ಬೀರಬಲ್ಲ ಅಪರೂಪದ ಹಾಗೂ ನಶಿಸುತ್ತಿರುವ ಸಂಖ್ಯೆಯ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ ಶ್ರೀಕಂಠನ್. ಷಣ್ಮುಖಾನಂದ ಫೈನ್ ಆರ್ಟ್ಸ್ ಮತ್ತು ಸಂಗೀತ ಸಭೆಯಲ್ಲಿ ಶ್ರೀಕಂಠನ್ ರವರು ಬಂದು ಹಾಡುತ್ತಿದ್ದದ್ದು ನಮ್ಮ ಸೌಭಾಗ್ಯವೇ ಸರಿ. 2009ರಲ್ಲಿ ಶ್ರೀಕಂಠನ್ ರವರಿಗೆ ಜೀವಮಾನದ ಸಂಗೀತಸಾಧನೆಗಾಗಿ ‘ಷಣ್ಮುಖಾನಂದ ನ್ಯಾಷನಲ್ ಎಮಿನೆನ್ಸ್ ಅವಾರ್ಡ್ ಇನ್ ಫೈನ್ ಆರ್ಟ್ಸ್’ ಪ್ರಶಸ್ತಿಯು ಸಂದಾಗ ನಮಗಾದ ಆನಂದ ಅಷ್ಟಿಷ್ಟಲ್ಲ.
ಶ್ರೀಕಂಠನ್ ರವರದು ಆಕರ್ಷಕ ವ್ಯಕ್ತಿತ್ವ- ಮುಖದಲ್ಲಿ ಬುದ್ಧಿಯ ಪ್ರಖರತೆ, ಶಾಂತ ಸ್ಥಿರ ಮನೋಭಾವ, ದೃಢ ನಿಶ್ಚಯ ಮತ್ತು ಆಧ್ಯಾತ್ಮಿಕ ಉನ್ನತಿ ಎದ್ದುಕಾಣುತ್ತದೆ. ವಾಗ್ಗೇಯಕಾರರ ನಿಜವಾದ ಅಭಿಪ್ರಾಯವು ಯಥಾವತ್ತಾಗಿ ಅಭಿವ್ಯಕ್ತವಾಗಬೇಕಾದರೆ, ಸುಮ್ಮನೆ ಕೃತಿ ಹಾಡಿದರೆ ಸಾಲದು ಎನ್ನುವುದು ಅವರ ನಂಬಿಕೆ. ಗಾಯಕರು ಯಾವುದೇ ಕೃತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದು, ಅದರ ಉದ್ದೇಶವನ್ನೂ ಗಮನದಲ್ಲಿಟ್ಟುಕೊಂಡಾಗ ಮಾತ್ರವೇ ಆ ಕೃತಿಯ ಭಾವವು ಚೆನ್ನಾಗಿ ಮೂಡಿಬರಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ. ರಾಗಾಲಾಪನೆ ಮತ್ತು ಸ್ವರಕಲ್ಪನೆಯ ಪ್ರಮಾಣ ಎಷ್ಟಿರಬೇಕು ಎನ್ನುವುದನ್ನು ಔಚಿತ್ಯವರಿತು ಯೋಜಿಸಿಕೊಳ್ಳಬೇಕು ಎನ್ನುವ ಎಚ್ಚರ ಅವರಲ್ಲಿ. ಈ ಸೂಕ್ಷ್ಮಾಂಶಗಳನ್ನು ಮುಂದಿನ ಜನಾಂಗಕ್ಕೆ ಅವರು ಚೆನ್ನಾಗಿ ತಲುಪಿಸಿಯೂ ಇದ್ದಾರೆ.
ದಾಸಕೂಟದವರ ಕೀರ್ತನೆಗಳಿಗೆ ಅವರೇ ಸೂಚಿಸಿರುವ ರಾಗಗಳಿಂದಲೇ ಸಂಗೀತರಚನೆ ಮಾಡಿರುವುದು ಶ್ರೀಕಂಠನ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ಕೊಟ್ಟಿರುವ ಅತ್ಯುತ್ತಮ ಕೊಡುಗೆ. ಆದರೆ ಪುರಂದರದಾಸರು ಯಾವ ‘ಬತ್ತೀಸ್ ರಾಗಾವಲಿ’ಯಲ್ಲಿ (32 ರಾಗಗಳ ಸರಣಿಯಲ್ಲಿ) ತಮ್ಮ ಕೀರ್ತನೆಗಳನ್ನು ಮೊಟ್ಟಮೊದಲು ಸಂಯೋಜಿಸಿದ್ದರೋ ಅದರ ಬಗ್ಗೆ ಇಂದಿನ ಕಲಾವಿದರಿಗೆ ಆಸಕ್ತಿಯೇ ಇಲ್ಲದಿರುವುದರ ಬಗ್ಗೆ ಅವರಿಗೆ ವಿಷಾದವಿದೆ. ಅಷ್ಟೇ ಅಲ್ಲ, ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರೆಂದೇ ಪ್ರಖ್ಯಾತರಾದ್ದರಿಂದ, ಹಿಂದೂಸ್ಥಾನಿ ಕಲಾವಿದರೂ ಕೂಡ ಪುರಂದರದಾಸರ ಕೃತಿಗಳನ್ನು ಹಾಡುವಾಗ, ಮೂಲರಾಗಗಳನ್ನೇ ಬಳಸಲು ಪ್ರಾರಂಭಿಸಬೇಕು ಎನ್ನುವುದು ಅವರ ಅಭಿಪ್ರಾಯ.
ಶ್ರೀ ಆರ್.ಕೆ.ಶ್ರೀಕಂಠನ್ ರವರಂತಹವರ ನಿರಂತರ ಪ್ರಯತ್ನದಿಂದಾಗಿಯೇ ಭಾರತೀಯ ಶಾಸ್ತ್ರೀಯ ಕಲೆಗಳ ಸಂಪ್ರದಾಯಶುದ್ಧಿಯು ಪುನರುಜ್ಜೀವನಗೊಂಡಿದೆ. ಆರ್.ಕೆ.ಎಸ್.ರವರಂತಹವರನ್ನು ಪ್ರಶಂಸಿಸುವುದರಿಂದ ಅವರ ಜೀವನ ಸಾಧನೆಗಳನ್ನು ಅಧ್ಯಯನ ಮಾಡುತ್ತ, ಅವರು ಬೀರಿರುವ ಅಪ್ರತಿಮ ಪ್ರಭಾವಗಳಿಂದ ಪ್ರೇರಣೆ ಪಡೆಯುವುದು ಸಾಧ್ಯವಾಗುತ್ತದೆ.
ಷಣ್ಮುಖಾನಂದ ಸಭೆಯ 3200ಕ್ಕೂ ಮಿಕ್ಕ ಸದಸ್ಯರೆಲ್ಲರೂ ಶ್ರೀಕಂಠನ್ ರವರ ದೀರ್ಘಾಯುಸ್ಸಿಗಾಗಿ ಪ್ರಾರ್ಥಿಸುತ್ತೇವೆ. ಮುಂದೆ ಅವರ ಶತಮಾನೋತ್ಸವವನ್ನೂ ಜಗತ್ತಿನ ಇತರೆಲ್ಲ ಕಲಾರಸಿಕರ ಜೊತೆಗೂಡಿ ಆಚರಿಸುವ ಭಾಗ್ಯವನ್ನು ನಾವು ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ.

ವೈ ಪ್ರಭು, ಕಾರ್ಯದರ್ಶಿ, ಶ್ರೀಕೃಷ್ಣ ಗಾನಸಭಾ, ಚೆನ್ನೈ
ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಜೀವಂತವಾಗಿರುವ ದಂತಕಥೆಯಂತಹ ಕಲಾವಿದರಲ್ಲಿ ಶ್ರೀಕಂಠನ್ ರವರು ಅಗ್ರಮಾನ್ಯರು. ಸತ್ವಪೂರ್ಣವೂ ಮೌಲ್ಯಯುತವೂ ಆಗಿರುವ ಅವರ ಪಾರಂಪರ್ಯ ಸಂಗೀತದ ಬಗ್ಗೆ ನಮಗೆಲ್ಲ ತುಂಬ ಹೆಮ್ಮೆಯಿದೆ. ಯಾವುದೇ ಭಾಷೆಯಲ್ಲಿರುವ ಕೃತಿಯ ಅರ್ಥವನ್ನೂ ಭಾವವನ್ನೂ ಅಂತಹ ಸಾಹಿತ್ಯಶುದ್ಧಿಯಿಂದ ಪ್ರಸ್ತುತಪಡಿಸಬಲ್ಲ ಸಾಮರ್ಥ್ಯ ಬೇರೆ ಇನ್ನಾರಿಗೆ ತಾನೆ ಇದೆ ಹೇಳಿ? ಇದರ ಜೊತೆಗೆ ಪಕ್ಕವಾದ್ಯದವರೊಡನೆ ಸಂಗೀತ ಕಛೇರಿಯನ್ನು ನಿರ್ವಹಿಸುವ ಶೈಲಿಯ ಮೇಲೆ ಅವರಿಗಿದ್ದ ಹತೋಟಿಯೂ ಅದ್ಭುತ. ಒಟ್ಟಿನಲ್ಲಿ ಅವರಲ್ಲಿ ಎಲ್ಲವೂ ಪರಿಪೂರ್ಣತೆಯನ್ನು ಕಾಣುತ್ತದೆ.
ಯಾವುದೇ ಅತಿಯಿಲ್ಲದೆ, ಆರ್ಭಟವಿಲ್ಲದೆ, ಕಛೇರಿಯ ಎಲ್ಲ ಅಂಶಗಳತ್ತ ಪ್ರಾಮಾಣಿಕವಾಗಿ ಗಮನ ಹರಿಯಿಸುವ ಶ್ರೀಕಂಠನ್ ರವರಂತಹವರ ಪರಿಯನ್ನು ಇಂದಿನ ಎಳೆಯ ಕಲಾವಿದರು ನೋಡಿ ಕಲಿಯುತ್ತಿಲ್ಲವೇಕೆ ಎನಿಸುತ್ತದೆ.
ಕರ್ನಾಟಕ ಸಂಗೀತದ ವಿದ್ವತ್ತು ಮತ್ತು ಅಸಾಧಾರಣ ಮನೋಧರ್ಮಕ್ಕೆ ಹೆಸರಾಗಿರುವ ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್ ಮತ್ತು ಬಾಲಮುರಳೀಕೃಷ್ಣರವರಂತಹ ದಿಗ್ಗಜರ ಸಾಲಿಗೆ ಶ್ರೀಕಂಠನ್ ರವರೂ ಸೇರುತ್ತಾರೆ.ಇದಲ್ಲದೆ ದಾಸಸಾಹಿತ್ಯದ ನೂರಾರು ಕೃತಿಗಳಿಗೂ ಇವರು ಸಂಗೀತವನ್ನು ಸಂಯೋಜಿಸಿದ್ದಾರೆ. ಮುಂದಿನ ಪೀಳಿಗೆಗಳಿಗೆ ಇವೆಲ್ಲ ಕೈಪಿಡಿಗಳಾಗುತ್ತವೆ. ಕರ್ನಾಟಕ ಸಂಗೀತದ ತೀರ್ಥಕ್ಷೇತ್ರ ಎನಿಸಿರುವ ನಮ್ಮ ಚೆನ್ನೈನವರು ಶ್ರೀಕಂಠನ್ ರವರನ್ನು ಸದಾ ಅರಸುತ್ತಿರುತ್ತಾರೆ. ಅವರು ನಮ್ಮ ಚೆನ್ನೈನ ಒಂದು ಭಾಗವೇ ಆಗಿಬಿಟ್ಟಿದ್ದಾರೆ. ಸಂಗೀತದ ಎಲ್ಲ ಸೂಕ್ಷ್ಮಾಂಶಗಳ ಪರಿಚಯವನ್ನೂ ಸಿದ್ಧಿಯನ್ನೂ ಅವರು ಹೊಂದಿರುವುದಲ್ಲದೆ, ಅವರಲ್ಲಿರುವ ವಿನಯವು ಅವರಂತಹ ಮೇರು ಕಲಾವಿದರಿಗೆ ಬಹಳ ಮೆರುಗು ನೀಡುತ್ತದೆ.
ಎಂ.ಎಸ್.ಪ್ರಕಾಶ್, ಗಮಕ ವಿದ್ವಾಂಸರು ಮತ್ತು ಶ್ರೀಕಂಠನ್ ರವರ ಅಳಿಯ
45 ವರ್ಷಗಳ ಈ ಮಹಾತ್ಮರ ಒಡನಾಟದಲ್ಲಿ ನಾನು ಬಹಳ ಮೆಚ್ಚುಗೆಯಿಂದ ಗಮನಿಸಿದ್ದು ಅವರ ಸಮಯನಿರ್ವಹಣೆಯ ಕೌಶಲವನ್ನು. ಏಳು ಗಂಟೆಗೆ ಕಛೇರಿ ಇದೆ ಎಂದರೆ ಐದು ಗಂಟೆಗೇ ಅವರು ಸಿದ್ಧರಿರುತ್ತಾರೆ! ಶುಭ್ರಬಿಳುಪಿನ ಪಂಚೆ, ಸ್ವಲ್ಪ ದೊಗಲಾದ ಜುಬ್ಬ, ಅದರ ಮೇಲೆ ಶಲ್ಯ, ಹಣೆಯಲ್ಲಿ ಅಗಲವಾದ ಶ್ರೀಗಂಧದ ಮೇಲೆ ಕುಂಕುಮದ ಬೊಟ್ಟು, ಕಣ್ಣು ಕೋರೈಸದಂತಹ ಸರಳ ಉಡುಪು—- ಇದೇ ನಮ್ಮೆಲ್ಲರ ಆತ್ಮೀಯ ಶ್ರೀಕಂಠನ್—ಇದು ಅವರ ಚಿಕ್ಕಂದಿನ ದಿನಗಳಲ್ಲಷ್ಟೇ ಅಲ್ಲ, 94ರ ವಯಸ್ಸಿನಲ್ಲೂ ಹೀಗೆಯೇ!
2011ರಷ್ಟು ಇತ್ತೀಚೆಗೆ ನಾನು ತಿರುವಾಂಕೂರಿನ ಮಹಾರಾಜ ಮಾರ್ತಾಂಡ ವರ್ಮಾರವರನ್ನು ಮಂತ್ರಾಲಯಕ್ಕೆ ಆಹ್ವಾನಿಸಲು ಹೋಗಿದ್ದೆ. ನಾನು ನನ್ನ ಪರಿಚಯಮಾಡಿಕೊಳ್ಳಲು ಶ್ರೀಕಂಠನ್ ರವರ ಹೆಸರನ್ನು ಸುಮ್ಮನೆ ಉಲ್ಲೇಖಿಸಿದ್ದು ಅಷ್ಟೇ, ಅದೇ ಸಾಕಾಯಿತು! ಶ್ರೀಕಂಠನ್ ರವರ ಕುರಿತಾಗಿ ಅವರಿಗಿದ್ದ ಗೌರವವು ಅದೆಷ್ಟೆಂದರೆ ಸ್ವತಃ ಮಹಾರಾಜರೇ ನನ್ನನ್ನು ಅರಮನೆಯಲ್ಲೆಲ್ಲ ಅಡ್ಡಾಡಿಸಿ ಎಲ್ಲವನ್ನೂ ತೋರಿಸಿದರು. ಮಹಾರಾಜ ಸ್ವಾತಿ ತಿರುನಾಳರು ಬಿಟ್ಟು ಹೋದ ಸ್ವತ್ತನ್ನು ತೋರಿಸಿ ವಿವರಿಸಿದರು. ಅದಲ್ಲದೆ ಸಂಗೀತಪ್ರಪಂಚಕ್ಕೆ ಶ್ರೀಕಂಠನ್ ಇತ್ತ ಅಪಾರಕೊಡುಗೆಯ ಕುರಿತಾಗಿಯೂ ಶ್ಲಾಘಿಸಿದರು.
ಡಾ.ಎಂ.ಆರ್.ವಿ. ಪ್ರಸಾದ್, ಅಧ್ಯಕ್ಷರು, ಗಾಯನ ಸಮಾಜ, ಬೆಂಗಳೂರು
ವೈದ್ಯನಾಗಿ ನಾನಿಷ್ಟು ಹೇಳಬಲ್ಲೆ-ಅವರ ಸ್ಮರಣಶಕ್ತಿಯು ಹಾಗೂ ಆಹಾರಕ್ರಮವು ಅತ್ಯಂತ ಶ್ಲಾಘನೀಯ. ಜೀವನದಲ್ಲಿನ ಅವರ ಶಿಸ್ತು ಅವರನ್ನು ಅತ್ಯುತ್ತಮ ಶಿಕ್ಷಕರನ್ನಾಗಿಯೂ ಮಾಡಿತ್ತು. ತೊಂಭತ್ತರ ಹರೆಯದ ಅವರ ಸಂಪ್ರದಾಯಶುದ್ಧಿ ಎಂತಹದ್ದೆಂದರೆ, ಆಧುನಿಕ ಯುಗದವರು ಅವರನ್ನು ಕರ್ನಾಟಕ ಸಂಗೀತದ ಭೀಷ್ಮಪಿತಾಮಹರೆಂದೇ ಮಾನ್ಯ ಮಾಡಿದ್ದಾರೆ. 94ರ ವಯಸ್ಸಿನಲ್ಲೂ ಅವರು ಕಛೇರಿಗಳಿಗಾಗಿ ಭರದಿಂದ ಸಿದ್ಧತೆ ನಡೆಸುತ್ತಾರೆ! ಈ ಗುಣವನ್ನು ಎಳೆಯ ಕಲಾವಿದರು ನೋಡಿ ಕಲಿಯಬೇಕು. ಶ್ರೀಕಂಠನ್ ರವರ ಪ್ರೌಢಿಮೆ ಪಕ್ವತೆಗಳು ತುಂಬ ಗಮನಾರ್ಹ. ಸಂಗೀತ ಕಲಾವಿದರು ಉತ್ತಮ ಸಲಹೆಗಳನ್ನು ಪಡೆಯಲು ಇಂತಹ ಹಿರಿಯ ವಿದ್ವಾಂಸರೇ ಬೇಕಾಗುತ್ತಾರೆ. ಭಾರತದಲ್ಲೇ ಅತ್ಯಂತ ಹಳೆಯ ಸಂಗೀತಸಭೆಯಾಗಿರುವ ಬೆಂಗಳೂರಿನ ಗಾಯನಸಮಾಜದಂಥ ಸಂಸ್ಥೆಗೂ ಇವರೇ ಮಾರ್ಗದರ್ಶಕರಾಗಿದ್ದಾರೆ. ನನ್ನ ಪಾಲಿಗಂತೂ ಇಂದಿಗೂ ಇವರೇ ‘ಸಮಾಜದ ಪಿತೃಸಮಾನರು’. ಶ್ರೀಕಂಠನ್ ರವರ ಸಲಹೆ-ನಿರ್ದೇಶನಗಳಿಂದಾಗಿಯೇ ಸಮಾಜವು ಯುವಸಂಗೀತೋತ್ಸವವನ್ನು ಪ್ರಾರಂಭಿಸಿದ್ದು. ಉತ್ತಮ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವಲ್ಲಿಯೂ, ವಾರ್ಷಿಕ ಕಾರ್ಯಕ್ರಮಗಳನ್ನೂ ಸಮ್ಮೇಳನಗಳನ್ನೂ ಆಯೋಜಿಸುವಲ್ಲಿಯೂ ಅವರ ಅಭಿಪ್ರಾಯ ಹಾಗೂ ಸಲಹೆಗಳು ನಮಗೆ ತುಂಬ ಉಪಯುಕ್ತವಾಗಿವೆ. ಎಲ್ಲಕ್ಕಿಂತ ಮಿಗಿಲಾಗಿ ಶ್ರೀಕಂಠನ್ ರವರು ಉತ್ತಮ ವ್ಯಕ್ತಿ. ಇವರು ಕರ್ನಾಟಕಕ್ಕೇ ಹೆಮ್ಮೆ ತಂದಿದ್ದಾರೆ.

ಡಾ.ಆರ್.ಬಾಲಸುಬ್ರಹ್ಮಣ್ಯಮ್, ಅಧ್ಯಕ್ಷರು, ಇಂದಿರಾ ನಗರ ಸಂಗೀತಸಭಾ, ಬೆಂಗಳೂರು
40ವರ್ಷಗಳಿಂದ ನನಗೆ ಶ್ರೀಕಂಠನ್ ರವರೊಡನೆ ಒಡನಾಟವಿದೆ. 1970 ಮತ್ತು 1980ರಲ್ಲಿ ಮಲ್ಲೇಶ್ವರಂನಲ್ಲಿ ನಡೆಯುತ್ತಿದ್ದ ಸಂಗೀತಕಛೇರಿಗಳ ಬಗ್ಗೆ ನಾವು ಒಟ್ಟಿಗೆ ನಡೆದಾಡುತ್ತ ಚರ್ಚೆ-ವಿಮರ್ಶೆಗಳನ್ನು ಮಾಡುತ್ತಿದ್ದ ನೆನಪುಗಳು ನನ್ನಲ್ಲಿ ಹಸಿರಾಗಿವೆ. ಅವರು ನಿಷ್ಪಕ್ಷಪಾತವಾಗಿ ಮಾಡುತ್ತಿದ್ದ ಸಕಾರಾತ್ಮಕ ವಿಶ್ಲೇಷಣೆ ಅವಿಸ್ಮರಣೀಯ. ಅವರ ಸಂಪ್ರದಾಯಶುದ್ಧಿ ಮತ್ತು ವ್ಯಾಕರಣ ಎಷ್ಟು ಖಚಿತವೆಂದರೆ ಶಾಸ್ತ್ರೀಯ ಸಂಗೀತವನ್ನು ಯಥಾವತ್ತಾಗಿ ಅರ್ಥಮಾಡಿಕೊಳ್ಳುವ ವಿಷಯದಲ್ಲಿ ನಿಃಸ್ಸಂದೇಹವಾಗಿ ಅವರೇ ಎಲ್ಲರಿಗೂ ಗುರು. ತಾರೆಗಳಂತೆ ಮಿರುಗುತ್ತಿರುವ ಅವರ ಉಜ್ಜ್ವಲ ಶಿಷ್ಯಕೋಟಿಯು ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದಲ್ಲಿ ಹೆಗ್ಗುರುತನ್ನೇ ಮಾಡಿದೆ. 1986ರಲ್ಲಿ ನಮ್ಮ ವೇದಿಕೆಯಲ್ಲಿನ ಮೊಟ್ಟಮೊದಲ ಕಛೇರಿಯನ್ನು ನಡೆಸುವುದರ ಮೂಲಕ ನಮ್ಮ ಇಂದಿರಾನಗರದ ಸಂಗೀತಸಭೆಯ ಪಾಲಿಗಂತೂ ಅವರು ದಿಗ್ದರ್ಶಕರೇ ಆಗಿದ್ದಾರೆ. ನಾವು ಸಲ್ಲಿಸಿದ ಪುರಂದರ ಪ್ರಶಸ್ತಿಗೆ ಅವರೇ ಮೊದಲು ಭಾಜನರಾದದ್ದು ಎನ್ನುವುದೂ ನಮಗೆ ಬಹಳ ಸಂತಸದ ಸಂಗತಿ. ಜಗತ್ತಿನಾದ್ಯಂತ ಇರುವ ಎಳೆಯ ಕಲಾವಿದರಿಗೆ ಅವರು ಹೀಗೆಯೇ ಬೆಳಕಾಗಿ ಚಿರಕಾಲ ಬಾಳಲಿ ಎಂದು ಹಾರೈಸುತ್ತೇವೆ.
ಜಿ.ವಿ. ಕೃಷ್ಣಪ್ರಸಾದ್, ಮುಖ್ಯಸ್ಥರು,ಶ್ರೀರಾಮ ಲಲಿತಕಲಾ ಮಂದಿರ, ಬೆಂಗಳೂರು
ಸೌಭಾಗ್ಯದ ವಿಷಯವೆಂದರೆ ನನ್ನ ಬಾಲ್ಯದ ದಿನಗಳಿಂದಲೂ ಶ್ರೀಕಂಠನ್ ರವರ ಪರಿಚಯವನ್ನು ಹೊಂದಿದ್ದೇನೆ. ಸಂಗೀತದ ಮಹಾರಸಿಕರೂ ಹಾಗೂ ಉತ್ತಮ ಶಿಕ್ಷಣತಜ್ಞರೂ ಆಗಿದ್ದ ನನ್ನ ತಂದೆ ಶ್ರೀ ವೇದಾಂತ ಐಯ್ಯಂಗಾರ್ ರವರು ನಾವು ಶಾಸ್ತ್ರೀಯ ಸಂಗೀತದ ಪರಿಚಯವನ್ನು ಚೆನ್ನಾಗಿ ಬೆಳೆಸಿಕೊಳ್ಳುವಂತೆ ನೋಡಿಕೊಂಡರು. ನನ್ನ ಸೋದರಿಯರಾದ ಜಿ.ವಿ. ರಂಗನಾಯಕಮ್ಮ ಮತ್ತು ಜಿ.ವಿ. ನೀಲಾರವರಲ್ಲಿದ್ದ ಅದ್ಭುತ ಪ್ರತಿಭೆಯನ್ನು ಅವರು ಗುರುತಿಸಿ, ಹೆಚ್ಚಿನ ವಿದ್ಯೆಯನ್ನು ಪಡೆಯಲು ಶ್ರೀಕಂಠನ್ ರವರ ಬಳಿಗೆ ಕಳುಹಿಸಿದರು. ಶ್ರೀಕಂಠನ್ ರವರು ಸಂತೋಷವಾಗಿ ಒಪ್ಪಿ, ನಮ್ಮ ಮನೆಗೇ ಬಂದು ಇಬ್ಬರಿಗೂ ಸಂಗೀತವನ್ನು ಕಲಿಸುತ್ತಿದ್ದರು. ನನ್ನ ಸೋದರಿಯರು ಅತ್ಯಂತ ಆಸ್ಥೆಯಿಂದ ಅದಕ್ಕಾಗಿ ಕಾಯುತ್ತಿದ್ದರು. ಆ ಸಂದರ್ಭದಲ್ಲೇ ನನಗೆ ಅವರ ನಿಕಟ ಪರಿಚಯ ಬೆಳದದ್ದು. ಅವರು ಅಂದಿನಿಂದ ಇಂದಿನವರೆಗೂ ನನ್ನನ್ನು ವಾತ್ಸಲ್ಯದಿಂದ ‘ಕಿಟ್ಟೂ’ ಎಂದೇ ಸಂಬೋಧಿಸುತ್ತ ಬಂದಿದ್ದಾರೆ.
ಶ್ರೀರಾಮ ಲಲಿತಕಲಾ ಮಂದಿರದ ಪ್ರಾರಂಭದಿಂದಲೂ ಅವರು ನಮ್ಮೊಡನೆ ಇದ್ದಾರೆ ಎನ್ನಬಹುದು. ನಮ್ಮ ಎಲ್ಲ ಪ್ರಯೋಗಗಳನ್ನೂ ಅವರು ಪ್ರೋತ್ಸಾಹಿಸಿದ್ದಾರಲ್ಲದೆ ಮಾರ್ಗದರ್ಶನ ಮಾಡಿದ್ದಾರೆ. ನನ್ನ ತಂದೆಯವರೊಂದಿಗೆ ಅವರ ಸಂಬಂಧ ವಿಶೇಷವಾಗಿತ್ತು. ನಮ್ಮ ತಂದೆಯವರ ಹೆಸರಲ್ಲಿ ಪ್ರಶಸ್ತಿಯನ್ನು ನೀಡುವಂತೆ ಸೂಚಿಸಿದ್ದೂ ಅವರೇ. ಅವರ ಸಲಹೆಯಂತೆ ನಾವು ಸಂಗೀತ ವೇದಾಂತ ಧುರೀಣ ಪ್ರಶಸ್ತಿಯನ್ನು ಕಲಾಸಾಧಕರಿಗೆ ನೀಡುತ್ತ ಬಂದಿದ್ದೇವೆ. ನಿಃಸಂದೇಹವಾಗಿ ಸ್ವತಃ ಶ್ರೀಕಂಠನ್ ರವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತರಿಸುವಂತಹ ಸಂಗೀತ ಕಾರ್ಯಾಗಾರಗಳನ್ನೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನೂ ನಮ್ಮ ಮಂದಿರದಲ್ಲಿ ಶ್ರೀಕಂಠನ್ ರವರು ನಡೆಸುತ್ತ ಬಂದಿದ್ದಾರೆ. 94ರ ಹರೆಯದ ಇಂತಹ ಮಹಾತ್ಮರಿಂದ ಸಂಪ್ರದಾಯಶುದ್ಧ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಹೊಂದುವ ಅವಕಾಶವು ಅಸಂಖ್ಯ ವಿದ್ಯಾರ್ಥಿಗಳಿಗೆ ಈ ಮೂಲಕ ಒದಗಿದೆ. ಸಂಗೀತದ ಕ್ಷೇತ್ರದಲ್ಲಿ ಅವರೊಂದು ನವರತ್ನವೇ ಸರಿ.
ಕೆ.ಎಸ್. ಶಶಿಕಿರಣ್, ಗಾಯಕರು (ಕರ್ನಾಟಿಕಾ ಸೋದರರು) ಹಾಗೂ ಸಂಯೋಜಕರು
ವಿದ್ವಾನ್ ಶ್ರೀ ಆರ್.ಕೆ. ಶ್ರೀಕಂಠನ್ ರವರು ನಿಜವಾದ ನಾದೋಪಾಸಕರು, ಕರ್ನಾಟಕ ರಾಜ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಹೆಮ್ಮೆಯೇ ಆಗಿದ್ದಾರೆ. ಸಂಗೀತದ ಕುಟುಂಬದಲ್ಲೇ ಹುಟ್ಟಿದ ಅವರು ತಮ್ಮ ಪ್ರತಿಭಾವಂತ ಸೋದರರಾದ ದಿ. ಆರ್.ಕೆ. ವೆಂಕಟರಾಮಾಶಾಸ್ತ್ರಿರವರೊಡನೆ ಅತ್ಯಂತ ಪರಿಶ್ರಮದಿಂದ ಸಂಗೀತವನ್ನು ಮೈಗೂಡಿಸಿಕೊಂಡರಲ್ಲದೆ, ತಮಿಳುನಾಡಿನ ಸಂಗೀತ ದಿಗ್ಗಜರುಗಳಿಂದಲೂ ಬಹಳ ಕಲಿತರು. ಯೌವ್ವನದ ಕಂಠಸಿರಿಯನ್ನು 94ರ ವಯಸ್ಸಿನಲ್ಲೂ ಅವರು ಇನ್ನೂ ಕಾಪಾಡಿಕೊಂಡಿದ್ದಾರೆ ಎನ್ನುವುದೇ ಅಚ್ಚರಿಯ ವಿಷಯ. ಕರ್ನಾಟಕ ಸಂಗೀತದ ಶಾಸ್ತ್ರೀಯ ಮೌಲ್ಯಗಳು ಹಾಗೂ ಸಂತ ವಾಗ್ಗೇಯಕಾರರ ಕುರಿತಾಗಿ ಅವರಿಗಿರುವ ಆದರವು ಎಳೆಯರಾದ ನಮ್ಮನ್ನು ಪ್ರಭಾವಗೊಳಿಸುತ್ತದೆ. ದಾಸಕೂಟದವರ ಕೀರ್ತನೆಗಳನ್ನಲ್ಲದೆ ಕರ್ನಾಟಕದ ಇನ್ನೂ ಅದೆಷ್ಟೋ ವಾಗ್ಗೇಯಕಾರರ ಕೃತಿಗಳನ್ನು ಅವರು ಪ್ರಸಿದ್ಧಗೊಳಿಸಿದ್ದಾರೆ. ವಿನಯ, ಶಿಸ್ತು ಮತ್ತು ಪರಿಶ್ರಮಗಳು ಒಬ್ಬ ಸಂಗೀತ ಕಲಾವಿದನನ್ನು ಹೇಗೆ ಬೆಳೆಸಿಯಾವು ಎನ್ನುವುದಕ್ಕೆ ಅವರೇ ಜೀವಂತ ನಿದರ್ಶನವಾಗಿದ್ದಾರೆ.

ಇಂತಹ ಮಹಿಮಾನ್ವಿತ ಕಲಾವಿದರ ಸಂಪರ್ಕವನ್ನು ಹೊಂದಿರುವ ನಾನೇ ಭಾಗ್ಯವಂತ. ಕರ್ನಾಟಿಕಾ ಸೋದರರಾದ ನಾನು ಮತ್ತು ಗಣೇಶ್ ರವರ ಕಚೇರಿಗಳಲ್ಲೂ ಶ್ರೀಯುತರು ತಮ್ಮ ಉಪಸ್ಥಿತಿಯನ್ನು ಕರುಣಿಸಿರುವುದು ನಮ್ಮ ಸೌಭಾಗ್ಯ.
ತಿರುದಾಸ. ನಿರ್ದೇಶಕರು, ಶ್ರೀಕೃಷ್ಣ ಕಲಾಕ್ಷೇತ್ರ, ಬೆಂಗಳೂರು
(ಪ್ರಸ್ತುತ ತುರೀಯಾಶ್ರಮ ಸ್ವೀಕಾರದ ಬಳಿಕ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್)
ಆರ್.ಕೆ.ಶ್ರೀಕಂಠನ್ ರವರೂ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಪರ್ಯಾಯಪದಗಳಿದ್ದಂತೆ. ಅವರು ಕರ್ನಾಟಕ ಸಂಗೀತಗಗನದ ಧ್ರುವತಾರೆಯೇ ಆಗಿದ್ದಾರೆ. ಶಾಸ್ತ್ರೀಯ ಸಂಗೀತವು ಅತ್ಯಂತ ಶುದ್ಧರೂಪದಲ್ಲಿ ಪ್ರಚಲಿತವಿದ್ದ ಕಾಲದಲ್ಲಿ ಹುಟ್ಟಿದ ಇವರು ಅದರ ಸಂಪ್ರದಾಯಶುದ್ಧಿಯ ಬಿಗಿಯನ್ನು ಉಳಿಸಿಬೆಳೆಸಿಕೊಂಡು ಬಂದಿದ್ದಾರೆ. ಕರ್ನಾಟಕ ಸಂಗೀತವು ಅವರ ಉಸಿರಾದರೆ, ಶಾಸ್ತ್ರೀಯತೆಯು ಅವರ ಆತ್ಮವೇ ಆಗಿದೆ. ಸದ್ಗುರು ತ್ಯಾಗರಾಜರ ಶಿಷ್ಯಪರಂಪರೆಯಲ್ಲೇ ಹಾದು ಬಂದಿರುವುದು ಶ್ರೀಕಂಠನ್ ರವರ ಪಾಲಿಗೆ ಬಹಳ ಹೆಮ್ಮೆಯ ವಿಷಯ.
ಏಳು ವಯಸ್ಸಿನ ಎಳವೆಯಲ್ಲೇ ತಮ್ಮ ಸಂಗೀತಯಾನವನ್ನು ಪ್ರಾರಂಭಿಸಿದ ಡಾ.ಆರ್.ಕೆ. ಶ್ರೀಕಂಠನ್ ರವರು ತಮ್ಮ ಸ್ವಂತ ಪರಿಶ್ರಮದಿಂದಲೂ, ನಿರಂತರ ಸಾಧನೆಯಿಂದಲೂ ಕಲೆಯನ್ನು ತಮ್ಮ ಜೀವನಶೈಲಿಯನ್ನು ರೂಪಿಸಿಕೊಂಡರು. ಅವರು ಶ್ರದ್ಧಾಯುತ ಶಿಕ್ಷಕರೂ ಹಾಗೂ ಸಂಗೀತ ಸಂಶೋಧಕರೂ ಆಗಿದ್ದು ಯುವಪೀಳಿಗೆಗೆ ತಮ್ಮ ಜ್ಞಾನವನ್ನು ವಿತರಿಸುತ್ತ ಬಂದಿದ್ದಾರೆ. ಶ್ರುತಿ, ಭಾವ ಮತ್ತು ಸಾಹಿತ್ಯಗಳ ಪರಿಪಕ್ವತೆಯು ಅವರ ಅದ್ಭುತ ಸಾಧನೆಯಾಗಿದೆ.
ಅವರೊಂದಿಗಿನ ನನ್ನ ನಲವತ್ತು ವರ್ಷಗಳ ಸಂಪರ್ಕದಲ್ಲಿ ಹಲವು ಸುಂದರ ಸಂಗೀತಮಯ ಸ್ಮರಣೆಗಳು ತುಂಬಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಸರಳತೆ ಮತ್ತು ವಿನಮ್ರತೆಗಳು ನನ್ನನ್ನು ಬೆರಗುಗೊಳಿಸಿವೆ. ಜಗದ್ವಿಖ್ಯಾತ ಕಲಾವಿದರಾದರೂ, ಅವರು ಹೊರಪ್ರಪಂಚದ ಲೌಕಿಕತೆಯ ಗೀಳನ್ನು ಬೆಳೆಸಿಕೊಳ್ಳದೆ, ತಮ್ಮ ಆ ಚಿಕ್ಕ, ಚೊಕ್ಕ ಮನೆಯಲ್ಲೇ ಇಂದಿಗೂ ವಾಸವಿರುವುದು ಅವರ ಎತ್ತರವನ್ನು ತೋರುತ್ತದೆ.
ಅವರೊಂದಿಗೆ ಮಾತನಾಡುತ್ತಿದ್ದರೆ ಚಲನಚಿತ್ರದಂತೆ ಪುಂಖಾನುಪುಂಖವಾಗಿ ಪ್ರವಹಿಸುವ ಅವರ ಮಾತುಗಳಲ್ಲಿ ಶತಮಾನಗಳ ಸಂಗೀತಕಲೆಯನ್ನೇ ಅನುಭವಿಸುತ್ತಿದ್ದೇನೆ ಎಂಬಂತೆ ಭಾಸವಾಗುತ್ತದೆ. ನಾವು ಅವರ ಸಮಕಾಲೀನರಾಗಿರುವುದು ನಮ್ಮ ಸೌಭಾಗ್ಯವೇ ಸರಿ. ಅವರು ಸಂಗೀತಲೋಕಕ್ಕೆ ಒಂದು ದೊಡ್ಡ ಆಲದಮರವಿದ್ದಂತೆ. ನಾನಾ ಶಿಷ್ಯರ ಬಿಳಲುಗಳಲ್ಲಿ ಅರಳಿಕೊಂಡಿರುವ ಗಾಯನಅಶ್ವತ್ಥ ಎಂದೇ ನಾನು ಅವರನ್ನು ಕರೆಯುತ್ತೇನೆ. ದಾಸಸಾಹಿತ್ಯವನ್ನು ಬೆಳಕಿಗೆ ತಂದು ಪ್ರಸಿದ್ಧಗೊಳಿಸುವಲ್ಲಿ ಅವರ ಯೋಗದಾನ ತುಂಬ ಶ್ಲಾಘನೀಯ. ಡಾ . ಶ್ರೀಕಂಠನ್ ರವರು ಭಾರತದ ಈ ಕಾಲದ ಯುಗಪುರುಷ ಎಂದೇ ಹೇಳಿದರೂ ಅತಿಶಯೋಕ್ತಿಯಾಗಲಾರದು. ಅವರು ನಮ್ಮ ಆಸ್ಥಾನ ವಿದ್ವಾನ್ ಕೂಡ ಆಗಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ.
ಡಾ.ಕೆ.ರಾಧಾಕೃಷ್ಣನ್, ಮುಖ್ಯಸ್ಥರು, ಇಸ್ರೋ ಹಾಗೂ ಶಿಷ್ಯರು
ಡಾ.ಆರ್.ಕೆ.ಶ್ರೀಕಂಠನ್ ರವರು ದಂತಕಥೆಯಂತಹ ಸಂಗೀತ ಕಲಾವಿದರು, ಉತ್ತಮ ಸಂಗೀತ ಶಾಸ್ತ್ರಜ್ಞರು ಹಾಗೂ ಉತ್ತಮ ಶಿಕ್ಷಕರು. 1982ರಲ್ಲಿ ಅವರು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದು ನನ್ನ ಭಾಗ್ಯವೇ ಸರಿ. ನಾನು 1997ರಲ್ಲಿ ಹೈದ್ರಾಬಾದಿಗೆ ವರ್ಗವಾಗುವವರೆಗೂ ಅವರ ಅನನುಕರಣೀಯ ಹಾಗೂ ತೀವ್ರ ಶಿಕ್ಷಣಕ್ಕೆ ನಾನು ಪಾತ್ರನಾಗಿದ್ದೆ. ಬೆಂಗಳೂರಿಗೆ 2009ರಲ್ಲಿ ಹಿಂದಿರುಗಿದಾಗ ಮತ್ತೆ ಅವರಲ್ಲಿ ಕಲಿಯಲಾರಂಭಿಸಿದೆ.
ಅವರ ಅದ್ಭುತ ಕಂಠಶ್ರೀ, ವಿಶಾಲ ವಿದ್ವತ್ತು, ಶ್ರದ್ಧಾಯುತ ಪ್ರಸ್ತುತಿ ಹಾಗೂ ನವನವೀನ ಕೃತಿಗಳನ್ನು ಬೆಳಕಿಗೆ ತಂದು ಪ್ರಸಿದ್ಧಗೊಳಿಸುವ ಅವರ ಉತ್ಸಾಹವನ್ನು ಕಂಡು ನಾನು ಬೆರಗಾಗಿದ್ದೇನೆ. ನಾನು ಅವರ ಸಹಾಯಕನಾಗಿ ಜೊತೆಗಿರುತ್ತಿದ್ದ ಆ ಹಲವು ಕಛೇರಿಗಳನ್ನು ಇನ್ನೂ ನೆನೆಸಿಕೊಳ್ಳುತ್ತೇನೆ. ಅಭ್ಯಾಸದ ವರ್ಗಗಳಲ್ಲಿ ಅವರ ಜೊತೆಜೊತೆಗೇ ಇರುತ್ತಿದ್ದದ್ದು ನೆನಪಿದೆ. ಅವರ ಜೊತೆಯಲ್ಲಿ ಹಾಡಲು ಅವಕಾಶ ಸಿಕ್ಕ ಸಂದರ್ಭಗಳು ನೆನಪಿವೆ. ಈ ಮಹಾಗುರುವಿನಿಂದ ನನಗೆ ಸದಾ ಪ್ರೀತಿ, ಸ್ನೇಹ, ಸಲಹೆ, ಮಾರ್ಗದರ್ಶನ ಮತ್ತು ಆಶೀರ್ವಾದಗಳು ಒದಗಿವೆ.

ಇಂತಹ ಅಪೂರ್ವ ಸೌಭಾಗ್ಯಕ್ಕಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ಅವರ ಈ 94ರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ದೀರ್ಘಾಯುಸ್ಸು ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ.
ಕ್ಲೀವ್ ಲ್ಯಾಂಡ್ ವಿ.ವಿ. ಸುಂದರಮ್, ಸಂಗೀತ ಪೋಷಕರು ಮತ್ತು ಸಂಘಟಕರು
ಶಾಸ್ತ್ರೀಯ ಕಲೆಗಳಲ್ಲಿ ಎಲ್ಲ ಕಾಲಗಳಲ್ಲೂ ದಿಗ್ಗಜರು ಆಗಿಹೋಗಿದ್ದಾರೆ. ಆದರೆ ಹಲವರ ಪ್ರಖ್ಯಾತಿಯು ಸ್ವಲ್ಪ ಕಾಲ ಮಾತ್ರ ಇದ್ದು ಅಳಿದುಹೋಗುತ್ತದೆ. ತಮತಮ್ಮ ಕಲೆಯ ಅಂಗಗಳಲ್ಲಿ ಕಾಲಪ್ರಮಾಣಿತರಾಗಿ ದೀರ್ಘಕಾಲ ಖ್ಯಾತಿಯಲ್ಲಿ ಉಳಿಯುವ ದಿಗ್ಗಜರು ವಿರಳರೇ ಸರಿ. ಇನ್ನು ಕೆಲವರು ಅದ್ಭುತ ಪ್ರತಿಭೆಗಳೆಂದೇ ಗುರುತಿಗೆ ಬಂದರೂ ತಮ್ಮ ಪೂರ್ಣಪ್ರಮಾಣದ ವಿಕಾಸವನ್ನು ನೋಡುವಷ್ಟು ದೀರ್ಘಕಾಲ ಉಳಿಯುವುದಿಲ್ಲ. ಆದರೆ ಸಂಗೀತ ರತ್ನಾಕರ ಶ್ರೀ ಆರ್.ಕೆ.ಶ್ರೀಕಂಠನ್ ರವರು ಇದಕ್ಕೆ ಅಪವಾದವಾಗಿದ್ದಾರೆ. ಸುಮಾರು ಎಂಟು ದಶಕಗಳಷ್ಟು ದೀರ್ಘಕಾಲದ ಸಂಗೀತ ಕಛೇರಿಗಳ ಪಯಣವನ್ನು ಹೊಂದಿರುವ ಹೆಗ್ಗಳಿಕೆ ಇವರದು. ಈ ಕಾಲಕ್ಕಂತೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಅತ್ಯುತ್ತಮ ಪ್ರವರ್ತಕರೆಂದರೆ ನಿಃಸಂದೇಹವಾಗಿ ಇವರೇ ಆಗಿದ್ದಾರೆ.
ಸಂಪ್ರದಾಯಶುದ್ಧಿಗೆ ಇವರು ತೋರಿರುವ ನಿಷ್ಠೆಯಿಂದಾಗಿ ಇಂದಿನ ಕಾಲದ ವಿದ್ವಾಂಸರಲ್ಲೇ ಇವರು ಅಗ್ರಮಾನ್ಯರೆನಿಸಿದ್ದಾರೆ. ತಮ್ಮ ಪೂರ್ವತನ ಗುರುಪರಂಪರೆಯಿಂದ ಇವರು ಪಡೆದು ಬಂದ ಸತ್ವವನ್ನೂ ತಮ್ಮದೇ ಸ್ವತಂತ್ರ ಶೈಲಿ ಮತ್ತು ಸೃಜನಶೀಲತೆಗಳೊಂದಿಗೆ ನಿರಂತರ ಮೇಳವಿಸುತ್ತ ಬಂದಿದ್ದಾರೆ. ಸಂಗೀತವು ದಿವ್ಯವಾದದ್ದು, ಅದನ್ನು ಶ್ರದ್ಧಾಭಕ್ತಿ ಮತ್ತು ಆದರಗಳಿಂದ ಕಾಣಬೇಕೆನ್ನುವುದೇ ಇವರ ಅಚಲ ನಂಬಿಕೆ. ವಿದ್ವಲ್ಲೋಕವು ಇವರಲ್ಲಿ ಗುರುತಿಸಿ ಮೆಚ್ಚುವ ಅಸಾಧಾರಣ ವಿದ್ವತ್ತೆಯನ್ನು ಸ್ವತಃ ಇವರು “ಸಂಗೀತದ ಪರಿಪೂರ್ಣತೆಯತ್ತ ತಾನು ಹಾಕಿದ ಕೆಲವೇ ಹೆಜ್ಜೆಗಳಷ್ಟೇ” ಎಂದೇ ಭಾವಿಸುತ್ತಾರೆ. ಇವರ ಅತ್ಯುನ್ನತ ವಿದ್ವತ್ತಿಗೆ ಸಾಟಿಯಾಗಬಲ್ಲ ವಿದ್ವಾಂಸರು ವಿರಳರೇ ಸರಿ. ಕಲೆಯು ಎಷ್ಟು ವಿಶಾಲ ಮತ್ತು ಸಂಕೀರ್ಣ ಎಂದರೆ ಅದನ್ನು ಒಂದೇ ಜನ್ಮದಲ್ಲಿ ಪೂರ್ಣವಾಗಿ ಗ್ರಹಿಸಲಾಗದು ಎಂಬುದು ಅವರ ಅಭಿಪ್ರಾಯ. ಶ್ರೀಕಂಠನ್ ರವರು ಶಾಸ್ತ್ರೀಯ ಕಲೆಗಳಲ್ಲಿರಬಲ್ಲ ಅತ್ಯುತ್ತಮ ಗುಣಗಳ ಸಾಕಾರವೇ ಆಗಿದ್ದಾರೆ.
ಪಪ್ಪು ವೇಣುಗೋಪಾಲರಾವ್, ಸಂಗೀತಶಾಸ್ತ್ರಜ್ಞರು ಹಾಗೂ ಕಾರ್ಯದರ್ಶಿ, ಮ್ಯೂಸಿಕ್ ಅಕಾಡೆಮಿ, ಚೆನ್ನೈ
ರುದ್ರಪಟ್ಣ ಕೃಷ್ಣಶಾಸ್ತ್ರಿ ಶ್ರೀಕಂಠನ್ ರವರು ಕರ್ನಾಟಕ ಸಂಗೀತದ ಹಲವು ಸತ್ವಾಂಶಗಳ ಪ್ರತಿನಿಧಿಯಾಗಿದ್ದಾರೆ. ಅವರು ತ್ಯಾಗರಾಜಸ್ವಾಮಿಗಳ ಪರಂಪರೆಗೆ ಸೇರಿದ್ದು, ಆ ಸಂತರ ಕೃತಿಗಳಲ್ಲಿನ ಎಲ್ಲ ಭಾಗಗಳ ಸ್ಫುಟವಾದ ಉಚ್ಚಾರಶುದ್ಧಿಯನ್ನು ಸಿದ್ಧಿಸಿಕೊಂಡಿದ್ದಾರೆ. ಸಂಸ್ಕೃತದಲ್ಲಿನ ಇವರ ಪರಿಣತಿಯು ದೀಕ್ಷಿತರ ಕೃತಿಗಳ ಮೇಲೆ ಇವರಿಗೆ ಹಿಡಿತವನ್ನು ಸಾಧಿಸಿಕೊಟ್ಟಿದೆ. ಸ್ವಭಾವಸಿದ್ಧವಾಗಿ ಬಂದಿರುವ ಲಯದ ಪರಿಜ್ಞಾನವು ಇವರಿಗೆ ಶ್ಯಾಮಾಶಾಸ್ತ್ರಿಗಳ ಕೃತಿಗಳಲ್ಲಿ ಪರಿಣತರನ್ನಾಗಿಸಿದೆ. ಹೀಗಾಗಿ ಸಂಗೀತ ತ್ರಿಮೂರ್ತಿಗಳ ಕೃತಿಗಳ ವಿಶಾಲ ಜ್ಞಾನವು ಇವರಲ್ಲಿ ಕರಗತವಾಗಿದೆ.
ಕನ್ನಡದ ವಾಗ್ಗೇಯಕಾರರ, ಕವಿಗಳ ರಚನೆಗಳ ಮತ್ತು ದಾಸಸಾಹಿತ್ಯದ ಸಾಂಪ್ರದಾಯಿಕ ಪ್ರಸ್ತುತಿಗೆ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಈ ಎಲ್ಲ ಹಿನ್ನಲೆ ಜ್ಞಾನದೊಂದಿಗೆ ಶ್ರೀಕಂಠನ್ ರವರು ತಮ್ಮ ಪೂರ್ವತನ ವಿದ್ವನ್ಮಣಿಗಳಾದ ಜಿ.ಎನ್.ಬಿ, ಅರಿಯ್ಯಾಕುಡಿ ಮತ್ತು ಮುಸಿರಿರವರಂತಹ ವಿದ್ವಾಂಸರ ಪ್ರಭಾವವನ್ನು ಮೈಗೂಡಿಸಿಕೊಂಡಿದ್ದಾರೆ. ನಾಗಸ್ವರದ ಕುರಿತಾದ ಇವರ ತೀವ್ರ ಆಸಕ್ತಿ ಮತ್ತು ಅದರಲ್ಲಿನ ಸೂಕ್ಷ್ಮಾಂಶಗಳು ಇವರ ಗಾಯನವನ್ನು ಪ್ರಭಾವಗೊಳಿಸಿದೆ. ಸುಮಾರು ಎಂಟು ದಶಕಗಳಿಂದಲೂ ಹಾಡುತ್ತಿರುವ ಈ ಉನ್ನತ ಮಟ್ಟದ ಕಲಾವಿದರ ವೈಶಿಷ್ಟ್ಯವೆಂದರೆ ಅವರ ಉಚ್ಚಾರಸ್ಫುಟತೆ ಮತ್ತು ರಾಗಪರಿಜ್ಞಾನ.

ಕ್ಲಿಷ್ಟವಾದ ವರ್ಣವಾಗಿರಲಿ ಅಥವಾ ಸರಳ ಜಾವಳಿ, ಪದಗಳೇ ಆಗಿರಲಿ, ತಮ್ಮದೇ ಸ್ವತಂತ್ರ ಗಾಯನಶೈಲಿಯನ್ನು ಇವರು ನಿರ್ಮಿಸಿದ್ದಾರೆ. ಇವರ ಶಿಷ್ಯವಾತ್ಸಲ್ಯವು ಇವರೆಡೆಗೆ ಹಲವಾರು ಶಿಷ್ಯರನ್ನು ಸೆಳೆದಿದೆ. ಇವರ ಸರಳತೆಯು ಇವರನ್ನು ಅತ್ಯುತ್ತಮ ವ್ಯಕ್ತಿಯನ್ನಾಗಿಯೂ ಮಾಡಿದೆ.
ವಿ. ರಾಮನಾಯರಾಣ, ಸಂಪಾದಕರು, “ಶ್ರುತಿ” ಪತ್ರಿಕೆ
ಕರ್ನಾಟಕ ಸಂಗೀತದ ಹಳೆಯ ಭವ್ಯ ಪರಂಪರೆಯ ಅತ್ಯುತ್ತಮ ಪ್ರತಿಬನಿಧಿ ಶ್ರೀಕಂಠನ್ ರವರು. ಧ್ವನಿವರ್ಧಕದಲ್ಲಿ ಮಂಡಿಸುವುದಕ್ಕಷ್ಟೇ ಅಳವಡಿಸಲ್ಪಟ್ಟ ಶಾರೀರಗಳ ಕಾಲದಲ್ಲಿ ಇವರು ಹಲವು ದಶಕಗಳ ಕಾಲ ಅದ್ಭುತ ಕಂಠಸಿರಿಯನ್ನೂ ಶ್ರುತಿಶುದ್ಧಿಯನ್ನೂ ಉಳಿಸಿಕೊಂಡು ಬಂದಿದ್ದಾರೆ.
ಸಂಗೀತ ತ್ರಿಮೂರ್ತಿಗಳ ಹಾಗೂ ತಮಿಳುನಾಡಿನಲ್ಲಿ ಬಂದ ಅವರ ಪರಂಪರೆಯ ಇತರ ವಾಗ್ಗೇಯಕಾರರ ಕೃತಿಗಳನ್ನೂ ಹಾಗೂ ಮೈಸೂರಿನ ವಾಗ್ಗೇಯಕಾರರ ಕೃತಿಗಳ ಸತ್ವಸರ್ವಸ್ವವನ್ನೂ ವೈಭವಯುತವಾಗಿ ಪ್ರಸ್ತುತಪಡಿಸುವ ಇವರ ಸಿದ್ಧಿ ಇವರನ್ನು ಈ ಕ್ಷೇತ್ರದಲ್ಲೇ ಶಿಖರಪ್ರಾಯರನ್ನಾಗಿಸಿದೆ.
ರಾಗಪ್ರಸ್ತುತಿ ಇವರಲ್ಲಿ ಕ್ರಮಬದ್ಧ ವಿಕಾಸವನ್ನೂ ಪೂರ್ಣಾಭಿವ್ಯಕ್ತಿಯನ್ನೂ ಪಡೆಯುತ್ತದೆ. ಇವರ ನೆರವಲ್ ಮತ್ತು ಸ್ವರಪ್ರಸ್ತಾರ ಕ್ರಮವೂ ರಾಗ-ತಾನ-ಪಲ್ಲವಿಗಳ ಗಾಯನಶೈಲಿಯೂ ಮುಂದಿನ ಪೀಳಿಗೆಯ ಕಲಾವಿದರಿಗೆ ಒಂದು ಮೌಲ್ಯಯುತ ಪಠ್ಯಸಾಮಗ್ರಿಯನ್ನೇ ಒದಗಿಸಿದೆ.
ಶೆಮ್ಮಂಗುಡಿ ಶ್ರೀನಿವಾಸ ಐಯ್ಯರರು ದಿವಂಗತರಾದ ಮೇಲೆ, ಸಂಗೀತಕ್ಷೇತ್ರದ ಅದ್ವಿತೀಯ ಪಿತಾಮಹರೆಂದರೆ ಶ್ರೀಕಂಠನ್ ರವರೇ. ಅವರ ಅಸಂಖ್ಯ ಅಭಿಮಾನಿಗಳಂತೆಯೇ ನಾನೂ ಅವರ ಮಹಾನ್ ಪ್ರತಿಭೆಗೂ, ಸಂಗೀತದಲ್ಲಿ ಅವರು ಉಪದೇಶಿಸಿರುವ ಶುದ್ಧಸಂಪ್ರದಾಯಜ್ಞಾನಕ್ಕಾಗಿಯೂ ಅವರು ನಮಗೆಲ್ಲ ಒದಗಿಸಿರುವ ಅಪಾರವಾದ ಸುಶ್ರಾವ್ಯಸಂಗೀತಕ್ಕಾಗಿಯೂ ಅವರನ್ನು ಭಕ್ತಿಯಿಂದ ವಂದಿಸುತ್ತೇನೆ.
ಅವರು ಶತಾಯುಷಿಗಳಾದ ಮೇಲೂ ಅವರ ಕಂಠವು ಹೀಗೇ ಗಂಟೆಯಂತೆ ಸ್ಫುಟವಾಗಿ ಮೊಳಗುತ್ತ ಇರುತ್ತದೆ ಎಂದು ನಿಃಸಂದೇಹವಾಗಿ ಹೇಳಬಲ್ಲೆ.
ಎಂ.ಎ.ಬೇಬಿ, ಭೂತಪೂರ್ವ ಶಿಕ್ಷಣ ಮತ್ತು ಸಂಸ್ಕೃತಿ ಸಚಿವರು, ಕೇರಳ
ಶ್ರೀಕಂಠನ್ ರವರೊಡನೆ ನನ್ನ ನಾದಮಯ ಸಂಪರ್ಕ ಪ್ರಾರಂಭವಾದದ್ದು 33 ವರ್ಷಗಳ ಹಿಂದೆ. ಅದು ಶ್ರೀಕಂಠನ್ ರವರಿಗೆ ಕಛೇರಿಯೊಂದರಲ್ಲಿ ಪಕ್ಕವಾದ್ಯ ನುಡಿಸುತ್ತಿದ್ದ ಉಮಯಾಳಪುರಂ ಶಿವರಾಮನ್ ರವರ ಮೃದಂಗದ ಮಾಂತ್ರಿಕ ನುಡಿತವನ್ನು ಆಲಿಸಲು ನಾನು ಉದ್ದೇಶಪೂರ್ವಕವಾಗಿ ನವದೆಹಲಿಗೆ ಹೋದ ಸಂದರ್ಭದಲ್ಲಿ. ನಾನು ಪ್ರಥಮ ಬಾರಿಗೆ ಆಲಿಸಿದ ಶ್ರೀಕಂಠನ್ ರವರ ಆ ಕಛೇರಿ ನನ್ನನ್ನು ಶಾಶ್ವತವಾಗಿ ಅವರ ಅಭಿಮಾನಿಯನ್ನಾಗಿ ಮಾಡಿಬಿಟ್ಟಿತು. ಆಹಾ, ಅದೆಂತಹ ಅದ್ಭುತವಾದ ಕಛೇರಿ! ಉಮಯಾಳಪುರಂ ಶಿವರಾಮನ್ ಮತ್ತು ಎಂ.ಎಸ್.ಗೋಪಾಲಕೃಷ್ಣನ್ ರವರ ಪಕ್ಕವಾದ್ಯ ಸಹಕಾರದೊಂದಿಗೆ ನಡೆದ ಆ ಕಛೇರಿಯ ಅನುಭವ ಸ್ವರ್ಗೀಯವಾಗಿತ್ತು! ಆ ಕಛೇರಿಯನ್ನು ಶ್ರವಣಾನಂದಕ್ಕೆ ಪರ್ಯಾಯವೆನಿಸುವಂತೆ ಮಾಡಿದ್ದು, ಎಲ್ಲರಲ್ಲೂ ಭಕ್ತಿಭಾವವನ್ನು ಉದ್ದೀಪಿಸಿದ ಮತ್ತು ಶಾಶ್ವತವಾಗಿ ಗಾಯನದ ಮೋಡಿಗೊಳಗಾಗುವಲ್ಲಿ ಅನನುಭವಿಗಳಾದವರನ್ನೂ ಚುಂಬಕದಂತೆ ಸೆಳೆದ ಆರ್.ಕೆ.ಎಸ್ ರವರ ಸಶಕ್ತ ದನಿ.
ನಾನು ಆಲೋಚಿಸಿದಂತೆಲ್ಲ ಲಲಿತಕಲೆಗಳ ಮೋಹಕಶಕ್ತಿ ಗಾಢವಾಗುತ್ತಲೇ ಹೋಗುತ್ತದೆ. ಈ ವಿರೋಧಾಭಾಸವನ್ನು ಗಮನಿಸಿ. ನಾನೊಬ್ಬ ನಾಸ್ತಿಕ ಮತ್ತು ಯಾವುದೇ ಸುಸಂಘಟಿತ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವಲ್ಲಿ ನನಗೆ ವಿಶ್ವಾಸವಿಲ್ಲ. ಆದರೆ ಕರ್ನಾಟಕ ಸಂಗೀತದ ಸಂತ-ವಾಗ್ಗೇಯಕಾರರು ತಮ್ಮ ವ್ಯಾಖ್ಯಾನಗಳಲ್ಲಿ ಧರ್ಮದಿಂದಾಚೆಗಿನ ವಿಷಯಗಳನ್ನೂ ಪ್ರಸ್ತಾಪಿಸಿ, ಶಕ್ತಿಶಾಲಿಯಾದ ಸಾಹಿತ್ಯವನ್ನು ಬಳಸಿ, ಅಸ್ಪೃಶ್ಯತೆಯ ದುಷ್ಪರಿಣಾಮಗಳ ಮತ್ತು ಊಳಿಗಮಾನ್ಯ ಪದ್ಧತಿಯ ಮೇಲರಿಮೆಗಳ ಕುರಿತು ಚರ್ಚಿಸುವ ಮೂಲಕ ಕೃತಿಗಳಲ್ಲಿ ಸಾಮಾಜಿಕ ಆಯಾಮಗಳನ್ನೂ ತಂದರು. ಅಣ್ಣಮಾಚಾರ್ಯರಾಗಲಿ, ತ್ಯಾಗರಾಜರಾಗಲಿ, ಪುರಂದರದಾಸರಾಗಲಿ, ಸಮಾಜದ ವರ್ಗೀಕರಣದ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಂಗೀತವನ್ನು ಒಂದು ಮಾಧ್ಯಮವಾಗಿ ಉಪಯೋಗಿಸಿದ್ದಾರೆ. ಶ್ರೀಕಂಠನ್ ರವರ ಭಕ್ತಿಭಾವದ ಗಾಯನವನ್ನು ಆಲಿಸಿದ ಬಳಿಕ, ಕಲೆಗಳಲ್ಲಿ ತೊಡಗಿಕೊಳ್ಳಲು ಸ್ತ್ರೀಯರಿಗೆ ಪ್ರೋತ್ಸಾಹ ನೀಡುವಲ್ಲಿ ಅವರ ತತ್ಪರತೆ ಹಾಗೂ ಸಮಾಜದ ಪ್ರತಿ ತಮ್ಮ ಕರ್ತವ್ಯವಾಗಿ ಮೌಲ್ಯಾಭಿಮುಖವಾದ ಸಂಗೀತವನ್ನು ಪ್ರಚಾರ ಮಾಡುವಲ್ಲಿ ಅವರ ಶ್ರದ್ಧೆಯ ಕುರಿತು ಕೇಳಿದ ನಂತರ, ಆರ್.ಕೆ.ಎಸ್.ರವರನ್ನು ಹೆಚ್ಚುಹೆಚ್ಚಾಗಿ ಆಲಿಸಲು ಯಾರಾದರೂ ಹಂಬಲಿಸಿಯಾರು!
ವರ್ಷಗಳು ಉರುಳಿದಂತೆ ಶ್ರೀಕಂಠನ್ ರವರ ಕುರಿತ ನನ್ನ ಗೌರವ ವರ್ಧಿಸಿದೆ. ನನಗೆ ಸ್ಪಷ್ಟವಾಗಿ ನೆನಪಿದೆ, ಅವರಿಗೆ 84 ವರ್ಷಗಳಾದಾಗ ನಾವು ಅವರಿಗಾಗಿ ಮೂರು ಕಛೇರಿಗಳ ಕೇರಳ ಪ್ರವಾಸವನ್ನು ತಿರುವನಂತಪುರಂ, ಮಾವೇಲಿಕರ (ಅಲೆಪ್ಪಿ ಜಿಲ್ಲೆ) ಮತ್ತು ಎರ್ನಾಕುಲಂಗಳಲ್ಲಿ ಆಯೋಜಿಸಿದೆವು. ಈ ಮೂರು ಕಛೇರಿಗಳಲ್ಲಿ ಯಾವ ಕೃತಿಯನ್ನೂ ಪುನರಾವರ್ತಿಸದಂತೆ ನಾವು ಅವರನ್ನು ಕೋರಿದೆವು. ಇದಕ್ಕೆ ಆ ಗಾಯಕವರೇಣ್ಯರು ಸಂತೋಷದಿಂದ ಸಮ್ಮತಿಸಿದರು! ಅವರ ಸಂಗೀತದಲ್ಲಿ ಹಿಂದಿನ ಕಾಲದ ಗಾಯಕಶ್ರೇಷ್ಠರಾದ ಜಿ.ಎನ್.ಬಿ, ಎಂ.ಡಿ.ರಾಮನಾಥನ್, ಮುಸಿರಿ ಐಯ್ಯರ್, ಅಲತ್ತೂರು ಸೋದರರು ಅಥವಾ ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್ ರವರ ಆತ್ಮವಿದೆ. ವಿಶೇಷವಾಗಿ ಶ್ರೀಕಂಠನ್ ರವರ ಪಲ್ಲವಿ ಇದನ್ನು ಪ್ರತಿಬಿಂಬಿಸುತ್ತದೆ.
’ಸಾಂಪ್ರದಾಯಿಕ ಕರ್ನಾಟಕ ಸಂಗೀತದ ಹೆಮ್ಮೆ’ ಎಂದು ಬಣ್ಣಿಸಬಹುದಾದವರಲ್ಲಿ ಉಳಿದಿರುವವರು ಶ್ರೀಕಂಠನ್ ಸರ್ ರವರೊಬ್ಬರೇ ಆದ್ದರಿಂದ ಕೇರಳ ಸರ್ಕಾರ 2008ರಲ್ಲಿ ಸ್ವಾತಿ (ತಿರುನಾಳ್) ಪುರಸ್ಕಾರಕ್ಕಾಗಿ ಅವರನ್ನು ಆಯ್ಕೆ ಮಾಡಿದ್ದು ನಮ್ಮೆಲ್ಲರಿಗೂ ಸಂತೋಷವನ್ನು ತಂದಿದೆ. ಆರ್.ಕೆ.ಎಸ್., ಉಮಯಾಳಪುರಂ ಶಿವರಾಮನ್, ಟಿ.ಎನ್.ಕೃಷ್ಣನ್, ಟಿ.ವಿ.ಗೋಪಾಲಕೃಷ್ಣನ್ ಮತ್ತು ಟಿ.ಕೆ.ಮೂರ್ತಿಯವರಂತಹವರ ಮಾರ್ಗದರ್ಶನದಲ್ಲಿ ಕಾಲೇಜುಗಳಲ್ಲಿ ಶಾಸ್ತ್ರೀಯ ಕಲೆಗಳ ಕುರಿತ ಜ್ಞಾನವನ್ನು ವರ್ಧಿಸುವ ಪ್ರಯೋಗವೊಂದನ್ನು ಕೈಗೆತ್ತಿಕೊಳ್ಳಲಾಯಿತು. ಕೇರಳದಲ್ಲಿ ಚೆನ್ನೈ ಸಂಗೀತ ಋತುವಿನ ಕಛೇರಿಗಳನ್ನು ವೀಕ್ಷಿಸಲು ಅನುಕೂಲವಾದ ತೇಲುವ ವೇದಿಕೆಗಳನ್ನು ಏರ್ಪಡಿಸಲಾಯಿತು. ಕೇರಳದ ಸಂಗೀತ ಸಂಪ್ರದಾಯವನ್ನು ಉತ್ತಮಗೊಳಿಸಲು ವಿವಿಧ ಆಯಾಮಗಳನ್ನು ಅಳವಡಿಸಿಕೊಳ್ಳುವಲ್ಲಿ ಆರ್.ಕೆ.ಎಸ್. ನಮಗೆ ಮಾರ್ಗದರ್ಶಕರಾಗಿದ್ದಾರೆ.

ಶಿಷ್ಯ ಪರಂಪರೆಯನ್ನು ತರಬೇತುಗೊಳಿಸುವಲ್ಲಿ ಈ ಗಾನಯೋಗಿಯ ಪ್ರಯತ್ನಗಳ ಕುರಿತು ನನಗಿರುವ ಪೂಜ್ಯತೆ ಮತ್ತು ಗೌರವಗಳ ಪ್ರತೀಕವಾಗಿ ನಾನಿಷ್ಟನ್ನು ಹೇಳಬಲ್ಲೆ- “ ’ಶ್ರೀಕಂಠನ್ ಶಿಕ್ಷಣ’ವನ್ನು ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸುವ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅವರು ತಮ್ಮ ಪುತ್ರ ರಮಾಕಾಂತ್ ರವರನ್ನು ಕರ್ತವ್ಯಬುದ್ಧಿಯಿಂದ ತರಬೇತುಗೊಳಿಸಿದ್ದಾರೆ. ನನ್ನ ಮಟ್ಟಿಗೆ ಹೇಳುವುದಾದರೆ, ಪಕ್ಷದ ಸಭೆಗೆಂದು ನಾನು ಬೆಂಗಳೂರಿಗೆ ತೆರಳಿದಾಗಲೂ ಸಂಜೆಯ ಹೊತ್ತು ಕರ್ನಾಟಕ ಸಂಗೀತದ ಮೌಲ್ಯಗಳಿಂದ ಸಮೃದ್ಧವಾಗಿರುವ ಶ್ರೀಕಂಠನ್ ರವರ ಸಂಗೀತ ಕಛೇರಿಗಳಿಗೆ ಹೋಗಲು ಮೀಸಲಾಗಿರುತ್ತಿತ್ತು! ಶ್ರೀಕಂಠನ್ ಸಾಮಾಜಿಕ ಪ್ರಜ್ಞೆಯಿಂದ ಕೂಡಿರುವ, ಸ್ವತಃ ತನ್ನ ಮೇಧಾಶಕ್ತಿ ಮತ್ತು ವಿದ್ವತ್ತಿನ ಅಗಾಧತೆಯ ನ್ನು ತಾನೇ ಅರಿಯದ ಓರ್ವ ನಿಜವಾದ ಕಲಾವಿದರು!
ಎಸ್.ಶೇಷಗಿರಿ ರಾವ್, ವೈಲಿನ್ ವಾದಕರು, ಆಕಾಶವಾಣಿ (ನಿವೃತ್ತ)
ಆರ್.ಕೆ.ಎಸ್. ಆಕಾಶವಾಣಿಯಲ್ಲಿ ನನ್ನ ಹಿರಿಯ ಸಹೋದ್ಯೋಗಿಯಾಗಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ನಮ್ಮ ಸಂಪರ್ಕ ಅನೇಕ ಸಂತೋಷದ ಮತ್ತು ಧನ್ಯತೆಯ ಕ್ಷಣಗಳನ್ನು ಕಂಡಿದೆ. ಔಪಚಾರಿಕ ಮತ್ತು ಅನೌಪಚಾರಿಕ ಕಛೇರಿಗಳು ಹಾಗೂ ಧ್ವನಿಮುದ್ರಣಗಳೂ ಸೇರಿದಂತೆ ಭಾರತದಾದ್ಯಂತ ಲೆಕ್ಕವಿಲ್ಲದಷ್ಟು ಸಂಗೀತ ಕಾರ್ಯಕ್ರಮಗಳಲ್ಲಿ ನಾವು ನಾದೋಪಾಸಕರಾಗಿ ಸಂಧಿಸಿದ್ದೇವೆ. ನಾನು ಅವರನ್ನು ಬಹಳ ಹತ್ತಿರದಿಂದ ಗಮನಿಸಿ ಯಾರೊಡನೆ ವೇದಿಕೆಯ ಮೇಲೆ ನಮಗಾಗಿ ನಿಗದಿಯಾದ ಅವಕಾಶದ ಸ್ವಾತಂತ್ರ್ಯವನ್ನು ಅನುಭವಿಸಬಹುದೋ ಅಂತಹ ಅಪರೂಪದ ಕಲಾವಿದರಲ್ಲಿ ಅವರೊಬ್ಬರು. ಉದಾರ ಹೃದಯವುಳ್ಳ ಈ ನಮ್ರ ವ್ಯಕ್ತಿಯಿಂದ ನಮ್ಮ ಮನೋಧರ್ಮದ ವಿಭಿನ್ನ ಆಯಾಮಗಳಿಗೆ ಅನುಮೋದನೆ ಮತ್ತು ಮೆಚ್ಚುಗೆಗಳು ಅವಿಳಂಬವಾಗಿ ಸಲ್ಲುತ್ತವೆ. ಅವರ ವಿದ್ವತ್ಪೂರ್ಣ ರಾಗವಿಸ್ತಾರ ಆಯಾ ರಾಗಗಳ ಹೆಚ್ಚಿನ ಸ್ವರೂಪವೈಶಿಷ್ಟ್ಯಗಳನ್ನು ಪರಿಚಯಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ನಾವು ನಮ್ಮದೇ ಆದ ರೀತಿಯಲ್ಲಿ ಸ್ವರಸಂಚಾರಗಳನ್ನು ನಿಸ್ಸಂಕೋಚವಾಗಿ ಅಭಿವ್ಯಕ್ತಿಸುವಂತೆ ಅವರು ವರ್ತಿಸುತ್ತಾರೆ. ಅನೇಕರಿಗೆ ಅಲಭ್ಯವಾದ ಅವರ ಕಂಠಸಿರಿ ನಿಜವಾಗಿಯೂ ದೈವದತ್ತ ವರವೇ ಸರಿ.
ಕೆ.ವಾಗೀಶ್, ಡೆಪ್ಯುಟಿ ಡೈರೆಕ್ಟರ್ ಜೆನೆರಲ್ (ಮ್ಯೂಸಿಕ್ ಅಂಡ್ ಆರ್ಕೈವ್ಸ್) ಹಾಗೂ ಡೈರೆಕ್ಟರ್ ಜೆನೆರಲ್, ಎ.ಐ.ಆರ್., ನವದೆಹಲಿ
ತಮ್ಮ ಸಂಗೀತದಿಂದ ಸಂಕೇತಿ ಜನಾಂಗಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆ ತಂದಿರುವ ಕರ್ನಾಟಕ ಸಂಗೀತದ ಪಿತಾಮಹರ ಕುರಿತು ನನಗೆ ಅತ್ಯಂತ ಆಳವಾದ ಗೌರವವಿದೆ. ತಮ್ಮ ಜೀವನದುದ್ದಕ್ಕೂ ಅವರು ಸಂಗೀತದ ವಿದ್ಯಾರ್ಥಿಗಳಿಗೆ ಪರಿಶ್ರಮದ ಪಥವನ್ನು ತೋರಿದ್ದಾರೆ. ಸರಸ್ವತಿ ರಾಗ ಮತ್ತು ಆದಿತಾಳದಲ್ಲಿ ನಿಬದ್ಧವಾಗಿರುವ ಅವರ ಕುರಿತ ನನ್ನ ಕೃತಿಯಲ್ಲಿ ನನ್ನ ಮೆಚ್ಚುಗೆ, ಗೌರವ ಮತ್ತು ಪೂಜ್ಯತೆಗಳು ಬಿಂಬಿತವಾಗಿವೆ. ಈ ಕೃತಿಯನ್ನು ನಾನು ಬೆಂಗಳೂರಿನಲ್ಲಿ ನಡೆದ ಅವರ 92ನೆಯ ಜಯಂತಿಯ ಸಂದರ್ಭದಲ್ಲಿ ಅವರಿಗೆ ಸಮರ್ಪಿಸಿದೆ.
(ಪಲ್ಲವಿ) ಶ್ರೀಕಂಠ ದತ್ತ ಶ್ರೀಕಂಠಯುತ, ಶ್ರೀಕಂಠ ಗಾನಂ ವರ್ಧತಾಮ್, ಅಭಿವರ್ಧತಾಮ್;
(ಅನುಪಲ್ಲವಿ) ಸುಖಭಾವಯುತ ಸಂಪ್ರದಾಯ ಬದ್ಧ, ರಸಿಕಜನ ಆನಂದ ಶಾಸ್ತ್ರೀಯ ಶುದ್ಧ;
(ಚರಣ) ಸಂಗೀತ ವೇದಾಗಮ ಪ್ರಖ್ಯಾತ ರುದ್ರಪಟ್ಣ ಜಾತ ಸರಸ್ವತೀ ಪುತ್ರ;
ಸಂಗೀತ ಸೇವಾ ಚಿಂತನ ನಿರತ ಅಗಣಿತ ಪ್ರಶಂಸಾದಿ ಅಲಂಕೃತ;
ಗಾನ ಪರಿಪೂರ್ಣ ಗಾಯನ; ಲಕ್ಷ್ಯ ಲಕ್ಷಣ ನಿಪುಣ; ವಿದ್ವಜ್ಜನ ಭೂಷಣ (ಶ್ರೀಕಂಠ ದತ್ತ)
। ಇನ್ನು ಮುಂದಿನ ವಾರಕ್ಕೆ ।






0 Comments